ವಿದ್ಯಾಸಂಸ್ಥೆಗಳು ಮತ್ತು ಶೈಕ್ಷಣಿಕ ಪರಿಸರ


ಈಗ ಕೆಲವು ವರ್ಷಗಳ ಹಿಂದೆ ಅಮೆರಿಕಾದ ಇಲ್ಲಿನೋಯ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಕರ್ನಾಟಕದ ವಿದ್ಯಾಸಂಸ್ಥೆಗಳ ಒಂದು ಅಧ್ಯಯನ ಮಾಡಲು ಬಂದಿದ್ದರು. ಅವರ ಅಧ್ಯಯನದ ಉದ್ದೇಶ ವಿದ್ಯಾಸಂಸ್ಥೆಗಳು ಎಷ್ಟು ಚೆನ್ನಾಗಿ ಅಥವಾ ಸಾಧಾರಣವಾಗಿ ಕೆಲಸ ಮಾಡುತ್ತಿವೆ ಎಂದು ನೋಡುವುದಲ್ಲ. ಬದಲಾಗಿ, ಈ ವಿದ್ಯಾಸಂಸ್ಥೆಗಳು ಒಟ್ಟಾರೆಯಾಗಿ ಯಾವ ರೀತಿಯ ಶೈಕ್ಷಣಿಕ ಪರಿಸರದಲ್ಲಿ ಕೆಲಸಮಾಡುತ್ತಿವೆ ಮತ್ತು ತಮ್ಮತಮ್ಮ ಶೈಕ್ಷಣಿಕ ಪರಿಸರದ ಕುರಿತು ಆ ಸಂಸ್ಥೆಗಳಿಗೆ ಎಷ್ಟು ತಿಳುವಳಿಕೆ ಇದೆ ಎಂದು ನೋಡುವುದು ಅವರ ಉದ್ದೇಶ. ಅಂದರೆ, ತಮ್ಮ ವಿದ್ಯಾಸಂಸ್ಥೆಗಳಿಗೆ ಬರುವ ವಿದ್ಯಾರ್ಥಿಗಳ ಅಗತ್ಯಗಳೇನು, ಅಂತಹ ಅಗತ್ಯಗಳನ್ನು ಪೂರೈಸುತ್ತಿರುವ ಮಿಕ್ಕ ಎಷ್ಟು ವಿದ್ಯಾಸಂಸ್ಥೆಗಳು ಆ ಪ್ರದೇಶದಲ್ಲಿವೆ, ಆ ವಿದ್ಯಾಸಂಸ್ಥೆಗಳ ಜೊತೆ ನಾವು ಪೈಪೋಟಿ ಮಾಡುತ್ತಿದ್ದರೆ, ಅವರಿಗಿಂತ ಭಿನ್ನವಾಗುವ ರೀತಿ ಹೇಗೆ, ಅಥವಾ, ಪೈಪೋಟಿ ಮಾಡದೇ ಇದ್ದರೆ, ಅವುಗಳ ಕೆಲಸಕ್ಕೂ ನಮ್ಮ ಸಂಸ್ಥೆಯ ಕೆಲಸಕ್ಕೂ ಧ್ಯೇಯೋದ್ದೇಶಗಳು ಪೂರಕವಾಗಿರುವಂತೆ ನೋಡಿಕೊಳ್ಳುವುದು ಹೇಗೆ, ನಮ್ಮ ವಿದ್ಯಾರ್ಥಿಗಳು ಯಾವ ರೀತಿಯ ಸಂಸ್ಥೆಗಳಿಂದ ನಮ್ಮಲ್ಲಿಗೆ ಬರುತ್ತಿದ್ದಾರೆ ಮತ್ತು ಯಾವ ರೀತಿಯ ಉದ್ಯೋಗದ ಅಥವಾ ಉನ್ನತ ವ್ಯಾಸಂಗದ ಸಂಸ್ಥೆಗಳಿಗೆ ನಮ್ಮಲ್ಲಿಂದ ಹೋಗುತ್ತಿದ್ದಾರೆ, ನಮ್ಮ ಪರಿಸರದ ಅಗತ್ಯಕ್ಕೆ ತಕ್ಕಂತೆ ಶಿಕ್ಷಣ ನೀಡುವುದಕ್ಕೆ ನಮಗೆ ಯಾವ ರೀತಿಯ ತಜ್ಞತೆ ಇರುವ ಶಿಕ್ಷಕರು ಬೇಕು, ನಮ್ಮ ಕ್ಷೇತ್ರದಲ್ಲಿ ನಮಗಿಂತ ಉತ್ತಮ ಸಂಸ್ಥೆಗಳು ಯಾವುದು, ಮತ್ತು ನಮಗೆ ಆದರ್ಶಪ್ರಾಯವಾದ ಸಂಸ್ಥೆಗಳು ಯಾವುದು, ಮತ್ತು ಆ ಎರಡೂ ಅಂದರೆ ಉತ್ತಮ ಸಂಸ್ಥೆಗಳು ಮತ್ತು ಆದರ್ಶಪ್ರಾಯವಾದ ಸಂಸ್ಥೆಗಳು ಎರಡೂ ಒಂದೇ ಸಂಸ್ಥೆಗಳೋ ಅಥವಾ ಬೇರೆಬೇರೆ ಸಂಸ್ಥೆಗಳೋ ಇವೇ ಮುಂತಾದ ಪ್ರಶ್ನೆಗಳ ಕುರಿತು ವಿದ್ಯಾಸಂಸ್ಥೆಗಳು ಏನು ಹೇಳುತ್ತಿವೆ ಎಂದು ತಿಳಿದುಕೊಳ್ಳುವುದು ಅವರ ಉದ್ದೇಶವಾಗಿತ್ತು. 

