Posts

ಪ್ರಾಯೋಗಿಕ ಚಿಂತನೆಯಲ್ಲಿ ಆಚಾರಕೇಂದ್ರಿತ ಮತ್ತು ಭೋಗ್ಯಕೇಂದ್ರಿತ ಮಾದರಿಗಳ ಕುರಿತು

-೧- ಬದುಕಿನ ಕುರಿತು, ಬದುಕುವ ಕುರಿತು, ಸಮಾಜದ ಕುರಿತು, ರಾಜಕೀಯದ ಕುರಿತು, ಸರಿ ತಪ್ಪುಗಳ ಕುರಿತು, ಈ ಎಲ್ಲಾ ರೀತಿಯ ಪ್ರಶ್ನೆಗಳ ಕುರಿತೂ ಮಾಡುವ ಚಿಂತನೆಯನ್ನು ಪ್ರಾಯೋಗಿಕ ಚಿಂತನೆ ಎನ್ನುವ ಹೆಸರಿನಿಂದ ಕರೆಯೋಣ. ಈ ಲೇಖನದಲ್ಲಿ ಪ್ರಾಯೋಗಿಕ ಚಿಂತನೆಯಲ್ಲಿರಬಹುದಾದ ಎರಡು ವಿಧಗಳನ್ನು ಪರಿಚಯಿಸುವುದು ನನ್ನ ಉದ್ದೇಶ. ಅದರ ಹಿಂದಿರುವ ನನ್ನ ಗ್ರಹಿಕೆಯನ್ನು ಹೀಗೆ ರೂಪಿಸಿಕೊಳ್ಳಬಹುದು - ಐತಿಹಾಸಿಕವಾಗಿ, ಅದರಲ್ಲೂ ವಿಶೇಷವಾಗಿ ಆಧುನಿಕ ಜಗತ್ತಿನಲ್ಲಿ, ಪ್ರಾಯೋಗಿಕ ಚಿಂತನೆಯೊಳಗೇ ಎರಡು, ವಿರುದ್ಧವಲ್ಲದಿದ್ದರೂ ಸಮನ್ವಯವಿಲ್ಲದ, ಚಿಂತನಾ ಧಾರೆಗಳಿವೆ. ಒಂದು ಆಚಾರಕೇಂದ್ರಿತವಾದದ್ದು. ಇನ್ನೊಂದು ಭೋಗ್ಯಕೇಂದ್ರಿತವಾದದ್ದು. ಇದನ್ನು ನಾನು ಇಂಗ್ಲಿಷಿನಲ್ಲಿ ಕ್ರಮವಾಗಿ practice model ಮತ್ತು deserts model ಎಂದು ಅನುವಾದಿಸುತ್ತೇನೆ. ಸ್ಥೂಲವಾಗಿ, ಆಚಾರಕೇಂದ್ರಿತ ಚಿಂತನೆ ಒಂದು ಕಾರ್ಯಕ್ಷೇತ್ರವನ್ನು ಮಾಡಬೇಕಾದ ಕ್ರಿಯಾಕರ್ಮಗಳು ಮತ್ತು ಪಾಲಿಸಬೇಕಾದ ನೇಮಗಳು ಎನ್ನುವ ದೃಷ್ಟಿಕೋನದಿಂದ ನೋಡುತ್ತದೆ. ಅದೇ, ಭೋಗ್ಯಕೇಂದ್ರಿತ ಚಿಂತನೆ ಅದೇ ಕಾರ್ಯಕ್ಷೇತ್ರವನ್ನು ಅದರಿಂದ ಹುಟ್ಟುವ ಫಲಗಳನ್ನು ಮತ್ತು ಅದರಿಂದ ಉಂಟಾಗುವ ಪರಿಣಾಮಗಳನ್ನು ಯಾವ ರೀತಿಯಲ್ಲಿ ಹಂಚಬೇಕು ಎನ್ನುವ ದೃಷ್ಟಿಕೋನದಿಂದ ಹೊರಡುತ್ತದೆ. ಯಾರು ಯಾವ ಫಲಗಳಿಗೆ ಎಷ್ಟರ ಮಟ್ಟಿಗೆ ಮತ್ತು ಯಾಕೆ ಭಾಜನರು ಎನ್ನುವುದು ಇಲ್ಲಿಯ ಕಾಳಜಿ. ಇಲ್ಲಿ ಕೇವಲ ಇಷ್ಟವಾದ ಫಲಗಳ ಕುರಿತು ಮಾತ್ರವಲ್ಲ,...

