Posts

ಅಗ್ನಿ ಎಂಬ ರೂಪಕ

ಪ್ರಾಚೀನರಿಗೆ ಅಗ್ನಿ ನಮ್ಮ ಪ್ರಜ್ಞೆಯ ರೂಪಕ. ನಮ್ಮ ಪ್ರಜ್ಞೆ ಪ್ರಪಂಚವನ್ನು ಭಕ್ಷಿಸಿ ಬೆಳಗುತ್ತದೆ. ಅಗ್ನಿ ಇಂಧನವನ್ನು ಭಕ್ಷಿಸಿ ಬೆಳಗುವಂತೆ. ದಹಿಸುವ ಯಾವ ವಸ್ತುವಾದರೂ ಸರಿಯೆ ಅದು ಅಗ್ನಿಗೆ ಇಂಧನವಾಗಿ ಸಲ್ಲುತ್ತದೆ. ವಸ್ತುಗಳನ್ನು ಹಲವು ಹೆಸರುಗಳಿಂದ ಮತ್ತು ರೂಪಗಳಿಂದ ಗುರುತಿಸುತ್ತೇವೆ. ಇದು ಆಟಿಕೆ, ಇದು ಕುರ್ಚಿ ಎಂದು. ಆದರೆ, ಅಗ್ನಿಗೆ ವಸ್ತುಗಳ ಬಗ್ಗೆ ಯಾವ ತಾರತಮ್ಯವೂ ಇಲ್ಲ. ವಸ್ತುವಿನ ರೂಪ ಏನೇ ಇರಲಿ, ಅಗ್ನಿಗೆ ಅದು ಸಲ್ಲುವುದು ಇಂಧನವಾಗಿ ಮಾತ್ರ. ಹೇಗಿದ್ದರೂ, ಅಗ್ನಿಗೆ ಸಂದಮೇಲೆ ಆ ವಸ್ತುವಿನ ನಾಮರೂಪ ಭೇದಗಳೆಲ್ಲವೂ ಅಳಿದೇ ಹೋಗುತ್ತದಲ್ಲ. ನಮ್ಮ ಪ್ರಜ್ಞೆಗೆ ಸಲ್ಲುವ ಪ್ರಪಂಚದ ವಸ್ತುಗಳೂ ಹೀಗೆಯೇ. ಅವು ನಮ್ಮ ಸುಖಕ್ಕೆ ಬೇಕು. ಅನ್ನ, ನೀರು, ಹಣ, ಕೀರ್ತಿ, ಆರೋಗ್ಯ, ದೇಹಸೌಂದರ್ಯ ಇವೆಲ್ಲವೂ ನಮ್ಮ ಪ್ರಜ್ಞೆಗೆ, ಅಂದರೆ ನಮಗೆ, ಬೇಕೇಬೇಕು. ಆದರೆ, ಈ ಎಲ್ಲ ವಸ್ತುಗಳೂ ಬೇಕಿರುವುದು ಪ್ರಜ್ಞೆಗೆ ಇಂಧನವಾಗಿ ಮಾತ್ರ. ಅದರ ನಿರ್ದಿಷ್ಟ ರೂಪ, ಹೆಸರು, ಲಕ್ಷಣಗಳೆಲ್ಲಾ ಸಾಂದರ್ಭಿಕ ಮಾತ್ರ. ಇಂತಹ ಇಂಧನವನ್ನು ಕೊಟ್ಟಷ್ಟೂ ನಮ್ಮ ಪ್ರಜ್ಞೆ ಉರಿಯುತ್ತಲೇ ಇರುತ್ತದೆ. ಎಲ್ಲಿಯವರೆಗೂ ನಮ್ಮ ಪ್ರಜ್ಞೆ ಪ್ರಪಂಚವನ್ನು, ಅದರ ವಸ್ತುಗಳನ್ನು, ತನ್ನ ಇಂಧನವನ್ನಾಗಿ ಭಕ್ಷಿಸುತ್ತಿರುತ್ತದೋ ಅಲ್ಲಿಯವರೆಗೂ ನಾವು ಜೀವಂತವಾಗಿದ್ದೇವೆ ಎಂದರ್ಥ.  ಇಲ್ಲಿಯೇ ಒಂದು ಪ್ರಶ್ನೆಯೂ ಏಳುತ್ತದೆ. ನಮಗೆ ವಸ್ತುಗಳು ಇಷ್ಟವಾಗುವುದು ನಿರ್ದಿಷ್ಟ ...

