ಸಮಾನತೆಯ ಕುರಿತು ಐದು ತಕರಾರುಗಳು

ಆಧುನಿಕ ಪ್ರಪಂಚವನ್ನು ರೂಪಿಸಿರುವ ಆದರ್ಶಗಳಲ್ಲೇ ಸಮಾನತೆ ಅತ್ಯಂತ ಮುಖ್ಯವಾದದ್ದು. ಫ್ರೆಂಚ್ ಕ್ರಾಂತಿಯ ಕಾಲದಿಂದ ಮೊದಲುಗೊಂಡು ಎಲ್ಲ ಸಾಮಾಜಿಕ ರಾಜಕೀಯ ಯೋಜನೆಗಳು, ವ್ಯವಸ್ಥೆಗಳಲ್ಲೂ ಸಮಾನತೆಯನ್ನು ತರುವ ಕಾರ್ಯಕ್ರಮಗಳೇ ಎದ್ದು ಕಾಣುತ್ತವೆ. ಅಷ್ಟೇ ಅಲ್ಲ, ಸಾಮಾಜಿಕ ರಾಜಕೀಯ ಸ್ಥಿತಿಗತಿಗಳು ಮತ್ತು ಸಂಸ್ಥೆಗಳನ್ನು ಅರಿಯುವುದಕ್ಕೆ ಮತ್ತು ಅವನ್ನು ವಿಮರ್ಶಿಸುವುದಕ್ಕೆ ಸಮಾನತೆಯೇ ಅತೀ ಮುಖ್ಯ ಪರಿಕಲ್ಪನೆ. ಯಾವ ಸರಕಾರೀ ಯೋಜನೆಯಾಗಲೀ, ಅಥವಾ, ಚಿಂತನಾ ಪ್ರಸ್ಥಾನವಾಗಲಿ, ಅದನ್ನು ಮೊದಲು ಅಳೆಯುವುದು ಸಮಾನತೆಯ ನೆಲೆಯಲ್ಲಿ. ಈ ನಿರ್ದಿಷ್ಟ ಯೋಜನೆ ಸಮಾನತೆಯನ್ನು ಹೆಚ್ಚಿಸುತ್ತದೆಯೇ ಇಲ್ಲವೇ, ಆ ಕಾನೂನು ಅಸಮಾನತೆಯನ್ನು ಉಂಟುಮಾಡುತ್ತದೆಯೇ, ಇವರ ಸಾಹಿತ್ಯ ಸಮಾನತೆಯ ಸಮಾಜವನ್ನು ಕಟ್ಟುವುದಕ್ಕೆ ಪೂರಕವಾಗಿದೆಯೇ, ಅವರ ಆಚಾರವಿಚಾರ ಅಸಮಾನತೆಯನ್ನು ಪೋಷಿಸುತ್ತದೆಯೇ, ಈ ರೀತಿಯ ಪ್ರಶ್ನೆಗಳು ಸಮಾನತೆ ಹೇಗೆ ನಮ್ಮ ಇಂದಿನ ಕಾಲದ ಚಿಂತನೆಯ ಕ್ಷಿತಿಜವೇ ಆಗಿದೆ ಎನ್ನುವುದನ್ನು ತೋರಿಸುತ್ತದೆ.

ಆದರೆ, ಸಮಾನತೆಯ ಆದರ್ಶ ಮತ್ತು ಸಮಾನತೆಯ ಪರಿಕಲ್ಪನೆ ಎರಡೂ ಮೇಲುನೋಟಕ್ಕೆ ಕಾಣಿಸುವಷ್ಟು ಸ್ವಯಂವೇದ್ಯವೂ ಅಲ್ಲ, ಸಿಂಧುವೂ ಅಲ್ಲ. ಒಂದು ಆದರ್ಶವಾಗಿ ಸಮಾನತೆ ಯಾವ ರೀತಿಯ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ ಮತ್ತು ಒಂದು ಪರಿಕಲ್ಪನೆಯಾಗಿ ಯಾವ ರೀತಿಯ ತಾರ್ಕಿಕ ತೊಡಕುಗಳನ್ನು ಉಂಟುಮಾಡುತ್ತದೆ ಎಂದು ಗುರುತಿಸುವುದು ಈ ಲೇಖನದ ಉದ್ದೇಶ. ಮತ್ತು ನಾವು ಇಂದು ಬಳಸುತ್ತಿರುವ ರೀತಿಯಲ್ಲಿ ಸಮಾನತೆ ಎನ್ನುವ ಪರಿಕಲ್ಪನೆಯೇ ಹೇಗೆ ವಿಕೃತವಾಗಿಬಿಟ್ಟಿದೆ ಎಂದೂ ತೋರಿಸುವುದು ನನ್ನ ಉದ್ದೇಶ.

ಸಮಾನತೆ ಮತ್ತು ಲೋಕವ್ಯವಹಾರ
ಸಮಾನತೆ ನಮ್ಮ ದಿನನಿತ್ಯದ ಬದುಕಿನಲ್ಲಿ ರೂಢಿಸಿಕೊಳ್ಳಬಹುದಾದ ಅಥವಾ ರೂಢಿಸಿಕೊಳ್ಳಬೇಕಾದ ಆದರ್ಶ ಎಂದು ಹೇಳುವುದು ಕಷ್ಟ. ಸತ್ಯ, ಸಂಯಮ, ನಿಷ್ಠೆ, ಕರುಣೆ, ಕಾಠಿಣ್ಯ, ತಾಳ್ಮೆ ಹೀಗೆ ಹಲವು ಆದರ್ಶಗಳನ್ನು ನಾವು ನಮ್ಮ ನಿತ್ಯಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಬೇಕಾದರೆ ಹೇಳಬಹುದು. ಇದನ್ನು ಹಲವು ಅಭ್ಯಾಸಗಳ ಮೂಲಕ ಕಲಿಯಲೂಬಹುದು. ಆದರೆ, ಸಮಾನತೆಯನ್ನು ಒಂದು ಆದರ್ಶವಾಗಿ ಕಲಿಯಬೇಕು ಎಂದು ಹೇಳಲಾಗದು. ನಿತ್ಯಜೀವನದಲ್ಲಿ ನಾವು ನಿಜವಾಗಿಯೂ ಕಲಿಯಬೇಕಿರುವುದು ಸಮಾನತೆಯ ವಿರುದ್ಧವಾದ ಆದರ್ಶವನ್ನು, ಅಂದರೆ ತಾರತಮ್ಯದ ಆದರ್ಶವನ್ನು. ಮದುವೆ ಮಾಡಿಕೊಳ್ಳುವಾಗ, ಸ್ನೇಹವನ್ನು ಬೆಳೆಸಿಕೊಳ್ಳುವಾಗ, ನಮ್ಮ ಸ್ನೇಹಿತನಾಗುವವನು ಯಾವ ರೀತಿಯವನು, ಯಾವ ಹಿನ್ನೆಲೆಯವನು ಎಂದು ಗಮನಿಸಬೇಕು. ನಮಗಿಂತ ಅತೀ ಶ್ರೀಮಂತನಾದರೂ, ಅಥವಾ ನಮಗಿಂತ ಅತೀ ಬಡವನಾದರೂ ಅದು ಸಮಸ್ಯೆಯೇ. ಹಾಗೆಯೇ, ನಮಗಿಂತ ಅತೀ ಬುದ್ಧಿವಂತನಾದರೂ ಅಥವಾ ಅತೀ ದಡ್ಡನಾದರೂ ಅಂತಹ ಸ್ನೇಹ ಬಾಳುವಂಥದಲ್ಲ. ನಮ್ಮ ಸಂಸ್ಕಾರಗಳಿಗಿಂತ ಬಹಳ ಬೇರೆ ರೀತಿಯ ಸಂಸ್ಕಾರಗಳಲ್ಲಿ ಬೆಳೆದಿರುವವನ ಜೊತೆ ಸ್ನೇಹ ಸಾಧ್ಯವಿಲ್ಲ. ಅಷ್ಟೇ ಏಕೆ, ನಮ್ಮ ನಮ್ಮ ನಿರ್ದಿಷ್ಟ ಸಂದರ್ಭಗಳ ಮಿತಿಯಲ್ಲಿ ನಾವು ಯಾರನ್ನೇ ಸ್ನೇಹಿತರನ್ನಾಗಿ ಒಪ್ಪಿಕೊಂಡರೂ, ಈ ಸಂದರ್ಭಗಳಿಗೆಲ್ಲಾ ಅತೀತವಾಗಿ, ಸ್ನೇಹ ಮಾಡುವಾಗ ಸಮಾನತೆಯ ಆದರ್ಶವನ್ನು ನಾವು ಪಾಲಿಸಬೇಕು ಎಂದು ಹೇಳಲು ಬರುವುದಿಲ್ಲ. ಕೆಲಸಕ್ಕೆ ಯಾರನ್ನಾದರೂ ನೇಮಿಸಿಕೊಳ್ಳುವಾಗಲೂ ಆ ಕೆಲಸಕ್ಕೆ ಬೇಕಾದ ಕೌಶಲ ಈ ಕೆಲಸಗಾರನಲ್ಲಿ ಇದೆಯೇ, ತನ್ನ ಕೆಲಸವನ್ನು ನಿಷ್ಠೆಯಿಂದ ಮಾಡುವಂಥ ಸಂಸ್ಕಾರ ಇದೆಯೇ ಇಂತಹ ಪ್ರಶ್ನೆಗಳ ಕಡೆಗೆ ನಾವು ಗಮನಕೊಡುವುದೇ ಹೊರತೂ, ಸಮಾನತೆಯ ಬಗೆಗಲ್ಲ.

ಕುಟುಂಬದ ಒಳಗೆ ಸಮಾನತೆಯ ಆದರ್ಶ ಇದೆ, ಅಥವಾ ಇರಬೇಕು, ಎಂದು ಹೇಳಬಹುದೇ? ಕುಟುಂಬದಲ್ಲಿ ಇರುವುದು ಸಮಾನತೆಯ ಸಂಬಂಧವಲ್ಲ. ಬದಲಾಗಿ ಅನಿರ್ದಿಷ್ಟವಾದ ಮತ್ತು ಅನಿಯಮಿತವಾದ ಸಂಬಂಧ. ಅನಿರ್ದಿಷ್ಟ ಎಂದರೆ ಗುತ್ತಿಗೆ ವ್ಯವಹಾರಗಳಲ್ಲಿರುವಂತೆ, ಯಾವುದೇ ನಿರ್ದಿಷ್ಟ ಉದ್ದೇಶಗಳ ಈಡೇರಿಕೆಯ ಕಾರಣಕ್ಕಾಗಿ ಇರುವ ಸಂಬಂಧವಲ್ಲ ಎಂದರ್ಥ. ಹಾಗೆಯೇ, ಅನಿಯಮಿತ ಎಂದರೆ, ಯಾವುದೇ ಒಂದು ಪ್ರಮಾಣದಲ್ಲಿ, ಅಥವಾ ಒಂದು ಕಾಲಮಾನದವರೆಗೆ, ಅಥವಾ, ಕೆಲವು ಸ್ಥಿತಿಗತಿಗಳಲ್ಲಿ ಮಾತ್ರ ಜಾರಿಗೆ ಬರುವಂಥ ಸಂಬಂಧ ಅಲ್ಲ. ಉದಾಹರಣೆಗೆ, ಒಬ್ಬ ವ್ಯಕ್ತಿ ತನ್ನ ಪೌರತ್ವವನ್ನು ಬಿಟ್ಟುಕೊಟ್ಟರೆ, ಆಗ ಆ ದೇಶದ ಸರಕಾರ ಆ ವ್ಯಕ್ತಿಗೆ ನಾಗರಿಕರಿಗೆ ಕೊಡುವಷ್ಟೇ ಸವಲತ್ತು, ಸೌಲಭ್ಯಗಳನ್ನು ಕೊಡುವುದಿಲ್ಲ. ಇಂತಹ ಯಾವ ಕರಾರುಗಳೂ ಕುಟುಂಬದ ವ್ಯವಸ್ಥೆಯ ಒಳಗೆ ಇರುವುದಿಲ್ಲ. ತಕರಾರಿದ್ದರೆ, ಜನ ತಮ್ಮ ವಿವಾಹವನ್ನು ತೊರೆದು ಹೊರನಡೆಯಬಹುದೇ ಹೊರತೂ ಅದರೊಳಗೆ ಇಂತಹ ಗುತ್ತಿಗೆಯ ರೀತಿಯ ಸಂಬಂಧಗಳು ಸಾಮಾನ್ಯವಾಗಿ ನಡೆಯುವುದಿಲ್ಲ. (ಇದರಲ್ಲಿ, ಅಸಾಮಾನ್ಯವಾದ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ).

ಒಟ್ಟಾರೆಯಾಗಿ ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಸಮಾನತೆ ಎನ್ನುವುದು ಲೋಕವ್ಯವಹಾರದಲ್ಲಿ ಇರುವ ಒಂದು ಆದರ್ಶವಲ್ಲ. ಅಂದಮೇಲೆ, ಮನುಷ್ಯರೆಲ್ಲರೂ ಸಮಾನರು, ಹಾಗಾಗಿ ಸಮಾನತೆ ಇರಬೇಕು ಎಂದು ವಾದಿಸುವುದು ಅಷ್ಟು ಸರಿಕಾಣುವುದಿಲ್ಲ. ಸಮಾನತೆಯನ್ನು ಒಂದು ಸಾರ್ವಜನಿಕ ನೀತಿಯಾಗಿ ಒಪ್ಪುವವರೂ ಕೂಡ ಸಮಾನತೆ ಎನ್ನುವುದು ಮನುಷ್ಯರ ಲಕ್ಷಣ ಎನ್ನುವ ಈ ರೀತಿಯ ವಾದವನ್ನು ಒಪ್ಪುವುದಿಲ್ಲ.

