ಅಗ್ನಿ ಎಂಬ ರೂಪಕ


ಪ್ರಾಚೀನರಿಗೆ ಅಗ್ನಿ ನಮ್ಮ ಪ್ರಜ್ಞೆಯ ರೂಪಕ. ನಮ್ಮ ಪ್ರಜ್ಞೆ ಪ್ರಪಂಚವನ್ನು ಭಕ್ಷಿಸಿ ಬೆಳಗುತ್ತದೆ. ಅಗ್ನಿ ಇಂಧನವನ್ನು ಭಕ್ಷಿಸಿ ಬೆಳಗುವಂತೆ. ದಹಿಸುವ ಯಾವ ವಸ್ತುವಾದರೂ ಸರಿಯೆ ಅದು ಅಗ್ನಿಗೆ ಇಂಧನವಾಗಿ ಸಲ್ಲುತ್ತದೆ. ವಸ್ತುಗಳನ್ನು ಹಲವು ಹೆಸರುಗಳಿಂದ ಮತ್ತು ರೂಪಗಳಿಂದ ಗುರುತಿಸುತ್ತೇವೆ. ಇದು ಆಟಿಕೆ, ಇದು ಕುರ್ಚಿ ಎಂದು. ಆದರೆ, ಅಗ್ನಿಗೆ ವಸ್ತುಗಳ ಬಗ್ಗೆ ಯಾವ ತಾರತಮ್ಯವೂ ಇಲ್ಲ. ವಸ್ತುವಿನ ರೂಪ ಏನೇ ಇರಲಿ, ಅಗ್ನಿಗೆ ಅದು ಸಲ್ಲುವುದು ಇಂಧನವಾಗಿ ಮಾತ್ರ. ಹೇಗಿದ್ದರೂ, ಅಗ್ನಿಗೆ ಸಂದಮೇಲೆ ಆ ವಸ್ತುವಿನ ನಾಮರೂಪ ಭೇದಗಳೆಲ್ಲವೂ ಅಳಿದೇ ಹೋಗುತ್ತದಲ್ಲ. ನಮ್ಮ ಪ್ರಜ್ಞೆಗೆ ಸಲ್ಲುವ ಪ್ರಪಂಚದ ವಸ್ತುಗಳೂ ಹೀಗೆಯೇ. ಅವು ನಮ್ಮ ಸುಖಕ್ಕೆ ಬೇಕು. ಅನ್ನ, ನೀರು, ಹಣ, ಕೀರ್ತಿ, ಆರೋಗ್ಯ, ದೇಹಸೌಂದರ್ಯ ಇವೆಲ್ಲವೂ ನಮ್ಮ ಪ್ರಜ್ಞೆಗೆ, ಅಂದರೆ ನಮಗೆ, ಬೇಕೇಬೇಕು. ಆದರೆ, ಈ ಎಲ್ಲ ವಸ್ತುಗಳೂ ಬೇಕಿರುವುದು ಪ್ರಜ್ಞೆಗೆ ಇಂಧನವಾಗಿ ಮಾತ್ರ. ಅದರ ನಿರ್ದಿಷ್ಟ ರೂಪ, ಹೆಸರು, ಲಕ್ಷಣಗಳೆಲ್ಲಾ ಸಾಂದರ್ಭಿಕ ಮಾತ್ರ. ಇಂತಹ ಇಂಧನವನ್ನು ಕೊಟ್ಟಷ್ಟೂ ನಮ್ಮ ಪ್ರಜ್ಞೆ ಉರಿಯುತ್ತಲೇ ಇರುತ್ತದೆ. ಎಲ್ಲಿಯವರೆಗೂ ನಮ್ಮ ಪ್ರಜ್ಞೆ ಪ್ರಪಂಚವನ್ನು, ಅದರ ವಸ್ತುಗಳನ್ನು, ತನ್ನ ಇಂಧನವನ್ನಾಗಿ ಭಕ್ಷಿಸುತ್ತಿರುತ್ತದೋ ಅಲ್ಲಿಯವರೆಗೂ ನಾವು ಜೀವಂತವಾಗಿದ್ದೇವೆ ಎಂದರ್ಥ. 

