ಸಂಪ್ರದಾಯಗಳನ್ನು ಪ್ರಶ್ನಿಸುವ ಮುನ್ನ ವಿಚಾರವಾದಿಗಳು ಮಾಡಬೇಕಾದ್ದೇನು?


ಉದಾರವಾದ ಮತ್ತು ಪ್ರಜಾತಾಂತ್ರಿಕ ಸಂವಾದದ ಲಕ್ಷಣ
ಸಂಪ್ರದಾಯಗಳು ಮತ್ತು ಪಾರಂಪರಿಕ ಆಚಾರಗಳನ್ನು ಉದಾರವಾದಿಗಳು ವಿಮರ್ಶೆ ಮಾಡುವ ರೀತಿಯ ಬಗ್ಗೆ ಈ ಲೇಖನ ಒಂದು ತಕರಾರನ್ನು ಎತ್ತುತ್ತದೆ. ಜೊತೆಗೆ ಪಾರಂಪರಿಕ ರೂಢಿಗಳು ಮತ್ತು ಆಚಾರಗಳನ್ನು ವಿಮರ್ಶಿಸಲು ಬೇಕಾದ ಒಂದು ಹೊಸ ಚೌಕಟ್ಟನ್ನು ರೂಪಿಸಲು ಪ್ರಯತ್ನಿಸುತ್ತದೆ. ಆ ಮೂಲಕ ಇಂತಹ ರೂಢಿಗಳು ಮತ್ತು ಅವನ್ನು ಪಾಲಿಸುವ ಸಮುದಾಯಗಳ ನಡುವಿನ ಸಂಬಂಧವನ್ನು ಆಳವಾಗಿ ಶೋಧಿಸುವ ಪ್ರಯತ್ನವನ್ನೂ ಮಾಡುತ್ತದೆ. ಪಾರಂಪರಿಕ ಆಚಾರಗಳನ್ನು ವಿರೋಧಿಸಬೇಕಾದ ಸಂದರ್ಭ ಬಂದಾಗ, ಸಾಮಾನ್ಯವಾಗಿ ಉದಾರವಾದಿಗಳು ಹೇಳುವ ಮಾತೇನೆಂದರೆ, "ಇಂತಹ ಆಚಾರಗಳು ನಮ್ಮ ಹಕ್ಕುಗಳನ್ನು ನಿರಾಕರಿಸುತ್ತವೆ" ಎಂದು. ಉದಾಹರಣೆಗೆ, ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ಹೋಗುವುದನ್ನು ನಿಷೇಧಿಸಿದರೆ, ಆಗ ಮಹಿಳೆಯರ ಸಮಾನತೆಯ ಹಕ್ಕಿಗೆ ಚ್ಯುತಿ ಬರುತ್ತದೆ ಎನ್ನುವುದು ಇವರ ವಾದ. ಆದರೆ, ಇಂತಹ ವಾದಗಳು ಒಂದು ವಿಚಿತ್ರ ರೀತಿಯಲ್ಲಿ ಪ್ರಜಾಪ್ರಭುತ್ವ ವಿರೋಧಿ ಪರಿಣಾಮಗಳಿಗೆ ಎಡೆ ಮಾಡಿಕೊಡುತ್ತದೆ. ಹಾಗಾಗಿ, ಹಕ್ಕಿನ ತತ್ವವನ್ನು (rights principle) ಆಧರಿಸಿ ಇಂತಹ ಸಂಗತಿಗಳನ್ನು ನಿರ್ಧರಿಸುವ ಬದಲು, ಕೇಡಿನ ತತ್ವವನ್ನು (injury principle) ಆಧರಿಸಿ ನಿರ್ಧರಿಸಬೇಕು ಎನ್ನುವುದು ಈ ಲೇಖನದ ವಾದ.

ಸಾಮಾನ್ಯವಾಗಿ ಉದಾರವಾದಿಗಳಲ್ಲೇ ಒಂದು ಗುಂಪಿನವರು ಹೇಳುವುದೇನೆಂದರೆ, ಸಮುದಾಯಗಳು ತಂತಮ್ಮ ಆಚಾರ ವಿಚಾರಗಳನ್ನು ತಾವೇ ಆಂತರಿಕವಾಗಿ ಸುಧಾರಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಅದರಲ್ಲಿ ಉದಾರವಾದಿಗಳು ಮೂಗು ತೂರಿಸಿ, ತಮ್ಮ ಆಧುನಿಕ ವಿಚಾರಗಳ ಆಧಾರದ ಮೇಲೆ ಸಮುದಾಯಗಳನ್ನು ತಿದ್ದಲು ಹೋಗಬಾರದು ಎಂದು. ಆದರೆ, ಹೀಗೆ ಹೇಳುವುದರ ಸಮಸ್ಯೆ ಏನೆಂದರೆ, ಈ ಇಡೀ ಚರ್ಚೆಯೇ ಉದಾರವಾದಿಗಳ ಬಗ್ಗೆ ಮತ್ತು ಉದಾರವಾದಿಗಳು ಸಮಾಜ ಸುಧಾರಣೆಯನ್ನು ಹೇಗೆ ಮಾಡಬೇಕು ಎನ್ನುವುದರ ಬಗ್ಗೆ ಇರುವುದು ಎಂದಾಗಿಬಿಡುತ್ತದೆ. ಆದರೆ ನಿಜಕ್ಕೂ ಈ ಚರ್ಚೆ ಇರುವುದು ಉದಾರವಾದಿಗಳ ಬಗ್ಗೆ ಮಾತ್ರವಷ್ಟೇ ಅಲ್ಲ. ಒಂದು ಸಮಾಜದಲ್ಲಿ ಬೇರೆಬೇರೆ ಗುಂಪುಗಳು, ಅಂದರೆ ಉದಾರವಾದಿಗಳು, ಸಂಪ್ರದಾಯಸ್ಥರು ಮತ್ತು ಮಿಕ್ಕೆಲ್ಲರೂ ತಾವು ನಂಬಿರುವ ಮೌಲ್ಯಗಳ ಬಗ್ಗೆ ಭಿನ್ನಾಭಿಪ್ರಾಯ ಉಂಟಾದಾಗ ಅದನ್ನು ಹೇಗೆ ನಿಭಾಯಿಸಬೇಕು ಮತ್ತು ಹಾಗೆ ನಿಭಾಯಿಸುವಾಗ ಯಾವ ರೀತಿಯ ವಾದಗಳು ಸರಿಯಾದುವು ಮತ್ತು ಯಾವುದು ಅಸಿಂಧುವಾದಂಥವು ಎನ್ನುವುದರ ಬಗ್ಗೆ. 

ಹಾಗಾಗಿ, ಉದಾರವಾದಿಗಳು ಏನು ಮಾಡಬೇಕು ಏನು ಮಾಡಬಾರದು ಎನ್ನುವ ವಿಚಾರಕ್ಕಿಂತಲೂ, ಇಂತಹ ಸಂದರ್ಭಗಳಲ್ಲಿ ನಡೆಸುವ ಚರ್ಚೆಗಳು ಹೇಗಿರಬೇಕು, ಹೇಗಿರಬಾರದು ಎನ್ನುವಂಥ ಒಂದು ಚೌಕಟ್ಟನ್ನು ರೂಪಿಸಿಕೊಳ್ಳುವುದು ಅಗತ್ಯ. ಒಂದು ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಚರ್ಚೆಯಾಗಬೇಕೆಂದರೆ, ಚರ್ಚೆಯ ಎರಡೂ ಬಣಗಳಿಗೂ ತಮ್ಮ ವಾದಗಳನ್ನು ಸಮರ್ಥಿಸಿಕೊಳ್ಳುವ ಸಮಾನ ಅವಕಾಶವಿರಬೇಕು. ಯಾವುದೇ ಒಂದು ಗುಂಪಿಗೆ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಅವಕಾಶವೇ ಇಲ್ಲದಂಥಾ ಪರಿಸ್ಥಿತಿ ನಿರ್ಮಾಣವಾಗಬಾರದು. ಆದರೆ, ಇಂದಿನ ನಮ್ಮ ಚರ್ಚೆಗಳಲ್ಲಿ, ಉದಾರವಾದಿಗಳು ಮತ್ತು ಸಂಪ್ರದಾಯಸ್ಥರು ತಂತಮ್ಮ ಹಕ್ಕುಗಳ ಆಧಾರದ ಮೇಲೆ ಮಾಡುವ ವಾದಗಳು ಎದುರಾಳಿಗಳಿಗೆ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುವ ಅವಕಾಶವನ್ನೇ ನಿರಾಕರಿಸುವಂತಿದೆ. ಅದರ ಜೊತೆಗೇ, ನಾವು ಮಾಡುವ ವಾದಗಳು ನಮ್ಮ ಎದುರಿನ ಬಣದವರ ವಾದಗಳನ್ನು ನಿರಾಕರಿಸಬಹುದೇ ಹೊರತೂ, ಆ ಎದುರಿನ ಬಣದವರ ನೈತಿಕತೆಯನ್ನೇ ನಿರಾಕರಿಸಲು ಬರುವುದಿಲ್ಲ. ಅಂದರೆ, ನಮ್ಮ ಎದುರಾಳಿಗಳನ್ನು ಹುಸಿಪ್ರಜ್ಞೆಗೆ ಒಳಗಾಗಿರುವವರು ಎಂದೋ, ಪಟ್ಟಭದ್ರ ಹಿತಾಸಕ್ತಿಗಳ ಪ್ರಭಾವಕ್ಕೆ ಒಳಗಾಗಿರುವವರು ಎಂದೋ, ಅಥವಾ ಅಧಿಕಾರ ಮತ್ತು ಪ್ರತಿಷ್ಠೆಯ ಪರವಾಗಿರುವವರು ಎಂದು ಮುಂತಾಗಿ ವಿವರಿಸುವುದು ಇಂತಹ ಸಂದರ್ಭದಲ್ಲಿ ಅಸಿಂಧುವಾಗುತ್ತದೆ. ಒಟ್ಟಿನಲ್ಲಿ ನಮ್ಮ ಎದುರಾಳಿಗಳ ಮನಸ್ಥಿತಿಯನ್ನು ವಿವರಿಸುವ ಗೊಡವೆಗೆ ಹೋಗುವ ಬದಲು, ಅವರೊಂದಿಗೆ ಸಂವಾದ ನಡೆಸುವ ರೀತಿಯಲ್ಲಿ ನಮ್ಮ ಚರ್ಚೆಗಳು ಇರಬೇಕಾದ್ದು ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಮುಖ್ಯ. 