ಅಸಮಾನತೆಯ ಅಕಾರಣವಾದ ಹಂಚಿಕೆ
ಲೋಕವ್ಯವಹಾರದಲ್ಲಿ ಇಲ್ಲದ ಆದರ್ಶ ಎಂದಮೇಲೆ ಸಮಾನತೆ ಎನ್ನುವುದು ಇನ್ನು ಯಾವ ರೀತಿಯ ಆದರ್ಶ? ಸಮಾನತೆ ಒಂದು ನಿರ್ದಿಷ್ಟ ಸಾಂಸ್ಥಿಕ ವ್ಯವಸ್ಥೆಯ ಅಡಿಯಲ್ಲಿ ಮಾತ್ರ ಅರ್ಥಪೂರ್ಣವೆಂದು ಕಾಣುವ ಆದರ್ಶ. ಒಂದು ಸಾಮಾಜಿಕ ವ್ಯವಸ್ಥೆಯಲ್ಲಿ ಹಲವರಿಗೆ ಹಲವು ರೀತಿಯ ಅನುಕೂಲಗಳು ಅಕಾರಣವಾಗಿ ಬಂದಿರುತ್ತದೆ. ಇನ್ನು ಕೆಲವರಿಗೆ ಅನಾನುಕೂಲಗಳೂ ಅಕಾರಣವಾಗಿ ಬಂದಿರುತ್ತದೆ. ಒಬ್ಬನಿಗೆ ಶ್ರೀಮಂತನ ಮನೆಯಲ್ಲಿ ಹುಟ್ಟಿದ ಎಂಬ ಒಂದೇ ಕಾರಣಕ್ಕೆ ಹಲವಾರು ಅನುಕೂಲಗಳೂ, ಹಾಗೆಯೇ, ಇನ್ನೊಬ್ಬನಿಗೆ ಹುಟ್ಟುತ್ತಲೇ ಬಂದ ಅಂಗವೈಕಲ್ಯದಿಂದ ಹಲವಾರು ಅನಾನುಕೂಲಗಳೂ ಬಂದಿರುತ್ತವೆ. ಹೆಣ್ಣಾಗಿ ಹುಟ್ಟಿದರೆ ಕೆಲವು ಕಡೆ ಆಸ್ತಿ ಹಕ್ಕು ಸಮಾನವಾಗಿ ದಕ್ಕುವುದಿಲ್ಲ. ಗಂಡಾಗಿ ಹುಟ್ಟಿದರೆ, ಯುದ್ಧಭೂಮಿಯಲ್ಲಿ ಸಾಯುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗೆ ಜನರಿಗೆ ಅಕಾರಣವಾಗಿ ಅಸಮವಾದ ಶಕ್ತಿಗಳಿರುತ್ತವೆ.

ಇದರಲ್ಲಿ ಎರಡು ಅಂಶಗಳನ್ನೂ ಪ್ರತ್ಯೇಕ ಗಮನಿಸಬೇಕು. ಎಲ್ಲರಿಗೂ ಅಸಮವಾದ ಶಕ್ತಿ ಇಲ್ಲವೇ ಮಿತಿಗಳಿರುತ್ತವೆ ಎನ್ನುವುದು ಒಂದು ವಿಚಾರ. ಇನ್ನೊಂದು ವಿಚಾರ ಇವು ಅಕಾರಣವಾಗಿ ಬಂದಿರುತ್ತವೆ ಎನ್ನುವುದು. ಸಾಮಾನ್ಯವಾಗಿ ಪಾರಂಪರಿಕ ವ್ಯವಸ್ಥೆಗಳಲ್ಲಿ ಜನರಿಗಿರುವ ಶಕ್ತಿಯ ಆಧಾರದ ಮೇಲೆ, ಅಂದರೆ, ಅವರು ಸಾಮಾಜಿಕವಾಗಿ ಪಡೆದುಕೊಂಡು ಬಂದ ಅನುಕೂಲಗಳ ಆಧಾರದ ಮೇಲೆ ಸಾಮಾಜಿಕ ಸ್ಥಾನಮಾನ ನೀಡುವ ಪರಿಪಾಠವಿರುತ್ತದೆ. ಆದರೆ ಆಧುನಿಕ ಪ್ರಪಂಚದಲ್ಲಿ ಶಕ್ತಿಯನ್ನು ಗಮನಿಸುವ ಬದಲು, ಆ ಶಕ್ತಿಯು ಅಕಾರಣವಾಗಿ ಒದಗಿರುವುದರ ಬಗ್ಗೆ ಗಮನ ಹರಿಸುವುದರಿಂದ, ಇಂತಹ ಅಸಮಾನ ಶಕ್ತಿಯಿಂದ ಉಂಟಾಗುವ ಅಸಮಾನ ಪ್ರಯೋಜನಗಳನ್ನು ತಡೆಯಲು ನೀತಿಗಳನ್ನು ರೂಪಿಸಬೇಕು ಎಂಬ ಕಾಳಜಿ ಇರುತ್ತದೆ.

ಈ ಅಕಾರಣವಾದ ಹಂಚಿಕೆಯ ಬಗ್ಗೆ ಪಾರಂಪರಿಕ ಸಮಾಜ ಮತ್ತು ಆಧುನಿಕ ಸಮಾಜಗಳಲ್ಲಿ ಬೇರೆಬೇರೆ ರೀತಿಯ ವಿವರಣೆಗಳೂ ಇರುತ್ತವೆ. ಪಾರಂಪರಿಕ ಸಮಾಜದಲ್ಲಿ ಇಂತಹ ಅಕಾರಣ ಹಂಚಿಕೆಯನ್ನು ವಿವರಿಸಲು ಪೂರ್ವಜನ್ಮದ ಕರ್ಮ, ಅಥವಾ ಪುಣ್ಯ, ಅಥವಾ ಪಡೆದುಕೊಂಡು ಬಂದ ಶ್ರೇಯಸ್ಸು ಇವೇ ಮುಂತಾದ ಪರಿಕಲ್ಪನೆಗಳಿದ್ದರೆ, ಆಧುನಿಕ ಸಮಾಜದಲ್ಲಿ ಇದೇ ಅಕಾರಣ ಹಂಚಿಕೆಯನ್ನು ವಿವರಿಸಲು ಶೋಷಣೆ, ಹೆಚ್ಚುವರಿ ಮೌಲ್ಯದ ಉತ್ಪಾದನೆಯಿಂದ ಉಂಟಾಗುವ ಸಂಪತ್ತಿನ ಕ್ರೋಢೀಕರಣ, ಬಂಡವಾಳಶಾಹಿ ವ್ಯವಸ್ಥೆಯ ಆಂತರಿಕ ತರ್ಕ, ಇವೇ ಮುಂತಾದ ಪರಿಕಲ್ಪನೆಗಳಿರುತ್ತವೆ. ಇವು ಎರಡರಲ್ಲಿ ಎಷ್ಟೇ ವ್ಯತ್ಯಾಸವಿದ್ದರೂ, ಇವುಗಳ ನಡುವಿನ ಸಾಮ್ಯವನ್ನೂ ಗಮನಿಸಬೇಕು. ಈ ಎರಡೂ ವಿವರಣೆಗಳು ಇರುವುದು ಸಾಮಾಜಿಕ ಶಕ್ತಿ ಅಥವಾ ಯೋಗ್ಯತೆಯ ಅಸಮಾನ ಹಂಚಿಕೆಯನ್ನು ವಿವರಿಸಲು.

ಪಾರಂಪರಿಕ ವಿವರಣೆಗಳ ಪ್ರಕಾರ ಅಸಮಾನತೆ ಅಕಾರಣವಾದರೂ ಅದು ಪ್ರಪಂಚದ ಸತ್ಯ. ಹಾಗಾಗಿ ನಮ್ಮ ಎಲ್ಲಾ ವ್ಯವಹಾರಗಳಲ್ಲಿ ಈ ಅಸಮಾನತೆಯನ್ನು ಒಪ್ಪಿಕೊಂಡು ಅದರ ಅನುಸಾರವಾಗಿಯೇ ನಡೆಯಬೇಕು. ರಾಜನಿಗೆ ಸಲ್ಲುವ ಮರ್ಯಾದೆಯೇ ಬೇರೆ, ಜೀತದವನಿಗೆ ಸಲ್ಲುವ ಮರ್ಯಾದೆಯೇ ಬೇರೆ. ಎಲ್ಲರಿಗೂ ಅವರವರ ಮರ್ಯಾದೆ ಸಲ್ಲಬೇಕು. ಆದರೆ, ಅದು ಅಸಮಾನವಾಗಿರಬೇಕು. ಅದೇ, ಆಧುನಿಕ ವಿವರಣೆಗಳ ಪ್ರಕಾರ, ಅಸಮಾನತೆ ಪ್ರಪಂಚದ ಸತ್ಯವಾದರೂ, ಅದು ಅಕಾರಣ. ಹಾಗಾಗಿ, ನಮ್ಮ ಎಲ್ಲಾ ವ್ಯವಹಾರಗಳಿಂದ ಈ ಅಸಮಾನತೆಯನ್ನು ತೊಡೆದುಹಾಕಬೇಕು. ರಾಜ ಮತ್ತು ಜೀತದವನು ಎನ್ನುವ ವ್ಯವಸ್ಥೆಯೇ ಇಂತಹ ಅಕಾರಣ ಹಂಚಿಕೆಯನ್ನು ಸಮರ್ಥಿಸುವ ಹುನ್ನಾರ. ಹಾಗಾಗಿ, ಇಂತಹ ವ್ಯತ್ಯಾಸಗಳೆಲ್ಲಾ ತೊಲಗಬೇಕು.

ಹೆಚ್ಚಿನವರ ಪ್ರಕಾರ, ಇಂದು ಸಮಾನತೆಯನ್ನು ಪಾಲಿಸಲು ಯಾವುದೇ ಸಮರ್ಥನೆ ಬೇಡ. ಏಕೆಂದರೆ, ಸಮಾನತೆಯೇ ಸರಿ. ಅಸಮಾನತೆಯನ್ನು ಪಾಲಿಸುವುದಾದರೆ, ಅದಕ್ಕೆ ಸರಿಯಾದ ಸಮರ್ಥನೆ ಕೊಡಬೇಕು. ಏಕೆಂದರೆ, ಸಾಮಾನ್ಯವಾಗಿ ಅಸಮಾನತೆ ತಪ್ಪು. ಆದರೆ, ನಿಜಕ್ಕೂ ನೋಡಿದರೆ, ಅಸಮಾನತೆ ಅಕಾರಣವಾದರೂ ಅದು ನಮ್ಮ ಸಾಮಾಜಿಕ ಜೀವನದ ಲಕ್ಷಣ. ಅಂದಮೇಲೆ, ಅದಕ್ಕೆ ಅನುಗುಣವಾಗಿ ನಮ್ಮ ವ್ಯವಹಾರಗಳನ್ನು ರೂಪಿಸಿಕೊಳ್ಳಲು ಯಾವ ಸಮರ್ಥನೆಯೂ ಬೇಡ. ಆದರೆ, ಅಸಮಾನತೆಯು ಅಕಾರಣವೆನ್ನುವ ಕಾರಣಕ್ಕೆ ಅದು ತಪ್ಪು ಎನ್ನುವುದು ಒಂದು ನೈತಿಕ ಮೌಲ್ಯಮಾಪನ. ಅಂದಮೇಲೆ, ಅಸಮಾನತೆಯನ್ನು ಹೋಗಲಾಡಿಸಬೇಕು ಎಂದು ಹೇಳಿದರೆ, ಅಂತಹ ಮೌಲ್ಯಮಾಪನಕ್ಕೆ ಸರಿಯಾದ ವಿವರಣೆ ಮತ್ತು ಸಮರ್ಥನೆ ಬೇಕು. ಇದು ನಿಜಕ್ಕೂ ನಮ್ಮ ಇಂದಿನ ಸಾಮಾನ್ಯಜ್ಞಾನಕ್ಕೆ ವ್ಯತಿರಿಕ್ತವೆಂದು ತೋರುವ ಅಂಶ.

