ಸ್ಟ್ರಕ್ಚರಲಿಸಂ (ರಚನಾವಾದ/ರಾಚನಿಕವಾದ)

ವಸ್ತುಗಳ ಸ್ವರೂಪವನ್ನು ಅರಿಯುವುದು ಎಂದರೇನು? ಇದಕ್ಕೆ ಸ್ಥೂಲವಾಗಿ ಎರಡು ಉತ್ತರಗಳನ್ನು ಕೊಡಬಹುದು. ಒಂದು, ವಸ್ತುಗಳಲ್ಲಿ ಅಡಕವಾಗಿರುವ ಅವುಗಳ ಅಂತಃಸ್ಸತ್ವವನ್ನು (essence) ಅರಿಯುವುದು. ಎರಡು, ನಮ್ಮ ಪರಿಕಲ್ಪನೆಗಳ ಮೂಲಕ ವಸ್ತುಗಳ ಸ್ಥಿತಿಗತಿಗಳನ್ನು ವಿವರಿಸುವುದು. ನೀವು ಮೊದಲನೆಯ ವರ್ಗಕ್ಕೆ ಸೇರಿದ್ದರೆ, ವಸ್ತುಗಳಿಗೊಂದು ಅಂತಃಸ್ಸತ್ವ ಎಂಬುದಿದೆ ಎನ್ನುತ್ತೀರಿ. ಎರಡನೆಯ ವರ್ಗಕ್ಕೆ ಸೇರಿದ್ದರೆ, ವಸ್ತುಗಳಿಗೆ ಅಂತಃಸ್ಸತ್ವ ಎಂಬುದಿಲ್ಲ. ಚಿನ್ನಕ್ಕೆ 'ಚಿನ್ನತ್ವ' ಎಂಬುದೂ, ನಾಯಿಗೆ 'ನಾಯಿತನ' ಎಂಬುದೂ ಇರುವುದಿಲ್ಲ. ಆದರೆ ನಮಗಿರುವ ಪರಿಕಲ್ಪನೆಗಳ ಮೂಲಕ ಚಿನ್ನವನ್ನು ಒಂದು ಲೋಹವಾಗಿಯೂ, ಬೆಲೆಯುಳ್ಳದ್ದಾಗಿಯೂ ಹೊಳಪಿನದ್ದಾಗಿಯೂ ಹೀಗೆ ಹಲವು ರೀತಿಗಳಲ್ಲಿ ನೋಡಲು ಸಾಧ್ಯವಿದೆ ಎನ್ನುತ್ತೀರಿ. ಈ ಎರಡನೆಯ ವಾದವೇ ಸ್ಟ್ರಕ್ಚರಲಿಸಂನ ಮೂಲ ಸೆಲೆ ಎಂದು ಗುರುತಿಸುವುದು. 

ಚದುರಂಗದ ಆಟದ ಉದಾಹರಣೆಯ ಮೂಲಕ ಇದನ್ನು ವಿವರಿಸಬಹುದು. ಚದುರಂಗದಾಟದಲ್ಲಿ ಹಲವು ಕಾಯಿಗಳಿವೆ. ಆದರೆ ಯಾವುದೇ ಒಂದು ಬಿಡಿ ಕಾಯಿಗೆ ತನ್ನಷ್ಟಕ್ಕೆ ಯಾವ ಬೆಲೆಯೂ ಇಲ್ಲ. ಉದಾಹರಣೆಗೆ ಕುದುರೆ ಎನ್ನುವ ಒಂದು ಕಾಯಿ ಇದೆ. ನಿಮ್ಮ ಚದುರಂಗದ ಹಾಸು ಕಳೆದುಹೋದ ಮೇಲೆ ಬಿಡಿಯಾಗಿ ಈ ಕಾಯಿ ನಿಮಗೆ ಮನೆಯ ಮೂಲೆಯಲ್ಲಿ ಎಲ್ಲೋ ಸಿಕ್ಕಿದರೆ, ಅದಕ್ಕೆ ಯಾವ ಬೆಲೆಯೂ ಇಲ್ಲ. ಅದನ್ನು ಒಂದು ಕುದುರೆಯಂತೆ ಬಳಸಲೂ ಬರುವುದಿಲ್ಲ. ಅದೇ ಚದುರಂಗದ ಆಟದ ಒಳಗೆ ಮಾತ್ರ ಆ ಕಾಯಿಗೆ ನಿರ್ದಿಷ್ಟ ಬೆಲೆ ಸ್ಥಾನಮಾನಗಳಿವೆ. ಮತ್ತು ಅದನ್ನು ಬಳಸುವ ಕೆಲವು ಕ್ರಮಗಳಿವೆ. ಕುದುರೆಯನ್ನು ಚದುರಂಗದಾಟದಲ್ಲಿ ನಮಗೆ ಇಷ್ಟ ಬಂದ ರೀತಿಯಲ್ಲಿ ನಡೆಸಲು ಬರುವುದಿಲ್ಲ. ಹಾಗೆ ನಡೆಸಿದರೆ ಆ ಆಟ ಚದುರಂಗದ ಆಟವಾಗುವುದಿಲ್ಲ. ಅಷ್ಟೇ ಏಕೆ, ನಿಮ್ಮ ಕುದುರೆಯ ಕಾಯಿ ಕಳೆದು ಹೋದರೆ, ಮತ್ತೆ ಇನ್ನ್ಯಾವ ವಸ್ತುವನ್ನು ಬೇಕಾದರೂ ಬಳಸಿ ನಿಮ್ಮ ಆಟ ಮುಂದುವರಿಸಬಹುದು. ಹುಣಿಸೇಬೀಜ, ಪ್ಲಾಸ್ಟಿಕ್ ಬಾಟಲಿಯ ಬಿರಡೆ, ಹೀಗೆ ಯಾವುದೂ ಸರಿಯೇ. ಒಟ್ಟಾರೆ ಆ ಆಟದ ನಿಯಮದ ಪ್ರಕಾರ ಅದನ್ನು ನಡೆಸಿದರೆ ಸಾಕು. 

ಅಂದಮೇಲೆ, ಕುದುರೆ ಎನ್ನುವ ಕಾಯಿಗೂ ಮತ್ತು ಅದರ ನಡೆಯ ನಿಯಮಗಳಿಗೂ ಅರ್ಥವಿರುವುದು ಚದುರಂಗದಾಟದ ವ್ಯವಸ್ಥೆಯ ಒಳಗೆ. ಆ ನಿಯಮಗಳ ಹೊರಗೆ ಯಾವ ಕಾಯಿಗೂ ಯಾವ ನಡೆಗೂ ಸ್ವತಂತ್ರವಾದ ಅರ್ಥವಿಲ್ಲ. ಅಂದಮೇಲೆ ಚದುರಂಗವನ್ನು ಅರ್ಥಮಾಡಿಕೊಳ್ಳುವುದು ಎಂದರೆ, ಬಿಡಿಬಿಡಿಯಾಗಿ ಕುದುರೆ ಎಂದರೇನು, ಸಿಪಾಯಿ ಎಂದರೇನು ಎಂದು ಅರ್ಥ ಮಾಡಿಕೊಳ್ಳುವುದಲ್ಲ. ಬದಲಾಗಿ, ಚದುರಂಗದ ಒಟ್ಟು ನಿಯಮಗಳ ವಿನ್ಯಾಸದಲ್ಲಿ ಯಾವಯಾವ ರೀತಿಯ ಭೇದಗಳಿವೆ ಮತ್ತು ನಡೆಗಳಿವೆ ಎಂದು ತಿಳಿದುಕೊಳ್ಳುವುದು. 

ಟೈಪ್-ಟೋಕನ್ (ಜಾತಿ-ನಿದರ್ಶನ) ಸಂಬಂಧಗಳು 
ರಚನಾವಾದದ ಕೇಂದ್ರದಲ್ಲಿರುವ ಒಳನೋಟ ಇದು: ವಸ್ತುಗಳನ್ನು ಗುರುತಿಸುವುದಕ್ಕೆ ಕನಿಷ್ಟ ಎರಡು ಸ್ಥರಗಳ ಅಗತ್ಯವಿದೆ. ಅದೇ type ಮತ್ತು token. ಅಂದರೆ, 'ಜಾತಿ' ಮತ್ತು 'ನಿದರ್ಶನ'. ಉದಾಹರಣೆಗೆ ನನ್ನ ಮೇಜಿನ ಮೇಲಿರುವ ಈ ವಸ್ತುವನ್ನು ತೆಗೆದುಕೊಳ್ಳಿ. ಇದು 'ನೀರಿನ ಬಾಟಲಿ' ಎನ್ನುವ ವಸ್ತುಗಳಿಗೆ ಒಂದು ನಿದರ್ಶನ. ಹಾಗೆಂದ ಮಾತ್ರಕ್ಕೆ ಈ ವಸ್ತು ಕೇವಲ ಈ ಒಂದು ಜಾತಿಗೆ ಮಾತ್ರ ನಿದರ್ಶನವಲ್ಲ. 'ಪ್ಲಾಸ್ಟಿಕ್‍ನಿಂದ ಮಾಡಿದ ವಸ್ತುಗಳು' ಎನ್ನುವ ಜಾತಿಗೂ ಇದು ಒಂದು ನಿದರ್ಶನ. ಹಾಗಾದರೆ, ನನ್ನ ಮೇಜಿನ ಮೇಲಿರುವ ವಸ್ತು ನಿಜಕ್ಕೂ ಏನು? ಈ ಪ್ರಶ್ನೆಯೇ ಅಸಂಬದ್ಧ. ಏಕೆಂದರೆ, ಈಗ ಬಳಸಿದ ಯಾವ type (ಜಾತಿ) ಸೂಚಕಗಳನ್ನೂ ಬಳಸದೇ ನೇರವಾಗಿ ಒಂದು ವಸ್ತುವಿನ ಬಗ್ಗೆ ಮಾತನಾಡುವುದು ಅಸಾಧ್ಯ. ಹಾಗೆ ಯಾವ ಜಾತಿ ಸೂಚಕವೂ ಇಲ್ಲದೆ ಹೇಳಬೇಕೆಂದರೆ ಈ ವಸ್ತುವನ್ನು "ಇದು" ಎಂದು ಬೆರಳು ಮಾಡಿ ತೋರಿಸಬಹುದಷ್ಟೆ. ಈ ಇದು ಎನ್ನುವುದು ಈ ವಸ್ತುವಿನ ಅತ್ಯಂತ ನಿಜವಾದ ಆದರೆ ಅತ್ಯಂತ ಅಪ್ರಯೋಜಕವಾದ ಚಿತ್ರಣ. ಅಂದಮೇಲೆ, ವಸ್ತುಗಳನ್ನು ಸೂಚಿಸುವುದೆಂದರೆ ಅವುಗಳನ್ನು ಯಾವುದಾದರೂ typeಗಳಿಗೆ tokenಗಳು ಎಂದು ಸೂಚಿಸಬೇಕಷ್ಟೆ. ಆದರೆ, ಪ್ರತೀ ವಸ್ತುವೂ ಅಸಂಖ್ಯ ಜಾತಿಗಳಿಗೆ ನಿದರ್ಶನವಾಗಿರಬಹುದು. ಇದರ ಪರಿಣಾಮವೇನೆಂದರೆ, ನಮ್ಮ ಚಿತ್ರಣಗಳು ವಸ್ತುಗಳನ್ನು ಆಮೂಲಾಗ್ರವಾಗಿ ಗ್ರಹಿಸಲು ಸಾಧ್ಯವಿಲ್ಲ. ವಸ್ತುವಿನ ಯಾವುದೋ ನಿರ್ದಿಷ್ಟ ಮುಖವನ್ನು (aspect) ಮಾತ್ರ ಗ್ರಹಿಸುತ್ತದೆ. ಇದನ್ನೇ ಹೀಗೂ ಹೇಳಬಹುದು. ವಸ್ತು ಎನ್ನುವುದರ ಲಕ್ಷಣವೇ ತನ್ನ ಬಗೆಗಿನ ಚಿತ್ರಣಗಳಿಂದ ಎಂದೂ ಸಂಪೂರ್ಣವಾಗದ್ದು ಎಂದು. 