ಸಾಮಾನ್ಯವಾಗಿ ಇಂತಹ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುವುದು ಒಂದು ಸಂಸ್ಥೆಯ ವಿಶನ್ ಡಾಕ್ಯುಮೆಂಟ್ ಎಂದು ಕರೆಯಬಹುದಾದ ಯೋಜನಾ ನಕ್ಷೆಯಲ್ಲಿ. ಅದರಲ್ಲಿ, ಒಂದು ಸಂಸ್ಥೆಯ ವಿಶನ್, ಅಂದರೆ ತಾವು ಯಾವ ರೀತಿಯ ಸಂಸ್ಥೆ ಎನ್ನುವ ತಿಳುವಳಿಕೆ ಮತ್ತು, ಮಿಷನ್, ಎಂದರೆ ತಮ್ಮ ಉದ್ದೇಶಗಳೇನು ಎನ್ನುವ ತಿಳುವಳಿಕೆ ಈ ಎರಡೂ ಇರುತ್ತದೆ. ವಿಶನ್ ಏನೋ ಅದಕ್ಕೆ ತಕ್ಕಂತೆ ಮಿಶನ್ ಇರುತ್ತದೆ. ಮತ್ತು ಮಿಶನ್ ಏನೋ ಅದಕ್ಕೆ ತಕ್ಕಂತೆ ಕಾರ್ಯಯೋಜನೆಗಳಿರುತ್ತವೆ. ಕಾರ್ಯಯೋಜನೆಗಳೇನೋ ಅದಕ್ಕೆ ತಕ್ಕಂತೆ ಎಷ್ಟು ವರ್ಷದಲ್ಲಿ ಏನು ಸಾಧಿಸಬೇಕು ಎನ್ನುವ ಮೈಲಿಗಲ್ಲುಗಳಿರುತ್ತವೆ, ಮತ್ತು ಮೈಲಿಗಲ್ಲುಗಳ ಪ್ರಕಾರ ಅದನ್ನು ಸಾಧಿಸಲಾಗಿದೆಯೇ ಎಂದು ತಾಳೆ ಮಾಡಿನೋಡಲು ಮಾಪನಗಳಿರುತ್ತವೆ. ಆ ಮಾಪನಗಳ ಪ್ರಕಾರವೇ, ಒಂದು ಸ್ಥೂಲವಾದ ಹಣಕಾಸಿನ ಯೋಜನೆ ಇರುತ್ತದೆ ಮತ್ತು ಆ ಯೋಜನೆಯ ಪ್ರಕಾರ ಹಣದ ಮೂಲಗಳು ಯಾವುದು ಎನ್ನುವ ಸೂಚನೆಯೂ ಇರುತ್ತದೆ. ಮತ್ತು ಪ್ರತೀ ಹಂತದಲ್ಲೂ ಈ ಮೈಲಿಗಲ್ಲುಗಳನ್ನು ಮುಟ್ಟಲು ಇರುವ ತೊಡಕುಗಳೇನು, ಬಾಧಕಗಳೇನು ಮತ್ತು ನಮಗೆ ಅನುಕೂಲಕರವಾಗಿರುವ ಅಂಶಗಳೇನು ಎನ್ನುವ ಚಿತ್ರಣವೂ ಇರುತ್ತದೆ. ತೊಡಕುಗಳನ್ನು ಎದುರಿಸುವ ಬಗೆ ಮತ್ತು ಅನುಕೂಲಗಳನ್ನು ಬಳಸಿಕೊಳ್ಳುವ ಬಗೆ ಹೇಗೆ ಎನ್ನುವ ಉಪಾಯವೂ ಈ ಮೈಲಿಗಲ್ಲುಗಳ ಚಿತ್ರಣದ ಜೊತೆಜೊತೆಗೇ ಇರುತ್ತದೆ. ಇಡೀ ಯೋಜನಾ ನಕ್ಷೆ ಹೀಗೆ ಒಂದು ಆಂತರಿಕವಾದ ತರ್ಕದ ಮೇಲೆ ನಿಂತಿರುತ್ತದೆ. ಪ್ರತೀ ಕೆಳಗಿನ ಹಂತವೂ, ಪ್ರತೀ ಮೇಲಿನ ಹಂತದಿಂದಲೇ ಬಂದಿರುತ್ತದೆ ಮತ್ತು ತನ್ನ ಕೆಳಗಿನ ಹಂತಕ್ಕೆ ದಾರಿಮಾಡಿಕೊಡುತ್ತದೆ. ಅಲ್ಲದೇ, ಇದರಲ್ಲಿ ಯಾವ ಹಂತದಲ್ಲಿ ತೊಡಕುಗಳಾದರೂ, ಅದರ ಮೇಲಿನ ಮತ್ತು ಕೆಳಗಿನ ಹಂತಗಳನ್ನು ತಿದ್ದುವ ಅವಕಾಶವಿರುತ್ತದೆ. 

