ಸುಖ-ಸಂತೋಷಕ್ಕೆ ಬೇಕಾಗುವುದೇನು? ಸಾಕಾಗುವುದೆಷ್ಟು?



ಸಂತೋಷದಿಂದ ಇರುವುದಕ್ಕೆ ಹಲವಾರು ಷರತ್ತುಗಳು ಈಡೇರಬೇಕು. ಉದಾಹರಣೆಗೆ, ಆರೋಗ್ಯ ಚೆನ್ನಾಗಿರಬೇಕು. ಆದರೆ, ಆರೋಗ್ಯವಿದ್ದವರೆಲ್ಲರೂ ಸಂತೋಷದಿಂದಿರುತ್ತಾರೆ ಎನ್ನಲು ಬರುವುದಿಲ್ಲ. ನಮ್ಮ ಸುತ್ತದ ವಾತಾವರಣ ಚೆನ್ನಾಗಿರಬೇಕು. ಆದರೆ, ಅದಿದ್ದ ಮಾತ್ರಕ್ಕೆ ಸಂತೋಷ ದಕ್ಕಿಬಿಡುತ್ತದೆ ಎನ್ನುವ ಖಾತರಿಯಿಲ್ಲ. ಹಣವಂತೂ ಬೇಕೇಬೇಕು. ಆದರೆ, ಅದೂ ಕೂಡ ಸಾಕಾಗುವುದಿಲ್ಲ. ಸ್ನೇಹಿತರು, ಸಂಸಾರ, ಸಂಗೀತ, ಸಾಹಿತ್ಯ, ಸಾಧನೆ, ವಿದ್ಯೆ, ಉದ್ಯೋಗ ಹೀಗೆ ಯಾವುದನ್ನು ತೆಗೆದುಕೊಂಡರೂ ಇವೆಲ್ಲವೂ ಸಂತೋಷಕ್ಕೆ ಬೇಕಾದ ಸಂಗತಿಗಳು. ಆದರೆ ಅದ್ಯಾವುದೂ ತನ್ನಷ್ಟಕ್ಕೇ ಆಗಲೀ ಅಥವಾ ಒಟ್ಟಾರೆಯಾಗಿ ಆಗಲಿ ಸಾಕಾಗುವ ಸಂಗತಿಗಳಲ್ಲ. ಅಂದಮೇಲೆ, ಸಂತೋಷಕ್ಕೆ ಹಲವಾರು ಸಂಗತಿಗಳು ಬೇಕು. ಆದರೆ, ಸಂತೋಷಕ್ಕೆ ಸಾಕಾಗುವ ಸಂಗತಿ ಯಾವುದು? ಇದನ್ನು ಉತ್ತರಿಸುವುದೂ ಒಂದು ರೀತಿಯಲ್ಲಿ ಕಷ್ಟವೇ. "ಕೌಪೀನವಂತ ಖಲುಭಾಗ್ಯವಂತ" ಎಂದು ಹಿಂದಿನವರು ಹೇಳಿದರು. ಎಲ್ಲವನ್ನೂ ಬಿಟ್ಟು ಕೌಪೀನಮಾತ್ರ ಧರಿಸುವ ವಿರಕ್ತನೇ ಬಹಳ ಭಾಗ್ಯವಂತ, ಸುಖಪುರುಷ ಎಂದು ಅವರ ಮಾತು. ಸಂತೋಷಕ್ಕೆ ಕೌಪೀನ ಸಾಕು. ಆದರೆ ಅದು ಅವರ ಮಾತಾಯಿತು. ನಮಗೆ ಹಾಗಾಗುವುದಿಲ್ಲವಲ್ಲ? ಇನ್ನು ನಮ್ಮ ಯೆಂಡ್ಕುಕ ರತ್ನನಿಗೆ ಸುಖವಾಗಿರುವುದಕ್ಕೆ ಇನ್ನೂ ಸ್ವಲ್ಪ ಜಾಸ್ತಿ ಬೇಕು. ಒಂದು ಊರು, ಒಂದು ಸೂರು, ನೆಲವಾದರೂ ಸರಿಯೆ ಮಲಗಲು ಒಂದು ಜಾಗ, ಕೈಹಿಡಿದ ಪುಟ್ನಂಜಿ ಮತ್ತು ಹೊತ್ತುಹೊತ್ತಿಗೆ ಸ್ವಲ್ಪ ಉಪ್ಪುಗಂಜಿ. ನನ್ನ ಅತ್ತೆಗೆ ಜಾವಕ್ಕೆ ಎರಡು ಲೋಟ ಕಾಫಿ ಇಲ್ಲದಿದ್ದರೆ ಅದು ಜೀವನವೇ ಅಲ್ಲ. ಇನ್ನು ನನಗೆ ಇಂಟರ್‍ನೆಟ್ ಇಲ್ಲದಿದ್ದರೆ ಅಂತಹ ಬದುಕು ನರಕಕ್ಕಿಂತಲೂ ಕಡೆ. ಹಾಗಾದರೆ ಇಷ್ಟು ಸಾಕು ಎಂದು ಹೇಳಬಹುದೇ ಎಂದರೆ ಅದೂ ಸಾಧ್ಯವಿಲ್ಲ. ಯಾಕೆಂದರೆ, ಬೇರೆಬೇರೆಯವರಿಗೆ ಸಂತೋಷದಿಂದಿರುವುದಕ್ಕೆ ಬೇರೆಬೇರೆ ಸಂಗತಿಗಳು ಬೇಕು ಮತ್ತು ಬೇರೆಬೇರೆ ಪ್ರಮಾಣದಲ್ಲಿ ಬೇಕು.

ಹಾಗಾದರೆ ಒಬ್ಬರು ಸಂತೋಷವಾಗಿದ್ದಾರೆ ಎಂದು ಹೇಳಲು ಸಾಕಾಗುವ ಅಂಶ ಯಾವುದು? ನಮ್ಮ ನಿತ್ಯಜೀವನದಲ್ಲಿ ನಮಗೆ ಬೇಕಾಗಬಹುದಾದ ವಸ್ತುವಿಷಯಗಳ ಒಂದು ದೊಡ್ಡ ಪಟ್ಟಿಯನ್ನು ಮಾಡಿ ಈ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯವಿಲ್ಲ ಎಂದೇನೋ ತಿಳಿಯಿತು. ಆದರೆ ಬೇರೆ ಹೇಗೆ ಹೇಳುವುದು? ಯಾವ ವಸ್ತುವಿಷಯಗಳ ಪಟ್ಟಿಯನ್ನು ಕೊಟ್ಟರೂ ಅದು ಎಲ್ಲರಿಗೂ ಎಲ್ಲಾ ಕಾಲಕ್ಕೂ ಅನ್ವಯಿಸುವುದೂ ಇಲ್ಲ. ಅಂದಮೇಲೆ, ನಾವೆಲ್ಲರೂ ಹುಡುಕುತ್ತಿರುವ ಈ ಸಂತೋಷ ಏನು? ಅದೇನು ಎಂದೇ ತಿಳಿಯದೇ ಹೇಗೆಲ್ಲಾ ಹುಡುಕಿದರೂ ಅದು ದಕ್ಕುವ ಬಗೆ ಇಲ್ಲವಷ್ಟೆ. ಹಾಗಾದರೆ, ಸಂತೋಷವನ್ನು ಹುಡುಕುವವರ ಸಮಸ್ಯೆಯನ್ನು ಈ ರೀತಿ ತರ್ಜುಮೆ ಮಾಡಿಕೊಳ್ಳಬಹುದು: ಸಂತೋಷವನ್ನು ಹುಡುಕುವುದು ಎಂದರೆ ಸಂತೋಷವೆಂದರೆ ಏನು ಎಂದು ತಿಳಿಯುವುದು. ಸಂತೋಷವೆಂದರೆ ಏನು ಎನ್ನುವ ಪ್ರಶ್ನೆಗೆ ಉತ್ತರ ದೊರೆತರೆ, ಸಂತೋಷಕ್ಕೆ ಸಾಕಾಗುವ ಅಂಶ ಏನು ಎನ್ನುವುದೂ ತಂತಾನೇ ತಿಳಿಯುತ್ತದೆ. ಹೀಗೆ ನೋಡಿದಾಗ, ಸಂತೋಷಕ್ಕೆ ಏನೇನು ಬೇಕು ಎನ್ನುವ ಪ್ರಶ್ನೆ ನಮ್ಮ ಸಂದರ್ಭಕ್ಕೆ ತಕ್ಕಂತೆ ಬದಲಾಗುವಂಥ ವಸ್ತುಸ್ಥಿತಿಗಳ ಬಗೆಗಿನ ಪ್ರಶ್ನೆ. ಆದರೆ, ಸಂತೋಷಕ್ಕೆ ಏನು ಸಾಕು ಎನ್ನುವ ಪ್ರಶ್ನೆ ಸಂದರ್ಭಾತೀತವಾದ, ಸಂತೋಷದ ಸ್ವರೂಪಜಿಜ್ಞಾಸೆಗೆ ಎಳಸುವ ತಾತ್ವಿಕವಾದ ಪ್ರಶ್ನೆ. ಬೇಕಾಗುವ ಅಂಶಗಳು ಮತ್ತು ಸಾಕಾಗುವ ಅಂಶಗಳ ಬಗೆಗಿನ ಪ್ರಶ್ನೆಗಳು ಮೇಲುನೋಟಕ್ಕೆ ಒಂದೇ ರೀತಿಯ ಪ್ರಶ್ನೆಗಳು ಎಂದು ತೋರಿದರೂ, ಆಳದಲ್ಲಿ ಅವು ಎರಡೂ ಎರಡು ಬೇರೆಬೇರೆಯೇ ಜಾತಿಯ ಪ್ರಶ್ನೆಗಳು.