ಈಗ ಈ type-token ಸಂಬಂಧದ ಕೆಲವು ಪರಿಣಾಮಗಳನ್ನು ಗಮನಿಸಿ. ವಸ್ತುಗಳು ನಮ್ಮ ತಿಳುವಳಿಕೆಗೆ ದಕ್ಕುವುದು ನೇರವಾಗಲ್ಲ. ಬದಲಾಗಿ ಈ typeಗಳ ಮೂಲಕ. ಆದರೆ ಈ typeಗಳು ಎಲ್ಲಿಂದ ಬಂದಿವೆ? Typeಗಳ ಮೂಲ ಏನು? ಎಂದು ಕೇಳಬಹುದು. ಇದಕ್ಕೆ ಹಲವು ಪರಂಪರೆಗಳು ಹಲವು ಉತ್ತರಗಳನ್ನು ನೀಡಿವೆ. ಇವು ನಮ್ಮ ಮನಸ್ಸಿನಲ್ಲಿರುವ ಮೂಲರೂಪಗಳು ಎಂದು ಕೆಲವರು, ಒಂದು ಆದರ್ಶ ಪ್ರಪಂಚದ ಚಿತ್ರಣವೆಂದು ಕೆಲವರು, ನಮ್ಮ ಅನುಭವದಿಂದ ನಾವು ರೂಪಿಸಿಕೊಂಡಿದ್ದೆಂದು ಕೆಲವರು ಹೇಳುತ್ತಾರೆ. ಸದ್ಯಕ್ಕೆ  ಈ  typeಗಳ ಮೂಲ ಏನು ಎಂದು ಕೇಳುವ ಬದಲು ನಾವು ಅದರ ಲಕ್ಷಣವೇನು ಎಂದು ಕೇಳುವಾ. ಈ typeಗಳು ಬಿಡಿಬಿಡಿಯಾಗಿಯಂತೂ ಇರುವುದಿಲ್ಲ. 'ಚೌಕ' ಎನ್ನುವ type ನಮಗೆ ತಿಳಿದಿದೆ ಎಂದರೆ ಅದು 'ಚಕ್ರ' ಎನ್ನುವ typeಗಿಂತ ಭಿನ್ನವೆಂದೂ ತಿಳಿದಿದೆ ಎಂದೇ ಅರ್ಥ. ಹಾಗೆಯೆ ಚೌಕ ಮತ್ತು ಚಕ್ರ ಎನ್ನುವ typeಗಳು ಆಕಾರಗಳ typeಗಳು ಎಂದು ತಿಳಿದಿದೆ ಎಂದರೆ, ಸಿಹಿ, ಕಹಿ ಎನ್ನುವುದು ರುಚಿಯ typeಗಳು ಎಂದು ತಿಳಿದಿದೆ ಎಂದೇ ಅರ್ಥ. ಒಟ್ಟಾರೆಯಾಗಿ typeಗಳು ಪರಸ್ಪರ ಬಲೆಯ ಆಕಾರದ ಹೆಣಿಗೆಯಲ್ಲಿರುತ್ತವೆಯೇ ವಿನಃ ಒಂದೊಂದೇ ಬಿಡಿಬಿಡಿಯಾಗಿ ಇರಲು ಸಾಧ್ಯವಿಲ್ಲ. ಗೂಗ್ಲಿ ಎಂದರೆ ಏನು ಎಂದು ಗೊತ್ತು ಆದರೆ ಕ್ರಿಕೆಟ್ ಎಂದರೆ ಏನು ಎಂದು ಗೊತ್ತಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಾಗೆಯೇ ನನಗೆ ಅಡಿಗೆ ಮಾಡಲು ಬರುತ್ತದೆ ಆದರೆ ಯಾವ ನಿರ್ದಿಷ್ಟ ಖಾದ್ಯವನ್ನೂ ತಯಾರಿಸಲು ಬರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹೇಗೆ ಗೂಗ್ಲಿ ಮತ್ತು ಅಡುಗೆ ನಮ್ಮ ಕ್ರಿಯೆಗಳಿಗೆ ಸಂಬಂಧಿಸಿದ ಭೇದಗಳೋ ಹಾಗೆಯೇ ಸಿಹಿ, ಕಹಿ, ಚೌಕ, ಚಕ್ರ ಇವು ನಮ್ಮ ಗ್ರಹಿಕೆಗೆ ಸಂಬಂಧಿಸಿದ ಭೇದಗಳು. ಇವುಗಳು ಕೆಲಸ ಮಾಡುವ ರೀತಿಯಲ್ಲಿ ಒಂದು ಸಾಮ್ಯವಿದೆ. ಅದೇನೆಂದರೆ ಅವುಗಳ ಒಟ್ಟಂದವಾಗುವ (structuring) ಮತ್ತು ವಿಭೇದವಾಗುವ (differentiating) ಲಕ್ಷಣ. ಒಂದು ವಿಚಾರ, ಕೆಲಸ ಅಥವಾ ವಸ್ತು ನಮ್ಮ ತಿಳುವಳಿಕೆಗೆ ಬಂದಿದೆ ಎಂದರೆ ಆ ವಿಚಾರ, ಕೆಲಸ ಅಥವಾ ವಸ್ತುವಿನ ಬಗ್ಗೆ ನಾವು ಬಳಸುವ ವಿಶೇಷಣಗಳು (predicateಗಳು) ಒಂದು ಒಟ್ಟಂದಕ್ಕೆ ಬಂದಿವೆ ಎಂದೇ ಅರ್ಥ. ಹಾಗೆಯೇ ಆ ವಿಚಾರ ಅಥವಾ ಕೆಲಸದಲ್ಲಿ ನಮಗೆ ಹೆಚ್ಚಿನ ಪರಿಣತಿ ಬಂದಿದೆ ಎಂದರೆ ಅರ್ಥ ಆ ಒಟ್ಟಂದದಲ್ಲಿ ಇನ್ನೂ ಸೂಕ್ಷ್ಮ ರೂಪದ ಭೇದಗಳು, ತಾರತಮ್ಯಗಳು ಕಾಣಿಸುವುದಕ್ಕೆ ಪ್ರಾರಂಭವಾಗಿದೆ ಎಂದು. ಶಾಸ್ತ್ರೀಯ ಸಂಗೀತದ ತಿಳಿವಿಲ್ಲದ ಯಾರಿಗಾದರೂ ಒಂದು ರಾಗದ ಆರೋಹಣ ಅವರೋಹಣ ಸ್ವರಗಳನ್ನು ಹಾಡಿ ತೋರಿಸಿದರೆ, ಅವರಿಗೆ ಅದರಲ್ಲಿ ಯಾವ ವಿನ್ಯಾಸವೂ ಕೇಳಿಸುವುದಿಲ್ಲ. ಆದರೆ ಶಾಸ್ತ್ರೀಯ ಸಂಗೀತ ಗೊತ್ತಿದ್ದವರಿಗೆ ಈ ಸ್ವರಗಳು ಒಟ್ಟಂದವಾಗಿ ಯಾವುದೋ ಒಂದು ರಾಗವನ್ನು ಚಿತ್ರಿಸುತ್ತಿದೆ ಎಂದು ಅನುಭವಕ್ಕೆ ಬರುತ್ತದೆ. ಹಾಗೆಯೇ ಈ ಒಟ್ಟಂದದ ಅನುಭವವಿರುವುದರಿಂದಲೇ ಒಂದು ಸಣ್ಣ ಸ್ವರವನ್ನು ಬದಲಾಯಿಸಿದರೂ ಅದು ಬೇರೆಯದೇ ರಾಗ ಎಂದು ಅನುಭವಕ್ಕೆ ಬರುತ್ತದೆ. ಇಷ್ಟು ಹೇಳಿದ ಮೇಲೆ ವಸ್ತುಗಳ ಸ್ವರೂಪವನ್ನು ತಿಳಿಯುವುದು ಎಂದರೆ ವಸ್ತುಗಳ ಬಗೆಗಿನ ನಮ್ಮ ಪರಿಕಲ್ಪನೆಗಳ ಒಟ್ಟಂದವನ್ನು ತಿಳಿಯುವುದು ಎಂದಾಗುತ್ತದೆ. 