ಇದನ್ನೇ ಒಂದು ಉದಾಹರಣೆಯನ್ನು ತೆಗೆದುಕೊಂಡು ವಿವರಿಸುವುದಾದರೆ, ಈಗ ನಾವು ಯಾವುದೋ ಹಳ್ಳಿಗಾಡಿನಲ್ಲಿ ಒಂದು ವಿಶಿಷ್ಟವಾದ ಉನ್ನತ ವಿದ್ಯಾಭ್ಯಾಸದ ವಿದ್ಯಾಸಂಸ್ಥೆಯನ್ನು ಕಟ್ಟಬೇಕು ಎಂದುಕೊಳ್ಳಿ. ನಮ್ಮ ಉದ್ದೇಶ ಹಳ್ಳಿಗಾಡಿನ ಯುವಕರಿಗೆ ಸಂದರ್ಭೋಚಿತವಾದ, ಉಪಯುಕ್ತವಾದ ಜ್ಞಾನವನ್ನು ಕೊಡುವುದು. ಅಂದಮೇಲೆ, ಇದು ನಮ್ಮ ವಿಶನ್. ಇದರ ಮಿಶನ್ ಹೇಗಿರಬೇಕು ಎಂದರೆ, ಒಂದು ಆಧುನಿಕವಾದ ಕೃಷಿವಿಜ್ಞಾನ ಮತ್ತು ಸಾಮಾನ್ಯಶಿಕ್ಷಣದ ಮಾದರಿ ಸಂಸ್ಥೆಯಾಗಿ ನಾವು ಇನ್ನು ಐದು ವರ್ಷದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವುದು. ಅದಕ್ಕೆ ತಕ್ಕಂತೆ ನಾವು ಒಂದು ಘೋಷವಾಕ್ಯವನ್ನೂ ರೂಪಿಸಿಕೊಳ್ಳುತ್ತೇವೆ ಎಂದಿಟ್ಟುಕೊಳ್ಳಿ. ಆದರೆ ಆ ಘೋಷವಾಕ್ಯ ಕೃಷಿಗೆ ಸಂಬಂಧಿಸಿರಬೇಕು ಎನ್ನುವ ಕಾರಣಕ್ಕೆ “ಉಳುವಾ ಯೋಗಿಯ ನೋಡಲ್ಲಿ” ಎಂದಿದ್ದರೆ, ಪ್ರಯೋಜನವಿಲ್ಲ. ಸಾಲೇನೋ ಚೆನ್ನಾಗಿದೆ, ಆದರೆ ನಮಗೆ ಬೇಕಿರುವುದು ನಮ್ಮ ಸಂಸ್ಥೆಯ ಸದಸ್ಯರು ದಿನವೂ ಪಾಲಿಸಬೇಕಿರುವ ಒಂದು ಆದರ್ಶವನ್ನು ಹೇಳುವ ಘೋಷವಾಕ್ಯ. ಭಾರತೀಯ ಸೇನೆಯ ಒಂದು ತುಕಡಿಯನ್ನು ಐಎಸ್‍ಓ ಸೇವಾ ಗುಣಮಟ್ಟದ ಪರೀಕ್ಷೆಗೆ ಒಳಪಡಿಸಿ ಒಂದು ಪ್ರಮಾಣಪತ್ರ ನೀಡಬೇಕಿತ್ತು. ಅದರ ಭಾಗವಾಗಿ ಆ ತುಕಡಿ ತನ್ನದೇ ಒಂದು ಘೋಷವಾಕ್ಯವನ್ನೂ ರೂಪಿಸಿಕೊಳ್ಳಬೇಕಿತ್ತು. “ವಿ ಆರ್ ದ ರಿಯಲ್ ಮೆನ್” “ನಾವೇ ನಿಜವಾದ ಗಂಡಸರು” ಎಂದು ಅವರು ಮಾಡಿಕೊಂಡಿದ್ದರು. ಅದನ್ನು ದಿಲ್ಲಿಯ ಅವರ ಕೇಂದ್ರಸ್ಥಾನದಲ್ಲಿ ಪ್ರಮುಖವಾಗಿ ಕಾಣುವಂತೆ ಜಾಹೀರು ಮಾಡಿದ್ದರು ಬೇರೆ. ಕೊನೆಗೆ ಕೆಲವರು ಲೇವಡಿ ಮಾಡಿದ ಮೇಲೆ ತೆಗೆದರು ಎನ್ನಿ. ಆದರೂ, ಇಂತಹ ಆಭಾಸಗಳಿಗೇನೂ ಕಡಿಮೆ ಇಲ್ಲ. 

