ಪ್ರಾಯೋಗಿಕ ಚಿಂತನೆಯಲ್ಲಿ ಆಚಾರಕೇಂದ್ರಿತ ಮತ್ತು ಭೋಗ್ಯಕೇಂದ್ರಿತ ಮಾದರಿಗಳ ಕುರಿತು

-೧-

ಬದುಕಿನ ಕುರಿತು, ಬದುಕುವ ಕುರಿತು, ಸಮಾಜದ ಕುರಿತು, ರಾಜಕೀಯದ ಕುರಿತು, ಸರಿ ತಪ್ಪುಗಳ ಕುರಿತು, ಈ ಎಲ್ಲಾ ರೀತಿಯ ಪ್ರಶ್ನೆಗಳ ಕುರಿತೂ ಮಾಡುವ ಚಿಂತನೆಯನ್ನು ಪ್ರಾಯೋಗಿಕ ಚಿಂತನೆ ಎನ್ನುವ ಹೆಸರಿನಿಂದ ಕರೆಯೋಣ. ಈ ಲೇಖನದಲ್ಲಿ ಪ್ರಾಯೋಗಿಕ ಚಿಂತನೆಯಲ್ಲಿರಬಹುದಾದ ಎರಡು ವಿಧಗಳನ್ನು ಪರಿಚಯಿಸುವುದು ನನ್ನ ಉದ್ದೇಶ. ಅದರ ಹಿಂದಿರುವ ನನ್ನ ಗ್ರಹಿಕೆಯನ್ನು ಹೀಗೆ ರೂಪಿಸಿಕೊಳ್ಳಬಹುದು - ಐತಿಹಾಸಿಕವಾಗಿ, ಅದರಲ್ಲೂ ವಿಶೇಷವಾಗಿ ಆಧುನಿಕ ಜಗತ್ತಿನಲ್ಲಿ, ಪ್ರಾಯೋಗಿಕ ಚಿಂತನೆಯೊಳಗೇ ಎರಡು, ವಿರುದ್ಧವಲ್ಲದಿದ್ದರೂ ಸಮನ್ವಯವಿಲ್ಲದ, ಚಿಂತನಾ ಧಾರೆಗಳಿವೆ. ಒಂದು ಆಚಾರಕೇಂದ್ರಿತವಾದದ್ದು. ಇನ್ನೊಂದು ಭೋಗ್ಯಕೇಂದ್ರಿತವಾದದ್ದು. ಇದನ್ನು ನಾನು ಇಂಗ್ಲಿಷಿನಲ್ಲಿ ಕ್ರಮವಾಗಿ practice model ಮತ್ತು deserts model ಎಂದು ಅನುವಾದಿಸುತ್ತೇನೆ. ಸ್ಥೂಲವಾಗಿ, ಆಚಾರಕೇಂದ್ರಿತ ಚಿಂತನೆ ಒಂದು ಕಾರ್ಯಕ್ಷೇತ್ರವನ್ನು ಮಾಡಬೇಕಾದ ಕ್ರಿಯಾಕರ್ಮಗಳು ಮತ್ತು ಪಾಲಿಸಬೇಕಾದ ನೇಮಗಳು ಎನ್ನುವ ದೃಷ್ಟಿಕೋನದಿಂದ ನೋಡುತ್ತದೆ. ಅದೇ, ಭೋಗ್ಯಕೇಂದ್ರಿತ ಚಿಂತನೆ ಅದೇ ಕಾರ್ಯಕ್ಷೇತ್ರವನ್ನು ಅದರಿಂದ ಹುಟ್ಟುವ ಫಲಗಳನ್ನು ಮತ್ತು ಅದರಿಂದ ಉಂಟಾಗುವ ಪರಿಣಾಮಗಳನ್ನು ಯಾವ ರೀತಿಯಲ್ಲಿ ಹಂಚಬೇಕು ಎನ್ನುವ ದೃಷ್ಟಿಕೋನದಿಂದ ಹೊರಡುತ್ತದೆ. ಯಾರು ಯಾವ ಫಲಗಳಿಗೆ ಎಷ್ಟರ ಮಟ್ಟಿಗೆ ಮತ್ತು ಯಾಕೆ ಭಾಜನರು ಎನ್ನುವುದು ಇಲ್ಲಿಯ ಕಾಳಜಿ. ಇಲ್ಲಿ ಕೇವಲ ಇಷ್ಟವಾದ ಫಲಗಳ ಕುರಿತು ಮಾತ್ರವಲ್ಲ, ಅನಿಷ್ಟವಾದ ಫಲಗಳ ಕುರಿತೂ ಗಮನ ಇದೆ. ಅಂದರೆ, ನೌಕರಿಯನ್ನು ಹೇಗೆ ಹಂಚಬೇಕು ಎನ್ನುವುದಷ್ಟೇ ಅಲ್ಲ, ಪರಿಸರ ಮಾಲಿನ್ಯದಿಂದ ಉಂಟಾಗುವ ಹಾನಿಗಳ ಬಗೆಗಿನ ಜವಾಬ್ದಾರಿಗಳನ್ನು ಯಾರ ಮೇಲೆ ಎಷ್ಟೆಷ್ಟು ಹೇರಬೇಕು ಎನ್ನುವಂಥ ಪ್ರಶ್ನೆಯೂ ಭೋಗ್ಯಕೇಂದ್ರಿತ ಚಿಂತನೆಗೆ ಪ್ರಸ್ತುತವಾದದ್ದೆ. 

ಒಂದೇ ಪ್ರಾಯೋಗಿಕ ಸಮಸ್ಯೆಯನ್ನು ಕುರಿತು ಈ ಎರಡೂ ದೃಷ್ಟಿಕೋನಗಳಿಂದ ನೋಡಿದಾಗ ಬೇರೆಬೇರೆಯೇ ಫಲಿತಾಂಶಗಳು ಮೂಡುತ್ತವೆ. ಅಷ್ಟೇ ಅಲ್ಲ, ಇವುಗಳ ನಡುವೆ ಎಷ್ಟೋ ಬಾರಿ ಸಂಘರ್ಷದ ಸ್ಥಿತಿಯೂ ಉಂಟಾಗುತ್ತದೆ. ಪ್ರತೀ ನಿರ್ದಿಷ್ಟ ಸಂದರ್ಭದಲ್ಲೂ ಇದರಲ್ಲಿ ಯಾವುದೋ ಒಂದು ಫಲಿತಾಂಶ ನೈತಿಕವಾಗಿ ಉತ್ತಮವೆಂದು, ಮತ್ತೊಂದು ನೈತಿಕವಾಗಿ ಅಧಮವೆಂದು ನಮಗೆ ಅನ್ನಿಸುತ್ತದೆ. ಆದರೆ, ಒಂದು ಸಾಮಾನ್ಯ ಮಟ್ಟದಲ್ಲಿ ನೋಡುವುದಾದರೆ, ಈ ಎರಡೂ ದೃಷ್ಟಿಕೋನಗಳು ಸಿಂಧುವೆಂದೇ ಕಾಣುತ್ತದೆ. ಇದರ ಪರಿಣಾಮವೆಂದರೆ, ಸಾಮಾನ್ಯ ಮಟ್ಟದಲ್ಲಿ ಎರಡು ಸಿಂಧುವಾದ ಮಾರ್ಗಗಳಾಗಿದ್ದರೂ, ಸಾಂದರ್ಭಿಕವಾಗಿ ಎರಡರಲ್ಲಿ ಒಂದು ಅಸಿಂಧುವೆಂದು ಗೋಚರಿಸುವ ಕಾರಣದಿಂದ ಇವೆರಡರ ನಡುವೆ ನಮ್ಮ ಚಿಂತನೆಯ ಜಾಡು ದಾರಿ ತಪ್ಪುತ್ತದೆ. ಇಂತಹ ಬಿಕ್ಕಟ್ಟು ಎದುರಾದಾಗ, ಈ ಎರಡರಲ್ಲಿ ಯಾವುದು ಹೆಚ್ಚು ಸಾಮಾನ್ಯವಾದ ಪಕ್ಷವೋ ಅದನ್ನು ಒಪ್ಪಬೇಕು, ಅಥವಾ, ಯಾವುದು ನಮ್ಮ ನೈತಿಕ ಪರಿಕಲ್ಪನೆಗಳಿಗೆ ಹೆಚ್ಚು ಸಮೀಪವಾಗಿದೆಯೋ ಅದನ್ನು ಒಪ್ಪಬೇಕು ಎಂದೆಲ್ಲಾ ಹೇಳಲು ಬರುವುದಿಲ್ಲ. ಯಾಕೆಂದರೆ, ಈ ಎರಡು ಕ್ರಮಗಳ ನಡುವಿನ ಭಿನ್ನತೆ ಒಂದು ಒಪ್ಪಿತ ವಸ್ತುಪ್ರಪಂಚದ ಕುರಿತ ಭಿನ್ನಭಿನ್ನವಾದ ಮೌಲ್ಯಮಾಪನಗಳನ್ನು ಮಾಡುವುದು ಎಂದಷ್ಟೇ ಅಲ್ಲ. ಅದು ಇನ್ನೂ ಆಳವಾದದ್ದು. ಈ ಎರಡೂ ಕ್ರಮಗಳು ವಸ್ತು ಪ್ರಪಂಚವನ್ನು, ಕಾರ್ಯಕಾರಣ ವಿವರಣೆಗಳನ್ನೂ ಸೇರಿ, ಚಿತ್ರಿಸುವ ರೀತಿಯೇ ಬೇರೆಬೇರೆ. ಅಂದರೆ, ನಮ್ಮ ಪ್ರಾಯೋಗಿಕ ಚಿಂತನೆಯ ಮಟ್ಟಿಗೆ ಹೇಳುವುದಾದರೆ, ನಾವು ವಾಸ್ತವಿಕ ಪ್ರಪಂಚವೆಂದು ಏನನ್ನು ಕರೆಯುತ್ತೇವೆಯೋ ಅದು ಈ ಎರಡರಲ್ಲಿ ಯಾವುದೋ ಒಂದು ಕ್ರಮದಿಂದ ರೂಪಿತವಾದದ್ದೇ ಹೊರತು, ಈ ಎರಡೂ ಕ್ರಮಗಳಿಗೆ ಹೊರತಾಗಿ, ಅದಕ್ಕೆ ಪೂರ್ವದಲ್ಲೇ ಇರುವಂಥದ್ದಲ್ಲ. ಇದೇನೂ ಪೋಸ್ಟ್ ಮಾಡರ್ನ್ ಎಂದು ಕರೆಸಿಕೊಳ್ಳುವ ಚಿಂತನಾ ಧಾರೆಯಲ್ಲಿ ಫ್ಯಾಶನ್ ಆಗಿರುವ ವಾಸ್ತವಿಕತೆಯ ಕುರಿತೇ ಆದ ಒಂದು ಮೂಲಭೂತ ಸಂಶಯದ ರೀತಿಯ ಮಾತಲ್ಲ. ಬದಲಾಗಿ, ಎರಡು ಭಿನ್ನ ಚೌಕಟ್ಟುಗಳು ನಮ್ಮ ಚಿಂತನೆಯನ್ನು ನಿಯಮಿಸುವ, constrain ಮಾಡುವ ರೀತಿಗೆ ಉದಾಹರಣೆಯಷ್ಟೇ. ವಸ್ತುಗಳು ಮತ್ತು ಸಂಗತಿಗಳ ಕುರಿತ ಸಮಾನ ಗ್ರಹಿಕೆಯಿಂದ ಶುರುಮಾಡಿಕೊಂಡರೂ, ವಾಸ್ತವದ ಕುರಿತ ಬೇರೆಬೇರೆಯೇ ಆದ ಮತ್ತು ತಂತಮ್ಮಲ್ಲೇ ಸಿಂಧುವಾದ ಚಿತ್ರಣಗಳಿರುವುದು ಸಾಧ್ಯ. ಮತ್ತು ಆ ಬೇರೆಬೇರೆ ಚಿತ್ರಣಗಳ ನಡುವೆ ಪರಸ್ಪರ ಸಮನ್ವಯ ಇಲ್ಲದೇ ಇರುವುದಕ್ಕೂ ಸಾಧ್ಯ. ಕಲ್ಲು-ಮಣ್ಣು, ಹೂವು-ಹಣ್ಣುಗಳ ನೆಲೆಯಲ್ಲಿ ಸಮಾನ ವಸ್ತು ಪ್ರಪಂಚವೊಂದನ್ನು ಗುರುತಿಸಿಯೂ, ಕ್ವಾಂಟಮ್ ಮತ್ತು ಸಾಪೇಕ್ಷತಾ ಸಿದ್ಧಾಂತಗಳು ಅದೇ ವಾಸ್ತವದ ಕುರಿತಾದ ಬೇರೆ ಬೇರೆಯದೇ ಆದ, ಮತ್ತು ಪರಸ್ಪರ ಸಮನ್ವಯವಿಲ್ಲದ ವಿವರಣೆಗಳು ಎನ್ನುವ ಉದಾಹರಣೆಯನ್ನು ನೋಡಿದರೆ, ಇಂತಹ ಸಾಧ್ಯತೆ ತೀರಾ ಅಸಂಗತವೇನೂ ಅಲ್ಲ ಎಂದು ತಿಳಿಯಬಹುದು.  

-೨-

ಈ ಲೇಖನ ಒಂದು ಸ್ಥೂಲ ಮೂಲಮಾದರಿಯನ್ನು ಕಟ್ಟುವ ಕೆಲಸ ಮಾಡುತ್ತಿರುವುದರಿಂದ ಇಲ್ಲಿ ಉದಾಹರಣೆಗಳನ್ನು ವಿವರವಾಗಿ ಚರ್ಚಿಸುವುದಿಲ್ಲ. ಅದು ಒಂದು ಮಿತಿಯೇ ಆದರೂ ಸದ್ಯಕ್ಕೆ ಅದನ್ನು ಒಪ್ಪಿಕೊಂಡೇ ಮುಂದೆ ಸಾಗಬೇಕು. ಒಂದು ಶಾಲೆಯನ್ನು ಕಟ್ಟುವ ಕೆಲಸ ನಮ್ಮ ಮುಂದಿದೆ ಎಂದುಕೊಳ್ಳಿ. ಈ ಕೆಲಸವನ್ನು ಮಾಡುವುದಕ್ಕೆ ಹಲವು ರೀತಿಯ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗುತ್ತದೆ. ಹಣವನ್ನು ತರುವುದು ಎಲ್ಲಿಂದ? ವಿದ್ಯಾರ್ಥಿಗಳನ್ನು ಸೆಳೆಯುವುದು ಹೇಗೆ? ಭೂಮಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಹೇಗೆ ಇತ್ಯಾದಿ. ಆದರೆ, ಈ ಪ್ರಶ್ನೆಗಳೂ ಸೇರಿದಂತೆ ಮಿಕ್ಕೆಲ್ಲಾ ಪ್ರಶ್ನೆಗಳೂ ಸುಮಾರಾಗಿ ಎರಡು ರೀತಿಯ ಪ್ರಶ್ನೆಗಳಾಗಿ ವಿಭಾಗವಾಗುತ್ತವೆ. ಒಂದು ರೀತಿಯ ಪ್ರಶ್ನೆ ಆಚಾರಕೇಂದ್ರಿತವಾದದ್ದು. ಇನ್ನೊಂದು ಭೋಗ್ಯಕೇಂದ್ರಿತವಾದದ್ದು. ಆಚಾರಕೇಂದ್ರಿತ ಪ್ರಶ್ನೆಗಳು ಸುಮಾರು ಈ ರೀತಿಯಿರುತ್ತವೆ. ಯಾರಿಂದ ಹಣವನ್ನು ತರುವುದು? ಯಾರಿಂದ ತರಬಾರದು? ಇವರಿಂದ ಧನಸಹಾಯ ಪಡೆದರೆ ಮುಂದಾಗುವ ತೊಂದರೆಯೇನು? ಅಥವಾ ಅವರಿಂದ ಧನಸಹಾಯ ಪಡೆದರೆ ಮುಂದಾಗುವ ಉಪಯೋಗವೇನು? ಒಳ್ಳೆಯ ಉಪಾಧ್ಯಾಯರನ್ನು ನೇಮಿಸುವುದಕ್ಕೆ ನಮ್ಮ ರೀತಿಯ ಸಂಸ್ಕಾರಗಳಲ್ಲೇ ಬೆಳೆದು ಬಂದಂಥವರನ್ನು ಹುಡುಕಬೇಕೋ ಅಥವಾ ಆದಷ್ಟೂ ಬೇರೆಬೇರೆ ರೀತಿಯ ಸಂಸ್ಕಾರಗಳ ಹಿನ್ನೆಲೆಯಿಂದ ಬಂದವರನ್ನು ಹುಡುಕಬೇಕೋ? ಯಾವುದೋ ಒಂದು ನಿರ್ದಿಷ್ಟ ಜ್ಞಾನವನ್ನು ಕಲಿಸುವುದರಿಂದ ನಮ್ಮ ವಿದ್ಯಾರ್ಥಿಗಳಿಗೆ ಉಪಯೋಗವೋ, ಅಥವಾ ಅದು ಇಲ್ಲಿಯ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಸ್ತುತವಲ್ಲವೋ? ಹುಡುಗರು ಹುಡುಗಿಯರೂ ಇಬ್ಬರಿಗೂ ಶಾಲೆ ಇರಬೇಕೋ? ಅಥವಾ ಇಬ್ಬರಲ್ಲಿ ಒಬ್ಬರಿಗೋ? ಅಥವಾ ಇಬ್ಬರಿಗೂ ಪ್ರತ್ಯೇಕವಾಗಿಯೋ? ಇವೆಲ್ಲಾ ಒಂದು ರೀತಿಯ ಪ್ರಶ್ನೆಗಳು. ಈ ಪ್ರಶ್ನೆಗಳ ಕೆಲವು ಲಕ್ಷಣಗಳ ಕುರಿತು ಈ ನಂತರ ವಿವರಿಸುತ್ತೇನೆ. 