ತಕ್ಷಣದ ಆಸೆಗಳು ಮತ್ತು ದೂರಗಾಮಿಯಾದ ಆಸೆಗಳು
ನಮಗೆ ಬೇಕಾದ್ದು ದಕ್ಕಿದಾಗ ನಮಗೆ ಸಂತೋಷವಾಗುತ್ತದೆ ಎನ್ನುವುದೇನೋ ಸತ್ಯ. ನನ್ನತ್ತೆಯ ಕಾಫಿ ಮತ್ತು ನನ್ನ ಇಂಟರ್‍ನೆಟ್ ಈ ಜಾತಿಗೆ ಸೇರಿದ ಆಸೆಗಳು. ಆದರೆ, ಕಾಫಿಯೊಂದಿದ್ದರೆ ಅಥವಾ ಇಂಟರ್ನೆಟ್ ಇದ್ದರೆ ಬೇರೆ ಏನೂ ಬೇಡ ಎಂದು ಅರ್ಥವಲ್ಲ ತಾನೆ? ಇವೆಲ್ಲಾ ಆಯಾ ಕ್ಷಣದ ಆಸೆಗಳು. ಇದಲ್ಲದೇ, ನಮಗೆ ಸ್ವಲ್ಪ ದೂರಗಾಮಿಯಾದ, ನಮ್ಮ ನಮ್ಮ ಮಟ್ಟಕ್ಕೆ ದೊಡ್ಡದಾದ, ಬಹುಶಃ ಆಳವೂ ವಿಶಾಲವೂ ಭವ್ಯವೂ ಮಹೋನ್ನತವೂ ಆದ ಆಸೆಗಳೂ ಇರಬಹುದಷ್ಟೆ? ಇಂತಹ ದೂರಗಾಮಿಯಾದ ಆಸೆಗಳು ಕಾಮನೆಗಳಿರುವುದೇ ಮನುಷ್ಯರಿಗೂ ಇತರ ಪ್ರಾಣಿಗಳಿಗೂ ಇರುವ ಅತೀ ಮುಖ್ಯ ವ್ಯತ್ಯಾಸ ಎಂದೂ ಹೇಳಬಹುದು. ನಮಗೆ ಸಂತೋಷವಾಗುವುದು ಈ ಹೊತ್ತಿನ ಊಟ, ಈ ಹೊತ್ತಿನ ಸೂರು ಇವುಗಳಿಂದ ಮಾತ್ರವಲ್ಲ. ಅಥವಾ ದುಃಖವಾಗುವುದೂ ಇಂಥವುಗಳು ಸಿಗಲಿಲ್ಲ ಎನ್ನುವ ಕಾರಣಕ್ಕೆ ಮಾತ್ರವೇ ಅಲ್ಲ. ಒಬ್ಬರಿಗೆ ಒಂದು ದೊಡ್ಡ ಕಾರ್ಖಾನೆಯನ್ನು ಕಟ್ಟಿ ಬೆಳೆಸುವ ಹಂಬಲ. ಮತ್ತೊಬ್ಬರಿಗೆ ಸಂಗೀತದಲ್ಲಿ ಮಹತ್ತರವಾದ ಸಾಧನೆಯನ್ನು ಮಾಡುವ ಹಂಬಲ. ಇನ್ನು ಕೆಲವರಿಗೆ ಸಂಶೋಧನೆಗಳ ಮೂಲಕ, ಜ್ಞಾನಾರ್ಜನೆಯ ಮೂಲಕ ಸಂತೋಷವನ್ನು ಗಳಿಸುವ ಆಸೆ. ಮತ್ತೆ ಕೆಲವರಿಗೆ ತಮ್ಮ ಮಕ್ಕಳನ್ನು ಚೆನ್ನಾಗಿ ಬೆಳೆಸುವ, ಯೋಗ್ಯರಿಗೆ ಅವರನ್ನು ಮದುವೆ ಮಾಡಿಸುವ ಹಂಬಲ, ಸ್ವಂತಕ್ಕೊಂದು ಮನೆ ಕಟ್ಟುವ ಹಂಬಲ ಹೀಗೆ. ಇವುಗಳಲ್ಲಿ ಯಾವುದನ್ನೂ ಶ್ರೇಷ್ಠವೆಂದಾಗಲೀ ಕನಿಷ್ಟವೆಂದಾಗಲೀ ಅಳೆಯುವ ಅಗತ್ಯವಿಲ್ಲ. ಆದರೆ, ಇಷ್ಟನ್ನು ಮಾತ್ರಾ ಹೇಳಬಹುದು. ನಮ್ಮ ತಕ್ಷಣದ ಆಸೆಗಳು ಈಡೇರದಿದ್ದರೆ ಅದರಿಂದೇನೂ ಬಹಳ ನೋವು, ದುಃಖ ಆಗುವುದಿಲ್ಲ. ನಮ್ಮ ಜೀವನದಲ್ಲಿ ಸಂತೋಷವೇ ಇಲ್ಲವಾಯಿತು ಎಂದೇನೂ ಅನ್ನಿಸುವುದಿಲ್ಲ. ಆದರೆ, ಈ ದೂರಗಾಮಿಯಾದ ಆಸೆಗಳು ಈಡೇರದಿದ್ದರೆ ಅದರಿಂದ ನಮ್ಮ ಜೀವನದಲ್ಲಿ ಸುಖ ಮತ್ತು ಸಂತೋಷ ಇಲ್ಲವಾಯಿತು ಎಂದೇ ಅನ್ನಿಸುತ್ತದೆ. ಅಂದಮೇಲೆ, ಸಂತೋಷವನ್ನು ಕುರಿತು ಮಾತನಾಡುವಾಗ ನಾವು ಗಮನಿಸುತ್ತಿರುವುದು ತಕ್ಷಣದ ಸಂತೋಷಗಳ ಬಗ್ಗೆ ಅಲ್ಲ. ಬದಲಾಗಿ ಈ ದೂರಗಾಮಿ ಸಂತೋಷಗಳ ಬಗ್ಗೆ ಎಂದು ಒಪ್ಪಬಹುದಷ್ಟೆ.

