ಮಾರ್ಕ್ಸ್‌‌‌ ವಾದ



ಮಾರ್ಕ್ಸ್‌ವಾದ ಹತ್ತೊಂಬತ್ತನೇ ಶತಮಾನದ ಯುರೋಪಿನಲ್ಲಿ ಬೆಳೆದ ಹಲವಾರು ಸಾಮಾಜಿಕ ತತ್ವಗಳಲ್ಲೊಂದು. ಇದರ ರೂವಾರಿಗಳು ಜರ್ಮನ್ ಚಿಂತಕರಾದ ಕಾರ್ಲ್ ಮಾರ್ಕ್ಸ್ (1818-1883) ಮತ್ತು ಫ್ರೀಡ್ರಿಚ್ ಎಂಗೆಲ್ಸ್ (1820-1895). ಇಪ್ಪತ್ತನೆ ಶತಮಾನದ ಮೊದಲಿಗೇ ಈ ಹಲವಾರು ತತ್ವಗಳು ನೆಲಕಚ್ಚಿದರೂ, ಮಾರ್ಕ್ಸ್‌ವಾದ ಮಾತ್ರ ಸರಿಸುಮಾರು ಇಪ್ಪತೊಂದನೇ ಶತಮಾನದ ಹೊಸ್ತಿಲವರೆಗೂ ಅತ್ಯಂತ ಪ್ರಭಾವಶಾಲಿ ಬೌದ್ಧಿಕ ಸಿದ್ದಾಂತವಾಗಿ ಬೆಳೆಯಿತು. ಹಾಗಾಗಿ ಇಂದು ಮಾರ್ಕ್ಸ್‌ವಾದವನ್ನು ಕುರಿತು ಚಿಂತಿಸುವಾಗ ಎರಡು ಬೇರೆ ಬೇರೆ ಎಳೆಗಳನ್ನು ಕಾಣಬಹುದು. ಸ್ವಯಂ ಮಾರ್ಕ್ಸ್‌ವಾದಿ ಚಿಂತಕರ ದೃಷ್ಟಿಯಲ್ಲಿ ಮಾರ್ಕ್ಸ್ವಾದ ಇಂದಿಗೂ ಪ್ರಸ್ತುತವಾದ ರಾಜಕೀಯ-ಆರ್ಥಿಕ ವಿಶ್ಲೇಷಣೆ ಮತ್ತು ಸಾಮಾಜಿಕ ಇತಿಹಾಸದ ಅಧ್ಯಯನಕ್ಕೆ ಇರುವ ಅತ್ಯಂತ ಪ್ರಬಲವಾದ ಸಿದ್ಧಾಂತ ಸಮೂಹ. ಆದರೆ ಮಾರ್ಕ್ಸ್‌ವಾದಿ ಚಿಂತಕರಲ್ಲದ ಅನೇಕರು ಇದನ್ನು ಹತ್ತೊಂಬತ್ತು ಇಪ್ಪತ್ತನೆ ಶತಮಾನದ ರಾಜಕೀಯ ಚಿಂತನೆಗೆ ಹಿಡಿದ ಕನ್ನಡಿ ಎಂದು ವಾದಿಸುತ್ತಾರೆ. ಹಾಗಾಗಿ ಮಾರ್ಕ್ಸ್‌ವಾದವನ್ನು ಒಂದು ಸಮಕಾಲೀನ ಸಿದ್ಧಾಂತವನ್ನಾಗಿ ನೋಡಬೇಕೋ ಅಥವಾ ಐರೋಪ್ಯ ಚಿಂತನೆಯ ಇತಿಹಾಸದ ಭಾಗವಾಗಿ (history of ideas) ನೋಡಬೇಕೋ ಎನ್ನುವುದೂ ಒಂದು ಚರ್ಚಾಸ್ಪದ ವಿಚಾರ. ಈ ಲೇಖನದಲ್ಲಿ ಈ ಎರಡೂ ಕ್ರಮಗಳಿಂದ, ಅಂದರೆ, ಮಾರ್ಕ್ಸ್‌ವಾದವನ್ನು ಒಂದು ರಾಜಕೀಯಾರ್ಥಿಕ ಸಿದ್ಧಾಂತವಾಗಿಯೂ, ಹಾಗೆಯೇ, ಐರೋಪ್ಯ ಚಿಂತನೆಯ ಇತಿಹಾಸದ ಭಾಗವಾಗಿಯೂ ನೋಡಲಾಗಿದೆ.

ಮಾರ್ಕ್ಸ್‌ವಾದದ ಐರೋಪ್ಯ ತಾತ್ವಿಕ ಮೂಲಗಳು
ಮಾರ್ಕ್ಸ್‌‌‌ನ ಮೂಲ ಪ್ರಶ್ನೆ ಇರುವುದು ನಮ್ಮ ಸಾಮಾಜಿಕ ವಾಸ್ತವದ ಒಂದು ಸಮಗ್ರ ಸಿದ್ಧಾಂತವನ್ನು ನೀಡುವುದರ ಬಗ್ಗೆ. ಇದನ್ನು social philosophy ಎಂದೂ ಕರೆಯಬಹುದು. ಏನಿದು ಸಾಮಾಜಿಕ ತತ್ವಶಾಸ್ತ್ರ? ನಮ್ಮ ಪ್ರಪಂಚದಲ್ಲಿ ಸಾಮಾಜಿಕ ಎನ್ನಬಹುದಾದ ಹಲವು ಘಟನೆಗಳು, ಸಂಸ್ಥೆಗಳು, ಸ್ಥಾನಮಾನಗಳು  ಇವೆ. ಉದಾಹರಣೆಗೆ ಮದುವೆ, ಕುಟುಂಬ, ವ್ಯಾಪಾರ, ರಾಜ್ಯ, ಕಾನೂನು, ಹೀಗೆ. ಇವೆಲ್ಲಾ ಯಾವುದೇ ಪ್ರಾಕೃತಿಕ ಕಾರಣಗಳಿಂದ ಹುಟ್ಟಿದ ವ್ಯವಸ್ಥೆಗಳಲ್ಲ. ಬದಲಾಗಿ ಮಾನವರ ಸಾಮಾಜಿಕ ಸಂಬಂಧಗಳಲ್ಲಿ ಹುಟ್ಟಿದ ವ್ಯವಸ್ಥೆಗಳು. ಅಂದಮೇಲೆ, ಇಂಥ ವ್ಯವಸ್ಥೆಗಳ ಹಿಂದಿರುವ ತರ್ಕ, ಇವು ಬದಲಾಗುವುದಕ್ಕೆ ಇರುವ ಕಾರಣ, ಬೇರೆ ಬೇರೆ ಸಂಸ್ಕೃತಿಗಳಲ್ಲಿ ಈ ವ್ಯವಸ್ಥೆಗಳು ಬೇರೆ ಬೇರೆಯಾಗಿರುವುದಕ್ಕೆ ಕಾರಣ, ನಮ್ಮ ನಿತ್ಯದ ಬದುಕಿನ ಆಯ್ಕೆಗಳಿಗೂ ಮತ್ತು ಈ ದೊಡ್ಡ ವ್ಯವಸ್ಥೆಗಳಿಗೂ ಇರುವ ಸಂಬಂಧ, ಈ ವ್ಯವಸ್ಥೆಗೂ ಮನುಷ್ಯರ ಸಾಂಸ್ಕೃತಿಕ ಬಳುವಳಿಗಳಾದ ಕಲೆ, ಧರ್ಮ, ಇತಿಹಾಸ, ಇವೆಲ್ಲಕ್ಕೂ ಇರುವ ಸಂಬಂಧ ಹೀಗೆ ಇಂಥಾ ಎಲ್ಲ ಪ್ರಶ್ನೆಗಳಿಗೂ ಒಂದು ಸಮಗ್ರವಾದ ಸಿದ್ಧಾಂತ ರೂಪಿಯಾದ ವಿವರಣೆಯ ಅಗತ್ಯ ೧೮-೧೯ನೇ ಶತಮಾನದ ಬಹಳಷ್ಟು ಚಿಂತಕರನ್ನು ಕಾಡಿತ್ತು.

ಸಾಧಾರಣವಾಗಿ ಅರಿಸ್ಟಾಟಲ್ ಪ್ರಣೀತ ಗ್ರೀಕೋ-ರೋಮನ್ ಪರಂಪರೆಯಲ್ಲಿ ಇಂತಹ ಪ್ರಶ್ನೆಗಳು ಪ್ರಸ್ತುತವಾಗಿರಲಿಲ್ಲ. ಇಲ್ಲೆಲ್ಲಾ, ನಮ್ಮ ಸುತ್ತಣ ವಾಸ್ತವ ಹೇಗೆ ಇದೆ ಎನ್ನುವುದನ್ನು ಕೂಲಂಕುಶವಾಗಿ ಗಮನಿಸಿ ಅದಕ್ಕೆ ಅನುಗುಣವಾಗಿ ನಾವು ಹೇಗೆ ಇರಬೇಕು ಎನ್ನುವ ಎಥಿಕ್ಸ್‌ನ ಚರ್ಚೆ ಮುಖ್ಯವಾಗಿತ್ತೆ ವಿನಃ ಸಾಮಾಜಿಕ ವ್ಯವಸ್ಥೆಗಳು ಹೇಗಿವೆಯೋ ಹಾಗೆ ಯಾಕೆ ಇವೆ ಎನ್ನುವ genetive ಆದ, ಅಂದರೆ ಮೂಲಶೋಧಕವಾದ, ವಿಚಾರಣೆ ಇರಲಿಲ್ಲ. ಇದು ಮೊದಲಾಗಿದ್ದು ಪ್ರಾಚೀನ ಕ್ರಿಶ್ಚಿಯನ್ ಚಿಂತಕರಲ್ಲೇ ಶ್ರೇಷ್ಟನಾದ ಹಿಪ್ಪೋನ ಸಂತ ಆಗಸ್ಟೀನ್ (ಕ್ರಿ.. 354-430) ಕಾಲದಲ್ಲಿ. ಅಲ್ಲಿಂದ ಮೊದಲುಗೊಂಡು ಆಧುನಿಕ ಯುಗದ ಪ್ರೊಟೆಸ್ಟೆಂಟ್ ಚಿಂತಕರವರೆಗೂ ಸಾಮಾಜಿಕ ಪ್ರಪಂಚವನ್ನು ವಿವರಿಸುವುದಕ್ಕೆ ಒಂದು ರೀತಿಯ ಸಿದ್ಧಾಂತ ಲಭ್ಯವಿತ್ತು. ಅದೆಂದರೆ ದೈವ ಪ್ರೇರಣೆಯ ಸಿದ್ದಾಂತ. ಈ ಪ್ರಪಂಚ ಹುಟ್ಟಿರುವುದು ದೇವನ ಇಚ್ಛೆಯಿಂದ. ಹಾಗೂ ದೇವನ ರಾಜ್ಯವೇ ಕೊನೆಗೆ ಇಲ್ಲಿ ಬರುವಂಥದ್ದು. ಇದಕ್ಕೆ ಆಗಸ್ಟೀನ್ ಕೊಟ್ಟ ಹೆಸರು ಮತ್ತು ಅದೇ ಹೆಸರಿನ ಅವನ ಪುಸ್ತಕ The City of God. ಆ ರಾಜ್ಯದ ಆದರ್ಶದ ಅಡಿಯಲ್ಲೇ ಈ ರಾಜ್ಯವನ್ನೂ ಅರ್ಥೈಸಿಕೊಳ್ಳಬೇಕು. ಹಾಗಾಗಿ ಕ್ರಿಶ್ಚಿಯನ್ ಆದರ್ಶಗಳ ಮೇಲೆ ಸಾಮಾಜಿಕ ರೀತಿರಿವಾಜುಗಳನ್ನು ವಿಮರ್ಶಿಸುವ ಮತ್ತು ವ್ಯಾಖ್ಯಾನಿಸುವ ಪರಂಪರೆ ಬೆಳೆದು ಬಂತು.