ಈಗ ನಮ್ಮ ಮಿಶನ್‍ನ ಪ್ರಕಾರ ನಾವು ಪರಮಾಣು ವಿಜ್ಞಾನದಲ್ಲಿ ಎಂಎಸ್ಸಿ ಪದವಿ ಕೊಟ್ಟು ಹಳ್ಳಿಯ ಹೈದರನ್ನು ಅಮೆರಿಕದ ವಿಜ್ಞಾನಿಗಳಾಗಿ ರೂಪಿಸಿತ್ತೇವೆ ಎಂದು ಹೊರಡುವುದು ಮೂರ್ಖತನ. ಅಷ್ಟೇ ಅಲ್ಲ. ನಮ್ಮ ಮಿಶನ್‍ಗೆ ವಿರುದ್ಧವಾದ ನಡೆವಳಿಕೆ. ನಮ್ಮ ಕಾರ್ಯಯೋಜನೆಗಳೂ ನಮ್ಮ ಮಿಶನ್‍ನ ಪ್ರಕಾರವಾಗಿಯೇ ಇರಬೇಕು. ಹಾಗಾಗಿ, ನಾವು ಕೃಷಿ ವಿಜ್ಞಾನ, ಗ್ರಾಮೀಣ ಅರ್ಥಶಾಸ್ತ್ರ ಮತ್ತು ಜನಪದ ವೈದ್ಯ ಇಂತಹ ವಿಚಾರಗಳಲ್ಲಿ ಪದವಿಗಳನ್ನು ಕೊಡಬೇಕು. ಅಂತೆಯೇ, ಸಾಮಾನ್ಯಶಿಕ್ಷಣದಲ್ಲಿ ಈ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಹೇಳಿಕೊಡುತ್ತೇವೆ ಎಂದು ಶೇಕ್ಸ್‍ಪಿಯರನನ್ನೋ, ಅಥವಾ ಸಲ್ಮಾನ್ ರಶ್ದೀಯನ್ನೋ ಪಾಠ ಮಾಡುವ ದುಸ್ಸಾಹಸ ಅನಗತ್ಯ. ನಮ್ಮ ಧ್ಯೇಯವಾಕ್ಯದ ಪ್ರಕಾರ, ನಮ್ಮ ಹಳ್ಳಿಗಾಡಿನ ಯುವಕರಿಗೆ ಬೇಕಿರುವುದು ಇಂಗ್ಲಿಷಿನಲ್ಲಿರುವ ಮಾಹಿತಿಯನ್ನು ಸ್ವಂತವಾಗಿ ಓದುವ ಸಾಮಥ್ರ್ಯವೇ ಹೊರತೂ ಯಾವುದೋ ಶ್ರೇಷ್ಠ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷನ್ನು ಹೀಗೆ ಹೇಳಿಕೊಡುತ್ತಾರೆ. ಆದ್ದರಿಂದ ನಾವೂ ಹೀಗೇ ಹೇಳಿಕೊಡುತ್ತೇವೆ ಎನ್ನುವ ಮಾದರಿಯ ಶಿಕ್ಷಣವಲ್ಲ. ಅಂತೆಯೇ, ನಮ್ಮ ಸುತ್ತಲಿನ ಪರಿಸರದಲ್ಲಿ ಹಲವಾರು ಶಾಲೆಗಳಿವೆ. ಆದರೆ ಅವು ಯಾವುದೂ ಕೃಷಿಗೆ ಸಂಬಂಧಿಸಿದ ಯಾವ ಜ್ಞಾನವನ್ನೂ ಹೇಳಿಕೊಡುವುದಿಲ್ಲ. ಮತ್ತು ಅವರು ಕಲಿಸುವ ವಿಜ್ಞಾನಕ್ಕೂ ಮತ್ತು ನಮಗೆ ಹಳ್ಳಿಯಲ್ಲಿ ಬೇಕಿರುವ ವಿಜ್ಞಾನಕ್ಕೂ ಯಾವ ಸಂಬಂಧವೂ ಇಲ್ಲ. ಹಾಗಾಗಿ, ನಾವು ಅನ್ವಯಿಕ ವಿಜ್ಞಾನದ ಕೋರ್ಸುಗಳನ್ನು ನಡೆಸುತ್ತೇವೆಯೇ ಹೊರತೂ, ಭೌತಶಾಸ್ತ್ರ, ರಸಾಯನಶಾಸ್ತ್ರ ಎನ್ನುವ ರೀತಿಯ ಶಾಸ್ತ್ರೀಯ ವಿಜ್ಞಾನಗಳನ್ನಲ್ಲ. ಅಷ್ಟೇ ಅಲ್ಲದೇ, ನಮ್ಮ ಉದ್ದೇಶ ಕೃಷಿ ವಿಜ್ಞಾನಿಗಳನ್ನು ತಯಾರು ಮಾಡುವುದಲ್ಲ. ಅದಕ್ಕೆ ಬೇರೆ ಶಿಕ್ಷಣ ಸಂಸ್ಥೆಗಳಿವೆ. ಮತ್ತು ಅದನ್ನು ಮಾಡುವುದಕ್ಕೆ ಬೇರೆ ರೀತಿಯ ಮೂಲಭೂತ ವಿಜ್ಞಾನದ ಅಗತ್ಯವಿದೆ. ನಾವು ನೀಡುವುದು ಕೇವಲ ಅನ್ವಯಿಕವಾದ ಅಂದರೆ, ಇರುವ ವಿಜ್ಞಾನವನ್ನೇ ಬಳಸಿ, ಕಡಿಮೆ ಖರ್ಚಿನ ಮತ್ತು ಸಂದರ್ಭೋಚಿತವಾದ ಕೃಷಿ ತಂತ್ರಗಳ ಕುರಿತ ಶಿಕ್ಷಣವನ್ನು. ಹೀಗೇ ಇದನ್ನು ಬೆಳೆಸುತ್ತಾ ಹೋದರೆ, ಮೇಲೆ ಹೇಳಿದ ರೀತಿಯ ಒಂದು ವಿಶನ್ ಡಾಕ್ಯುಮೆಂಡ್ ಸಿದ್ಧವಾದೀತು. ಆಗ ನಮ್ಮ ಎಲ್ಲಾ ಕೆಲಸಗಳೂ ಆ ಯೋಜನಾ ನಕ್ಷೆಯ ಅನುಸಾರವಾಗಿಯೇ ಇರುತ್ತದೆ. 