ಈ ದೂರಗಾಮಿ ಸಂತೋಷಗಳ ಉದಾಹರಣೆಗಳನ್ನು ಗಮನಿಸಿದಾಗ ಕಾಣಿಸುವ ಒಂದು ಅತೀ ಮುಖ್ಯ ಲಕ್ಷಣವೆಂದರೆ, ಅಂತಹ ಸಂತೋಷಗಳು ಕೇವಲ ಭೋಗ್ಯಗಳಲ್ಲ. ಅಂದರೆ, ಇವು ನಮ್ಮ ಪರಿಶ್ರಮ ಇಲ್ಲದೇ ದೊರಕುವಂಥದ್ದಲ್ಲ. ಇಂತಹ ಸಂತೋಷಗಳು ದಕ್ಕಬೇಕೆಂದರೆ ನಮ್ಮ ಶ್ರಮ ಅಗತ್ಯ. ಕೆಲವೊಮ್ಮೆ, ಈ ಸಂತೋಷಗಳು ಬೇಕೆಂದರೆ ಮಿಕ್ಕ ಹಲವು ಸುಖಗಳನ್ನು ಬಿಟ್ಟುಕೊಡಬೇಕಾದ ಅಗತ್ಯವೂ ಇರುತ್ತದೆ. ಒಳ್ಳೆಯ ಸಂಗೀತಗಾರನಾಗಬೇಕೆಂದರೆ ಚಿಕ್ಕ ವಯಸ್ಸಿನಿಂದಲೇ ದಿನನಿತ್ಯ ಹಲವಾರು ಗಂಟೆಗಳ ತಾಲೀಮು ಮಾಡಬೇಕು. ಮಿಕ್ಕ ಹುಡುಗರ ಜೊತೆ ಆಟಪಾಠಗಳಲ್ಲಿ ತೊಡಗುವ ಸಂತೋಷವನ್ನು ಬಿಟ್ಟುಕೊಡಬೇಕು. ಹಾಗೆಯೇ, ಮನೆ ಕಟ್ಟಬೇಕೆಂದರೆ ಕಾರು ಕೊಳ್ಳುವ ಯೋಜನೆಯನ್ನು ಮುಂದೂಡಬೇಕು. ಮನೆಸಾಲದ ಕಂತನ್ನು ಪಾವತಿಸಬೇಕಿರುವುದರಿಂದ ಈಗಿರುವ ಸಂಬಳದ ಕೆಲಸವನ್ನು ಬಿಟ್ಟು ತನ್ನದೇ ಹವ್ಯಾಸವನ್ನು ಮುಂದುವರೆಸುತ್ತೇನೆ ಎನ್ನುವ ಯೋಜನೆಯನ್ನು ಬಿಟ್ಟುಕೊಡಬೇಕು.    

ನಿರ್ದಿಷ್ಟ ಮತ್ತು ಅನಿರ್ದಿಷ್ಟ ಸಂತೋಷಗಳು
ಈಗ ಈ ದೂರಗಾಮಿ ಸಂತೋಷಗಳನ್ನು ಇನ್ನೂ ಸ್ವಲ್ಪ ಹತ್ತಿರದಿಂದ ಗಮನಿಸಿದರೆ, ಅದರಲ್ಲೂ ಒಂದು ಭೇದ ಮಾಡುವುದು ಸಾಧ್ಯ ಎಂದು ತೋರುತ್ತದೆ. ದೂರಗಾಮಿ ಸಂತೋಷಗಳಲ್ಲಿ ಕೆಲವು ನಿರ್ದಿಷ್ಟವಾದವು. ಅಂದರೆ, ಒಂದು ಮನೆ ಕಟ್ಟುವುದು. ಒಂದು ಪದವಿಯನ್ನು ಸಂಪಾದಿಸುವುದು ಇಂಥವು. ಇದಕ್ಕೆ ಒಂದು ಕೊನೆ ಎಂಬುದಿದೆ. ಮನೆ ಕಟ್ಟಿದ ಮೇಲೆ ಮುಗಿಯಿತು. ಪದವಿ ಸಂಪಾದಿಸಿದ ಮೇಲೆ ಮುಗಿಯಿತು. ಅಲ್ಲಿಗೆ ಆ ಸಂತೋಷಕ್ಕೆ ಬೇಕಾದ ಶ್ರಮ ಮುಕ್ತಾಯವಾಗುತ್ತದೆ. ಹಾಗೆಯೇ, ಕಾಲ ಕಳೆದಂತೆ ಇಂತಹ ಸಂತೋಷಗಳು ನಮಗೆ ಸುಖವನ್ನು ತೃಪ್ತಿಯನ್ನು ತಂದುಕೊಟ್ಟರೂ ಅದರ ತೀವ್ರತೆ, ಹೊಸತನ ಇವೆಲ್ಲಾ ಸ್ವಲ್ಪ ಮಂಕಾಗುತ್ತದೆ. ಆದರೆ, ಈ ದೂರಗಾಮಿ ಸಂತೋಷಗಳಲ್ಲಿ ಇನ್ನು ಕೆಲವು ಅನಿರ್ದಿಷ್ಟವಾದವು. ಇಂತಹ ಸಂತೋಷಗಳ ಸಾಧನೆಗೆ ಒಂದು ಕೊನೆ ಎಂಬುದು ಇರುವುದಿಲ್ಲ. ಉದಾಹರಣೆಗೆ ಆರೋಗ್ಯವಾಗಿರುವುದು. ಆರೋಗ್ಯವಾಗಿರಬೇಕೆಂದು ವ್ಯಾಯಾಮ ಮಾಡುವವರು ಒಂದು ದಿನ ಕೈಕಾಲು ಆಡಿಸಿ ಆರೋಗ್ಯ ಸಿದ್ಧಿಸಿತು ಎಂದು ಸುಮ್ಮನೆ ಕೂಡುವಂತಿಲ್ಲವಲ್ಲ. ಅದು ನಿರಂತರವಾಗಿ ನಡೆಯಬೇಕಾದ ಕ್ರಿಯೆ. ಮತ್ತು ಆರೋಗ್ಯ ಎನ್ನುವುದು ಗಳಿಸಿ ಮುಗಿಸುವಂಥದ್ದಲ್ಲ. ಅದು ಸದಾ ಕಾಲ ನಾವು ಪಾಲಿಸುತ್ತಿರಬೇಕಾದ ಒಂದು ನೇಮ, ಒಂದು ಧರ್ಮ. ಸಂಗೀತವೂ, ಕಾವ್ಯವೂ, ಸಂಶೋಧನೆಯೂ, ನ್ಯಾಯಾನ್ಯಾಯ ವಿವೇಕವೂ, ನಮ್ಮ ನಮ್ಮ ಕಸುಬುಗಳಲ್ಲಿ ಉನ್ನತಿ, ಶ್ರೇಷ್ಠತೆಯೂ, ಚಾಕಚಕ್ಯತೆಯೂ ಇವೆಲ್ಲವೂ ಹೀಗೆ ಅನಿರ್ದಿಷ್ಟವಾದ, ಅನಂತವಾದ ಸಾಧನೆಗಳು. ಇದರಿಂದ ಬರುವ ಸುಖಸಂತೋಷಗಳು ನಿರ್ದಿಷ್ಟ ಸಂತೋಷಗಳಂತೆ ನಿರ್ದಿಷ್ಟ ವಸ್ತುಗಳ, ನಿರ್ದಿಷ್ಟ ಸಂದರ್ಭಗಳ ಹಂಗಿಗೆ ಕಟ್ಟುಬಿದ್ದಂಥವಲ್ಲ.