ಇಂದು ನಾವು ಕ್ರಿಶ್ಚಿಯಾನಿಟಿಯ ಚೌಕಟ್ಟನ್ನು ಎಷ್ಟೇ ನಿಕೃಷ್ಟವಾಗಿ ಕಂಡರೂ ಇದರ ನಿರ್ದಿಷ್ಟ ಪರಿಕಲ್ಪನೆಗಳು ನಮ್ಮ ಅತ್ಯಂತ ಆಧುನಿಕ ವಿಚಾರಧಾರೆಗಳಿಗೆ ಸರಿಸಮವಾಗಿ ನಿಲ್ಲುವಷ್ಟು ಸೂಕ್ಷ್ಮವಾಗಿರುವಂಥವುಗಳು. ನಾವು ಇಂದು ಬಳಸುವ ಹಲವಾರು ರಾಜಕೀಯ ಸಾಮಾಜಿಕ ಪರಿಕಲ್ಪನೆಗಳು ಜನ್ಮ ತಾಳಿದ್ದು ಕ್ರಿಶ್ಚಿಯಾನಿಟಿಯ ಮೂಸೆಯಲ್ಲೇ. ಉದಾಹರಣೆಗೆ. ಖಾಸಗಿ ಆಸ್ತಿ, ಕಾರ್ಪೋರೇಟ್ ವ್ಯಕ್ತಿತ್ವ, ಹಕ್ಕುಗಳು, ರಾಜ್ಯಾಧಿಕಾರ, ಸಹಜ ಕಾನೂನು (natural law), ಶಿಷ್ಟ ನೀತಿಶಾಸ್ತ್ರ (normative ethics), ಇಂತಹ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಈ ಕ್ರಿಶ್ಚಿಯನ್ ಸಿದ್ಧಾಂತಗಳು ನಮ್ಮ ಇಂದಿನ ಸಿದ್ಧಾಂತಗಳಿಗೆ ಪೂರ್ವಭಾವಿಯಾಗಿದ್ದಂಥವು. ಸರಿಯಾಗಿ ನೋಡಿದರೆ, ಇದೇನೂ ಬಹಳ ಆಶ್ಚರ್ಯದ ಸಂಗತಿಯಲ್ಲ. ಒಂದು ಸಮಾನಾಂತರವಾದ ಉದಾಹರಣೆಯ ಮೂಲಕ ಇದನ್ನು ಅರ್ಥ ಮಾಡಿಕೊಳ್ಳಬಹುದು. ಭೂ-ಕೇಂದ್ರಿತ ಖಗೋಳ ಸಿದ್ದಾಂತ ಇಂದು ತಪ್ಪೆಂದು ಸಾಬೀತಾಗಿದೆ. ಅದರ ಜಾಗದಲ್ಲಿ ಸೌರ-ಕೇಂದ್ರಿತ ಸಿದ್ದಾಂತವೇ ಸರಿಯೆಂದೂ ಸಾಬೀತಾಗಿದೆ. ಹೀಗೆಂದ ಮಾತ್ರಕ್ಕೇ, ಭೂ-ಕೇಂದ್ರಿತ ಸಿದ್ಧಾಂತದ ಮೇಲೆ ಕಟ್ಟಿದ ನಿರ್ದಿಷ್ಟ ವಿವರಣೆಗಳೆಲ್ಲಾ ಇಂದು ಅಪ್ರಯೋಜಕವಾಗಿವೆ ಎಂದೇನೂ ಅಲ್ಲ. ಇಂದಿಗೂ ಹಲವಾರು ಖಗೋಳವಿಜ್ಞಾನದ ಲೆಕ್ಕಾಚಾರಗಳಿಗೆ ಭೂ-ಕೇಂದ್ರಿತ ಸಿದ್ಧಾಂತವನ್ನೇ ಬಳಸಲಾಗುತ್ತದೆ. ಅಷ್ಟೇ ಏಕೆ, ಭೂ-ಕೇಂದ್ರಿತ ಸಿದ್ಧಾಂತದಿಂದ ಮಾಡಿದ ಲೆಕ್ಕಾಚಾರಗಳು ಸರಿಸುಮಾರು ೯೦-೯೫ ಪ್ರತಿಶತ ಸೌರ-ಕೇಂದ್ರಿತ ಸಿದ್ಧಾಂತದಿಂದ ಮಾಡಿದ ಲೆಕ್ಕಾಚಾರಗಳಿಗೆ ಸಮಾನವಾಗಿದೆ.

ಕ್ರಿಶ್ಚಿಯನ್ ತತ್ವಶಾಸ್ತ್ರವೂ ಇಂಥ ರೀತಿಯಲ್ಲಿ ಸಾಮಾಜಿಕ ಜೀವನದ ಬಗ್ಗೆ, ಸಾಂಸ್ಥಿಕ ರೂಪುರೇಷೆಗಳ ಬಗ್ಗೆ ಹಲವಾರು ಸಂಕೀರ್ಣ, ಸೂಕ್ಷ್ಮ ಸಿದ್ಧಾಂತಗಳನ್ನು ಬೆಳೆಸಿತ್ತು. ಆದರೆ, ಇದರಲ್ಲೆಲ್ಲಾ ಇದ್ದ ದೊಡ್ಡ ತೊಡಕೆಂದರೆ, alienationಗೆ ಸಂಬಂಧಪಟ್ಟಿದ್ದು. ಮಾರ್ಕ್ಸ್‌ವಾದದಲ್ಲೂ ಮುಂದೆ ಬಹಳ ಭಿನ್ನ ರೀತಿಯಲ್ಲಿ alienationನ ಚರ್ಚೆ ಮುಖ್ಯವಾಗುವುದರಿಂದ, ಅದರ ಮಾರ್ಕ್ಸ್-ಪೂರ್ವ ಯುಗದ ಅರ್ಥವನ್ನು ಈಗ ತಿಳಿದುಕೊಳ್ಳೋಣ.

ಕ್ರಿಶ್ಚಿಯನ್ ತಾತ್ವಿಕತೆಯ ದೊಡ್ಡ ತೊಡಕೆಂದರೆ ಅದು ಮನುಷ್ಯನ ಪ್ರಜ್ಞೆಗೂ ಮತ್ತು ನಮ್ಮ ಸುತ್ತಣ ಪರಿಸರಕ್ಕೂ ಇರುವ ಸಂಬಂಧವೇನು ಎಂದು ವರ್ಣಿಸುವಲ್ಲಿ ವಿಫಲವಾಗಿತ್ತು. ಅಂದರೆ, ಮನುಷ್ಯ ಪ್ರಜ್ಞೆ ಅಥವಾ ಅನುಭವ ಕ್ರಿಶ್ಚಿಯನ್ ಸಿದ್ಧಾಂತಗಳಲ್ಲಿ ಮುಖ್ಯವಲ್ಲ. ದೈವೇಚ್ಛೆಯೇ ಮುಖ್ಯವಾದದ್ದು. ಅದರಿಂದಲೇ ನಿರ್ಮಿತವಾದ ಈ ಜಗತ್ತಿನಲ್ಲಿ ಮಾನವ ತನ್ನನ್ನು ತಾನು ಪರಕೀಯನಾಗಿ ಕಂಡುಕೊಳ್ಳುತ್ತಾನೆ. ಅಂದಮೇಲೆ ಈ ಪ್ರಪಂಚದಲ್ಲಿ ಮನುಷ್ಯ ಒಬ್ಬ ಆಗಂತುಕನ ರೀತಿಯಲ್ಲಿರುವವ. ಅವನಿಗೂ ಮತ್ತು ಈ ಪ್ರಪಂಚಕ್ಕೂ ನಡುವೆ ದಾಟಲಾರದ ಒಂದು ಕಂದಕವಿದೆ. ಇದೇ ಅವನನ್ನು ತನ್ನ ಸುತ್ತಣ ಪ್ರಪಂಚದಿಂದ ಬೇರೆಯಾಗಿಸಿದೆ. ಇದು ಏಕೆಂದರೆ, ಮನುಷ್ಯನಿಗೆ ಈ ಪ್ರಪಂಚದೊಂದಿಗಿನ ಅವಿನಾಭಾವ ಸಂಬಂಧವನ್ನು ದೇವನು ಆದಿಯಲ್ಲೇ ಕಡಿದುಹಾಕಿದ್ದಾನೆ. ಬೈಬಲ್ಲಿನ ಮೊದಲ ಮನುಷ್ಯನಾದ ಆದಮನನ್ನು ಸ್ವರ್ಗದಿಂದ ಹೊರಹಾಕಿದಾಗಲೇ ಇಂತಹ ಪರಕೀಯತೆ ಮನುಷ್ಯರಲ್ಲಿ ನೆಲೆಮಾಡಿದೆ. ಇದನ್ನು ಥಿಯಾಲಜಿಯಲ್ಲಿ lapsarianism ಎಂದು ಕರೆಯಲಾಗುತ್ತದೆ. ಈ ಸ್ಥಿತಿಯನ್ನೇ alienation ಎಂದು ಕರೆಯಬಹುದು.

೧೮-೧೯ನೇ ಶತಮಾನದ ಜರ್ಮನ್ ಐಡಿಯಲಿಸ್ಟ್ ಪರಂಪರೆಯಲ್ಲಿ ಬಂದ ಹಲವಾರು ಚಿಂತಕರಿಗೆ ಈ ಸಮಸ್ಯೆ ಆಳವಾಗಿ ಕಾಡಿತು. ಒಂದು ದೃಷ್ಟಿಯಿಂದ ನೋಡಿದರೆ ಮನುಷ್ಯ ಸೃಜನಶೀಲ ಜೀವಿ. ತನ್ನ ಕೈಚಳಕ ಮತ್ತು ಬುದ್ಧಿಮತ್ತೆಯಿಂದಲೇ ತನ್ನ ಸುತ್ತಣ ಪ್ರಪಂಚವನ್ನು ನಿರ್ಮಿಸಿಕೊಂಡಿರುವಾತ. ತನ್ನ ಕ್ರಿಯಾಕರ್ಮಗಳು, ಸೃಜನಶೀಲತೆ, ಉದ್ಯಮಶೀಲತೆಯ ಶಕ್ತಿಯಲ್ಲೇ ತನ್ನ ಅಂತಃಸತ್ವವನ್ನು ಕಾಣುವಾತ. ಆದರೆ, ಇನ್ನೊಂದು ದೃಷ್ಟಿಯಿಂದ ನೋಡಿದರೆ, ಮನುಷ್ಯನಿಗೂ ಅವನ ಸುತ್ತಣ ಪ್ರಕೃತಿಗೂ ಯಾವುದೇ ನೇರ ಸಂಬಂಧವಿಲ್ಲ. ಪ್ರಪಂಚದ ನಿಜಸ್ಥಿತಿಯ ಜ್ಞಾನವೂ ಅವನಿಗೆ ತನ್ನ ಇಂದ್ರಿಯಗಳ ಮಿತಿಗಳಲ್ಲಿ ಮಾತ್ರ ಲಭಿಸುವುದೇ ವಿನಾ ನೇರವಾಗಿ ದಕ್ಕುವುದಿಲ್ಲ. ಅಷ್ಟೇ ಏಕೆ, ಅವನ ಮನಸ್ಸಿನಾಳದಲ್ಲಿರುವ ಸಾಕ್ಷಿಯೂ (conscience) ದೇವನ ಸಣ್ಣ ಧ್ವನಿಯೇ ಹೊರತು, ಇವನ ಸ್ವಂತ ಬುದ್ಧಿಮತ್ತೆಯಿಂದ ರೂಪಿತವಾದ ಧ್ವನಿಯಲ್ಲ. ಹಾಗಾದರೆ, ಈ ದ್ವಂದ್ವ ಚಿತ್ರಣವನ್ನು ಸರಿಪಡಿಸುವುದು ಹೇಗೆ? ಒಂದು ದೃಷ್ಟಿಯಿಂದ ಈ ಜಗತ್ತಿಗೂ ನಮಗೂ ಸಂಬಂಧವಿರುವುದೇ ನಮ್ಮ ಸೃಜನಶೀಲತೆಯ ಮೂಲಕ. ಮತ್ತೊಂದು ದೃಷ್ಟಿಯಿಂದ ಈ ಜಗತ್ತಿನಲ್ಲಿ ನಾವು ಆಗಂತುಕರು.

೧೯ನೇ ಶತಮಾನದ ಮಟ್ಟಿಗೆ ಅತ್ಯಂತ ಸಫಲವಾಗಿ ಅಥವಾ ಅತ್ಯಂತ ಮಹತ್ವಾಕಾಂಕ್ಷೆಯಿಂದ ಈ ಸವಾಲನ್ನು ಎತ್ತಿಕೊಂಡವನೆಂದರೆ ಜರ್ಮನ್ ತತ್ವಶಾಸ್ತ್ರಜ್ಞರಲ್ಲೇ ದೈತ್ಯಪ್ರತಿಭೆಯಾದ ಜಿ.ಡಬ್ಲ್ಯು.ಎಫ್. ಹೆಗೆಲ್ (1770-1831). ಅವನ Phenomenology of Spirit (1807) ಎನ್ನುವ ಕೃತಿಯಲ್ಲಿ ವಾದಿಸಿದಂತೆ, ಪ್ರಜ್ಞೆ ಅಥವಾ Spirit (ಅವನ ಭಾಷೆಯಲ್ಲಿ "Geist"), ಇದೇ ಮುಖ್ಯವಾದದ್ದು. ಮನುಷ್ಯ ಪ್ರಜ್ಞೆ ವಸ್ತುಗಳನ್ನು ಗ್ರಹಿಸುತ್ತದೆ. ವಸ್ತು ನಮ್ಮ ಪ್ರಜ್ಞೆಗೆ ಬಾಹ್ಯವಾದದ್ದಾದರೂ, ಅದನ್ನು ಒಂದು ನಿರ್ದಿಷ್ಟ ವಸ್ತು ಎಂದು ತಿಳಿಯಲು ನಮ್ಮ ಪ್ರಜ್ಞೆಯಿಂದ ಹೊರಟ ಪರಿಕಲ್ಪನೆಗಳ ಅಗತ್ಯವಿದೆ. ಅಂದಮೇಲೆ, ವಸ್ತುಗಳು ಹೀಗೆ ಪರಕೀಯತೆಯಿಂದ ಬಿಡುಗಡೆ ಹೊಂದಿ ನಮ್ಮ ಪ್ರಜ್ಞೆಗೆ ದಕ್ಕುತ್ತವೆ. ಇದನ್ನು ನಮ್ಮ ಪ್ರಜ್ಞೆ ತನ್ನದಾಗಿಸಿಕೊಳ್ಳುತ್ತದೆ. ಹೀಗೇ ಇದನ್ನು ತಾರ್ಕಿಕವಾಗಿ ಮುಂದುವರಿಸಿದರೆ, ಜ್ಞಾನ, ವಿಜ್ಞಾನ, ಸಾಮಾಜಿಕ ಸಂಬಂಧಗಳು, ಕುಟುಂಬ, ಸಂಸ್ಕೃತಿ, ರಿಲಿಜನ್, ಕಲೆ, ನ್ಯಾಯ, ಇವೆಲ್ಲವೂ ಪ್ರಜ್ಞೆಯ ವಿವಿಧ ಸ್ಥರಗಳು ಎಂದು ತಿಳಿಯುತ್ತದೆ. ಕಟ್ಟಕಡೆಯ ಹಂತದಲ್ಲಿ ಪ್ರಜ್ಞೆ ಈ ಎಲ್ಲಾ ಸಾಮಾಜಿಕ ವಾಸ್ತವದಲ್ಲೂ ಹಾಸುಹೊಕ್ಕಾಗಿರುವುದು ತಾನೇ ಎಂದೂ ತಿಳಿದುಕೊಳ್ಳುತ್ತದೆ. ಆಗ ನಮ್ಮ ಸಾಮಾಜಿಕ ವಾಸ್ತವ ಹೊರಗಿನ ಯಾವುದೋ ಮೂಲದಿಂದ ಸ್ಥಾಪಿತವಾದದ್ದೆಂಬ ಭ್ರಾಂತಿಯ ಬದಲು, ಪ್ರಜ್ಞೆಯದ್ದೇ ವಿವಿಧ ರೂಪಗಳು ಎಂದು ತಿಳಿಯುತ್ತದೆ. ಹೀಗೆ, ವಸ್ತುವಿನಲ್ಲಿ ಪರಕೀಯವಾಗಿ ಶುರುವಾದ ಪ್ರಜ್ಞೆ ಕೊನೆಗೆ ತನ್ನಲ್ಲೇ ಸ್ವಯಂಸಂಪೂರ್ಣವಾಗುತ್ತದೆ. ಹೀಗೆ ಹೆಗೆಲ್ ಆಧುನಿಕ ಯುಗದ ಮೊಟ್ಟಮೊದಲ ಸಾಮಾಜಿಕ ಸಿದ್ಧಾಂತವೊಂದನ್ನು ಮಂಡಿಸಿದ.

ಪ್ರಜ್ಞೆ ಹೀಗೆ ಬೆಳೆಯುವುದಕ್ಕೆ ಮೂಲ ಪ್ರೇರಣೆ ಬರುವುದು ಪ್ರಜ್ಞೆಯೊಳಗೆ ಆಗುವ ವಿಘಟನೆ ಮತ್ತು ಸಂಘಟನೆಗಳಿಂದ. ನಮ್ಮ ತಿಳುವಳಿಕೆ ವಾಸ್ತವಕ್ಕೆ ಎದುರಾಗುತ್ತಲೂ ಮತ್ತು ಆ ವಾಸ್ತವವನ್ನೇ ಪ್ರಜ್ಞೆಯ ರೂಪವಾಗಿ ಒಳಗೊಳ್ಳುತ್ತಲೂ ಬೆಳೆಯುತ್ತದೆ. ಪ್ರಜ್ಞೆ ಮತ್ತು ಪ್ರಪಂಚದ  ಈ ಸಂವಾದ ಪ್ರಕ್ರಿಯೆಯನ್ನು ಹೆಗೆಲ್ ಡಯಲೆಕ್ಟಿಕ್ ಎಂದು ಕರೆದ. ಇಲ್ಲೊಂದು ಮುಖ್ಯ ವಿಚಾರ. ಹೆಗೆಲ್ ಪ್ರಕಾರ ಪ್ರಜ್ಞೆ ಎನ್ನುವುದು ಚಾರಿತ್ರಿಕವಾದದ್ದು. ಅಂದರೆ, ಪ್ರಜ್ಞೆಯನ್ನು ಕೇವಲ ವೈಯಕ್ತಿಕ ಮಟ್ಟದಲ್ಲಿ ನೋಡಲಾಗದು. ಅದು ಸಾಮಾಜಿಕವಾದದ್ದು. ಜ್ಞಾನ ಎಂದು ಕರೆಯಬಹುದಾದದ್ದು. ಜ್ಞಾನ ಎನ್ನುವುದು ನಮ್ಮ ಬುದ್ಧಿಶಕ್ತಿಯಲ್ಲೇ ಇರುವುದು ಎನ್ನುವುದು ನಿಜವಾದರೂ, ಆ ಜ್ಞಾನ ಸಾರ್ವತ್ರಿಕವಾದದ್ದು. ಖಾಸಗಿಯಾದದ್ದಲ್ಲ. ಹಾಗೂ ಚಾರಿತ್ರಿಕವಾಗಿ ಬೆಳೆದು ಬಂದಿರುವಂಥದ್ದು. ನಮ್ಮ ಕಾಲದ ನಿರ್ದಿಷ್ಟ ಜ್ಞಾನದ ಮಟ್ಟದ ಕಾರಣದಿಂದ ನಾವೆಲ್ಲಾ ಹೇಗೆ ಯೋಚಿಸುತ್ತಿದ್ದೇವೆಯೋ ಹಾಗೆ ಯೋಚಿಸಲು ಸಾಧ್ಯವಾಗಿದೆ. ಒಂದು ಸರಳ ಉದಾಹರಣೆ ಗಮನಿಸಿ. ನಮ್ಮ ಕಾಲದ ಸ್ಕೂಲು ಮಗುವಿಗೂ ಸಹ ವಸ್ತುಗಳು ಬೀಳಲು ಕಾರಣವೇನು ಎಂದರೆ ಗುರುತ್ವಾಕರ್ಷಣ ಎಂದು ಗೊತ್ತು. ಅದೇ, ಹನ್ನೆರಡನೆ ಶತಮಾನದ ಒಬ್ಬ ಮೇಧಾವಿಯನ್ನು ನಾವು ಈ ಪ್ರಶ್ನೆ ಕೇಳಿದ್ದರೆ ಅವನು ಕೊಡುವ ಉತ್ತರ ತಪ್ಪಾಗಿರುತ್ತಿತ್ತು. ಅದಕ್ಕೆ ಕಾರಣ ನಮ್ಮ ಕಾಲದಲ್ಲಿ ಸ್ಕೂಲು ಮಕ್ಕಳು ಮೇಧಾವಿಗಳಾಗಿಬಿಟ್ಟಿದ್ದಾರೆ ಅಂತಲ್ಲ. ಬದಲಾಗಿ, ನಮ್ಮ ಕಾಲಕ್ಕೆ ಜ್ಞಾನ ಬೆಳೆದಿದೆ ಎಂದಷ್ಟೆ. ಮತ್ತೊಂದು ವಿಷಯ. ಹೆಗೆಲ್ ಪ್ರಕಾರ ಪ್ರಜ್ಞೆಯ ಬೆಳವಣಿಗೆಯ ಹಂತಗಳ ಮೇಲೆ ಸಮಾಜಗಳನ್ನೂ ವಿಂಗಡಿಸಲು ಸಾಧ್ಯವಿದೆ. ಉದಾಹರಣೆಗೆ ಪ್ರಜ್ಞೆ ಇನ್ನೂ ಕಾನೂನನ್ನು ಮಾತ್ರ ಕಂಡುಕೊಂಡು ಅದರ ಮೂಲವಾದ ತಾನೇ ಅದು ಎಂದು ಕಂಡುಕೊಳ್ಳದಿದ್ದರೆ ಅದು ಓರಿಯೆಂಟಲ್ ನಿರಂಕುಶಾಧಿಕಾರ ಇರುವ ಚೈನಾದಂತಹ ಸಮಾಜಗಳ ರೀತಿಯಲ್ಲಿ ವ್ಯಕ್ತವಾಗುತ್ತದೆ. ಅದೇ, ಕಾನೂನಿನಲ್ಲಿ ತನ್ನದೇ ರೂಪವನ್ನು ಪ್ರಜ್ಞೆ ಕಂಡುಕೊಂಡರೆ ಅದು ಸಾಂವಿಧಾನಿಕ ನಿರಂಕುಶಾಧಿಕಾರವಿರುವ ೧೯ನೇ ಶತಮಾನದ ಜರ್ಮನಿಯಂಥ ಸುಧಾರಿತ ದೇಶವಾಗಿ ವ್ಯಕ್ತವಾಗುತ್ತದೆ. ಈ ರೀತಿಯ ವಿಚಾರಗಳು ನಮ್ಮ ಇವತ್ತಿನ ಚಿಂತನೆಗಳ ದೃಷ್ಟಿಯಲ್ಲಿ ವಿಚಿತ್ರ ಎಂದು ಅನ್ನಿಸಲೂಬಹುದು. ಆದರೆ, ಸಮಗ್ರವಾಗಿ ನೋಡಿದಾಗ, ಹೆಗೆಲ್‌ನ ಕ್ರಮದ ಭವ್ಯತೆ ತಿಳಿಯುತ್ತದೆ. ಮನುಷ್ಯರನ್ನು ಮತ್ತು ಅವರ ಸಾಂಸ್ಥಿಕ ಬದುಕನ್ನು ಅರ್ಥೈಸಿಕೊಳ್ಳಲು ಹೊರಟಾಗ ಅವುಗಳನ್ನು ಮನುಷ್ಯ ಪ್ರಜ್ಞೆಯ ರೀತಿಗಳು ಅಥವಾ ಜ್ಞಾನದ ರೀತಿಗಳು ಎಂದಲ್ಲದೆ ಬೇರೆ ಹೇಗೆ ನೋಡಲು ಸಾಧ್ಯವಿದೆ ಎಂದು ಕೇಳಿಕೊಂಡರೆ ಇದರ ಪ್ರಾಮುಖ್ಯ ಮುನ್ನೆಲೆಗೆ ಬರುತ್ತದೆ.

ಸಿದ್ಧಾಂತವಾಗಿ ಮಾರ್ಕ್ಸ್‌‌‌ವಾದ
ಮಾರ್ಕ್ಸ್ ಬಳುವಳಿಯಾಗಿ ಪಡೆದಿದ್ದು ಹೆಗೆಲ್‌ನ ಈ ಸಾಮಾಜಿಕ ಸಿದ್ಧಾಂತವನ್ನು. ಅವನೇ ಹೇಳುವಂತೆ, ಹೆಗೆಲ್‌ನ ತಲೆಕೆಳಗಾಗಿದ್ದ ಸಿದ್ಧಾಂತವನ್ನು ತಲೆಮೇಲಾಗಿ ನಿಲ್ಲಿಸಿದ್ದು ಅವನ ಹೆಗ್ಗಳಿಕೆ. ಹೆಗೆಲ್‌ನ ಈ ಚಿತ್ರಣದ ಬಗ್ಗೆ ಮಾರ್ಕ್ಸ್ ತನ್ನ Critique of Hegel's Philosophy of Right (1843) ಕೃತಿಯಲ್ಲಿ ಒಂದು ಮೂಲಭೂತ ತಕರಾರನ್ನು ಎತ್ತುತ್ತಾನೆ. ಹೆಗೆಲ್ ಪ್ರಜ್ಞೆಯ ಬಗ್ಗೆ ಮಾತನಾಡುತ್ತಾ ಸಾಮಾಜಿಕ ವಾಸ್ತವವೆಲ್ಲವೂ ಪ್ರಜ್ಞೆಯ ವಿವಿಧ ಅವಸ್ಥಾಂತರಗಳು ಎಂದು ಹೇಳಿದ. ಅಂದರೆ, ದೇವರ ಸ್ಥಾನದಲ್ಲಿ ಪ್ರಜ್ಞೆಯನ್ನು ತಂದಿಟ್ಟ ಹಾಗಾಯಿತು. ಈ ಪ್ರಜ್ಞೆಯ ಮೂಲವೇನು? ಇದು ತನ್ನದೇ ಸ್ವಯಂ ವೈರುದ್ಧ್ಯಗಳನ್ನು ಮೀರುತ್ತಾ ಬೆಳೆಯುವ ಒಂದು ವಿಸ್ಮಯಕಾರಿ ಶಕ್ತಿಯಂತೆ, ನೆಲದ ಹಂಗಿಲ್ಲದ ಖೇಚರನಂತೆ ಕಾಣುತ್ತದೆ. ಪ್ರಜ್ಞೆಯೇ ಸಾಮಾಜಿಕ ವಾಸ್ತವವನ್ನು ರೂಪಿಸುವುದು ಎಂದಾದ ಪಕ್ಷದಲ್ಲಿ ಈ ಸಾಮಾಜಿಕ ವಾಸ್ತವಕ್ಕೆ ತನ್ನದೇ ಬೆಲೆ ಇದೆಯೋ? ಅಥವಾ ನಮ್ಮ ಸುತ್ತಣ ಪ್ರಪಂಚವೆಲ್ಲಾ ಪ್ರಜ್ಞೆಯ ಇಂದ್ರಜಾಲವೋ?