ಸಸ್ಯೂರ್‌ನ ರಾಚನಿಕ ಭಾಷಾವಿಜ್ಞಾನ 
ಈ ಹಿನ್ನೆಲೆಯಲ್ಲಿ ರಾಚನಿಕವಾದದ ಮೂಲಪುರುಷರಲ್ಲಿ ಒಬ್ಬನೆಂದು ಗುರುತಿಸುವ ಫರ್ಡಿನೆಂಡ್ ಡಿ ಸಸ್ಯೂರ್‍‌ನ ಕೆಲವು ವಿಚಾರಗಳನ್ನು ಚರ್ಚಿಸಬಹುದು. ಸಸ್ಯೂರ್ ಸಾಮಾನ್ಯ ಭಾಷಾಶಾಸ್ತ್ರದ ಅಧ್ಯಯನದ ವಸ್ತು ಯಾವುದು ಎಂಬ ಪ್ರಶ್ನೆಯನ್ನು ಹಾಕಿಕೊಳ್ಳುತ್ತಾನೆ. ಅವನ ಕಾಲದ ಭಾಷಾಶಾಸ್ತ್ರ ಮಾಡುತ್ತಿದ್ದುದು "ಫಿಲಾಲಜಿ" ಎಂದು ಕರೆಯಬಹುದಾದ ರೀತಿಯ ಸಂಶೋಧನೆಯನ್ನು. ಅಂದರೆ, ಭಾಷೆಗಳ ಉಗಮ, ಬೇರೆ ಬೇರೆ ಭಾಷೆಗಳ ನಡುವಿನ ಸಂಬಂಧ, ಪದಗಳ ವ್ಯುತ್ಪತ್ತಿ, ಸಾಹಿತ್ಯದಲ್ಲಿ ಭಾಷೆಯ ಚಮತ್ಕಾರಿಕ ಬಳಕೆ ಇವೇ ಮುಂತಾದ ರೀತಿಯ ವಿಚಾರಗಳು. ಸಸ್ಯೂರ್ ಇವೆಲ್ಲವೂ ಭಾಷೆಯ ಬಳಕೆಯಲ್ಲಿರುವ ವೈಚಿತ್ರ್ಯಗಳೇ ವಿನಾ ಭಾಷೆಯ ಮೂಲಸ್ವರೂಪದ ಅಧ್ಯಯನಕ್ಕೆ ಇವುಗಳಿಂದ ಪ್ರಯೋಜನವಿಲ್ಲ ಎಂದು ವಾದಿಸುತ್ತಾನೆ. ಹಾಗಾದರೆ ಭಾಷೆಯ ನಿಜವಾದ ಸ್ವರೂಪ ನಮಗೆ ದಕ್ಕುವುದು ಹೇಗೆ ಮತ್ತು ಎಲ್ಲಿ? ಅದಕ್ಕೆ ಉತ್ತರವಾಗಿ ಸಸ್ಯೂರ್ ಈ ರೀತಿಯ ತರ್ಕವನ್ನು ಮುಂದಿಡುತ್ತಾನೆ. ಭಾಷೆ ನಮಗೆ ಕಾಣಿಸುವುದು ಎರಡು ರೀತಿಗಳಲ್ಲಿ: ಮಾತು ಮತ್ತು ಬರವಣಿಗೆ. ಇದರಲ್ಲಿ ಬರವಣಿಗೆಯನ್ನು ಮಾತಿನ ಲಿಖಿತ ರೂಪ ಎಂದುಕೊಂಡರೆ, ಮಾತೇ ಮೂಲ ಎಂದಾಗುತ್ತದೆ. ಈ ಮಾತಿನಲ್ಲಿ ಎರಡು ಸ್ಥರಗಳಿವೆ. ಒಂದು, ನಾವು ಆಡುವ ವಾಕ್ಯಗಳು. ಇದನ್ನು ಸಸ್ಯೂರ್ ಪರೋಲ್ (parole) ಎಂದು ಕರೆಯುತ್ತಾನೆ. ಎರಡು, ನಮ್ಮ ಮಾತಿನ ಹಿಂದೆ ಇರುವ ವ್ಯಾಕರಣದ ವಿನ್ಯಾಸಗಳು. ಇದನ್ನು ಲಾಂಗ್ (langue) ಎಂದು ಕರೆಯುತ್ತಾನೆ. ಪರೋಲ್ ಎನ್ನುವುದು ನಮ್ಮ ನಮ್ಮ ಸಂದರ್ಭಕ್ಕೆ ಅನುಸಾರವಾಗಿ ಇರುವಂಥದ್ದು. ನಾವು ಎಷ್ಟು ವಾಕ್ಯಗಳನ್ನು ಬೇಕಾದರೂ ರಚಿಸಬಹುದು. ಅಂದಮೇಲೆ, ಪರೋಲ್ ಅನಂತವಾದದ್ದು. ಅದನ್ನು ಅಧ್ಯಯನಕ್ಕೆ ಒಳಪಡಿಸಲು ಬರುವುದಿಲ್ಲ. ಆದರೆ ಲಾಂಗ್ ಹಾಗಲ್ಲ. ನಾವು ಎಷ್ಟೇ ಹೊಸಹೊಸ ವಾಕ್ಯಗಳನ್ನು ಆಡಿದರೂ ಅದರ ಹಿಂದಿರುವ ವಿನ್ಯಾಸ, ವ್ಯಾಕರಣ ಮಾತ್ರ ಸೀಮಿತವಾದದ್ದು. ಈ ವಿನ್ಯಾಸಗಳು, ನಿಯಮಗಳು ಒಂದು ಭಾಷೆಗೆ ಸ್ಥಿರವಾಗಿರುತ್ತವೆ. ಕಾಲ ದೇಶಗಳಲ್ಲಿ ಬದಲಾವಣೆಯಾದ ಹಾಗೆಲ್ಲ ಪರೋಲ್ ಬದಲಾಗುತ್ತದೆ. ಆದರೆ ಲಾಂಗ್ ಸುಮಾರಾಗಿ ಸ್ಥಿರವಾಗಿರುತ್ತದೆ, ಸೀಮಿತವಾಗಿರುತ್ತದೆ. ಹಾಗಾಗಿ ಲಾಂಗ್ ಅನ್ನು ಅಧ್ಯಯನಕ್ಕೆ ಒಳಪಡಿಸಬಹುದು. 

ಹಾಗಾದರೆ, ಈ ಲಾಂಗ್ ಅಥವಾ ವಿನ್ಯಾಸ ಯಾವ ರೀತಿಯದ್ದು? ಭಾಷೆಯಲ್ಲಿ (ಅಥವಾ ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ, ವಾಕ್ಯಗಳಲ್ಲಿ) ಸಸ್ಯೂರ್ ಎರಡು ರೀತಿಯ ವಿನ್ಯಾಸಗಳನ್ನು ಗಮನಿಸುತ್ತಾನೆ. ಮೊದಲನೆಯದು, ವಾಕ್ಯದ ಒಂದು ನಿರ್ದಿಷ್ಟ ಸ್ಥಾನದಲ್ಲಿ ಯಾವ ಯಾವ ಪದಗಳು ಬರಬಹುದು ಎನ್ನುವ ವಿನ್ಯಾಸ. ಎರಡನೆಯದ್ದು ಒಂದು ವಾಕ್ಯದಲ್ಲಿ ಯಾವ ರೀತಿಯ ಪದದ ನಂತರ ಯಾವ ರೀತಿಯ ಪದಗಳು ಬರಬಹುದೆನ್ನುವ ವಿನ್ಯಾಸ. ಉದಾಹರಣೆಗೆ, "ನನಗೆ ಚಕ್ಕುಲಿ ಇಷ್ಟ" ಎನ್ನುವ ವಾಕ್ಯದಲ್ಲಿ ಈ ಎರಡು ವಿನ್ಯಾಗಳನ್ನು ಗಮನಿಸಿ. ಮೊದಲ ಸ್ಥಾನದಲ್ಲಿ ಒಂದು ಕರ್ತೃ ಪದವಿದೆ (ನನಗೆ). ಆ ಜಾಗದಲ್ಲಿ "ನಿನಗೆ", "ಅವನಿಗೆ", "ಅವಳಿಗೆ", "ಅವನಿಗೆ", "ನನ್ನ ಸ್ನೇಹಿತನಿಗೆ", ಹೀಗೆ ಯಾವುದಾದರೂ ಪದವನ್ನು ತುಂಬಿದರೆ, ಇದೇ ರೀತಿಯ ಒಂದು ಹೊಸ ವಾಕ್ಯ ಆಗುತ್ತದೆ. ಯಾವುದೇ ಒಂದು ಕರ್ತೃ ಪದವಾದರೂ ಸರಿ ಈ ಸಂದರ್ಭದಲ್ಲಿ ಮೂಡುವ ವಾಕ್ಯ ವ್ಯಾಕರಣಬದ್ಧವಾಗಿಯೇ ಇರುತ್ತದೆ. ಅದರರ್ಥ ಅದು ಅರ್ಥಬದ್ದವಾಗಿರುತ್ತದೆ ಎಂದೇನೂ ಅಲ್ಲ. ಉದಾಹರಣೆಗೆ ಈ ಸಂದರ್ಭದಲ್ಲಿ "ಮರ" ಎನ್ನುವ ಪದವನ್ನು ಕರ್ತೃ ಸ್ಥಾನದಲ್ಲಿ ಜೋಡಿಸಿ. "ಮರಕ್ಕೆ ಚಕ್ಕುಲಿ ಇಷ್ಟ". ಈ ವಾಕ್ಯ ಎಷ್ಟೇ ಅನರ್ಥ ಎಂದು ನಿಮಗೆ ಅನ್ನಿಸಿದರೂ ಸರಿಸುಮಾರಾಗಿ ವ್ಯಾಕರಣಬದ್ಧವಾಗಿಯಂತೂ ಇದೆ. ಹಾಗಾದರೆ, ಇಲ್ಲಿ ಸಮಂಜಸವಾದ ಪದ ಯಾವುದು ಎಂದು ನಿರ್ಧರಿಸುವುದು ಯಾರು? "ನನಗೆ" ಸಮಂಜಸವೋ, "ಅವನಿಗೆ" ಸಮಂಜಸವೋ? ಇದನ್ನು ವ್ಯಾಕರಣ ನಿರ್ಧರಿಸುವುದಿಲ್ಲ. ಇದನ್ನು ನಮ್ಮ ಬಳಕೆಯ ಸಂದರ್ಭ ನಿರ್ಧರಿಸುತ್ತದೆ. ನಾವು ನನ್ನ ಬಗ್ಗೆ ಮಾತನಾಡುತ್ತಿದ್ದರೆ, "ನನಗೆ" ಎಂದೂ, ನನ್ನ ಸ್ನೇಹಿತನ ಬಗ್ಗೆ ಮಾತನಾಡುತ್ತಿದ್ದರೆ, "ನನ್ನ ಸ್ನೇಹಿತನಿಗೆ" ಎಂದೂ ಬಳಸುತ್ತೇವೆ. ಆದ್ದರಿಂದ ಈ ಆಯ್ಕೆ ಸಂದರ್ಭ ನಿಷ್ಠವಾದದ್ದು. ವ್ಯಾಕರಣ ನಿಷ್ಠವಾದದ್ದಲ್ಲ. 

