ಲೋಕನಿಂದೆಗೆ ಹೆದರುವ ಸಜ್ಜನರು


ಕೆಟ್ಟ ಕೆಲಸ ಮಾಡಬಾರದು. ಯಾಕೆ? ಅದಕ್ಕೆ ಎರಡು ಉತ್ತರ. ಮೊದಲನೆಯದು: “ಹಾಗೆ ಮಾಡಿದರೆ ನಾಲ್ಕು ಜನರ ಮುಂದೆ ನಮ್ಮ ಮರ್ಯಾದೆ ಏನಾಗುತ್ತದೆ?” ಎರಡನೆಯದು: “ನನ್ನ ನೈತಿಕ ನಂಬಿಕೆಗಳಿಗೆ ವಿರುದ್ಧವಾಗಿರುವ ಏನನ್ನೂ ನಾನು ಮಾಡುವುದಿಲ್ಲ”. 

ಚಿಕ್ಕಂದಿನಲ್ಲಿ ಏನಾದರೂ ಮಾಡಬಾರದ್ದು ಮಾಡಿ ಸಿಕ್ಕಿಹಾಕಿಕೊಂಡರೆ, ನಮ್ಮಜ್ಜಿ, ನಮ್ಮಮ್ಮ ಎಲ್ಲರೂ ನನ್ನನ್ನು ಬೈಯುತ್ತಿದ್ದದ್ದು “ನಾಲ್ಕು ಜನ ನೋಡಿ ನಗ್ತಾರೆ. ನಾಚಿಕೆ ಆಗ್ಬೇಕು ನಿನಗೆ” ಅಂತ. ಆದರೆ ಅವರೆಲ್ಲಾ ಹಳೆಯ ಕಾಲದವರು. ಸಮಾಜದ ಬಗೆಗಿನ ಭಯದಿಂದ ನಾವು ನೀತಿವಂತರಾಗಿರಬೇಕು ಎನ್ನುವವವರು. ನನ್ನ ಸ್ನೇಹಿತರು ಹಾಗಲ್ಲ. ಬಹಳ ಆಧುನಿಕರು. ಅವರೂ ಒಳ್ಳೆಯವರೇ. ಆದರೆ ಅವರಿಗೆ ಸಮಾಜದ ಭಯದಿಂದ ಒಳ್ಳೆಯವರಾಗಿರುವುದು ಆಷಾಢಭೂತಿಗಳ ಲಕ್ಷಣ ಎಂದು ಕಾಣಿಸುತ್ತದೆ. ನಾವು ನಮ್ಮ ನೈತಿಕ ಮೌಲ್ಯಗಳನ್ನು ಪಾಲಿಸಬೇಕೇ ಹೊರತೂ ಇನ್ನೊಬ್ಬರ ಬಗೆಗಿನ ಭಯಕ್ಕಾಗಿ ಒಳ್ಳೆಯವರಾಗಿರಬಾರದು. ಇಬ್ಬರಲ್ಲಿ ಯಾರು ಸರಿ? ನನ್ನ ಪ್ರಕಾರ, ನನ್ನ ಅಜ್ಜಿಯೇ ಸರಿ. ಯಾಕೆ?

ಸರಿ-ತಪ್ಪುಗಳು ಕೂಡಾ ಬೆಟ್ಟಗುಡ್ಡಗಳಂತೆ ನಮ್ಮ ಪ್ರಪಂಚದ ಸತ್ಯಗಳೇ ಹೊರತೂ ನಮ್ಮ ಮನಸ್ಸಿನ ಖಯಾಲಿಗಳಲ್ಲ. ಸರಿ-ತಪ್ಪುಗಳನ್ನು ನಾವೇ ಮಾಡಿಕೊಂಡಿರುವುದಲ್ಲವೇ ಎಂದು ನೀವು ಕೇಳಬಹುದು. ಹೌದು. ಆದರೆ, ನೀರಿನ ಕೆರೆಗಳನ್ನೂ ನಾವೇ ಮಾಡಿಕೊಂಡಿರುವುದು. ಅಷ್ಟು ಮಾತ್ರಕ್ಕೆ ಅವೇನೂ ಕಡಿಮೆ ಸತ್ಯಗಳಾಗುವುದಿಲ್ಲವಲ್ಲ? ನಾವೇ ಮಾಡಿಕೊಂಡಿದ್ದು ಎಂದು ಕೆರೆಯಲ್ಲಿ ಬಿದ್ದರೆ ಮುಳುಗದೇ ಇರುತ್ತೇವೆಯೇ? ಸರಿ-ತಪ್ಪುಗಳನ್ನು ಖಾಸಗಿಯಾಗಿ ನಿರ್ಧರಿಸಲು ಬರುವುದಿಲ್ಲ. ಅದನ್ನು ಸಾರ್ವತ್ರಿಕವಾಗಿಯೇ ನಿರ್ಧರಿಸಬೇಕು. ನಾವು ಸರಿ ತಪ್ಪುಗಳನ್ನು ಕಲಿಯುವುದು ಪ್ರಪಂಚವನ್ನು ನೋಡಿಯೇ ಹೊರತೂ, ಯಾವುದೇ ನೈತಿಕ ಸೂತ್ರಗಳನ್ನೂ ವ್ಯಾಖ್ಯಾನ ಮಾಡಿಕೊಂಡಲ್ಲ. ಸರಿ-ತಪ್ಪುಗಳ ವಿವೇಕವನ್ನು ಪ್ರಪಂಚದ ಒಡನಾಟದಿಂದ ಕಲಿಯುವುದರ ಒಂದು ಮುಖ್ಯ ಭಾಗ ಏನೆಂದರೆ, ಆ ಪ್ರಪಂಚವೇ ಸರಿ-ತಪ್ಪುಗಳನ್ನು ನಿರ್ಧರಿಸುವ ಕೊನೆಯ ಕಟಕಟೆ ಎಂದೂ ತಿಳಿಯುವುದು. 

ನೈತಿಕ ಮೌಲ್ಯಗಳ ಬಗ್ಗೆ ಭಾಷಣ ಮಾಡುತ್ತಿದ್ದ ಆಕ್ಸ್‍ಫರ್ಡಿನ ತತ್ವಜ್ಞಾನಿಯಾದ ರಿಚರ್ಡ್ ಹೇರ್‍ಗೆ ಒಮ್ಮೆ ಆಸ್ಟಿನ್ ಎಂಬ ಇನ್ನೊಬ್ಬ ತತ್ವಜ್ಞ ಕೇಳಿದನಂತೆ. “ಹೇರ್, ನಿನ್ನ ಒಬ್ಬ ವಿದ್ಯಾರ್ಥಿ, ನಿನಗೆ 15 ಪೌಂಡ್ ಲಂಚ ಕೊಡುತ್ತೇನೆ. ನನ್ನನ್ನು ಪರೀಕ್ಷೆಯಲ್ಲಿ ಪಾಸು ಮಾಡಿಬಿಡಿ ಎಂದರೆ ನೀನು ಏನು ಹೇಳುತ್ತೀಯ?”. ಅದಕ್ಕೆ ಹೇರ್, “ಲಂಚ ತೆಗೆದುಕೊಳ್ಳುವುದು ನನ್ನ ನೈತಿಕ ಮೌಲ್ಯಗಳಿಗೆ ವಿರುದ್ಧವಾದದ್ದು ಎಂದು ಹೇಳುತ್ತೇನೆ”, ಎಂದನಂತೆ. ಅದಕ್ಕೆ ಆಸ್ಟಿನ್ “ಓ ಹೌದಾ! ನಾನಾದರೆ, ನೋ, ಥ್ಯಾಂಕ್ಸ್ ಎಂದು ಹೇಳುತ್ತಿದ್ದೆ” ಎಂದನಂತೆ. ನಿಮಗೂ ಬೇಕೇ ಕದ್ದ ಮಾಲಿನಲ್ಲಿ ಸ್ವಲ್ಪ ಪಾಲು? “ನೋ, ಥ್ಯಾಂಕ್ಸ್!”     

Comments

Popular posts from this blog

ಸ್ಟ್ರಕ್ಚರಲಿಸಂ (ರಚನಾವಾದ/ರಾಚನಿಕವಾದ)

ಮಾರ್ಕ್ಸ್‌‌‌ ವಾದ

ಸಮಾನತೆಯ ಕುರಿತು ಐದು ತಕರಾರುಗಳು