ಹೆಗೆಲ್‌ನ ವಿರೋಧವಾಗಿ ಮಾರ್ಕ್ಸ್‌‌ ವಿಚಾರವೆಂದರೆ, ಪ್ರಜ್ಞೆಯ ಕಾರಣದಿಂದ ಸಾಮಾಜಿಕ ವಾಸ್ತವ ಬೆಳೆಯುವುದಲ್ಲ. ಬದಲಾಗಿ ಸಾಮಾಜಿಕ ಸ್ಥಿತಿಗತಿಗಳಿಂದ ಮನುಷ್ಯರ ಪ್ರಜ್ಞೆ ಬೆಳೆಯುವುದು. ಅಂದಮೇಲೆ, ಚರಿತ್ರೆಯ ಚಾಲಕ ಶಕ್ತಿಯಾಗಿರುವುದು ಮನುಷ್ಯನ ಪ್ರಜ್ಞೆಯಲ್ಲ. ಸಾಮಾಜಿಕ ವಾಸ್ತವದ ಸ್ಥಿತಿಗತಿಗಳು. ಯಾವುದು ಈ ಸಾಮಾಜಿಕ ವಾಸ್ತವದ ಸ್ಥಿತಿಗತಿಗಳು ಮತ್ತು ಅವನ್ನು ನಿರ್ಧರಿಸುವ ಶಕ್ತಿಗಳು?

ಮಾರ್ಕ್ಸ್‌‌ನ ಪ್ರಸಿದ್ಧವಾದ ಉತ್ತರ ಎಂದರೆ, ಉತ್ಪಾದನೆಯ ಸಲಕರಣೆಗಳೇ (material means of production) ಮಾನವರ ಸಾಮಾಜಿಕ ವಾಸ್ತವದ ಮತ್ತು ಪ್ರಜ್ಞೆಯ ಮೂಲಧಾತುಗಳು. ಬಹಳ ಸ್ಥೂಲವಾಗಿ ಹೇಳಬೇಕೆಂದರೆ, ಯಾವುದೇ ಒಂದು ಕಾಲದ ಸಮಾಜ ನಿಂತಿರುವುದು ಅದಕ್ಕಿರುವ ಸಂಪನ್ಮೂಲಗಳ ಮೇಲೆ. ಆದರೆ, ಸಂಪನ್ಮೂಲಗಳು ನೇರವಾಗಿ ಬಳಸುವ ರೀತಿಯಲ್ಲಿರುವುದಿಲ್ಲ. ಹುಲ್ಲಿನಲ್ಲಿರುವ ಅಕ್ಕಿಕಾಳು ನೇರವಾಗಿ ತಿನ್ನಲು ಬರುವುದಿಲ್ಲ. ಅದನ್ನು ಅಡಲು ಕಬ್ಬಿಣದ ಅಥವಾ ಮಣ್ಣಿನ ಪಾತ್ರೆ ಬೇಕು. ಮಣ್ಣಿನಲ್ಲಿರುವ ಚಿನ್ನ ಒಡವೆಯಾಗಿ ಧರಿಸಲು ಬರುವುದಿಲ್ಲ. ಅದಕ್ಕೆ ಗಣಿಗಾರಿಕೆ ಮತ್ತು ಚಿನಿವಾರರ ಉದ್ಯಮವೇ ಬೇಕು. ಹೀಗೆ ಇಂತಹ ಸರಳ ಉದಾಹರಣೆಗಳಿಂದ ಹಿಡಿದು ಎಷ್ಟೇ ಸಂಕೀರ್ಣ ಉದಾಹರಣೆಗಳನ್ನು ಗಮನಿಸಿದರೂ ಈ ಅಂಶ ಸ್ಪಷ್ಟವಾಗುತ್ತದೆ: ಸಂಪನ್ಮೂಲಗಳನ್ನು ಉತ್ಪಾದಿಸುವ ಅಗತ್ಯವಿದೆ. ಹಾಗಾದರೆ ಉತ್ಪಾದನೆಗೆ ಬೇಕಾದ ಸಲಕರಣೆಗಳು ಯಾವುವು? ಸ್ಥೂಲವಾಗಿ ಜಮೀನು, ಬಂಡವಾಳ, ಯಂತ್ರ, ತಂತ್ರಜ್ಞಾನ ಮತ್ತು ಶ್ರಮ. ಬೇರೆಬೇರೆ ಸಂದರ್ಭಗಳಲ್ಲಿ ಈ ಅಂಶಗಳು ಬದಲಾಗುತ್ತವೆ. ಉದಾಹರಣೆಗೆ, ಕೃಷಿ-ಕೇಂದ್ರಿತ ಉತ್ಪಾದನಾ ವ್ಯವಸ್ಥೆಯಲ್ಲಿ ಶ್ರಮ ಎನ್ನುವುದು ಪ್ರಾಣಿಗಳು ಮತ್ತು ಮನುಷ್ಯರನ್ನು ಅವಲಂಬಿಸಿದ್ದರೆ, ಬಂಡವಾಳ ಜಮೀನಿನ ರೂಪದಲ್ಲಿರುತ್ತದೆ. ಆದರೆ, ಇಂದಿನ ಸೈಬರ್ ಯುಗದಲ್ಲಿ ಶ್ರಮ ಎನ್ನುವುದು ಗಣಿತ ಮತ್ತು ಶಾಬ್ದಿಕ ಬುದ್ಧಿಶಕ್ತಿಯನ್ನು ಮತ್ತು ಯಂತ್ರ ಎನ್ನುವುದು ತಂತ್ರಾಂಶಗಳನ್ನು ಅವಲಂಬಿಸಿ ಆ ಮೂಲಕ ದೊಡ್ಡ ಬಂಡವಾಳಶಾಹಿಗಳ ಮತ್ತು ತಂತ್ರಜ್ಞರ ಶಕ್ತಿಯನ್ನು ಅವಲಂಬಿಸಿರುತ್ತದೆ. ಈ ವಿಚಾರವನ್ನೇ ಚಾರಿತ್ರಿಕವಾಗಿ ಬೆಳೆಸುತ್ತಾ ಎಂಗೆಲ್ಸ್ ತನ್ನ ಮುಖ್ಯ ಕೃತಿಯಾದ The Origin of the Family, Private Property and the State (1884) ಎಂಬ ಪುಸ್ತಕದಲ್ಲಿ ಪ್ರಾಚೀನ ಸಮಾಜಗಳಲ್ಲಿ, ವಿಶೇಷವಾಗಿ ಕುಟುಂಬಗಳಲ್ಲಿ, ಇದ್ದ ಅಧಿಕಾರ ವ್ಯವಸ್ಥೆಗಳ ಬಗ್ಗೆ ಮಾತನಾಡುತ್ತಾ, ಆದಿಮ ಸಮಾಜಗಳ ಮೊದಲ ಸಂಸ್ಥೆ ಕುಟುಂಬವಲ್ಲ. ಬದಲಾಗಿ ಮಾತೃಪ್ರಧಾನ ಕುಲಸಮೂಹ ಎಂದು ವಾದಿಸುತ್ತಾನೆ. ಇದು ಹೇಗೆ ಕೃಷಿ ಮತ್ತು ಪಶುಸಂಗೋಪನೆಯ ಬೆಳವಣಿಗೆಯಿಂದಾಗಿ ನಾಶವಾಯಿತು ಎನ್ನುವುದು ಅವನ ವಾದ. ಈ ಪುಸ್ತಕದ ವಿಚಾರಗಳ ಸತ್ಯಾಸತ್ಯತೆಯ ಬಗ್ಗೆ ಹಲವಾರು ವಾದವಿವಾದಗಳಿದ್ದರೂ, ಇದು ಮಾರ್ಕ್ಸ್‌ವಾದೀ ವಿಧಾನದಲ್ಲಿ ಇತಿಹಾಸವನ್ನು ಅಧ್ಯಯನ ಮಾಡುವ ಕ್ರಮಕ್ಕೆ ಇಂದಿಗೂ ಒಂದು ಮುಖ್ಯ ಉದಾಹರಣೆಯಾಗಿದೆ

ಹೀಗೆ ಪ್ರತಿ ಕಾಲಘಟ್ಟದಲ್ಲೂ ಉತ್ಪಾದನೆಯ ಸಲಕರಣೆಗಳು ಯಾರ ವಶದಲ್ಲಿರುತ್ತದೋ ಆ ವರ್ಗದ ಜನ ಆಯಾ ಕಾಲಘಟ್ಟದ ಆಳುವ ವರ್ಗವಾಗುತ್ತಾರೆ ಮತ್ತು ರಾಜ್ಯಾಧಿಕಾರ ಎನ್ನುವುದು ಅವರ ಹಿತಾಸಕ್ತಿಗಳನ್ನು ಕಾಯುವ ಒಂದು ಯಂತ್ರವಾಗಿ ಕೆಲಸಮಾಡುತ್ತದೆ. ಪ್ರತಿ ಕಾಲಘಟ್ಟದಲ್ಲೂ ಈ ಸಲಕರಣೆಗಳಿಂದ ದೂರವಿರುವ ಒಂದು ಜನವರ್ಗವಿರುತ್ತದೆ. ಅದು ಶ್ರಮಿಕ ವರ್ಗ ಅಥವಾ proletariat ಆಗುತ್ತದೆ. ಹಿಂದಿನ ಕೃಷಿ ಆಧಾರಿತ ಪದ್ಧತಿಯಲ್ಲಿ ಜೀತದ ಆಳು ಅಂತಹ ವರ್ಗವಾದರೆ, ಇಂದಿನ ಕೈಗಾರಿಕೆ ಆಧಾರಿತ ಪದ್ಧತಿಯಲ್ಲಿ ಕಾರ್ಮಿಕರು ಆ ವರ್ಗವಾಗುತ್ತಾರೆ.
ಒಂದು ಸಮಾಜ ಹೀಗೆ ರಾಚನಿಕವಾಗಿ ಹಲವು ವರ್ಗಗಳಿಂದ ಕೂಡಿರುತ್ತದೆ. ವರ್ಗಗಳು ಎಂದರೆ ಇಲ್ಲಿ ಬಡವರು, ಶ್ರೀಮಂತರು ಎಂದಷ್ಟೇ ಅರ್ಥವಲ್ಲ. ಮಾರ್ಕ್ಸ್‌ನಲ್ಲಿ ವರ್ಗ ಎನ್ನುವುದು ಒಂದು ತಾಂತ್ರಿಕ ಪದ. ಉತ್ಪಾದನೆಯ ಸಲಕರಣೆಗಳೊಂದಿಗೆ ಇರುವ ಬೇರೆಬೇರೆ ಸಂಬಂಧಗಳು ಸಮಾಜದಲ್ಲಿ ಬೇರೆಬೇರೆ ವರ್ಗಗಳಾಗಿ ಕಾಣಿಸಿಕೊಳ್ಳುತ್ತವೆ. ಒಂದು ಸಾಧಾರಣ ಕೈಗಾರಿಕಾ ಸಮಾಜದಲ್ಲಿ ಉತ್ಪಾದನೆಯ ಸಲಕರಣೆಗಳು ಮತ್ತು ಅವುಗಳ ಸಮೀಕರಣವಾದ ವರ್ಗಗಳು ಸುಮಾರು ಹೀಗಿರುತ್ತವೆ.

. ಉತ್ಪಾದನೆಯ ಮೂಲ ಸಲಕರಣೆಯಾದ ಬಂಡವಾಳ ಹೊಂದಿರುವ ವರ್ಗ ಬಂಡವಾಳಶಾಹಿ
. ಉತ್ಪಾದನೆಯ ಸಲಕರಣೆಗಳ ಒಡೆತನವಿಲ್ಲದಿದ್ದರೂ ಅದರ ತಾಂತ್ರಿಕ ವಿಚಾರಗಳು ಕಾಯ್ದೆ ಕಾನೂನುಗಳು ಇತ್ಯಾದಿ ನೋಡಿಕೊಳ್ಳುವ ವರ್ಗ ಬೂರ್ಜ್ವಾ
. ಉತ್ಪಾದನೆಗೆ ಬೇಕಾದ ಯಾವ ಸಲಕರಣೆಯ ಒಡೆತನವನ್ನೂ ಹೊಂದದೆ ಕೇವಲ ತಮ್ಮ ಶ್ರಮವನ್ನು ಮಾರಾಟ ಮಾಡುವ ವರ್ಗ ಕಾರ್ಮಿಕ ಅಥವಾ ಪ್ರೋಲೆಟೆರಿಯೆಟ್