ಆದರೆ, ಈಗ ಎರಡನೆಯ ರೀತಿಯ ವಿನ್ಯಾಸವನ್ನು ಗಮನಿಸಿ. "ನನಗೆ ಚಕ್ಕುಲಿ ಇಷ್ಟ" ಎನ್ನುವಲ್ಲಿ, ಮೊದಲ ಪದ ಕರ್ತೃ ಪದವಾದ ಮೇಲೆ, ಎರಡನೆಯ ಪದ ವಸ್ತುವನ್ನು ಸೂಚಿಸಬೇಕು. ಕೊನೆಯ ಪದ ಕ್ರಿಯಾಪದವಾಗಿರಬೇಕು. ಇಲ್ಲಿ "ತುಂಬಾ" "ಸ್ವಲ್ಪ" "ಸಿಕ್ಕಾಪಟ್ಟೆ" "ಬೇಜಾನ್" ಇಂಥಾ ವಿಶೇಷಣಗಳನ್ನೂ ಜೋಡಿಸಬೇಕೆಂದರೆ, ಅದನ್ನು ಕ್ರಿಯಾಪದದ ಮೊದಲಿಗೇ ಜೋಡಿಸಬೇಕು. "ನನಗೆ ಚಕ್ಕುಲಿ ಸಿಕ್ಕಾಪಟ್ಟೆ ಇಷ್ಟ". ಬೇರೆಲ್ಲೂ ಮನಬಂದಂತೆ ಇದನ್ನು ಜೋಡಿಸಲು ಬರುವುದಿಲ್ಲ. ಈ ವಿನ್ಯಾಸ ವ್ಯಾಕರಣಕ್ಕೆ ಸಂಬಂಧಿಸಿದ್ದು. ಇದು ಸಂದರ್ಭ ನಿಷ್ಠವಲ್ಲ. ಬದಲಾಗಿ ನಿಯಮ ನಿಷ್ಠವಾದದ್ದು. 

ಇದರಲ್ಲಿ ಮೊದಲನೆಯದನ್ನು, ಅಂದರೆ, ಸಂದರ್ಭ ನಿಷ್ಠ ವಿನ್ಯಾಸವನ್ನು ಸಸ್ಯೂರ್ "ಪ್ಯಾರಾಡಿಗ್ಮ್ಯಾಟಿಕ್" (paradigmatic) ನೆಲೆ ಎಂದೂ, ನಿಯಮ ನಿಷ್ಠ ವಿನ್ಯಾಸವನ್ನು "ಸಿಂಟಾಗ್ಮ್ಯಾಟಿಕ್" (syntagmatic) ನೆಲೆ ಎಂದೂ ಕರೆಯುತ್ತಾನೆ. ಸರಳವಾಗಿ ಹೇಳಬೇಕೆಂದರೆ, ಸಿಂಟಾಗ್ಮ್ಯಾಟಿಕ್ ವಿನ್ಯಾಸ ವಾಕ್ಯದ ಉದ್ದಕ್ಕೆ (ಕನ್ನಡದಲ್ಲಿ, ಎಡದಿಂದ ಬಲಕ್ಕೆ) ಮತ್ತು ಪ್ಯಾರಾಡಿಗ್ಮ್ಯಾಟಿಕ್ ವಿನ್ಯಾಸ ಮೇಲಿನಿಂದ ಕೆಳಕ್ಕೆ ಹರಿಯುತ್ತದೆ. 

                                                                   ಪ್ಯಾರಾಡಿಗ್ಮ್ಯಾಕ್ ನೆಲೆ →
                                           ನನಗೆ                      ಪರೀಕ್ಷೆ                                                               ಭಯ
                                           ನಮಗೆ                     ಚಕ್ಕುಲಿ            ಅಂದರೆ           ತುಂಬಾ                   ಇಷ್ಟ
   ಸಿಂಟಾಗ್ಮ್ಯಾಟಿಕ್  ನೆಲೆ ↓      ಅವರಿಗೆ                    ಸಿಹಿ                                      ಸ್ವಲ್ಪ                       ಉಗ್ಗು
                                           ಎಲ್ಲರಿಗೂ                                                                                    ಹಂಚೋಣ

ಸಸ್ಯೂರ್ ಪ್ರಕಾರ ಭಾಷೆಯ ಅಧ್ಯಯನ ಎಂದರೆ ಸಿಂಟಾಗ್ಮ್ಯಾಟಿಕ್ ನೆಲೆಯ ಅಧ್ಯಯನ. ಈ ನೆಲೆಯಲ್ಲಿರುವ ವ್ಯಾಕರಣ ನಿಯಮಗಳನ್ನು ಮತ್ತು ಅವುಗಳ ಅಂತಃಸಂಬಂಧವನ್ನು ಅಧ್ಯಯನ ಮಾಡುವುದೇ ಭಾಷಾಶಾಸ್ತ್ರದ ಗುರಿ ಎಂದು ಅವನ ವಾದ. ಅಂದಮೇಲೆ, ಭಾಷೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವುದೆಂದರೆ ಕಾಲಾಂತರದಲ್ಲಿ ಅದು ಹೇಗೆಲ್ಲಾ ಬದಲಾಗಿದೆ ಎಂದು ಐತಿಹಾಸಿಕವಾಗಿ ನೋಡುವ, ಅಂದರೆ, "ಡಯಾಕ್ರಾನಿಕ್" ಆದ ಕೆಲಸವಲ್ಲ. ಬದಲಾಗಿ ಒಂದು ನಿರ್ದಿಷ್ಟ ಸ್ಥಿತಿಯಲ್ಲಿ, ಅದರ ನಿಯಮಗಳನ್ನು ಮತ್ತು ಆ ನಿಯಮಗಳ ನಡುವಿನ ಸಂಬಂಧಗಳನ್ನು ಅರಿಯುವ "ಸಿಂಕ್ರಾನಿಕ್" ಕೆಲಸ. ಒಂದು ಆಟದ ಉದಾಹರಣೆ ತೆಗೆದುಕೊಳ್ಳಿ. ಕ್ರಿಕೆಟ್ ಆಟವನ್ನು ಎರಡು ರೀತಿಯಲ್ಲಿ ವರ್ಣಿಸಬಹುದು. ಅದು ಎಲ್ಲಿ, ಹೇಗೆ ಹುಟ್ಟಿದ್ದು, ಯಾಕೆ ಆಂಗ್ಲ ಭಾಷೆ ಇರುವ ದೇಶಗಳಲ್ಲೇ ಅದು ಅಷ್ಟು ಪ್ರಸಿದ್ಧವಾಯಿತು, ಕಾಲಾಂತರದಲ್ಲಿ ಆ ಆಟದಲ್ಲಿ ಏನೆಲ್ಲಾ ಬದಲಾವಣೆಗಳಾದವು ಇತ್ಯಾದಿ. ಇದು ಡಯಾಕ್ರಾನಿಕ್ ರೀತಿ. ಹಾಗೆಯೇ ಇದನ್ನು ಇನ್ನೊಂದು ರೀತಿಯಲ್ಲೂ ವರ್ಣಿಸಬಹುದು. ಈ ಆಟದ ನಿಯಮಗಳೇನು? ಈ ನಿಯಮಗಳ ನಡುವೆ ಇರುವ ಸಂಬಂಧಗಳೇನು? ಹೀಗೆ. ಇದು ಸಿಂಕ್ರಾನಿಕ್ ರೀತಿ. ಈ ಆಟದ ರೀತಿ ರಿವಾಜುಗಳಲ್ಲಿ ಎಷ್ಟೇ ಬದಲಾವಣೆಗಳಾಗಿದ್ದರೂ ಇದರ ನಿಯಮಗಳು ಬಹುಪಾಲು ಸ್ಥಿರವಾಗಿರುತ್ತವೆ. ಸಸ್ಯೂರ್ ಪ್ರಕಾರ ಭಾಷೆಯ ವೈಜ್ಞಾನಿಕ ಅಧ್ಯಯನ ಸಿಂಕ್ರಾನಿಕ್ ರೀತಿಯದ್ದಾಗಿರುತ್ತದೆ. 