ಅಸಮಾನತೆ ಅಪರಾಧವೇ?
ಇಲ್ಲಿಯೇ ಒಂದು ತಕರಾರಿಗೂ ಉತ್ತರ ಹೇಳಬೇಕು. ಸಮಾಜದಲ್ಲಿ ಹಲವಾರು ಅಪರಾಧಗಳಿವೆ. ಕೊಲೆ, ದರೋಡೆ, ಅತ್ಯಾಚಾರ ಹೀಗೆ. ಇವೆಲ್ಲವೂ ಸಾಮಾಜಿಕ ಜೀವನದ ನಿಜಸ್ಥಿತಿ ಎಂದು ಹೇಳಿಕೊಂಡು ಕೊಲೆ ಮಾಡುವುದಕ್ಕೆ ಯಾವ ಸಮರ್ಥನೆಯೂ ಬೇಡ, ಬೇಕೆಂದಾಗ ಮಾಡಬಹುದು ಎಂದು ವಾದಿಸಿದಂತೆ ಇದೆಯಲ್ಲ ನನ್ನ ವಾದ ಎಂದು ನಿಮಗೆ ಅನ್ನಿಸಬಹುದು. ಆದರೆ, ಈ ರೀತಿಯ ತಕರಾರಿನಲ್ಲಿ ಒಂದು ದೋಷವಿದೆ. ಸಾಮಾನ್ಯವಾಗಿ, ನಾವು ಅಪರಾಧವನ್ನು ಗುರುತಿಸುವುದು ಮೊದಲು. ಅದಕ್ಕೆ ವಿವರಣೆ ನೀಡುವುದು ಆಮೇಲೆ. ಯಾವುದಾದರೂ ಒಂದು ಅಪರಾಧ ಹೆಚ್ಚಾಗುತ್ತಿದೆ ಎಂದಾಗ, ಮತ್ತು ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದಾಗ ಮಾತ್ರ ಇಂತಹ ವಿವರಣೆ ಅಗತ್ಯ. ಅಪರಾಧವನ್ನು ಗುರುತಿಸಲು ವಿವರಣೆಯ ಅಗತ್ಯವಿಲ್ಲ. ಯಾಕೆಂದರೆ, ಹಾಗೆ ಮಾಡುವುದರಿಂದ, ಯಾವ ಕ್ರಿಯೆಯನ್ನಾದರೂ ಅಪರಾಧವನ್ನಾಗಿ ಚಿತ್ರಿಸಬಹುದಾದ ಸಾಧ್ಯತೆ ಇರುತ್ತದೆ. ಯುದ್ಧದಲ್ಲಿ ಎದುರಾಳಿಗಳನ್ನು ಸಾಯಿಸುವುದೂ ಹತ್ಯೆಯೇ. ಹಾಗಾಗಿ, ಯುದ್ಧದಲ್ಲಿ ಆಗುವ ಎಲ್ಲಾ ಹತ್ಯೆಗಳೂ ಅಪರಾಧ ಎಂದೂ ವಾದ ಮಾಡಬಹುದು. ಆದರೆ, ಅದು ವಿಕೃತ ಪರಿಣಾಮಗಳಿಗೆ ಎಡೆ ಮಾಡಿಕೊಡುತ್ತದೆ. ನಾವು ನಿಜಜೀವನದಲ್ಲಿ ಹೀಗೆ ಹೇಳುವುದಿಲ್ಲ. ಯುದ್ಧದಲ್ಲಿ ಆಗುವ ಹತ್ಯೆಗಳು ಅಪರಾಧ ಎಂದು ನಮ್ಮ ಅನುಭವಕ್ಕೆ ಬರುವುದಿಲ್ಲ. ಹಾಗಾಗಿ, ಯುದ್ಧದ ಬಗ್ಗೆಯೇ ನಮ್ಮ ಒಲವು ನಿಲುವುಗಳು ಏನೇ ಇದ್ದರೂ, ಈ ವಿಚಾರದಲ್ಲಿ ಇನ್ನು ಮಿಕ್ಕ ಎಲ್ಲಾ ಚರ್ಚೆಗಳೂ ಯುದ್ಧರಂಗದ ಹತ್ಯೆಗಳು ಅಪರಾಧವಲ್ಲ ಎಂಬ ವಿಚಾರದಿಂದಲೇ ಹೊರಡಬೇಕು.

ಸಮಾಜದಲ್ಲಿರುವ ಅನ್ಯಾಯ, ಅನಾಚಾರಗಳನ್ನು ಟೀಕಿಸಲು ನಾವು ಸಮಾನತೆಯ ಪರಿಕಲ್ಪನೆಯನ್ನು ಬಳಸುತ್ತೇವೆ. ಹೆಂಗಸರಿಗೆ, ಬಡವರಿಗೆ ಅನ್ಯಾಯವಾದಾಗ ಸಮಾನತೆ ಇಲ್ಲ ಎಂಬ ಕೂಗು ಕೇಳಿಬರುತ್ತದೆ. ಆದರೆ, ಇದು ಸಮಾನತೆ ಎನ್ನುವ ಪರಿಕಲ್ಪನೆಯ ಬಹಳ ಜಾಳುಜಾಳಾದ ಬಳಕೆ. ಅನ್ಯಾಯ, ಅನಾಚಾರಗಳನ್ನು ಸಮಾನತೆ ಇಲ್ಲದ ಸಮಾಜಗಳೂ ಟೀಕಿಸುತ್ತವೆ ಮತ್ತು ವ್ಯವಸ್ಥಿತವಾಗಿ ಶಿಕ್ಷಿಸುತ್ತವೆ. ಅದಕ್ಕೆ ಸಮಾನತೆ ಬೇಕಿಲ್ಲ. ಅಸಮಾನತೆಯನ್ನು ಉಂಟುಮಾಡುವ ಪ್ರಕ್ರಿಯೆಗಳು ತನ್ನಷ್ಟಕ್ಕೇ ಒಂದು ಅಪರಾಧವಲ್ಲ. ಆ ಕ್ರಿಯೆಗಳ ಬಗ್ಗೆ ನಮಗೆ ಏನೇ ತಕರಾರುಗಳಿರಬಹುದು. ನಾವು ಅಂತಹ ಕ್ರಿಯೆಗಳನ್ನು ವಿರೋಧಿಸುವವರೂ ಆಗಿರಬಹುದು. ಅಷ್ಟಾದರೂ, ಅಸಮಾನತೆಯನ್ನು ಒಂದು ಸೈದ್ಧಾಂತಿಕ ಕಾರಣದಿಂದ ಟೀಕೆ ಮಾಡಬಹುದು ಎಂದಮಾತ್ರಕ್ಕೇ ಅದನ್ನು ಸ್ವಾಭಾವಿಕವಾಗಿ ಅಪರಾಧವೆಂದು ಪರಿಗಣಿಸಲು ಬರುವುದಿಲ್ಲ. ಹಾಗೆ ಮಾಡಬೇಕೆಂದರೆ, ಅಸಮಾನತೆಯ ಬಗ್ಗೆ ಇನ್ನೊಂದಷ್ಟು ಊಹೆಗಳನ್ನು ಮಾಡಬೇಕಾಗುತ್ತದೆ.