ಈಗ ವಾಪಸ್ಸು ನಮ್ಮ ಇಲ್ಲಿನೋಯ್ ವಿವಿಯ ಪ್ರಾಧ್ಯಾಪಕರ ಕತೆ. ಅವರು ನಮ್ಮ ವಿದ್ಯಾಸಂಸ್ಥೆಗಳ ಇಂತಹ ಯೋಜನಾನಕ್ಷೆಗಳ ಮತ್ತು ಧ್ಯೇಯೋದ್ದೇಶಗಳ ವಿವರಗಳನ್ನು ಇಟ್ಟುಕೊಂಡು ಅಧ್ಯಯನ ಮಾಡುತ್ತೇನೆ ಎಂದಾಗ, ನಾವೆಲ್ಲಾ ಅವರನ್ನು ಅವರ ಬೆನ್ನಹಿಂದೆ ಲೇವಡಿ ಮಾಡಿದೆವು. ನಮ್ಮ ದೇಶದ ಸಂಸ್ಥೆಗಳ ಯೋಜನಾ ನಕ್ಷೆಗಳ ಜಾತಕ ನಮಗೆ ಗೊತ್ತಿಲ್ಲವೇ? ನಿಮ್ಮ ಧ್ಯೇಯ ಏನು ಎಂದರೆ, “ಭಾರತದ ಶ್ರೇಷ್ಟ ವಿದ್ಯಾಸಂಸ್ಥೆಯಾಗುವುದು” ಎಂದು ಬರೆಯುತ್ತಾರೆ. ನಿಮ್ಮ ಮಿಶನ್ ಏನು ಎಂದರೆ, ಅದನ್ನೆ ತಿರುಗುಮುರುಗು ಮಾಡಿ, “ವಿದ್ಯಾರ್ಥಿಗಳಿಗೆ ಪ್ರಸ್ತುತವಾದ, ರಾಷ್ಟ್ರನಿರ್ಮಾಣಕ್ಕೆ ಪೂರಕವಾದ, ಪರಿಸರಕ್ಕೆ ಹಾನಿಕಾರಕವಲ್ಲದ ಹೊಸ ಪ್ರಾಯೋಗಿಕ ಜ್ಞಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡುವುದು” ಎನ್ನುತ್ತಾರೆ. ಇವೆಲ್ಲಾ ಎಂಥವರಿಗೂ ಸುಮ್ಮನೆ ಬೂಸಿಬಿಡುತ್ತಿರುವುದು ಎಂದು ಗೊತ್ತಾಗುತ್ತದೆ. ಆದರೂ ವಿಧಿಯಿಲ್ಲ. ಕೇಳಿದ ತಪ್ಪಿಗೆ ಹೇಳಿದ್ದೇವೆ ಎನ್ನುವ ಮನೋಸ್ಥಿತಿ. ಅಷ್ಟೇ ಅಲ್ಲ, ಇಂತಹ ಯೋಜನಾ ನಕ್ಷೆಗಳು ಸಾಮಾನ್ಯವಾಗಿ ತಯಾರಾಗುವುದು ಸಂಸ್ಥೆಯ ಆಡಳಿತಮಂಡಳಿ, ಶಿಕ್ಷನ ತಜ್ಞರು ಮತ್ತು ಶಿಕ್ಷಕರ ಸಮಾಲೋಚನೆಯ ಮೂಲಕ ಅಲ್ಲ. ಯಾರೋ ಒಂದಿಬ್ಬರು ತಕ್ಕ ಮಟ್ಟಿಗೆ ಇಂಗ್ಲಿಷು ಚೆನ್ನಾಗಿ ಬರುವ ಉಪಾಧ್ಯಾಯರನ್ನು ಕರೆಸಿ, ಅವರಿಗೆ, “ಒಂದೆರಡು