ಸಂಕೇತಗಳು ಮತ್ತು ರಚನೆಗಳು 
ಸಸ್ಯೂರ್‌ನ ರಚನಾವಾದದ ಮತ್ತೊಂದು ಒಳನೋಟವಿರುವುದು ಸಂಕೇತ ಶಾಸ್ತ್ರದ ವಿಷಯದಲ್ಲಿ. ಏನನ್ನಾದರೂ ನಾವು ವಸ್ತುವೆಂದು ಪರಿಗಣಿಸಬಹುದು ಅಥವಾ ಸಂಕೇತವೆಂದು ಪರಿಗಣಿಸಬಹುದು. ಮನೆಯ ಮುಂದೆ ಬಿದ್ದಿರುವ ದಿನಪತ್ರಿಕೆ ಮನೆಯವರಿಗೆ ಒಂದು ವಸ್ತು. ಅದನ್ನು ಬಳಸಿ ನಮ್ಮ ಪ್ರಪಂಚದ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳಬಹುದು. ಆದರೆ, ಅದೇ ದಿನಪತ್ರಿಕೆ ಕಳ್ಳಕಾಕರಿಗೆ ಒಂದು ಸಂಕೇತ. ಮನೆಯಲ್ಲಿ ಯಾರೂ ಇಲ್ಲವಾದ್ದರಿಂದ ಈ ದಿನಪತ್ರಿಕೆ ಇನ್ನೂ ಹೊರಗೆಯೇ ಬಿದ್ದಿದೆ ಎಂದು ಇದರ ಅರ್ಥ. ಅಂದಮೇಲೆ ಏನನ್ನಾದರೂ ವಸ್ತುವೆಂದು ನೋಡಿದರೆ, ಅದರ ಬಳಕೆಯ ಆಯಾಮವನ್ನು ಗಮನಿಸುತ್ತೇವೆ. ಅದೇ ಸಂಕೇತವೆಂದು ನೋಡಿದರೆ ಅದರ ವ್ಯಾಖ್ಯಾನದ ಆಯಾಮವನ್ನು ಗಮನಿಸುತ್ತೇವೆ. ನಮ್ಮ ದಿನನಿತ್ಯದಲ್ಲಿ ನಾವು ಭಾಷೆಯನ್ನು ವಸ್ತುಗಳ ವ್ಯವಸ್ಥೆಗೆ ಒಂದು ಬದಲೀ ವ್ಯವಸ್ಥೆ ಎಂದು ಬಳಸುತ್ತಿರುತ್ತೇವೆ. ಬಸ್ಸು ಎಂದರೆ ರಸ್ತೆಯಲ್ಲಿರುವ ಆ ದೊಡ್ಡ ವಾಹನ. ಟಾರ್ಚು ಎಂದರೆ ಕಪಾಟಿನಲ್ಲಿರುವ ಬೆಳಕು ಬೀರುವ ಹಿಡಿಕೆ, ಹೀಗೆ. ಆದರೆ, ಸಸ್ಯೂರ್ ಭಾಷೆಯನ್ನು ಒಂದು ಸಂಕೇತಗಳ ವ್ಯವಸ್ಥೆ ಎಂದೇ ಅಧ್ಯಯನ ಮಾಡಬೇಕು ಎಂದು ಹೇಳುತ್ತಾನೆ. 

ಅಲ್ಲಿಯವರೆಗೂ ಭಾಷಿಕ ಸಂಕೇತಗಳನ್ನು ಎರಡು ಬಿಂದುಗಳಾಗಿ ನೋಡುವ ಕ್ರಮ ಇತ್ತು. ಒಂದು, ಪದ. ಇನ್ನೊಂದು ಆ ಪದ ಸೂಚಿಸುವ ವಸ್ತು. 'ಕಂಪ್ಯೂಟರ್' ಎನ್ನುವ ಪದದ ಅರ್ಥವೇನೆಂದರೆ, ಅದು ಸೂಚಿಸುವ ಈ ವಸ್ತು. ವಸ್ತುಗಳೇ ಅಲ್ಲದ ಕೆಲವು ವಿಚಾರಗಳನ್ನು ಸೂಚಿಸುವಾಗಲೂ ಇದೇ ಕ್ರಮವನ್ನು ಸ್ವಲ್ಪ ವಿಸ್ತರಿಸಿ ಬಳಸಲಾಗುತ್ತಿತ್ತು. ಉದಾಹರಣೆಗೆ, 'ತ್ರಿಕೋಣ' ಎನ್ನುವ ಪದ. ತ್ರಿಕೋಣ ಎನ್ನುವ ಯಾವ ವಸ್ತುವೂ ಇಲ್ಲದೆ ಇರುವುದರಿಂದ ಈ ಪದ ಯಾವ ವಸ್ತುವನ್ನು ಸೂಚಿಸುತ್ತಿದೆ ಎಂದರೆ, ಇದು ಯಾವುದೋ ಅಮೂರ್ತವಾದ ಒಂದು ಕಾಲ್ಪನಿಕ ವಸ್ತುವನ್ನು ಸೂಚಿಸುತ್ತಿದೆ ಎಂದು ಅರ್ಥೈಸಲಾಗಿತ್ತು. ಪದ ಮತ್ತು ವಸ್ತುವಿನ ಈ ಮಾದರಿಯನ್ನು ವಿರೋಧಿಸಿ ಸಸ್ಯೂರ್ 'ಸೂಚಕ', 'ಸೂಚಿತ' ಮತ್ತು 'ವಸ್ತು' ಎನ್ನುವ ಮೂರು ಬಿಂದುಗಳ ಮಾದರಿಯನ್ನು ಬೆಳೆಸಿದ. ಇದರ ಪ್ರಕಾರ 'ತ್ರಿಕೋಣ' ಎನ್ನುವ ಸಂಕೇತದಲ್ಲಿ ಮೂರು ಆಯಾಮಗಳಿವೆ. ಒಂದು, ಶಬ್ದಗಳ ಜೋಡಣೆಯಿಂದ ಉಂಟಾದ ಒಂದು ಶ್ರವ್ಯಚಿತ್ರ (auditory image). ಇದೇ ಸೂಚಕ. ಎರಡನೆಯದ್ದು ನಮ್ಮ ಮನಸ್ಸಿನಲ್ಲಿರುವ ಒಂದು ಬೌದ್ಧಿಕ ಕಲ್ಪನೆ (mental concept). ಇದು ಸೂಚಿತ. ಮೂರನೆಯದ್ದು ಇಂತಹ ಕಲ್ಪನೆಗಳನ್ನು ಬಳಸಿ ನಾವು ಗುರುತಿಸುವ ನಾಮರೂಪ ಭೇದಗಳು (objects). ಸಸ್ಯೂರ್ ಪ್ರಕಾರ ಸೂಚಕ ಮತ್ತು ಸೂಚಿತಗಳ ನಡುವಿನ ಸಂಬಂಧ ಮಾತ್ರ ಭಾಷೆಗೆ ಸಂಬಂಧಿಸಿದ್ದು. ಇದು ಭಾಷೆಯ ಒಳಗೆ ಇರುವ ಸಂಬಂಧ. ಆದರೆ ಸೂಚಿತ ಮತ್ತು ವಸ್ತುಗಳ ನಡುವೆ ಇರುವ ಸಂಬಂಧ ಭಾಷೆಯ ಹೊರಗೆ ಇರುವಂಥದ್ದು. ಹಾಗಾಗಿ ಭಾಷಾಶಾಸ್ತ್ರದ ಪರಿಗಣನೆಗೆ ಹೊರಗಿರುವಂಥದ್ದು. 

ಸೂಚಕ ಸೂಚಿತಗಳ ಸಂಬಂಧಕ್ಕೆ ಯಾವುದೇ ಆಂತರಿಕ ಕಟ್ಟುಪಾಡುಗಳಿಲ್ಲ. ಅಂದರೆ, ಯಾಕೆ ಈ ಸೂಚಕಕ್ಕೆ ಇದೇ ಸೂಚಿತ ಎನ್ನುವ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯವಿಲ್ಲ. 'ಮರ' ಎನ್ನುವ ಕಲ್ಪನೆಯನ್ನು 'ಮರ' ಎನ್ನುವ ಶಬ್ದದಿಂದಲೇ ಯಾಕೆ ಗುರುತಿಸಬೇಕು? ಎಂದು ಕೇಳಿದರೆ ಅದಕ್ಕೆ ಯಾವುದೇ ತಾರ್ಕಿಕವಾದ ಉತ್ತರವನ್ನೂ ಹೇಳಲು ಸಾಧ್ಯವಿಲ್ಲ. ಅಂಥ ಉತ್ತರದ ಅಗತ್ಯವೂ ಇಲ್ಲ. ಇಂತಹ ಸಂಬಂಧವನ್ನು ಸಸ್ಯೂರ್ "ಯಾದೃಚ್ಚಿಕ" (arbitrary) ಎಂದು ಕರೆಯುತ್ತಾನೆ. ಇಲ್ಲಿ ಒಂದು ಅಂಶ ಗಮನಿಸಬೇಕು: ಯಾದೃಚ್ಚಿಕ ಎಂದ ತಕ್ಷಣ ಮನಸೋಇಚ್ಚೆ ಎಂದು ತಿಳಿದುಕೊಳ್ಳಬಾರದು. ಯಾದೃಚ್ಚಿಕ ಸಂಬಂಧ ಎಂದರೆ ತಾರ್ಕಿಕವಲ್ಲದ, ಆಂತರಿಕವಲ್ಲದ, ಆದರೆ ನಿಯಮಬದ್ಧವಾದ ಸಂಬಂಧ ಎಂದು ಅರ್ಥ. ಉದಾಹರಣೆಗೆ ತಂದೆ ಮಗನ ಸಂಬಂಧ ಯಾದೃಚ್ಚಿಕವಲ್ಲ. ವಿಶೇಷ ಸಂದರ್ಭಗಳನ್ನು ಹೊರತುಪಡಿಸಿದರೆ, ಒಬ್ಬ ವ್ಯಕ್ತಿಯ ಸಂತಾನವಾಗಿದ್ದರೆ ಮಾತ್ರ ಆತ ಆ ವ್ಯಕ್ತಿಯ ಮಗನಾಗಿರುತ್ತಾನೆ. ಅಂದರೆ, ಈ ಸಂಬಂಧದ ಹಿಂದೆ ಒಂದು ನಿರ್ದಿಷ್ಟವಾದ ಆಂತರಿಕವಾದ ಜೈವಿಕ ತರ್ಕ ಇದೆ. ಮತ್ತೊಬ್ಬನನ್ನು ತಂದು ನಿಲ್ಲಿಸಿ ನಾಳೆಯಿಂದ ಇವನು ನಿನ್ನ ಮಗ ಎಂದು ಹೇಳಲು ಬರುವುದಿಲ್ಲ. ಆದರೆ, ಮನೆ ಮಾಲೀಕ ಮತ್ತು ಬಾಡಿಗೆದಾರನ ಸಂಬಂಧವನ್ನು ಗಮನಿಸಿ. ಇಲ್ಲಿ ಮಾಲೀಕನಿಗೂ ಬಾಡಿಗೆದಾರನಿಗೂ ಕಾನೂನಿನ ನಿಯಮದ ಹೊರಗೆ ಯಾವುದೇ ಆಂತರಿಕ ಸಂಬಂಧವಿಲ್ಲ. ಇವನಲ್ಲದಿದ್ದರೆ ಈ ಕರಾರನ್ನು ಒಪ್ಪುವ ಮತ್ತೊಬ್ಬ ಬಾಡಿಗೆದಾರನನ್ನು ತಂದು ಈ ಸಂಬಂಧವನ್ನು ಏರ್ಪಡಿಸಬಹುದು. ಇದು ಒಂದು ರೀತಿಯಲ್ಲಿ ಯಾದೃಚ್ಚಿಕ ಸಂಬಂಧ. 