ಉದಾರವಾದದ ಗೊಂದಲ
ಉದಾರವಾದಿಗಳು ಸಂಪ್ರದಾಯಗಳನ್ನು ಟೀಕಿಸುವಾಗ ಯಾವ ಅಳತೆಗೋಲನ್ನು ಇಟ್ಟುಕೊಂಡು ಟೀಕಿಸುತ್ತಿರುತ್ತಾರೋ ಆ ಅಳತೆಗೋಲು ಉದಾರವಾದದ ಚಿಂತನೆಯ ಹೊರಗಿನಿಂದ ನೋಡಿದಾಗ ಅರ್ಥವೇ ಆಗುವುದಿಲ್ಲ. ಸಾಮಾನ್ಯವಾಗಿ ಉದಾರವಾದಿಗಳ ಟೀಕೆಯ ವಿರುದ್ಧ ಜನರು ವ್ಯಗ್ರವಾಗಿ ಪ್ರತಿಕ್ರಯಿಸುವುದರ ಹಿಂದೆಯೂ ಇದೇ ಕಾರಣವಾಗಿರುತ್ತದೆ. ಉದಾರವಾದಿಗಳಿಗೆ ತಮ್ಮ ಅಳತೆಗೋಲಿನ ಬಗ್ಗೆ, ಮತ್ತು ಅದರಲ್ಲಿರುವ ಪರಿಕಲ್ಪನೆಗಳಾದ ಸಮಾನತೆ, ಹಕ್ಕುಗಳು, ಸಾಮಾಜಿಕ ನ್ಯಾಯ ಇವುಗಳ ಬಗ್ಗೆ ಬಹಳ ನಿಖರವಾದ, ಖಚಿತವಾದ ವಾದಗಳಿರಬಹುದು; ಏಕೆ ಈ ಪರಿಕಲ್ಪನೆಗಳಿಗೆ ಸಾರ್ವತ್ರಿಕವಾದ ಹರವಿದೆ, ಏಕೆ ಈ ಪರಿಕಲ್ಪನೆಗಳು ಮಿಕ್ಕೆಲ್ಲಾ ಸಾಮಾಜಿಕ ಪರಿಕಲ್ಪನೆಗಳಿಗಿಂತ ಮೊದಲ ಆದ್ಯತೆಯ ಮೇಲೆ ಈಡೇರಬೇಕು ಇತ್ಯಾದಿ ವಿಚಾರಗಳ ಬಗ್ಗೆ ಉದಾರವಾದೀ ಚಿಂತನೆಯಲ್ಲಿ ಸಾಕಷ್ಟು ಬರವಣಿಗೆಗಳಿವೆ. ಆದರೆ, ಈ ವಾದಗಳೆಲ್ಲಾ ನಿಂತಿರುವುದು ಕೆಲವು ಉದಾರವಾದೀ ನಂಬಿಕೆಗಳ ಮೇಲೆಯೇ ಆದ್ದರಿಂದ, ಅದರ ಹೊರಗಡೆ ಇಂತಹ ವಾದಗಳನ್ನು ಸಮರ್ಥಿಸುವುದು ಕಷ್ಟವೇ ಸರಿ. 

ಅದು ಏಕೆ ಹಾಗೆ ಎನ್ನುವುದನ್ನೂ ಸ್ವಲ್ಪ ಗಮನಿಸಬೇಕು. ಒಂದು ಸಮಾಜದಲ್ಲಿ ಬೇರೆ ಬೇರೆ ಮೌಲ್ಯಗಳನ್ನು ಪಾಲಿಸುವ ಗುಂಪುಗಳಿವೆ ಎಂದು ಇಟ್ಟುಕೊಳ್ಳೋಣ. ಈಗ ಈ ಗುಂಪುಗಳ ನಡುವೆ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಚರ್ಚೆಯನ್ನು ಪ್ರಾರಂಭ ಮಾಡಬೇಕೆಂದರೆ, ಎಲ್ಲರೂ ಒಪ್ಪಿಕೊಳ್ಳುವ ಕೆಲವು ನಿತ್ಯಜೀವನದ ಮೌಲ್ಯಗಳ ಆಧಾರದ ಮೇಲೆ ಪ್ರಾರಂಭಿಸಬೇಕೇ ಹೊರತೂ, ಯಾವುದೋ ಒಂದು ಗುಂಪು ನಂಬುವ ಮೌಲ್ಯಗಳ ಆಧಾರದ ಮೇಲೆ ಪ್ರಾರಂಭಿಸಲು ಬರುವುದಿಲ್ಲ. ಹಾಗೆ ಮಾಡಲು ತೊಡಗಿದರೆ, ಅಂತಹ ಚರ್ಚೆ ಹಿಂಸೆಗೆ ಈಡುಮಾಡದೇ ನಿರ್ವಾಹವಿಲ್ಲ. ನಿತ್ಯಜೀವನದಲ್ಲಿ ಎಲ್ಲರೂ ಒಪ್ಪಿಕೊಳ್ಳುವ ಮೌಲ್ಯಗಳು ಏನಿರುತ್ತವೆಯೋ ಅವನ್ನು ಆಧರಿಸಿ ಅದರ ಮೇಲೆ ಇನ್ನೂ ಹೆಚ್ಚು ಅಮೂರ್ತವಾದ, ಹೆಚ್ಚು ವಿಶಾಲವಾದ, ಮತ್ತು ಸಾಧಾರಣವಾಗಿ ಉದಾರವಾದಿಗಳಿಗೆ ಪ್ರಿಯವಾಗುವ ಮೌಲ್ಯಗಳನ್ನು ಸ್ಥಾಪಿಸಬಹುದೇ ಹೊರತೂ, ಚರ್ಚೆಯ ಪ್ರಾರಂಭಕ್ಕೆ ಮೊದಲೇ ಇಂತಹ ಅಮೂರ್ತ ಮೌಲ್ಯಗಳನ್ನು ಕಟ್ಟುನಿಟ್ಟಾಗಿ ಎಲ್ಲರೂ ಒಪ್ಪಿಕೊಳ್ಳಬೇಕೆಂದು ಹೇಳಬರುವುದಿಲ್ಲ. ಅಂದಮೇಲೆ ಮಿಕ್ಕೆಲ್ಲ ಮೌಲ್ಯಗಳಂತೆ ಉದಾರವಾದಿ ಮೌಲ್ಯಗಳೂ ಕೂಡಾ ಒಂದು ಸಂವಾದದ ಸಂದರ್ಭದ ಭಾಗವಾಗಿ ರೂಪುಗೊಳ್ಳುವಂಥವೇ ಹೊರತೂ, ಅದನ್ನು ಈ ಎಲ್ಲಾ ಸಂದರ್ಭಗಳಾಚೆಗೆ, ಅಥವಾ ಈ ಸಂವಾದಗಳಿಗೂ ಮುನ್ನವೇ ಸ್ಥಾಪಿತ ಸತ್ಯ ಎನ್ನುವಂತೆ ಸ್ವೀಕರಿಸಲು ಬರುವುದಿಲ್ಲ. ಹಾಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತೀ ಬಾರಿ ಒಂದು ವಿಷಯದ ಬಗ್ಗೆ ಸಹಮತವನ್ನು ರೂಪಿಸಬೇಕಾದಾಗಲೂ, ಆ ಸಂವಾದದ ಭಾಗವಾಗಿ ಇಂತಹ ಮೌಲ್ಯಗಳು ಸಾಧಿತವಾಗುತ್ತವೆಯೇ ಹೊರತೂ, ಪ್ರಜಾಪ್ರಭುತ್ವ ಎಂದಾಕ್ಷಣ ಯಾವುದೋ ಒಂದಷ್ಟು ಪ್ರಜಾಪ್ರಭುತ್ವದ ಮೌಲ್ಯಗಳು ಎನ್ನುವ ಸಿದ್ಧಮಾದರಿಯ ಮೌಲ್ಯಗಳಿರುವುದಿಲ್ಲ. 

ಅಂದಮೇಲೆ, ಒಂದು ಪ್ರಜಾಪ್ರಭುತ್ವವನ್ನು ಕಟ್ಟಬೇಕೆಂದರೆ, ಉದಾರವಾದೀ ಮೌಲ್ಯಗಳೇ ಅತ್ಯಂತ ಸಾರ್ವತ್ರಿಕ ಮೌಲ್ಯಗಳೆಂದು ಎಲ್ಲರೂ ಒಪ್ಪಿಕೊಳ್ಳಲೇಬೇಕು ಎಂದು ಕಡ್ಡಾಯ ಮಾಡಲು ಬರುವುದಿಲ್ಲ. ಹಾಗಾದರೆ ಸಮಾನತೆ, ಹಕ್ಕುಗಳು, ಸಾಮಾಜಿಕ ನ್ಯಾಯ ಇಂತಹ ಅತೀ ಮುಖ್ಯವಾದ ಉದಾರವಾದಿ ಮೌಲ್ಯಗಳನ್ನು ಹೇಗೆ ನೋಡಬೇಕು? ಅವು ಸಾರ್ವತ್ರಿಕ ಪರಿಕಲ್ಪನೆಗಳÀಲ್ಲದಿದ್ದರೆ ಮತ್ತೇನು? ಇದಕ್ಕೆ ಉತ್ತರ ಅವನ್ನು ಅನ್ವೇಷಕ ಪರಿಕಲ್ಪನೆಗಳು ಎನ್ನುವ ರೀತಿಯಲ್ಲಿ ನೋಡಬೇಕು ಎಂಬುದು. ಸಾಮಾನ್ಯವಾಗಿ, ನಮ್ಮ ನಿತ್ಯ ಜೀವನದಲ್ಲೇ ಆಗಲಿ, ವೈಜ್ಞಾನಿಕ ಸಂಶೋಧನೆಯಲ್ಲೇ ಆಗಲೀ, ಹೊಸ ಸಮಸ್ಯೆಗಳನ್ನು ಎದುರಿಸುವಾಗ ಬಳಸಬೇಕಾದ ಸರಿಯಾದ ವಿಧಾನಗಳು ಮತ್ತು ಹತಾರಗಳು ಯಾವುವು ಎಂದು ಮೊದಲೇ ತಿಳಿದಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ನಾವು ಕೆಲವು ಉಪಯುಕ್ತ ಅನ್ವೇಷಕ ಪರಿಕಲ್ಪನೆಗಳ ಮೊರೆ ಹೋಗುತ್ತೇವೆ. ಉದಾಹರಣೆಗೆ, ಗೊತ್ತಿರದ ಹೊಸ ಶಹರದಲ್ಲಿ ಮಾರುಕಟ್ಟೆಯನ್ನು ಹುಡುಕಿಕೊಂಡು ಹೋಗುವಾಗ ಕವಲು ದಾರಿ ಎದುರಾದರೆ, ಸಾಮಾನ್ಯವಾಗಿ ಹೆಚ್ಚು ಮನೆಗಳಿರುವ ದಾರಿಯನ್ನು ಬಿಟ್ಟು ಹೆಚ್ಚು ಅಂಗಡಿಗಳು ಇರುವ ದಾರಿಯನ್ನು ಆಯ್ದುಕೊಳ್ಳುತ್ತೇವೆ. ಆ ದಾರಿ ಮಾರುಕಟ್ಟೆಗೆ ಹೋಗುವ ಸಾಧ್ಯತೆ ಹೆಚ್ಚು ಎನ್ನುವ ಕಾರಣದಿಂದ. ಹಾಗೆಯೇ, ವಿಜ್ಞಾನದಲ್ಲೂ, ಒಂದು ಹೊಸ ಸಮಸ್ಯೆಯನ್ನು ಪಳಗಿಸುವ ಕ್ರಮ ಗೊತ್ತಿಲ್ಲದೇ ಹೋದಾಗ, ಆ ಸಮಸ್ಯೆಯ ವಿವಿಧ ಆಯಾಮಗಳನ್ನು ಕ್ವಾಂಟಿಫೈ ಮಾಡಬಹುದೇ ಅಂದರೆ ನಿರ್ದಿಷ್ಟ ಪ್ರಮಾಣಗಳ ಲೆಕ್ಕಕ್ಕೆ ಇಳಿಸಬಹುದೇ ಎಂದು ಹುಡುಕುತ್ತೇವೆ. ಇವೇ ಅನ್ವೇಷಕ ಪರಿಕಲ್ಪನೆಗಳು. ಹ್ಯೂರಿಸ್ಟಿಕ್ ಪರಿಕಲ್ಪನೆಗಳು ಎಂದು ಕರೆಯಬಹುದಾದ್ದು. ಇವಕ್ಕೆ ಸಾರ್ವತ್ರಿಕತೆಯ ಲಕ್ಷಣವೂ ಇಲ್ಲ, ಸತ್ಯದ ಲಕ್ಷಣವೂ ಇಲ್ಲ. ಇವು ಕೇವಲ ಸಾಂದರ್ಭಿಕವಾಗಿ ಉಪಯುಕ್ತವಾದಂಥವು. ಉದಾರವಾದಿ ಮೌಲ್ಯಗಳನ್ನೂ ಕೂಡಾ ಸಾರ್ವತ್ರಿಕ ಸತ್ಯವೆನ್ನುವ ಬದಲು, ಸಾಮಾಜಿಕ ಚರ್ಚೆಗಳನ್ನು ನಡೆಸಲು, ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಶೋಧಿಸಲು ಒಬ್ಬ ಉದಾರವಾದಿಗೆ ಇರಬಹುದಾದ ಅನ್ವೇಷಕ ಪರಿಕಲ್ಪನೆಗಳು ಎಂದೇ ಸ್ವೀಕರಿಸಬೇಕು. ಅದರ ಬದಲು, ಇಂತಹ ಅನ್ವೇಷಕ ಪರಿಕಲ್ಪನೆಗಳನ್ನು ಸಾರ್ವತ್ರಿಕ ಪರಿಕಲ್ಪನೆಗಳು ಎಂದುಕೊಳ್ಳುವುದರಿಂದಲೇ, ಉದಾರವಾದಿಗಳು ತಮ್ಮ ಮೌಲ್ಯಗಳಿಗೆ ಭಿನ್ನವಾದ ಸಂಪ್ರದಾಯಗಳ ಬಗ್ಗೆ ಅಷ್ಟು ನಿಷ್ಠುರ ನಿಲುವುಗಳನ್ನು ತಾಳುವುದು. 