ಇದಕ್ಕೆ ವ್ಯತಿರಿಕ್ತವಾಗಿ ಭೋಗ್ಯಕೇಂದ್ರಿತವಾದ ಪ್ರಶ್ನೆಗಳು ಸುಮಾರು ಈ ರೀತಿ ಇರುತ್ತವೆ. ಈ ಶಾಲೆಯಲ್ಲಿ ನಾವು ಶಿಕ್ಷಣವನ್ನು ಒಂದು ಹಕ್ಕಾಗಿ ಪರಿಗಣಿಸಬೇಕೆ? ಅಥವಾ ಪರಿಗಣಿಸಬಾರದೇ? ಇಲ್ಲಿ ಎಲ್ಲರಿಗೂ ಸಮಾನ ಅವಕಾಶ ಕೊಡುವ ಕುರಿತು ನಿಯಮಗಳನ್ನು ರಚಿಸಬೇಕೆ ಅಥವಾ ಬೇಡವೇ? ನಮ್ಮ ಶಾಲೆಯಲ್ಲಿ ನೇಮಕಾತಿಗಳನ್ನು-ನೋಂದಣಿಗಳನ್ನು ಮಾಡುವಾಗ ಸಾಮಾಜಿಕ ನ್ಯಾಯದ ಪರಿಕಲ್ಪನೆಗಳನ್ನು ಪಾಲಿಸಬೇಕೇ ಬೇಡವೇ? ಸ್ತ್ರೀ ಮತ್ತು ಪುರುಷ ಸಿಬ್ಬಂದಿಯ ನಡುವೆ ಸಮಾನ ಅನುಪಾತ ಇರಬೇಕೆ? ಹಾಗೆಯೇ ಸ್ತ್ರೀಯರೂ, ಎಲ್ಲಾ ಜಾತಿ-ವರ್ಗಗಳವರೂ ಕಡ್ಡಾಯವಾಗಿ ಆಡಳಿತದಲ್ಲಿ ಪ್ರಾತಿನಿಧ್ಯ ಹೊಂದಿರಬೇಕೆ? ಮುಂತಾದುವು ಈ ಕ್ರಮದಲ್ಲಿ ಕೇಳಬಹುದಾದ ಪ್ರಶ್ನೆಗಳು. 

ಈಗ ಇದೊಂದೇ ಉದಾಹರಣೆಯನ್ನು ಇಟ್ಟುಕೊಂಡು ಈ ಎರಡೂ ಪ್ರಶ್ನೆಗಳ ಲಕ್ಷಣಗಳನ್ನು ಕುರಿತು ಯೋಚಿಸೋಣ. ಮೊದಲನೆಯದಾಗಿ, ಈ ಎರಡೂ ಪ್ರಶ್ನೆಗಳ ನಡುವೆ ಯಾವುದು ಮುಖ್ಯ ಯಾವುದು ಮುಖ್ಯವಲ್ಲ ಎಂದು ಏಕಾಏಕಿ ಹೇಳಲು ಬರುವುದಿಲ್ಲ. ಇವುಗಳಲ್ಲಿ ಯಾವುದು ಮುಖ್ಯ ಎನ್ನುವುದೂ ಕೂಡ ಈ ಎರಡು ರೀತಿಯ ಪ್ರಶ್ನೆಗಳ ಭಿನ್ನತೆಯನ್ನು ನಿರ್ಧರಿಸುವುದರ ಭಾಗವಾಗಿಯೇ ನಿಭಾಯಿಸಬೇಕಾದಂಥದ್ದು. ಆಚಾರಕೇಂದ್ರಿತ ಪ್ರಶ್ನೆಗಳು ಆಂತರಿಕ ಪ್ರಶ್ನೆಗಳು. ಭೋಗ್ಯಕೇಂದ್ರಿತ ಪ್ರಶ್ನೆಗಳು ಬಾಹ್ಯ ಪ್ರಶ್ನೆಗಳು. ಇದರರ್ಥ, ಒಂದು ಕಾರ್ಯದ ದೃಷ್ಟಿಯಿಂದ ನೋಡಿದರೆ, ಆ ಕಾರ್ಯವನ್ನು ಅರ್ಥಪೂರ್ಣವಾಗಿ ಸಫಲವಾಗಿಸಲು ಬೇಕಾದ ಪರಿಗಣನೆಗಳು ಆಚಾರಕೇಂದ್ರಿತವಾದದ್ದು. ಅದೇ, ಆ ಕಾರ್ಯಗಳಿಂದ ಸಿದ್ದಿಸುವ ಫಲಗಳ ನ್ಯಾಯಯುತವಾದ ವಿಭಾಗ ಮಾಡಲು ಬೇಕಾದ ಪರಿಗಣನೆಗಳು ಭೋಗ್ಯಕೇಂದ್ರಿತವಾದದ್ದು. ಹಲವಾರು ಬಾರಿ ಈ ಎರಡೂ ದೃಷ್ಟಿಕೋನಗಳು ಒಂದಕ್ಕೊಂದು ಪೂರಕವಾಗಿಯೂ ಇರಬಹುದು. ಉದಾಹರಣೆಗೆ, ಶಾಲೆಯ ನೇಮಕಾತಿಯಲ್ಲಿ ಸಮಾನ ಪ್ರಾತಿನಿಧ್ಯ ನೀಡುವುದರಿಂದ ಆ ಶಾಲೆಯ ಕಲಿಕೆಯ ವಾತಾವರಣ ಹೆಚ್ಚು ಶ್ರೀಮಂತವಾಗಿ ಬೆಳೆಯಬಹುದು. ಆದರೆ, ಇಂತಹ ಪೂರಕ ಸಂಬಂಧ ಆನುಷಂಗಿಕವಾದದ್ದು. ಸಮಾನ ಪ್ರಾತಿನಿಧ್ಯದಿಂದ ಬೇರೆಬೇರೆ ಅನುಭವಗಳ ಹಿನ್ನೆಲೆಯ ಜನ ಒಂದು ಕಡೆ ಸೇರುತ್ತಾರೆ. ಈ ಬೇರೆಬೇರೆ ಅನುಭವಗಳ ಹಿನ್ನೆಲೆಯೇ ಕಲಿಕೆಗೆ ಒಂದು ಸಂಪನ್ಮೂಲವಾಗುತ್ತದೆ. ಅಂದರೆ, ಇಲ್ಲಿ ಕಲಿಕೆಗೆ ಕಾರಣವಾಗಿರುವುದು ಅನುಭವ ವೈವಿಧ್ಯತೆಯೇ ಹೊರತು ಸಮಾನ ಪ್ರಾತಿನಿಧ್ಯವಲ್ಲ. ಮತ್ತು ಅನುಭವ ವೈವಿಧ್ಯತೆ ಎನ್ನುವುದು ಹೇಗಿದ್ದರೂ ಒಂದು ಆಚಾರಕೇಂದ್ರಿತ ಪರಿಗಣನೆಯೇ ಸರಿ.

-೩-

ಹಲವಾರು ಆಚಾರಗಳ ವ್ಯವಸ್ಥಿತ ರೂಪವೇ ಒಂದು ಕಾರ್ಯಕ್ಷೇತ್ರ. ಈ ಆಚಾರಗಳೇ ಒಂದು ಕಾರ್ಯಕ್ಷೇತ್ರವನ್ನು ನಿರ್ಧರಿಸುತ್ತವೆ. ಉದಾಹರಣೆಗೆ, ಯಾವುದೋ ಒಂದು ಸಂದರ್ಭದಲ್ಲಿ ನಾವು ಒಂದು ಆಟವನ್ನು ಆಡುತ್ತಿದ್ದೇವೆಯೋ ಅಥವಾ ಯುದ್ಧವನ್ನು ಮಾಡುತ್ತಿದ್ದೇವೆಯೋ ಎನ್ನುವುದು ನಮ್ಮ ನಿರ್ದಿಷ್ಟ ಆಚಾರಗಳಿಂದಲೇ ನಿರ್ಧರಿತವಾಗುವಂಥದ್ದು. ಹಾಗೆಯೇ ಯಾವುದು ಈ ಆಚಾರದ ಉದ್ದೇಶ ಅಥವಾ ಗುರಿ ಮತ್ತು ಯಾವುದು ಆ ಗುರಿಯನ್ನು ಸಾಧಿಸಲು ಇರುವ ಸಾಧನ ಎನ್ನುವಂಥದ್ದೂ ಕೂಡ ಆ ಆಚಾರದ ಒಳಗಿನ ವ್ಯತ್ಯಾಸವೇ ಹೊರತು, ಇದನ್ನು ಹೊರಗಿನಿಂದ ಆರೋಪಿಸಲು ಬರುವುದಿಲ್ಲ. ಒಂದು ಹುಲಿಯನ್ನು ಬೇಟೆಯಾಡುತ್ತಿದ್ದರೆ, ಆ ಬೇಟೆಯ ಆಚಾರದೊಳಗೆ ಒಂದು ಗುರಿ ಅಥವಾ ಉದ್ದೇಶವಿದೆ. ಅದೇನೆಂದರೆ, ಆ ಹುಲಿಯನ್ನು ಬೇಟೆಯಾಡುವುದು. ಹಾಗೆಯೇ, ಅದಕ್ಕೆ ಒಂದು ಸಾಧನವೂ ಇದೆ. ಅದೇನೆಂದರೆ, ಕೋವಿ ಅಥವಾ ಬಿಲ್ಲು ಬಾಣ ಇತ್ಯಾದಿ ಹತಾರಗಳು. ಈ ಬೇಟೆಯ ಆಚಾರದ ಹೊರಗಿನಿಂದ ನೋಡಿದಾಗ, ಆ ಹುಲಿ ಒಂದು ಬೇಟೆಯಲ್ಲ. ಹಾಗೆಯೇ, ವನ್ಯಜೀವಿ ಸಂರಕ್ಷಣೆಯ ಆಚಾರದ ಒಳಗಿಂದ ನೋಡಿದರೆ, ಹುಲಿ ಒಂದು ಅಳಿವಿನಂಚಿನಲ್ಲಿರುವ ಪ್ರಾಣಿ. ಆದರೆ, ಇಂತಹ ನಿರ್ದಿಷ್ಟ ಆಚಾರಗಳ ಚೌಕಟ್ಟಿನ ಹೊರಗೆ, ಹುಲಿಯನ್ನು ಒಂದು ಬೇಟೆ ಎನ್ನಲೂ ಬರುವುದಿಲ್ಲ ಅಥವಾ ಅಳಿವಿನಂಚಿನಲ್ಲಿರುವ ಪ್ರಭೇದ ಎನ್ನಲೂ ಆಗುವುದಿಲ್ಲ. ಅಂದಮೇಲೆ, ಗುರಿಗಳು ಮತ್ತು ಸಾಧನಗಳೆಲ್ಲಾ ಆಚಾರದ ಒಳಗೆ ಮಾಡಬಹುದಾದ ವ್ಯತ್ಯಾಸಗಳೇ ಹೊರತು ಅದರ ಹೊರಗೆ ಅವುಗಳಿಗೆ ಯಾವ ಅರ್ಥವೂ ಇಲ್ಲ. ಇದೇ ಕಾರಣದಿಂದಲೇ, ಆಚಾರಗಳು ಯಾವುದೋ ಬಾಹ್ಯ ಗುರಿಗಳನ್ನು ಸಾಧಿಸಲು ಇರುವ ಸಾಧನಗಳು ಎಂದು ಹೇಳಲು ಬರುವುದಿಲ್ಲ. ಗುರಿಗಳು ಆಚಾರಗಳಿಂದಾಗಿಯೇ ತಿಳಿವಿಗೆ ಬರುವಂಥದ್ದು. 

ಭೋಗ್ಯಕೇಂದ್ರಿತ ಚಿಂತನೆಯಲ್ಲಿ, ಫಲಗಳನ್ನು ಹಾಗೂ ಸಾಧಿಸಲಾದ ಗುರಿಗಳನ್ನು ಆಯಾ ಆಚಾರದ ಸಂಬಂಧದಿಂದ ಆಚೆಯಿಟ್ಟೇ ನೋಡಲಾಗುತ್ತದೆ. ಉದಾಹರಣೆಗೆ, ಒಂದು ಬೇಟೆಯು ಸಿಕ್ಕಿದೆ ಎಂದುಕೊಳ್ಳೋಣ. ಈಗ ಇದನ್ನು ಆ ಸಮುದಾಯದಲ್ಲಿ ಹಂಚುವ ಬಗೆ ಹೇಗೆ ಎನ್ನುವುದನ್ನು ನಿರ್ಧರಿಸುವಾಗ, ಬೇಟೆ ಎನ್ನುವ ಆಚಾರದ ಆಂತರಿಕ ವ್ಯತ್ಯಾಸಗಳು ಮುಖ್ಯವಾಗುವುದಿಲ್ಲ. ವ್ಯಕ್ತಿಗಳ ಬೇಕುಬೇಡಗಳು ಮತ್ತು ಅವರ ಸಾಮಾಜಿಕ ಸ್ಥಿತಿಗತಿಗಳು ಮುಖ್ಯವಾಗುತ್ತವೆ. ಇವಕ್ಕೂ ಆಚಾರಗಳ ಆಂತರಿಕ ವ್ಯವಸ್ಥೆಗಳಿಗೂ ಏನೋ ಒಂದು ಸಂಬಂಧ ಇರಲೂಬಹುದು. ಆದರೆ ಆ ಸಂಬಂಧ ನೇರವೂ ಅಲ್ಲ, ಸರಳವೂ ಅಲ್ಲ. ಬೇಟೆಯಾಡುವವರು ಮುಖ್ಯವಾದ್ದರಿಂದ ಅವರಿಗೇ ಫಲದ ದೊಡ್ಡ ಪಾಲು ಎಂದೇನೂ ಯಾವಾಗಲೂ ಇರುವುದಿಲ್ಲ. ಆಧುನಿಕ ಸಮಾಜಗಳಲ್ಲಂತೂ ಈ ಸಂಬಂಧ ಇನ್ನೂ ಸಂಕೀರ್ಣವೂ ಜಟಿಲವೂ ಆಗಿರುತ್ತದೆ. ಹಾಗಾಗಿ ಭೋಗ್ಯಕೇಂದ್ರಿತ ಚಿಂತನೆ ಅಗತ್ಯಗಳನ್ನು ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಕುರಿತು ಸ್ವಾಭಾವಿಕವಾಗಿಯೇ ಗಮನ ಹರಿಸಬೇಕಾಗುತ್ತದೆ. ಹಾಗಾಗಿ ಇಲ್ಲಿ ವಿಕ್ರಯಿಸುವ ಫಲಗಳು ಮತ್ತು ಅದನ್ನು ಸ್ವೀಕರಿಸುವ ವ್ಯಕ್ತಿಗಳ ನಡುವೆ ಯಾವುದೇ ಆಂತರಿಕ ಸಂಬಂಧವಿಲ್ಲ ಎನ್ನಲೂಬಹುದು. ಇದರ ಪರಿಣಾಮವೇನೆಂದರೆ, ಪ್ರತೀ ಐತಿಹಾಸಿಕ ಸಾಮಾಜಿಕ ಸಂದರ್ಭದಲ್ಲೂ ಭೋಗ್ಯಕೇಂದ್ರಿತ ಚಿಂತನೆಯ ರೂಪುರೇಖೆ ಬದಲಾಗುತ್ತಲೇ ಇರುತ್ತದೆ. ಇದು ಭೋಗ್ಯಕೇಂದ್ರಿತ ಚಿಂತನೆಯ ಸಂದರ್ಭನಿಷ್ಠ ಲಕ್ಷಣವಲ್ಲ. ಬದಲಾಗಿ ಭೋಗ್ಯಕೇಂದ್ರಿತ ಚಿಂತನೆ ಆ ನಿರ್ದಿಷ್ಟ ಸಂದರ್ಭದ ಮೇಲೆ ಅವಲಂಬಿತವಾಗಿ ಇರುವುದರ ಲಕ್ಷಣ. ಈ ವ್ಯತ್ಯಾಸವನ್ನು ಸುಮಾರು ಹೀಗೆ ಗುರುತಿಸಬಹುದು. ಕೃಷಿಕರು ಮುಂಗಾರಿನ ಬೆಳೆ ಬೆಳೆಯುವ ಕ್ರಮಕ್ಕೂ ಹಿಂಗಾರಿನ ಬೆಳೆ ಬೆಳೆಯುವ ಕ್ರಮಕ್ಕೂ ವ್ಯತ್ಯಾಸವಿರುತ್ತದೆ. ಅಂದಮೇಲೆ ಬೇಸಾಯ ಒಂದು ಸಂದರ್ಭನಿಷ್ಠವಾದ ಜ್ಞಾನ. ಅದೇ, ಹಿಂಗಾರಿನಲ್ಲಿ ಬೆಳೆದ ಬೆಳೆಗಳೂ ಮತ್ತು ಮುಂಗಾರಿನಲ್ಲಿ ಬೆಳೆದ ಬೆಳೆಗಳೂ ತಮ್ಮ ರಸದಲ್ಲಿ, ರುಚಿಯಲ್ಲಿ ಬೇರೆಬೇರೆಯೇ ಆಗಿರುತ್ತವೆ. ಇದು ಬೆಳೆಗಳ ಸಂದರ್ಭನಿಷ್ಠ ಲಕ್ಷಣವಲ್ಲ. ಇದು ಕೇವಲ ಆ ಬೆಳೆಗಳು ಆಯಾ ಸಂದರ್ಭದ ಮೇಲೆ ಅವಲಂಬಿತವಾಗಿರುವುದರ ಲಕ್ಷಣ.          