ಈಗ, ಸಂತೋಷದ ಕುರಿತು ಸ್ವಲ್ಪ ನಿಖರವಾಗಿ ಮಾತನಾಡಲು ಬೇಕಾದ ಹತಾರ ನಮಗೆ ಸಿಗುತ್ತದೆ. ನಾವು ನಿಜಕ್ಕೂ ಸಂತೋಷವೆಂದು ಕರೆಯುವುದು ಇಂತಹ ದೂರಗಾಮಿಯಾದ ಅನಿರ್ದಿಷ್ಟ ಸುಖಗಳನ್ನೇ. ಯಾಕೆಂದರೆ ನಮ್ಮ ತಕ್ಷಣದ ಆಸೆಗಳು ಈಡೇರದಿದ್ದರೆ ಆಗುವ ದುಃಖಕ್ಕಿಂತ ದೂರಗಾಮಿಯಾದ ಆಸೆಗಳು ಈಡೇರದಿದ್ದರೆ ಆಗುವ ದುಃಖ ಹೆಚ್ಚು. ಹಾಗೆಯೇ ನಿರ್ದಿಷ್ಟವಾದ ದೂರಗಾಮಿ ಆಸೆಗಳು ಈಡೇರದಿದ್ದರೆ ಆಗುವ ದುಃಖಕ್ಕಿಂತ ಅನಿರ್ದಿಷ್ಟ ದೂರಗಾಮಿ ಆಸೆಗಳು ಈಡೇರದಿದ್ದರೆ ಆಗುವ ದುಃಖ ಇನ್ನೂ ಹೆಚ್ಚು. ಹಾಗಾಗಿ ನಿಜವಾಗಿಯೂ ಸುಖವೆಂದರೆ ದೂರಗಾಮಿಯಾದ ಅನಿರ್ದಿಷ್ಟ ಆಸೆಗಳ ಈಡೇರಿಕೆ ಎಂದಾಯಿತು. ಈಗ ಮತ್ತೂ ಮುಂದುವರೆದು, ಇಂತಹ ಅನಿರ್ದಿಷ್ಟ ದೂರಗಾಮಿ ಸುಖಗಳ ಬಗ್ಗೆ ಒಂದು ಮುಖ್ಯ ಅಂಶವನ್ನು ಗಮನಿಸಬಹುದು. ಅದೇನೆಂದರೆ, ನಿರ್ದಿಷ್ಟ ಆಸೆಗಳಾದರೂ ಕೆಲವು ವಸ್ತುಗಳಿಗೆ ಕಟ್ಟುಬಿದ್ದಿರುತ್ತವೆ. ಉದಾಹರಣೆಗೆ ಮನೆ ಕಟ್ಟಬೇಕೆಂಬ ನಿರ್ದಿಷ್ಟ ಆಸೆ ಮನೆ ಎಂಬ ವಸ್ತುವಿಗೆ ಕಟ್ಟುಬಿದ್ದ ಆಸೆ. ಆ ವಸ್ತುವಿನ ಹೊರತಾಗಿ ಇದನ್ನು ಅರ್ಥೈಸಿಕೊಳ್ಳಲು ಬರುವುದಿಲ್ಲ. ಈ ವಸ್ತುಗಳಿಗೆಲ್ಲಾ ತಮ್ಮದೇ ಕಾರಣದಿಂದ ಬೆಲೆ ಇಲ್ಲ. ಇವಕ್ಕೆ ಬೆಲೆ ಇರುವುದು ಇವು ಇನ್ನೊಂದು ಆಸೆಯನ್ನು ಪೂರೈಸುತ್ತವೆ ಎನ್ನುವ ಕಾರಣಕ್ಕಾಗಿ. ಮನೆಗೆ ಬೆಲೆ ಬರುವುದು ವಾಸಕ್ಕೆ ಸುರಕ್ಷಿತವಾದ, ಸ್ವಂತವಾದ ಸೂರು ಎನ್ನುವ ಕಾರಣಕ್ಕೇ ಹೊರತೂ, ತನ್ನಷ್ಟಕ್ಕೇ ಅಲ್ಲ. ಆದರೆ ಅನಿರ್ದಿಷ್ಟ ಆಸೆಗಳು ಮತ್ತು ಅವುಗಳಿಂದ ಬರುವ ಸಂತೋಷಗಳು ಹಾಗಲ್ಲ. ಆರೋಗ್ಯದ ಉದಾಹರಣೆ ಗಮನಿಸಿ. ನಾವು ಆರೋಗ್ಯವಾಗಿರುವುದು ಮತ್ತಿನ್ನಾವುದೋ ಕಾರಣಕ್ಕಲ್ಲ. ಆರೋಗ್ಯವಾಗಿರುವುದೇ ಕಾರಣವೂ ಹೌದು, ಕಾರ್ಯವೂ ಹೌದು, ಕ್ರಿಯೆಯೂ ಹೌದು. ಅಷ್ಟೇ ಅಲ್ಲ. ಇಂತಹ ದೂರಗಾಮಿಯಾದ ಅನಿರ್ದಿಷ್ಟ ಸಂತೋಷಗಳು ಯಾವುದೇ ನಿರ್ದಿಷ್ಟ ವಸ್ತುಗಳಿಗೆ ಕಟ್ಟುಬಿದ್ದವುಗಳಲ್ಲ. ಅವು ಸ್ವಯಂಸಂಪೂರ್ಣವಾಗಿ ನಮ್ಮ ಚಟುವಟಿಕೆಗೆ ಮಾತ್ರ ಸಂಬಂಧಪಟ್ಟವು. ಅಂದರೆ, ಈ ದೂರಗಾಮಿ ಅನಿರ್ದಿಷ್ಟ ಸಂತೋಷಗಳ ಹೆಗ್ಗುರುತೇನೆಂದರೆ, ಇವು ನಮ್ಮ ಚಟುವಟಿಕೆಗೆ ಮತ್ತು ಅದರ ನೇಮಗಳಿಗೆ ಸಂಬಂಧಿಸಿದ್ದೇ ಹೊರತೂ ನಮ್ಮಿಂದ ಹೊರತಾದ, ನಮ್ಮ ಚಟುವಟಿಕೆಗೆ ಬಾಹ್ಯವಾದ ಯಾವ ವಸ್ತುವಿಗೂ ಕಟ್ಟುಬಿದ್ದಂಥದ್ದಲ್ಲ.