ಸ್ವಾಭಾವಿಕವಾಗಿಯೇ ಈ ವರ್ಗಗಳಿಗೆ ತಮ್ಮತಮ್ಮದೇ ಆದ ಹಿತಾಸಕ್ತಿಗಳಿರುತ್ತವೆ. ಬಂಡವಾಳಶಾಹಿಗೆ ಲಾಭಾಂಶ ಹೆಚ್ಚು ಮಾಡಿಕೊಳ್ಳುವುದು ಹಿತಾಸಕ್ತಿಯಾದರೆ, ಶ್ರಮಿಕ ವರ್ಗಕ್ಕೆ ತನ್ನ ಶ್ರಮದ ಬೆಲೆಯನ್ನು ಇನ್ನೂ ಹೆಚ್ಚಿಸುವುದು ತನ್ನ ಹಿತಾಸಕ್ತಿ. ಇದೇ ಮಾರ್ಕ್ಸ್‌ವಾದಿಗಳ ನಿಘಂಟಿನಲ್ಲಿರುವ ಅತ್ಯಂತ ಮುಖ್ಯ ಪರಿಕಲ್ಪನೆಗಳಲ್ಲಿ ಒಂದು: class interest. ಹೀಗೆ ಪರಸ್ಪರ ವಿರುದ್ಧ ಹಿತಾಸಕ್ತಿಗಳಿರುವುದರಿಂದಲೇ ವರ್ಗ ಸಂಘರ್ಷ ಏರ್ಪಡುತ್ತದೆ. ಇಲ್ಲಿ ವರ್ಗ ಸಂಘರ್ಷ ನೇರವಾಗಿ ನಾಗರಿಕರ ತಿಕ್ಕಾಟದಲ್ಲೇನೂ ವ್ಯಕ್ತವಾಗುವುದಿಲ್ಲ. ವರ್ಗ ಸಂಘರ್ಷವೇ ಸಮಾಜದ ಸಂಬಂಧಗಳ ಅಡಿಪಾಯ. ಇದೇ, ಇತಿಹಾಸದ ಡಯಲೆಕ್ಟಿಕ್, ಅಂದರೆ ಚಾರಿತ್ರಿಕ ಬದಲಾವಣೆಗಳಿಗೆ ಮೂಲಶಕ್ತಿ. ಆಧುನಿಕ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಪ್ರಭಾವಶಾಲಿ ದಾಸ್ತಾವೇಜುಗಳಲ್ಲಿ ಒಂದಾದ ಮಾರ್ಕ್ಸ್ ಮತ್ತು ಎಂಗೆಲ್ಸ್ ರಚಿಸಿದ ಪ್ರಣಾಳಿಕೆ The Communist Manifesto (1848) ಈ ಸಿದ್ಧಾಂತದ ಸ್ಥೂಲ ಆಯಾಮಗಳನ್ನು ಅತ್ಯಂತ ಸರಳವಾದ ಮತ್ತು ಶಕ್ತವಾದ ಭಾಷೆಯಲ್ಲಿ ವ್ಯಕ್ತಪಡಿಸುತ್ತದೆ. ಈ ದೃಷ್ಟಿಯಿಂದ ಮಾರ್ಕ್ಸ್‌ನ ನಾಲ್ಕು ಮುಖ್ಯ ಪರಿಕಲ್ಪನೆಗಳನ್ನು ಗಮನಿಸಬಹುದು: alienation, oppression, revolutionary consciousness ಮತ್ತು ideology ಅಥವಾ ಪರಕೀಯತೆ, ಶೋಷಣೆ, ಕ್ರಾಂತಿಕಾರಿ ಪ್ರಜ್ಞೆ, ಮತ್ತು ಹುಸಿಪ್ರಜ್ಞೆ. ನಮ್ಮ ಇಂದಿನ ವಿಚಾರ ವಿನಿಮಯಗಳಲ್ಲಿ ಈ ನಾಲ್ಕೂ ಪದಗಳನ್ನು ಅತ್ಯಂತ ಸಲೀಸಾಗಿ ಸಾಮಾನ್ಯ ಜ್ಞಾನದ ರೀತಿಯಲ್ಲಿ ಬಳಸುವುದನ್ನು ಕಾಣುತ್ತೇವೆ. ಆದರೆ ಮಾರ್ಕ್ಸ್‌ನಿಗೆ ಇವು ಬಹಳ ಮುಖ್ಯವಾದ ತಾತ್ವಿಕ ಪರಿಕಲ್ಪನೆಗಳು. ಈ ಒಂದೊಂದನ್ನೂ ಈಗ ಚುಟುಕಾಗಿ ಚರ್ಚಿಸಬಹುದು.

ಪರಕೀಯತೆ
ಆಧುನಿಕ ಬಂಡವಾಳಶಾಹಿ ಸಂಸ್ಕೃತಿಯ ಲಕ್ಷಣವೇನೆಂದರೆ ಅದು ಎಲ್ಲಾ ವಸ್ತುಗಳನ್ನೂ ಅದರ ವಿನಿಮಯ ಬೆಲೆಯೊಂದಿಗೆ ಸಮೀಕರಿಸಿಬಿಡುತ್ತದೆ. ಒಂದು ಪೆನ್ ಆಗಲೀ ಅಥವಾ ಒಬ್ಬ ವೈದ್ಯನ ಅರ್ಧ ಗಂಟೆಯ ಸಂದರ್ಶನದ ಸಮಯವಾಗಲೀ, ಅದೆಲ್ಲವನ್ನೂ ಒಂದು ಮಾಪನದ ಮೂಲಕ ಅಳೆಯುತ್ತದೆ. ವೈದ್ಯನ ಅರ್ಧ ಗಂಟೆ ಸಂದರ್ಶನದ ವಿನಿಮಯ ಬೆಲೆ ೫೦೦ ರೂಪಾಯಿಗಳಾದರೆ, ಪೆನ್ನಿನ ಬೆಲೆ ೫೦ ರೂಪಾಯಿಗಳು. ಅಂದರೆ ಇಂತಹ ಹತ್ತು ಪೆನ್ನುಗಳು ವೈದ್ಯನ ಅರ್ಧ ಗಂಟೆಗೆ ಸಮ. ಪೆನ್ನು ಮತ್ತು ವೈದ್ಯನ ತಜ್ಞತೆಯ ನಡುವೆ ಯಾವ ಸಾಮ್ಯವಿದೆ? ಅವೆರಡೂ ತೀರ ಬೇರೆಬೇರೆಯಾದ ವಿಚಾರಗಳು. ಒಂದು ವಸ್ತು ಮತ್ತೊಂದು ಸೇವೆ ಎಂದೆಲ್ಲಾ ಹೇಳಿದರೂ, ಈ ಸಮಾನ ಮಾಪಕ ಎರಡನ್ನೂ ಸರಕುಗಳು ಎನ್ನುವ ಒಂದೇ ದೃಷ್ಟಿಕೋನದಿಂದ ನೋಡುತ್ತದೆ. ಇದರ ಪರಿಣಾಮವೇನೆಂದರೆ, ಒಬ್ಬ ಕಾರ್ಮಿಕ ತನ್ನ ಶ್ರಮದಿಂದ ಉತ್ಪಾದನೆ ಮಾಡುತ್ತಿರುವುದು ಯಾವುದೇ ನಿರ್ದಿಷ್ಟ ವಸ್ತುವನ್ನಲ್ಲ. ಬದಲಾಗಿ ಅಮೂರ್ತವಾದ ನಿರ್ದಿಷ್ಟ ಮೊತ್ತದ ವಿನಿಮಯ ಬೆಲೆಯನ್ನು. ಬಂಡವಾಳಶಾಹಿ ವ್ಯವಸ್ಥೆಗೂ ಮೊದಲು ಒಬ್ಬ ಕುಶಲಕರ್ಮಿ ಒಂದು ವಸ್ತುವನ್ನು ಉತ್ಪಾದಿಸಿದರೆ, ಅದು ಆ ಕುಶಲಕರ್ಮಿಗೆ ಮಾತ್ರ ಸಾಧ್ಯವಿದ್ದ ಕಸುಬಿನ (ಸಾಮಾನ್ಯವಾಗಿ ಕುಲಕಸುಬಿನ) ಒಂದು ಫಲಿತಾಂಶ. ಕುಡುಗೋಲು ಮಾಡಲು ಸಾಧ್ಯವಿದ್ದದ್ದು ಊರಿನ ಕಮ್ಮಾರನಿಗೆ ಮಾತ್ರ. ಅಷ್ಟರಮಟ್ಟಿಗೆ ಆ ಕುಡುಗೋಲು ನಮ್ಮ ಕಮ್ಮಾರನ ಕೈಚಳಕ, ಕೌಶಲ್ಯ ಮತ್ತು ಸೃಜನಶೀಲತೆಯ ಪ್ರತೀಕ. ಕಮ್ಮಾರನ ಶ್ರಮಕ್ಕೂ, ಅವನು ಉತ್ಪಾದಿಸುವ ವಸ್ತುವಿಗೂ ಹೀಗೆ ಅವಿನಾಭಾವ ಸಂಬಂಧವಿದೆ. ಆದರೆ ಆಧುನಿಕ ಕಾರ್ಖಾನೆಯಲ್ಲಿ ಕಾರ್ಮಿಕನ ಶ್ರಮಕ್ಕೂ, ತಾನು ನಿರ್ಮಿಸುವ ವಸ್ತುವಿಗೂ ಅಂತಹ ಯಾವುದೇ ಆಂತರಿಕ ಸಂಬಂಧವಿಲ್ಲ. ಕಾರ್ಖಾನೆಯಲ್ಲಿ ನಿರ್ಮಿತವಾದ ವಸ್ತು, ಶ್ರಮದ ದೃಷ್ಟಿಯಿಂದ ನೋಡಿದರೆ ಒಂದು ಅಮೂರ್ತವಾದ ವಸ್ತು. ಹಾಗಾಗಿ ಆಧುನಿಕ ಕೈಗಾರಿಕಾ ಸಮಾಜದಲ್ಲಿ ಕೆಲಸ ಅಥವಾ ಶ್ರಮ ಎಂಬುದು ಪರಕೀಯವಾದ ಒಂದು ಅನುಭವ. ಈ ಪರಕೀಯತೆಯೇ ಬಂಡವಾಳಶಾಹಿ ಸಮಾಜದಲ್ಲಿ ಮಾನವನ ದಾಸ್ಯದ ಒಂದು ಸಂಕೇತ ಎಂದು ಮಾರ್ಕ್ಸ್ ವಾದಿಸುತ್ತಾನೆ. ಈ ದಾಸ್ಯವನ್ನು ಮೀರಬೇಕೆಂದರೆ, ಮಾರ್ಕ್ಸ್ ಪ್ರಕಾರ, ಬಂಡವಾಳಶಾಹಿಯು ಬೆಳೆಸಿರುವ ಉತ್ಪಾದನಾ ಸಲಕರಣೆಗಳ ಒಡೆತನವನ್ನು ಶ್ರಮಿಕ ವರ್ಗ ಕೈವಶ ಮಾಡಿಕೊಳ್ಳಬೇಕು.

ಶೋಷಣೆ
ಮಾರ್ಕ್ಸ್‌ನಲ್ಲಿ ಶೋಷಣೆ ಎಂದರೆ ಒಬ್ಬರನ್ನು ಮತ್ತೊಬ್ಬರು ಉದ್ದೇಶಪೂರ್ವಕವಾಗಿ ಹಿಂಸಿಸುವುದು ಎನ್ನುವ ಅರ್ಥವಿಲ್ಲ. ಶೋಷಣೆ ಎನ್ನುವುದು ವರ್ಗ ಹಿತಾಸಕ್ತಿಗಳು ಬೇರೆಬೇರೆಯಾದ್ದರಿಂದ ಉಂಟಾಗುವ ವರ್ಗಗಳ ಸಂಬಂಧದ ಪರಿಣಾಮ. ಅಂದರೆ, ಒಬ್ಬ ಬಂಡವಾಳಶಾಹಿ ತಾನು ತನ್ನ ಕಾರ್ಮಿಕರನ್ನು ಎಷ್ಟೇ ಕಾಳಜಿಯಿಂದ, ಜವಾಬ್ದಾರಿಯಿಂದ ನೋಡಿಕೊಂಡರೂ, ಅದು ಶೋಷಣೆಯಿಂದ ಮುಕ್ತವಾದ ಸಂಬಂಧ ಎಂದು ಹೇಳಲು ಬರುವುದಿಲ್ಲ. ಹಾಗೆ ನೋಡಿದರೆ ಮಾರ್ಕ್ಸ್‌ನಲ್ಲಿ ಶೋಷಣೆ ಎನ್ನುವುದು ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಬಂಧದ ಬಗ್ಗೆ ಇರುವಂಥ ಪರಿಕಲ್ಪನೆಯೇ ಅಲ್ಲ. ಶೋಷಣೆ ಎನ್ನುವುದು ವರ್ಗ ವರ್ಗಗಳ ನಡುವಿನ ಸಂಬಂಧಕ್ಕೆ ಇರುವ ವಿವರಣೆ. ಅದನ್ನು ಮಾರ್ಕ್ಸ್ ಬೆಳೆಸಿದ್ದು ತನ್ನ A Contribution to the Critique of Political Economy (1861-63) ಮತ್ತು Capital (1867) ಪುಸ್ತಕಗಳಲ್ಲಿ. ಅದರ ತಾಂತ್ರಿಕ ವಿವರ ಸುಮಾರು ಹೀಗಿದೆ.