ಆಚಾರಕೇಂದ್ರಿತ ಚಿಂತನೆ ಸ್ವಾಭಾವಿಕವಾಗಿಯೇ ಸಂದರ್ಭನಿಷ್ಠವಾದದ್ದು. ನಮ್ಮ ಆಚಾರಗಳ ಕುರಿತು ಎಷ್ಟೇ ಸಾಧಾರಣೀಕರಣ ಸಾಧ್ಯವಾದರೂ, ಅವು ಯಾವುದನ್ನೂ ಒಂದು ರೀತಿಯ definitive regularity ಅಥವಾ ಸಾರ್ವತ್ರಿಕ ನಿಯಮವಾಗಿ ಇಲ್ಲವೇ predictive regularity ಅಥವಾ ಮುನ್ಸೂಚಕ ನಿಯಮವಾಗಿ ನೋಡಲಾಗುವುದಿಲ್ಲ. ಭೋಗ್ಯಕೇಂದ್ರಿತ ಚಿಂತನೆಯಲ್ಲಿ ಒಂದು ಬಹಳ ಮುಖ್ಯವಾದ ಕಾರಣದಿಂದಾಗಿ ಈ ಎರಡೂ ರೀತಿಯ ನಿಯಮಗಳಿಗೆ ಪ್ರಾಶಸ್ತ್ಯವಿದೆ. ಮನಸೋಇಚ್ಚೆ ಭೋಗ್ಯಗಳನ್ನು ವಿಕ್ರಯಿಸಲು ಬರುವುದಿಲ್ಲ. ಹಾಗೆ ಮಾಡಿದರೆ, ಅದು ಭೋಗ್ಯಕೇಂದ್ರಿತ ಚಿಂತನೆ ಆಗುವುದಿಲ್ಲ. ಭೋಗ್ಯಗಳನ್ನು ಯಾವ ನಿಯಮದ ಪ್ರಕಾರವಾಗಿ ವಿಂಗಡಿಸಬೇಕು ಎನ್ನುವುದೇ ಭೋಗ್ಯಗಳ ಕುರಿತ ಚಿಂತನೆಯ ಮೂಲತತ್ವ. ಆಚಾರಗಳಿಗೆ ಸಂದರ್ಭನಿಷ್ಠತೆ ಮುಖ್ಯ ಎಂದು ಹೇಳಿದಾಕ್ಷಣ ಅದರ ಅರ್ಥ ಒಂದೊಂದು ಸಂದರ್ಭದಲ್ಲಿ ಒಂದೊಂದು ರೀತಿ ಮಾಡಬಹುದು ಎಂದಲ್ಲ. ಆಚಾರಗಳ ಅನುಷ್ಠಾನಕ್ಕೆ ತಲತಲಾಂತರದಿಂದ ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿರುವ ನೇಮ ನಿಷ್ಠೆಗಳಿರಬಹುದು. ಉದಾಹರಣೆಗೆ, ನೇಕಾರರು ತಮ್ಮ ಮಗ್ಗವನ್ನು ಮುಟ್ಟುವುದಕ್ಕೆ ಹಲವು ರೀತಿಯ ಸೂತಕ-ಮೈಲಿಗೆ ಇರುವವರನ್ನು ಬಿಡದೇ ಇರಬಹುದು. ಹಾಗೆಯೇ, ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯಬೇಕಾದವರು ಸ್ನಾತಕ ಮಟ್ಟದಲ್ಲಿಯೂ ಭೌತಶಾಸ್ತ್ರವನ್ನು ಓದಿರಲೇಬೇಕೆಂಬ ಕಟ್ಟಳೆಯನ್ನು ಬಹಳ ಶಿಸ್ತಾಗಿ ಪಾಲಿಸಬಹುದು. ಆದರೆ, ನೇಕಾರರ ನಿಯಮ ವಾಹನಗಳ ಗುಜರಿಯಲ್ಲಿ ಕೆಲಸ ಮಾಡುವವರಿಗೆ ಪ್ರಸ್ತುತವಲ್ಲದೇ ಇರಬಹುದು. ಭೌತಶಾಸ್ತ್ರದ ನಿಯಮ ಮಿಕ್ಕ ವಿಷಯಗಳಲ್ಲಿ ಇರದೇ ಇರಬಹುದು. ಆದರೆ, ಈ ಎಲ್ಲ ನಿಯಮಗಳೂ ಬಹಳ ಸಂದರ್ಭನಿಷ್ಠವಾದದ್ದು ಎಂದರೆ ಅರ್ಥ ಇದನ್ನು ಪಾಲಿಸುವವರ ಒಂದು ಒಳಒಪ್ಪಂದವಾಗಿ ಇದು ಕೆಲಸ ಮಾಡುತ್ತದೆಯೇ ವಿನಾ ಇದನ್ನು ಹೊರಗಿನಿಂದ ಒಂದು ಕಾನೂನಿನ ರೀತಿ ಹೇರಲು ಬರುವುದಿಲ್ಲ ಎಂದು. ಏಕೆಂದರೆ, ಇದು ನೇಕಾರಿಕೆಯನ್ನು ಒಂದು ರೀತಿಯಲ್ಲಿ, ಒಂದು ಸಂಪ್ರದಾಯದ ಭಾಗವಾಗಿ ಕಲಿಯುವುದರ ಮೂಲಕ ಬರುವ ವಿವೇಚನೆಯೇ ಹೊರತು, ಆ ಸಂಪ್ರದಾಯಗಳು ಮತ್ತು ರೂಢಿಗಳ ಹೊರಗಿನಿಂದ ಇದನ್ನು ರೂಪಿಸಲು ಬರುವುದಿಲ್ಲ. 

ಒಟ್ಟಾರೆಯಾಗಿ, ಆಚಾರಕೇಂದ್ರಿತ ಚಿಂತನೆಯ ಸಂದರ್ಭನಿಷ್ಠತೆ ಅದಕ್ಕೆ ಐತಿಹಾಸಿಕವಾಗಿ ಒಂದು ಏಕಸೂತ್ರತೆಯನ್ನು ನೀಡುತ್ತದೆ. ಆದರೆ, ಭೋಗ್ಯಕೇಂದ್ರಿತ ಚಿಂತನೆಯ ಸಂದರ್ಭದ ಮೇಲಿನ ಅವಲಂಬನೆ ಐತಿಹಾಸಿಕವಾಗಿ ಅದನ್ನು ರಾಡಿಕಲ್ ಅಥವಾ ಮೂಲೋತ್ಪಾಟಕವಾಗಿಸುತ್ತದೆ. ಒಂದು ಸರಳ ವ್ಯತ್ಯಾಸವನ್ನು ಗಮನಿಸಿದರೆ ಇದು ತಿಳಿವಿಗೆ ಬರುತ್ತದೆ. ಮಳೆಯಾಧಾರಿತವಾದ ಬೇಸಾಯದ ಕುರಿತ ಜ್ಞಾನ, ಸ್ವಲ್ಪಸ್ವಲ್ಪವೇ ಸುಧಾರಿಸಿದರೂ, ಒಟ್ಟಾರೆಯಾಗಿ ಹಲವು ಶತಮಾನಗಳಿಂದಲೂ ಏಕಸೂತ್ರವಾಗಿ ನಡೆದುಕೊಂಡು ಬಂದಿದೆ. ಅದರಲ್ಲಿ ಆಗಿರುವ ಬದಲಾವಣೆಗಳನ್ನೆಲ್ಲಾ ಆ ಕಾರ್ಯಕ್ಷೇತ್ರದ ಆಂತರಿಕ ಪರಿಕಲ್ಪನೆಗಳ ಮೂಲಕವೇ ತಿಳಿಯಬಹುದು. ಆದರೆ, ಭೋಗ್ಯಕೇಂದ್ರಿತ ಚಿಂತನೆಯಲ್ಲಿ ಇಂತಹ ಆಂತರಿಕ ಏಕಸೂತ್ರವಿಲ್ಲ. ಒಂದು ಸಂದರ್ಭದಲ್ಲಿ ನೈತಿಕ ಸಮಸ್ಯೆಯೇ ಅಲ್ಲದ್ದು ಇನ್ನೊಂದು ಸಂದರ್ಭದಲ್ಲಿ ಒಂದು ನೈತಿಕ ಸಮಸ್ಯೆಯಾಗಿ ಹೊಮ್ಮುವ ಸಾಧ್ಯತೆಯೂ ಇಲ್ಲಿದೆ. ಉದಾಹರಣೆಗೆ, ಗ್ರೀಕ್ ಸಮಾಜದ ದೃಷ್ಟಿಯಿಂದ ನೋಡುವುದಾದರೆ, ಜೀತ ಪದ್ಧತಿ ಎನ್ನುವುದು ಒಂದು ನೈತಿಕ ಸಮಸ್ಯೆಯಾಗಬಹುದು ಎಂದು ಊಹಿಸುವುದೂ ಕಷ್ಟ. ಹಾಗೆಯೇ, ಇಂದು ನಮಗೆ ಜೀತ ಪದ್ಧತಿಯಂಥ ಒಂದು ಹೇಯ ವ್ಯವಸ್ಥೆ ಸಮಸ್ಯೆಯೇ ಇಲ್ಲದೇ ಅಸ್ತಿತ್ವದಲ್ಲಿ ಇರಲಿಕ್ಕೆ ಸಾಧ್ಯ ಎಂದು ಊಹಿಸುವುದು ಕಷ್ಟ. ಹಾಗೆಯೇ, ಅಮೇರಿಕನ್ ವಸಾಹತುಶಾಹಿಗಳಿಗೆ ಕರಿಯರು ನಾಗರಿಕರಲ್ಲ ಎನ್ನುವುದು ಒಂದು ಸಮಸ್ಯೆಯೇ ಅಲ್ಲ. ಆದರೆ ಇಂದು ನಮಗೆ ಕರಿಯರನ್ನು ಹಕ್ಕುಗಳಿಲ್ಲದ ಪೌರತ್ವವಿಲ್ಲದ ಅನಾಗರಿಕರಾಗಿ ನಡೆಸಿಕೊಳ್ಳಲಾಗುತ್ತಿತ್ತು ಎಂದು ಊಹಿಸುವುದೇ ಕಷ್ಟ. ಅಂದಮೇಲೆ, ಒಂದು ಸಂದರ್ಭದಿಂದ ಇನ್ನೊಂದು ಸಂದರ್ಭವನ್ನು ನೋಡಿದರೆ, ಅದು ನೈತಿಕವಾಗಿ ರಾಡಿಕಲ್ ಅಥವಾ ಮೂಲೋತ್ಪಾಟಕವೆಂದೋ ಅಥವಾ ವಿಕ್ಷಿಪ್ತವಾದದ್ದೆಂದೋ ಮಾತ್ರ ಗುರುತಿಸಲು ಸಾಧ್ಯ. ಪಶ್ಚಿಮದಲ್ಲಿ ಹೆಂಗಸರ ಮತದಾನದ ಹಕ್ಕು, ಇಂದಿನ ತೃತೀಯ ಲಿಂಗಿಗಳ ಹಕ್ಕು, ಇಂತಹ ಯಾವುದೇ ಭೋಗ್ಯಕೇಂದ್ರಿತ ಚಿಂತನೆಯನ್ನು ಗಮನಿಸಿದರೂ, ಇದು ಹಿನ್ನೋಟದಲ್ಲಿ ಈವರೆಗೂ ಇರದೇ ಹೋಗುವುದು ಹೇಗೆ ಸಾಧ್ಯವಾಯಿತು ಎಂದು ತಿಳಿಯುವುದು ಕಷ್ಟ. ಹಾಗೆಯೇ ಮುನ್ನೋಟದಲ್ಲಿ, ಇನ್ನೂ ಸಮಸ್ಯೆಯಾಗಿರದ ಒಂದು ವ್ಯವಸ್ಥೆ, ಉದಾಹರಣೆಗೆ ಜೀತಪದ್ಧತಿ, ಮುಂದೆ ಒಂದು ದಿನ ದೊಡ್ಡ ನೈತಿಕ ಸಮಸ್ಯೆಯಾಗಬಹುದು ಎಂದು ಊಹಿಸುವುದೂ ಕಷ್ಟ. ಭೋಗ್ಯಕೇಂದ್ರಿತ ಚಿಂತನೆಯ ಸಂದರ್ಭಾವಲಂಬನೆ ಎಂದು ಗುರುತಿಸಿದ್ದು ಈ ಲಕ್ಷಣವನ್ನು.

ಹಾಗೆಯೇ, ಆಚಾರಕೇಂದ್ರಿತ ಚಿಂತನೆಯ ಮುಖ್ಯ ನೆಲೆ ರೂಢಿಯೇ ಹೊರತು ತಾತ್ವಿಕತೆಯಲ್ಲ. ಯಾವುದೇ ಒಂದು ತಕ್ಕಮಟ್ಟಿಗೆ ಸಂಕೀರ್ಣವಾದ ಆಚಾರವೇ ಆದರೂ ಅದನ್ನು ಕಲಿತು ಮಾಡಬಹುದೇ ಹೊರತು ಅದಕ್ಕೆ ಬೇರೆ ರೀತಿಯ ಪ್ರವೇಶ ಇರುವುದಿಲ್ಲ. ಭೋಗ್ಯಕೇಂದ್ರಿತ ಚಿಂತನೆ ಈ ರೀತಿಯ ಪ್ರವೇಶದ ನಿರ್ಬಂಧಗಳನ್ನೂ ತಾನು ಪರೀಕ್ಷಿಸಬೇಕಾದ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದರಿಂದ ಅದಕ್ಕೆ ಇಂತಹ ಸಂದಿಗ್ಧಗಳಿಲ್ಲ. ಕಲಿತು ಮಾಡುವ ಯಾವ ಕ್ರಿಯೆಯೇ ಆದರೂ, ಅದು ಕಲಿಯಲು ಸಾಧ್ಯವಿರುವ ಒಂದು ಸಂಪ್ರದಾಯವನ್ನೇ ಸೂಚಿಸುತ್ತದೆ. ಅಂದಮೇಲೆ, ಆ ಸಂಪ್ರದಾಯಕ್ಕೆ ಐತಿಹಾಸಿಕವಾಗಿ ಒಂದು ಹುಟ್ಟು, ಬೆಳವಣಿಗೆ, ಅವಸಾನ ಎಂದೆಲ್ಲಾ ಇದ್ದರೂ, ಕಲಿಕೆಯ ದೃಷ್ಟಿಯಿಂದ ನೋಡಿದಾಗ, ಅದು ನಿತ್ಯನೂತನ. ಉದಾಹರಣೆಗೆ, ಯಾವುದೋ ಪುರಾತನ ನಾಗರಿಕತೆಯ ಈಗ ಮರೆತುಹೋಗಿರುವ ವರ್ಣಮಾಲೆಯನ್ನು ನಾವು ಪುನಃ ಕಲಿಯತೊಡಗಿದರೆ, ಐತಿಹಾಸಿಕವಾಗಿ ಆ ವರ್ಣಮಾಲೆ ನಶಿಸಿ ಹೋಗಿದ್ದರೂ, ನಮ್ಮ ಕಲಿಕೆಯ ದೃಷ್ಟಿಯಿಂದ ನೋಡಿದಾಗ ಅದನ್ನು ಎಷ್ಟರ ಮಟ್ಟಿಗೆ ಕಲಿಯಬಹುದೋ ಅಷ್ಟರ ಮಟ್ಟಿಗೆ ಅದು ನವೀನವೇ. ಅದಕ್ಕಿರುವುದು ಪರಂಪರೆಯ ಲಕ್ಷಣವೇ ಹೊರತು, ವಸ್ತುರೂಪಿಯಾದ ಇತಿಹಾಸದ ಲಕ್ಷಣವಲ್ಲ. ಹಾಗಾಗಿ, ಒಂದು ಕಲಿಕೆಯ ಸಂಪ್ರದಾಯ ಯಾಕೆ ಹಾಗಿದೆ ಎಂದು ಕೇಳುವುದರಿಂದ ಕಲಿಕೆಯ ಸಂದರ್ಭಕ್ಕೇನೂ ಪ್ರಯೋಜನವಿಲ್ಲ. ವಿಜ್ಞಾನಿಗಳು ಸಾಮಾನ್ಯವಾಗಿ ವಿಜ್ಞಾನದ ಸಮಾಜಶಾಸ್ತ್ರ ಮತ್ತು ವಿಜ್ಞಾನದ ಇತಿಹಾಸದ ಕುರಿತು ಮೂಗು ಮುರಿಯುವುದರ ಹಿಂದೆ ಇಂತಹ ಒಂದು ಕಾರಣವಿದೆ. ವಿಜ್ಞಾನವನ್ನು ವಸ್ತುರೂಪಿಯಾಗಿ ನೋಡುವ ಜ್ಞಾನದಿಂದ ವಿಜ್ಞಾನದ ಕಲಿಕೆಗೆ ಮತ್ತು ವಿಜ್ಞಾನದ ರೂಢಿಗೆ ಹೆಚ್ಚಿನ ಪ್ರಯೋಜನವೇನೂ ಇಲ್ಲ. ಇದ್ದರೂ, ಅದು ಆನುಶಂಗಿಕವಾದದ್ದೇ ಹೊರತು ಅಗತ್ಯವಾದದ್ದಲ್ಲ. 

ಆದರೆ ಭೋಗ್ಯಕೇಂದ್ರಿತ ಚಿಂತನೆಗೆ ಈ ಐತಿಹಾಸಿಕ ಚಿತ್ರಣ ಬಹಳ ಮುಖ್ಯ. ಯಾಕೆ ಯಾವುದೋ ಒಂದು ನಿರ್ದಿಷ್ಟ ಸ್ವತ್ತಿನ ಹಂಚಿಕೆ ಈ ನಿರ್ದಿಷ್ಟ ಕ್ರಮದಲ್ಲಿದೆ ಎನ್ನುವುದು ಸ್ವಾಭಾವಿಕವಾಗಿಯೇ ಒಂದು ಐತಿಹಾಸಿಕ ಪ್ರಶ್ನೆ. ಉದಾಹರಣೆಗೆ, ಯಾಕೆ ಭೂಹಿಡುವಳಿ ಒಂದು ನಿರ್ದಿಷ್ಟ ವರ್ಗದ ಅಥವಾ ವರ್ಗಗಳ ಕೈಯಲ್ಲೇ ಇದೆ ಎನ್ನುವ ಪ್ರಶ್ನೆಗೆ ಐತಿಹಾಸಿಕವಲ್ಲದ ಉತ್ತರಗಳಿಂದ ಪ್ರಯೋಜನವಿಲ್ಲ. ಬೇಕಾದರೆ, ಒಂದು ಸಂಖ್ಯಾಶಾಸ್ತ್ರದ ಉತ್ತರವನ್ನು ಇದಕ್ಕೆ ಕೊಡಬಹುದು. ಪರೆಟೋ-ಹಂಚಿಕೆ ಎನ್ನುವ ಒಂದು ನಿಯಮವಿದೆ. ಅದರ ಪ್ರಕಾರ ಶೇಕಡಾ ೨೦ರಷ್ಟು ಜನ ಶೇಕಡಾ ೮೦ರಷ್ಟು ಸಂಪತ್ತಿಗೆ ಒಡೆಯರಾಗಿರುತ್ತಾರೆ. ಆದರೆ, ಇದಷ್ಟೇ ಅಲ್ಲ. ಈ ಪರೆಟೋ ಹಂಚಿಕೆ ನಮ್ಮ ಭೌತಿಕ, ಜೈವಿಕ, ಕೊನೆಗೆ ವಿದ್ಯುನ್ಮಾನ ಪ್ರಪಂಚದ ಎಲ್ಲೆಡೆಯೂ ಕಾಣಸಿಗುತ್ತದೆ. ಶೇಕಡಾ ೨೦ರಷ್ಟು ಸಾಫ್ಟವೇರ್ ಕೋಡ್‌ಗಳು ಶೇಕಡಾ ೮೦ರಷ್ಟು ಪ್ರೋಗ್ರಾಮ್ ದೋಷಗಳಿಗೆ ಕಾರಣವಾಗುತ್ತವೆ. ಶೇಕಡಾ ೨೦ರಷ್ಟು ಜೀವಾಣುಗಳು ಶೇಕಡಾ ೮೦ರಷ್ಟು ಕಾಯಿಲೆಗಳಿಗೆ ಮೂಲವಾಗಿರುತ್ತವೆ ಇತ್ಯಾದಿ. ಒಟ್ಟಾರೆ, ಇದೊಂದು ಶುದ್ಧವಾದ ಸಾಂಖ್ಯಿಕ ನಿಯಮಿತಿ. ಎಷ್ಟೇ ಪ್ರಬಲವಾದ ವಿವರಣೆಯಾದರೂ ಇದನ್ನು ಭೂಹಿಡುವಳಿಯ ಕುರಿತ ಸಿದ್ಧಾಂತ ಎಂದು ಹೇಳುವುದರಿಂದ ಭೋಗ್ಯಕೇಂದ್ರಿತ ದೃಷ್ಟಿಯ ಚಿಂತನೆಗೆ ಯಾವ ಪ್ರಯೋಜನವೂ ಇಲ್ಲ. ಯಾಕೆಂದರೆ, ಇದು ಐತಿಹಾಸಿಕವಾದ ವಿವರಣೆಯಲ್ಲ. ಇದೊಂದು ಸಾಂಖ್ಯಿಕ ವಿವರಣೆ. ಇದು ಅನಗತ್ಯ ಎಂದಲ್ಲ. ಆದರೆ, ಇದನ್ನೂ ಒಂದು ಐತಿಹಾಸಿಕ ಚೌಕಟ್ಟಿನೊಳಗೆ ನೋಡದಿದ್ದರೆ, ಭೋಗ್ಯಕೇಂದ್ರಿತ ಚಿಂತನೆ ಸಂಪನ್ನವಾಗುವುದಿಲ್ಲ. ಒಂದು ವಿದ್ಯಮಾನವನ್ನು ಐತಿಹಾಸಿಕವಾಗಿ ನೋಡುವುದರಲ್ಲೇ ಅದರ ಕುರಿತ ಒಂದು ವಿಮರ್ಶೆಯೂ ಅಡಗಿದೆ. ಆ ವಿಮರ್ಶೆ ಏನೆಂದರೆ ಈಗ ಇರುವ ವ್ಯವಸ್ಥೆ ಯಾವುದೋ ಒಂದು ನಿರ್ದಿಷ್ಟ ಐತಿಹಾಸಿಕ ಬೆಳವಣಿಗೆಯ ಫಲವಾದ್ದರಿಂದ ಅದರ ಅಸ್ತಿತ್ವವೇ ಅದರ ಮುಂದುವರಿಕೆಗೂ ಇರುವ ಸಮರ್ಥನೆಯಲ್ಲ. ಅಂದಮೇಲೆ, ಈ ಚಿಂತನೆಯ ಪ್ರಕಾರ ನೋಡಿದರೆ, ಒಂದು ವ್ಯವಸ್ಥೆ ಮುಂದುವರಿಯಲು ಸದಾ ಕಾಲ ಅದು ತನ್ನ ವೈಚಾರಿಕ ನೆಲೆಯ ಸಮರ್ಥನೆಯನ್ನು ಪುನರ್ನವೀಕರಿಸಿಕೊಳ್ಳುತ್ತಿರಬೇಕು. 