ಹಾಗಾಗಿ, ಎಲ್ಲೆಲ್ಲಿ ಉದಾರವಾದಿ ಮೌಲ್ಯಗಳು ಮತ್ತು ಸಂಪ್ರದಾಂiÀiಗಳ ನಡುವೆ ಭಿನ್ನಾಭಿಪ್ರಾಯ ತಲೆದೋರುತ್ತದೋ, ಅಲ್ಲೆಲ್ಲಾ ಸಮಾನತೆ, ಸಾಮಾಜಿಕ ನ್ಯಾಯ, ಹಕ್ಕುಗಳು ಎಂದು ಮುಂತಾದ ಉದಾರವಾದಿ ಮೌಲ್ಯಗಳಿಗೇ ಪ್ರಾಶಸ್ತ್ಯ ಎಂದು ವಾದಿಸುವುದು ಸಾಧುವೂ ಅಲ್ಲ, ಉಪಯುಕ್ತವೂ ಅಲ್ಲ. ಹೀಗೆ ಮಾಡುವುದು ಹೇಗೆ ಸಂಪ್ರದಾಯನಿಷ್ಠರು ತಮ್ಮ ಮೌಲ್ಯಗಳಿಗೇ ಪ್ರಥಮ ಪ್ರಾಶಸ್ತ್ಯ ಎಂದು ವಾದಿಸುತ್ತಾರೋ ಆ ರೀತಿಯ ಕ್ರಮವಾಗುತ್ತದೆಯೇ ಹೊರತೂ ಅದಕ್ಕಿಂತ ಉತ್ತಮ ಕ್ರಮವೇನೂ ಆಗುವುದಿಲ್ಲ. ಹೇಗೆ, ಸಂಪ್ರದಾಯವಾದಿಗಳ ಮೌಲ್ಯಗಳು ಅವರ ನಿರ್ದಿಷ್ಟ ಸಂದರ್ಭಗಳ ಆಚೆಗೆ ಇತರರಿಗೆ ಅರ್ಥವಾಗುವುದಿಲ್ಲವೋ, ಹಾಗೆಯೇ ಉದಾರವಾದಿ ಮೌಲ್ಯಗಳೂ ಕೂಡಾ. ಹೀಗಿರುವಾಗ ಈ ಮೌಲ್ಯವನ್ನು ಒಪ್ಪಬೇಕೋ ಅಥವಾ ಆ ಮೌಲ್ಯವನ್ನು ಒಪ್ಪಬೇಕೋ ಎನ್ನುವ ವಾದಕ್ಕಿಂತ ಮೊದಲು, ಈ ಮೌಲ್ಯಗಳಲ್ಲಿ ಯಾವುದಾದರೂ ಒಂದಕ್ಕೆ ಪಕ್ಷಪಾತಿಯಾಗಿರುವ ರೀತಿಯ ವಾದಗಳಿಂದ ಸಮಾನದೂರ ಕಾಯ್ದುಕೊಳ್ಳುವ ರೀತಿಯ ಸಂವಾದದ ರೂಪುರೇಷೆ ಹೇಗಿರಬೇಕು ಎಂದು ಚಿಂತಿಸುವುದೇ ಸರಿಯಾದ ಕ್ರಮ. 

ಹಕ್ಕಿನ ತತ್ವ ಮತ್ತು ಸಂಪ್ರದಾಯಗಳು
ಇತ್ತೀಚಿನ ದಿನಗಳಲ್ಲಿ ವಿವಾದಾಸ್ಪದವಾದ ಸಂಪ್ರದಾಯಗಳನ್ನು ಟೀಕಿಸಲು ಉದಾರವಾದಿಗಳು ಹಕ್ಕಿನ ತತ್ವವನ್ನು ಬಳಸುತ್ತಿರುವುದನ್ನು ಕಾಣುತ್ತೇವೆ. ಈ ದೇಶದ ನ್ಯಾಯಾಲಯಗಳೂ ಕೂಡಾ ದೇವಸ್ಥಾನಗಳೊಳಗೆ, ಮಸೀದಿಗಳೊಳಗೆ ಜಾತಿ, ಲಿಂಗÀ, ಸಾಮಾಜಿಕ ಸ್ಥಾನಮಾನ ಇವುಗಳನ್ನು ಆಧರಿಸಿ ಪ್ರವೇಶ ನಿರಾಕರಿಸುವುದು, ಮಡೆಸ್ನಾನದಂತಹ ಆಚರಣೆಗಳನ್ನು ಮಾಡುವುದು ಇವೆಲ್ಲಾ ಜನರ ಮೂಲಭೂತ ಹಕ್ಕನ್ನು ಕಸಿದುಕೊಂಡಂತಾಗುವುದಿಲ್ಲವೇ ಎಂದು ಪ್ರಶ್ನಿಸಿವೆ. ಇಂತಹ ಸಾಂಪ್ರದಾಯಿಕ ಆಚರಣೆಗಳು ನಮಗೆ ಹೀನಾಯವಾಗಿ ಕಾಣುವುದಕ್ಕೆ ನಮ್ಮನಮ್ಮ ನಿರ್ದಿಷ್ಟ ಪರಿಸರಗಳು ರೂಪಿಸಿದ ಮಾನದಂಡಗಳು ಕಾರಣವಾಗಿರುತ್ತವೆ. ಅಂತಹ ಮಾನದಂಡಗಳ ಬಗ್ಗೆ ನಾವೇನೂ ಸಂಕೋಚ ಪಡುವ ಅಗತ್ಯವಿಲ್ಲ, ಅಥವಾ ಆ ಮಾನದಂಡಗಳನ್ನು ಬಿಟ್ಟುಕೊಡಬೇಕಾದ ಅಗತ್ಯವೂ ಇಲ್ಲ. ಆದರೆ ನಮ್ಮ ಪರಿಸರದಲ್ಲಿ ನಾವು ಕಲಿತ ಮಾನದಂಡಗಳೇ ಎಲ್ಲಾ ಕಾಲದೇಶಗಳಿಗೂ ಸಾರ್ವತ್ರಿಕ ಮಾನದಂಡಗಳು ಎನ್ನುವಂಥ ಹಠವನ್ನು ಮಾತ್ರ ಬಿಟ್ಟುಕೊಡಲೇಬೇಕು. ಏಕೆಂದರೆ ಮೇಲೆ ವಾದಿಸಿದಂತೆ ಅಂತಹ ಸಾರ್ವತ್ರಿಕ ಮಾನದಂಡಗಳ ಮಾತು ತಾರ್ಕಿಕವಾಗಿಯೂ ಸಮರ್ಥನೀಯವಲ್ಲ ಮತ್ತು ಒಂದು ರಾಜಕೀಯ ತಂತ್ರವಾಗಿಯೂ ಉಪಯುಕ್ತವಲ್ಲ. 

ನಮ್ಮ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎನ್ನುವ ಕಾರಣ ನೀಡಿ ಒಂದು ಸಾಂಪ್ರದಾಯಿಕ ಆಚರಣೆಯನ್ನು ವಿರೋಧಿಸುವುದರಲ್ಲಿ ಹಲವಾರು ಸಮಸ್ಯೆಗಳಿವೆ. ಹಕ್ಕುಗಳ ಪರಿಕಲ್ಪನೆಗೆ ಒಂದು ಅರ್ಥ ಬರುವುದೇ ಕೆಲವು ನಿರ್ದಿಷ್ಟ ಲಕ್ಷಣಗಳ ಮಿತಿಯ ಒಳಗೆ ಅದನ್ನು ಅರ್ಥೈಸುವುದರಿಂದ. ಏನನ್ನಾದರೂ ನಮ್ಮ ಹಕ್ಕು ಎಂದು ವಾದಿಸುವುದಕ್ಕೆ ಬೇಕಾದ ಒಂದು ಮುಖ್ಯ ಲಕ್ಷಣವೆಂದರೆ ಅದು ನಮ್ಮ ನಾಗರಿಕ ಜೀವನಕ್ಕೆ ಸಂಬಂಧಿಸಿದ್ದಾಗಿರಬೇಕು ಎನ್ನುವುದು. ಒಂದು ಪ್ರಜಾಪ್ರಭುತ್ವದಲ್ಲಿ ನಾಗರಿಕರು ತಮಗೆ ತಾವೇ ಕಾನೂನುಗಳನ್ನು ಕೊಟ್ಟುಕೊಳ್ಳುತ್ತಾರೆ. ಅಂದಮೇಲೆ, ಒಬ್ಬ ನಾಗರಿಕ ಇಂತಹ ಕಾನೂನುಗಳನ್ನು ಸ್ವತಂತ್ರವಾಗಿ, ಸ್ವೇಚ್ಛೆಯಿಂದ ಕೊಟ್ಟುಕೊಳ್ಳಬೇಕೆಂದರೆ, ಅವನ ನಿರ್ಧಾರದ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಯಾವ ಊನವೂ, ನಿರ್ಬಂಧವೂ ಇರಬಾರದು. ಅಂತಹ ನಿರ್ಬಂಧಗಳ ವಿರುದ್ಧ ನಮಗೆ ರಕ್ಷಣೆ ಇರಬೇಕು. ನಮ್ಮ ಒಳಿತನ್ನು ನಾವೇ ನಿರ್ಧರಿಸುವ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ನಾಗರಿಕರಿಗೆ ತಮ್ಮ ನಿರ್ಧಾರಗಳನ್ನು ಮುಕ್ತವಾಗಿ, ವಿವೇಕಯುತವಾಗಿ ಮಾಡುವುದಕ್ಕೆ ಯಾವಯಾವ ಅಡೆತಡೆಗಳಿವೆಯೋ ಅಂತಹ ಅಡೆತಡೆಗಳ ವಿರುದ್ಧ ಇರುವ ರಕ್ಷಣೆಯೇ ಹಕ್ಕುಗಳು. 