ಚದುರಂಗದಾಟದ ನಮ್ಮ ಉದಾಹರಣೆಯನ್ನು ನೆನಪಿಸಿಕೊಳ್ಳಿ. ಯಾವುದೇ ಕಾಯಿ 'ಕುದುರೆ' ಎನ್ನುವ ಕಾಯಿ ಆಗುವುದಕ್ಕೆ ಅದು ಕುದುರೆಯ ರೂಪವನ್ನೇ ಹೊಂದಿರಬೇಕು ಎಂದೇನೂ ಇಲ್ಲ. ಎಷ್ಟೆಂದರೆ ಆ ಕಾಯಿ ಕಳೆದುಹೋದರೆ, ಒಂದು ಹುಣಿಸೆಬೀಜದಿಂದಲೂ ನಮ್ಮ ಕೆಲಸ ಸಾಗಿಸಬಹುದು. ಆದರೆ, ಇದು ನಮ್ಮ ಕುದುರೆ ಎಂಬ ನಡೆಯ ನಿಯಮಗಳನ್ನು ಪಾಲಿಸಿದರೆ ಸಾಕು. ಅಂದಮೇಲೆ ಒಂದು ಸಂಕೇತ ವ್ಯವಸ್ಥೆ ನಡೆಯುವುದು ನಿಯಮಗಳ ಮೇಲೆಯೇ ವಿನಃ ಪ್ರಪಂಚದ ಜೊತೆಗೆ ಆ ಸಂಕೇತಗಳಿಗೆ ಇರುವ ಸಾದೃಶ್ಯದಿಂದ ಅಲ್ಲ. ಅಂದರೆ ಭಾಷೆ ಎನ್ನುವುದು ನಮ್ಮ ಪ್ರಪಂಚದ ಬಗೆಗಿನ ಸಾದೃಶ್ಯದ ಚಿತ್ರಣವಲ್ಲ. ಬದಲಾಗಿ, ನಮ್ಮ ವ್ಯವಹಾರದಲ್ಲಿ ನಾವು ಮಾಡುವ ನಿಯಮಬದ್ಧವಾದ ಭೇದಾಭೇದಗಳ ಕ್ರಮ. ಟ್ರಾಫಿಕ್ ಸಿಗ್ನಲ್ಲಿನ ಈ ಉದಾಹರಣೆಯನ್ನು ಗಮನಿಸಿ: ಟ್ರಾಫಿಕ್ ಸಿಗ್ನಲ್ ಒಂದು ಸಂಕೇತ ವ್ಯವಸ್ಥೆ. ಅದು ನಮ್ಮ ಪ್ರಪಂಚದ ಬಗ್ಗೆ ಯಾವ ಚಿತ್ರಣವನ್ನೂ ನೀಡುತ್ತಿಲ್ಲ. ಬದಲಾಗಿ, ಒಂದು ನಿರ್ದಿಷ್ಟ ನಿಯಮದ ಪ್ರಕಾರ ವಸ್ತುಗಳನ್ನೂ (ಅಂದರೆ, ಕಾರು, ಬಸ್ಸು ಇತ್ಯಾದಿ) ಮತ್ತು ಅವುಗಳ ವ್ಯವಹಾರಗಳನ್ನೂ (ಅಂದರೆ, ಓಡಾಟ, ನಿಲ್ಲುವಿಕೆ ಇತ್ಯಾದಿ) ವಿಂಗಡಿಸಿ ನಿರ್ದೇಶಿಸುತ್ತಿದೆ. ಇದನ್ನು ಸಸ್ಯೂರ್ ಭಾಷೆಯ irreferential  ಗುಣ ಎಂದು ಕರೆಯುತ್ತಾನೆ. ಭಾಷೆ ಕೆಲಸ ಮಾಡುವುದು ತೋರಿಸುವುದರ ಮೂಲಕ ಅಲ್ಲ. ಮಾಡುವುದರ ಮೂಲಕ. ಅಂದರೆ, ಇರುವ ವಸ್ತುಗಳಿಗೆ ಹೆಸರು ಕೊಟ್ಟು ಕರೆಯುವುದು ಭಾಷೆಯ ಕೆಲಸವಲ್ಲ. ನಮ್ಮ ಪ್ರಜ್ಞೆಯ ಮೂಲಕ ವಸ್ತುಗಳನ್ನು ನಿರ್ದಿಷ್ಟ ರೀತಿಯಲ್ಲಿ ಗುರುತಿಸುವುದಕ್ಕೆ ಸಹಾಯ ಮಾಡುವುದು ಭಾಷೆಯ ಕೆಲಸ. 

ಸಸ್ಯೂರ್‌ನ ಈ ವಿಧಾನ ಮುಂದೆ ಬೇರೆಬೇರೆ ಸಂಕೇತ ವ್ಯವಸ್ಥೆಗಳನ್ನು ಅಧ್ಯಯನ ಮಾಡುವ ವಿಷಯಗಳಿಗೆಲ್ಲಾ ವ್ಯಾಪಿಸಿತು. ಕ್ಲಾಡ್ ಲೆವಿ ಸ್ಟ್ರಾಸ್ ಎಂಬ ಫ್ರೆಂಚ್ ಮಾನವಶಾಸ್ತ್ರಜ್ಞ, ಸಸ್ಯೂರ್‌ನ ಈ ವಿಧಾನವನ್ನೇ ಅನುಸರಿಸಿ ಬೇರೆಬೇರೆ ಜನಾಂಗಗಳಲ್ಲಿ ಇರುವ ಆಚರಣೆಗಳು, ನಂಬಿಕೆಗಳು ಮತ್ತು ರೂಪಕಗಳನ್ನು ಅಧ್ಯಯನ ಮಾಡಬಹುದು ಎಂದು ತೋರಿಸಿಕೊಟ್ಟನು. ಹಾಗೆಯೇ, ರೊಮಾನ್ ಯಾಕುಬ್ಸನ್ ಎನ್ನುವ ಭಾಷಾಶಾಸ್ತ್ರಜ್ಞ ನಮ್ಮ ಮಾತುಕತೆಯ ಕ್ರಮವನ್ನು ಮತ್ತು ಪಠ್ಯಗಳ ರಚನೆಯ ಕ್ರಮವನ್ನು ಇದೇ ರೀತಿ ನೋಡಬಹುದು ಎಂದು ತೋರಿಸಿದನು. ಇದು ಮುಂದೆ ಫಾರ್ಮಲಿಸಂ ಎನ್ನುವ ಒಂದು ಅಧ್ಯಯನ ಕ್ರಮವಾಗಿ ಬೆಳೆಯಿತು. ರಷ್ಯಾದಲ್ಲಿ ಮಿಖಾಯಿಲ್ ಬಾಖ್ತಿನ್ ಮತ್ತು ಫ್ರಾನ್ಸ್‌‌‌ ನಲ್ಲಿ ರೋಲಾ ಬಾರ್ತ್ ಇದೇ ಕ್ರಮದಲ್ಲಿ ಸಾಹಿತ್ಯ ಕೃತಿಗಳು ಮತ್ತು ಜನಪ್ರಿಯ ಸರಕು ಸಂಸ್ಕೃತಿಯ ವಸ್ತುಗಳನ್ನೂ ಅಧ್ಯಯನ ಮಾಡಬಹುದೆಂದು ತೋರಿಸಿದರು. ಇಲ್ಲೆಲ್ಲಾ ಮುಖ್ಯವಾಗಿದ್ದ ಒಂದು ಸಾಮಾನ್ಯ ವಿಚಾರವೆಂದರೆ ವಸ್ತುಗಳ ಅರ್ಥ ಅಥವಾ ಮೌಲ್ಯ ನಿರ್ಧಾರವಾಗುವುದು ಅವುಗಳ ಆಂತರಿಕ ಲಕ್ಷಣಗಳಿಂದ ಅಲ್ಲ. ಬದಲಾಗಿ, ಆ ವಸ್ತುವಿಗೆ ಇತರ ವಸ್ತುಗಳೊಂದಿಗೆ ಇರುವ ವ್ಯವಸ್ಥಿತವಾದ ಭಿನ್ನತೆಯ ಸಂಬಂಧಗಳ  ಮೂಲಕ. ಅಂದರೆ, systematic differential relations ಮೂಲಕ, ಎನ್ನುವುದು. ಹೀಗೆ ವಿಜ್ಞಾನದ ಪ್ರಾಯೋಗಿಕ ವಿಧಾನಕ್ಕೆ ಸರಿಸಮನಾಗಿ ಮಾನವಿಕ ವಿಜ್ಞಾನಗಳು ಕಂಡುಕೊಂಡ ಒಂದು ವೈಜ್ಞಾನಿಕ ಮಾದರಿ ಎನ್ನುವ ಪ್ರತಿಷ್ಠೆ ಇಪ್ಪತ್ತನೆ ಶತಮಾನದ ಮಧ್ಯಭಾಗದಲ್ಲಿ structuralismಗೆ ದಕ್ಕಿತ್ತು. 