ಲೋಕನಿಂದೆಗೆ ಹೆದರುವ ಸಜ್ಜನರು

ಕೆಟ್ಟ ಕೆಲಸ ಮಾಡಬಾರದು. ಯಾಕೆ? ಅದಕ್ಕೆ ಎರಡು ಉತ್ತರ. ಮೊದಲನೆಯದು: “ಹಾಗೆ ಮಾಡಿದರೆ ನಾಲ್ಕು ಜನರ ಮುಂದೆ ನಮ್ಮ ಮರ್ಯಾದೆ ಏನಾಗುತ್ತದೆ?” ಎರಡನೆಯದು: “ನನ್ನ ನೈತಿಕ ನಂಬಿಕೆಗಳಿಗೆ ವಿರುದ್ಧವಾಗಿರುವ ಏನನ್ನೂ ನಾನು ಮಾಡುವುದಿಲ್ಲ”.  ಚಿಕ್ಕಂದಿನಲ್ಲಿ ಏನಾದರೂ ಮಾಡಬಾರದ್ದು ಮಾಡಿ ಸಿಕ್ಕಿಹಾಕಿಕೊಂಡರೆ, ನಮ್ಮಜ್ಜಿ, ನಮ್ಮಮ್ಮ ಎಲ್ಲರೂ ನನ್ನನ್ನು ಬೈಯುತ್ತಿದ್ದದ್ದು “ನಾಲ್ಕು ಜನ ನೋಡಿ ನಗ್ತಾರೆ. ನಾಚಿಕೆ ಆಗ್ಬೇಕು ನಿನಗೆ” ಅಂತ. ಆದರೆ ಅವರೆಲ್ಲಾ ಹಳೆಯ ಕಾಲದವರು. ಸಮಾಜದ ಬಗೆಗಿನ ಭಯದಿಂದ ನಾವು ನೀತಿವಂತರಾಗಿರಬೇಕು ಎನ್ನುವವವರು. ನನ್ನ ಸ್ನೇಹಿತರು ಹಾಗಲ್ಲ. ಬಹಳ ಆಧುನಿಕರು. ಅವರೂ ಒಳ್ಳೆಯವರೇ. ಆದರೆ ಅವರಿಗೆ ಸಮಾಜದ ಭಯದಿಂದ ಒಳ್ಳೆಯವರಾಗಿರುವುದು ಆಷಾಢಭೂತಿಗಳ ಲಕ್ಷಣ ಎಂದು ಕಾಣಿಸುತ್ತದೆ. ನಾವು ನಮ್ಮ ನೈತಿಕ ಮೌಲ್ಯಗಳನ್ನು ಪಾಲಿಸಬೇಕೇ ಹೊರತೂ ಇನ್ನೊಬ್ಬರ ಬಗೆಗಿನ ಭಯಕ್ಕಾಗಿ ಒಳ್ಳೆಯವರಾಗಿರಬಾರದು. ಇಬ್ಬರಲ್ಲಿ ಯಾರು ಸರಿ? ನನ್ನ ಪ್ರಕಾರ, ನನ್ನ ಅಜ್ಜಿಯೇ ಸರಿ. ಯಾಕೆ? ಸರಿ-ತಪ್ಪುಗಳು ಕೂಡಾ ಬೆಟ್ಟಗುಡ್ಡಗಳಂತೆ ನಮ್ಮ ಪ್ರಪಂಚದ ಸತ್ಯಗಳೇ ಹೊರತೂ ನಮ್ಮ ಮನಸ್ಸಿನ ಖಯಾಲಿಗಳಲ್ಲ. ಸರಿ-ತಪ್ಪುಗಳನ್ನು ನಾವೇ ಮಾಡಿಕೊಂಡಿರುವುದಲ್ಲವೇ ಎಂದು ನೀವು ಕೇಳಬಹುದು. ಹೌದು. ಆದರೆ, ನೀರಿನ ಕೆರೆಗಳನ್ನೂ ನಾವೇ ಮಾಡಿಕೊಂಡಿರುವುದು. ಅಷ್ಟು ಮಾತ್ರಕ್ಕೆ ಅವೇನೂ ಕಡಿಮೆ ಸತ್ಯಗಳಾಗುವುದಿಲ್ಲವಲ್ಲ? ನಾವೇ ಮಾಡಿಕೊಂಡಿದ್ದು ಎಂದು ಕೆರೆಯಲ...