ಹಾಳೆಯಷ್ಟು ಏನಾದರೂ ತುಂಬಿಸಿಕೊಡಿ, ಇಂಗ್ಲಿಷು ತುಂಬಾ ಸ್ಟ್ಯಾಂಡರ್ಡ್ ಆಗಿರಬೇಕು ಮತ್ತೆ” ಎಂದು ಹೇಳಿದರೆ ಮುಗಿಯಿತು. ನಿಮ್ಮ ಯೋಜನಾ ನಕ್ಷೆ ಸಿದ್ದ. ನಮ್ಮ ಇಲ್ಲಿನೋಯ್ ಪ್ರಾಧ್ಯಾಪಕರಿಗೆ, ಇಂತಹ ಎಡಬಿಡಂಗಿ ದಾಸ್ತಾವೇಜುಗಳನ್ನಿಟ್ಟುಕೊಂಡು ಅದ್ಯಾವ ಘನಾಂದಾರಿ ಸಂಶೋಧನೆ ಮಾಡುತ್ತೀರಿ ಎಂದು ನಮ್ಮ ಕುಹಕ. ಆದರೆ, ಇದು ಬಿಟ್ಟರೆ, ಇಂತಹ ಪ್ರಶ್ನೆಗಳಿಗೆ ಉತ್ತರ ಸಿಗುವಂಥ ಇನ್ನು ಯಾವ ದಾಖಲೆಗಳು ಸಿಗುತ್ತವೆ? ಅದೂ ಅಲ್ಲದೇ, ಇಂತಹ ದಾಖಲೆಗಳು ಈ ಸಂಸ್ಥೆಗಳು ಮಾಡುತ್ತಿರುವ ತಪ್ಪುಗಳು ಏನು ಎನ್ನುವುದನ್ನಾದರೂ ತೋರಿಸುತ್ತದಲ್ಲ ಎಂದು ಅವರ ವಾದ. 

ಕೊನೆಗೂ ಒಂದಷ್ಟು ಸಂಸ್ಥೆಗಳಿಂದ ಇಂತಹ ದಾಖಲೆಗಳು ಬಂದವು. ನಾವು ಅಂದುಕೊಂಡಂತೆ ಹೆಚ್ಚಿನವು ಗಾಳಿಯಲ್ಲಿ ಅರಮನೆ ಕಟ್ಟಿದಂತೆಯೇ ಇದ್ದವು. ಆ ನಕ್ಷೆಗಳಿಗೂ ಮತ್ತು ನಿಜವಾಗಿ ಅವುಗಳ ಶೈಕ್ಷಣಿಕ ಸಂದರ್ಭಕ್ಕೂ ಯಾವ ಸಂಬಂಧವೂ ಇರಲಿಲ್ಲ. ಅಷ್ಟೇ ಅಲ್ಲ, ಕೆಲವೊಮ್ಮೆ, ಒಳ್ಳೇ ಕೆಲಸ ಮಾಡುತ್ತಿದ್ದ ಸಂಸ್ಥೆಗಳೂ ಕೂಡ ತಾವು ಮಾಡುತ್ತಿರುವ ಕೆಲಸವನ್ನು ತಮ್ಮ ಶೈಕ್ಷಣಿಕ ಪರಿಸರದ ಸಂದರ್ಭದಲ್ಲಿ ಪರೀಕ್ಷಿಸಿ ನೋಡುತ್ತಿರಲಿಲ್ಲ. ಆದರೆ, ನಮ್ಮ ಇಲ್ಲಿನೋಯ್ ಮಿತ್ರರು ಹೇಳಿದಂತೆ, ಈ ಇಡೀ ಚಟುವಟಿಕೆಯಿಂದ ನಮಗಂತೂ ನಮ್ಮ ಶಿಕ್ಷಣದ ಸಂದರ್ಭದ ಬಗ್ಗೆ ಒಂದಷ್ಟು ವಿಚಾರ ತಿಳಿಯಿತು. 