-೪-

ಆಚಾರಕೇಂದ್ರಿತ ಚಿಂತನೆಯ ಇನ್ನೊಂದು ಮುಖ್ಯ ಲಕ್ಷಣವೆಂದರೆ ಪ್ರಾಶಸ್ತ್ಯದ ಆಧಾರದ ಮೇಲೆ ಶ್ರೇಣೀಕರಣ ಮತ್ತು ತಜ್ಞತೆಯ ಆಧಾರದ ಮೇಲೆ ವಿಭಾಗೀಕರಣ. ಯಾವ ಆಚಾರವಾದರೂ ಸರಿ, ಅದರಲ್ಲೂ ವಿಶೇಷವಾಗಿ ಸಂಕೀರ್ಣ ಆಚಾರಗಳಾದರಂತೂ, ಅದರಲ್ಲಿ ಹೆಚ್ಚು ಪಳಗಿದವರು, ಕಡಿಮೆ ಪಳಗಿದವರು, ಹೆಚ್ಚು ಪ್ರಮುಖರಾದವರು, ಕಡಿಮೆ ಪ್ರಮುಖರಾದವರು ಎನ್ನುವ ರೀತಿಯ ಶ್ರೇಣೀಕರಣ ಸ್ವಾಭಾವಿಕವಾಗಿಯೇ ಬರುತ್ತದೆ. ಹಾಗೆಯೇ, ಒಂದು ದೊಡ್ಡ ಕೆಲಸ ಸಾಮಾನ್ಯವಾಗಿ ಹಲವು ಸಣ್ಣಸಣ್ಣ ವಿಶೇಷ ತಜ್ಞತೆಗಳನ್ನು ಹೊಂದಿರುತ್ತದೆ. ಈ ಒಂದೊಂದು ತಜ್ಞತೆಯೂ ಒಂದೊಂದು ಶಾಖೆಯೇ ಆಗಿ, ಅದರ ನಡುವೆ ಹಲವು ಸೂಕ್ಷ್ಮ ರೀತಿಯ ಮತ್ತು ಕಟ್ಟುನಿಟ್ಟಾದ ವಿಭಾಗಗಳೂ ಉಂಟಾಗುತ್ತವೆ. ಇದು ಆಧುನಿಕ ವಿಶ್ವವಿದ್ಯಾನಿಲಯದ ಜ್ಞಾನಶಿಸ್ತುಗಳನ್ನು ನೋಡಿದರೂ ಕಾಣಿಸುತ್ತದೆ, ಒಂದು ಕಟ್ಟಡ ಕಾಮಗಾರಿಯನ್ನು ನೋಡಿದರೂ, ಕಾಫಿ-ಅಡಿಕೆ ತೋಟದ ಕೆಲಸಗಳನ್ನು ಅಥವಾ ಒಂದು ವೈದಿಕ ಯಜ್ಞವನ್ನು ನೋಡಿದರೂ ಕಾಣಿಸುತ್ತದೆ. ಬರೀ ಅಷ್ಟೇ ಅಲ್ಲ, ಒಂದು ಆಚಾರಕೇಂದ್ರಿತ ಕೆಲಸದ ಸಾಫಲ್ಯಕ್ಕೆ ಈ ಎರಡೂ ರೀತಿಯ ತಾರತಮ್ಯಗಳು ಬಹಳ ಮುಖ್ಯವಾದ್ದರಿಂದ, ಇವುಗಳನ್ನು ಆಯಾ ಕೆಲಸದ ಆಂತರಿಕ ರಚನೆಯ ಅಥವಾ constitutive ಆದ ಅಂಶಗಳು ಎಂದೇ ನೋಡಲಾಗುತ್ತದೆ, ಕೆಲವೊಮ್ಮೆ ಈ ಶ್ರೇಣೀಕರಣಕ್ಕೆ ಮತ್ತು ವಿಭಾಗಗಳಿಗೇ ಒಂದು ಪಾವಿತ್ರ್ಯವನ್ನೋ ಮೇಲ್ಮೆಯನ್ನೋ ಜೋಡಿಸಲಾಗಿರುತ್ತದೆ. ಆದರೆ, ಭೋಗ್ಯಕೇಂದ್ರಿತ ಚಿಂತನೆ ಈ ಎರಡೂ ಅಂಶಗಳನ್ನು, ಅಂದರೆ, ಶ್ರೇಣೀಕರಣ ಮತ್ತು  ವಿಭಾಗೀಕರಣಗಳನ್ನು, ಭೋಗ್ಯಗಳ ಹಂಚಿಕೆಯ ದೃಷ್ಟಿಯಿಂದ ಅಪ್ರಸ್ತುತವೆಂದೇ ಕಾಣುತ್ತದೆ. ಅಷ್ಟೇ ಅಲ್ಲದೆ, ಈ ಶ್ರೇಣೀಕರಣ ಮತ್ತು ವಿಭಾಗೀಕರಣಗಳೇ ಭೋಗ್ಯಗಳ ಹಂಚಿಕೆಯಲ್ಲಿ ಅಸಮತೋಲನವನ್ನು ತರುವುದರಿಂದ, ಇದನ್ನು ಅನಿವಾರ್ಯವಾಗಿ ನಿಭಾಯಿಸಬೇಕಾದ ಒಂದು ನಿಯಮಿತಿ, ಅಥವಾ constraint, ಎನ್ನುವ ರೀತಿಯಲ್ಲಿ ನೋಡುತ್ತದೆ. 

-೫-

ಆಚಾರಕೇಂದ್ರಿತ ಚಿಂತನೆ ಮತ್ತು ಭೋಗ್ಯಕೇಂದ್ರಿತ ಚಿಂತನೆಯ ನಡುವಿನ ಇಂತಹ ವಸ್ತುಶಃ ವ್ಯತ್ಯಾಸಗಳಲ್ಲದೇ ಇನ್ನೊಂದು ತಾರ್ಕಿಕ ವ್ಯತ್ಯಾಸವೂ ಮುಖ್ಯವಾಗುತ್ತದೆ. ಅದೇನೆಂದರೆ, ಭೋಗ್ಯಕೇಂದ್ರಿತ ಚಿಂತನೆಯಲ್ಲಿ ಮುಖ್ಯ ಫಲಾನುಭವಿಗಳು ಅಥವಾ ಸೇವ್ಯರು ವ್ಯಕ್ತಿಗಳು, ಅಥವಾ ಆ ರೀತಿಯ ಇನ್ನು ಯಾವುದೇ ರೂಪಗಳು. ಕೆಲವೊಮ್ಮೆ ನೇರವಾಗಿ ಮನುಷ್ಯ ವ್ಯಕ್ತಿಗಳಲ್ಲದಿದ್ದರೂ, ಕಾನೂನಾತ್ಮಕವಾದ legal personಗಳೂ ಆಗುತ್ತದೆ. ಆದರೆ ಆಚಾರಕೇಂದ್ರಿತ ಚಿಂತನೆಯ ಸೇವ್ಯ ಸ್ಥಾನ ಇರುವುದು ಆ ನಿರ್ದಿಷ್ಟ ಆಚಾರಕ್ಕೇ. ಅಂದರೆ, ಆಚಾರಕೇಂದ್ರಿತ ಚಿಂತನೆಯಲ್ಲಿ ವ್ಯಕ್ತಿಗಳು ಆನುಶಂಗಿಕ. ಆಚಾರವೇ ಪ್ರಧಾನ. ವ್ಯಕ್ತಿಗಳನ್ನು ಪೊರೆಯುವುದು ಆಚಾರಗಳು. ಒಂದು ಆಚಾರದಲ್ಲಿ ನಿರ್ದಿಷ್ಟ ಕರ್ಮಗಳನ್ನು ಮಾಡುವುದು ಫಲಾಪೇಕ್ಷೆಯಿಂದ ಎನ್ನುವುದು ನಿಜವಾದರೂ, ಇವೆರಡರ ನಡುವೆ ಒಂದು ಏಕಮುಖಿಯಾದ ಅಸಮ ಸಂಬಂಧವನ್ನು ಗಮನಿಸಬೇಕು. ಫಲಗಳು ಕರ್ಮಗಳನ್ನು ನಿರ್ಧರಿಸುವುದಿಲ್ಲ. ಕರ್ಮಗಳೇ ಫಲಗಳನ್ನು ನಿರ್ಧರಿಸುವುದು. ಹಾಗಾಗಿ ಈ ಚಿಂತನೆಯಲ್ಲಿ ಆಚಾರಕ್ಕೆ ಒತ್ತು. ಭೌತಶಾಸ್ತ್ರ, ಮನೆ ನಿರ್ಮಾಣ, ಅಥವಾ ಅಗ್ನಿಹೋತ್ರ ಇಂತಹ ಯಾವುದೇ ಆಚಾರಗಳನ್ನು ಗಮನಿಸಿದರೂ, ಇವುಗಳನ್ನು ಮಾಡುವ ಕ್ರಮದಿಂದಾಗಿ ಇವು ಭೌತಶಾಸ್ತ್ರ, ಅಥವಾ ಮನೆ ನಿರ್ಮಾಣ, ಅಥವಾ ಅಗ್ನಿಹೋತ್ರ ಎನ್ನುವ ರೂಪಗಳನ್ನು ಪಡೆದುಕೊಳ್ಳುತ್ತವೆಯೇ ಹೊರತು, ಇದರಿಂದ ಬರುವ ಫಲಗಳಿಂದಲ್ಲ. ಮನೆ ನಿರ್ಮಾಣವಾದರೆ ಮಾತ್ರವಲ್ಲವೇ ಅದು ಮನೆ ನಿರ್ಮಾಣದ ಕ್ರಿಯೆ ಎನ್ನಿಸಿಕೊಳ್ಳುವುದು ಎಂದು ವಾದಿಸಬಹುದು. ಇದನ್ನು ಒಂದು ಆಚಾರದ telos ಎನ್ನುತ್ತಾರೆ, ಉದ್ದೇಶ ಅಥವಾ ಸಾಫಲ್ಯ ಎನ್ನುವ ಅರ್ಥದಲ್ಲಿ. ಒಂದು ಆಚಾರವನ್ನು ಗುರುತಿಸುವುದಕ್ಕೆ ಮತ್ತು ಅದರ ಗುಣಮಟ್ಟವನ್ನು ಅಳೆಯುವುದಕ್ಕೆ ಇಂತಹ telosನ ಅಗತ್ಯವಿದೆ ಎನ್ನುವುದೇನೋ ಸರಿ. ಆದರೆ, ಇಲ್ಲಿ ಇನ್ನೂ ಎರಡು ಬೇರೆ ಬೇರೆ ಮಟ್ಟದ ವಿಚಾರಗಳನ್ನು ಗಮನಿಸಬೇಕು. ಮೊದಲನೆಯದು, ವಿಕೃತ ಫಲಗಳು ಉಂಟಾದರೆ ಅಥವಾ ಫಲಗಳು ಬರದೇ ಹೋದರೆ, ಅದು ಕ್ರಿಯಾಕರ್ಮಗಳಲ್ಲಿರುವ ದೋಷವೆಂದೇ ಆಗುವುದರಿಂದ, ಕೊನೆಗೂ ಒಂದು ಆಚಾರದ telos ಅಥವಾ ಉದ್ದೇಶವನ್ನು ಹೇಳುವಾಗ ನಮ್ಮ ಗಮನ ಇರುವುದು ಆಚಾರಗಳ ಕುರಿತೇ ಹೊರತು ಫಲಗಳ ಕುರಿತಲ್ಲ. ನಮ್ಮ ಆಸೆ ಫಲಗಳ ಬಗ್ಗೆ ಇರಬಹುದು, ಆದರೆ ಗಮನವೆಲ್ಲಾ ಕರ್ಮಗಳ ಮೇಲೆಯೇ ಸರಿ. ಎರಡನೆಯದು, ಕೆಲವು ಸರಳ ಉದಾಹರಣೆಗಳ ಆಚೆಗೆ telos ಅಥವಾ ಆಚಾರಗಳ ಉದ್ದೇಶಗಳನ್ನು ಹೀಗೆ ಬಾಹ್ಯವಾಗಿ ನಿರೂಪಿಸುವುದು ದುಸ್ತರ. ಉದಾಹರಣೆಗೆ, ವಿಜ್ಞಾನಿಯ telos ಏನು ಎನ್ನುವ ಪ್ರಶ್ನೆಗೆ ಏನು ಉತ್ತರ ಹೇಳುವುದು? ಒಳ್ಳೆಯ ವೈಜ್ಞಾನಿಕವಾದ ಸಿದ್ಧಾಂತಗಳನ್ನು ಕಟ್ಟುವುದು ಎಂದು ಬೇಕಾದರೆ ಹೇಳಬಹುದು. ಆದರೆ, ಒಳ್ಳೆಯ ವೈಜ್ಞಾನಿಕ ಸಿದ್ಧಾಂತ ಎಂದರೆ ಯಾವುದು? ಅದು ಹೇಗಿರುತ್ತದೆ? ಈ ಪ್ರಶ್ನೆಗೆ ವಿಜ್ಞಾನದ ಕ್ರಿಯಾಕರ್ಮಗಳ ಆಚೆ, ಅಥವಾ ಆ ಕ್ರಿಯಾಕರ್ಮಗಳಿಗೆ ಪೂರ್ವದಲ್ಲೇ ಒಂದು ಉತ್ತರ ಇರಲು ಸಾಧ್ಯವಿಲ್ಲ. ಇದ್ದರೂ, ಅಂತಹ ಉತ್ತರಗಳು ವಿಜ್ಞಾನದ ಪ್ರಕ್ರಿಯೆಯ ಒಳಗೇ ಬೆಳೆಯುತ್ತಾ ಬದಲಾಗುತ್ತಾ ಇರುತ್ತವೆ. ಒಂದು ಮಟ್ಟದ ಸಂಕೀರ್ಣತೆಯನ್ನು ಮುಟ್ಟಿರುವ ಯಾವ ಆಚಾರವೇ ಆಗಲಿ, ಅದರ ಉದ್ದೇಶಗಳನ್ನು ಹೀಗೆ ಬಾಹ್ಯ ಮಾಪನಗಳನ್ನು ಬಳಸಿ ಹೇಳಲು ಬರುವುದಿಲ್ಲ. ಒಂದು ಚೂರಿಯ ಕೆಲಸ ಚೆನ್ನಾಗಿ ಕತ್ತರಿಸುವುದು ಮತ್ತು ಒಬ್ಬ ಸಂಗೀತಗಾರನ ಕೆಲಸ ಚೆನ್ನಾಗಿ ಹಾಡುವುದು ಎಂದು ಹೇಳಬಹುದು. ಆದರೆ, ಇಂತಹ ಬಿಡಿಬಿಡಿಯಾದ ಸರಳ ಉದಾಹರಣೆಗಳನ್ನು ಬಿಟ್ಟು ಮುಂದಕ್ಕೆ ಹೋದಂತೆಲ್ಲಾ ಈ ರೀತಿಯ ಉತ್ತರ ಕಷ್ಟಸಾಧ್ಯವಾಗುತ್ತಾ ಹೋಗುತ್ತದೆ. ಕೊನೆಗೆ, ಕೆಲವು ರೀತಿಯ ವಿಶಿಷ್ಟ ಕ್ರಿಯೆಗಳಲ್ಲಿ ಅಂತಹ ಯಾವ ಬಾಹ್ಯ ಉದ್ದೇಶವನ್ನೂ ಸೂಚಿಸುವುದಕ್ಕೆ ಸಾಧ್ಯವೇ ಇಲ್ಲ. ಹಾಡುವುದರ ಉದ್ದೇಶ ಏನು ಎಂದರೆ ಹಾಡುವುದಷ್ಟೆ, ಎಂದು ಹೇಳಬಹುದು. ಇಂತಹ ಆಚಾರಗಳು ಇನ್ನೊಂದು ಬೇರೆಯದ್ದೇ ಮಟ್ಟದ ಪ್ರಶ್ನೆಗಳನ್ನು ಎತ್ತುತ್ತವೆ. 