ವಿದ್ಯಾಸಂಸ್ಥೆಗಳು ಮತ್ತು ಶೈಕ್ಷಣಿಕ ಪರಿಸರ

ಈಗ ಕೆಲವು ವರ್ಷಗಳ ಹಿಂದೆ ಅಮೆರಿಕಾದ ಇಲ್ಲಿನೋಯ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಕರ್ನಾಟಕದ ವಿದ್ಯಾಸಂಸ್ಥೆಗಳ ಒಂದು ಅಧ್ಯಯನ ಮಾಡಲು ಬಂದಿದ್ದರು. ಅವರ ಅಧ್ಯಯನದ ಉದ್ದೇಶ ವಿದ್ಯಾಸಂಸ್ಥೆಗಳು ಎಷ್ಟು ಚೆನ್ನಾಗಿ ಅಥವಾ ಸಾಧಾರಣವಾಗಿ ಕೆಲಸ ಮಾಡುತ್ತಿವೆ ಎಂದು ನೋಡುವುದಲ್ಲ. ಬದಲಾಗಿ, ಈ ವಿದ್ಯಾಸಂಸ್ಥೆಗಳು ಒಟ್ಟಾರೆಯಾಗಿ ಯಾವ ರೀತಿಯ ಶೈಕ್ಷಣಿಕ ಪರಿಸರದಲ್ಲಿ ಕೆಲಸಮಾಡುತ್ತಿವೆ ಮತ್ತು ತಮ್ಮತಮ್ಮ ಶೈಕ್ಷಣಿಕ ಪರಿಸರದ ಕುರಿತು ಆ ಸಂಸ್ಥೆಗಳಿಗೆ ಎಷ್ಟು ತಿಳುವಳಿಕೆ ಇದೆ ಎಂದು ನೋಡುವುದು ಅವರ ಉದ್ದೇಶ. ಅಂದರೆ, ತಮ್ಮ ವಿದ್ಯಾಸಂಸ್ಥೆಗಳಿಗೆ ಬರುವ ವಿದ್ಯಾರ್ಥಿಗಳ ಅಗತ್ಯಗಳೇನು, ಅಂತಹ ಅಗತ್ಯಗಳನ್ನು ಪೂರೈಸುತ್ತಿರುವ ಮಿಕ್ಕ ಎಷ್ಟು ವಿದ್ಯಾಸಂಸ್ಥೆಗಳು ಆ ಪ್ರದೇಶದಲ್ಲಿವೆ, ಆ ವಿದ್ಯಾಸಂಸ್ಥೆಗಳ ಜೊತೆ ನಾವು ಪೈಪೋಟಿ ಮಾಡುತ್ತಿದ್ದರೆ, ಅವರಿಗಿಂತ ಭಿನ್ನವಾಗುವ ರೀತಿ ಹೇಗೆ, ಅಥವಾ, ಪೈಪೋಟಿ ಮಾಡದೇ ಇದ್ದರೆ, ಅವುಗಳ ಕೆಲಸಕ್ಕೂ ನಮ್ಮ ಸಂಸ್ಥೆಯ ಕೆಲಸಕ್ಕೂ ಧ್ಯೇಯೋದ್ದೇಶಗಳು ಪೂರಕವಾಗಿರುವಂತೆ ನೋಡಿಕೊಳ್ಳುವುದು ಹೇಗೆ, ನಮ್ಮ ವಿದ್ಯಾರ್ಥಿಗಳು ಯಾವ ರೀತಿಯ ಸಂಸ್ಥೆಗಳಿಂದ ನಮ್ಮಲ್ಲಿಗೆ ಬರುತ್ತಿದ್ದಾರೆ ಮತ್ತು ಯಾವ ರೀತಿಯ ಉದ್ಯೋಗದ ಅಥವಾ ಉನ್ನತ ವ್ಯಾಸಂಗದ ಸಂಸ್ಥೆಗಳಿಗೆ ನಮ್ಮಲ್ಲಿಂದ ಹೋಗುತ್ತಿದ್ದಾರೆ, ನಮ್ಮ ಪರಿಸರದ ಅಗತ್ಯಕ್ಕೆ ತಕ್ಕಂತೆ ಶಿಕ್ಷಣ ನೀಡುವುದಕ್ಕೆ ನಮಗೆ ಯಾವ ರೀತಿಯ ತಜ್ಞತೆ ಇರುವ ಶಿಕ್ಷಕರು ಬೇಕು, ನಮ್ಮ ಕ್ಷೇತ್ರದಲ್ಲಿ ...

ಅಗ್ನಿ ಎಂಬ ರೂಪಕ

ಪ್ರಾಚೀನರಿಗೆ ಅಗ್ನಿ ನಮ್ಮ ಪ್ರಜ್ಞೆಯ ರೂಪಕ. ನಮ್ಮ ಪ್ರಜ್ಞೆ ಪ್ರಪಂಚವನ್ನು ಭಕ್ಷಿಸಿ ಬೆಳಗುತ್ತದೆ. ಅಗ್ನಿ ಇಂಧನವನ್ನು ಭಕ್ಷಿಸಿ ಬೆಳಗುವಂತೆ. ದಹಿಸುವ ಯಾವ ವಸ್ತುವಾದರೂ ಸರಿಯೆ ಅದು ಅಗ್ನಿಗೆ ಇಂಧನವಾಗಿ ಸಲ್ಲುತ್ತದೆ. ವಸ್ತುಗಳನ್ನು ಹಲವು ಹೆಸರುಗಳಿಂದ ಮತ್ತು ರೂಪಗಳಿಂದ ಗುರುತಿಸುತ್ತೇವೆ. ಇದು ಆಟಿಕೆ, ಇದು ಕುರ್ಚಿ ಎಂದು. ಆದರೆ, ಅಗ್ನಿಗೆ ವಸ್ತುಗಳ ಬಗ್ಗೆ ಯಾವ ತಾರತಮ್ಯವೂ ಇಲ್ಲ. ವಸ್ತುವಿನ ರೂಪ ಏನೇ ಇರಲಿ, ಅಗ್ನಿಗೆ ಅದು ಸಲ್ಲುವುದು ಇಂಧನವಾಗಿ ಮಾತ್ರ. ಹೇಗಿದ್ದರೂ, ಅಗ್ನಿಗೆ ಸಂದಮೇಲೆ ಆ ವಸ್ತುವಿನ ನಾಮರೂಪ ಭೇದಗಳೆಲ್ಲವೂ ಅಳಿದೇ ಹೋಗುತ್ತದಲ್ಲ. ನಮ್ಮ ಪ್ರಜ್ಞೆಗೆ ಸಲ್ಲುವ ಪ್ರಪಂಚದ ವಸ್ತುಗಳೂ ಹೀಗೆಯೇ. ಅವು ನಮ್ಮ ಸುಖಕ್ಕೆ ಬೇಕು. ಅನ್ನ, ನೀರು, ಹಣ, ಕೀರ್ತಿ, ಆರೋಗ್ಯ, ದೇಹಸೌಂದರ್ಯ ಇವೆಲ್ಲವೂ ನಮ್ಮ ಪ್ರಜ್ಞೆಗೆ, ಅಂದರೆ ನಮಗೆ, ಬೇಕೇಬೇಕು. ಆದರೆ, ಈ ಎಲ್ಲ ವಸ್ತುಗಳೂ ಬೇಕಿರುವುದು ಪ್ರಜ್ಞೆಗೆ ಇಂಧನವಾಗಿ ಮಾತ್ರ. ಅದರ ನಿರ್ದಿಷ್ಟ ರೂಪ, ಹೆಸರು, ಲಕ್ಷಣಗಳೆಲ್ಲಾ ಸಾಂದರ್ಭಿಕ ಮಾತ್ರ. ಇಂತಹ ಇಂಧನವನ್ನು ಕೊಟ್ಟಷ್ಟೂ ನಮ್ಮ ಪ್ರಜ್ಞೆ ಉರಿಯುತ್ತಲೇ ಇರುತ್ತದೆ. ಎಲ್ಲಿಯವರೆಗೂ ನಮ್ಮ ಪ್ರಜ್ಞೆ ಪ್ರಪಂಚವನ್ನು, ಅದರ ವಸ್ತುಗಳನ್ನು, ತನ್ನ ಇಂಧನವನ್ನಾಗಿ ಭಕ್ಷಿಸುತ್ತಿರುತ್ತದೋ ಅಲ್ಲಿಯವರೆಗೂ ನಾವು ಜೀವಂತವಾಗಿದ್ದೇವೆ ಎಂದರ್ಥ.  ಇಲ್ಲಿಯೇ ಒಂದು ಪ್ರಶ್ನೆಯೂ ಏಳುತ್ತದೆ. ನಮಗೆ ವಸ್ತುಗಳು ಇಷ್ಟವಾಗುವುದು ನಿರ್ದಿಷ್ಟ ...

ಲೋಕನಿಂದೆಗೆ ಹೆದರುವ ಸಜ್ಜನರು

ಕೆಟ್ಟ ಕೆಲಸ ಮಾಡಬಾರದು. ಯಾಕೆ? ಅದಕ್ಕೆ ಎರಡು ಉತ್ತರ. ಮೊದಲನೆಯದು: “ಹಾಗೆ ಮಾಡಿದರೆ ನಾಲ್ಕು ಜನರ ಮುಂದೆ ನಮ್ಮ ಮರ್ಯಾದೆ ಏನಾಗುತ್ತದೆ?” ಎರಡನೆಯದು: “ನನ್ನ ನೈತಿಕ ನಂಬಿಕೆಗಳಿಗೆ ವಿರುದ್ಧವಾಗಿರುವ ಏನನ್ನೂ ನಾನು ಮಾಡುವುದಿಲ್ಲ”.  ಚಿಕ್ಕಂದಿನಲ್ಲಿ ಏನಾದರೂ ಮಾಡಬಾರದ್ದು ಮಾಡಿ ಸಿಕ್ಕಿಹಾಕಿಕೊಂಡರೆ, ನಮ್ಮಜ್ಜಿ, ನಮ್ಮಮ್ಮ ಎಲ್ಲರೂ ನನ್ನನ್ನು ಬೈಯುತ್ತಿದ್ದದ್ದು “ನಾಲ್ಕು ಜನ ನೋಡಿ ನಗ್ತಾರೆ. ನಾಚಿಕೆ ಆಗ್ಬೇಕು ನಿನಗೆ” ಅಂತ. ಆದರೆ ಅವರೆಲ್ಲಾ ಹಳೆಯ ಕಾಲದವರು. ಸಮಾಜದ ಬಗೆಗಿನ ಭಯದಿಂದ ನಾವು ನೀತಿವಂತರಾಗಿರಬೇಕು ಎನ್ನುವವವರು. ನನ್ನ ಸ್ನೇಹಿತರು ಹಾಗಲ್ಲ. ಬಹಳ ಆಧುನಿಕರು. ಅವರೂ ಒಳ್ಳೆಯವರೇ. ಆದರೆ ಅವರಿಗೆ ಸಮಾಜದ ಭಯದಿಂದ ಒಳ್ಳೆಯವರಾಗಿರುವುದು ಆಷಾಢಭೂತಿಗಳ ಲಕ್ಷಣ ಎಂದು ಕಾಣಿಸುತ್ತದೆ. ನಾವು ನಮ್ಮ ನೈತಿಕ ಮೌಲ್ಯಗಳನ್ನು ಪಾಲಿಸಬೇಕೇ ಹೊರತೂ ಇನ್ನೊಬ್ಬರ ಬಗೆಗಿನ ಭಯಕ್ಕಾಗಿ ಒಳ್ಳೆಯವರಾಗಿರಬಾರದು. ಇಬ್ಬರಲ್ಲಿ ಯಾರು ಸರಿ? ನನ್ನ ಪ್ರಕಾರ, ನನ್ನ ಅಜ್ಜಿಯೇ ಸರಿ. ಯಾಕೆ? ಸರಿ-ತಪ್ಪುಗಳು ಕೂಡಾ ಬೆಟ್ಟಗುಡ್ಡಗಳಂತೆ ನಮ್ಮ ಪ್ರಪಂಚದ ಸತ್ಯಗಳೇ ಹೊರತೂ ನಮ್ಮ ಮನಸ್ಸಿನ ಖಯಾಲಿಗಳಲ್ಲ. ಸರಿ-ತಪ್ಪುಗಳನ್ನು ನಾವೇ ಮಾಡಿಕೊಂಡಿರುವುದಲ್ಲವೇ ಎಂದು ನೀವು ಕೇಳಬಹುದು. ಹೌದು. ಆದರೆ, ನೀರಿನ ಕೆರೆಗಳನ್ನೂ ನಾವೇ ಮಾಡಿಕೊಂಡಿರುವುದು. ಅಷ್ಟು ಮಾತ್ರಕ್ಕೆ ಅವೇನೂ ಕಡಿಮೆ ಸತ್ಯಗಳಾಗುವುದಿಲ್ಲವಲ್ಲ? ನಾವೇ ಮಾಡಿಕೊಂಡಿದ್ದು ಎಂದು ಕೆರೆಯಲ...

ನೆಟ್ಟಗೆ ಯೋಚಿಸಲು ಹತ್ತು ಸೂತ್ರಗಳು

ನಾವೆಲ್ಲಾ ಸ್ಕೂಲು ಕಾಲೇಜಿಗೆ ಹೋಗಿ ಬುದ್ಧಿವಂತರಾಗುತ್ತೇವೆ ಎಂದು ಲೆಕ್ಕ. ಅಂದರೆ ವೈಜ್ಞಾನಿಕವಾಗಿ ಯೋಚಿಸಲು ಪ್ರಾರಂಭಿಸುತ್ತೇವೆ ಎಂದರ್ಥ. ಸ್ಕೂಲು ಕಾಲೇಜುಗಳು ವೈಜ್ಞಾನಿಕ ಮನೋಭಾವನೆ ಎನ್ನುವಂಥ ರೀತಿಯ ಯಾವುದೋ ಒಂದು ವಿಶೇಷ ಶಕ್ತಿಯನ್ನು ಬೆಳೆಸುತ್ತವೆ ಎಂದು ನಮ್ಮ ನಂಬಿಕೆ. ಆದರೆ, ಇಲ್ಲೊಂದು ಎಡವಟ್ಟಿದೆ. ವೈಜ್ಞಾನಿಕ ಚಿಂತನೆ ಎನ್ನುವ ಮಾದರಿಯ ಯಾವ ಚಿಂತನೆಯೂ ಈ ಪ್ರಪಂಚದಲ್ಲಿಲ್ಲ. ಅಥವಾ, ಹೀಗೆ ಯೋಚನೆ ಮಾಡಿದರೆ ಅದು ವೈಜ್ಞಾನಿಕ, ಹಾಗೆ ಯೋಚನೆ ಮಾಡಿದರೆ ಅದು ಅವೈಜ್ಞಾನಿಕ ಎನ್ನುವ ಯಾವ ಕಾಯ್ದೆ ಪುಸ್ತಕವೂ ಇಲ್ಲ. ಹಾಗಾಗಿ, ಈ ವೈಜ್ಞಾನಿಕ ಮನೋಭಾವದ ಹಿಂದೆ ಬಿದ್ದರೆ ಹಳ್ಳ ಹತ್ತುವುದು ಗ್ಯಾರಂಟಿ. ಇದರಿಂದ ತಪ್ಪಿಸಿಕೊಳ್ಳಬೇಕೆಂದರೆ ಸ್ವಲ್ಪ ಚಾಲಾಕಿತನ ಉಪಯೋಗಿಸಬೇಕು. ಅಂತಹ ಚಾಲಾಕಿತನದ ಹತ್ತು ಉಪಾಯಗಳು ಇಲ್ಲಿವೆ. ಆದರೆ, ಎಚ್ಚರ. ಇದು ಉಪಾಯಗಳು. ನಿಯಮಗಳಲ್ಲ. ಅಡ್ಡಾದಿಡ್ಡಿಯಾಗಿ ಬಳಸಿ ಇವು ಕೈಕೊಟ್ಟರೆ ಮತ್ತೆ ಬೇರೆಯವರು ಜವಾಬ್ದಾರರಲ್ಲ. ಸಾಮಾನ್ಯವಾಗಿ ಸ್ಕೂಲು ಕಾಲೇಜುಗಳು ಕಲಿಸುವುದು ದಡ್ಡರ ಸೂತ್ರ. ಅದರಾಚೆಗೆ ಇರುವುದು ಜಾಣರ ಸೂತ್ರ.  ದಡ್ಡರ ಸೂತ್ರ 1:  ಯಾವುದನ್ನು ಸರಿಯೆಂದು ಸಾಬೀತುಮಾಡಬಹುದೋ ಅದು ಮಾತ್ರ ವೈಜ್ಞಾನಿಕ.  ಜಾಣರ ಸೂತ್ರ 1:  ಯಾವುದನ್ನು ತಪ್ಪೆಂದು ಸಾಬೀತುಮಾಡುವ ಸಾಧ್ಯತೆ ಇದೆಯೋ ಅದು ಮಾತ್ರ ವೈಜ್ಞಾನಿಕ.  ಸಾಮಾನ್ಯವಾಗಿ ವಿಜ್ಞಾನ ಎಂದರೆ ಸರಿ ಎಂದು ಸಾಬೀತು ಮಾ...