ನೆಟ್ಟಗೆ ಯೋಚಿಸಲು ಹತ್ತು ಸೂತ್ರಗಳು

ನಾವೆಲ್ಲಾ ಸ್ಕೂಲು ಕಾಲೇಜಿಗೆ ಹೋಗಿ ಬುದ್ಧಿವಂತರಾಗುತ್ತೇವೆ ಎಂದು ಲೆಕ್ಕ. ಅಂದರೆ ವೈಜ್ಞಾನಿಕವಾಗಿ ಯೋಚಿಸಲು ಪ್ರಾರಂಭಿಸುತ್ತೇವೆ ಎಂದರ್ಥ. ಸ್ಕೂಲು ಕಾಲೇಜುಗಳು ವೈಜ್ಞಾನಿಕ ಮನೋಭಾವನೆ ಎನ್ನುವಂಥ ರೀತಿಯ ಯಾವುದೋ ಒಂದು ವಿಶೇಷ ಶಕ್ತಿಯನ್ನು ಬೆಳೆಸುತ್ತವೆ ಎಂದು ನಮ್ಮ ನಂಬಿಕೆ. ಆದರೆ, ಇಲ್ಲೊಂದು ಎಡವಟ್ಟಿದೆ. ವೈಜ್ಞಾನಿಕ ಚಿಂತನೆ ಎನ್ನುವ ಮಾದರಿಯ ಯಾವ ಚಿಂತನೆಯೂ ಈ ಪ್ರಪಂಚದಲ್ಲಿಲ್ಲ. ಅಥವಾ, ಹೀಗೆ ಯೋಚನೆ ಮಾಡಿದರೆ ಅದು ವೈಜ್ಞಾನಿಕ, ಹಾಗೆ ಯೋಚನೆ ಮಾಡಿದರೆ ಅದು ಅವೈಜ್ಞಾನಿಕ ಎನ್ನುವ ಯಾವ ಕಾಯ್ದೆ ಪುಸ್ತಕವೂ ಇಲ್ಲ. ಹಾಗಾಗಿ, ಈ ವೈಜ್ಞಾನಿಕ ಮನೋಭಾವದ ಹಿಂದೆ ಬಿದ್ದರೆ ಹಳ್ಳ ಹತ್ತುವುದು ಗ್ಯಾರಂಟಿ. ಇದರಿಂದ ತಪ್ಪಿಸಿಕೊಳ್ಳಬೇಕೆಂದರೆ ಸ್ವಲ್ಪ ಚಾಲಾಕಿತನ ಉಪಯೋಗಿಸಬೇಕು. ಅಂತಹ ಚಾಲಾಕಿತನದ ಹತ್ತು ಉಪಾಯಗಳು ಇಲ್ಲಿವೆ. ಆದರೆ, ಎಚ್ಚರ. ಇದು ಉಪಾಯಗಳು. ನಿಯಮಗಳಲ್ಲ. ಅಡ್ಡಾದಿಡ್ಡಿಯಾಗಿ ಬಳಸಿ ಇವು ಕೈಕೊಟ್ಟರೆ ಮತ್ತೆ ಬೇರೆಯವರು ಜವಾಬ್ದಾರರಲ್ಲ. ಸಾಮಾನ್ಯವಾಗಿ ಸ್ಕೂಲು ಕಾಲೇಜುಗಳು ಕಲಿಸುವುದು ದಡ್ಡರ ಸೂತ್ರ. ಅದರಾಚೆಗೆ ಇರುವುದು ಜಾಣರ ಸೂತ್ರ.  ದಡ್ಡರ ಸೂತ್ರ 1:  ಯಾವುದನ್ನು ಸರಿಯೆಂದು ಸಾಬೀತುಮಾಡಬಹುದೋ ಅದು ಮಾತ್ರ ವೈಜ್ಞಾನಿಕ.  ಜಾಣರ ಸೂತ್ರ 1:  ಯಾವುದನ್ನು ತಪ್ಪೆಂದು ಸಾಬೀತುಮಾಡುವ ಸಾಧ್ಯತೆ ಇದೆಯೋ ಅದು ಮಾತ್ರ ವೈಜ್ಞಾನಿಕ.  ಸಾಮಾನ್ಯವಾಗಿ ವಿಜ್ಞಾನ ಎಂದರೆ ಸರಿ ಎಂದು ಸಾಬೀತು ಮಾ...