ಇದರಲ್ಲಿ ಎರಡು ವಿಚಾರಗಳನ್ನು ಗಮನಿಸಬೇಕು. ಮೊದಲನೆಯದು, ಒಂದು ಆಚಾರದ ಪರಿಕಲ್ಪನೆ ಆ ಆಚಾರದ ವಿವರಣೆಯ ಪೂರ್ವದಲ್ಲೇ ಅದರೊಳಗೆ ಹಾಸುಹೊಕ್ಕಾಗಿರುತ್ತದೆ. ವಿಜ್ಞಾನವಾಗಲೀ ಅಥವಾ ಹಬ್ಬಹರಿದಿನಗಳ ಆಚಾರವಾಗಲೀ, ಅದನ್ನು ವಿವರಿಸುವುದಕ್ಕೆ ಆ ಆಚಾರವೇನು ಎನ್ನುವ ಒಂದು ಪರಿಕಲ್ಪನೆ ಬೇಕಾಗುತ್ತದೆ. ಅಂತಹ ಪರಿಕಲ್ಪನೆ ಬರುವುದು ಆ ನಿರ್ದಿಷ್ಟ ಆಚಾರದಿಂದಲೇ ಹೊರತು ಅದರ ಹೊರಗಿನಿಂದಲ್ಲ. ಆಚಾರದ ಕುರಿತ ಈ ವಿವರವನ್ನು ಅರ್ಥಮಾಡಿಕೊಳ್ಳಲು ವಸ್ತುಗಳ ಕುರಿತ ವಿವರದೊಂದಿಗೆ ಇದನ್ನು ತಾಳೆ ಮಾಡಬಹುದು. ವಸ್ತುಗಳ ಕುರಿತ ಪರಿಕಲ್ಪನೆ ವಸ್ತುಗಳಿಂದಲೇ ಬರುವಂಥದಲ್ಲ. ಅದು ಯಾವುದೋ ಒಂದು ಆಚಾರದ ಭಾಗವಾಗಿ ಬರುವಂಥದ್ದು. ಉದಾಹರಣೆಗೆ, ಈ ಮರ ಔಷಧೀಯ ಸಸ್ಯವೇ ಅಥವಾ ನಿರ್ಮಾಣಕಾಮಗಾರಿಗೆ ಬಳಸುವ ಮರಮುಟ್ಟುಗಳೇ ಎನ್ನುವ ವ್ಯತ್ಯಾಸ ಆ ಮರದೊಳಗೆಯೇ ಇಲ್ಲ. ಅದನ್ನು ಬಳಸುವ ವೈದ್ಯರ ಆಚಾರಗಳು ಅಥವಾ ಬಡಗಿಗಳ ಆಚಾರಗಳ ಮೂಲಕ ಇದು ತಿಳಿವಿಗೆ ಬರುತ್ತದೆ. ಆದರೆ, ವೈದ್ಯಕೀಯ ಅಥವಾ ಬಡಗಿಗಳ ಆಚಾರಗಳನ್ನು ಹೀಗೆ ಇನ್ನಾವುದೋ ಪರಿಕಲ್ಪನೆಯಿಂದ ಗುರುತಿಸಲು ಬರುವುದಿಲ್ಲ. ಮೊದಲು ಔಷಧೀಯ ಸಸ್ಯ, ಆಮೇಲೆ ವೈದ್ಯಕೀಯ ಎನ್ನುವುದು ಸರಿಯಲ್ಲ. ಮೊದಲು ವೈದ್ಯಕೀಯ ಎನ್ನುವ ಆಚಾರ. ಅದರೊಳಗೆ ಔಷಧೀಯ ಮತ್ತು ಔಷಧೀಯವಲ್ಲದ ಸಸ್ಯಗಳು ಎನ್ನುವ ಭೇದ. ಆಚಾರಗಳ ಹೊರಗಿನಿಂದ ಒಂದು ಆಚಾರವನ್ನು ವಿವರಿಸಲು ಸಾಧ್ಯವಿಲ್ಲ. 

ಎರಡನೆಯದು, ಇದರ ಪರಿಣಾಮವಾಗಿ ಹುಟ್ಟುವ ಇನ್ನೊಂದು ಲಕ್ಷಣ. ಆಚಾರಗಳ ಕುರಿತು ನಾವು ಕೇಳುವ ಕೆಲವು ಪ್ರಶ್ನೆಗಳು ಆ ಆಚಾರದ ಆಂತರಿಕ ವ್ಯವಸ್ಥೆಯ ಭಾಗವಾಗಿಲ್ಲದೇ ಇರಲೂ ಸಾಧ್ಯ. ಅಂಥ ಪ್ರಶ್ನೆಗಳನ್ನು ನಾವು ಕೇಳಬಹುದಾದರೂ ಆಚಾರದ ಇರುವಿಕೆ ಮತ್ತು ಬೆಳವಣಿಗೆಯ ದೃಷ್ಟಿಯಿಂದ ಅವು ಅಪ್ರಸ್ತುತ. ಇತ್ತೀಚೆಗೆ, ಹಲವರು ಕರ್ಣಾಟಕ ಶಾಸ್ತ್ರೀಯ ಸಂಗೀತದಲ್ಲಿ ಕೆಲವೇ ಕೆಲವು ಜಾತಿಗಳು ಪ್ರಾತಿನಿಧ್ಯ ಪಡೆದಿವೆ ಎನ್ನುವ ವಾದವನ್ನು ಮಾಡುತ್ತಿರುವುದನ್ನು ನೋಡಿದ್ದೇವೆ. ಮೊದಲ ನೋಟಕ್ಕೆ ಆ ವಾದ ಸರಿ ಎನ್ನುವಂತಿದೆ. ಒಂದು ಸಂಪ್ರದಾಯ ಕೇವಲ ಒಂದೇ ಜಾತಿಯವರಿಗೆ ಯಾಕೆ ಸೀಮಿತವಾಗಿರಬೇಕು ಎನ್ನುವ ಪ್ರಶ್ನೆ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮುಖ್ಯವೆಂದೇ ತೋರುತ್ತದೆ. ಆದರೆ, ಒಂದು ಆಚಾರದ ದೃಷ್ಟಿಯಿಂದ ಅದು ಅಪ್ರಸ್ತುತವಾದ ಪ್ರಶ್ನೆಯೇ. ಯಾಕೆ ಕರಾವಳಿ-ಮಲೆನಾಡಿನ ಅಡಿಕೆ ಬೆಳೆಗಾರರೇ ಹೆಚ್ಚಾಗಿ ಯಕ್ಷಗಾನ ತಾಳಮದ್ದಲೆ ಮಾಡುತ್ತಾರೆ, ಯಾಕೆ ರಾಜಸ್ಥಾನದ ಮಾರವಾಡಿಗಳೇ ಎಲ್ಲಾ ದೊಡ್ಡ ಶಹರಗಳಲ್ಲೂ ಲೇವಾದೇವಿಯ ಕೆಲಸ ಮಾಡುತ್ತಾರೆ ಎನ್ನುವುದೆಲ್ಲಾ ಆಯಾ ಆಚಾರಗಳಿಗೆ ಹೊರತಾದ ಪ್ರಶ್ನೆಗಳು. ಇವಕ್ಕೆ ಉತ್ತರವಿಲ್ಲ ಎಂದಲ್ಲ. ಬೇಕಾದರೆ, ಒಂದು ಸಮಾಜಶಾಸ್ತ್ರೀಯವಾದ ಉತ್ತರವನ್ನು ಹುಡುಕಿ ಹೇಳಬಹುದು. ಆದರೆ ಅದರಲ್ಲಿ ಮುಖ್ಯವಾಗಿ ಆಗುತ್ತಿರುವುದು ಇನ್ನೇನೋ ಒಂದು ರೀತಿಯ ಬದಲಾವಣೆ. ಯಕ್ಷಗಾನವನ್ನು ಒಂದು ಭೋಗ್ಯವಾಗಿ ನೋಡುವುದಿಲ್ಲ. ಅದನ್ನೊಂದು ಆಚಾರವಾಗಿ ನೋಡಲಾಗುತ್ತದೆ. ಹಾಗಾಗಿಯೇ, ಅದರ ಕುರಿತು ಯಾಕೆ ಕರಾವಳಿ-ಮಲೆನಾಡಿನವರೇ ಅದನ್ನು ಹೆಚ್ಚಾಗಿ ಆಡುತ್ತಾರೆ ಎನ್ನುವ ಪ್ರಶ್ನೆಯನ್ನು ನಾವು ಕೇಳುವುದಿಲ್ಲ. ಆಚಾರವೆಂದು ಪರಿಗಣಿತವಾಗುವ ಯಾವುದರ ಕುರಿತೂ ಸಾಮಾನ್ಯವಾಗಿ ಇಂತಹ ಬಾಹ್ಯ ಪ್ರಶ್ನೆಗಳನ್ನು ಕೇಳುವುದಿಲ್ಲ. ಯಾಕೆ ಈ ಜಾತಿಯವರೇ ಮೀನುಗಾರಿಕೆ ಮಾಡುತ್ತಾರೆ, ಯಾಕೆ ಆ ಪ್ರದೇಶದವರೇ ಕಾಳಿಪೂಜೆ ಮಾಡುತ್ತಾರೆ, ಇತ್ಯಾದಿ. ಅದೇ, ಕರ್ಣಾಟಕ ಶಾಸ್ತ್ರೀಯ ಸಂಗೀತ, ಈಗ ಅದರಲ್ಲಿರುವ ಹಣದ ಕಾರಣದಿಂದಲೋ, ಖ್ಯಾತಿಯ ಕಾರಣದಿಂದಲೋ, ಒಂದು ಆಚಾರವಾಗಿ ಪರಿಗಣಿತವಾಗುವ ಬದಲು ಒಂದು ಭೋಗ್ಯವಾಗಿ ಪರಿಗಣಿತವಾಗುತ್ತಿದೆ. ಹಾಗಾಗಿ, ಯಾವ ಜಾತಿಯವರು ಇದರಲ್ಲಿ ಇದ್ದಾರೆ ಅಥವಾ ಇಲ್ಲ ಎನ್ನುವ ಪ್ರಶ್ನೆ ಮುಖ್ಯವೆಂದು ನಮಗೆ ಅನ್ನಿಸುತ್ತದೆ. ಕರ್ಣಾಟಕ ಸಂಗೀತದ ನಿಜವಾದ ಸಮಸ್ಯೆ ಯಾವ ಜಾತಿಯವರು ಇದನ್ನು ಹಾಡುತ್ತಾರೆ, ಯಾರು ಹಾಡುವುದಿಲ್ಲ ಎಂದಲ್ಲ. ಒಂದು ಆಚಾರವಾಗಿ ಪರಿಗಣಿತವಾಗುತ್ತಿದ್ದದ್ದು ಅದು ಯಾವಾಗಿನಿಂದ ಒಂದು ಭೋಗ್ಯವಾಗಿ ಪರಿಗಣಿತವಾಗುವುದಕ್ಕೆ ಮೊದಲಾಯಿತು ಎನ್ನುವುದು. 

ಇದರಲ್ಲಿ ಒಂದು ವ್ಯತ್ಯಾಸ ಗಮನಿಸಬೇಕು. ಯಾಕೆ ಯಾವುದೋ ಒಂದು ಜಾತಿಯವರೇ ಒಂದು ಹೇಯ ಕೆಲಸವನ್ನು ಮಾಡಬೇಕು, ಉದಾಹರಣೆಗೆ ಯಾಕೆ ಭಂಗಿಗಳೇ ಇಂದೂ ಹೆಚ್ಚಾಗಿ ಒಳಚರಂಡಿಯನ್ನು ಶುಚಿಮಾಡುವ ಕೆಲಸ ಮಾಡಬೇಕು ಎನ್ನುವ ಪ್ರಶ್ನೆಗೂ ನಾವು ಕೇಳುತ್ತಿರುವ ಪ್ರಶ್ನೆಗೂ ಒಂದು ವ್ಯತ್ಯಾಸವಿದೆ. ಒಳಚರಂಡಿ ಶುಚಿ ಮಾಡುವುದನ್ನು ಒಂದು ಆಚಾರವೆಂದು ಸಾಮಾನ್ಯವಾಗಿ ನಾವು ಪರಿಗಣಿಸುವುದಿಲ್ಲ. (ಆ ಕೆಲಸವನ್ನು ಅದರ ತಜ್ಞತೆಯ ದೃಷ್ಟಿಯಿಂದ ನೋಡಬೇಕಾದ ಸಂದರ್ಭದಲ್ಲಿ ಹಾಗೆ ಪರಿಗಣಿಸುವುದು ಸಾಧ್ಯವಿದೆ). ಅದು ಒಂದು ಅನಿವಾರ್ಯದ ಅಶುಚಿಯ ಕೆಲಸ. ಉಳ್ಳವರು ಯಾರೂ ಇದನ್ನು ಮಾಡುವುದೂ ಇಲ್ಲ. ಹಾಗೆಯೇ, ಇದನ್ನು ಮಾಡುವವರನ್ನು ಬಹಳ ಹೀನಾಯವಾಗಿಯೇ ನಡೆಸಿಕೊಳ್ಳುತ್ತಾರೆ. ಇದರ ವಿವರಗಳು ಎಷ್ಟೇ ಸಂಕೀರ್ಣವಾಗಿದ್ದರೂ, ಇಂತಹ ಅಮಾನುಷ ಸ್ಥಿತಿಗತಿಗಳಿಗೆ ಒಂದು ನೇರವಾದ ಸಮಾಜಶಾಸ್ತ್ರೀಯವಾದ ಉತ್ತರವಿದೆ. ಅದೇನೆಂದರೆ, ಕೆಲವರ ಸಾಂದರ್ಭಿಕ ದುಸ್ಥಿತಿಯನ್ನು ಮಿಕ್ಕವರು ಆದಷ್ಟೂ ತಮ್ಮ ಒಳಿತಿಗೆ ಬಳಸಿಕೊಳ್ಳಲು ನೋಡುತ್ತಾರೆ, ಮತ್ತು ಸಾಧ್ಯವಾದರೆ, ಆ ದುಸ್ಥಿತಿ ಇನ್ನೂ ಮುಂದುವರಿಯಲು ಬಿಡುತ್ತಾರೆ. ಆದರೆ, ನಾನು ಹೇಳುತ್ತಿರುವ ಆಚಾರದ ವಿಷಯ ಈ ರೀತಿಯದ್ದಲ್ಲ. ಒಂದು ಹೇಯ ಕೆಲಸವನ್ನು ಇವರೊಬ್ಬರೇ ಏಕೆ ಮಾಡುತ್ತಿದ್ದಾರೆ ಎನ್ನುವುದೂ ಮತ್ತು ಒಂದು ಪ್ರೇಯ ಕೆಲಸವನ್ನು ಅವರೊಬ್ಬರೇ ಯಾಕೆ ಮಾಡುತ್ತಿದ್ದಾರೆ ಎನ್ನುವುದು ಎರಡೂ ಒಂದೇ ರೀತಿಯ ಪ್ರಶ್ನೆಗಳಲ್ಲ. ಇದರಲ್ಲಿ ಮೊದಲನೆಯದು, ಸಾಮಾಜಿಕ ಇತಿಮಿತಿಗಳಿಗೆ ಸಂಬಂಧಿಸಿದ್ದು. ಎರಡನೆಯದು, ಆಚಾರಗಳ ಆಂತರಿಕ ವಿನ್ಯಾಸಕ್ಕೆ ಸಂಬಂಧಿಸಿದ್ದು.   