ಹಾಗಾಗಿಯೇ, ಇಂತಹ ಯಾವ ರೂಪದ ನಿರ್ಬಂಧವೇ ಆಗಲಿ, ಉದಾಹರಣೆಗೆ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು, ವಾಕ್‍ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು, ನಮ್ಮ ಜೀವ ಅಥವಾ ರಕ್ಷಣೆಗೆ ಮಾರಕವಾಗುವ ರೀತಿಯಲ್ಲಿ ನಮ್ಮ ಬದುಕುವ ಹಕ್ಕನ್ನು ಕಸಿದುಕೊಳ್ಳುವುದು ಇವೆಲ್ಲವೂ ನಮ್ಮ ನಾಗರಿಕ ಜೀವನದ ಮೂಲರೂಪ ಮತ್ತು ಉದ್ದೇಶವನ್ನೇ ವಿಕೃತಗೊಳಿಸಿದಂತೆ. ಆದರೆ, ಯಾವ ವಿಚಾರಗಳು ಇಂತಹ ನಾಗರಿಕ ಜೀವನದ ಭಾಗವಾಗುವುದಿಲ್ಲವೋ ಅವುಗಳನ್ನು ಹಕ್ಕಿನ ಪರಿಧಿಯೊಳಗೆ ತರಲಾಗುವುದಿಲ್ಲ. ಈ ಕಾರಣದಿಂದಲೇ, ನ್ಯಾಯಾಲಯಗಳು ಮತ್ತು ಸರಕಾರಗಳು ವೈಜ್ಞಾನಿಕ ಸಂಶೋಧನೆಯ ಫಲಿತಾಂಶಗಳು ಏನಾಗಿರಬೇಕು, ಯಾವ ದೇವರನ್ನು ಯಾವ ರೀತಿಯಲ್ಲಿ ಉಪಾಸನೆ ಮಾಡಬೇಕು ಎನ್ನುವ ರೀತಿಯ ಕಾನೂನುಗಳನ್ನು ಮಾಡುವುದಿಲ್ಲ. ಏಕೆಂದರೆ ಈ ವಿಚಾರಗಳಿಗೂ ನಮ್ಮ ನಾಗರಿಕ ಬದುಕಿಗೂ ಯಾವ ನೇರ ಸಂಬಂಧವೂ ಇಲ್ಲ ಎನ್ನುವ ಕಾರಣಕ್ಕೆ. ಇಂತಹ ವಿಚಾರಗಳಲ್ಲಿ ನಮ್ಮ ನಾಗರಿಕ ಜೀವನದ ಸ್ವಾತಂತ್ರ್ಯಕ್ಕೆ ಚ್ಯುತಿ ಬರುವ ಸಾಧ್ಯತೆ ಇದ್ದರಷ್ಟೇ ನ್ಯಾಯಾಲಯಗಳು ಮಧ್ಯೆ ಪ್ರವೇಶಿಸುವುದು. 

ಉದಾಹರಣೆಗೆ, ಶಿಕ್ಷಣವನ್ನು ಒಂದು ಹಕ್ಕು ಎಂದು ನಾವು ವಾದಿಸಿದಾಗ, ಅದರ ಅರ್ಥವೇನೆಂದರೆ, ಒಬ್ಬ ವ್ಯಕ್ತಿಗೆ ತನ್ನ ನಾಗರಿಕ ಬದುಕಿನ ಜವಾಬುದಾರಿಗಳು ಮತ್ತು ಸೌಲಭ್ಯಗಳನ್ನು ಅನುಭವಿಸಲು ಶಿಕ್ಷಣ ಒಂದು ಅತ್ಯಗತ್ಯವಾದ ಒಳಿತು. ಹಾಗಾಗಿ ಈ ಒಳಿತನ್ನು ಜಾತಿ, ಮತ, ಲಿಂಗ, ಇವುಗಳ ಆಧಾರದ ಮೇಲೆ ಯಾರಿಗೂ ನಿರಾಕರಿಸಲು ಬರುವುದಿಲ್ಲ. ಎಲ್ಲರೂ ಈ ಒಳಿತಿಗೆ ಸಮಾನವಾಗಿ ಭಾಜನರು. ಈಗ ಇಲ್ಲಿ ಇನ್ನೊಂದು ಮುಖ್ಯ ಅಂಶ ಗಮನಿಸಬೇಕು. ಶಿಕ್ಷಣದಿಂದ ಆಗುವ ಒಳಿತು ಏನು ಎಂದು ಒಂದು ಆಧುನಿಕವಾದ, ವೈಚಾರಿಕವಾದ ಸೆಕ್ಯುಲರ್ ಭಾಷೆಯಲ್ಲಿ ಹೇಳಲು ಸಾಧ್ಯ. ಅಥವಾ ಈಗ ಸದ್ಯಕ್ಕೆ ಸಾಧ್ಯವಿಲ್ಲದಿದ್ದರೂ, ಹುಡುಕಿದರೆ ಅಂತಹ ವಿವರಣೆ ದೊರಕುವುದು ಅಸಾಧ್ಯವೇನಲ್ಲ ಎಂದು ಎಲ್ಲರೂ ಒಪ್ಪುತ್ತಾರೆ. ಇದೇ ರೀತಿ, ಸಾಂಪ್ರದಾಯಿಕ ಆಚಾರಗಳು ಮತ್ತು ರೂಢಿಗಳ ಬಗ್ಗೆ ನಾವು ಹಕ್ಕಿನ ಪರಿಕಲ್ಪನೆಯನ್ನು ಉಪಯೋಗಿಸಿ ಮಾತನಾಡಬೇಕೆಂದರೆ, ಅಂತಹ ಆಚಾರಗಳಲ್ಲಿ ಇರುವ ಒಳಿತು ಏನು ಎಂದು ಒಂದು ಆಧುನಿಕವಾದ, ವೈಚಾರಿಕವಾದ, ಸೆಕ್ಯುಲರ್ ಆದ ಭಾಷೆಯಲ್ಲಿ ತೋರಿಸಬೇಕು. 

ಆದರೆ ಸಮಸ್ಯೆ ಇರುವುದು ಇಲ್ಲಿ. ಸಾಂಪ್ರದಾಯಿಕ ಆಚಾರಗಳಲ್ಲಿ, ರೂಢಿಗಳಲ್ಲಿ ಇರುವ ಒಳಿತು ಎನ್ನುವುದು ಇಂತಹ ಸೆಕ್ಯುಲರ್ ಆದ, ವೈಚಾರಿಕವಾದ ಭಾಷೆಗೆ ಹೊರತಾದದ್ದು. ಹಾಗೆ ಹೊರತಾಗಿರುವುದರಿಂದಲೇ ಅದು ಸಾಂಪ್ರದಾಯಿಕ ಮತ್ತು ರೂಢಿಗತ ಆಚರಣೆ ಎಂದಾಗಿರುವುದು. ಹಾಗೆಂದ ಮಾತ್ರಕ್ಕೆ ಇಂತಹ ಆಚರಣೆಗಳನ್ನು ನಿರಾಕರಿಸಲು ಬರುತ್ತದೆಯೋ ಎಂದರೆ, ಅದೂ ಸಾಧ್ಯವಿಲ್ಲ. ಏಕೆಂದರೆ, ಭಾರತದ ಸಂವಿಧಾನ ಮತ್ತು ಜಾಗತಿಕ ಮಾನವ ಹಕ್ಕುಗಳ ಒಪ್ಪಂದಗಳೆಲ್ಲವೂ ಧಾರ್ಮಿಕ ಅಥವಾ ರಿಲಿಜಿಯಸ್ ಹಕ್ಕುಗಳನ್ನು ಮೂಲಭೂತ ಹಕ್ಕುಗಳೆಂದು ಮಾನ್ಯಮಾಡಿವೆ. ಅಂದಮೇಲೆ, ಇಲ್ಲೊಂದು ವಿಚಿತ್ರ ಸಮಸ್ಯೆ ಏಳುತ್ತದೆ. ಧಾರ್ಮಿಕ ಸಂಪ್ರದಾಯಗಳನ್ನು ಹಕ್ಕುಗಳು ಎಂದು ಮಾನ್ಯ ಮಾಡಲೇಬೇಕು. ಆದರೆ, ಹಾಗೆ ಮಾಡಬೇಕೆಂದರೆ ಆ ಹಕ್ಕುಗಳಲ್ಲಿರುವ ಒಳಿತು ಏನು ಎಂಬುದನ್ನು ಒಂದು ಸೆಕ್ಯುಲರ್ ಆದ ಭಾಷೆಯಲ್ಲಿ ಹೇಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ಭಾರತದಲ್ಲಿ ಕೋರ್ಟುಗಳು ಕಂಡುಕೊಂಡಿರುವ ಒಂದು ಮಧ್ಯಮ ಮಾರ್ಗವೆಂದರೆ, ಯಾವ ಸಂಪ್ರದಾಯಗಳು ಒಂದು ರಿಲಿಜನ್ನಿನ ಅತ್ಯಗತ್ಯ ಲಕ್ಷಣಗಳು ಮತ್ತು ಯಾವುವು ಅಲ್ಲ ಎನ್ನುವ ಪರೀಕ್ಷೆ. ಅತ್ಯಗತ್ಯ ಸಂಪ್ರದಾಯಗಳ ಪರೀಕ್ಷೆ ಅಥವಾ ಎಸೆನ್‍ಶಿಯಲ್ ಕಸ್ಟಮ್ಸ್ ಟೆಸ್ಟ್. ಯಾವ ಸಾಂಪ್ರದಾಯಿಕ ರೂಢಿಗಳು ಪ್ರಾಚೀನವಾದದ್ದೋ, ಅವಿಚ್ಛಿನ್ನವಾಗಿ ಪಾಲಿಸಿಕೊಂಡು ಬರಲಾಗಿದೆಯೋ ಮತ್ತು ವಿವೇಕಯುತವಾಗಿವೆಯೋ ಅವನ್ನು ಮಾತ್ರಾ ಅತ್ಯಗತ್ಯ ಸಂಪ್ರದಾಯಗಳು ಎಂದು ನಿರ್ಧರಿಸಬೇಕು. ಮಿಕ್ಕ ಸಂಪ್ರದಾಯಗಳನ್ನು ರಿಲಿಜಿಯಸ್ ಹಕ್ಕುಗಳ ಪರಿಧಿಯೊಳಗೆ ತರಬಾರದು ಎನ್ನುವುದು ಈ ಎಸೆನ್‍ಶಿಯಲ್ ಕಸ್ಟಮ್ಸ್ ಟೆಸ್ಟ್‍ನ ಅಭಿಮತ. ಇತ್ತೀಚೆಗೆ, ಶಬರಿಮಲೆ, ಮಡೆಸ್ನಾನ, ಹಾಜಿ ಅಲಿ ದರ್ಗಾ ಮತ್ತು ಶನಿಶಿಂಗ್ಣಾಪುರದ ವಿಚಾರಗಳಲ್ಲಿ, ಅಷ್ಟೇ ಏಕೆ ಈ ಹಿಂದೆ ಬೆತ್ತಲೆ ಸೇವೆಯ ವಿಚಾರದಲ್ಲೂ ಕೂಡಾ ಭಾರತದ ಕೋರ್ಟುಗಳು ಬಳಸಿರುವುದು ಈ ಪರೀಕ್ಷೆಯನ್ನೇ. 