ಗಾಂಧೀ ಮಾದರಿಯ ಸಾಮಾಜಿಕ ವಿಮರ್ಶೆ

ಕೆಲವು ಸಾಮಾಜಿಕ ಆಚಾರಗಳನ್ನು, ಅದರಲ್ಲೂ ವಿಶೇಷವಾಗಿ ಹಿಂದೂ ಆಚಾರಗಳನ್ನು, ಗಾಂಧಿ ಟೀಕಿಸಿದ್ದಿದೆ. ಉದಾಹರಣೆಗೆ, ಅಸ್ಪೃಶ್ಯತೆ, ಪ್ರಾಣಿಹಿಂಸೆ. ಆದರೆ, ವಿಚಿತ್ರವೆಂದರೆ, ಇನ್ನು ಕೆಲವು ಸಾಮಾಜಿಕ ಆಚಾರಗಳನ್ನು, ಅದರಲ್ಲೂ ನಮಗೆ ಇವತ್ತು ವಿಕೃತವೆಂದು ಕಾಣುವಂಥವನ್ನು ಸಮರ್ಥಿಸಿದ್ದೂ ಇದೆ. ಉದಾಹರಣೆಗೆ, ವರ್ಣಾಶ್ರಮಧರ್ಮ ಮತ್ತು ಬ್ರಹ್ಮಚರ್ಯ. ಬಿಹಾರದ ಭೂಕಂಪಕ್ಕೆ ಅಸ್ಪೃಶ್ಯತೆಯ ಆಚರಣೆಯ ಪಾಪವೇ ಕಾರಣ ಎಂದೂ ಹೇಳಿದ್ದಿದೆ. ಗಾಂಧಿಯನ್ನು ಮೆಚ್ಚುವವರು ಇಂತಹ ಆಭಾಸಗಳನ್ನು ದೊಡ್ಡವರ ಸಣ್ಣ ತಪ್ಪುಗಳು ಎನ್ನುವಂತೆ ಸಂಕೋಚದಿಂದ ತೇಲಿಸುತ್ತಾರೆ. ಗಾಂಧಿಯನ್ನು ವಿಮರ್ಶಿಸುವವರು ಇದನ್ನೇ ಮುಂದುಮಾಡಿಕೊಂಡು ಗಾಂಧಿ ಆಳದಲ್ಲಿ ಎಂತಹ ಪಿತೃಪ್ರಧಾನವಾದ, ಮೇಲ್ಜಾತಿಯವರ ಪ್ರಕಾರ ಆದರ್ಶವೆಂದು ಕಾಣುವ ಒಂದು ಊಳಿಗಮಾನ್ಯ ರೀತಿಯ ಸಮಾಜದ ಪ್ರತಿಪಾದಕ ಎಂದೂ ವಾದಿಸುತ್ತಾರೆ. ಗಾಂಧಿಯ ಬಗೆಗಿನ ಗೌರವದಿಂದಲೋ ಏನೋ ಈ ಎರಡೂ ಕಡೆಯವರು ಇಷ್ಟು ಸ್ಫುಟವಾಗಿ, ಒರಟಾಗಿ ತಮ್ಮ ವಿಚಾರಗಳನ್ನು ಹೇಳದೇ ಇರಬಹುದು. ಆದರೆ ಎರಡೂ ಪಕ್ಷಗಳ ಪ್ರತಿಪಾದನೆಯ ಸಾರವಂತೂ ಸುಮಾರು ಹೀಗೆಯೇ ಇರುತ್ತದೆ.  ಈ ಎರಡೂ ಪಕ್ಷಗಳು ಗಾಂಧಿಯ ವಿಚಾರದ ಆಳವನ್ನು ತಿಳಿದುಕೊಳ್ಳುವಲ್ಲಿ ಸೋತಿವೆ ಎಂದು ನನ್ನ ಅಭಿಪ್ರಾಯ. ಅಷ್ಟೇ ಅಲ್ಲ, ತಮ್ಮ ನಡುವೆ ಕೈಬದಲಾಯಿಸಿಕೊಂಡು, ಇಬ್ಬರೂ ಗಾಂಧಿಯ ವಿಚಾರಗಳನ್ನು ವಿಕೃತವಾಗಿ ವ್ಯಾಖ್ಯಾನ ಮಾಡಿದ್ದಾರೆ ಎಂದೂ ನನ್ನ ಅನಿಸಿಕೆ. ಇದನ್ನು ತೋರಿಸುವುದು ಪ್ರಸ್...