-೬-

ಹಲವರು ವಿದ್ವಾಂಸರು ಗುರುತಿಸಿರುವಂತೆ ಆಚಾರಗಳ ಲಕ್ಷಣವೇ ಅದರ ಒಳಹೆಣಿಗೆಯ ಲಕ್ಷಣ, ಅಥವಾ recursive ಆಗಿರುವ ಗುಣ. ಅದರರ್ಥ, ಒಂದು ಆಚಾರ ಹೆಚ್ಚು ಸಂಕೀರ್ಣವಾದಂತೆಲ್ಲಾ, ಅದರದ್ದೇ ಅಂಶಗಳು ಪುನಃ ಪುನಃ ಬೇರೆ ಬೇರೆ ಮಟ್ಟದಲ್ಲಿ ಕಾಣಿಸಿಕೊಳ್ಳುತ್ತದೆ. ಭಾಷಾಶಾಸ್ತ್ರಜ್ಞರು ವಾಕ್ಯಗಳ ಕುರಿತು ಹೇಳುವಂತೆ, ಮತ್ತು ಅದನ್ನು ಬಳಸಿ ಫ್ರಿಟ್ಸ್ ಸ್ಟಾಲ್ ಯಜ್ಞದ ಕುರಿತು ಹೇಳುವಂತೆ, ಎಲ್ಲಾ ಆಚಾರಗಳ ಬಗೆಗೂ ಇದನ್ನು ಹೇಳಬಹುದು. ಸಂಗೀತ ಕಚೇರಿಯ ಒಂದು ಉದಾಹರಣೆಯ ಮೂಲಕ ಇದನ್ನು ಗಮನಿಸಬಹುದು. ಒಂದು ರಾಗದ ಲಕ್ಷಣವನ್ನು ಹೇಳುವ ಅದರ ಆರೋಹಣ ಅವರೋಹಣ ಸ್ವರಗಳಿವೆ. ಇದು ಅತ್ಯಂತ ಸರಳ ಮಟ್ಟ. ಈ ಸ್ವರಗಳ ಇನ್ನೊಂದು ಸ್ವಲ್ಪ ಹೆಚ್ಚು ಸಂಕೀರ್ಣವಾದ ವಿನ್ಯಾಸ ಆ ರಾಗದ ಅಲಂಕಾರ ಮತ್ತು ಲಕ್ಷಣ ಗೀತೆಗಳನ್ನು ಹಾಡುವಾಗ ಕಾಣಿಸುತ್ತದೆ. ಈ ಸಂಕೀರ್ಣ ವಿನ್ಯಾಸದ ಇನ್ನೂ ಸಂಕೀರ್ಣ ರೂಪ ಒಂದು ರಾಗವಿಸ್ತಾರದ ಆಲಾಪನೆಯನ್ನೋ ಅಥವಾ ಕೃತಿಯನ್ನೋ ಹಾಡುವಾಗ ಕಾಣಿಸುತ್ತದೆ. ಒಟ್ಟಾರೆಯಾಗಿ ಒಂದು ಆಚಾರದ ಸಂಕೀರ್ಣತೆ ವಿಕಸಿತವಾಗುವುದು ಇಂತಹ ಒಳಹೆಣಿಗೆಯ ರೂಪಗಳಿಂದ. ವಾಸ್ತುಶಿಲ್ಪದಲ್ಲೂ, ಹಾಗೆಯೇ ಸಾಫ್ಟ್‌‌ವೇರ್ ಬರೆಯುವುದರಲ್ಲೂ ಇದು ನಿಜ. ಇದರ ಒಂದು ಪರಿಣಾಮವನ್ನೂ ಗಮನಿಸಬೇಕು. ಒಂದು ಕ್ರಿಯೆಯಲ್ಲಿ ಹಲವು ಮಟ್ಟದ ತಾರ್ಕಿಕ ಶ್ರೇಣಿಗಳಿರುತ್ತವೆ. ಕೇವಲ ತಜ್ಞತೆಯ ಕಾರಣದಿಂದಾಗುವ ಶ್ರೇಣಿಗಳಲ್ಲದೇ ಈ ತಾರ್ಕಿಕ ಶ್ರೇಣಿಗಳನ್ನೂ ಗಮನಿಸುವುದು ಒಂದು ಕ್ರಿಯೆಯನ್ನು ಕಲಿಯುವಲ್ಲಿ ಇರುವ ಅತ್ಯಂತ ಕಷ್ಟದ ಭಾಗ. ಉದಾಹರಣೆಗೆ, ವಿದ್ಯಾರ್ಥಿಗಳಿಗೆ ಪಾಠ ಮಾಡುವ ಕೌಶಲ್ಯ ಮತ್ತು ಬೋಧಕರಿಗೇ ಪಾಠ ಮಾಡುವ ಕೌಶಲ್ಯ. ಇದರಲ್ಲಿ ಎರಡನೆಯದ್ದು ಮೊದಲ ರೀತಿಯ ಕೌಶಲ್ಯಕ್ಕಿಂತ ತಾರ್ಕಿಕವಾಗಿ ಮೇಲಿನ ಮಟ್ಟದ್ದು. ಅದರ ಕೆಳಗಿನ ಮಟ್ಟದ ಹಲವು ಅಂಶಗಳನ್ನು ಒಳಗೊಂಡಿರುವಂಥದ್ದು. ಇಲ್ಲೆಲ್ಲಾ ಮುಖ್ಯವಾದ ವಿಚಾರವೇನೆಂದರೆ, ಆಚಾರಕೇಂದ್ರಿತ ಚಿಂತನೆ ಬೆಳೆಯುವುದು ಇನ್ನೂ ಹೆಚ್ಚು ಹೆಚ್ಚು ಸೂಕ್ಷ್ಮವಾದ ಆಂತರಿಕ ವ್ಯತ್ಯಾಸಗಳನ್ನು ಮಾಡುತ್ತಾ. ಒಂದು ರಾಗದ ಯಾವುದೋ ಒಂದು ಸ್ವರವನ್ನು ಸ್ವಲ್ಪ ಲಂಬವಾಗಿ ಎಳೆದರೆ ಅದು ಇನ್ನೊಂದೇ ರಾಗ. ಈ ವ್ಯತ್ಯಾಸವನ್ನು ಗುರುತಿಸಲು, ಹಾಡಲು ಸಾಧ್ಯವಿರುವವನು ನಿಜವಾದ ಕಲಾವಿದ. ಹಾಗೆಯೇ, ಯಾವುದೋ ಒಂದು ದೇಹ ಪ್ರಕೃತಿಯ ವ್ಯಕ್ತಿಗೆ ಕೊಡುವ ಔಷಧಿ ಅದೇ ಕಾಯಿಲೆಯ ಇನ್ನೊಂದು ದೇಹ ಪ್ರಕೃತಿಯವರಿಗೆ ನಿಷಿದ್ಧ. ಒಟ್ಟಾರೆ ಆಚಾರಕೇಂದ್ರಿತ ಚಿಂತನೆ ಬೆಳೆಯುವುದು ಈ ರೀತಿಯ ಸಂಕೀರ್ಣವಾಗುತ್ತಾ ಹೋಗುವ ಆಂತರಿಕ ಭೇದಗಳ ಒಳಹೆಣಿಗೆಯ ಕ್ರಮದಿಂದ. 

ಆದರೆ ಭೋಗ್ಯಕೇಂದ್ರಿತ ಚಿಂತನೆ ಇದರ ವಿರುದ್ಧ ದಿಕ್ಕಿನಲ್ಲಿ ಬೆಳೆಯುವಂಥದ್ದು. ಅದರ ಗುರಿ ಇನ್ನೂ ಹೆಚ್ಚು ಹೆಚ್ಚು ಸಂಗತಿಗಳನ್ನು ಒಂದೇ ತತ್ವದ ಅಡಿಯಲ್ಲಿ ತರುವ ಸಾಧಾರಣೀಕರಣದ ಕ್ರಮ. ಇದರಲ್ಲಿ ಯಾವ ತತ್ವ ಮತ್ತಿನ್ನಾವ ತತ್ವಕ್ಕೆ ಅಡಿಯಾಳಾಗಿದೆ ಅಥವಾ ಆಗಿಲ್ಲ ಎಂದು ನೋಡುವ ಕ್ರಮ ಮುಖ್ಯವಾದದ್ದು. ಉದಾಹರಣೆಗೆ, ಒಬ್ಬ ವ್ಯಕ್ತಿ ತನ್ನ ಜಾತಿಯಿಂದ ಹಿಂದುಳಿದವನು, ಮತ್ತೊಬ್ಬ ತನ್ನ ಆರ್ಥಿಕ ಸ್ಥಿತಿಯ ಕಾರಣ ಹಿಂದುಳಿದವನು. ಈ ಎರಡು ರೀತಿಯ ಹಿಂದುಳಿಯುವಿಕೆಯಲ್ಲಿ ಯಾವ ರೀತಿಯ ಸಾಮಾಜಿಕ ನ್ಯಾಯದ ತತ್ವ ಇನ್ನು ಯಾವ ರೀತಿಯ ತತ್ವಕ್ಕೆ ಅಡಿಯಾಳಾಗಿದೆ ಎಂದು ತಿಳಿಯುವುದು ಮುಖ್ಯ. ಮೊದಲು ಜಾತಿ-ಆಧಾರಿತವಾಗಿ ಸಾಮಾಜಿಕ ನ್ಯಾಯವನ್ನು ಪರಿಗಣಿಸಬೇಕೋ ಅಥವಾ ಆರ್ಥಿಕ ಸ್ಥಿತಿಯ ಕಾರಣದಿಂದಾಗಿ ಪರಿಗಣಿಸಬೇಕೋ? ಎರಡರಲ್ಲಿ ಒಂದು ಎಂದರೆ ಏಕೆ ಆ ಕ್ರಮ? ಇಂತಹ ಪ್ರಶ್ನೆಗಳು ಇಲ್ಲಿ ಮುಖ್ಯವಾಗುತ್ತವೆ. ಇದರಲ್ಲಿ ಯಾವುದು ಮುಖ್ಯ ಎನ್ನುವುದು ನನ್ನ ಪ್ರಶ್ನೆಯಲ್ಲ. ಬದಲಾಗಿ ಈ ಚಿಂತನೆ ಬೆಳೆಯುವುದು ಯಾವ ಕ್ರಮದಲ್ಲಿ ಎನ್ನುವುದು ಇಲ್ಲಿನ ಪ್ರಶ್ನೆ. 

-೭-

ಆಚಾರಗಳನ್ನು ಕುರಿತು ಚಿಂತಿಸಲು ಆಚಾರಗಳೇ ಸಾಧನ. ಒಂದು ರೋಗಕ್ಕೆ ಸರಿಯಾದ ಪರಿಹಾರ ಯಾವುದು ಎನ್ನುವುದು ಆ ರೋಗವನ್ನು ವಾಸಿ ಮಾಡುವ ಭಾಗವಾಗಿಯೇ ತಿಳಿದುಕೊಳ್ಳುವುದು. ಒಳ್ಳೆಯ ಕ್ರೀಡಾಪಟು ಆಗುವುದು ಹೇಗೆ ಎನ್ನುವುದನ್ನೂ ಆ ಕ್ರೀಡೆಯ ಪ್ರಯೋಗದ ಮುಖಾಂತರವೇ ಕಲಿಯುವುದು. ಇಲ್ಲಿ ಸೈದ್ಧಾಂತಿಕ ಪರಿಕಲ್ಪನೆಗಳಿಗೆ ಪ್ರಾಮುಖ್ಯತೆ ಇದ್ದರೂ, ಅದು ಪ್ರಾಯೋಗಿಕ ಆಚಾರಗಳ ಭಾಗವಾಗಿಯೇ ಬರುವಂಥದ್ದು. ಜ್ವರಕ್ಕೆ ಈ ನಿರ್ದಿಷ್ಟ ಮಾತ್ರೆ ಎನ್ನುವ ಮಾಹಿತಿ ಎಲ್ಲರಿಗೂ ಗೊತ್ತು. ಅಕಸ್ಮಾತ್ ಆ ಮಾತ್ರೆಯಿಂದ ಜ್ವರ ವಾಸಿಯಾಗಲಿಲ್ಲ ಎಂದರೆ ಏನು ಮಾಡುವುದು? ಅದಕ್ಕೆ ಇನ್ನೊಂದು ಮಾಹಿತಿ ಅಥವಾ ಪರಿಕಲ್ಪನೆ ಇದ್ದರೆ ಸಾಕಾಗದು. ಆಗ ವೈದ್ಯಕೀಯದ ಅನುಭವ ಬೇಕು. ಇನ್ನೊಂದು ಉದಾಹರಣೆ, ಈ-ಮೇಲ್ ಪ್ರೋಗ್ರಾಮ್‌ಗಳನ್ನು ಬರೆಯುವವರದ್ದು. ಕಛೇರಿಯ ಕಾರಕೂನರ ಕಡತ ವಿಲೇವಾರಿಯ ಕೆಲಸವೇ ಇಂತಹ ಪ್ರೋಗ್ರಾಮ್‌ಗಳಿಗೆ ಮೂಲಮಾದರಿ. ಅಥವಾ ಜಾಸ್ ಸಂಗೀತದ ಕ್ರಮದಿಂದ ಕಲಿಯುತ್ತಲೇ ಹಲವರು ಇಂದು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಫ್ಯೂಶನ್ ಪ್ರಯೋಗಗಳನ್ನು ಮಾಡುವುದು. ಇಲ್ಲಿ ಮೊದಲೇ ಹೇಳಿದ ಶ್ರೇಣೀಕರಣ ಮತ್ತು ವಿಭಾಗೀಕರಣದ ಜೊತೆಜೊತೆಗೇ ಈ ರೀತಿಯ ಪರಸ್ಪರ ಕೊಡುಕೊಳ್ಳುವಿಕೆ ಬಹಳ ಲೀಲಾಜಾಲವಾಗಿ ಆಗುವಂಥದ್ದು. 

ಭೋಗ್ಯಗಳ ಕುರಿತು ಚಿಂತಿಸಲು ಭೋಗ್ಯಗಳನ್ನೇ ಗಮನಿಸುವುದು ಸಾಧ್ಯವಿಲ್ಲ. ಭೋಗ್ಯಗಳ ಕುರಿತು ಚಿಂತಿಸುವುದಕ್ಕೆ ಒಂದು ರಾಶನಲ್ ಆದ ಪರಿಕಲ್ಪನೆಯ ಮೂಲಕ ಮಾತ್ರ ಸಾಧ್ಯ. ಯಾರಿಗೆ ಯಾವುದು ಎಷ್ಟು ಮತ್ತು ಯಾಕೆ ಎನ್ನುವಂಥ ಪ್ರಶ್ನೆಗಳಿಗೆ ಆ ನಿರ್ದಿಷ್ಟ ಭೋಗ್ಯಗಳಲ್ಲೇ ಉತ್ತರವಿಲ್ಲ. ಅದಕ್ಕೆ ಉತ್ತರವಿರುವುದು ನ್ಯಾಯದ ಕುರಿತ ನಮ್ಮ ಕಲ್ಪನೆಗಳಲ್ಲಿ. ಹಾಗಾಗಿಯೇ, ಭೋಗ್ಯಕೇಂದ್ರಿತವಾದ ಎಲ್ಲಾ ಚಿಂತನೆಗಳೂ ಒಂದಲ್ಲಾ ಒಂದು normative ಆದ, ಅಂದರೆ, ಒಂದು ಸಾರ್ವತ್ರಿಕ ನಿಯಮದ ಮಾದರಿಯಲ್ಲೇ ತನ್ನ ಚಿಂತನೆಗಳನ್ನು ಬೆಳೆಸಬೇಕು. ಈ ಚಿಂತನೆ ಮೇಲ್ಮುಖವಾದ ಏಕೀಕರಣದತ್ತ ಸಾಗುತ್ತದೆ. ಇಲ್ಲಿ ಸಂದರ್ಭನಿಷ್ಠವಾದ, ನಿರ್ದಿಷ್ಟ ನಿಯಮಗಳನ್ನು ಇನ್ನೂ ದೊಡ್ಡದೊಡ್ಡ ಸಾರ್ವತ್ರಿಕ ನಿಯಮಗಳ ಅಡಿಗೆ ಬರುವಂತೆ ಮಾಡುವುದು ಒಂದು ಕ್ರಮವಾದರೆ, ಆದಷ್ಟೂ ಸಾರ್ವತ್ರಿಕ ನಿಯಮಗಳನ್ನು ಬಳಸಿ ನಿರ್ದಿಷ್ಟ ಸಂಗತಿಗಳನ್ನು ವ್ಯಾಖ್ಯಾನಿಸುವುದು ಇನ್ನೊಂದು ಮಾದರಿ. ಆಚಾರಕೇಂದ್ರಿತ ಚಿಂತನೆ ಕೆಳಮುಖವಾಗಿ ವಿಸ್ತಾರ ಮತ್ತು ವಿಭೇದಗಳತ್ತ ಸಾಗುವಂಥದ್ದು. ಒಂದು ಕ್ರಿಯೆಯು ಇನ್ನೂ ಹೊಸಹೊಸ ಹಲವಾರು ಕ್ರಿಯೆಗಳನ್ನು ಹುಟ್ಟುಹಾಕುವುದು ಹೇಗೆ? ಮತ್ತು ಇಂತಹ ಹೊಸತನದ ನಡುವೆಯೂ ಇರುವ ಕ್ರಿಯೆಗಳ ಆಂತರಿಕ ವ್ಯವಸ್ಥೆಯನ್ನು ಕೆಡದಂತೆ ಕಾಪಿಡುವುದು ಹೇಗೆ? ಎನ್ನುವುದು ಇಲ್ಲಿರುವ ಮುಖ್ಯ ಪ್ರಶ್ನೆ. ಹಾಗಾಗಿಯೇ, ನಮಗೆ ಹಲವಾರು ಬಾರಿ ನಿರ್ದಿಷ್ಟ ಪರಂಪರೆಗಳು ಯಾವ ಅಂಶಗಳ ಕುರಿತು ಬದಲಾವಣೆಗೆ ತೆರೆದುಕೊಳ್ಳುತ್ತವೆ, ಮತ್ತು ಯಾವ ಅಂಶಗಳ ಕುರಿತು ಬದಲಾವಣೆಯನ್ನು ವಿರೋಧಿಸುತ್ತವೆ ಎಂದು ಮೊದಲೇ ಹೇಳುವುದು ಕಷ್ಟ. ಯಾವ ಅಂಶಗಳನ್ನು ಅವುಗಳ ಆಂತರಿಕ ವ್ಯವಸ್ಥೆಯ ಮುಖ್ಯ ಅಂಶಗಳು ಎಂದು ಅವು ಕಂಡುಕೊಳ್ಳುತ್ತವೆ ಎನ್ನುವುದು ಆ ಆಚಾರದ ಒಳಗಿನ ಪರಿಕಲ್ಪನೆಗಳಿಂದಲೇ ಸಿದ್ಧವಾಗುವಂಥದ್ದು. ನಾನು ಕ್ರಿಕೆಟ್ ಕಲಿಯುತ್ತಿದ್ದಾಗ ಒಂದು ಅಂತಾರಾಷ್ಟ್ರೀಯ ಆಟ ಕೇವಲ ಇಪ್ಪತ್ತು ಓವರ್‌ಗಳಷ್ಟೇ ಇದ್ದರೂ ನಡೆಯುತ್ತದೆ ಎನ್ನುವುದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲದಿದ್ದ ಮಾತು. ಆದರೆ ಇಂದು ಅದೇ ಕ್ರಿಕೆಟ್ಟಿನ ಅತ್ಯಂತ ಜನಪ್ರಿಯ ಆವೃತ್ತಿ. ಆದರೆ, ಕ್ರಿಕೆಟ್ ಬ್ಯಾಟಿನ ಗಾತ್ರ ಮತ್ತು ಭಾರದ ಮಿತಿಗಳು ಎಷ್ಟಿರಬೇಕು ಎನ್ನುವುದನ್ನು ಮಾತ್ರ ಅಂದಿನಿಂದ ಇಂದಿನವರೆಗೂ ಬಹಳ ಜತನದ ಮಡಿವಂತಿಕೆಯಿಂದ ಕಾಪಾಡಿಕೊಂಡು ಬರಲಾಗಿದೆ. ಇಲ್ಲಿ ಬದಲಾವಣೆಗಳು ಬಹಳ ನಿಧಾನವಾಗಿ ಅದೂ ಸ್ವಲ್ಪಸ್ವಲ್ಪವೇ ಪ್ರಮಾಣದಲ್ಲಿ ಆಗಿವೆ. ಮೇಲ್ನೋಟಕ್ಕೆ ಟೆಸ್ಟ್-ಕ್ರಿಕೆಟ್, ಒನ್-ಡೇ ಕ್ರಿಕೆಟ್ ಹಾಗೂ ಟ್ವೆಂಟಿ-ಟ್ವೆಂಟಿ ಕ್ರಿಕೆಟ್ ನಡುವೆ ಅಜಗಜಾಂತರ. ಅದರ ಬಗ್ಗೆ ಮಡಿವಂತಿಕೆ ಹೆಚ್ಚಿರಬೇಕಿತ್ತು. ಒಂದು ಬ್ಯಾಟು ಎಷ್ಟು ಗಾತ್ರ ಮತ್ತು ಭಾರದ್ದಾಗಿರಬಹುದು ಎನ್ನುವುದು ಒಂದು ಸಣ್ಣ ವಿಚಾರ. ಅದರ ಬಗ್ಗೆ ಕಡಿಮೆ ಮಡಿವಂತಿಕೆ ಇರಬೇಕಿತ್ತು. ಆದರೆ ವಾಸ್ತವದಲ್ಲಿ ಇದು ಹೀಗಿಲ್ಲ. ಯಾಕೆಂದರೆ, ಟೆಸ್ಟ್, ಒನ್-ಡೇ ಮತ್ತು ಟ್ವೆಂಟಿ-ಟ್ವೆಂಟಿ ಎಲ್ಲವೂ ತಮ್ಮತಮ್ಮಲ್ಲೇ ಎಷ್ಟೇ ಬೇರೆಬೇರೆಯಾಗಿದ್ದರೂ ಕ್ರಿಕೆಟ್ ಆಟದ ಆಂತರಿಕ ವಿನ್ಯಾಸವನ್ನು ಕಾಪಾಡುತ್ತವೆ. (ಯಾರ ಪ್ರಕಾರ ಇಂತಹ ಆಂತರಿಕ ವ್ಯತ್ಯಾಸವನ್ನು ಅವು ಕಾಪಾಡುವುದಿಲ್ಲವೋ ಅಂಥವರು ಸ್ವಾಭಾವಿಕವಾಗಿಯೇ ಟ್ವೆಂಟಿ-ಟ್ವೆಂಟಿಯನ್ನು ವಿರೋಧಿಸುವವರೇ ಆಗಿರುತ್ತಾರೆ). ಆದರೆ, ಬ್ಯಾಟಿನ ಗಾತ್ರ ಮತ್ತು ಭಾರ ಕ್ರಿಕೆಟ್ಟಿನ ಆಂತರಿಕ ವ್ಯತ್ಯಾಸದ ಮರ್ಮಸ್ಥಾನದಲ್ಲಿರುವ ಒಂದು ವಿಚಾರ. ಅದರಲ್ಲಿ ಕ್ರಿಕೆಟ್ ಯಾವ ರೀತಿಯ ಆಟ, ಮತ್ತು ಅಲ್ಲಿ ಯಾವ ರೀತಿಯ ಕೌಶಲವನ್ನು ದಾವೆಗೆ ಒಡ್ಡಲಾಗಿದೆ ಎನ್ನುವ ಮೂಲಭೂತ ಪ್ರಶ್ನೆಯೇ ಮುಖ್ಯವಾಗಿರುವುದು. ಹಾಗಾಗಿ ಇದರಲ್ಲಿ ರಾಜಿಯಾಗುವುದು ಸಲ್ಲ. ಆದರೆ, ಯಾವುದು ಹೀಗೆ ಆಂತರಿಕ ಪರಿಕಲ್ಪನೆ ಮತ್ತು ಯಾವುದು ಬಾಹ್ಯ ಪರಿಕಲ್ಪನೆ ಎನ್ನುವುದು ಆ ಆಚಾರಗಳ ಭಾಗವಾಗಿಯೇ ತಿಳಿಯುವಂಥದ್ದೆ ಹೊರತು ನೇರವಾಗಿ ತಿಳಿಯುವಂಥದ್ದಲ್ಲ. 