ಆದರೆ ಈ ಪರೀಕ್ಷೆಯಲ್ಲಿ ಹಲವಾರು ಸಮಸ್ಯೆಗಳಿವೆ. ಒಂದು ಸಂಪ್ರದಾಯದ ರೂಢಿಗಳು ಒಂದು ಸಮುದಾಯಕ್ಕೆ ಎಷ್ಟು ಮುಖ್ಯ ಎನ್ನುವುದು ಮುಖ್ಯವೇ ಹೊರತೂ ಅದು ಎಷ್ಟು ಪ್ರಾಚೀನವಾದದ್ದು ಎನ್ನುವುದಲ್ಲ ಎನ್ನುವುದು ಒಂದು ತಕರಾರು. ಜೊತೆಗೆ, ವಿವೇಕಯುತ ರೂಢಿಗಳು ಎಂದರೆ ಯಾವ ಮಾನದಂಡದಿಂದ ಅಳೆಯಲಾಗುವ ವಿವೇಕ ಎನ್ನುವುದು ಇನ್ನೊಂದು. ಹಾಗಾಗಿ, ಈ ಪರೀಕ್ಷೆಯ ಸಿಂಧುತ್ವದ ಬಗ್ಗೆಯೇ ಪ್ರಶ್ನೆಗಳೆದ್ದಿವೆ. ಈ ತಕರಾರುಗಳ ಬಲಾಬಲಗಳು ಏನೇ ಇರಲಿ, ನಾವು ಇಲ್ಲಿ ಎತ್ತಿರುವ ತಕರಾರಂತೂ ಇವೆಲ್ಲಕ್ಕಿಂತಲೂ ಮೂಲಭೂತವಾದ್ದು ಎಂದೇ ನನ್ನ ನಂಬಿಕೆ. ಅದೇನೆಂದರೆ, ಒಂದು ಸಂಪ್ರದಾಯದ ಒಳಿತು ಏನು ಎನ್ನುವುದನ್ನು ಸೆಕ್ಯುಲರ್ ಆದ ಭಾಷೆಯಲ್ಲಿ ಹೇಳಲು ಸಾಧ್ಯವಿಲ್ಲದಿದ್ದ ಪಕ್ಷದಲ್ಲಿ ಅದನ್ನು ಯಾವ ರೀತಿಯ ಹಕ್ಕು ಎಂದು ಪರಿಗಣಿಸಬೇಕು ಎನ್ನುವುದು. ಇಲ್ಲಿ ಎರಡು ಸಾಧ್ಯತೆಗಳಿವೆ. ಮೊದಲ ಸಾಧ್ಯತೆ ಎಂದರೆ, ಉದಾರವಾದಿಗಳೂ ಕೂಡಾ ಸಂಪ್ರದಾಯನಿಷ್ಠರು ತಂತಮ್ಮ ಸಂಪ್ರದಾಯಗಳಲ್ಲಿ ಇರುವ ಒಳಿತು ಏನು ಎಂದು ಹೇಳುತ್ತಾರೋ ಅದನ್ನು ಒಪ್ಪಿಕೊಳ್ಳುವುದು. ಆದರೆ, ಇದು ಅಪ್ರಾಮಾಣಿಕವಾಗುತ್ತದೆ. ಏಕೆಂದರೆ, ಸಂಪ್ರದಾಯಗಳನ್ನು ವಿರೋಧಿಸುವ ಸಲುವಾಗಿಯೇ ತಾನೇ ಉದಾರವಾದಿಗಳು ಈ ಎಲ್ಲಾ ಚರ್ಚೆಗಳನ್ನು ಮಾಡುತ್ತಿರುವುದು? ಅಂದಮೇಲೆ, ತಾವು ಒಪ್ಪದ ಒಂದು ವಿಚಾರವನ್ನೇ ತಮ್ಮ ವಾದಕ್ಕೆ ಸಮರ್ಥನೆಯನ್ನಾಗಿ ಬಳಸಿಕೊಳ್ಳಲು ಬರುವುದಿಲ್ಲ. ಇಲ್ಲಿರುವ ಎರಡನೇ ಸಾಧ್ಯತೆ ಎಂದರೆ, ಮತ್ತು ನನ್ನ ಪ್ರಕಾರ, ಅತ್ಯಂತ ಸೂಕ್ತ ಸಾಧ್ಯತೆ ಎಂದರೆ, ಸಂಪ್ರದಾಯಗಳ ಒಳಿತಿರುವುದು ಅದನ್ನು ರೂಢಿಗತವಾಗಿ ಪಾಲಿಸುವ ಕ್ರಮದಲ್ಲೇ ಹೊರತೂ ಬೇರೆ ಇನ್ನು ಯಾವುದರಲ್ಲೂ ಅಲ್ಲ ಎಂದು ಒಪ್ಪಿಕೊಳ್ಳುವುದು. ಅಂದಮೇಲೆ, ಸಂಪ್ರದಾಯಗಳನ್ನು ನಿಯಮಬದ್ಧವಾಗಿ ಪಾಲಿಸುವುದೇ ಸಂಪ್ರದಾಯಗಳಲ್ಲಿರುವ ಒಳಿತೇ ಹೊರತೂ, ಅದಕ್ಕಿಂತ ಹೊರತಾದ, ಬೇರೆಯಾದ ಇನ್ನು ಯಾವ ಒಳಿತೂ ಸಂಪ್ರದಾಯಗಳಲ್ಲಿ ಇಲ್ಲ. ಈ ವಾದದ ಶಕ್ತಿ ಏನೆಂದರೆ, ಇದು ಸಂಪ್ರದಾಯವಾದಿಗಳು ತಂತಮ್ಮ ಆಚರಣೆಗಳಲ್ಲಿ ಏನೇನು ಒಳಿತಿದೆ ಎಂದು ನಂಬುತ್ತಾರೋ ಅದನ್ನು ಒಪ್ಪಿಕೊಳ್ಳಬೇಕಾದ ಆ ಕಟ್ಟುಪಾಡಿಗೆ ಬೀಳುವುದಿಲ್ಲ. ಸಂಪ್ರದಾಯನಿಷ್ಠರಲ್ಲಿ ಕೆಲವರ ಪ್ರಕಾರ ಮಡೆಸ್ನಾನದಿಂದ ಪಾಪಪರಿಹಾರವಾಗುತ್ತದೆ, ಇನ್ನು ಕೆಲವರ ಪ್ರಕಾರ ಹೆಂಗಸರು ದೇವಸ್ಥಾನದೊಳಕ್ಕೆ ಹೋದರೆ ಅದು ಅಪವಿತ್ರವಾಗುತ್ತವೆ. ಇವೆಲ್ಲಾ ನಿಜವೋ ಸುಳ್ಳೋ ಎನ್ನುವ ಗೊಡವೆಗೆ ಹೋಗದೇ, ನಾನು ಇಲ್ಲಿ ನಿರೂಪಿಸಿರುವ ಸಾಧ್ಯತೆಯು ಸಂಪ್ರದಾಯವನ್ನು ಪಾಲಿಸುವವರಿಗೆ ಅತೀ ಮುಖ್ಯವೆಂದು ಅನ್ನಿಸುವ ಸಂಪ್ರದಾಯನಿಷ್ಠೆಯ ಸಾಧ್ಯತೆಯನ್ನು ರಕ್ಷಿಸುತ್ತದೆ. ಜೊತೆಗೇ, ಉದಾರವಾದಿಗಳು ಸಂಪ್ರದಾಯನಿಷ್ಠರ ವಾದಗಳಿಗೆ ಸಿಲುಕದೇ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನೂ ರಕ್ಷಿಸಲು ಸಹಾಯಮಾಡುತ್ತದೆ. ಆದರೆ ನಮಗೆ ಈ ಲೇಖನದಲ್ಲಿ ಪ್ರಸ್ತುತವಾಗಿರುವ ಇದರ ಮುಖ್ಯ ಪರಿಣಾಮವನ್ನು ಗಮನಿಸಬೇಕು. ಒಂದು ಸಂಪ್ರದಾಯವನ್ನು ರೂಢಿಗತವಾಗಿ ಪಾಲಿಸುವುದೇ ಧಾರ್ಮಿಕ ಹಕ್ಕಿನ ನಿಜವಾದ ಒಳಿತು ಎನ್ನುವುದು ಸರಿ ಎಂದಾದರೆ, ಆ ಸಂಪ್ರದಾಯವನ್ನೇ ಬದಲಾಯಿಸುವ ಮೂಲಕ ಧಾರ್ಮಿಕ ಹಕ್ಕನ್ನು ಚಲಾಯಿಸಲು ಬರುವುದಿಲ್ಲ. ಅಂದಮೇಲೆ, ಹಕ್ಕಿನ ತತ್ವವನ್ನು ಬಳಸಿ ಉದಾರವಾದಿಗಳು ಸಂಪ್ರದಾಯಗಳನ್ನು ನಿರಾಕರಿಸುವ, ಬದಲಾಯಿಸುವ ಕ್ರಮ ಅಸಿಂಧುವಾಗುತ್ತದೆ.