ಸಂತೋಷಕ್ಕೆ ಸಂಬಂಧಿಸಿದ ಭಾಷಾಬಳಕೆಯ ಸಮಸ್ಯೆ
ಇಲ್ಲಿ ಭಾಷಾಪ್ರಯೋಗಕ್ಕೆ ಸಂಬಂಧಪಟ್ಟ ಒಂದು ಮುಖ್ಯವಾದ ಅಂಶ. ಸಂತೋಷ ಎಂದರೆ ಚಟುವಟಿಕೆಗೆ ಸಂಬಂಧಪಟ್ಟ ಪದವೇ ಹೊರತೂ ಮನಸ್ಥಿತಿಗೆ ಸಂಬಂಧಪಟ್ಟ ಪದವಲ್ಲ ಎಂದು ಹೇಳಿದೆವಷ್ಟೆ. ಆದರೆ, ನಾವು ಸಾಮಾನ್ಯವಾಗಿ ಸಂತೋಷದಿಂದಿರುವುದು ಎಂದರೆ ಒಂದು ನಿರ್ದಿಷ್ಟ ಸ್ಥಿತಿಯಲ್ಲಿರುವುದು ಎಂದು ಭಾವಿಸುತ್ತೇವೆ. ನಾವು ಮನಸ್ಸಿಗೆ ಸಂಬಂಧಪಟ್ಟ ಹಲವಾರು ವಿಶೇಷಣಗಳನ್ನು ಹೀಗೆಯೇ ಬಳಸುವುದು. ಉದಾಹರಣೆಗೆ, "ಅವನು ಸಂತೋಷವಾಗಿದ್ದಾನೆ", "ಅವನು ದುಃಖದಲ್ಲಿದ್ದಾನೆ" ಎಂದಾಗಲೆಲ್ಲಾ ಇದು ಮನಸ್ಸಿನ ಒಳಗೆ ನಡೆಯುತ್ತಿರುವ ಒಂದು ಘಟನೆ ಎನ್ನುವಂತೆ ಬಳಸುತ್ತೇವೆ. ಇದರ ಸಮಸ್ಯೆಯನ್ನು ಸ್ವಲ್ಪ ವಿವರವಾಗಿ ತಿಳಿದುಕೊಳ್ಳಬೇಕು. "ಅವನು ಓಡುತ್ತಿದ್ದಾನೆ" "ಅವನು ಮಲಗಿದ್ದಾನೆ" "ಅವನು ಬರೆಯುತ್ತಿದ್ದಾನೆ" ಎನ್ನುವಲ್ಲಿ ಕಣ್ಣಿಗೆ ಕಾಣುವಂಥ ಒಂದು ಕ್ರಿಯೆ ನಡೆದಿದೆಯಷ್ಟೆ. ಹಾಗಾದರೆ, "ಅವನು ಸಂತೋಷವಾಗಿದ್ದಾನೆ" "ಅವನು ಆರೋಗ್ಯವಾಗಿದ್ದಾನೆ" ಎನ್ನುವುದಕ್ಕೆ ಯಾವ ಕ್ರಿಯೆ ಇದೆ? ಆ ಕ್ರಿಯೆ ಕಾಣಬೇಕೆಂದರೆ ಎಲ್ಲಿ ಹುಡುಕಬೇಕು? ಇಂತಹ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ನಾವು ಮೇಲ್ನೋಟಕ್ಕೆ ಸುಲಭವಾದ ಆದರೆ ಆಳದಲ್ಲಿ ಕೃತ್ರಿಮವಾದ ಒಂದು ಪರಿಹಾರವನ್ನು ಹೂಡುತ್ತೇವೆ. ಓಡುವುದು, ಮಲಗುವುದು ಇವೆಲ್ಲಾ ಹೇಗೆ ಕಣ್ಣಿಗೆ ಕಾಣುವ ಕ್ರಿಯೆಗಳೋ, ಹಾಗೆಯೇ ಸಂತೋಷವಾಗಿರುವುದು, ದುಃಖವಾಗಿರುವುದೂ ಕೂಡಾ ಕಣ್ಣಿಗೆ ಕಾಣದ, ಆದರೆ ಮನಸ್ಸಿನ ಒಳಗೆ ನಡೆಯುತ್ತಿರುವ ಕ್ರಿಯೆ ಎನ್ನುವಂತೆ ತಿಳಿದುಕೊಂಡು ಬಿಡುತ್ತೇವೆ.

ಆದರೆ ಇಲ್ಲಿನ ವಿಚಾರ ಇನ್ನೂ ಸ್ವಲ್ಪ ಸೂಕ್ಷ್ಮವಾಗಿದೆ. ಓಡುವುದು, ಮಲಗುವುದು ಇವೆಲ್ಲಾ ಒಂದೊಂದು ಕ್ರಿಯೆಗಳು ಎಂದ ಮಾತ್ರಕ್ಕೆ ಸಂತೋಷವಾಗಿರುವುದು ಮತ್ತೊಂದು ಕ್ರಿಯೆಯಲ್ಲ. ಬದಲಾಗಿ, ಅದು ಕಣ್ಣಿಗೆ ಕಾಣುವ ಹಲವಾರು ಕ್ರಿಯೆಗಳ ಬಗ್ಗೆ ಇರುವ ವಿವರಣಾರೂಪಿಯಾದ ವಿಶೇಷಣ. "ಓಡುವುದು" ಎನ್ನುವ ವಿಶೇಷಣ ಒಂದು ಕ್ರಿಯೆಗೆ ಸಂಬಂಧಪಟ್ಟ ಬಿಡಿ-ವಿಶೇಷಣವಾದರೆ, ಸಂತೋಷವಾಗಿರುವುದು ಎನ್ನುವುದು ಹಲವು ಕ್ರಿಯೆಗಳಿಗೆ ಸಂಬಂಧಪಟ್ಟ ಸಂಯುಕ್ತ-ವಿಶೇಷಣ. "ಆರೋಗ್ಯವಾಗಿರುವುದು" ಎನ್ನುವ ವಿಶೇಷಣವನ್ನು ಗಮನಿಸಿ. ಒಬ್ಬ ವ್ಯಕ್ತಿ ಆರೋಗ್ಯವಾಗಿದ್ದಾನೆ ಎಂದು ತಿಳಿಯುವುದಕ್ಕೆ ಅವನ ದೇಹದ ಯಾವ ನಿರ್ದಿಷ್ಟ ಅಂಗದಲ್ಲಿ ಯಾವ ಘಟನೆಯನ್ನು ನೋಡಬೇಕು? ಈ ಪ್ರಶ್ನೆಯೇ ಅಪ್ರಸ್ತುತ. ಅಥವಾ, ಆರೋಗ್ಯವಾಗಿರುವುದೂ ಕೂಡ ಮನಸ್ಸಿನ ಸ್ಥಿತಿಯನ್ನು ತೋರಿಸುತ್ತಿದೆಯೋ? ಅದೂ ಹಾಸ್ಯಾಸ್ಪದವೇ. ಆರೋಗ್ಯವಾಗಿರುವುದು ಎಂದರೆ ಮನಸ್ಸಿನಲ್ಲಿ ನಡೆಯುತ್ತಿರುವ ಘಟನೆಯಲ್ಲ. ಒಬ್ಬ ವ್ಯಕ್ತಿ ಆರೋಗ್ಯವಾಗಿದ್ದಾನೆ ಎಂದು ನಾವು ಹೇಳಿದರೆ ಅದರ ಅರ್ಥ ದೇಹದ ಹಲವಾರು ಆಯಾಮಗಳಲ್ಲಿ ಇರುವ ಚಟುವಟಿಕೆಗಳ ಕುರಿತಾದ ಒಂದು ವಿವರಣಾರೂಪಿಯಾದ ಸಂಯುಕ್ತ ವಿಶೇಷಣವನ್ನು ಬಳಸುತ್ತಿದ್ದೇವೆ ಎಂದು. ಆರೋಗ್ಯವಾಗಿರುವುದು ಎಂದರೆ ತಿಂದದ್ದು ಸರಿಯಾಗಿ ಜೀರ್ಣವಾಗುತ್ತಿರುವುದು, ನಾಡಿ ಸರಿಯಾಗಿ ಮಿಡಿಯುತ್ತಿರುವುದು, ಉಸಿರು ಸರಿಯಾಗಿ ಆಡುತ್ತಿರುವುದು, ಕೈಕಾಲುಗಳು ಗೆಲುವಿನಿಂದ ಇರುವುದು, ಕಣ್ಣುಗಳು ಹೊಳಪಿನಿಂದಿರುವುದು ಇವೇ ಮುಂತಾದ ಹಲವಾರು ಘಟನೆಗಳ ಕುರಿತ ಒಂದು ಸಂಯುಕ್ತ ವಿವರಣೆ ಅಷ್ಟೆ. "ನನಗೆ ಅವನ ನಾಡಿಮಿಡಿತ ಸರಿಯಾಗಿದೆಯೋ ಇಲ್ಲವೋ ಬೇಡ, ಅವನ ಜೀರ್ಣಕ್ರಿಯೆ ಸರಿಯಾಗಿದೆಯೋ ಇಲ್ಲವೋ ಬೇಡ, ಅವನ ಉಸಿರಾಟ ಸರಿಯಾಗಿದೆಯೋ ಇಲ್ಲವೋ ಬೇಡ. ಮೊದಲು ಅವನು ಆರೋಗ್ಯವಾಗಿದ್ದಾನೋ ಇಲ್ಲವೋ ಎಂದು ನೇರಾನೇರವಾಗಿ ಹೇಳಿ" ಎಂದು ಯಾರಾದರೂ ಕೇಳಿದರೆ ಏನು ಹೇಳುವುದು? ಅದು ಅಸಂಬದ್ಧವಾದ ಮಾತು ತಾನೆ?  