ಒಂದು ವಸ್ತುವನ್ನು ಉತ್ಪಾದಿಸುವುದಕ್ಕೆ ಹೂಡಿದ ಒಟ್ಟು ಬಂಡವಾಳ 'C' ಯಲ್ಲಿ  ಎರಡು ಭಾಗಗಳಿರುತ್ತವೆ. (a) ಸ್ಥಿರ ಬಂಡವಾಳ (ಅಂದರೆ ಒಂದೇ ಬಾರಿಗೆ ಯಂತ್ರೋಪಕರಣ ಇತ್ಯಾದಿಗಳ ಮೇಲೆ ಹೂಡಿದ್ದು), ಮತ್ತು (b) ನವೀಕೃತ ಬಂಡವಾಳ (ಕೂಲಿ, ಯಂತ್ರ ಸವಕಳಿ, ಹಣದುಬ್ಬರದಿಂದ ಅಪಮೌಲ್ಯ, ನೆಲದ ಬಾಡಿಗೆ, ಇತ್ಯಾದಿ ಪುನಃ ಪುನಃ ಹೂಡಬೇಕಾದ ಮೊತ್ತ). ಇದನ್ನು ಹೀಗೆ ಸೂಚಿಸಬಹುದು

C = (a + b)

ಇದು ಸರಳವಾಗಿ ನೋಡಿದರೆ, ಈ ಸರಕನ್ನು ಉತ್ಪಾದಿಸಲು ತಗುಲಿದ ವೆಚ್ಚ. ಈಗ, ಈ ಸರಕು ಉತ್ಪಾದಿಸಿದ ಮೇಲೆ ಲಾಭಾಂಶ (d) ಕೂಡಾ ಸೇರಿಕೊಳ್ಳುತ್ತದೆ. ಅಂದರೆ, ಈಗ ಈ ಸರಕಿನ ಬೆಲೆ (a + b) + d ಆಗುತ್ತದೆ. ಈ ಹೊಸ ಬೆಲೆಯನ್ನುCN ಎಂದು ಕರೆಯುವಾ. ಅಂದರೆ, ನಮ್ಮ ಬಂಡವಾಳದಾರ ಒಂದು ಸರಕನ್ನು ಉತ್ಪಾದಿಸಲು ಹಾಕಿದ್ದು C ಮೌಲ್ಯವನ್ನು. ಅದರಿಂದ ಹೊರಹೊಮ್ಮಿದ್ದು CN ಮೌಲ್ಯ. ಅಂದರೆ,

CN = C + d

ಆದರೆ, ಇಲ್ಲೊಂದು ಸಂಕೀರ್ಣತೆಯನ್ನು ಗಮನಿಸಿ. ನಾವು ಸ್ಥಿರ ಬಂಡವಾಳ 'a' ಅನ್ನು ಲೆಕ್ಕ ಮಾಡುವಾಗ ಬಂಡವಾಳದಾರ ಹಾಕಿದ ಒಟ್ಟು ಹಣವನ್ನೆಲ್ಲಾ ಲೆಕ್ಕ ಮಾಡಿದೆವು. ಆದರೆ, ನಿಜವಾಗಿಯೂ ಇದು ಹೀಗೆ ಇರುವುದಿಲ್ಲ. ಒಂದು ಕೋಟಿ ರೂಪಾಯಿಯ ಒಂದು ಯಂತ್ರವನ್ನು ಬಳಸಿ ಒಂದು ಸರಕನ್ನು ಉತ್ಪಾದಿಸುತ್ತೇವೆಂದರೆ, ಆ ಒಂದು ಕೋಟಿ ರೂಪಾಯಿಯ ಮೌಲ್ಯವೆಲ್ಲಾ ಆ ಸರಕಿಗೆ ವರ್ಗವಾಗುವುದಿಲ್ಲ. ಆ ಯಂತ್ರ ತನ್ನ ಇಡೀ ಮೌಲ್ಯವನ್ನು ತನ್ನಲ್ಲೇ ಉಳಿಸಿಕೊಳ್ಳುತ್ತದೆ. ಈ ವಸ್ತುವನ್ನು ಉತ್ಪಾದಿಸುವಾಗ ಯಂತ್ರ ಒಂದಷ್ಟು ಸವಕಳಿ ಆಗುವುದರಿಂದ ಎಷ್ಟು ಮೌಲ್ಯ ನಷ್ಟವಾಗುತ್ತದೋ ಅಷ್ಟು ಮಾತ್ರ ಈ 'a' ಮೌಲ್ಯದಿಂದ ನಮ್ಮ ಸರಕಿಗೆ ವರ್ಗಾವಣೆಯಾಗುತ್ತದೆ. ಅದು ಎಷ್ಟು ಎನ್ನುವುದನ್ನು ಹೇಗಿದ್ದರೂ ಸವಕಳಿಯ ಖರ್ಚು ಎಂದು b ಒಳಗೇ ಸೇರಿಸಿದ್ದೇವೆ. ಹಾಗಾಗಿ ಮತ್ತೆ ಅದನ್ನು ಇಲ್ಲಿ ತೋರಿಸುವ ಅಗತ್ಯವಿಲ್ಲ. ಅಂದರೆ, ನಿಜವಾಗಿ, ಒಂದು ಸರಕನ್ನು ತಯಾರಿಸಲು ನಮ್ಮ ಬಂಡವಾಳದಾರ ಹೂಡುತ್ತಿರುವುದು 'b' ಮೌಲ್ಯವನ್ನು ಮಾತ್ರ. ಅಂದರೆ, ಒಂದು ವಸ್ತುವಿನ ನಿಜವಾದ ಮೌಲ್ಯ ಇಷ್ಟು:

C = (0 + b) ಅಥವಾ C = b

ಇದರ ಅರ್ಥ, ಒಬ್ಬ ಬಂಡವಾಳದಾರನಿಗೆ ಒಂದು ಸರಕನ್ನು ಉತ್ಪಾದಿಸುವಲ್ಲಿ ತಗಲುತ್ತಿರುವ ವೆಚ್ಚ ಕೇವಲ ಅದಕ್ಕೆ ಸಂಬಂಧಿಸಿದ ನವೀಕೃತ ವೆಚ್ಚದ್ದು. ನಮ್ಮ ಸರಳ ಲೆಕ್ಕಾಚಾರದಲ್ಲಿ ಬಂಡವಾಳದಾರನ ಲಾಭಾಂಶ ಇಷ್ಟು:

d = CN – C

ಆದರೆ, (C = b) ಎಂದಾದಮೇಲೆ, ನಿಜವಾಗಿಯೂ ಅವನ ಲಾಭಾಂಶ ಇಷ್ಟು:

d = CN – b

ಈಗ ಇದನ್ನು ಒಂದು ಉದಾಹರಣೆಯ ಮೂಲಕ ಲೆಕ್ಕ ಮಾಡಿ ನೋಡಬಹುದು. ಒಬ್ಬ ಬಂಡವಾಳದಾರ ಒಂದು ಕೋಟಿ ರೂಪಾಯಿ (a) ಸ್ಥಿರ ಬಂಡವಾಳ ಹಾಕಿದ್ದಾನೆ. ಅವನ ವಾರ್ಷಿಕ ಖರ್ಚು (ಕೆಲಸಗಾರರಿಗೆ ಕೂಲಿ, ಯಂತ್ರಗಳ ಸವಕಳಿ, ಹಣದುಬ್ಬರದ ಅಪಮೌಲ್ಯ, ಮಾರುಕಟ್ಟೆ ಖರ್ಚುಗಳು ಇತ್ಯಾದಿ ಎಲ್ಲಾ ಸೇರಿ) ಮೂವತ್ತು ಲಕ್ಷ (b). ಒಟ್ಟು ಖರ್ಚು ಒಂದು ಕೋಟಿ ಮೂವತ್ತು ಲಕ್ಷ ರೂಪಾಯಿ. ಅವನ ಸರಕನ್ನು ಮಾರಾಟ ಮಾಡಿ ಬರುತ್ತಿರುವ ಒಟ್ಟು ಹಣ ಎರಡು ಕೋಟಿ (CN).

ಅಂದಮೇಲೆ ಅವನ ಲಾಭಾಂಶ ಎಪ್ಪತ್ತು ಲಕ್ಷ ರೂಪಾಯಿ. ಇದು ನಮ್ಮ ಸಾಮಾನ್ಯ ಜ್ಞಾನ. ಆದರೆ, ನಿಜಕ್ಕೂ ಅವನ ಲಾಭಾಂಶ ಇದು:

d = CN – b. ಅಂದರೆ, (Rs.2,00,00,000 – Rs.30,00,000) = Rs.1,70,00,00

ಅಂದರೆ, ಮುದ್ದಾಂ ಒಂದು ಕೋಟಿ ಎಪ್ಪತ್ತು ಲಕ್ಷ!

ನಮ್ಮ ಸರಳ ಲೆಕ್ಕಾಚಾರಕ್ಕೂ ಮತ್ತು ಈ ಎರಡನೇ ಲೆಕ್ಕಾಚಾರಕ್ಕೂ ನಡುವೆ ಇರುವ ವ್ಯತ್ಯಾಸವೇ ಮಾರ್ಕ್ಸ್ ನ ಪ್ರಕಾರ surplus value ಅಥವಾ ಹೆಚ್ಚುವರಿ ಲಾಭಾಂಶ. ಇದನ್ನೇ ಸಾಪೇಕ್ಷವಾಗಿ ಹೇಳಬೇಕೆಂದರೆ, (d/b) ಇದು rate of surplus value. ಅಂದರೆ, ಇಲ್ಲಿ, ಬಂಡವಾಳದಾರ ಉತ್ಪಾದನೆಯ ಸಲಕರಣೆಗಳಿಗೆ ತಾನೇ ಒಡೆಯನಾದ್ದರಿಂದ ಈ ಹೆಚ್ಚುವರಿ ಲಾಭಾಂಶವನ್ನು ತಾನು ಪಡೆದುಕೊಳ್ಳುತ್ತಿದ್ದಾನೆ. ಅದರ ಒಂದು ಭಾಗವನ್ನು ತೆರಿಗೆಯ ರೂಪದಲ್ಲಿ ಕಟ್ಟಿ ತನ್ನ ಹಿತಾಸಕ್ತಿಯನ್ನು ಕಾಯುವ ಸರಕಾರಗಳನ್ನು, ಕಾನೂನುಗಳನ್ನು ಗಳಿಸಿಕೊಳ್ಳುತ್ತಿದ್ದಾನೆ. ಇದು ಒಬ್ಬ ಬಂಡವಾಳದಾರನ ದೃಷ್ಟಿಕೋನದಿಂದ ಹೇಳಿದ ಕತೆಯಾಯಿತು. ಇದೇ ಲೆಕ್ಕಾಚಾರವನ್ನು ಒಬ್ಬ ಶ್ರಮಿಕನ ದೃಷ್ಟಿಕೋನದಿಂದ ಹೇಳಿದರೆ, ಅದರರ್ಥ ಸುಮಾರು ಹೀಗಿರುತ್ತದೆ. ಒಬ್ಬ ಶ್ರಮಿಕ ದಿನಾ ಹತ್ತು ಗಂಟೆ ದುಡಿದರೆ, ಅದರಲ್ಲಿ ಸುಮಾರು ಮೂರು ಘಂಟೆ ಮಾತ್ರ ತನಗೆ ದೊರೆಯುತ್ತಿರುವ ಸಂಬಳಕ್ಕೆ ಪ್ರತಿಯಾಗಿ ತನ್ನ ಶ್ರಮವನ್ನು ನೀಡುತ್ತಿದ್ದಾನೆ. ಇನ್ನು ಏಳು ಗಂಟೆಗಳ ಕಾಲದ ಶ್ರಮವನ್ನು ಬಿಟ್ಟಿಯಾಗಿ ಬಂಡವಾಳದಾರನಿಗೆ ಕೊಡುತ್ತಿದ್ದಾನೆ. ತಂತ್ರಜ್ಞಾನ ಬೆಳೆದಂತೆ, ಒಂದು ಗಂಟೆಯ ಅವಧಿಯ ಕೆಲಸದಿಂದ ಒಬ್ಬ ಶ್ರಮಿಕ ಇನ್ನೂ ಹೆಚ್ಚು ಮೌಲ್ಯವನ್ನು ಉತ್ಪಾದಿಸಲು ಸಾಧ್ಯ. ಅಂದರೆ, ಆತ ಬಂಡವಾಳದಾರನಿಗೆ ಇನ್ನೂ ಹೆಚ್ಚುಹೆಚ್ಚಾಗಿ ಹೆಚ್ಚುವರಿ ಲಾಭಾಂಶವನ್ನು ಗಳಿಸಿ ಕೊಡುತ್ತಿರುತ್ತಾನೆ. ಬಂಡವಾಳದಾರನ ದೃಷ್ಟಿಯಿಂದ ಯಾವುದು ಅಧಿಕ ಲಾಭಾಂಶವೋ (Surplus Value) ಅದನ್ನೇ ಶ್ರಮಿಕನ ದೃಷ್ಟಿಯಿಂದ ಹೇಳಿದರೆ, ಶೋಷಣೆ ಎಂದಾಗುತ್ತದೆ. ಇದು ಹೀಗೇಕಿದೆ ಎಂದರೆ, ಉತ್ಪಾದನೆಯ ಸಲಕರಣೆಗಳು ಬಂಡವಾಳದಾರನ ಹಿಡಿತದಲ್ಲಿವೆ. ಆದ್ದರಿಂದಲೇ ಮಾರ್ಕ್ಸ್ ನ ಸಿದ್ಧಾಂತದ ಪ್ರಕಾರ ಈ ಸಲಕರಣೆಗಳು ಒಟ್ಟಾರೆಯಾಗಿ ಶ್ರಮಿಕ ವರ್ಗದ ಸ್ವತ್ತೇ ಆದರೆ ಶೋಷಣೆ ಇಲ್ಲವಾಗುತ್ತದೆ. ಇಲ್ಲಿಯೇ ಕಾರ್ಮಿಕ ಸಂಘಟನೆಗಳ ಬಗ್ಗೆಯೂ ಒಂದು ಮಾತು ಸೇರಿಸಬಹುದು. ಕಾರ್ಮಿಕ ಸಂಘಟನೆಗಳು ಸಾಮಾನ್ಯವಾಗಿ ದುಡಿಮೆಯ ಅವಧಿಯನ್ನು ಕಡಿಮೆ ಮಾಡಲು ಮತ್ತು ಲಾಭಾಂಶದಲ್ಲಿ ಒಂದಂಶವನ್ನು ಬೋನಸ್ ಎಂದು ಕೊಡಲು ಒತ್ತಾಯಮಾಡುವುದು ಈ surplus value ಎನ್ನುವ ತರ್ಕದ ಮೇಲೆಯೇ. ಅಂಥಾ ಸಂಘಟನೆಗಳ ಕಾರಣದಿಂದಲೇ ೨೦ನೇ ಶತಮಾನದ ಯುರೋಪು, ಅಮೆರಿಕಾಗಳಲ್ಲಿ ಮತ್ತು ತದನಂತರ ಇತರ ದೇಶಗಳಲ್ಲಿ ೭೦ ರಿಂದ ೮೦ ಗಂಟೆಗಳ ಕಾಲ ಇದ್ದ ವಾರದ ದುಡಿಮೆಯ ಅವಧಿ ಈಗಿನ ೪೦ ರಿಂದ ೫೦ ಗಂಟೆಗಳ ಆಸುಪಾಸಿಗೆ ಬಂದಿರುವುದು ಮತ್ತು ಕಾರ್ಖಾನೆಗಳಲ್ಲಿನ ಕೆಲಸದ ಸ್ಥಿತಿಗತಿಗಳಲ್ಲಿ ಸುಧಾರಣೆ ಕಂಡಿರುವುದು.