ಸಮಾನತೆಯ ಆದರ್ಶಕ್ಕೆ ಸಮರ್ಥನೆಗಳು
ಸಮಾನತೆ ಒಂದು ಸಾಂಸ್ಥಿಕ ವ್ಯವಹಾರದ ಆದರ್ಶ ಎಂದು ಹೇಳಿದೆವು. ಯಾಕಾಗಿ ಈ ಆದರ್ಶ? ಎರಡು ಸಾಧ್ಯತೆಗಳನ್ನು ಪರೀಕ್ಷಿಸೋಣ. ಮೊದಲನೆಯದು, ಸಮಾನತೆಯನ್ನು ಸಾಧಿಸುವುದರಿಂದ ಎಲ್ಲರಿಗೂ ಒಳಿತಾಗುತ್ತದೆ. ಎರಡನೆಯದು, ಸಮಾನತೆಯನ್ನು ಪಾಲಿಸುವುದರಿಂದ ಜನರಿಗೆ ತಾವು ಅಕಾರಣವಾಗಿ ಪಡೆದಿರುವ ಅನಾನುಕೂಲಗಳಿಂದ ಆಗುವ ಅನ್ಯಾಯಗಳನ್ನು ತಪ್ಪಿಸಬಹುದು. ಈಗ ಈ ಎರಡೂ ಸಾಧ್ಯತೆಗಳನ್ನು ಸ್ವಲ್ಪ ವಿವರಿಸಬೇಕು. ಸಮಾನತೆಯನ್ನು ಸಾಧಿಸುವುದು ಸಮಾನತೆಯ ನೀತಿಗಳ ಗುರಿಯಾದರೆ, ಅದು ದುರ್ಲಭವೆಂದೇ ಹೇಳಬೇಕು. ಏಕೆಂದರೆ, ಯಾವ ಸಮಾಜದಲ್ಲೂ ಸಮಾನತೆಯನ್ನು ಸಾಧಿಸುವ, ಅಂದರೆ, ಜನರೆಲ್ಲಾ ಒಂದೇ ಸ್ಥಿತಿಗೆ ಬರುವಂತೆ ಮಾಡುವ ನೀತಿ ಇರಲು ಸಾಧ್ಯವಿಲ್ಲ. ಕಮ್ಯುನಿಸ್ಟ್ ಮ್ಯಾನಿಫೆಸ್ಟೋದಂತಹ ಕೆಲವು ದಾಸ್ತಾವೇಜುಗಳನ್ನು ಹೊರತುಪಡಿಸಿ ಯಾರೂ ಕೂಡಾ ಇದನ್ನು ಒಂದು ಅರ್ಥಪೂರ್ಣ ಗುರಿ ಎಂದು ಒಪ್ಪುವುದಿಲ್ಲ. ಎಂತಹ ಸಮಾಜದಲ್ಲಾದರೂ, ಅಸಮಾನತೆಯ ತೀವ್ರತೆಯನ್ನು ಕಡಿಮೆ ಮಾಡುವ ನೀತಿಗಳಿರುತ್ತವೆಯೇ ಹೊರತೂ, ಸಂಪೂರ್ಣ ಸಮಾನತೆಯ ಆದರ್ಶ ಒಂದು ಅರ್ಥಪೂರ್ಣ ಗುರಿಯಾಗಲೂ ಸಾಧ್ಯವಿಲ್ಲ. ಹಾಗಾದರೆ, ಅಸಮಾನತೆಯ ತೀವ್ರತೆಯನ್ನು ಕಡಿಮೆ ಮಾಡುವುದು ಹೇಗೆ?

ಈಗ, ಮೇಲೆ ಹೇಳಿದ ಎರಡನೆಯ ರೀತಿಯ ಆದರ್ಶವನ್ನು ನೋಡಬಹುದು. ಜನರಿಗೆ ಅಕಾರಣವಾಗಿ ದಕ್ಕಿರುವ ಅನುಕೂಲ ಮತ್ತು ಅನಾನುಕೂಲಗಳ ಕಾರಣದಿಂದ ಉಂಟಾಗಬಹುದಾದ ಅನ್ಯಾಯವನ್ನು ಸರಿಪಡಿಸಲು ಸಮಾನತೆಯನ್ನು ಒಂದು ನೀತಿಯಾಗಿ ಬಳಸಬಹುದು. ಅಂದರೆ, ಸಮಾನತೆ ಎನ್ನುವುದು ಫಲಿತಾಂಶಗಳ ಸಮಾನತೆಯಾಗಲು ಸಾಧ್ಯವಿಲ್ಲ. ಅಷ್ಟೇ ಅಲ್ಲ. ಫಲಿತಾಂಶಗಳ ಸಮಾನತೆಯನ್ನು ಸಾಧಿಸಲು ಹೊರಡುವುದು ಅನ್ಯಾಯವೂ ಆಗುತ್ತದೆ. ಒಬ್ಬ ವ್ಯಕ್ತಿ ಬಡವ, ಅಥವಾ, ಇಂಗ್ಲಿಷ್ ಬರದವನು ಎನ್ನುವ ಕಾರಣಕ್ಕೆ ಅವನಿಗೆ ಇಂಗ್ಲಿಷ್ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿರುವ ವಿದ್ಯಾರ್ಥಿಯಷ್ಟೇ ಅಂಕಗಳನ್ನು ಕೊಡಲಾಗುವುದಿಲ್ಲ. ಎಲ್ಲರಿಗೂ ಒಂದೇ ಸಂಬಳ ಅಥವಾ ಒಂದೇ ಸಾರಿಗೆ ಇರುವುದು ಸಾಧ್ಯವಿಲ್ಲ. ಆದರೆ, ಯಾರೂ ಅಕಾರಣವಾಗಿ ಅವಕಾಶಗಳಿಂದ ವಂಚಿತರಾಗದಂತೆ ಸಮಾನತೆಯ ಮೂಲಕ ನೀತಿಗಳನ್ನು ರೂಪಿಸಬಹುದು. ಅಂದಮೇಲೆ, ಸಮಾನತೆ ಎನ್ನುವುದು ಅವಕಾಶಗಳ ಸಮಾನತೆ. ಇದನ್ನೇ ಹೀಗೂ ಹೇಳಬಹುದು. ಅವಕಾಶಗಳ ಸಮಾನತೆ ಎಂದರೆ ಯಾವ ನೀತಿನಿಯಮವೂ ಅಪ್ರಸ್ತುತ ಕಾರಣಗಳಿಗಾಗಿ ಒಬ್ಬ ವ್ಯಕ್ತಿಯ ಅವಕಾಶವನ್ನು ನಿರಾಕರಿಸಬಾರದು ಎಂದು ಹೇಳುವ ತತ್ವ. ಒಂದು ನಿರ್ದಿಷ್ಟ ಕೆಲಸಕ್ಕೆ ಒಬ್ಬ ವ್ಯಕ್ತಿಯ ಲಿಂಗ ಅಪ್ರಸ್ತುತವಾಗಿದ್ದ ಪಕ್ಷದಲ್ಲಿ, ಒಬ್ಬ ಅಭ್ಯರ್ಥಿ ಹೆಣ್ಣು ಎನ್ನುವ ಕಾರಣಕ್ಕೆ ಅವಳಿಗೆ ಕೆಲಸ ಕೊಡಬಾರದು ಎನ್ನುವ ಕಾನೂನು ಇರಬಾರದು. ಏಕೆಂದರೆ, ಆ ನಿರ್ದಿಷ್ಟ ಕೆಲಸಕ್ಕೆ ಹೆಣ್ಣಾಗಿರುವುದು ಅಥವಾ ಗಂಡಾಗಿರುವುದು ಅಪ್ರಸ್ತುತವಾದ ಅಂಶ.