ಹೀಗೆ ನೋಡುವ ಬದಲು "ಓಡುವುದು" ಎಂದರೆ ಸುಲಭವಾಗಿ ದೈಹಿಕ ಸ್ಥಿಗತಿಗಳಿಗೆ ಸಂಬಂಧಪಟ್ಟ ವಿಶೇಷಣ ಮತ್ತು "ಸಂತೋಷವಾಗಿರುವುದು" ಎಂದರೆ ಮಾನಸಿಕ ಸ್ಥಿತಿಗತಿಗಳಿಗೆ ಸಂಬಂಧಪಟ್ಟ ವಿಶೇಷಣ ಎಂದು ಹೇಳಿಬಿಡುತ್ತೇವೆ. ಅದರಿಂದ ಆಗುವ ಸಮಸ್ಯೆ ನೋಡಿ: ಮನಸ್ಸಿನಲ್ಲಿ ಆ ಘಟನೆ ಎಲ್ಲಿ ನಡೆಯುತ್ತಿದೆ ಎಂದು ಹೇಗೆ ಹೇಳುವುದು? ಮತ್ತು ನಮ್ಮ ಬಗ್ಗೆ ಇನ್ನೊಬ್ಬರು ಕೂಡ "ಅವನು ಸಂತೋಷವಾಗಿದ್ದಾನೆ" ಎಂದು ಹೇಳುತ್ತಾರಲ್ಲ? ಅವರಿಗೆ ನಮ್ಮ ಮನಸ್ಸಿನ ಒಳಗೆ ಆಗುತ್ತಿರುವ ಘಟನೆ ಹೇಗೆ ತಿಳಿಯಿತು? ಅಲ್ಲದೇ ಸಂತೋಷವಾಗಿರುವುದು, ಆನಂದವಾಗಿರುವುದು ಎಂದರೆ ಒಂದು ಮನಸ್ಥಿತಿ ಎಂದಾಗ ಇಂತಹ ಹಲವು ಅನುಭವಗಳು ಪರಸ್ಪರ ವಿರುದ್ಧವಾದವು ಒಟ್ಟಿಗೇ ಆಗುತ್ತದಲ್ಲ, ಅದನ್ನು ವಿವರಿಸುವುದು ಹೇಗೆ? ಉದಾಹರಣೆಗೆ, ನನಗೆ ಮೊದಲ ರ್ಯಾಂಕ್ ಬಂದ ಸಂತೋಷದ ದಿನವೇ ನನ್ನ ಸೈಕಲ್ಲಿನ ಚಕ್ರ ಪಂಕ್ಚರ್ ಆಗಿ ಸಿಟ್ಟು ಬರುತ್ತದಲ್ಲ. ಆಗ ಮನಸ್ಸು ಸಂತೋಷದಲ್ಲೂ, ಸಿಟ್ಟಿನಲ್ಲೂ ಏಕಕಾಲಕ್ಕೆ ನಡೆಯುತ್ತಿರುತ್ತದೋ? ನಮ್ಮ ಕೈಕಾಲುಗಳಂತೂ ಏಕಕಾಲಕ್ಕೆ ನಡೆಯುವ ಮತ್ತು ನಿಂತಿರುವ ಕೆಲಸ ಮಾಡುವುದಿಲ್ಲವಲ್ಲ? ಇಂತಹ ಹಲವು ಚಿತ್ರವಿಚಿತ್ರದ ಸಮಸ್ಯೆಗಳು ಏಳುತ್ತವೆ. ಇದರ ಬದಲು ಸಂತೋಷವಾಗಿರುವುದು ಎನ್ನುವುದು ಒಂದು ಸಂಯುಕ್ತ ವಿಶೇಷಣ ಎಂದು ತಿಳಿದುಕೊಂಡರೆ ಈ ಸಮಸ್ಯೆಗಳು ಪರಿಹಾರವಾಗುತ್ತವೆ. ನಮ್ಮ ಸುತ್ತ ಹಲವಾರು ಘಟನೆಗಳು ಏಕಕಾಲಕ್ಕೆ ನಡೆಯುತ್ತಿರುತ್ತವೆ. ನಾವು ಅವುಗಳಲ್ಲಿ ನಮ್ಮ ಒಂದು ಸಂದರ್ಭಕ್ಕೆ ಮುಖ್ಯವಾದದ್ದನ್ನು ಗಮನಿಸಿದಾಗ ಅದನ್ನು ಸಂತೋಷ ಎನ್ನುವ ಸಂಯುಕ್ತ ವಿಶೇಷಣದ ಮೂಲಕ ಒಂದು ವಿನ್ಯಾಸಕ್ಕೆ ತಂದುಕೊಳ್ಳುತ್ತೇವೆ. ಅದೇ ಇನ್ನೊಂದಷ್ಟು ಘಟನೆಗಳ ಬಗ್ಗೆ ನಮ್ಮ ಗಮನ ಕೇಂದ್ರೀಕರಿಸಿದಾಗ ಅದನ್ನು ಸಿಟ್ಟು ಎನ್ನುವ ಇನ್ನೊಂದು ಸಂಯುಕ್ತ ವಿಶೇಷಣದಿಂದ ವಿನ್ಯಾಸಕ್ಕೆ ತಂದುಕೊಳ್ಳುತ್ತೇವೆ. ಯಾವುದನ್ನು ಹೇಗೆ ವಿನ್ಯಾಸಕ್ಕೆ ತಂದುಕೊಳ್ಳಬೇಕು ಎನ್ನುವುದು ಸಂಪೂರ್ಣವಾಗಿ ನಮ್ಮ ಹಿಡಿತದಲ್ಲಿಲ್ಲ ಅಷ್ಟೆ. ಆದರೆ ಈ ಹಲವು ವಿನ್ಯಾಸಗಳು ಒಟ್ಟೊಟ್ಟಿಗೇ ಇರುವುದೂ ಸಾಧ್ಯ. ಮತ್ತು ಇತರರಿಗೂ ನಮ್ಮ ಈ ವಿನ್ಯಾಸಗಳು ನೇರವಾಗಿಯೇ ತೋರವುದೂ ಸಾಧ್ಯ.