-೮-

ನಮ್ಮ ರಾಜಕೀಯ-ಸಾಮಾಜಿಕ ನೆಲೆಯಲ್ಲಿ ಭೋಗ್ಯಕೇಂದ್ರಿತ ಚಿಂತನೆಯ ಪ್ರಭಾವದಿಂದಾಗಿ, ಸಾರ್ವಜನಿಕ ಜೀವನದಲ್ಲಿ  ಅದೊಂದೇ ರೀತಿಯ ಚಿಂತನೆ ಇರುವುದು ಅಥವಾ ಅದೊಂದೇ ರೀತಿಯ ಚಿಂತನೆ ಸಾಧುವಾದದ್ದು ಎಂದು ಅನ್ನಿಸಿದರೆ ಆಶ್ಚರ್ಯವಿಲ್ಲ. ಆದರೆ ಅಂತಹ ಸಾರ್ವಜನಿಕ ವೈಚಾರಿಕತೆಯ ಕ್ರಮದಿಂದ ಹೊರಬಂದು ನೋಡಿದರೆ, ಮತ್ತು ನಿರ್ದಿಷ್ಟ ಆಚಾರಗಳ ಅಥವಾ ಕಾರ್ಯಕ್ಷೇತ್ರಗಳ ಒಳಗಿನಿಂದ ನೋಡಿದರೆ, ಆಚಾರಕೇಂದ್ರಿತ ಚಿಂತನೆಯೂ ಅಷ್ಟೇ ಮುಖ್ಯವಾದ, ಪ್ರಭಾವಶಾಲಿಯಾದ ರೀತಿಯಲ್ಲಿ ಅಸ್ತಿತ್ವದಲ್ಲಿದೆ ಎನ್ನುವುದು ನಮ್ಮ ಅನುಭವಕ್ಕೆ ಬರುತ್ತದೆ. ಆದರೆ, ಈ ಎರಡೂ ಚಿಂತನಾ ಕ್ರಮಗಳ ಒಂದು ಆಂತರಿಕ ಕಾರಣದಿಂದಾಗಿಯೇ, ಇದರಲ್ಲಿ ಭೋಗ್ಯಕೇಂದ್ರಿತ ಚಿಂತನೆ ಪ್ರಾಯೋಗಿಕವಾಗಿ ಮುಖ್ಯವೆಂದು ತಕ್ಷಣಕ್ಕೆ ತಿಳಿಯುವ ರೀತಿಯಲ್ಲಿಯೇ ಆಚಾರಕೇಂದ್ರಿತ ಚಿಂತನೆಯ ಪ್ರಾಯೋಗಿಕ ನೆಲೆ ನಮಗೆ ಸುಲಭವಾಗಿ ಕಾಣಿಸಿಕೊಳ್ಳುವುದಿಲ್ಲ. ಅದೇಕೆಂದರೆ, ಭೋಗ್ಯಕೇಂದ್ರಿತ ಚಿಂತನೆ ಸ್ವಾಭಾವಿಕವಾಗಿಯೇ ಚಾರಿತ್ರಿಕ-ವಿಮರ್ಶಾತ್ಮಕವಾದದ್ದು, ಅಂದರೆ, ಅದು ಗಮನಿಸುತ್ತಿರುವ ವಸ್ತುಪ್ರಪಂಚ ಈಗಾಗಲೇ ನಮಗೆ ರೂಢಿಯಾಗಿರುವಂಥದ್ದು ಮತ್ತು ಸುಲಭವಾಗಿ ಗೋಚರಿಸುವಂಥದ್ದು. ಆ ಪ್ರಪಂಚ ನಮ್ಮ ಗಮನಕ್ಕೆ ಬರುವುದು ಒಂದೋ ನಿರ್ದಿಷ್ಟ ತತ್ವಸೂತ್ರದ ಸಮರ್ಪಕವಾದ ಪಾಲನೆಯ ಅಥವಾ ಅದರ ಉಲ್ಲಂಘನೆಯ ಮೂಲಕ. ಹಾಗಾಗಿ ಭೋಗ್ಯಕೇಂದ್ರಿತ ಚಿಂತನೆ ವಾಚ್ಯವಾದದ್ದು, articulated ಎನ್ನುವ ಅರ್ಥದಲ್ಲಿ. ಆದರೆ ಆಚಾರಕೇಂದ್ರಿತ ಚಿಂತನೆಯಲ್ಲಿ ಇನ್ನೂ ಅಸ್ತಿತ್ವಕ್ಕೆ ತರಲು ಉದ್ದೇಶಿಸಿರುವ ಫಲವೊಂದರ ಕುರಿತು ಕಾಳಜಿ ಇದೆ. ಈ ಕಾಳಜಿ ನಮಗೆ ಸೂಚ್ಯವಾಗಿ ತೋರುವಂಥದ್ದೆ ವಿನಃ ವಾಚ್ಯವಾಗಿ ಇರುವುದಿಲ್ಲ. ಹೀಗಿರುವುದರಿಂದ, ವಾಚ್ಯ ನೆಲೆಯಲ್ಲಿ ನೋಡಿದರೆ, ಭೋಗ್ಯಕೇಂದ್ರಿತ ಚಿಂತನೆ ಯಾವಾಗಲೂ ಆಚಾರಕೇಂದ್ರಿತ ಚಿಂತನೆಯನ್ನು ಕಡೆಗಣಿಸಿ ಸಾಗುವಂತೆ ತೋರುತ್ತದೆ. ಆದರೆ, ಇನ್ನೊಂದು ರೀತಿಯಿಂದ ನೋಡಿದರೆ, ಆಚಾರಕೇಂದ್ರಿತ ಚಿಂತನೆ ನಮ್ಮ ಎಲ್ಲಾ ಕಾರ್ಯಕ್ಷೇತ್ರಗಳಲ್ಲೂ ಸೂಚ್ಯವಾಗಿ ಕೆಲಸಮಾಡುತ್ತಿರುತ್ತದೆ. 

ಭೋಗ್ಯಕೇಂದ್ರಿತ ಚಿಂತನೆಯ ಎದುರಿಗಿರುವ ಒಂದು ದೊಡ್ಡ ಸವಾಲು, ಇರುವ ಭೋಗ್ಯಗಳನ್ನು ಎಲ್ಲರಿಗೂ ನ್ಯಾಯಯುತವಾಗಿ ಹಂಚುವುದು ಹೇಗೆ ಎನ್ನುವುದು. ಅದೇ, ಆಚಾರಕೇಂದ್ರಿತ ಚಿಂತನೆಯ ಎದುರಿನ ಸವಾಲು, ಒಂದು ಆಚಾರದ ಆಂತರಿಕ ವಿನ್ಯಾಸ ಹಾಳಾಗದಂತೆ ಅದನ್ನು ಮುಂದುವರೆಸಿಕೊಂಡು ಹೋಗುವುದು ಹೇಗೆ ಎನ್ನುವುದು. ಈ ಎರಡರಲ್ಲಿ ಯಾವ ದೃಷ್ಟಿಕೋನವನ್ನು ಯಾವ ಸಂದರ್ಭದಲ್ಲಿ ಬಳಸುವುದು ತಪ್ಪಾಗುತ್ತದೆ ಎನ್ನುವುದನ್ನೂ ಗಮನಿಸಬೇಕು. ಕೆಲವು ಸಂಗತಿಗಳು ಪರಂಪರೆಯಿಂದ ಉಳಿದುಕೊಂಡು ಬರುವುದೇ ಒಂದು ದೊಡ್ಡ ಸವಾಲು. ಅಂತಹ ಪರಿಸ್ಥಿತಿಯಲ್ಲಿ ಅದರ ಫಲ ವಿಕ್ರಯ ಯಾವ ರೀತಿ ಇರಬೇಕು ಎನ್ನುವುದು ದೂರದ ಮಾತು. ಉದಾಹರಣೆಗೆ, ಯಾವುದೋ ಒಂದು ಅಪರೂಪದ ಕಲಾಪ್ರಕಾರ ಅಥವಾ ಕರಕುಶಲ ಕಲೆ. ಉದಾಹರಣೆಗೆ ಖಾದಿ ವಸ್ತ್ರ. ಅದು ನಮ್ಮ ಸಂದರ್ಭದಲ್ಲಿ ಜೀವಂತವಿರುವುದೇ ಒಂದು ದೊಡ್ಡ ವಿಷಯ. ಇನ್ನು ಅದಕ್ಕೆ ಭೋಗ್ಯಕೇಂದ್ರಿತ ಚಿಂತನೆಯ ಬಿಸಿಲನ್ನು ತಾಕಿಸಿದರೆ ಅದು ಉಳಿಯುವುದು ಅಷ್ಟರಲ್ಲೇ ಇದೆ. ಹಾಗೆಯೇ, ಇನ್ನು ಕೆಲವು ಸಂಗತಿಗಳು ಬಹಳ ವ್ಯವಸ್ಥಿತವಾಗಿ ತಮ್ಮ ಸಂದರ್ಭನಿಷ್ಠ ಮಿತಿಗಳನ್ನೂ ಮೀರಿ ಒಂದು ದೊಡ್ಡ ಮಟ್ಟದಲ್ಲಿ ಬೆಳೆದು ಹರಡಲು ಬೇಕಾದ abstraction ಅಥವಾ ಅಮೂರ್ತತೆಯನ್ನು ಪಡೆದುಕೊಂಡಿರುವಂಥವು. ಅವುಗಳ ಕುರಿತು ಆಚಾರಕೇಂದ್ರಿತ ಚಿಂತನೆಯ ಅತೀ ಕಾಳಜಿ ಅನಗತ್ಯವಾದದ್ದು. ಉದಾಹರಣೆಗೆ, ಮಾನ್ಯುಫಾಕ್ಚರಿಂಗ್ (ಕೈಗಾರಿಕಾ ಉತ್ಪಾದನೆ). ಪ್ರಪಂಚದ ಯಾವ ಕೈಗಾರಿಕೀಕೃತ ವ್ಯವಸ್ಥೆಯಲ್ಲೂ ಸುಮಾರು ಒಂದೇ ಗುಣಮಟ್ಟದ ವಸ್ತುಗಳನ್ನು ಉತ್ಪಾದಿಸುವುದು ಸಾಧ್ಯವಿದೆ. ಒಂದು ದೇಶದ ಸರಕು ಇನ್ನೊಂದು ದೇಶದಲ್ಲಿ ಉತ್ಪಾದಿತವಾಗಿ, ಮತ್ತೊಂದು ದೇಶದಲ್ಲಿ ಜೋಡಣೆಯಾಗಿ ಮಗದೊಂದು ದೇಶದಲ್ಲಿ ಪ್ಯಾಕ್ ಆಗುವ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಇಲ್ಲೆಲ್ಲಾ ಒಂದು ಕಾರ್ಯಕ್ಷೇತ್ರ ಮತ್ತು ಅದಕ್ಕೆ ಸಂಬಂಧಿಸಿದ ಆಚಾರಗಳು ಎಷ್ಟು ಸಮಾನವಾಗಿ, ವ್ಯವಸ್ಥಿತವಾಗಿ ರೂಪುಗೊಂಡಿವೆ ಎಂದರೆ, ಇದಕ್ಕೆ ಆಚಾರಕೇಂದ್ರಿತ ಚಿಂತನೆಯ ಸೂಕ್ಷ್ಮಗಳ ಅಗತ್ಯವಿಲ್ಲ. ಅಗತ್ಯವಿಲ್ಲ ಎಂದರೆ ಅರ್ಥ ಈ ಅಗತ್ಯ ಆಗಲೇ ಆ ಕಾರ್ಯಕ್ಷೇತ್ರದಲ್ಲಿ ಹಾಸುಹೊಕ್ಕಾಗಿದೆ ಎಂದಷ್ಟೆ. 

ಹೀಗೆ, ಎಲ್ಲಾ ಪರಂಪರೆಗಳೂ ತಮ್ಮ ಒಳವಿನ್ಯಾಸಗಳನ್ನು ಹೆಚ್ಚು ಅಮೂರ್ತ ಮತ್ತು ಸಂದರ್ಭಾತೀತವಾಗಿ ಮಾಡುವುದು ಹೇಗೆ ಎನ್ನುವುದರ ಕುರಿತು ಯಾವುದೋ ಒಂದು ಹಂತದಲ್ಲಿ ಚಿಂತಿಸಲು ತೊಡಗುವ ಸಾಧ್ಯತೆಯೂ ಇರುತ್ತದೆ. ಇವತ್ತು ಯೋಗ, ಸಾಫ್ಟ್‌ವೇರ್ ಮುಂತಾದವು ಅಂತಹ ಸಂದರ್ಭಾತೀತ ಮಟ್ಟಗಳನ್ನು ಮುಟ್ಟಿವೆ. ಪ್ರಪಂಚದ ಯಾವ ಭಾಗದಲ್ಲಾದರೂ ಸಾಫ್ಟ್‌ವೇರ್ ಬರೆದರೆ, ಅದು ಒಂದೇ ರೀತಿಯ, ಒಂದೇ ಗುಣಮಟ್ಟದ್ದಾಗಿ ಇರಬೇಕು ಎನ್ನುವ ಅಪೇಕ್ಷೆ ಸಾಧ್ಯವಿದೆ. ಹಾಗೆಯೇ, ಪ್ರಪಂಚದ ಯಾವ ಮೂಲೆಗೇ ‌ಹೋದರೂ ಒಬ್ಬ ಸರಿಯಾದ, ಒಳ್ಳೆಯ ಯೋಗ ಗುರುಗಳು ದೊರೆಯುವುದು ಸಾಧ್ಯವಿದೆ. ಆದರೆ, ಕೃಷಿ ಅಥವಾ ಯಕ್ಷಗಾನ ತಾಳಮದ್ದಲೆ ಅಂತಹ ಸಂದರ್ಭಾತೀತ ಲಕ್ಷಣಗಳನ್ನು ಪಡೆದುಕೊಂಡಿಲ್ಲ. ಇಂದಿಗೂ ಯಾವ ದೇಶದಲ್ಲಿ ಉತ್ಪಾದಿತವಾಗುತ್ತದೆ ಎನ್ನುವುದರ ಮೇಲೆ ಕೃಷಿ ಪದಾರ್ಥಗಳ ಗುಣಮಟ್ಟ ನಿರ್ಧರಿತವಾಗುತ್ತದೆ. ತಾಳಮದ್ದಳೆಯನ್ನು ಪರದೇಶ ಬಿಡಿ, ಕರಾವಳಿ ಮಲೆನಾಡಿನ ಆಚೆಯ ಸಮುದಾಯಗಳವರು ಮಾಡುವುದನ್ನೂ ಊಹಿಸಲು ಸಾಧ್ಯವಿಲ್ಲ. ಇದರರ್ಥ ಇವು ಇನ್ನೂ ಸಂದರ್ಭಾತೀತವಾಗಿ ಬೆಳೆದಿಲ್ಲ ಎಂದಲ್ಲ. ಕೃಷಿಯ ಸಂದರ್ಭದಲ್ಲಿ ಇದು ನಿಜವಿರಬಹುದು. ಇಲ್ಲಿ ಮುಂದೊಂದು ದಿನ ಅಂತಹ ಸಂದರ್ಭಾತೀತ ವ್ಯಾಪ್ತಿಯ ಬೆಳವಣಿಗೆ ಕೆಲವು ಕೃಷಿ ಕೈಗಾರಿಕೆಗಳ ದೃಷ್ಟಿಯಿಂದ ಅಪೇಕ್ಷಣೀಯವೇ ಇರಬಹುದು. ಆದರೆ, ತಾಳಮದ್ದಳೆಯಲ್ಲಿ ಅದೊಂದು ಸರಿಯಾದ ಅಪೇಕ್ಷೆಯೂ ಅಲ್ಲ. ಅದರರ್ಥ ತಾಳಮದ್ದಳೆಗೆ ಒಂದು ಜಾಗತಿಕ ಕಲೆಯಾಗಿ ಬೆಳೆಯಲು ಬೇಕಾದ ಯಾವುದೋ ಗುಣವೊಂದು ಊನವಾಗಿದೆ ಎಂದಲ್ಲ. ಈ ಪರಂಪರೆಗೆ ಈ ಸಂದರ್ಭದಲ್ಲಿ ಅದೊಂದು ಪ್ರಸ್ತುತವಾದ ಅಪೇಕ್ಷೆಯೇ ಅಲ್ಲ. ಎಂದಾದರೂ ಈ ಅಪೇಕ್ಷೆ ಬರಬಹುದೋ ಅಥವಾ ಎಂದೂ ಬರುವುದೇ ಇಲ್ಲವೋ ಎನ್ನುವುದೆಲ್ಲಾ ಚಾರಿತ್ರಿಕವಾಗಿ, ಬಾಹ್ಯವಾಗಿ ನಿರ್ಧರಿಸಬಹುದಾದ ವಿಚಾರಗಳಲ್ಲ. ಅವೆಲ್ಲಾ ಆ ಪರಂಪರೆಯ ಆಂತರಿಕ ವಿನ್ಯಾಸಕ್ಕೆ ಸಂಬಂಧಿಸಿದ್ದು. ಒಟ್ಟಾರೆಯಾಗಿ, ಯಾವ ಸಂದರ್ಭದಲ್ಲಿ ಯಾವ ರೀತಿಯ ಪ್ರಾಯೋಗಿಕ ಚಿಂತನೆ ಪ್ರಸ್ತುತವಾದದ್ದು ಎನ್ನುವುದೂ ಆ ಸಂದರ್ಭದ ಹಲವಾರು ಸೂಕ್ಷ್ಮಗಳನ್ನು ಒಳಗೊಂಡಿರುವಂಥ ಪ್ರಶ್ನೆ ಎಂದು ಹೇಳುವುದಷ್ಟೇ ಇಲ್ಲಿನ ಉದ್ದೇಶ. ಸಂದರ್ಭಾತೀತವಾಗಿ ನಮ್ಮ ಪ್ರಾಯೋಗಿಕ ಆಯ್ಕೆಯ ಮಾನದಂಡಗಳನ್ನು ರೂಪಿಸಲು ಸಾಧ್ಯವಿಲ್ಲವಷ್ಟೇ. 