ರಾಚನಿಕವಾದದ ಬಗ್ಗೆ ವಿಮರ್ಶೆಗಳು 
ಆದರೆ, ೨೦ನೇ ಶತಮಾನದ ಎರಡನೆಯ ಭಾಗದಲ್ಲಾಗಲೇ structuralist ವಿಧಾನಗಳ ಬಗ್ಗೆ ತಕರಾರು ಮತ್ತು ಅಸಮಾಧಾನಗಳು ಶುರುವಾಗಿದ್ದವು. ಇದರಲ್ಲಿ ಇಬ್ಬರು ಮುಖ್ಯ ಚಿಂತಕರನ್ನು ಗಮನಿಸಬೇಕು. ಕಾಂಟಿನೆಂಟಲ್ ಪರಂಪರೆಯ ತತ್ವಶಾಸ್ತ್ರಜ್ಞನಾದ ಜಾಕ್ ದೆರಿದಾ ಮತ್ತು ಅಮೇರಿಕಾದ ಅನಲಿಟಿಕಲ್ ತತ್ವಶಾಸ್ತ್ರ ಪರಂಪರೆಯಲ್ಲಿ ಬಂದ ಭಾಷಾವಿಜ್ಞಾನಿ ನೋಮ್ ಚಾಮ್ಸ್ಕಿ. ಇವರಿಬ್ಬರ ಕ್ರಮಗಳು ಒಂದಕ್ಕೊಂದು ಪೂರಕವಾಗಿ ಇರದಿದ್ದರೂ ಇವನ್ನು ರಾಚನಿಕವಾದದ ಎರಡು ವಿಭಿನ್ನ ರೀತಿಯ ವಿಮರ್ಶೆಗಳಾಗಿ ಒಟ್ಟಿಗೆ ನೋಡಬಹುದು. 

ದೆರಿದಾನ ಪ್ರಕಾರ ರಾಚನಿಕವಾದದ ದೊಡ್ಡ ಕೊಡುಗೆ ಎಂದರೆ ನಮ್ಮ ತಿಳುವಳಿಕೆ ಮತ್ತು ಭಾಷೆಯ ಬಗೆಗಿನ ನಮ್ಮ ನಂಬಿಕೆಗಳನ್ನು ಸತ್ಯದ ಪರಿಕಲ್ಪನೆಯಿಂದ ಬಿಡುಗಡೆಗೊಳಿಸಿದ್ದು. ಅಂದರೆ, ಪಶ್ಚಿಮದ ತತ್ವಶಾಸ್ತ್ರ ಪರಂಪರೆಯಲ್ಲಿ ಒಂದು ಅತಾರ್ಕಿಕವಾದ ಸತ್ಯದ ಪರಿಕಲ್ಪನೆ ಕೆಲಸ ಮಾಡಿದೆ. ಇದನ್ನು ದೆರಿದಾ logocentrism ಎಂದು ಕರೆಯುತ್ತಾನೆ. ಇಲ್ಲಿ ಸತ್ಯ ಎಂದರೆ ನಮ್ಮ ಪರಿಕಲ್ಪನೆಗಳ ಮೂಲಕ ನಾವು ಮಾಡುವ ಭೇದಾಭೇದಗಳಾಚೆಗೆ ಮತ್ತು ನಮ್ಮ ತಿಳುವಳಿಕೆಗೂ ಮೊದಲಿಗೇ ಇರುವ ಅಸ್ತಿತ್ವವನ್ನು ಅರ್ಥಮಾಡಿಕೊಳ್ಳುವುದು ಎಂದರ್ಥ. ಅಂದಮೇಲೆ ನಮ್ಮ ಅನುಭವ ಎನ್ನುವುದು ಈ ಮೊದಲೇ ಇರುವ ಸತ್ಯದ ನಕಲು ಪ್ರತಿ. ಇಲ್ಲಿ, ಈ ಮೊದಲೇ ಇರುವ ಸತ್ಯ ಎಂದರೆ ಮಾನವರ ಪ್ರಜ್ಞೆಯನ್ನು ಮೀರಿದ ಸತ್ಯ ಎಂದಾಗುತ್ತದೆ. ದೆರಿದಾನ ಪ್ರಕಾರ ಇದು ನೇರವಾಗಿ ಒಂದು theological ಆದ ಪರಿಕಲ್ಪನೆ. ಇಂತಹ ಪರಿಕಲ್ಪನೆ ಒಂದೇ ಏಟಿಗೆ ಸತ್ಯವನ್ನು ದೈವಿಕವಾಗಿಸಿ (ಅಂದರೆ, ನಮ್ಮ ಬೌದ್ಧಿಕ ಭೇದಾಭೇದಗಳಿಂದ ಸ್ವತಂತ್ರವಾದ ಇನ್ನೊಂದೇ ವಾಸ್ತವ ಎಂಬಂತೆ ಮಾಡಿ) ಅನುಭವವನ್ನು ಅದರ ನಕಲನ್ನಾಗಿಸಿ ಬಿಡುತ್ತದೆ. ಒಂದು ರೀತಿಯಿಂದ ನೋಡಿದರೆ, objectivity vs. subjectivity, fact vs. value, is vs. ought, matter vs. spirit ಇಂತಹ ವಿಚಾರಗಳ ನಡುವಿನ ಸಂಘರ್ಷಗಳ ಮೂಲ ಇರುವುದು ಜ್ಞಾನದ ಇಂತಹ theological ಚಿತ್ರಣದಲ್ಲಿ. ನಮ್ಮ ಬೌದ್ಧಿಕ ಭೇದಾಭೇದಗಳಿಗೂ ಪ್ರಪಂಚದ ಇರುವಿಕೆಗೂ ಸಂಬಂಧವಿಲ್ಲ ಎಂದಾದಾಗ ಮಾತ್ರವೇ ತಾನೇ ಪ್ರಪಂಚದ ನಿಜವಾದ ಸ್ಥಿತಿ ಅಂದರೆ, objective ಸ್ಥಿತಿ, ಮತ್ತು ನಮ್ಮ ಖಾಸಗಿ ಮಾನಸಿಕ ಚಿತ್ರಣಗಳು ಅಂದರೆ, subjective ಸ್ಥಿತಿ, ಎಂದೆಲ್ಲಾ ಸಂಘರ್ಷ ಉಂಟಾಗುವುದು? 

ಇದರ ವಿರುದ್ಧವಾಗಿ ರಾಚನಿಕವಾದವು ಸತ್ಯದ ಸಮಸ್ಯೆಯನ್ನು ಹೊರಗಿಟ್ಟಿತು. ಜ್ಞಾನವೆಂದರೆ, ನಮಗಿಂತ ಅತೀತವಾಗಿ ಇರುವ ಪ್ರಪಂಚದ ಸರಿಯಾದ ಚಿತ್ರಣವಲ್ಲ. ಬದಲಾಗಿ, ನಮ್ಮ ಅನುಭವದಲ್ಲಿ ನಾವು ಮಾಡುವ ವ್ಯವಸ್ಥಿತವಾದ ಭಿನ್ನತೆಗಳ ವ್ಯವಸ್ಥಿತವಾದ ಅರಿವು ಎಂದು ಸಾಧಿಸಿತು. ಅಷ್ಟರಮಟ್ಟಿಗೆ theology ಮತ್ತು logocentrismನಿಂದ ಮಾನವಿಕ ವಿಜ್ಞಾನಗಳನ್ನು ಪಾರುಮಾಡಿತು. ಆದರೆ, ದೆರಿದಾ ಈ ತರ್ಕವನ್ನೇ ಮುಂದುವರಿಸಿ, ರಾಚನಿಕವಾದ ಹೇಗೆ ತಾನು ಕೊಟ್ಟ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಯಿತು ಎಂದು ವಾದಿಸುತ್ತಾನೆ. 

ದೆರಿದಾ ತನ್ನ ಅತಿಮುಖ್ಯ ಲೇಖನವಾದ Structure Sign and Play in the Human Sciences (1978) ನಲ್ಲಿ ಮತ್ತು Of Grammatology (1967) ಎನ್ನುವ ಪುಸ್ತಕದಲ್ಲಿ ತನ್ನ ವಿಮರ್ಶೆಯನ್ನು ಬೆಳೆಸುತ್ತಾ ಭಾಷೆಯನ್ನು (ಅಥವಾ ಯಾವುದೇ ಸಂಕೇತ ವ್ಯವಸ್ಥೆಯನ್ನು) ರಾಚನಿಕವಾಗಿ ನೋಡುವುದೇನೋ ಸರಿ. ಆದರೆ, ಈ ರಾಚನಿಕತೆ ಬರುವುದು ಎಲ್ಲಿಂದ ಅಥವಾ ಈ ರಚನೆ ನಿರ್ಧರಿತವಾಗುವುದು ಹೇಗೆ ಎಂದು ಕೇಳಿದರೆ ಪುನಃ ಅದಕ್ಕೆ ಭಾಷೆಯ ಅಂತಃಸತ್ವದಿಂದ ಎಂದೋ ಅಥವಾ ವಸ್ತುಗಳ ಮೂಲರೂಪದಿಂದ ಎಂದೋ ಉತ್ತರಿಸಬೇಕಾಗುತ್ತದೆ. ಇದು ಮತ್ತೆ ಅದೇ logocentric ಕೂಪಕ್ಕೆ ನಮ್ಮನ್ನು ತಳ್ಳುತ್ತದೆ. ಹಾಗಾಗಿ ರಾಚನಿಕವಾದವನ್ನು ಒಪ್ಪಿಯೂ ಒಪ್ಪಿಕೊಳ್ಳದ ಅನಂತವಾದ ಚಿಕಿತ್ಸಕ ಚಿಂತನೆಯ ಕ್ರಮವನ್ನು ಪಾಲಿಸಬೇಕು ಎನ್ನುವುದು ದೆರಿದಾನ ಅಭಿಮತ. ದೆರಿದಾನ ಈ ರೀತಿಯ ಸಂದಿಗ್ಧ ವಿಚಾರಗಳನ್ನು ಜಾನ್ ಸರ್ಲ್‌ನಂಥ ಚಿಂತಕರು ಇದೊಂದು ವೃಕ್ಷಬೀಜ ನ್ಯಾಯದ ರೀತಿಯ ದೋಷ ಎಂದು ಟೀಕಿಸಿದ್ದಾರೆ. 