ಸಂತೋಷ ಮತ್ತು ಸಂಪ್ರದಾಯ
ಈಗ ಮತ್ತೆ ನಮ್ಮ ಮುಖ್ಯ ವಿಚಾರಕ್ಕೆ ಮರಳಿ ಬರೋಣ. ಸಂತೋಷಕ್ಕೆ ಸಾಕಾಗುವ ಅಂಶವೇನು ಎಂದು ಕೇಳಿದರೆ, ಇಂತಹ ಅನಿರ್ದಿಷ್ಟವಾದ ದೂರಗಾಮಿ ಚಟುವಟಿಕೆ ಎಂದು ಹೇಳಬಹುದು. ಆದರೆ, ಇದು ಕೇವಲ ವೈಯಕ್ತಿಕ ನೆಲೆಯಲ್ಲಿ ಸಾಧ್ಯವಾಗುವ ಸಾಧನೆಯಲ್ಲ. ಯಾಕೆಂದರೆ ಇಂತಹ ಆಸೆಗಳು ರೂಪುಗೊಳ್ಳುವುದಕ್ಕೆ ಬರಿಯ ವೈಯಕ್ತಿಕ ಇಚ್ಛೆ ಸಾಲುವುದಿಲ್ಲ. ಎಲ್ಲೋ ಬಿಹಾರದಲ್ಲಿ ಹುಟ್ಟಿ ಬೆಳೆಯುವವನಿಗೆ ಕರ್ನಾಟಕ ಸಂಗೀತವನ್ನು ಕಲಿತು ಜೀವನವೆಲ್ಲಾ ಅದಕ್ಕೇ ಮುಡಿಪಾಗಿಡಬೇಕೆಂದು ಅನ್ನಿಸುವುದು ಅಪರೂಪ. ಅದೇ ತಂಜಾವೂರಿನಲ್ಲೋ ಅಥವಾ ಹೊಳೆನರಸೀಪುರದಲ್ಲೋ ಹುಟ್ಟಿದವನಿಗೆ ಇದು ಸಾಧ್ಯ. ನ್ಯೂಯಾರ್ಕ್‍ನಲ್ಲಿ ಹುಟ್ಟಿ ಬೆಳೆದ ಒಬ್ಬ ವ್ಯಕ್ತಿ ವೇದಮಂತ್ರಗಳನ್ನು ಕಲಿತು ಯಾಜ್ಞಿಕನಾಗಬೇಕೆಂದು ಅಂದುಕೊಳ್ಳುವುದೂ ಅಪರೂಪ. ಆದರೆ, ಪಾಲಕ್ಕಾಡಿನಲ್ಲಿ ಅಥವಾ ಮತ್ತೂರಿನಲ್ಲಿ ಹುಟ್ಟಿದವನಿಗೆ ಇದು ಸಾಧ್ಯ. ಹಾಗೆಯೇ, ಯಾವುದೋ ಹಳ್ಳಿಯಲ್ಲಿ ಹುಟ್ಟಿ ಹೊಲಗದ್ದೆ ಮಾಡಿಕೊಂಡಿರುವವನಿಗೆ ತಾನು ನ್ಯೂಕ್ಲಿಯರ್ ಫಿಸಿಕ್ಸ್‍ನಲ್ಲಿ ಸಂಶೋಧನೆ ಮಾಡಿ ಜೀವನವೆಲ್ಲಾ ಅದಕ್ಕೇ ಮುಡಿಪಾಗಿಡಬೇಕೆಂದೇನೂ ಅನ್ನಿಸುವುದಿಲ್ಲ. ಅದೇ, ಹೈಡೆಲ್‍ಬರ್ಗಿನಲ್ಲೋ ಅಥವಾ ಮಾಸ್ಕೋದಲ್ಲೋ ಹುಟ್ಟಿದವನಿಗೆ ಹೀಗೆ ಅನ್ನಿಸುವುದು ಹೆಚ್ಚು ಸಹಜ. ಹಾಗಾಗಿಯೇ ಇಂತಹ ಇಚ್ಛೆಗಳು ರೂಪುಗೊಳ್ಳುವುದೇ ನಿರ್ದಿಷ್ಟ ಸಂದರ್ಭಗಳಲ್ಲಿ, ನಿರ್ದಿಷ್ಟ ಸಂಪ್ರದಾಯಗಳ ಒಳಗೆ ವ್ಯಕ್ತಿಗಳು ಪರಿಶ್ರಮ ಹಾಕಿದ ಮೇಲೆಯೇ. ಮತ್ತು ಇಂತಹ ಸಂಪ್ರದಾಯಗಳ ಒಳಕ್ಕೆ ಬರುವುದಕ್ಕೂ ಹಲವಾರು ಸಾಂದರ್ಭಿಕ ಕಾರಣಗಳು ಆಗಲೇ ನೆರವಾಗಿರಬೇಕು. ಇದರರ್ಥ ಇಂತಹ ಸಂತೋಷ ಎಲ್ಲರಿಗೂ ದಕ್ಕುವುದಿಲ್ಲ ಅಥವಾ ಎಲ್ಲರೂ ಇದಕ್ಕೆ ಅಧಿಕಾರಿಗಳಲ್ಲ ಎಂದಲ್ಲ. ಬದಲಾಗಿ, ಇಂತಹ ದೂರಗಾಮಿ ಇಚ್ಛೆಗಳನ್ನು ರೂಪಿಸುವ, ಪೋಷಿಸುವ ಕೆಲಸಕ್ಕೆ ಸಂಪ್ರದಾಯಗಳು ಮತ್ತು ಸಂಸ್ಥೆಗಳ ಅಖಂಡ ಅಸ್ತಿತ್ವದ ಅಗತ್ಯವಿದೆ ಎಂದಷ್ಟೇ.

ಒಂದು ಸರಳ ಉದಾಹರಣೆ ಗಮನಿಸಿ. ಪಶ್ಚಿಮದ ರಾಷ್ಟ್ರಗಳಲ್ಲಿ ಅನುಭವಾರ್ಜನೆಗಾಗಿ ಪ್ರಪಂಚವನ್ನು ಸುತ್ತುವ ಒಂದು ಪರಿಪಾಠ ಈಗಲೂ ಇದೆ. ಹಾಗಾಗಿ ಎಷ್ಟೊಂದು ಜನ ಯುವಕ ಯುವತಿಯರು ಕೆಲಸ, ಓದು ಇವೆಲ್ಲವನ್ನೂ ಸ್ವಲ್ಪ ವರ್ಷ ಬದಿಗಿಟ್ಟು ಆಫ್ರಿಕಾ, ಚೈನಾ, ಲ್ಯಾಟಿನ್ ಅಮೆರಿಕಾ, ಸೈಬೀರಿಯಾ, ಭಾರತ ಹೀಗೆ ಎಲ್ಲೆಲ್ಲೋ ಪ್ರವಾಸಮಾಡುತ್ತಾರೆ. ಪಡಬಾರದ ಪಾಡು ಪಡುತ್ತಾರೆ. ಅದರಲ್ಲಿ ಏನೋ ಒಂದು ಆಳವಾದ ಬೌದ್ಧಿಕ ಸಂತೋಷ, ತೃಪ್ತಿ ಕಾಣುತ್ತಾರೆ. ನಮ್ಮಂತೆ ಭಾರತದಲ್ಲಿ ಬೆಳೆದವರಿಗೆ ಪ್ರವಾಸಿಗರಾಗಿ ಸಿಂಗಾಪುರ, ಅಮೆರಿಕಾ ಮತ್ತು ದುಬೈಗಳಿಗೆ ಹೋಗಿ ಒಂದೆರಡು ಡ್ಯೂಟಿ-ಫ್ರೀ ಅತ್ತರು, ಚಾಕಲೇಟುಗಳನ್ನು ಕೊಂಡುತಂದದ್ದೇ ಪರಮಸುಖವೆನಿಸುತ್ತದೆ. ಇನ್ನು ಅನ್ನ-ನೀರಿಲ್ಲದ ಆಫ್ರಿಕಾಕ್ಕೋ, ಮೂಳೆಸವೆಯುವ ಚಳಿಯ ಸೈಬೀರಿಯಾಕ್ಕೋ ನಾವು ಹೋಗುವುದು ಅಷ್ಟರಲ್ಲೇ ಇದೆ. ಪಶ್ಚಿಮದ ಯುವಕ ಯುವತಿಯರಿಗೆ ಇಂತಹ ಸಂಸ್ಕಾರ ಬಂದದ್ದು ಎಲ್ಲಿಂದ? ಬಹಳ ಹಿಂದಿನಿಂದಲೂ, ಅಂದರೆ ಮಧ್ಯಯುಗದ ಕಾಲದಿಂದಲೂ ಅಲ್ಲಿ ಕುಲಕಸುಬುಗಳ ಘರಾನಾಗಳಿರುತ್ತಿದ್ದವು. ಗಿಲ್ಡ್‍ಗಳೆಂದು ಅವಕ್ಕೆ ಹೆಸರು. ಅದರಲ್ಲಿ ಕಸುಬು ಕಲಿಯಲು ಸೇರುವ ಯುವಕರೆಲ್ಲರೂ ಕಡ್ಡಾಯವಾಗಿ ದೇಶ ಸುತ್ತಿ ಸೀಮೆಯ ಶ್ರೇಷ್ಠಾತಿಶ್ರೇಷ್ಠ ಕಸುಬುದಾರರ ಕೆಳಗೆ ಶಿಷ್ಯವೃತ್ತಿ ಮಾಡಬೇಕಿತ್ತು. ನಮ್ಮಲ್ಲಿ ಪರಿವ್ರಾಜಕರಿದ್ದಂತೆ. ಇದು ದೊಡ್ಡದಾಗಿ ಬೆಳೆದು ಈಗ ಒಂದು ಇಡೀ ನಾಗರಿತೆಯನ್ನೇ ವ್ಯಾಪಿಸಿರುವ ಸಂಸ್ಕಾರವಾಗಿದೆ.