ಗಾಂಧೀ ಮಾದರಿಯ ಸಾಮಾಜಿಕ ವಿಮರ್ಶೆ

ಕೆಲವು ಸಾಮಾಜಿಕ ಆಚಾರಗಳನ್ನು, ಅದರಲ್ಲೂ ವಿಶೇಷವಾಗಿ ಹಿಂದೂ ಆಚಾರಗಳನ್ನು, ಗಾಂಧಿ ಟೀಕಿಸಿದ್ದಿದೆ. ಉದಾಹರಣೆಗೆ, ಅಸ್ಪೃಶ್ಯತೆ, ಪ್ರಾಣಿಹಿಂಸೆ. ಆದರೆ, ವಿಚಿತ್ರವೆಂದರೆ, ಇನ್ನು ಕೆಲವು ಸಾಮಾಜಿಕ ಆಚಾರಗಳನ್ನು, ಅದರಲ್ಲೂ ನಮಗೆ ಇವತ್ತು ವಿಕೃತವೆಂದು ಕಾಣುವಂಥವನ್ನು ಸಮರ್ಥಿಸಿದ್ದೂ ಇದೆ. ಉದಾಹರಣೆಗೆ, ವರ್ಣಾಶ್ರಮಧರ್ಮ ಮತ್ತು ಬ್ರಹ್ಮಚರ್ಯ. ಬಿಹಾರದ ಭೂಕಂಪಕ್ಕೆ ಅಸ್ಪೃಶ್ಯತೆಯ ಆಚರಣೆಯ ಪಾಪವೇ ಕಾರಣ ಎಂದೂ ಹೇಳಿದ್ದಿದೆ. ಗಾಂಧಿಯನ್ನು ಮೆಚ್ಚುವವರು ಇಂತಹ ಆಭಾಸಗಳನ್ನು ದೊಡ್ಡವರ ಸಣ್ಣ ತಪ್ಪುಗಳು ಎನ್ನುವಂತೆ ಸಂಕೋಚದಿಂದ ತೇಲಿಸುತ್ತಾರೆ. ಗಾಂಧಿಯನ್ನು ವಿಮರ್ಶಿಸುವವರು ಇದನ್ನೇ ಮುಂದುಮಾಡಿಕೊಂಡು ಗಾಂಧಿ ಆಳದಲ್ಲಿ ಎಂತಹ ಪಿತೃಪ್ರಧಾನವಾದ, ಮೇಲ್ಜಾತಿಯವರ ಪ್ರಕಾರ ಆದರ್ಶವೆಂದು ಕಾಣುವ ಒಂದು ಊಳಿಗಮಾನ್ಯ ರೀತಿಯ ಸಮಾಜದ ಪ್ರತಿಪಾದಕ ಎಂದೂ ವಾದಿಸುತ್ತಾರೆ. ಗಾಂಧಿಯ ಬಗೆಗಿನ ಗೌರವದಿಂದಲೋ ಏನೋ ಈ ಎರಡೂ ಕಡೆಯವರು ಇಷ್ಟು ಸ್ಫುಟವಾಗಿ, ಒರಟಾಗಿ ತಮ್ಮ ವಿಚಾರಗಳನ್ನು ಹೇಳದೇ ಇರಬಹುದು. ಆದರೆ ಎರಡೂ ಪಕ್ಷಗಳ ಪ್ರತಿಪಾದನೆಯ ಸಾರವಂತೂ ಸುಮಾರು ಹೀಗೆಯೇ ಇರುತ್ತದೆ.  ಈ ಎರಡೂ ಪಕ್ಷಗಳು ಗಾಂಧಿಯ ವಿಚಾರದ ಆಳವನ್ನು ತಿಳಿದುಕೊಳ್ಳುವಲ್ಲಿ ಸೋತಿವೆ ಎಂದು ನನ್ನ ಅಭಿಪ್ರಾಯ. ಅಷ್ಟೇ ಅಲ್ಲ, ತಮ್ಮ ನಡುವೆ ಕೈಬದಲಾಯಿಸಿಕೊಂಡು, ಇಬ್ಬರೂ ಗಾಂಧಿಯ ವಿಚಾರಗಳನ್ನು ವಿಕೃತವಾಗಿ ವ್ಯಾಖ್ಯಾನ ಮಾಡಿದ್ದಾರೆ ಎಂದೂ ನನ್ನ ಅನಿಸಿಕೆ. ಇದನ್ನು ತೋರಿಸುವುದು ಪ್ರಸ್...