ಕ್ರಾಂತಿಕಾರಿ ಪ್ರಜ್ಞೆ
ಬಂಡವಾಳಶಾಹಿ ವ್ಯವಸ್ಥೆಯಿಂದ ಅತ್ಯಧಿಕವಾಗಿ ಪ್ರಯೋಜನವಿರುವುದು ಬಂಡವಾಳಶಾಹಿ ಮತ್ತು ಬೂರ್ಜ್ವಾ ವರ್ಗಕ್ಕೆ. ಇದರಲ್ಲಿ ಅತೀ ಕಡಿಮೆ ಪ್ರಯೋಜನವಿರುವುದು ಶ್ರಮಿಕ ವರ್ಗಕ್ಕೆ. ಹಾಗಾಗಿ, ಈ ವ್ಯವಸ್ಥೆಯನ್ನು ಕಾಪಿಡುವ ಜವಾಬ್ದಾರಿ ಇರುವುದು ಬಂಡವಾಳಶಾಹಿಗಳ ಮೇಲೆ. ಇದನ್ನು ಬುಡಮೇಲು ಮಾಡುವ ಪ್ರಜ್ಞೆ ಇರುವುದು ಶ್ರಮಿಕ ವರ್ಗಕ್ಕೆ. ಹಾಗಾಗಿಯೇ ಮಾರ್ಕ್ಸ್ ಪ್ರಕಾರ ಶರ್ಮಿಕ ವರ್ಗ ಸಮಾಜದ ಅತ್ಯಂತ ಕ್ರಾಂತಿಕಾರಿ ವರ್ಗ. ಆದರೆ ಇಲ್ಲೊಂದು ಪ್ರಶ್ನೆ ಏಳುತ್ತದೆ. ಮಾರ್ಕ್ಸ್‌ವಾದೀ ಸಿದ್ಧಾಂತದ ಬೆಳವಣಿಗೆಯಲ್ಲಿ ಇದೊಂದು ಬಹಳ ಸಂದಿಗ್ಧದ ಮತ್ತು ಮಹತ್ವದ ಪ್ರಶ್ನೆ.

ಸಮಾಜದ ಎಲ್ಲಾ ಶೋಷಿತ ವರ್ಗಗಳಿಗೂ ಈ ಕ್ರಾಂತಿಕಾರಿ ಪ್ರಜ್ಞೆ ಇರುತ್ತದೋ ಇಲ್ಲಾ ಕೇವಲ ಕೈಗಾರಿಕಾ ಸಮಾಜದ ಕಾರ್ಮಿಕ ವರ್ಗಕ್ಕೆ ಮಾತ್ರ ಇಂತಹ ಪ್ರಜ್ಞೆ ಇರುತ್ತದೋ? ಮಾರ್ಕ್ಸ್‌ನಿಗೆ ಮತ್ತು ಆನಂತರದ ಹಲವಾರು‌ ಮಾರ್ಕ್ಸ್‌ವಾದಿಗಳಿಗೆ ಇದು ಕೈಗಾರಿಕಾ ಸಮಾಜದಲ್ಲಿರುವ ಕಾರ್ಮಿಕ ವರ್ಗಕ್ಕೆ ಮಾತ್ರ ಇರುವಂಥ ಪ್ರಜ್ಞೆ ಎಂದು ಕಂಡಿತ್ತು. ಅದಕ್ಕೆ ಕಾರಣ ಒಂದು ಸಮಾಜದ ಉತ್ಪಾದನಾ ಸಲಕರಣೆಗಳು ತಮ್ಮ ಸಂಪೂರ್ಣ ಬೆಳವಣಿಗೆ ಕಾಣುವುದು ಒಂದು ಬಂಡವಾಳಶಾಹಿ ಸಮಾಜದಲ್ಲಿ ಮಾತ್ರ. ಮಿಕ್ಕ ಸಮಾಜಗಳಲ್ಲಿ ಹಲವಾರು ಸಂಪನ್ಮೂಲಗಳು ತಮ್ಮ ಉತ್ಪಾದಕತೆಯ ಅತ್ಯುಚ್ಚ ಮಟ್ಟವನ್ನು ತಲುಪಿರುವುದಿಲ್ಲ. ಉದಾಹರಣೆಗೆ, ಊಳಿಗಮಾನ್ಯ ಪದ್ಧತಿಯಲ್ಲಿ ಕೃಷಿ ಜಮೀನಿನ ಸಂಪೂರ್ಣ ಬಳಕೆ ಆಗಿರುವುದಿಲ್ಲ. ಅದಕ್ಕೆ ಬೇಕಾದ ತಂತ್ರಜ್ಞಾನ, ಮಾರುಕಟ್ಟೆಗಳು, ಇತ್ಯಾದಿ ಬೆಳೆದಿರುವುದಿಲ್ಲ. ಕೃಷಿ ಜಮೀನು ಅತ್ಯಂತ ಮಟ್ಟದ ಉತ್ಪಾದಕತೆಯನ್ನು ಮುಟ್ಟುವುದು ಭಾರೀ ಗಾತ್ರದ ಕೈಗಾರಿಕಾ ಮಟ್ಟದ ಯಾಂತ್ರಿಕ ಕೃಷಿ ಆರಂಭವಾದಾಗಲೇ. ಅಂದರೆ, ಒಟ್ಟಾಗಿ ಹೇಳಬೇಕೆಂದರೆ, ಒಂದು ಸಮಾಜದ ಎಲ್ಲಾ ಸಂಪನ್ಮೂಲಗಳು ತಮ್ಮ ಅತ್ಯುತ್ತಮ ಉತ್ಪಾದಕತೆಯ ಮಟ್ಟವನ್ನು ಮುಟ್ಟುವುದು ಆಧುನಿಕ ಬಂಡವಾಳಶಾಹಿ (advanced capitalist) ವ್ಯವಸ್ಥೆಯ ಅಡಿಯಲ್ಲೇ. ಹಾಗಾಗಿ ಈ ಹಂತದಲ್ಲಷ್ಟೇ ಉತ್ಪಾದನೆಯ ಸಲಕರಣೆಗಳನ್ನು ಬಂಡವಾಳಶಾಹಿಯಿಂದ ಬಿಡುಗಡೆಗೊಳಿಸುವುದು ಸಾಧ್ಯ. ಬಂಡವಾಳಶಾಹಿ ವ್ಯವಸ್ಥೆ ಬರುವುದಕ್ಕಿಂತ ಮೊದಲೇ ಊಳಿಗಮಾನ್ಯ ಸಮಾಜಗಳಲ್ಲಿ ಆದ ರೈತಾಪಿ ವರ್ಗದ ಕ್ರಾಂತಿಗಳೆಲ್ಲಾ ಸೋತಿರುವುದು ಈ ಕಾರಣಕ್ಕೆ; ನಿಜವಾದ ಸಾಮಾಜಿಕ ಕ್ರಾಂತಿಗೆ ಅದಿನ್ನೂ ಕಾಲ ಪರಿಪಕ್ವವಾಗದೆ ಇದ್ದುದಕ್ಕೆ. ಮತ್ತೂ ಮುಖ್ಯವೆಂದರೆ, ಯುರೋಪಿನಲ್ಲಿ ಸಫಲವಾದ ಎರಡೂ ಕ್ರಾಂತಿಗಳು (೧೭ನೇ ಶತಮಾನದ ಇಂಗ್ಲಿಶ್ ಸಿವಿಲ್ ವಾರ್ ಮತ್ತು ೧೮ನೇ ಶತಮಾನದ ಫ್ರೆಂಚ್ ಕ್ರಾಂತಿ) ಹಾಗೂ ೧೮ನೇ ಶತಮಾನದ ಅಮೆರಿಕಾದ ಸ್ವಾತಂತ್ರ್ಯದ ಕ್ರಾಂತಿ ಇವು ಯಾವುದೂ ನಿಜವಾದ ಅರ್ಥದಲ್ಲಿ ಸಾಮಾಜಿಕ ಕ್ರಾಂತಿಗಳಲ್ಲ. ಅಂದರೆ, ಪ್ರೋಲೆಟೆರಿಯಟ್ ವರ್ಗಕ್ಕೆ ಅಧಿಕಾರ ನೀಡಿ ಉತ್ಪಾದನೆಯ ಸಲಕರಣೆಗಳ ಒಡೆತನವನ್ನು ಸಾರ್ವತ್ರಿಕಗೊಳಿಸುವುದು ಇವುಗಳ ಉದ್ದೇಶವಾಗಿರಲಿಲ್ಲ. ಈ ಮೂರೂ ನಿಜವಾಗಿ ಬೂರ್ಜ್ವಾ ಕ್ರಾಂತಿಗಳು. ಅಂದರೆ, ಉತ್ಪಾದನೆಯ ಸಲಕರಣೆಗಳ ಒಡೆತನವನ್ನು ರೋಗಗ್ರಸ್ಥವಾದ ಊಳಿಗಮಾನ್ಯ ದೊರೆಗಳ ವ್ಯವಸ್ಥೆಯಿಂದ ಕಸಿದುಕೊಂಡು ತನ್ನ ವಶಕ್ಕೆ ಪಡೆದುಕೊಳ್ಳಲು ಪ್ರಯತ್ನಿಸಿದ ಬೂರ್ಜ್ವಾ ವರ್ಗದ ಕ್ರಾಂತಿಗಳು. ಇವುಗಳ ಆದರ್ಶ ಇದ್ದದ್ದು ಖಾಸಗೀ ಆಸ್ತಿ ಮತ್ತು ಸಿವಿಲ್ (ನಾಗರಿಕ) ಹಕ್ಕುಗಳು ಮತ್ತು ಅಧಿಕಾರಗಳನ್ನು ರಕ್ಷಿಸಿ ಇವುಗಳನ್ನು ರಾಜತ್ವದ ನಿಯಂತ್ರಣದಿಂದ ತಪ್ಪಿಸುವುದಾಗಿತ್ತು. ಹಾಗಾಗಿಯೇ, ಈ ಮೂರೂ ಕ್ರಾಂತಿಗಳು ಹುಟ್ಟುಹಾಕಿದ ಸಂಸ್ಥೆಗಳು, ಅಂದರೆ, ಫ್ರಾನ್ಸ್‌ನ ರಿಪಬ್ಲಿಕನ್ ವ್ಯವಸ್ಥೆ, ಇಂಗ್ಲೆಂಡಿನ ಸಾಂವಿಧಾನಿಕ ರಾಜತ್ವ (constitutional monarchy) ಮತ್ತು ಅಮೇರಿಕಾದ ಪ್ರಜಾತಂತ್ರ ವ್ಯವಸ್ಥೆ ಇವೆಲ್ಲವೂ ಮಾರ್ಕ್ಸ್ ಪ್ರಕಾರ ಬೂರ್ಜ್ವಾ ವರ್ಗದ ಅಧಿಕಾರವನ್ನು ಸಂರಕ್ಷಿಸುವಂಥ ಸಂಸ್ಥೆಗಳು.

