Posts

Showing posts from July, 2022

ಪ್ರಾಯೋಗಿಕ ಚಿಂತನೆಯಲ್ಲಿ ಆಚಾರಕೇಂದ್ರಿತ ಮತ್ತು ಭೋಗ್ಯಕೇಂದ್ರಿತ ಮಾದರಿಗಳ ಕುರಿತು

-೧- ಬದುಕಿನ ಕುರಿತು, ಬದುಕುವ ಕುರಿತು, ಸಮಾಜದ ಕುರಿತು, ರಾಜಕೀಯದ ಕುರಿತು, ಸರಿ ತಪ್ಪುಗಳ ಕುರಿತು, ಈ ಎಲ್ಲಾ ರೀತಿಯ ಪ್ರಶ್ನೆಗಳ ಕುರಿತೂ ಮಾಡುವ ಚಿಂತನೆಯನ್ನು ಪ್ರಾಯೋಗಿಕ ಚಿಂತನೆ ಎನ್ನುವ ಹೆಸರಿನಿಂದ ಕರೆಯೋಣ. ಈ ಲೇಖನದಲ್ಲಿ ಪ್ರಾಯೋಗಿಕ ಚಿಂತನೆಯಲ್ಲಿರಬಹುದಾದ ಎರಡು ವಿಧಗಳನ್ನು ಪರಿಚಯಿಸುವುದು ನನ್ನ ಉದ್ದೇಶ. ಅದರ ಹಿಂದಿರುವ ನನ್ನ ಗ್ರಹಿಕೆಯನ್ನು ಹೀಗೆ ರೂಪಿಸಿಕೊಳ್ಳಬಹುದು - ಐತಿಹಾಸಿಕವಾಗಿ, ಅದರಲ್ಲೂ ವಿಶೇಷವಾಗಿ ಆಧುನಿಕ ಜಗತ್ತಿನಲ್ಲಿ, ಪ್ರಾಯೋಗಿಕ ಚಿಂತನೆಯೊಳಗೇ ಎರಡು, ವಿರುದ್ಧವಲ್ಲದಿದ್ದರೂ ಸಮನ್ವಯವಿಲ್ಲದ, ಚಿಂತನಾ ಧಾರೆಗಳಿವೆ. ಒಂದು ಆಚಾರಕೇಂದ್ರಿತವಾದದ್ದು. ಇನ್ನೊಂದು ಭೋಗ್ಯಕೇಂದ್ರಿತವಾದದ್ದು. ಇದನ್ನು ನಾನು ಇಂಗ್ಲಿಷಿನಲ್ಲಿ ಕ್ರಮವಾಗಿ practice model ಮತ್ತು deserts model ಎಂದು ಅನುವಾದಿಸುತ್ತೇನೆ. ಸ್ಥೂಲವಾಗಿ, ಆಚಾರಕೇಂದ್ರಿತ ಚಿಂತನೆ ಒಂದು ಕಾರ್ಯಕ್ಷೇತ್ರವನ್ನು ಮಾಡಬೇಕಾದ ಕ್ರಿಯಾಕರ್ಮಗಳು ಮತ್ತು ಪಾಲಿಸಬೇಕಾದ ನೇಮಗಳು ಎನ್ನುವ ದೃಷ್ಟಿಕೋನದಿಂದ ನೋಡುತ್ತದೆ. ಅದೇ, ಭೋಗ್ಯಕೇಂದ್ರಿತ ಚಿಂತನೆ ಅದೇ ಕಾರ್ಯಕ್ಷೇತ್ರವನ್ನು ಅದರಿಂದ ಹುಟ್ಟುವ ಫಲಗಳನ್ನು ಮತ್ತು ಅದರಿಂದ ಉಂಟಾಗುವ ಪರಿಣಾಮಗಳನ್ನು ಯಾವ ರೀತಿಯಲ್ಲಿ ಹಂಚಬೇಕು ಎನ್ನುವ ದೃಷ್ಟಿಕೋನದಿಂದ ಹೊರಡುತ್ತದೆ. ಯಾರು ಯಾವ ಫಲಗಳಿಗೆ ಎಷ್ಟರ ಮಟ್ಟಿಗೆ ಮತ್ತು ಯಾಕೆ ಭಾಜನರು ಎನ್ನುವುದು ಇಲ್ಲಿಯ ಕಾಳಜಿ. ಇಲ್ಲಿ ಕೇವಲ ಇಷ್ಟವಾದ ಫಲಗಳ ಕುರಿತು ಮಾತ್ರವಲ್ಲ,