ಸಮಾನತೆಯ ಕುರಿತು ಐದು ತಕರಾರುಗಳು

ಆಧುನಿಕ ಪ್ರಪಂಚವನ್ನು ರೂಪಿಸಿರುವ ಆದರ್ಶಗಳಲ್ಲೇ ಸಮಾನತೆ ಅತ್ಯಂತ ಮುಖ್ಯವಾದದ್ದು. ಫ್ರೆಂಚ್ ಕ್ರಾಂತಿಯ ಕಾಲದಿಂದ ಮೊದಲುಗೊಂಡು ಎಲ್ಲ ಸಾಮಾಜಿಕ ರಾಜಕೀಯ ಯೋಜನೆಗಳು, ವ್ಯವಸ್ಥೆಗಳಲ್ಲೂ ಸಮಾನತೆಯನ್ನು ತರುವ ಕಾರ್ಯಕ್ರಮಗಳೇ ಎದ್ದು ಕಾಣುತ್ತವೆ. ಅಷ್ಟೇ ಅಲ್ಲ, ಸಾಮಾಜಿಕ ರಾಜಕೀಯ ಸ್ಥಿತಿಗತಿಗಳು ಮತ್ತು ಸಂಸ್ಥೆಗಳನ್ನು ಅರಿಯುವುದಕ್ಕೆ ಮತ್ತು ಅವನ್ನು ವಿಮರ್ಶಿಸುವುದಕ್ಕೆ ಸಮಾನತೆಯೇ ಅತೀ ಮುಖ್ಯ ಪರಿಕಲ್ಪನೆ. ಯಾವ ಸರಕಾರೀ ಯೋಜನೆಯಾಗಲೀ, ಅಥವಾ, ಚಿಂತನಾ ಪ್ರಸ್ಥಾನವಾಗಲಿ, ಅದನ್ನು ಮೊದಲು ಅಳೆಯುವುದು ಸಮಾನತೆಯ ನೆಲೆಯಲ್ಲಿ. ಈ ನಿರ್ದಿಷ್ಟ ಯೋಜನೆ ಸಮಾನತೆಯನ್ನು ಹೆಚ್ಚಿಸುತ್ತದೆಯೇ ಇಲ್ಲವೇ, ಆ ಕಾನೂನು ಅಸಮಾನತೆಯನ್ನು ಉಂಟುಮಾಡುತ್ತದೆಯೇ, ಇವರ ಸಾಹಿತ್ಯ ಸಮಾನತೆಯ ಸಮಾಜವನ್ನು ಕಟ್ಟುವುದಕ್ಕೆ ಪೂರಕವಾಗಿದೆಯೇ, ಅವರ ಆಚಾರವಿಚಾರ ಅಸಮಾನತೆಯನ್ನು ಪೋಷಿಸುತ್ತದೆಯೇ, ಈ ರೀತಿಯ ಪ್ರಶ್ನೆಗಳು ಸಮಾನತೆ ಹೇಗೆ ನಮ್ಮ ಇಂದಿನ ಕಾಲದ ಚಿಂತನೆಯ ಕ್ಷಿತಿಜವೇ ಆಗಿದೆ ಎನ್ನುವುದನ್ನು ತೋರಿಸುತ್ತದೆ. ಆದರೆ, ಸಮಾನತೆಯ ಆದರ್ಶ ಮತ್ತು ಸಮಾನತೆಯ ಪರಿಕಲ್ಪನೆ ಎರಡೂ ಮೇಲುನೋಟಕ್ಕೆ ಕಾಣಿಸುವಷ್ಟು ಸ್ವಯಂವೇದ್ಯವೂ ಅಲ್ಲ, ಸಿಂಧುವೂ ಅಲ್ಲ. ಒಂದು ಆದರ್ಶವಾಗಿ ಸಮಾನತೆ ಯಾವ ರೀತಿಯ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ ಮತ್ತು ಒಂದು ಪರಿಕಲ್ಪನೆಯಾಗಿ ಯಾವ ರೀತಿಯ ತಾರ್ಕಿಕ ತೊಡಕುಗಳನ್ನು ಉಂಟುಮಾಡುತ್ತದೆ ಎಂದು ಗುರುತಿಸುವುದು ಈ ಲೇಖನದ ಉದ್ದೇಶ. ಮತ್ತು ನಾ...