ದೂರಗಾಮಿಯಾದ ಅನಿರ್ದಿಷ್ಟ ಸಂತೋಷ ಎನ್ನುವುದು ಒಂದು ಚಟುವಟಿಕೆಯನ್ನು ಸೂಚಿಸುತ್ತದೆಯೇ ಹೊರತೂ ನಮ್ಮ ಮನಸ್ಥಿತಿಯನ್ನಲ್ಲ. ಅಂದಮೇಲೆ ಸಂತೋಷದ ನಿಜವಾದ ಅರ್ಥ ಚಟುವಟಿಕೆಗೆ ಸಂಬಂಧಿಸಿದ್ದು. ಇದರರ್ಥ ಯಾವಾಗಲೂ ಗೆಲುವಾಗಿರುವುದು, ಚಟುವಟಿಕೆಯಿಂದಿರುವುದು ಎಂದಷ್ಟೇ ಅಲ್ಲ. ಸಂತೋಷವೆಂದರೇ ಚಟುವಟಿಕೆಯೇ ಹೊರತೂ ನಮಗೆ ಏನು ಅನ್ನಿಸುತ್ತಿದೆ ಎನ್ನುವ ವೈಯಕ್ತಿಕ ಸ್ಥಿತಿಗತಿಗಳ ವರದಿಯಲ್ಲ. ಮತ್ತೂ ಮುಖ್ಯವಾಗಿ ಇಂತಹ ಸಂತೋಷಕ್ಕೂ ಮತ್ತು ನಮಗೆ ಇಷ್ಟವೆಂದು ತೋರುವ ವಸ್ತುವಿಷಯಗಳಿಗೂ ಯಾವ ನೇರ ಸಂಬಂಧವೂ ಇಲ್ಲ. ಪ್ರಾಚೀನ ಮೀಮಾಂಸಕರು ಯಜ್ಞದ ಬಗ್ಗೆ ಹೇಳುವುದನ್ನು ಫ್ರಿಟ್ಸ್ ಸ್ಟಾಲ್ ಎಂಬ ವಿದ್ವಾಂಸ ಹೀಗೆಯೇ ಅರ್ಥೈಸಿದ್ದಾನೆ. ಯಜ್ಞವೆಂದರೇ ಸಂತೋಷದಾಯಕವಾದ ಚಟುವಟಿಕೆ. ಏಕೆಂದರೆ ಯಜ್ಞವೆಂದರೆ ಯಾವ ಬಾಹ್ಯ ವಸ್ತುಗಳ ಹಂಗೂ ಇಲ್ಲದ ದೂರಗಾಮಿಯಾದ ಅನಿರ್ದಿಷ್ಟವಾದ ಪರಿಪೂರ್ಣವಾದ ಚಟುವಟಿಕೆಯೇ ಸರಿ.

ಈ ಅನಿರ್ದಿಷ್ಟ ದೂರಗಾಮಿ ಸಂತೋಷಗಳ ಒಂದು ಅತೀ ಮುಖ್ಯ ಲಕ್ಷಣ ಎಂದರೆ ಅದನ್ನು ಪಡೆಯಲು ಬಹಳ ತರಬೇತಿ ಮತ್ತು ಪರಿಶ್ರಮದ ಅಗತ್ಯವಿದೆ. ಇಂತಹ ತರಬೇತಿ ಮತ್ತು ಪರಿಶ್ರಮಗಳನ್ನು ಹಾಕಿದ ಮೇಲೆ ಆ ಸಂತೋಷ ದಕ್ಕುತ್ತದೆ ಎಂದೂ ಇದರ ಅರ್ಥವಲ್ಲ. ಅದರ ನಿಜವಾದ ಅರ್ಥ ಈ ತರಬೇತಿ ಮತ್ತು ಪರಿಶ್ರಮಗಳೇ ದೀರ್ಘಕಾಲದಲ್ಲಿ ಸಂತೋಷದಾಯಕವಾಗುತ್ತವೆ ಎಂದು. ಭೀಮಸೇನ ಜೋಶಿಯವರ ಕೊನೆಯ ದಿನಗಳ ಬಗ್ಗೆ ಬರೆಯುತ್ತಾ ಅವರ ಮಗ ರಾಘವೇಂದ್ರ ಜೋಶಿ ಇಂಥದ್ದೊಂದು ವೈಚಿತ್ರ್ಯದ ಬಗ್ಗೆ ಹೇಳಿದ್ದರು. ಭಾರತರತ್ನ ದೊರೆಯುವ ಕಾಲಕ್ಕೆ ಭೀಮಣ್ಣನಿಗೆ ನೆನಪು ಮತ್ತು ಸ್ಥಿಮಿತವೂ ಸ್ವಲ್ಪ ತಪ್ಪಿತ್ತಂತೆ. ಆದರೆ, ಆಗಲೂ ಒಂದೆರಡು ಸ್ವರ ಹಿಡಿದು ಗುನುಗಿದರೆ ಅದು ತಂಬೂರಿಯ ಶೃತಿಯಲ್ಲಿ ತೊಯ್ದಂತೆ ಭಾಸವಾಗುತ್ತಿತ್ತಂತೆ.

ಮಕ್ಕಳ ಆಟವನ್ನು ತಲ್ಲೀನವಾಗಿ ಗಮನಿಸಿದ್ದರೆ ಈ ವಿಷಯ ಸುಲಭವಾಗಿ ಹೊಳೆಯುತ್ತದೆ. ಮಕ್ಕಳು ಆಡುವಾಗ ಇಂಥದ್ದೇ ವಸ್ತುಗಳ ಹಂಗಿಲ್ಲ. ಯಾವ ಚಿಂದಿಚೂರನ್ನು ಬೇಕಾದರೂ ಅವು ತಮ್ಮ ಆಟಕ್ಕೆ ಸರಕಾಗಿ ಬಳಸಿಕೊಳ್ಳುತ್ತವೆ. ಮುಖ್ಯವೆಂದರೆ ಆಡುವ ಚಟುವಟಿಕೆಯೊಂದೇ. ಮತ್ತು ಆಟಕ್ಕೆ ಆಟದ ಸಂತೋಷವಲ್ಲದೇ ಬೇರೆ ಯಾವ ಹೊರಗಿನ ಉದ್ದೇಶ, ಸಂತೋಷಗಳಿಲ್ಲ. ಎಲ್ಲಕ್ಕೂ ಮಿಗಿಲಾಗಿ, ಆಟದ ಸಂತೋಷ ನಿರ್ದಿಷ್ಟವಲ್ಲ. ಅದು ಅನಿರ್ದಿಷ್ಟವಾದದ್ದು. ಅಂದರೆ, ಈ ಆಟ ಮುಗಿದ ಮೇಲೆ ಆಟದ ಆಸೆ ಕಳಚಿತು ಎಂದಲ್ಲ. ಅದಕ್ಕೆ ಇನ್ನೊಬ್ಬರು ಇದ್ದರೂ ನಡೆಯುತ್ತದೆ, ತಾನು ಒಬ್ಬನೇ ಇದ್ದರೂ ನಡೆಯುತ್ತದೆ. ಆ ಮಗು ಮಹಲಿನ ಮನೆಯಲ್ಲಿರಬಹುದು, ಹಾದಿಯ ಜೋಪಡಿಯಲ್ಲಿರಬಹುದು, ಅಥವಾ, ಆಲದ ಎಲೆಯ ಮೇಲೆ ತೇಲುತ್ತಾ ತನ್ನ ಕಾಲಬೆರಳನ್ನು ತಾನೇ ಸವಿಯುತ್ತಿರಬಹುದು. ಅದು ನಿರಂತರ ನಡೆವ ಚಕ್ರೀಯ ಲೀಲೆ. ಸಂತೋಷವೆಂದರೆ ಅಷ್ಟೆ. ಲೀಲೆಯಲ್ಲಿರುವುದು.    

Comments

Popular posts from this blog

ಸ್ಟ್ರಕ್ಚರಲಿಸಂ (ರಚನಾವಾದ/ರಾಚನಿಕವಾದ)

ಮಾರ್ಕ್ಸ್‌‌‌ ವಾದ