ಇದೇ ತರ್ಕದ ಆಧಾರದ ಮೇಲೆಯೇ ಮಾರ್ಕ್ಸ್ ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿ ವ್ಯವಸ್ಥೆಯನ್ನೂ ವ್ಯಾಖ್ಯಾನಿಸಿದ್ದು. 1853ಯಲ್ಲಿ ನ್ಯೂಯಾರ್ಕ್ ಹೆರಾಲ್ಡ್ ಟ್ರಿಬ್ಯೂನ್ ಪತ್ರಿಕೆಗೆ ಬರೆದ ಲೇಖನ "The British Rule in India"ದಲ್ಲಿ ಮಾರ್ಕ್ಸ್ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ಶೋಷಕವಾಗಿತ್ತು ಮತ್ತು ಕೆಲವೆಡೆಯಂತೂ ಅಮಾನುಷವಾಗಿತ್ತು ಎನ್ನುವುದು ನಿಜವಾದರೂ, ಮತ್ತೊಂದು ದೃಷ್ಟಿಯಿಂದ ಇಂತಹ ಆಳ್ವಿಕೆ ಅನಿವಾರ್ಯವಾಗಿತ್ತು ಎಂದು ವಾದಿಸುತ್ತಾನೆ. ಏಕೆಂದರೆ, ಶತಶತಮಾನಗಳಿಂದ ಇಲ್ಲಿ ಬೇರುಬಿಟ್ಟಿದ್ದ ಪೌರ್ವಾತ್ಯ ನಿರಂಕುಶಾಧಿಕಾರ (oriental despotism) ಅಥವಾ ಮಾರ್ಕ್ಸ್ ಹೇಳುವಂಥ ಏಶಿಯಾಟಿಕ್ ಉತ್ಪಾದನಾ ವ್ಯವಸ್ಥೆ (Asiatic Mode of Production) ಮತ್ತು ಅದರೊಂದಿಗೆ ಬಂದಿದ್ದ ಗಾವಿಲ ಮೌಢಢ‍ಯ (village idiocy) ಇವುಗಳ ಬೆನ್ನೆಲುಬು ಮುರಿಯಲು ಬ್ರಿಟಿಷ್ ಸಾಮ್ರಾಜ್ಯಶಾಹಿ ಇಲ್ಲದೆ ಸಾಧ್ಯವೇ ಆಗುತ್ತಿರಲಿಲ್ಲ. ಏಶಿಯಾ ಖಂಡದ ಶೋಷಿತರು ನಿಜವಾದ ಅರ್ಥದಲ್ಲಿ ಸಾಮಾಜಿಕ ಕ್ರಾಂತಿಯನ್ನು, ಆ ಮೂಲಕ ತಮ್ಮ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬೇಕೆಂದರೆ ಅನಿವಾರ್ಯವಾಗಿ ಮೊದಲು ಅವರ ಅಜ್ಞಾನದ ಪ್ರತೀಕವಾದ ಏಶಿಯಾಟಿಕ್ ಗ್ರಾಮ-ಕೇಂದ್ರಿತ ಆರ್ಥಿಕ ವ್ಯವಸ್ಥೆಗಳು ಮುರಿದುಬೀಳಬೇಕು. ಅದಕ್ಕೆ ಭಾರತಲ್ಲಿ ಬ್ರಿಟಿಷ್ ವಸಾಹತುಶಾಹಿ ಇರಲೇಬೇಕು. ಈ ವಿಚಾರವೇ ಇಂದಿನ ಮಾರ್ಕ್ಸ್‌ವಾದಿಗಳಿಗೆ ಅತೀವ ಮುಜುಗರವನ್ನೂ, ಮಾರ್ಕ್ಸ್‌ವಾದದ ವಿರೋಧಿಗಳಿಗೆ ತಮ್ಮ ಬತ್ತಳಿಕೆಯಲ್ಲಿನ ಅತ್ಯುತ್ತಮ ಟೀಕಾಸ್ತ್ರವನ್ನೂ ಒದಗಿಸಿರುವುದು. ಇಪ್ಪತ್ತನೆ ಶತಮಾನದ, ಅದರಲ್ಲೂ ವಿಶೇಷವಾಗಿ ಲ್ಯಾಟಿನ್ ಅಮೇರಿಕಾ ಮತ್ತು ಆಫ್ರಿಕಾ ಖಂಡಗಳ, ನಿರ್ವಸಾಹತೀಕರಣ ಪ್ರಕ್ರಿಯೆಯಲ್ಲಿ ಮಾರ್ಕ್ಸ್‌ವಾದದ ಕೊಡುಗೆ ಅಮೂಲ್ಯವಾದುದು, ಅಷ್ಟೇ ಏಕೆ, ಸೋವಿಯೆಟ್ ರಷ್ಯಾ ಕೂಡ, ತನ್ನ ಇತರ ದೋಷಗಳೇನೇ ಇದ್ದರೂ, ಮಧ್ಯ ಏಷಿಯಾದ ಮತ್ತು ಪೂರ್ವ ಯೂರೋಪಿನ ನಿರ್ವಸಾಹತೀಕರಣಕ್ಕೆ ನೀಡಿದ ಕೊಡುಗೆ ಮುಖ್ಯವಾದದ್ದು ಎಂದು ಒಂದು ಕಡೆಯವರು ವಾದಿಸಿದರೆ, ನಿಜವಾಗಿಯೂ ಮಾರ್ಕ್ಸ್ ಕ್ರಾಂತಿಯ ಮುಖವಾಡವನ್ನು ಹಾಕಿಕೊಂಡಿರುವ ಐರೋಪ್ಯ ಸಾಮ್ರಾಜ್ಯಶಾಹಿ ಎನ್ನುವುದು ಮತ್ತೊಂದು ಕಡೆಯ ಪ್ರತಿವಾದ. ಇದು ಏನೇ ಆಗಲೀ ಮಾರ್ಕ್ಸ್‌ನ ತಾತ್ವಿಕ ಚೌಕಟ್ಟಿನೊಳಗೆ ವಸಾಹತುಶಾಹಿಯು ಶೋಷಕವಾದರೂ ಏಕೆ ಅನಿವಾರ್ಯ ಎನ್ನುವ ತರ್ಕದ ಶಕ್ತಿಯನ್ನು ನಾವು ಗಮನಿಸಬೇಕು. ಈ ತರ್ಕದ ಮೂಲ ಆಶಯವನ್ನೇ ಬೆಳೆಸಿ ರಷ್ಯಾದ ವ್ಲಾಡಿಮಿರ್ ಲೆನಿನ್ ತನ್ನ ಅತ್ಯಂತ ಮುಖ್ಯ ಪುಸ್ತಕಗಳಲ್ಲಿ ಒಂದಾದ Imperialism: The Highest Stage of Capitalism (1917) ಬರೆದಿದ್ದು. ಇದರಲ್ಲಿ ಅವನು ಮೊದಲ ಜಾಗತಿಕ ಯುದ್ಧದ ಕಾಲಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಹಣಕಾಸು ಮಾರುಕಟ್ಟೆ ಮತ್ತು ಅದಕ್ಕೆ ಸಾಮ್ರಾಜ್ಯಶಾಹಿ ವಸಾಹತೀಕರಣದ ಜೊತೆಗೆ ಇದ್ದ ನಂಟನ್ನು ಕುರಿತು ಚರ್ಚಿಸುತ್ತಾನೆ.

ಅತ್ಯಾಧುನಿಕ ಬಂಡವಾಳಶಾಹಿ ವ್ಯವಸ್ಥೆಯ ಪ್ರೋಲೆಟೆರಿಯೆಟ್ ವರ್ಗಕ್ಕೆ ಮಾತ್ರ ನಿಜವಾದ ಕ್ರಾಂತಿಕಾರಿ ಪ್ರಜ್ಞೆ ಇರಲು ಸಾಧ್ಯ ಎನ್ನುವ ವಾದ ಸರಿಯಿದ್ದರೆ, ಮಾರ್ಕ್ಸ್‌ನ ಕಾಲಕ್ಕೆ ಕ್ರಾಂತಿಯ ಹೊಸ್ತಿಲಲ್ಲಿ ನಿಂತಿದ್ದ ಸಮಾಜಗಳು ಎಂದರೆ ಬ್ರಿಟನ್ ಮತ್ತು ಜರ್ಮನಿ. ಏಕೆಂದರೆ ಇಲ್ಲಿ ಮಾತ್ರ ಬಂಡವಾಳಶಾಹಿ ತನ್ನ ಪರಿಪಕ್ವ ಸ್ಥಿತಿಯನ್ನು ಮುಟ್ಟಿದ್ದು. ಆದರೆ ಚಾರಿತ್ರಿಕ ವ್ಯಂಗ್ಯವೆಂಬಂತೆ ಮೊದಲ ಕಮ್ಯುನಿಸ್ಟ್ ಕ್ರಾಂತಿ ನಡೆದಿದ್ದು ಇನ್ನೂ ಊಳಿಗಮಾನ್ಯ ಪದ್ಧತಿಯಿಂದಲೇ ಬಿಡುಗಡೆ ಹೊಂದಿರದಿದ್ದ ರಷ್ಯಾದಲ್ಲಿ, ೧೯೧೭ರಲ್ಲಿ. ಇಪ್ಪತ್ತನೆ ಶತಮಾನದ ಮಾರ್ಕ್ಸ್‌ವಾದಿಗಳನ್ನು ಕಾಡಿದ್ದ ಸೈದ್ಧಾಂತಿಕ ಪ್ರಶ್ನೆಗಳಲ್ಲಿ ಇದೂ ಒಂದು. ಜೊತೆಗೆ, ಅಲ್ಲಿಯವರೆಗೂ ಕ್ರಾಂತಿಯ ಐತಿಹಾಸಿಕ ಸಾಧ್ಯತೆಯ ಬಗ್ಗೆ ಸಿದ್ಧಾಂತಗಳನ್ನು ಬೆಳೆಸಿದ್ದ ಮಾರ್ಕ್ಸ್‌ವಾದಿಗಳಿಗೆ ಇದ್ದಕ್ಕಿದ್ದಂತೆ ಆ ಸಿದ್ಧಾಂತಗಳ ಪ್ರಕಾರ ಒಂದು ನಿಜವಾದ ಕಮ್ಯುನಿಸ್ಟ್ ಸರಕಾರವನ್ನು ನಡೆಸುವುದು ಹೇಗೆ ಎನ್ನುವ ಪ್ರಶ್ನೆಯೂ ಎದುರಾಯಿತು. ಆ ಸಂದರ್ಭದಲ್ಲಿ, ರಷ್ಯನ್ ಕ್ರಾಂತಿಯ ಹರಿಕಾರನೆಂದೇ ಕರೆಯುವ ಲೆನಿನ್ ಬಳಸಿದ ಪರಿಕಲ್ಪನೆಯೇ 'ಮುಂಚೂಣಿ ಸೇನೆ' ಅಥವಾ vanguard. ಲೆನಿನ್ ಪ್ರಕಾರ ರಷ್ಯಾದಂಥ ಕ್ರಾಂತಿಕಾರಿ ಪ್ರಜ್ಞೆಗೆ ಇನ್ನೂ ಸಂಪೂರ್ಣವಾಗಿ ಸಿದ್ಧವಾಗಿರದಿದ್ದ ರೈತಾಪಿ ವರ್ಗದ ಸಮಾಜಗಳಲ್ಲಿ ಕಮ್ಯುನಿಸ್ಟ್ ಪಾರ್ಟಿಯೇ ಕ್ರಾಂತಿಯ ಮುಂದಾಳತ್ವ ವಹಿಸಬೇಕು ಮತ್ತು ಈ ಪಾರ್ಟಿಯೇ ರೈತಾಪಿ ವರ್ಗದ ಪರವಾಗಿ ಆಳ್ವಿಕೆ ನಡೆಸಬೇಕು. ಈ ಪದ ಬಂದಿದ್ದು ಆ ಕಾಲದ ಯುದ್ಧನೀತಿಯ ರೂಪಕದಿಂದ. ಅಲ್ಲಿ ಮುಂಚೂಣಿಯಲ್ಲಿ ಒಂದು ಪಡೆ ಇರುತ್ತಿತ್ತು. ಅದು ದಾಳಿಯ ಮೊದಲು ಶತ್ರು ಪಡೆಯ ಚಲನವಲನವನ್ನು ಗಮನಿಸಿ, ರಣನೀತಿಯನ್ನು ತಯಾರಿಸಿ, ಆ ಮೂಲಕ ಇತರ ಪಡೆಗಳಿಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿಯನ್ನು ಹೊತ್ತಿತ್ತು. ಇದೇ vanguard. ರಾಷ್ಯಾದಂಥ ದೇಶಗಳಲ್ಲಿ ಕಮ್ಯುನಿಸ್ಟ್ ಪಾರ್ಟಿಗಳಿಗೆ ಇಂತಹ ಜವಾಬ್ದಾರಿಯೂ ಇದೆಯೆಂಬುದು ಲೆನಿನ್ ಮಾಡಿದ ವಾದ. ಮಾರ್ಕ್ಸ್‌‌ವಾದೀ ಪರಿಭಾಷೆಗಳಲ್ಲೆಲ್ಲಾ ಅತ್ಯಂತ ಹೆಚ್ಚು ಟೀಕೆಗಳನ್ನು ಎದುರಿಸಿರುವ ಒಂದು ಪರಿಕಲ್ಪನೆ ಇದೆ ಎಂದಾದರೆ, ಅದು ಈ vanguardನ ಪರಿಕಲ್ಪನೆ. ಲೆನಿನ್ ಕಾಲಕ್ಕಾಗಲೇ ಮತ್ತು ಸ್ಟಾಲಿನ್ ಕಾಲಕ್ಕೆ ನಿಸ್ಸಂದೇಹವಾಗಿ ಕಮ್ಯುನಿಸ್ಟ್ ಪಾರ್ಟಿಯ vanguard ಸಿದ್ಧಾಂತ ಅಪಾರವಾದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ನಿರಂಕುಶಾಧಿಕಾರ ಮತ್ತು ಪೋಲಿಸ್ ವ್ಯವಸ್ಥೆಯ ದುರ್ಬಳಕೆ ಮುಂತಾದ ಆರೋಪಗಳಿಗೆ ಈಡಾಗಿತ್ತು. vanguard ಪರಿಕಲ್ಪನೆಯೇ ಇಂದು ಬಹಳ ಗೇಲಿಗೆ ಈಡಾಗಿರುವ "the party is always right" ಎನ್ನುವಂಥಾ ಅತಿಶಯೋಕ್ತಿಗಳಿಗೂ ಎಡೆಮಾಡಿಕೊಟ್ಟಿದ್ದು.







Comments

Popular posts from this blog

ಸ್ಟ್ರಕ್ಚರಲಿಸಂ (ರಚನಾವಾದ/ರಾಚನಿಕವಾದ)

ಸಮಾನತೆಯ ಕುರಿತು ಐದು ತಕರಾರುಗಳು