ಸಂಪ್ರದಾಯಗಳನ್ನು ಪ್ರಶ್ನಿಸುವ ಮುನ್ನ ವಿಚಾರವಾದಿಗಳು ಮಾಡಬೇಕಾದ್ದೇನು?

ಉದಾರವಾದ ಮತ್ತು ಪ್ರಜಾತಾಂತ್ರಿಕ ಸಂವಾದದ ಲಕ್ಷಣ ಸಂಪ್ರದಾಯಗಳು ಮತ್ತು ಪಾರಂಪರಿಕ ಆಚಾರಗಳನ್ನು ಉದಾರವಾದಿಗಳು ವಿಮರ್ಶೆ ಮಾಡುವ ರೀತಿಯ ಬಗ್ಗೆ ಈ ಲೇಖನ ಒಂದು ತಕರಾರನ್ನು ಎತ್ತುತ್ತದೆ. ಜೊತೆಗೆ ಪಾರಂಪರಿಕ ರೂಢಿಗಳು ಮತ್ತು ಆಚಾರಗಳನ್ನು ವಿಮರ್ಶಿಸಲು ಬೇಕಾದ ಒಂದು ಹೊಸ ಚೌಕಟ್ಟನ್ನು ರೂಪಿಸಲು ಪ್ರಯತ್ನಿಸುತ್ತದೆ. ಆ ಮೂಲಕ ಇಂತಹ ರೂಢಿಗಳು ಮತ್ತು ಅವನ್ನು ಪಾಲಿಸುವ ಸಮುದಾಯಗಳ ನಡುವಿನ ಸಂಬಂಧವನ್ನು ಆಳವಾಗಿ ಶೋಧಿಸುವ ಪ್ರಯತ್ನವನ್ನೂ ಮಾಡುತ್ತದೆ. ಪಾರಂಪರಿಕ ಆಚಾರಗಳನ್ನು ವಿರೋಧಿಸಬೇಕಾದ ಸಂದರ್ಭ ಬಂದಾಗ, ಸಾಮಾನ್ಯವಾಗಿ ಉದಾರವಾದಿಗಳು ಹೇಳುವ ಮಾತೇನೆಂದರೆ, "ಇಂತಹ ಆಚಾರಗಳು ನಮ್ಮ ಹಕ್ಕುಗಳನ್ನು ನಿರಾಕರಿಸುತ್ತವೆ" ಎಂದು. ಉದಾಹರಣೆಗೆ, ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ಹೋಗುವುದನ್ನು ನಿಷೇಧಿಸಿದರೆ, ಆಗ ಮಹಿಳೆಯರ ಸಮಾನತೆಯ ಹಕ್ಕಿಗೆ ಚ್ಯುತಿ ಬರುತ್ತದೆ ಎನ್ನುವುದು ಇವರ ವಾದ. ಆದರೆ, ಇಂತಹ ವಾದಗಳು ಒಂದು ವಿಚಿತ್ರ ರೀತಿಯಲ್ಲಿ ಪ್ರಜಾಪ್ರಭುತ್ವ ವಿರೋಧಿ ಪರಿಣಾಮಗಳಿಗೆ ಎಡೆ ಮಾಡಿಕೊಡುತ್ತದೆ. ಹಾಗಾಗಿ, ಹಕ್ಕಿನ ತತ್ವವನ್ನು (rights principle) ಆಧರಿಸಿ ಇಂತಹ ಸಂಗತಿಗಳನ್ನು ನಿರ್ಧರಿಸುವ ಬದಲು, ಕೇಡಿನ ತತ್ವವನ್ನು (injury principle) ಆಧರಿಸಿ ನಿರ್ಧರಿಸಬೇಕು ಎನ್ನುವುದು ಈ ಲೇಖನದ ವಾದ. ಸಾಮಾನ್ಯವಾಗಿ ಉದಾರವಾದಿಗಳಲ್ಲೇ ಒಂದು ಗುಂಪಿನವರು ಹೇಳುವುದೇನೆಂದರೆ, ಸಮುದಾಯಗಳು ತಂತಮ್ಮ ಆಚಾರ ವಿಚಾರಗಳನ್ನು ತ...