ಸಮಾನತೆಯ ಕುರಿತು ಐದು ತಕರಾರುಗಳು

ಆಧುನಿಕ ಪ್ರಪಂಚವನ್ನು ರೂಪಿಸಿರುವ ಆದರ್ಶಗಳಲ್ಲೇ ಸಮಾನತೆ ಅತ್ಯಂತ ಮುಖ್ಯವಾದದ್ದು. ಫ್ರೆಂಚ್ ಕ್ರಾಂತಿಯ ಕಾಲದಿಂದ ಮೊದಲುಗೊಂಡು ಎಲ್ಲ ಸಾಮಾಜಿಕ ರಾಜಕೀಯ ಯೋಜನೆಗಳು, ವ್ಯವಸ್ಥೆಗಳಲ್ಲೂ ಸಮಾನತೆಯನ್ನು ತರುವ ಕಾರ್ಯಕ್ರಮಗಳೇ ಎದ್ದು ಕಾಣುತ್ತವೆ. ಅಷ್ಟೇ ಅಲ್ಲ, ಸಾಮಾಜಿಕ ರಾಜಕೀಯ ಸ್ಥಿತಿಗತಿಗಳು ಮತ್ತು ಸಂಸ್ಥೆಗಳನ್ನು ಅರಿಯುವುದಕ್ಕೆ ಮತ್ತು ಅವನ್ನು ವಿಮರ್ಶಿಸುವುದಕ್ಕೆ ಸಮಾನತೆಯೇ ಅತೀ ಮುಖ್ಯ ಪರಿಕಲ್ಪನೆ. ಯಾವ ಸರಕಾರೀ ಯೋಜನೆಯಾಗಲೀ, ಅಥವಾ, ಚಿಂತನಾ ಪ್ರಸ್ಥಾನವಾಗಲಿ, ಅದನ್ನು ಮೊದಲು ಅಳೆಯುವುದು ಸಮಾನತೆಯ ನೆಲೆಯಲ್ಲಿ. ಈ ನಿರ್ದಿಷ್ಟ ಯೋಜನೆ ಸಮಾನತೆಯನ್ನು ಹೆಚ್ಚಿಸುತ್ತದೆಯೇ ಇಲ್ಲವೇ, ಆ ಕಾನೂನು ಅಸಮಾನತೆಯನ್ನು ಉಂಟುಮಾಡುತ್ತದೆಯೇ, ಇವರ ಸಾಹಿತ್ಯ ಸಮಾನತೆಯ ಸಮಾಜವನ್ನು ಕಟ್ಟುವುದಕ್ಕೆ ಪೂರಕವಾಗಿದೆಯೇ, ಅವರ ಆಚಾರವಿಚಾರ ಅಸಮಾನತೆಯನ್ನು ಪೋಷಿಸುತ್ತದೆಯೇ, ಈ ರೀತಿಯ ಪ್ರಶ್ನೆಗಳು ಸಮಾನತೆ ಹೇಗೆ ನಮ್ಮ ಇಂದಿನ ಕಾಲದ ಚಿಂತನೆಯ ಕ್ಷಿತಿಜವೇ ಆಗಿದೆ ಎನ್ನುವುದನ್ನು ತೋರಿಸುತ್ತದೆ. ಆದರೆ, ಸಮಾನತೆಯ ಆದರ್ಶ ಮತ್ತು ಸಮಾನತೆಯ ಪರಿಕಲ್ಪನೆ ಎರಡೂ ಮೇಲುನೋಟಕ್ಕೆ ಕಾಣಿಸುವಷ್ಟು ಸ್ವಯಂವೇದ್ಯವೂ ಅಲ್ಲ, ಸಿಂಧುವೂ ಅಲ್ಲ. ಒಂದು ಆದರ್ಶವಾಗಿ ಸಮಾನತೆ ಯಾವ ರೀತಿಯ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ ಮತ್ತು ಒಂದು ಪರಿಕಲ್ಪನೆಯಾಗಿ ಯಾವ ರೀತಿಯ ತಾರ್ಕಿಕ ತೊಡಕುಗಳನ್ನು ಉಂಟುಮಾಡುತ್ತದೆ ಎಂದು ಗುರುತಿಸುವುದು ಈ ಲೇಖನದ ಉದ್ದೇಶ. ಮತ್ತು ನಾ...