ಆದರೆ ಇಲ್ಲೊಂದು ವಿಚಾರ ಗಮನಿಸಿ. ಆ ನಿರ್ದಿಷ್ಟ ಕೆಲಸಕ್ಕೆ ವ್ಯಕ್ತಿಯ ಲಿಂಗ ಪ್ರಸ್ತುತವೇ ಅಪ್ರಸ್ತುತವೇ ಎಂದು ನಿರ್ಧರಿಸುವುದು ಹೇಗೆ? ಇದು ಒಂದು ಸಂದರ್ಭನಿಷ್ಠ ಪ್ರಶ್ನೆ. ಆಯಾ ನಿರ್ದಿಷ್ಟ ಕೆಲಸಕ್ಕೆ, ಮತ್ತು ಆಯಾ ಸಂದರ್ಭಕ್ಕೆ ತಕ್ಕಂತೆ ಅದನ್ನು ವಿಚಾರ ಮಾಡಿ ನಿರ್ಧರಿಸಬೇಕು. ಸಮಾನತೆಯ ತತ್ವವನ್ನು ಬಳಸಿ ಈ ಪ್ರಶ್ನೆಗೆ ಉತ್ತರಿಸುವುದು ತಪ್ಪು. ಅಷ್ಟೆ ಏಕೆ, ಯಾವ ತತ್ವವನ್ನು ಬಳಸಿ ಈ ಪ್ರಶ್ನೆಯನ್ನು ಉತ್ತರಿಸುವುದೂ ತಪ್ಪು. ಒಂದು ಉದಾಹರಣೆ ನೋಡಿ. ಗಗನಯಾತ್ರಿಯಾಗಲು ವ್ಯಕ್ತಿಯ ಲಿಂಗ ಪ್ರಸ್ತುತವೇ? ಇದಕ್ಕೆ ಉತ್ತರ: “ಇಲ್ಲ. ಈ ಸಂದರ್ಭದಲ್ಲಿ ಲಿಂಗ ಅಪ್ರಸ್ತುತ”. ಅಂದಮೇಲೆ, ಗಗನಯಾತ್ರಿಗಳಾಗಲು ಮಹಿಳೆಯರಿಗೆ ಯಾವ ಕಟ್ಟುಪಾಡೂ ಇರದ ರೀತಿಯಲ್ಲಿ ನಮ್ಮ ನೀತಿ ನಿಯಮಗಳು ಇರಬೇಕು. ಆದರೆ, ಸೈನ್ಯದಲ್ಲಿ ನೇರ ಯುದ್ಧಭೂಮಿ ಕೆಲಸಗಳಲ್ಲಿ ವ್ಯಕ್ತಿಯ ಲಿಂಗ ಪ್ರಸ್ತುತವೇ? ಇದು ಸ್ವಲ್ಪ ಕಷ್ಟದ ಪ್ರಶ್ನೆ. ಇಲ್ಲಿ ಲಿಂಗ ಅಪ್ರಸ್ತುತ ಎನ್ನುವವರು ಇರಾಕಿನ ಕುರ್ದಿಸ್ತಾನದ ಪೆಶ್ಮರ್ಗಾ ಮಹಿಳಾ ಸೈನ್ಯದ ಉದಾಹರಣೆಯನ್ನು ಕೊಟ್ಟೋ, ಅಥವಾ ರಾಣಿ ಚೆನ್ನಮ್ಮನ ಉದಾಹರಣೆಯನ್ನು ಕೊಟ್ಟೊ ಹೀಗೆ ಯಾವುದೋ ಒಂದು ವಸ್ತುನಿಷ್ಠ ಅಂಶದ ಮೂಲಕ ತಮ್ಮ ವಾದವನ್ನು ಸಮರ್ಥಿಸಬಹುದೇ ವಿನಾ, ಸಮಾನತೆಯ ತತ್ವದ ಆಧಾರದ ಮೇಲಲ್ಲ.

ನಾವು ಸಮಾನತೆಯ ಹೆಸರಿನಲ್ಲಿ ಮಾಡುವ ವಾದಗಳನ್ನು ಗಮನಿಸಿ. ಉದಾಹರಣೆಗೆ ಮೀಸಲಾತಿ. ಮೀಸಲಾತಿ ಇರಬೇಕೋ ಬೇಡವೋ ಎನ್ನುವ ವಾದ ನಮಗೆ ಇಲ್ಲಿ ಅಪ್ರಸ್ತುತ. ಮೀಸಲಾತಿಯನ್ನು ಸಮಾನತೆಯ ಆಧಾರದ ಮೇಲೆ ಮಾಡಲಾಗದು ಎನ್ನುವುದಷ್ಟೇ ಇಲ್ಲಿ ಪ್ರಸ್ತುತ. ಏಕೆಂದರೆ, ಸಮಾನತೆಯನ್ನು ತರುವ ಕಾರಣಕ್ಕಾಗಿ ಮೀಸಲಾತಿ ಎಂದರೆ, ಅದು ಫಲಿತಾಂಶಗಳ ಮೀಸಲಾತಿಯಾಗಿಬಿಡುತ್ತದೆ. ಅದು ಹಲವಾರು ಅನ್ಯಾಯಗಳಿಗೆ ಎಡೆಮಾಡಿಕೊಡುತ್ತದೆ. ಮೀಸಲಾತಿಯನ್ನು ವಿರೋಧಿಸುವ ಹೆಚ್ಚಿನವರು ಅದನ್ನು ಫಲಿತಾಂಶಗಳ ಸಮಾನತೆಯ ಯೋಜನೆ ಎಂದು ತಿಳಿದುಕೊಂಡೇ ವಿರೋಧಿಸುತ್ತಿರುತ್ತಾರೆ. ಅದು ನಿಜಕ್ಕೂ ಸಮಾನ ಫಲಿತಾಂಶಗಳ ಈಡೇರಿಕೆಗೆ ಇರುವುದಲ್ಲ. ಅದು ಇರುವುದು ಸಮಾನ ಪ್ರಾತಿನಿಧ್ಯವನ್ನು ನೀಡಲು. ಮೀಸಲಾತಿ ಇರುವುದು ದಲಿತರನ್ನೆಲ್ಲ ಉದ್ಧಾರ ಮಾಡಲಲ್ಲ. ದಲಿತರ ಉದ್ಧಾರ ಸಾಧ್ಯವಾಗುವುದು ಸರಿಯಾದ ರೀತಿಯ ಸಾಮಾಜಿಕ ಅಭಿವೃದ್ಧಿಯಿಂದಲೇ ಹೊರತೂ ಬರಿಯ ಮೀಸಲಾತಿಯಿಂದಲ್ಲ. ಮೀಸಲಾತಿ ಇರುವುದು ಸಾರ್ವಜನಿಕ ಜೀವನದಲ್ಲಿ ದಲಿತರ ಪ್ರಾತಿನಿಧ್ಯವನ್ನು ಹೆಚ್ಚಿಸುವುದರಿಂದ ಅವರ ಅಭಿವೃದ್ಧಿಯಲ್ಲಿ ಅವರ ಧ್ವನಿಯೂ ಇರುವಂತೆ ನೋಡಿಕೊಳ್ಳಲು. ಅಂದರೆ ಮೀಸಲಾತಿಗೆ ಆಧಾರ ಪ್ರಜಾತಾಂತ್ರಿಕ ತತ್ವವೇ ಹೊರತೂ, ಸಮಾನತೆಯ ತತ್ವವಲ್ಲ.