-೯-

ಈ ಎರಡೂ ಕ್ರಮಗಳಲ್ಲಿ ಎದುರಾಗುವ ಪ್ರಾಯೋಗಿಕ ಪ್ರಶ್ನೆಗಳೂ ಅಷ್ಟೇ, ಒಂದಕ್ಕೊಂದು ಬಹಳ ಭಿನ್ನವಾಗಿರುತ್ತವೆ. ಭೋಗ್ಯಕೇಂದ್ರಿತ ಚಿಂತನೆಯಲ್ಲಿ ವ್ಯಕ್ತಿಗಳನ್ನು ಚಾರಿತ್ರಿಕವಾಗಿ, ಸಾಮಾಜಿಕವಾಗಿ ನಿರ್ದಿಷ್ಟ ಭೋಗ್ಯಗಳಿಗೆ ಭಾಜನರೋ ಅಲ್ಲವೋ ಎಂದು ನೋಡಲಾಗುತ್ತದೆ. ಅದೇ ಆಚಾರಕೇಂದ್ರಿತ ಚಿಂತನೆಯಲ್ಲಿ ವ್ಯಕ್ತಿಗಳನ್ನು ನಿರ್ದಿಷ್ಟ ಕರ್ಮಗಳಿಗೆ ಅಧಿಕಾರಿಗಳೋ ಅಥವಾ ಅನಧಿಕರಾರಿಗಳೋ ಎಂದು ಗಮನಿಸುವುದು ಮುಖ್ಯವಾಗುತ್ತದೆ. ಭೋಗ್ಯಗಳ ದೃಷ್ಟಿಯಿಂದ ನೋಡಿದಾಗ ಒಂದು ರೀತಿಯ ವಿಭೇದ ಅಮಾನುಷವಾಗಿ ಕಾಣುತ್ತದೆ. ಅದೇ ಆಚಾರದ ದೃಷ್ಟಿಯಿಂದ ನೋಡಿದಾಗ ಅದೇ ವಿಭೇದ ಅಗತ್ಯವೆಂದು ತೋರುತ್ತದೆ. ಹಾಗೆಯೇ ಕೆಲವೊಮ್ಮೆ ಆಚಾರದ ದೃಷ್ಟಿಯಿಂದ ಅನಾಚಾರವೆಂದು ತೋರುವಂಥದ್ದು ಭೋಗ್ಯಗಳ ದೃಷ್ಟಿಯಿಂದ ನ್ಯಾಯಸಮ್ಮತವೆಂದು ತೋರುತ್ತದೆ. ಇಂದಿನ ದಿನಗಳಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವೆ ಅಸಮತೆ ಉಂಟಾಗಬಾರದು ಎನ್ನುವ ದೃಷ್ಟಿ ನಮ್ಮ ಸಾಮಾಜಿಕ ಚಿಂತನೆಯಲ್ಲಿ ಬಹಳ ಮುಖ್ಯವಾದ ಕಳಕಳಿಯಾಗಿರುವಂಥದ್ದು. ಇಂತಹ ಆಸಮತೆ ಉಂಟಾಗುವ ಹಲವಾರು ಉದಾಹರಣೆಗಳು ಮತ್ತೆ ಮತ್ತೆ ಕಾಣಬರುವಾಗ ಸ್ವಾಭಾವಿಕವಾಗಿಯೇ ಈ ಜಗತ್ತಿನಲ್ಲಿ ಸಮತೆಯನ್ನು ವಿರೋಧಿಸುವ ಶಕ್ತಿಯೊಂದು ಕೆಲಸಮಾಡುತ್ತಿದೆ ಎನ್ನುವಂಥ ಅಭಿಪ್ರಾಯಕ್ಕೆ ನಾವು ಸುಲಭವಾಗಿ ಬಂದುಬಿಡುತ್ತೇವೆ. ಆದರೆ ನಿಜಕ್ಕೂ ನೋಡಿದರೆ, ಎಷ್ಟೋ ಸಂದರ್ಭಗಳಲ್ಲಿ ಸಮತೆಯನ್ನು ವಿರೋಧಿಸುವ ಅಸಮತೆಯ ಒಂದು ಹಿತಾಸಕ್ತಿ ಎನ್ನುವಂಥದ್ದು ಇರುವುದಿಲ್ಲ. ಬದಲಾಗಿ, ಭೋಗ್ಯಕೇಂದ್ರಿತ ಚಿಂತನೆಗೆ ವ್ಯತಿರಿಕ್ತವಾದ ಆಚಾರಕೇಂದ್ರಿತ ಚಿಂತನೆ ಇರುತ್ತದೆ. 

ಇನ್ನು ಈ ಎರಡು ರೀತಿಯ ಚಿಂತನೆಗಳ ಪರಸ್ಪರ ಸಂಬಂಧ ಯಾವ ರೀತಿಯದ್ದು? ಇವುಗಳು ಅಸಮವಾದ ದೃಷ್ಟಿಕೋನಗಳು ಎಂದು ಹೇಳಿದಾಗಲೇ ಇದರಲ್ಲಿ ಒಂದು ರೀತಿಯ ಚಿಂತನೆ ರೂಪಿಸುವ ಚಿತ್ರಣವನ್ನು ಮತ್ತೊಂದು ರೀತಿಯ ಚಿಂತನೆಯ ಮೂಲಕ ಸಂಪೂರ್ಣವಾಗಿ ಗ್ರಹಿಸಲು ಸಾಧ್ಯವಿಲ್ಲ ಎನ್ನುವ ತೀರ್ಮಾನವೂ ಇದೆ. ಅಂದಮೇಲೆ, ಇದರಲ್ಲಿ ಯಾವ ಒಂದು ರೀತಿಯ ಚಿಂತನೆಯೂ ಇನ್ನೊಂದನ್ನು ವಿವರಿಸುವ, ಚಿತ್ರಿಸುವ ಅಥವಾ ವಿಮರ್ಶಿಸುವ ಸಾಧ್ಯತೆ ಇಲ್ಲ. ಆದರೆ, ಒಂದು ಚಿಂತನೆ ಇನ್ನೊಂದನ್ನು constrain ಮಾಡಬಹುದಷ್ಟೆ. ಅಂದರೆ, ಒಂದು ಇನ್ನೊಂದರ ವ್ಯಾಪ್ತಿಯ ಪರಿಧಿಯನ್ನು ನಿರ್ದೇಶಿಸಬಹುದಷ್ಟೆ. ಇಂತಹ ಮಿತಿ ಹಾಕುವ ಧೋರಣೆಗೆ ಒಂದು ಉದಾಹರಣೆ: ಲಿಬರಲ್ ಚಿಂತನೆಯಲ್ಲಿ ವೈಯಕ್ತಿಕ ಹಕ್ಕುಗಳು ಎನ್ನುವ ಪರಿಕಲ್ಪನೆ ಸ್ಟೇಟ್ ಅಥವಾ ಪ್ರಭುತ್ವದ ಹರವಿನ ಮಿತಿಯನ್ನು ನಿರ್ದೇಶಿಸುವಂಥದ್ದು. ಹೀಗೆ ಹೇಳಿದಾಗ, ವೈಯಕ್ತಿಕ ಹಕ್ಕುಗಳ ದೃಷ್ಟಿಕೋನದಿಂದಲೇ ಪ್ರಭುತ್ವವನ್ನು ಇಡಿಯಾಗಿ ನಿರೂಪಿಸಲಾಗುವುದಿಲ್ಲ ಎಂಬ ತೀರ್ಮಾನವೂ ಇದೆ. ಬದಲಾಗಿ, ಪ್ರಭುತ್ವದ ಯಾವ ಕಟ್ಟಳೆಗಳೂ ನಿರ್ದಿಷ್ಟ ವೈಯಕ್ತಿಕ ಹಕ್ಕುಗಳಿಗೆ ಧಕ್ಕೆ ಉಂಟುಮಾಡಬಾರದು ಅಷ್ಟೆ. ಇದೇ ರೀತಿಯ ಸಂಬಂಧ ಈ ಎರಡೂ ರೀತಿಯ ಚಿಂತನೆಗಳ ನಡುವೆಯೂ ಇರುವಂಥದ್ದು. ಆದರೆ, ಅದನ್ನು ಮೀರಿ, ಒಂದು ದೃಷ್ಟಿಕೋನದಿಂದ ಇನ್ನೊಂದನ್ನು ವಿವರಿಸುವ ಅಥವಾ ವಿಮರ್ಶಿಸುವ ಕೆಲಸಕ್ಕೆ ಕೈಹಾಕಿದಾಗ ತೊಡಕುಗಳು ಉಂಟಾಗುತ್ತದೆ. ನಮ್ಮ ಹಲವಾರು ಸಮಕಾಲೀನ ಸಾಮಾಜಿಕ ಚರ್ಚೆಗಳು ಇಂತಹ ತೊಡಕುಗಳಿಗೆ ಹೇರಳವಾದ ಉದಾಹರಣೆಗಳನ್ನು ಕೊಡುತ್ತವೆ.   

ಭೋಗ್ಯ ಮತ್ತು ಆಚಾರಗಳ ವ್ಯತ್ಯಾಸದ ಕುರಿತ ಕೆಲವು ವಿಚಾರಗಳನ್ನು ಕೇವಲ ಒಂದು ಸ್ಥೂಲವಾದ ಮಟ್ಟದಲ್ಲಿ ಇಲ್ಲಿ ನಿರೂಪಿಸಿದ್ದೇನೆ. ಈ ವಿಚಾರಗಳಲ್ಲೇ ಹೊಸದೇನೂ ಇಲ್ಲ. ಹೊಸತಿರುವುದು ಇವನ್ನೆಲ್ಲಾ ಒಟ್ಟಾಗಿಸಿದ ಜೋಡಣೆಯಲ್ಲಿ. ಮತ್ತೂ ಮುಖ್ಯವಾಗಿ, ಇಲ್ಲಿರುವ ಪ್ರತಿಯೊಂದು ಪ್ರಮೇಯವೂ hypothetical ಆದದ್ದು. ಇದರಲ್ಲಿ ಒಂದೊಂದನ್ನೂ ಬಿಡಿಬಿಡಿಯಾಗಿ ತೆಗೆದುಕೊಂಡು ವಿಮರ್ಶಿಸಿ, ಇದರ ಸಾಧ್ಯಾಸಾಧ್ಯತೆಯನ್ನು ಪರೀಕ್ಷಿಸಬೇಕಿದೆ. ಅಷ್ಟೇ ಅಲ್ಲದೇ, ಇಂತಹ ಒಂದು ಚೌಕಟ್ಟು ಇಡಿಯಾಗಿ ಸರಿಯಾಗಿದೆಯೇ ಎಂದೂ ಬೇರೆಯಾಗಿಯೇ ನೋಡಬೇಕಿದೆ. ಈ ನಿರ್ದಿಷ್ಟ ಚೌಕಟ್ಟಿನ ಗುಣಾವಗುಣಗಳ ಆಚೆಗೆ, ಈ ರೀತಿಯ ಒಂದು ಚೌಕಟ್ಟು ಯಾಕೆ ಮುಖ್ಯವೆಂದರೆ ನಮ್ಮ ಹೆಚ್ಚಿನ ಸಾಮಾಜಿಕ, ರಾಜಕೀಯ, ನೈತಿಕ ಚಿಂತನೆಯೆಲ್ಲಾ ಇಲ್ಲಿ ಸೂಚಿಸಿರುವ ಉದಾಹರಣೆಗಳ ಕುರಿತೇ ಇರುವಂಥದ್ದು. ಆದರೆ, ಈ ಉದಾಹರಣೆಗಳನ್ನು ನೋಡುವ ಚೌಕಟ್ಟು ಒಪ್ಪವಾಗಿಲ್ಲದ ಕಾರಣದಿಂದಾಗಿ, ನಮ್ಮ ಅನುಭವಕ್ಕೆ ಸರಿ ಎಂದು ಕಾಣುವಂಥದ್ದೂ ಕೂಡಾ ನಮ್ಮ ಚಿಂತನೆಯಲ್ಲಿ ದಕ್ಕದ ಹಾಗೆ ಆಗಿದೆ. ನಾನು ಸೂಚಿಸಿರುವ ಚೌಕಟ್ಟು ಪ್ರಾಯೋಗಿಕ ಚಿಂತನೆಯಲ್ಲೇ ಇರಬಹುದಾದ ಎರಡು ಅಸಮವಾದ ಪ್ಯಾರಾಡೈಮ್‌ಗಳನ್ನು ಅಥವಾ ಪಾತಳಿಗಳನ್ನು ಗುರುತಿಸುತ್ತದೆ. ಈ ಪಾತಳಿಗಳ ಸಾಪೇಕ್ಷ ವ್ಯತ್ಯಾಸಗಳನ್ನು ಗುರುತಿಸುವ ಬದಲು, ಇಂದಿನ ಹೆಚ್ಚಿನ ಚಿಂತನೆಗಳು ಇದರಲ್ಲಿ ಒಂದು ಪಾತಳಿಯಿಂದ ಇನ್ನೊಂದು ಪಾತಳಿಯನ್ನು ವಿಮರ್ಶಿಸುವುದರಲ್ಲೇ ತೊಡಗಿವೆ. ಇದರಲ್ಲಿ ಒಂದು ಪಾತಳಿಯಿಂದ ನೋಡಿದರೆ, ಮತ್ತೊಂದು ಪಾತಳಿ ಅನೈತಿಕವೆಂದೋ, ವಿಕೃತವೆಂದೋ ತೋರುವುದು ಸ್ವಾಭಾವಿಕವಾಗಿಯೇ ಇದೆ. ಆದರೆ, ಯಾಕೆ ಹಾಗೆ ತೋರುತ್ತದೆ, ಮತ್ತು ಈ ರೀತಿಯ ದೃಷ್ಟಿಯನ್ನು ಮೀರಿ ಅವೆರಡರ ಅಸಮತೋಲವನ್ನು ಒಟ್ಟಿಗೆ ಗ್ರಹಿಸುವುದು ಸಾಧ್ಯವೇ ಎನ್ನುವುದು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ. 



ಈ ಲೇಖನದ ಹಿಂದಿನ ಚಿಂತನೆಯನ್ನು ರೂಪಿಸುವಲ್ಲಿ, ಮತ್ತು ಇದರ ಕರಡನ್ನು ಆಮೂಲಾಗ್ರವಾಗಿ ವಿಮರ್ಶಿಸುವಲ್ಲಿ, ಇಬ್ಬರು ವಿದ್ವಾಂಸರ ಉಪಕಾರವನ್ನು ಸ್ಮರಿಸಲೇಬೇಕು: ಹಬಿಲ್ ಡಾ. ನರಹರಿ ರಾವ್, ಸಾರ್ಬ್ರುಕನ್, ಜರ್ಮನಿ, ಮತ್ತು ಡಾ. ವಿವೇಕ್ ಧಾರೇಶ್ವರ, ಬೆಂಗಳೂರು. ಅವರೀರ್ವರ ಸದ್ಭಾವದ ರಕ್ಷೆಯನ್ನೂ ಮೀರಿ ಕೆಲವೊಮ್ಮೆ ನಾನು ನನ್ನ ಅಭಿಪ್ರಾಯಕ್ಕೇ ಕಟ್ಟುಬಿದ್ದಿದ್ದರಿಂದ ಈ ಲೇಖನದ ಮಿತಿಗಳು ನನ್ನವೇ.


ನೀನಾಸಂ ಮಾತುಕತೆ ಪತ್ರಿಕೆಯ ಆಗಸ್ಟ್-ನವೆಂಬರ್ ೨೦೨೦ರ 135-136ನೇ ಸಂಚಿಕೆಯಲ್ಲಿ ಪ್ರಕಟವಾದದ್ದು. 

Comments

Popular posts from this blog

ಸ್ಟ್ರಕ್ಚರಲಿಸಂ (ರಚನಾವಾದ/ರಾಚನಿಕವಾದ)

ಮಾರ್ಕ್ಸ್‌‌‌ ವಾದ

ಸುಖ-ಸಂತೋಷಕ್ಕೆ ಬೇಕಾಗುವುದೇನು? ಸಾಕಾಗುವುದೆಷ್ಟು?