ಇಲ್ಲಿಯೇ ಒಂದು ಪ್ರಶ್ನೆಯೂ ಏಳುತ್ತದೆ. ನಮಗೆ ವಸ್ತುಗಳು ಇಷ್ಟವಾಗುವುದು ನಿರ್ದಿಷ್ಟ ವಸ್ತುಗಳಾಗಿಯೇ ತಾನೆ? ನನಗೆ ಬೇಕಿರುವುದು ಈ ಕಾರು. ನನಗೆ ಇಷ್ಟವಾಗುವುದು ಆ ರುಚಿಯ ಅಡುಗೆ. ಯಾವ ವಸ್ತುವಾದರೂ ಸರಿ, ಯಾವ ರುಚಿಯಾದರೂ ಸರಿ, ನನ್ನ ಪ್ರಜ್ಞೆಗೆ ಇಂಧನವಾಗಿ ಸಲ್ಲುವಂತಿದ್ದರೆ ಸಾಕು ಎಂದೆಲ್ಲಾ ಅನ್ನಿಸುವುದಿಲ್ಲವಲ್ಲ? ಈ ವಿರೋಧಾಭಾಸವನ್ನು ಅರ್ಥೈಸಿಕೊಳ್ಳುವುದು ಹೇಗೆ? ಮತ್ತೊಮ್ಮೆ ಅಗ್ನಿಯನ್ನು ಗಮನಿಸಿ. ಅಗ್ನಿಗೆ ತನ್ನದೇ ಆದ ಯಾವ ಲಕ್ಷಣವೂ ಇಲ್ಲ. ಅದಕ್ಕೆ ಕೆಲವೊಮ್ಮೆ ಬೇರೆ ಬೇರೆ ವರ್ಣಗಳಿರುವಂತೆ ಕಾಣುವುದು ಅದು ಯಾವ ರೀತಿಯ ವಸ್ತುವನ್ನು ದಹಿಸುತ್ತಿದೆ ಎನ್ನುವುದರಿಂದ. ಶುದ್ಧವಾದ ಇಂಧನವಿದ್ದರೆ, ಅಗ್ನಿಯ ಬಣ್ಣ ನೀಲಿಯಾಗಿರುತ್ತದೆ. ಇಂಧನ ಅಶುದ್ಧವಾಗಿದ್ದರೆ ಹಳದಿಯಾಗಿರುತ್ತದೆ. ಹಾಗೆಯೇ, ನಮ್ಮ ಪರಿಸರದಿಂದ ಬಂದ ಇಷ್ಟಾನಿಷ್ಟಗಳ ಸಂಸ್ಕಾರದ ಕಾರಣದಿಂದ ನಮ್ಮ ಪ್ರಜ್ಞೆಗೆ ಇದು ಇಷ್ಟ ಅದು ಇಷ್ಟವಿಲ್ಲ ಎಂದು ಕಾಣಿಸುತ್ತದೆ. ನಮ್ಮ ಇಷ್ಟಾನಿಷ್ಟಗಳ ಸಂಸ್ಕಾರಗಳೇ ನಾನು ಇಂಥವನು, ನನ್ನ ಸ್ವಭಾವ ಇದು ಎನ್ನುವಂಥಾ ಅನುಭವವನ್ನೂ ಕೊಡುತ್ತಿರುತ್ತದೆ. ಆದರೆ ನಿಜಕ್ಕೂ, ಅಗ್ನಿಯಂತೆ ಪ್ರಜ್ಞೆಗೂ ತನ್ನದೇ ಆದ ಯಾವ ಲಕ್ಷಣವೂ ಇಲ್ಲ. ಅದು ಕೇವಲ ಚಿದ್ರೂಪವಾದದ್ದು ಮಾತ್ರ. ಈ ಸಂಗತಿಯನ್ನು ಅರಿಯುವುದೇ ನಮ್ಮ ಪ್ರಜ್ಞೆಯನ್ನು, ಅಂದರೆ ನಮ್ಮನ್ನು, ಅರಿತುಕೊಳ್ಳುವ ಮೊದಲ ಹೆಜ್ಜೆ.         



Comments

Popular posts from this blog

ಸ್ಟ್ರಕ್ಚರಲಿಸಂ (ರಚನಾವಾದ/ರಾಚನಿಕವಾದ)

ಮಾರ್ಕ್ಸ್‌‌‌ ವಾದ

ಸಮಾನತೆಯ ಕುರಿತು ಐದು ತಕರಾರುಗಳು