ನೋಮ್ ಚಾಮ್ಸ್ಕಿ ಒಂದು ರೀತಿಯಲ್ಲಿ ಹೆಚ್ಚು ವೈಜ್ಞಾನಿಕ ಎನ್ನಬಹುದಾದ ವಿಮರ್ಶೆಯನ್ನು ರಾಚನಿಕವಾದದ ಬಗ್ಗೆ ಮಾಡಿದ್ದಾನೆ. ರಾಚನಿಕ ಭಾಷಾಶಾಸ್ತ್ರವನ್ನು ಗುರಿಯಾಗಿಸಿಕೊಂಡು ಚಾಮ್ಸ್ಕಿ ತನ್ನ Syntactic Structures (1957) ಎನ್ನುವ ಪುಸ್ತಕದಲ್ಲಿ ಒಂದು ಸವಾಲನ್ನು ಎಸೆಯುತ್ತಾನೆ. ರಾಚನಿಕ ವಿಧಾನಗಳನ್ನು ಅನುಸರಿಸಿ ಒಂದು ವ್ಯಾಕರಣ ಯಂತ್ರವನ್ನು ಕಟ್ಟುವುದು. ಈ ಯಂತ್ರಕ್ಕೆ ಮುಂದಿನ ಮೂರು ಷರತ್ತುಗಳಿರಬೇಕು: ೧. ಈ ಯಂತ್ರ ಒಂದು ಭಾಷೆಯ ಎಲ್ಲಾ ವ್ಯಾಕರಣಬದ್ಧವಾದ ವಾಕ್ಯಗಳನ್ನು ಮತ್ತು ಕೇವಲ ವ್ಯಾಕರಣಬದ್ಧವಾದ ವಾಕ್ಯಗಳನ್ನು ಮಾತ್ರ ಉತ್ಪಾದಿಸಬೇಕು ೨. ಇದು ಕೇವಲ ವ್ಯಾಕರಣಬದ್ಧವಷ್ಟೇ ಅಲ್ಲ, ಜೊತೆಗೆ ಅರ್ಥಬದ್ಧವಾದ ವಾಕ್ಯಗಳನ್ನಷ್ಟೇ ಉತ್ಪಾದಿಸಬೇಕು ೩. ಈ ಯಂತ್ರಕ್ಕೆ ನಮ್ಮ ದಿನನಿತ್ಯದ ಭಾಷಾಬಳಕೆಯ ವೈಚಿತ್ರ್ಯಗಳನ್ನು ಸರಳವಾಗಿ ವಿವರಿಸುವಂತಿರಬೇಕು. ಚಾಮ್ಸ್ಕಿಯ ಪ್ರಕಾರ ರಾಚನಿಕ ಸಿದ್ಧಾಂತದ ಮೇಲೆ ಕಟ್ಟಿದ ವ್ಯಾಕರಣ ಯಂತ್ರಕ್ಕೆ ಇದು ಸಾಧ್ಯವೇ ಇಲ್ಲ. ಏಕೆಂದರೆ, ರಾಚನಿಕ ವ್ಯಾಕರಣ ಯಂತ್ರ ಸರಿಸುಮಾರು ಹೀಗಿರುತ್ತದೆ. ಸಾಲಾಗಿ ಜೋಡಿಸಿರುವ ಅಸಂಖ್ಯಾತವಾದ ಪೆಟ್ಟಿಗೆಗಳನ್ನು ಊಹಿಸಿಕೊಳ್ಳಿ. ಪ್ರತಿಯೊಂದರಲ್ಲೂ ಒಂದಷ್ಟು ಪದಗಳಿವೆ. ಈಗ ಈ ಯಂತ್ರ ಮೊದಲನೆಯ ಪೆಟ್ಟಿಗೆಗೆ ಹೋಗಿ ಒಂದು ಪದವನ್ನು ಹೆಕ್ಕಿ ನಂತರ ಎರಡನೆಯ ಪೆಟ್ಟಿಗೆಯಿಂದ ಮತ್ತೊಂದು ಪದವನ್ನು ಹೆಕ್ಕಿ ಹೀಗೆ ಒಂದರ ನಂತರ ಒಂದು ಪದವನ್ನು ಹೆಕ್ಕಿ ಒಂದು ವಾಕ್ಯವನ್ನು ಮಾಡಬೇಕು. ಒಂದು ನಿರ್ದಿಷ್ಟ ಹಂತದಲ್ಲಿ, ತಾನು ಮಾಡಿದ ವಾಕ್ಯ ಇಡಿಯಾಗಿದೆ ಎಂದಾಗ ಹೆಕ್ಕುವ ಕೆಲಸವನ್ನು ನಿಲ್ಲಿಸಿ ಅಲ್ಲಿಗೆ ವಾಕ್ಯವನ್ನು ಪೂರ್ಣಗೊಳಿಸಬೇಕು. ಪ್ರತಿ ಪದವನ್ನು ಹೆಕ್ಕಿದಾಗಲೂ ಮುಂದೆ ಹೆಕ್ಕಬಹುದಾದ ಪದಗಳ ಮೇಲೆ ಹೊಸ ಹೊಸ ವಿಧಿನಿಷೇಧಗಳು ಕೆಲಸ ಮಾಡತೊಡಗುತ್ತವೆ. ಇಂತಹ ಯಂತ್ರವನ್ನು Finite State Markov Chain Process ಎಂದು ಕರೆಯುತ್ತಾರೆ. ಉದಾಹರಣೆಗೆ "ನಾಳೆ ನಾವೆಲ್ಲರೂ ಸಿನಿಮಾಕ್ಕೆ ಹೋಗೋಣ"' ಎನ್ನುವ ವಾಕ್ಯವನ್ನು ಗಮನಿಸಿ. 'ನಾಳೆ' ಎನ್ನುವ ಪದ ಹೆಕ್ಕಿದ ಮೇಲೆ ಮೂರು ಪದಗಳ ಆಚೆಗೆ ಭವಿಷ್ಯಕಾಲ ಸೂಚಕವಾದ 'ಹೋಗೋಣ' ಎನ್ನುವ ಪದವನ್ನೇ ಆರಿಸಬೇಕು. 'ಹೋಗಿದ್ದೆವು' ಎಂದು ಆರಿಸಬಾರದು. ಅಂದಮೇಲೆ ಈ ಯಂತ್ರ ಕೆಲಸ ಮಾಡಬೇಕೆಂದರೆ ಒಂದು ಭಾಷೆಯ ಎಲ್ಲಾ ಪದಗಳು ಮತ್ತು ಆ ಭಾಷೆಯ ಎಲ್ಲಾ ವ್ಯಾಕರಣದ ನಿಯಮಗಳೂ ಮೊದಲೇ ಈ ಯಂತ್ರಕ್ಕೆ ತಿಳಿದಿರಬೇಕು. ಆದರೆ, ಒಂದು ಭಾಷೆಯ ಎಲ್ಲಾ ವ್ಯಾಕರಣ ನಿಯಮಗಳನ್ನು ಈ ರೀತಿಯಾಗಿ ಸಾಲಾಗಿ ಪಟ್ಟಿ ಮಾಡುವುದು ದುಸ್ಸಾಧ್ಯವೆಂದೇ ಹೇಳಬೇಕು. ಅಷ್ಟೇ ಅಲ್ಲದೆ, ನಮ್ಮ ನಿತ್ಯದ ಅನುಭವವನ್ನೂ ಗಮನಿಸಿ. ಮೂರು ನಾಲ್ಕು ವರ್ಷದ ಮಕ್ಕಳೂ ಕೂಡ ಮೇಲಿನ ಉದಾಹರಣೆಯ ವಾಕ್ಯಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಸಂಕೀರ್ಣವಾದ ವಾಕ್ಯಗಳನ್ನು ಹೊಸದಾಗಿ ಕ್ಷಣಕ್ಷಣವೂ ಮಾಡುತ್ತಿರುತ್ತವೆ. ಆದರೆ ಆ ಮಕ್ಕಳಿಗೆ ಒಂದು ಭಾಷೆಯ ಎಲ್ಲ ಪದಗಳೂ ಮತ್ತು ವ್ಯಾಕರಣ ನಿಯಮಗಳೂ ತಿಳಿದಿರಲು ಸಾಧ್ಯವೇ ಇಲ್ಲ. ಅಂದಮೇಲೆ, ಮನುಷ್ಯರ ಭಾಷಿಕ ವ್ಯವಹಾರ ರಾಚನಿಕವಾದದ ಸಿದ್ಧಾಂತಗಳು ಹೇಳುವ ರೀತಿಯಲ್ಲಿ ಇಲ್ಲ. ಹಾಗಾಗಿ ಚಾಮ್ಸ್ಕಿಯ ಪ್ರಕಾರ structuralism ಒಂದು ಅತೀ ಮುಖ್ಯವಾದ ಆದರೆ ದೋಷಯುಕ್ತವಾದ ಸಿದ್ಧಾಂತ. 

ಇಂದಿನ ದಿನಗಳಲ್ಲಿ ರಾಚನಿಕವಾದದ ಹಲವು ಒಳನೋಟಗಳು ಬೇರೆಬೇರೆ ಸಂಶೋಧನೆಗಳಲ್ಲಿ ಹಾಸುಹೊಕ್ಕಾಗಿವೆ. ವ್ಯವಸ್ಥೆಗಳ ಅಧ್ಯಯನ ಅಥವಾ systems theory, ಅರ್ಥಶಾಸ್ತ್ರ, decision sciences ಎನ್ನುವ ನಿರ್ವಹಣಾ ಶಾಸ್ತ್ರದ ವಿಧಾನಗಳಲ್ಲಿ ಇಂತಹ ಕ್ರಮಗಳನ್ನು ಕಾಣಬಹುದು. ಆದರೆ ನೇರವಾಗಿ structuralist ಎಂದು ಕರೆಯಬಹುದಾದ ಒಂದು ನಿರ್ದಿಷ್ಟ ಸಿದ್ಧಾಂತ ಮರೆಯಾಗಿದೆ ಎಂದೇ ಹೇಳಬೇಕು. 

Comments

  1. ಈ ಲೇಖನಗಳ ಲೇಖಕರು ಯಾರು?

    ReplyDelete

Post a Comment

Popular posts from this blog

ಮಾರ್ಕ್ಸ್‌‌‌ ವಾದ

ವಿದ್ಯಾಸಂಸ್ಥೆಗಳು ಮತ್ತು ಶೈಕ್ಷಣಿಕ ಪರಿಸರ