ಸಮಾನತೆ ಮತ್ತು ಪ್ರಜಾಪ್ರಭುತ್ವ
ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು ಎನ್ನುವ ಮಾತನ್ನು ಕೇಳಿರುತ್ತೇವೆ. ಐತಿಹಾಸಿಕವಾಗಿ ಇದು ನಿಜವಲ್ಲದಿದ್ದರೂ, ನಮ್ಮ ಪ್ರಜಾಪ್ರಭುತ್ವದ ಮಟ್ಟಿಗಂತೂ ಇದು ನಿಜವೇ. ಐತಿಹಾಸಿಕವಾಗಿ ಇದು ಯಾಕೆ ನಿಜವಲ್ಲ ಎಂದರೆ ಪ್ರಾಚೀನ ಪ್ರಜಾಪ್ರಭುತ್ವಗಳಲ್ಲಿ ಎಲ್ಲರೂ ಪ್ರಜೆಗಳಲ್ಲ. ಕೆಲವರು ಮಾತ್ರ ಪ್ರಜೆಗಳು. ಮಕ್ಕಳು, ಮಹಿಳೆಯರು ಮತ್ತು ಜೀತದಾಳುಗಳು ಪ್ರಜೆಗಳಲ್ಲ. ಆದರೆ, ನಮ್ಮ ಸಂದರ್ಭದ ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು ಎಂದರೆ ಅರ್ಥ ಕಾನೂನು ಮಾಡುವ ವಿಚಾರದಲ್ಲಿ ಪ್ರತಿಯೊಬ್ಬ ಪ್ರಜೆಗೂ ಸಮಾನವಾದ ಅಧಿಕಾರವಿದೆ ಎಂದು. ಪ್ರತಿಯೊಬ್ಬನಿಗೂ ಒಂದು ಮತದ ಪ್ರಮಾಣದಷ್ಟು ಮತ್ತು ಅಷ್ಟು ಮಾತ್ರವೇ ಅಧಿಕಾರವಿರುವುದು. ಸಮಾನತೆ ಎನ್ನವುದು ಇಲ್ಲಿಯೂ ಕಾನೂನು ಮಾಡುವಲ್ಲಿ ಇರುವ ಅಧಿಕಾರದ ಪ್ರಮಾಣವೇ ಹೊರತೂ, ದೈನಂದಿನ ಜೀವನದಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವೆ ಇರುವ ಸಂಬಂಧಗಳ ಚಿತ್ರಣವಲ್ಲ. ನಮ್ಮ ಸಾಮಾಜಿಕ ಜೀವನದಲ್ಲಿ ಹಲವು ಭೇದಗಳಿರುತ್ತವೆ. ನಮ್ಮ ಮಠದ ಸ್ವಾಮಿಗಳನ್ನು ನಮಗೆ ಸಮಾನರು ಎನ್ನುವಂತೆ ಕಾಣುವುದು ಅನೌಚಿತ್ಯ. ಹಾಗೆಯೇ, ಇದು ಪ್ರಜಾಪ್ರಭುತ್ವ ಎನ್ನುವ ಕಾರಣಕ್ಕೆ ನಮ್ಮ ಹಿರಿಯರು, ಗೌರವಾನ್ವಿತರು ಇವರಿಗೆಲ್ಲಾ ನಾವು ಸಮಾನರು ಎಂದು ಹೇಳುವುದು ಅಪ್ರಬುದ್ಧತೆ. ಅಂದರೆ, ಹಾಗೆ ಮಾಡಿದರೆ ಕಾನೂನು ರೀತಿ ತಪ್ಪು ಎಂದಲ್ಲ. ಆದರೆ ಅದು ನಮ್ಮ ಸಮಾಜದ ರೀತಿರಿವಾಜುಗಳ ಪ್ರಕಾರ ಅನೌಚಿತ್ಯ ಎಂದಷ್ಟೇ. ಪ್ರಜಾತಾಂತ್ರಿಕ ಸಮಾನತೆಯ ಅರ್ಥ, ನಮ್ಮ ಸಾಮಾಜಿಕ ಅಸಮಾನತೆಗಳ ಹೊರತಾಗಿಯೂ, ಮತ್ತು ಅವುಗಳ ಕಾರಣದಿಂದಲೇ, ಕಾನೂನುಗಳನ್ನು ಮಾಡುವ ವಿಚಾರಕ್ಕೆ ಬಂದಾಗ ನಮ್ಮ ಜಾತಿಯ ಸ್ವಾಮಿಗಳ ವೋಟಿಗಾಗಲೀ, ನಮ್ಮ ವೋಟಿಗಾಗಲೀ ಸಮಪ್ರಮಾಣದ ಮೌಲ್ಯವಿದೆ ಎಂದಷ್ಟೆ.              

ಒಂದು ನ್ಯಾಯಯುತವಾದ ವ್ಯವಸ್ಥೆ ಅತಾರ್ಕಿಕವಾದ ಅಸಮಾನತೆಗಳನ್ನು ನಿವಾರಣೆ ಮಾಡುವ ನೀತಿಗಳನ್ನು ಪಾಲಿಸುತ್ತದೆಯೇ  ಹೊರತೂ, ಸಮಾನತೆಯನ್ನು ಅನುಷ್ಠಾನ ಮಾಡುವ ನೀತಿಗಳನ್ನಲ್ಲ. ಸಮಾನತೆಯ ಕುರಿತ ಇತ್ತೀಚಿನ ಚರ್ಚೆಗಳು ಎಷ್ಟು ಗೋಜಲಾಗಿದೆ ಎಂದರೆ, ಇವೆರಡರ ನಡುವಿನ ವ್ಯತ್ಯಾಸವೂ ನಮಗೆ ಸುಲಭವಾಗಿ ಕಾಣಿಸುವ ಸ್ಥಿತಿಯಲ್ಲಿಲ್ಲ. ಸಮಾನತೆಯನ್ನು ಕುರಿತ ನಮ್ಮ ಮಾತು ಅರ್ಥಪೂರ್ಣವಾಗಿ ಇರಬೇಕು ಎಂದಾದರೆ, ಅದಕ್ಕೆ ಇಷ್ಟು ಕಟ್ಟುಪಾಡುಗಳು ಅನ್ವಯಿಸುತ್ತವೆ. ಹೀಗಲ್ಲದೇ ಹೋದರೆ, ಸಮಾನತೆ ಎನ್ನುವ ಪದವನ್ನು ಬಳಸುತ್ತಿರುತ್ತೇವೆಯೇ ವಿನಾ ಆ ಪರಿಕಲ್ಪನೆಯನ್ನು ವಿಕೃತಗೊಳಿಸಿರುತ್ತೇವೆ. ಅನರ್ಥದ ಪರಿಕಲ್ಪನೆ ಅನರ್ಥಕ್ಕೆ ದಾರಿ ಮಾಡಿಕೊಡುತ್ತದೆ.

Comments

Popular posts from this blog

ಸ್ಟ್ರಕ್ಚರಲಿಸಂ (ರಚನಾವಾದ/ರಾಚನಿಕವಾದ)

ಮಾರ್ಕ್ಸ್‌‌‌ ವಾದ

ತಾಯ್ನುಡಿಯ ತತ್ವಜ್ಞಾನ