ನಮ್ಮ ಯಾವ ವಿದ್ಯಾ ಸಂಸ್ಥೆಗಳಿಗೂ ತಮ್ಮ ಪರಿಸರಕ್ಕೆ ಪ್ರಸ್ತುತವಾದಂತೆ ತಾವು ಹೇಗೆ ಭಿನ್ನವಾಗಿರಬೇಕು ಎಂದು ತಿಳಿದಿರುವುದಿಲ್ಲ. ಸರಕಾರ ಬೆಂಗಳೂರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದರೂ ಒಂದೇ ಗುರಿ, ಎಲ್ಲೋ ಶಿಡ್ಲಘಟ್ಟದಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದರೂ ಅದೇ ಗುರಿ ಎನ್ನುವ ಮನಸ್ಥಿತಿಯೇ ಇರುತ್ತದೆ. ಅದಕ್ಕೆ ತಕ್ಕಂತೆ ಬೇರೆಬೇರೆ ಸಂದರ್ಭಕ್ಕೆ ಯಾವಯಾವ ರೀತಿಯ ತಜ್ಞತೆ ಇರಬೇಕು ಎನ್ನುವ ಪರಿಜ್ಞಾನವೂ ಇರುವುದಿಲ್ಲ. ಸುಮ್ಮನೆ ಯುಜಿಸಿ ಹೇಳುವ ಯಾವುದೋ ಒಮದು ಮಾಪಕದ ಪ್ರಕಾರ ಇಷ್ಟು ಅಂಕ ತೆಗೆದರೆ ಸಾಕು ಎನ್ನುವಂತ ರೀತಿಯಲ್ಲಿ ಒಚಿಡಿಪ್ಪತ್ತು ಜನರನ್ನು ಸಂದರ್ಶನ ಮಾಡಿ ಅದರಲ್ಲಿ ಒಂದೈದು ಜನಕ್ಕೆ ಕೆಲಸಕ್ಕೆ ಕೊಡುತ್ತಾರೆ. ಇದು ಲಂಚ ರುಷುವತ್ತಿನ ಮಾತಲ್ಲ. ಹಾಗೆಲ್ಲಾ ಲಂಚರುಷುವತ್ತು ಇಲ್ಲದಿದ್ದರೂ, ಒಂದು ನಿರ್ದಿಷ್ಟ ಯೋಜನೆಯ ಕೊರತೆಯಿಂದಾಗಿ ಇವರು ನೇಮಕ ಮಾಡಿಕೊಂಡ ಶಿಕ್ಷಕರ ಗುಣಮಟ್ಟವೇನೂ ಸುಧಾರಿಸುವುದಿಲ್ಲ. ಹಾಗೆಯೇ, ಯಾವ ರೀತಿಯ ಪದವಿಗಳನ್ನು, ಯಾವ ರೀತಿಯ ಕೋರ್ಸುಗಳನ್ನು ನಡೆಸಬೇಕು ಎನ್ನುವ ಕನಿಷ್ಟ ಬುದ್ಧಿವಂತಿಕೆಯನ್ನೂ ತೋರಿಸುವುದಿಲ್ಲ. ನಿಮ್ಮ ಊರಲ್ಲಿ ಲಿಂಗಾಯತರು ಹೆಚ್ಚಿಗೆ ಇದ್ದರೆ, ಬಸವ ಅಧ್ಯಯನ ಪೀಠ, ಒಕ್ಕಲಿಗರು ಹೆಚ್ಚಿದ್ದರೆ, ಕುವೆಂಪು ಅಧ್ಯಯನ ಪೀಠ, ಇನ್ನು ಬ್ರಾಹಣರು ಹೆಚ್ಚಿದ್ದರೆ ಸಂಸ್ಕೃತ ಅಧ್ಯಯನ ಪೀಠ, ಸರಕಾರದ ಅನುದಾನ ಬಂದಿದ್ದರೆ, ಅಂಬೇಡ್ಕರ್ ಅಧ್ಯಯನ ಪೀಠ, ಹೀಗೆ ಏನೋ ಒಂದು ವಿಕ್ಷಿಪ್ತ ರೀತಿಯ ಪ್ರಸ್ತುತತೆ ಇರುವಂತೆ ನಡೆಸುತ್ತಾರೆ. ಆದರೆ, ಇವೆಲ್ಲಾ ಯಾವ ರೀತಿಯಲ್ಲಿ ನಮ್ಮ ಧ್ಯೇಯೋದ್ದೇಶಗಳಿಗೆ ಪೂರಕವಾಗಿವೆ ಎನ್ನುವತ್ತ ಗಮನ ಹರಿಸುವುದಿಲ್ಲ. ಯಾವುದೋ ಊರಲ್ಲದ ಊರಿನಲ್ಲಿ ಇರುವ ವಿದ್ಯಾಸಂಸ್ಥೆಯಲ್ಲಿ ಭೌತಶಾಸ್ತ್ರದ ಯಾವುದೋ ಅತೀತಜ್ಞತೆಯ ಒಂದು ಪ್ರಯೋಗಶಾಲೆ ನಿರ್ಮಿಸುವುದು. ಬಂದವರಿಗೆ ತೋರಿಸುವುದಕ್ಕೆ ಅದು ಭರ್ಜರಿಯಾಗಿರುತ್ತದೆ. ಆದರೆ, ಅಷ್ಟೆಲ್ಲಾ ಖರ್ಚು ಮಾಡಿ ಅದರಲ್ಲಿ ಸಂಶೋಧನೆ ನಡೆಸುವ, ಅಗತ್ಯ ಅಥವಾ ಅನುಬವ ಯಾರಿಗೂ ಇರುವುದಿಲ್ಲ. ಸ್ವಲ್ಪ ವರ್ಷ ಕಳೆದ ಮೇಲೆ, ಒಂದು