ಇಲ್ಲೇ ಒಂದು ಸಂದೇಹವನ್ನೂ ಪರಿಹರಿಸಬೇಕು. ತರ್ಕಶಾಸ್ತ್ರದಲ್ಲಿ ಹೇಳುವ ಹಲವು ತರ್ಕದೋಷಗಳಲ್ಲಿ ಸಂಪ್ರದಾಯನಿಷ್ಠೆಯೂ ಒಂದು. ಅಂದರೆ, ಒಂದು ನಂಬಿಕೆ ಯಾಕೆ ಸತ್ಯ ಎನ್ನುವ ಪ್ರಶ್ನೆಗೆ ಅದು ತಲತಲಾಂತರದಿಂದ ಸಾಂಪ್ರದಾಯಿಕವಾಗಿ ಹಾಗೆಯೇ ನಂಬಿಕೊಂಡು ಬರಲಾಗಿದೆ; ಅದಕ್ಕೇ ಅದು ಸತ್ಯ ಎನ್ನುವ ರೀತಿಯ ವಾದ ತರ್ಕದೋಷವಾಗುತ್ತದೆ. ನನ್ನ ಈ ವಾದವೂ ಅಂಥದ್ದೇ ಸಂಪ್ರದಾಯನಿಷ್ಠೆಯ ದೋಷಕ್ಕೆ ಪಕ್ಕಾಗುವುದಿಲ್ಲವೇ ಎಂದು ಸಂದೇಹ ಬರಬಹುದು. ಆದರೆ, ಅಂತಹ ಸಂದೇಹ ಇಲ್ಲಿ ನಿರಾಧಾರವಾದದ್ದು. ಒಂದು ನಂಬಿಕೆಯನ್ನೋ ಅಥವಾ ವಾಕ್ಯವನ್ನೋ ಸಮರ್ಥಿಸಲು ಸಂಪ್ರದಾಯನಿಷ್ಠೆಯ ಕಾರಣವನ್ನು ಕೊಡುವುದು ತರ್ಕದೋಷವೇನೋ ಸರಿ. ಆದರೆ, ಒಂದು ಸಂಪ್ರದಾಯದ ಪಾಲನೆಯಲ್ಲೇ ಅದರ ಒಳಿತಿದೆ ಎನ್ನುವ ಕಾರಣಕ್ಕೆ ಆ ಸಂಪ್ರದಾಯದ ಪಾಲನೆಯನ್ನು ಸಮರ್ಥಿಸುವುದು ತರ್ಕದೋಷವಲ್ಲ. ಯಾಕೆಂದರೆ, ಇಲ್ಲಿ ನಾವು ಯಾವ ನಿರ್ದಿಷ್ಟ ಸಾಂಪ್ರದಾಯಿಕ ನಂಬಿಕೆಯನ್ನಾಗಲೀ ಅಥವಾ ಅಂತಹ ಸಂಪ್ರದಾಯಗಳ ಬಗ್ಗೆ ಯಾವ ಹೇಳಿಕೆಗಳನ್ನಾಗಲೀ ಸಮರ್ಥಿಸುತ್ತಿಲ್ಲ. ನಮ್ಮ ನಿತ್ಯ ಜೀವನದಲ್ಲಿ ನಾವು ನಿರ್ದಿಷ್ಟ ಕ್ರಿಯೆಗಳನ್ನು ಮಾಡಲು ಕಾರಣ ಕೊಡಬೇಕಿಲ್ಲ. ಯಾಕೆ ಹಾಡುತ್ತಿರುವೆ, ಯಾಕೆ ಕುಣಿಯುತ್ತಿರುವೆ ಎನ್ನುವ ಪ್ರಶ್ನೆಗೆ ಕಾರಣ ಕೊಡಬೇಕಿಲ್ಲ. "ನನಗಿಷ್ಟ, ಅದಕ್ಕೆ" ಎಂದು ಹೇಳಿದರೂ ಸಾಕು. ಕಾರಣ ಕೊಡಬೇಕಿರುವುದು ಒಂದು ಕ್ರಿಯೆಯನ್ನು ನಿಲ್ಲಿಸಲು ಮಾತ್ರ. "ನಿನ್ನ ಹಾಡು ನನ್ನ ನಿದ್ದೆಗೆ ಅಡ್ಡಿಪಡಿಸುತ್ತಿದೆ. ಹಾಗಾಗಿ ನೀನು ಹಾಡು ನಿಲ್ಲಿಸಬೇಕು" ಎನ್ನಬಹುದು ಅಷ್ಟೆ. 

ಕೇಡಿನ ತತ್ವ ಮತ್ತು ಸಂಪ್ರದಾಯಗಳು 
ಆದರೆ, ನಮ್ಮ ಈ ಫಲಿತಾಂಶ ಒಂದು ಹೊಸ ಸಮಸ್ಯೆಗೆ ಈಡುಮಾಡುತ್ತದೆ. ಸಂಪ್ರದಾಯಗಳನ್ನು ಹಕ್ಕಿನ ತತ್ವದ ಆಧಾರದ ಮೇಲೆ ಬದಲಾಯಿಸಬಾರದು ಎಂದಾದರೆ, ಸಂಪ್ರದಾಯಗಳ ಹೆಸರಿನಲ್ಲಿ ನಡೆಯುವ ಶೋಷಣೆ, ಸಂಪ್ರದಾಯಗಳ ನಿರಂಕುಶ ಮೇಲಾಟ, ಜನರ ಸ್ವಾತಂತ್ರ್ಯವನ್ನು ಅವು ಕೆಲವೊಮ್ಮೆ ಹರಣ ಮಾಡುವ ರೀತಿ ಇವೆಲ್ಲವನ್ನೂ ವಿಮರ್ಶಿಸುವುದೂ ಸಾಧ್ಯವಿಲ್ಲವೇ? ಇದಕ್ಕೆ ಪರಿಹಾರ ಹಕ್ಕಿನ ತತ್ವದ ಬದಲಾಗಿ ಕೇಡಿನ ತತ್ವವನ್ನು ರೂಪಿಸುವುದು. ಸರಳವಾಗಿ ಹೇಳಬೇಕೆಂದರೆ, ಒಂದು ಸಂಪ್ರದಾಯವನ್ನು ಪ್ರಶ್ನಿಸಲು, ಬದಲಾಯಿಸಲು ಬಯಸುವವರು, ಒಂದು ಸಂಪ್ರದಾಯದ ಕಾರಣದಿಂದ ಪೀಡನೆಗೆ ಒಳಗಾಗಿರುವವರು, ಆ ಸಂಪ್ರದಾಯದ ಆಚರಣೆಯಿಂದ ತಮಗಾಗುತ್ತಿರುವ ಕೇಡು ಏನು ಎಂದು ನಿರ್ದಿಷ್ಟವಾಗಿ ತೋರಿಸಬೇಕು. 

ಇಂತಹ ಸಂದರ್ಭಗಳಲ್ಲಿ ಅತ್ಯಂತ ಸಾಮಾನ್ಯವಾದ ಕೇಡು ಎಂದರೆ ದೈಹಿಕ ಅಪಾಯಗಳು. ಕೆಲವು ಸಂಪ್ರದಾಯಗಳನ್ನು ಪಾಲಿಸುವುದರಿಂದ ನಮ್ಮ ಪ್ರಾಣಕ್ಕೆ ಅಥವಾ ಆರೋಗ್ಯಕ್ಕೆ ಕುತ್ತಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂಪ್ರದಾಯಗಳನ್ನು ಕೇಡಿನ ತತ್ವದ ಆಧಾರದ ಮೇಲೆ ವಿರೋಧಿಸಬಹುದು ಎನ್ನುವುದು ಸರ್ವವಿದಿತ. ಆದರೆ, ನೇರವಾಗಿ ಇಂತಹ ದೈಹಿಕ ಅಪಾಯಗಳಷ್ಟೇ ಅಲ್ಲದೇ, ಇನ್ನೂ ಸೂಕ್ಷ್ಮವಾದ ಸಾಮಾಜಿಕ, ಮಾನಸಿಕ ಅಪಾಯಗಳೂ ಇರಬಹುದು. ಆದರೆ, ಕೇಡಿನ ತತ್ವ ಎಂದ ಮಾತ್ರಕ್ಕೆ, ಸಂಪ್ರದಾಯಗಳು ಸಾಮಾಜಿಕ ಅಥವಾ ಮಾನಸಿಕ ಅಪಾಯಗಳನ್ನು ಉಂಟುಮಾಡುತ್ತವೆ ಎಂದು ಸರಳವಾಗಿ, ಔಪಚಾರಿಕ ರೀತಿಯಲ್ಲಿ ಹೇಳಲು ಬರುವುದಿಲ್ಲ. ಯಾವುದೋ ಒಂದು ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ನಿಷೇಧವಿದ್ದರೆ, ಅದು ಸ್ವಾಭಾವಿಕವಾಗಿಯೇ ಮಹಿಳೆಯರಿಗೆ ಸಾಮಾಜಿಕ ಕೇಡನ್ನು ಉಂಟುಮಾಡುತ್ತಿದೆ ಎಂದು ವಾದಿಸಲು ಬರುವುದಿಲ್ಲ. ಯಾಕೆಂದರೆ, ಸಾಮಾನ್ಯವಾಗಿ, ಒಂದು ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ ಎನ್ನುವುದರ ಪರಿಣಾಮವಾಗಿ ಮಹಿಳೆಯರ ಸಾಮಾಜಿಕ ಸ್ಥಾನಕ್ಕೇನೂ ಕುಂದುಂಟಾಗುವುದಿಲ್ಲ. ಮಹಿಳೆಯರನ್ನು ದೇವಸ್ಥಾನದೊಳಕ್ಕೆ ಬಿಡದೇ ಇರುವುದಕ್ಕೆ ಕಾರಣ ಸಾಮಾಜಿಕ ಅಸಮಾನತೆ ಎಂದು ಬೇಕಾದರೆ ವಾದಿಸಬಹುದು. ಆದರೆ ಅದು ಒಂದು ಸಂಪ್ರದಾಯಕ್ಕೆ ಕಾರಣ ಕೊಟ್ಟಂತಾಗುತ್ತದೆಯೇ ವಿನಾ, ಅದರಲ್ಲಿರುವ ಕೇಡು ಏನು ಎಂದು ಸ್ಥಾಪಿಸಿದಂತೆ ಆಗುವುದಿಲ್ಲ.

ಇನ್ನೊಂದು ಉದಾಹರಣೆ ಗಮನಿಸಿ. ಅಮೆರಿಕದಲ್ಲಿ ಚಾಲ್ತಿಯಲ್ಲಿರುವ ಎಲೆಕ್ಟರಲ್ ಕಾಲೇಜ್ ಎನ್ನುವ ಅಧ್ಯಕ್ಷೀಯ ಚುನಾವಣಾ ಮಾದರಿ ಇರಬೇಕೇ ಬೇಡವೇ ಎಂದು ಈಗ ದೊಡ್ಡ ಚರ್ಚೆ. ಅದೂ ಟ್ರಂಪ್ ಅಧ್ಯಕ್ಷನಾದ ಮೇಲಂತೂ ಇದು ತಾರಕಕ್ಕೇರಿದೆ. ಈ ವ್ಯವಸ್ಥೆ ಹುಟ್ಟುವುದಕ್ಕೆ ಕಾರಣ ಅಮೆರಿಕದ ಜೀತಪದ್ಧತಿ. 18 ಮತ್ತು 19ನೇ ಶತಮಾನದ ಸಂದರ್ಭದಲ್ಲಿ, ಅಧ್ಯಕ್ಷ ಪಟ್ಟಕ್ಕೆ ನೇರ ಚುನಾವಣೆ ಇರುತ್ತಿದ್ದರೆ, ಬಿಳಿಯರು ಕಡಿಮೆ ಇರುವ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತಿತ್ತು. ಹಾಗೆಂದು ಕರಿಯರನ್ನೂ ನಾಗರಿಕರು ಎಂದು ಪರಿಗಣಿಸಿಬಿಟ್ಟರೆ, ದಕ್ಷಿಣದಲ್ಲೇ ಜೀತದಾಳುಗಳು ಹೆಚ್ಚಿರುವುದರಿಂದ, ಉತ್ತರದ ರಾಜ್ಯಗಳವರಿಗೆ ಅನ್ಯಾಯವಾಗುತ್ತಿತ್ತು. ಹಾಗಾಗಿ ಈ ಎರಡಕ್ಕೂ ಮಧ್ಯದ ಪರೋಕ್ಷ ಚುನಾವಣೆ ವ್ಯವಸ್ಥೆಯಾದ ಎಲೆಕ್ಟರಲ್ ಕಾಲೇಜ್ ಸ್ಥಾಪಿತವಾಗಿದ್ದು. ಹೀಗೆ ಎಲೆಕ್ಟರಲ್ ಕಾಲೇಜು ವ್ಯವಸ್ಥೆ ಹುಟ್ಟಿದ್ದು ಜೀತಪದ್ಧತಿಯ ಕಾರಣಕ್ಕೆ ಎನ್ನುವುದು ನಿಜವಿರಬಹುದಾದರೂ, ಆ ಕಾರಣಕ್ಕೇ ಅದನ್ನು ತಿರಸ್ಕರಿಸಲು ಬರುವುದಿಲ್ಲ. ಅದನ್ನು ತಿರಸ್ಕರಿಸಬೇಕೆಂದರೆ ಆ ವ್ಯವಸ್ಥೆಯಿಂದ ಆಗುತ್ತಿರುವ ಕೇಡು ಏನು ಎಂದು ಆಧಾರಸಹಿತವಾಗಿ ವಾದಿಸಬೇಕಾಗುತ್ತದೆ. 