ಮಾಧ್ಯಮಗಳು, ಐಡಿಯಾಲಜಿ ಮತ್ತು ವಾಸ್ತವದ ಬಿಕ್ಕಟ್ಟು

1991ರಲ್ಲಿ ಅಮೆರಿಕ ಮತ್ತು ಇರಾಕ್ ನಡುವೆ ಕೊಲ್ಲಿ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಜಾನ್ ಬೌದ್ರಿಯಾ ಎನ್ನುವ ಫ್ರೆಂಚ್ ಚಿಂತಕ ‘ಕೊಲ್ಲಿ ಯುದ್ಧ ನಡೆದೇ ಇಲ್ಲ’ ಎಂದು ಘೋಷಿಸಿ ಒಂದು ಲೇಖನ ಬರೆದ. ಸತ್ಯವೆನ್ನುವುದು ಏನೂ ಇಲ್ಲ, ಇರುವುದೆಲ್ಲಾ ಸಾಪೇಕ್ಷವಾದ ಅಭಿಪ್ರಾಯಗಳು ಎಂದು ತಿರುಗಾಡಿಕೊಂಡಿದ್ದ ಆ ಕಾಲದ ಫ್ರೆಂಚ್ ಚಿಂತಕರ ಕಾಯಿಲೆಯೇ ಬೌದ್ರಿಯಾನಿಗೂ ಎಲ್ಲೋ ಸ್ವಲ್ಪ ಜಾಸ್ತಿ ತಗುಲಿದೆ ಎಂದು ಟೀಕಾಕಾರರು ಅವನನ್ನು ಜರೆದರು. ಆ ಕಾಲದ ಅಕಡೆಮಿಕ್ ಫ್ಯಾಶನ್ನುಗಳ ಅಮಲು ಏರಿದವನಂತೆ ಬರೆದ ಬೌದ್ರಿಯಾನ ಮಾತು ಪೋಸ್ಟ್- ಮಾಡರ್ನ್ ಎಂದು ಕರೆದುಕೊಳ್ಳುವ ಚಿಂತಕರ ಪೊಳ್ಳುತನಕ್ಕೆ ಸಾಕ್ಷಿ ಎಂದು ಇಡೀ ಯೂರೋಪಿನಲ್ಲಿ ಗುಲ್ಲಾಯಿತು. ಆ ಟೀಕೆಯಲ್ಲಿ ಬಹಳಷ್ಟು ಸತ್ಯವೂ ಇತ್ತು. ಆದರೆ ಇಂದು ಬೌದ್ರಿಯಾನ ಮಾತು ಇಪ್ಪತ್ತೈದು ವರ್ಷ ಕಳೆದಾದ ಮೇಲೆ ಮತ್ತೆ ನಮ್ಮನ್ನು ಕಾಡಲು ಬಂದಿದೆ. ಒಂದೇ ವ್ಯತ್ಯಾಸವೆಂದರೆ, ಈಗ ಅದಕ್ಕೆ ಒಂದು ಗೌರವದ ದಿರಿಸು ಹಾಕಲಾಗಿದೆ. ಇಂದಿನ ಅಕಡೆಮಿಕ್ ಪರಿಭಾಷೆಯಲ್ಲಿ ‘ಮೀಡಿಯಾಟೈಸೇಶನ್’ ಎಂದು ಇದಕ್ಕೆ ಹೆಸರು. ಏನಿದು ಮೀಡಿಯಾಟೈಸೇಶನ್? ತೀರ ಇತ್ತೀಚಿನವರೆಗೂ ಕಾವೇರಿ ಗಲಾಟೆ ನಡೆಯುವಾಗ ಮನೆಯಲ್ಲಿ ಕುಳಿತು ಟಿ.ವಿ. ನೋಡುತ್ತಾ, ‘ಇವೆಲ್ಲಾ ಈ ಟಿ.ವಿ.ಯವರು ಹಚ್ಚಿಕೊಡುವ ಜಗಳ. ಜನ ಸುಮ್ಮನೆ ಇರುತ್ತಾರೆ. ಈ ಟಿ.ವಿ. ಚಾನೆಲ್ಲುಗಳೇ ತಮ್ಮ ಟಿ.ಆರ್‌.ಪಿ.ಗಾಗಿ ಹಸಿಹಸಿ ಸುದ್ಧಿಗಳು, ಅರೆಸತ್ಯಗಳು, ರೋಚಕವಾದ ದೃಶ್ಯಗಳನ್ನು ತೋರಿಸ...