ಪ್ರಯೋಗಶಾಲೆ ಇದೆ ಎನ್ನುವ ಕಾರಣಕ್ಕೆ, ಸಣ್ಣ ಮಟ್ಟದ ಪ್ರಯೋಗಗಳನ್ನು ಇಂತಹ ದೊಡ್ಡ ಮಟ್ಟದ ಪ್ರಯೋಗಾಲಯಗಳಲ್ಲಿ ಮಾಡುತ್ತಾರೆ. ಹಾಗೆಯೇ, ತಾವು ಕಲಿಸುತ್ತಿರುವ ಕೌಶಲ್ಯಗಳನ್ನು ಕಲಿತುಕೊಳ್ಳುವ ಮುನ್ನ ವಿದ್ಯಾರ್ಥಿಗಳಿವೆ ಮತ್ತಿನ್ನಯಾವ ಕೌಶಲ್ಯಗಳು ತಿಳಿದಿರಬೇಕು ಎನ್ನುವ ಪರಿಜ್ಞಾನವೂ ಹೆಚ್ಚಿನಸಲ ಇರುವುದಿಲ್ಲ. ಉದಾಹರಣೆಗೆ, ಯಾವುದೋ ಪಾವಗಡದಂತಹ ಊರಿನಲ್ಲಿ ಇಂಗ್ಲಿಷ್ ಎಂಎ ಕೋರ್ಸು ಮಾಡಿಬಿಡುವುದು. ಆದರೆ, ಇಂಗ್ಲಿಷ್ ಎಂಎ ಮಾಡಬೇಕೆಂದರೆ, ಆ ಪ್ರದೇಶದಲ್ಲಿ ಸ್ಕೂಲು ಕಾಲೇಜುಗಳಲ್ಲಿ ತಕ್ಕಮಟ್ಟಿಗಿನ ಇಂಗ್ಲಿಷ್ ಹೇಳಿಕೊಡುವ ಸಂದರ್ಭ ಇರಬೇಕು. ತಕ್ಕಮಟ್ಟಿಗೆ ಸಾಹಿತ್ಯ ಮತ್ತು ಪಾಶ್ಚಾತ್ಯ ಇತಿಹಾಸ ತಿಳಿದಿರುವ ಅಧ್ಯಾಪಕರಿರಬೇಕು ಮತ್ತು ಅಲ್ಲಿನ ವಿದ್ಯಾರ್ಥಿಗಳಿಗೆ ಇದರಿಂದ ಕೆಲಸ ಸಿಗುವಂತಿರಬೇಕು ಅಥವಾ ಈ ವಿದ್ಯೆ ಅವರ ಜೀವನದಲ್ಲಿ ಪ್ರಮುಖವಾಗಿರಬೇಕು ಇಂತಹ ಯಾವ ಅಂಶವನ್ನೂ ಗಣನೆಗೆ ತೆಗೆದುಕೊಳ್ಳದೇ ಸುಮ್ಮನೇ ಪ್ರತಿಷ್ಠಗೆ ಎಂದು ಇಂತಹ ಪದವಿಗಳನ್ನು ಪ್ರಾರಂಭಿಸಿಬಿಡುವುದು. 

ಇವೆಲ್ಲಾ ಹಣಕಾಸಿನ ಸಮಸ್ಯೆ ಅಲ್ಲ. ಭಾರತದ ಅಭಿವೃದ್ಧಿಹೀನತೆಯ ಸಮಸ್ಯೆಯೂ ಅಲ್ಲ. ಲಂಚರುಷುವತ್ತಿನ ಸಮಸ್ಯೆಯೂ ಅಲ್ಲ. ಜಾತಿ ರಾಜಕಾರಣದ ಸಮಸ್ಯೆಯೂ ಅಲ್ಲ, ರಾಜಕೀಯ ಹಸ್ತಕ್ಷೇಪದ ಸಮಸ್ಯೆಯೂ ಅಲ್ಲ. ಇಂತಹ ನೆವಗಳನ್ನು ಹೇಳಿಕೊಂಡು ನಾವೆಲ್ಲಾ ನಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವ ಒಂದು ದೊಡ್ಡ ಉದ್ಯಮವನ್ನೇ ಈ ದೇಶದಲ್ಲಿ ನಡೆಸುತ್ತಿದ್ದೇವೆ. ಇದು ಸರಿಯಾದ ಚಿಂತನೆ ಇಲ್ಲದ ಸಮಸ್ಯೆ. ಇರುವ ಮಾಹಿತಿಯನ್ನು ಬಳಸಿಕೊಳ್ಳಲಾರದ ಸಮಸ್ಯೆ. ಕೇವಲ ಉಡಾಫೆಯ ದೇಶಾವರೀ ಮಾತುಗಾರಿಕೆಯೇ ಬಹಳ ದೊಡ್ಡ ಬೌದ್ಧಿಕತೆಯ ಲಕ್ಷಣ ಎಂದುಕೊಂಡಿರುವುದರ ಸಮಸ್ಯೆ. ಸ್ವಲ್ಪ ಶ್ರದ್ಧೆ, ಸ್ವಲ್ಪ ಜಾಣ್ಮೆ, ಸ್ವಲ್ಪ ಲೋಕಾನುಭವ ಮತ್ತು ಸ್ವಲ್ಪ ಹೆಚ್ಚಿನ ಓದು ಇಷ್ಟೇ ಸಾಕು, ಈ ಸಮಸ್ಯೆಯನ್ನು ಪರಿಹರಿಸಲು. ಆದರೆ ಅದು ಸಾಧ್ಯವೇ? ಗೊತ್ತಿಲ್ಲ. 
***


Comments

Popular posts from this blog

ಸ್ಟ್ರಕ್ಚರಲಿಸಂ (ರಚನಾವಾದ/ರಾಚನಿಕವಾದ)

ಮಾರ್ಕ್ಸ್‌‌‌ ವಾದ

ಸಮಾನತೆಯ ಕುರಿತು ಐದು ತಕರಾರುಗಳು