ಇದರ ಜೊತೆಗೆ, ಯಾರನ್ನಾದರೂ ದೇವಸ್ಥಾನದೊಳಕ್ಕೆ ಬಿಡದಿದ್ದರೆ ಅದರಿಂದ ಮಾನಸಿಕ ರೀತಿಯ ಹಿಂಸೆ ಮತ್ತು ಶೋಷಣೆ ಆಗುತ್ತದೆ ಎನ್ನುವುದೂ ಕೂಡಾ ಸ್ವತಃಸಿದ್ಧವಲ್ಲ. ಅದನ್ನೂ ಆಧಾರಸಹಿತವಾಗಿಯೇ ತೋರಿಸಬೇಕಾಗುತ್ತದೆ. ಏಕೆಂದರೆ, ಇಂತಹ ಹಿಂಸೆ ಶುದ್ಧಾಂಗವಾಗಿ ವೈಯಕ್ತಿಕವಾಗಿ, ಖಾಸಗಿಯಾಗಿ ಇರಲು ಸಾಧ್ಯವಿಲ್ಲ. ನಮಗೆ ತೀರಾ ವೈಯಕ್ತಿಕವಾದ ಕಾರಣಗಳಿಗೆ ಮಾನಸಿಕ ಹಿಂಸೆಗಳಾಗಬಹುದು. ಉದಾಹರಣೆಗೆ, ಯಾರಿಗಾದರೂ ಎತ್ತರದ ಕಟ್ಟಡಗಳನ್ನು ನೋಡಿದರೆ ಮಾನಸಿಕ ತುಮುಲ ಹೆಚ್ಚಾಗಬಹುದು. ಆದರೆ ಅದಕ್ಕೆ ಕಾರಣ ನಮಗಿರುವ ಬೇರೆಬೇರೆ ರೀತಿಯ ಮಾನಸಿಕ ಸಮಸ್ಯೆಗಳೇ ವಿನಾ ಆ ಎತ್ತರದ ಕಟ್ಟಡಗಳಲ್ಲ. ಒಂದು ನಿರ್ದಿಷ್ಟ ಸಂಪ್ರದಾಯದಿಂದ ಮಾನಸಿಕ ಕಿರುಕುಳವಾಗುವ ಸಾಧ್ಯತೆ ಇದೆ ಎಂದು ಒಂದು ಸಮಾಜದ ವಿವಿಧ ಸ್ತರಗಳ ಜನಗಳು ಅಭಿಪ್ರಾಯಪಟ್ಟರಷ್ಟೇ ಇದನ್ನು ಕೇಡಿನ ತತ್ವದೊಳಕ್ಕೆ ತರಲು ಸಾಧ್ಯ. ಒಂದು ಸಾಮಾಜಿಕ ಆಚರಣೆಯಿಂದ ಆಗಬಹುದಾದÀ ಕೇಡನ್ನು ಪೂರಾ ಖಾಸಗಿಯಾದ ಮಾನಸಿಕ ಸಮಸ್ಯೆಯ ಮಟ್ಟದಲ್ಲಿ ತೋರಿಸಲು ಬರುವುದಿಲ್ಲವಷ್ಟೆ. 

ಕೆಲವು ತಕರಾರುಗಳು ಮತ್ತು ಸಮಾಧಾನಗಳು
ನನ್ನ ಈ ವಾದದ ಬಗ್ಗೆ ಏಳಬಹುದಾದ ಒಂದು ತಕರಾರೆಂದರೆ, ಇದು ಐತಿಹಾಸಿಕ ಹೋರಾಟಗಳ ಫಲವಾಗಿ ದೇವಾಲಯ ಪ್ರವೇಶದ ಹಕ್ಕನ್ನು ಪಡೆದುಕೊಂಡಿರುವ ಹಲವಾರು ಸಮುದಾಯಗಳ, ವಿಶೇಷವಾಗಿ ದಲಿತ ಸಮುದಾಯಗಳ ಸಾಮಾಜಿಕ ಸಾಧನೆಯನ್ನೇ ಅಲ್ಲಗೆಳೆಯುತ್ತದೆ ಎನ್ನುವುದು. ಆದರೆ ಈ ತಕರಾರು ಆಧಾರರಹಿತವಾದದ್ದು. ಏಕೆಂದರೆ, ನಾವು ನೆನಪಿನಲ್ಲಿಡಬೇಕಾದ ವಿಚಾರವೇನೆಂದರೆ, ದೇವಾಲಯ ಪ್ರವೇಶಕ್ಕೆ ತಮಗಿದ್ದ ನಿಷೇಧ ಕೇವಲ ಯಾವುದೋ ಧಾರ್ಮಿಕ ಸಂಪ್ರದಾಯಗಳು ಮತ್ತು ದೇವಾಲಯಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಬದಲಾಗಿ, ವಿದ್ಯೆ, ಉದ್ಯೋಗ, ಸಾರ್ವಜನಿಕ ಸ್ಥಳಗಳ ಬಳಕೆ ಇಂತಹ ಎಲ್ಲಾ ನಾಗರಿಕ ಹಕ್ಕುಗಳನ್ನೂ ತಮಗೆ ನಿರಾಕರಿಸಿದ್ದರ ಒಂದು ಉದಾಹರಣೆಯಾಗಿ ದೇವಾಲಯ ಪ್ರವೇಶದ ನಿಷೇಧವೂ ಇತ್ತು ಎಂದು ದಲಿತ ವರ್ಗಗಳು ವಾದಿಸಿದ್ದು. ಆದರೆ, ಇಂದಿನ ಸನ್ನಿವೇಶದಲ್ಲಿ ಕಾಣಬರುತ್ತಿರುವ ಸಂಪ್ರದಾಂiÀiದ ಕುರಿತಾದ ಯಾವ ಸಮಸ್ಯೆಗಳಲ್ಲೂ ಈ ವಾದವನ್ನು ಮಾಡಲು ಬರುವುದಿಲ್ಲ. ಉದಾಹರಣೆಗೆ, ಶಬರಿಮಲೆಗೆ ಹೆಂಗಸರ ಪ್ರವೇಶವಿಲ್ಲದಿರುವುದನ್ನು ಎಲ್ಲಾ ನಾಗರಿಕ ಹಕ್ಕುಗಳಿಂದಲೂ ಮಹಿಳೆಯರು ವಂಚಿತರಾಗಿರುವುದರ ಒಂದು ಉದಾಹರಣೆ ಎಂದು ಕಾಣಲು ಬರುವುದಿಲ್ಲ.

ಸಾಂಪ್ರದಾಯಿಕ ರೂಢಿಗಳನ್ನು ಉಗ್ರವಾಗಿ ವಿರೋಧಿಸುವ ಕಟ್ಟಾ ಉದಾರವಾದಿಗಳೂ ಕೂಡಾ ಸತೀಪದ್ಧತಿಯಂಥಾ ಆಚರಣೆಗಳು ಮತ್ತು ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲದಿರುವ ಆಚರಣೆಗಳ ನಡುವೆ ವ್ಯತ್ಯಾಸವಿದೆ; ಈ ಎರಡನ್ನೂ ಒಂದೇ ರೀತಿಯಲ್ಲಿ ನೋಡಲು ಬರುವುದಿಲ್ಲ ಎಂದು ಒಪ್ಪಿಕೊಳ್ಳುತ್ತಾರೆ. ಹಕ್ಕಿನ ತತ್ವದ ದೃಷ್ಟಿಯಿಂದ ನೋಡಿದರೆ ಈ ಎರಡೂ ಆಚರಣೆಗಳು ಮಹಿಳೆಯರ ಮೇಲೆ ನಡೆಯುವ ಶೋಷಣೆಗಳು ಮತ್ತು ಪಿತೃಪ್ರಧಾನ ವ್ಯವಸ್ಥೆಯ ಪರಿಣಾಮಗಳು ಎಂದೇ ಅನ್ನಿಸುತ್ತದೆ. ಹೆಚ್ಚೆಂದರೆ, ಈ ಎರಡರಲ್ಲೂ ಇರುವ ಹಿಂಸೆಯ ಪ್ರಮಾಣ ಸ್ವಲ್ಪ ಬೇರೆಬೇರೆ ಎಂದು ಹೇಳಬಹುದಷ್ಟೆ. ಅಂದರೆ, ನಮಗೆ ಅನುಭವವೇದ್ಯವಾದ ಒಂದು ವ್ಯತ್ಯಾಸವನ್ನು ಹಕ್ಕಿನ ತತ್ವದ ಮೂಲಕ ನೋಡಿದರೆ ವಿವರಿಸಲಾಗುತ್ತಿಲ್ಲ. ಅದೇ, ಕೇಡಿನ ತತ್ವದ ಮೂಲಕ ನೋಡಿದರೆ ಈ ಎರಡೂ ಸಂಪ್ರದಾಯಗಳ ನಡುವೆ ಇರುವ ವ್ಯತ್ಯಾಸ ಸುಲಭವಾಗಿ ವೇದ್ಯವಾಗುತ್ತದೆ. ಸತೀಪದ್ಧತಿ ಮತ್ತು ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲದಿರುವುದು ಎರಡೂ ಸಂಪ್ರದಾಯಗಳು. ಆದರೆ, ಮೊದಲಿನದರಲ್ಲಿ ಒಂದು ಸ್ಪಷ್ಟ ಕೇಡಿರುವುದರಿಂದ, ಮತ್ತು ಆ ಕೇಡಿರುವುದರಿಂದ ಮಾತ್ರವೇ, ಆ ಸಂಪ್ರದಾಯ ತಿರಸ್ಕಾರ ಯೋಗ್ಯವಾದದ್ದು. ಎರಡನೆಯದರಲ್ಲಿ ಕೇಡಿದೆ ಎನ್ನುವುದು ನಿರ್ವಿವಾದವಾಗಿ ಸಾಬೀತಾಗದೇ ಇರುವುದರಿಂದ, ಆ ಸಂಪ್ರದಾಯವನ್ನು ನೇರವಾಗಿ ತಿರಸ್ಕರಿಸಲು ಬರುವುದಿಲ್ಲ. 

ಭಾರತದ ಸಂದರ್ಭದಲ್ಲಿ ಏಕರೂಪ ನಾಗರಿಕ ಸಂಹಿತೆಯಂತ ತೀವ್ರಗಾಮೀ ಕಾನೂನುಗಳ ಪರವಾಗಿ ವಾದ ಮಾಡುವವರು ಸಾಮಾನ್ಯವಾಗಿ ಹಕ್ಕುಗಳ ತತ್ವದ ಮೊರೆಹೋಗುತ್ತಾರೆ. ಅದರ ಬದಲು ನಾವು ಕೇಡಿನ ತತ್ವವನ್ನು ಒಪ್ಪಿಕೊಂಡಿದ್ದೇ ಆದರೆ, ಇಂತಹ ತೀವ್ರಗಾಮಿಯಾದ ಕಾನೂನುಗಳ ಮೇಲಾಟವನ್ನು ಸರಿಯಾಗಿ ಪ್ರತಿರೋಧಿಸಬಹುದು. ಕೇಡಿನ ತತ್ವವನ್ನು ಒಪ್ಪಿದರೆ, ನಿರ್ದಿಷ್ಟ ವೈಯಕ್ತಿಕ ಕಾನೂನುಗಳಲ್ಲಿ ಇರಬಹುದಾದ ದೋಷಗಳನ್ನು, ಅಪಾಯಗಳನ್ನು ಒಂದೊಂದಾಗಿಯೇ ಹಂತಹಂತವಾಗಿ ಸರಿಪಡಿಸಬಹುದು. ಒಂದು ನಿರ್ದಿಷ್ಟ ಕಾನೂನಿನಲ್ಲಿ ಇರುವ ದೋಷವೇನು ಎನ್ನುವುದನ್ನು ಕೇಡಿನ ತತ್ವದ ಆಧಾರದ ಮೇಲೆ ಸಾಬೀತು ಮಾಡಿದ ಮೇಲಷ್ಟೇ ಅದನ್ನು ಬದಲಾಯಿಸಲು ಅವಕಾಶವಿರುತ್ತದೆ. ಆಗ, ಯಾವ ಸರಕಾರಗಳೂ ತಮ್ಮ ಐಡಿಯಾಲಜಿಗಳಿಗೆ ಅನುಸಾರವಾಗಿ ಆಮೂಲಾಗ್ರ ಕಾನೂನಾತ್ಮಕ ಬದಲಾವಣೆಗಳನ್ನು ಮಾಡುವ ದುಸ್ಸಾಹಸಕ್ಕೆ ಇಳಿಯದಂತೆ ತಡೆ ಒಡ್ಡಬಹುದು.

ಸಮಾರೋಪ
ಒಂದು ತಾತ್ವಿಕ ರೂಪುರೇಷೆಯನ್ನು ಸಿದ್ಧಮಾಡಲು ಹೊರಡುವ ಎಲ್ಲಾ ಚಿಂತನೆಗಳಲ್ಲೂ ಆಗುವಂತೆ, ಈ ಲೇಖನವೂ ಕೂಡಾ ಹುಟ್ಟುತ್ತಲೇ ಪರಿಪೂರ್ಣವಾಗಿಲ್ಲ. ಬದಲಾಗಿ ಬಹಳ ನಿಶ್ಶಕ್ತ ಸ್ಥಿತಿಯಲ್ಲೇ ಹುಟ್ಟಿದೆ. ಹೊಸಹೊಸ ಸಂದರ್ಭಗಳು ಮತ್ತು ಹೊಸಹೊಸ ಪ್ರಶ್ನೆಗಳನ್ನು ಎದುರಿಸುತ್ತಾ ಸಾಗಿದಂತೆ, ಈ ವಿಚಾರದ ಕಸುವು ಇನ್ನಷ್ಟು ಬಲಗೊಳ್ಳಬೇಕಷ್ಟೆ. ಆದರೆ ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಹಕ್ಕಿನ ತತ್ವವನ್ನು ಬಳಸಿದಾಗ, ಒಂದು ಸಮಸ್ಯೆಯ ವಿಚಾರಣೆಗೂ ಮುನ್ನವೇ ಪರಿಹಾರ ಸಿದ್ಧವಾಗಿಬಿಟ್ಟಿರುತ್ತದೆ. ಅಂದರೆ, ಹಕ್ಕಿನ ದೃಷ್ಟಿಯಿಂದ ನೋಡಿದರೆ, ಯಾವುದೋ ಒಂದು ಸಂಪ್ರದಾಯದಲ್ಲಿ ಏನೋ ಒಂದು ರೀತಿಯ ಭೇದ ಇದೆ ಎಂದ ತಕ್ಷಣವೇ ಅದು ಅನ್ಯಾಯ ಅಥವಾ ಕಾನೂನುಬಾಹಿರ ಎಂದೇ ಸಿದ್ಧವಾಗಿಬಿಡುತ್ತದೆ. ಏಕೆಂದರೆ, ಭೇದವೆಂದರೇ ಸಂಪೂರ್ಣ ಸಮಾನತೆಯ ಆದರ್ಶಕ್ಕೆ ವಿರುದ್ಧವಾದದ್ದು. ಆದರೆ, ಒಂದು ನಿಜವಾದ ಚಿಂತನೆ ಹೀಗೆ ವಿಚಾರಣೆಗೂ ಮುನ್ನವೇ ಫಲಿತಾಂಶವನ್ನು ಕೊಡುವುದಿಲ್ಲ. ಅದೇ ಕೇಡಿನ ತತ್ವ ಯಾವ ನಿರ್ದಿಷ್ಟ ಫಲಿತಾಂಶವನ್ನೂ ಮೊದಲಿಗೇ ಸ್ಥಾಪಿಸಿಬಿಡುವುದಿಲ್ಲ. ಅದು ಕೇವಲ ಚಿಂತನೆಯ ಒಂದು ಕ್ರಮವನ್ನು ಮಾತ್ರಾ ವಿಧಿಸುತ್ತದೆ. ಜೊತೆಗೆ, ಹಕ್ಕಿನ ತತ್ವ ಬಹಳ ಅಮೂರ್ತವಾದದ್ದು ಮತ್ತು ಯಾವ ಸಾಂದರ್ಭಿಕ ವ್ಯತ್ಯಾಸಗಳನ್ನೂ ಗುರುತಿಸಲು ಬೇಕಾದ ಸೂಕ್ಷ್ಮ ಇಲ್ಲದಂಥದ್ದು. ಆದರೆ, ಕೇಡಿನ ತತ್ವದ ಜೀವಾಳವೇ ಅದರ ಸಂದರ್ಭ ನಿಷ್ಠತೆ. ಬೇರೆ ಬೇರೆ ಸಂದರ್ಭಗಳಲ್ಲಿ, ಬೇರೆ ಬೇರೆ ರೀತಿಯಲ್ಲಿ ಸಂಪ್ರದಾಯಗಳು ಕೇಡನ್ನು ಉಂಟುಮಾಡಬಹುದು ಅಥವಾ ಮಾಡದೇ ಇರಬಹುದು. ಹಾಗಾಗಿ, ಇದು ಎಲ್ಲಾ ಕಾಲದೇಶ ವ್ಯತ್ಯಾಸಗಳ ಸಾಧ್ಯತೆಗಳಿಗೂ ಮುಕ್ತವಾಗಿರುವಂಥದ್ದು. ಹೀಗಾದಾಗ, ಸಂಪ್ರದಾಯಗಳ ಬಗೆಗಿನ ವಿವಾದಗಳಲ್ಲಿ, ಎರಡೂ ಕಡೆಗಳವರಿಗೆ, ಅಂದರೆ ಉದಾರವಾದಿಗಳು ಮತ್ತು ಸಂಪ್ರದಾಯನಿಷ್ಠರು ಇಬ್ಬರಿಗೂ ಸಬೂತು ನೀಡುವ ಹೊರೆ ಸಮಾನವಾಗಿ ಬೀಳುತ್ತದೆ. 

ಸಂಪ್ರದಾಯಗಳ ವಿಷಯದಲ್ಲಿ ಉದಾರವಾದಿಗಳು ಹಕ್ಕಿನ ತತ್ವವನ್ನು ಪ್ರತಿಪಾದಿಸುವ ಕಾರಣದಿಂದ ಅವರಿಗೆ ಅಸಮಾನವಾದ ಮತ್ತು ಅಪಾರವಾದ ಅನುಕೂಲ ಮತ್ತು ವ್ಯಾಪ್ತಿ ಸಿಕ್ಕಿಬಿಡುತ್ತದೆ. ಇಲ್ಲಿರುವ ಪ್ರಶ್ನೆ ಕೇವಲ ಯಾವುದೋ ಒಂದು ದೇವಸ್ಥಾನದಲ್ಲೋ, ಒಂದು ಮಸೀದಿಯಲ್ಲೋ ಯಾರನ್ನು ಬಿಡಬೇಕು ಯಾರನ್ನು ಬಿಡಬಾರದು ಎನ್ನುವುದರ ಬಗ್ಗೆ ಮಾತ್ರವಲ್ಲ. ಬದಲಾಗಿ, ಉದಾರವಾದಿಗಳು ಹಕ್ಕಿನ ತತ್ವವನ್ನು ಬಳಸುವುದರಿಂದ ಸಂಪ್ರದಾಯಗಳು ವ್ಯಕ್ತಿಗಳ ನಡುವೆ, ವಸ್ತುಗಳ ನಡುವೆ, ಆಚಾರಗಳ ನಡುವೆ, ಸಂದರ್ಭಗಳ ನಡುವೆ ಹೀಗೆ ಯಾವ ರೀತಿಯ ಭೇದವನ್ನು ಮಾಡಿದರೂ ಅವೆಲ್ಲವೂ ಕಾನೂನುಬಾಹಿರ ಎಂದಾಗುವ ಸಾಧ್ಯತೆ ಇರುತ್ತದೆ. ಉದಾರವಾದಿಗಳು ಒಪ್ಪುವ ಫೇರ್‍ನೆಸ್ ಅಥವಾ ನ್ಯಾಯಸಮ್ಮತಿಯ ತತ್ವದ ದೃಷ್ಟಿಯಿಂದಲೇ ನೋಡಿದರೂ, ಒಂದು ಪ್ರಜಾಪ್ರಭುತ್ವದಲ್ಲಿ ಇಂತಹ ಅತಿವ್ಯಾಪ್ತಿಯ ಅಧಿಕಾರ ಯಾವ ಒಂದು ಗುಂಪಿಗೂ, ಉದಾರವಾದಿಗಳಾದ ತಮಗೂ, ಇರಬಾರದು ಎಂದು ಅವರೇ ಒಪ್ಪಿಕೊಳ್ಳುತ್ತಾರಷ್ಟೆ? 

Comments

Popular posts from this blog

ಸ್ಟ್ರಕ್ಚರಲಿಸಂ (ರಚನಾವಾದ/ರಾಚನಿಕವಾದ)

ಮಾರ್ಕ್ಸ್‌‌‌ ವಾದ

ತಾಯ್ನುಡಿಯ ತತ್ವಜ್ಞಾನ