ಐಡಿಯಾಲಜಿ ಮತ್ತು ಸಂಘರ್ಷ: ವಿಚಾರವಾದದ ಒಂದು ದೀರ್ಘ ಇತಿಹಾಸ

 ಆಧುನಿಕ ಪ್ರಪಂಚಕ್ಕೇ ಚಾರಿತ್ರಿಕವಾಗಿ ಅನನ್ಯವಾದ ಒಂದು ರೀತಿಯ ಸಂಘರ್ಷವಿದೆ. ಅದೇ ಐಡಿಯಲಾಜಿಕಲ್ ಸಂಘರ್ಷ. ಆಧುನಿಕ ಇತಿಹಾಸದ ಅತೀ ಮುಖ್ಯ ಸಂಘರ್ಷಗಳನ್ನು ಗಮನಿಸಿದರೆ ಇದರ ಅಳವು ತಿಳಿಯುತ್ತದೆ. ೧೬೪೨-೫೧ರ ನಡುವೆ ನಡೆದ ಇಂಗ್ಲಿಶ್ ಸಿವಿಲ್ ವಾರ್ ರಾಜ್ಯಧಿಕಾರ ಮತ್ತು ಧಾರ್ಮಿಕ ಸ್ವಾತಂತ್ರದ ಕುರಿತ ಎರಡು ವಿರುದ್ಧ ಐಡಿಯಾಲಜಿಗಳನ್ನು ಪ್ರತಿಪಾದಿಸಿದ ಸಂಸತ್ ಪರರ ಪಕ್ಷ ಮತ್ತು ರಾಜಾಧಿಕಾರದ ಪಾರಂಪರಿಕ ವ್ಯವಸ್ಥೆಯನ್ನು ಬೆಂಬಲಿಸಿದ ಅರಸೊತ್ತಿಗೆಯ ಪರರ ಪಕ್ಷದ ವಿರುದ್ಧ ನಡೆದ ನಾಗರಿಕ ದಂಗೆ. ೧೭೮೯ರ ಫ್ರೆಂಚ್ ಕ್ರಾಂತಿ ನಡೆದಿದ್ದು ಕೇವಲ ಒಂದು ರಾಜಸತ್ತೆಯ ವಿರುದ್ಧವಲ್ಲ. ಅದರ ಲಕ್ಷ್ಯ ಇದ್ದದ್ದು ಅರಸೊತ್ತಿಗೆಯ ವ್ಯವಸ್ಥೆಯನ್ನೇ ಸಮಾಜದಿಂದ ತೆಗೆದುಹಾಕುವುದರಲ್ಲಿ. ಅಂದರೆ, ಅದು ಸಮಾಜವನ್ನು ಕುರಿತ ಒಂದು ನಿರ್ದಿಷ್ಟ ಐಡಿಯಾಲಜಿಯ ಆಧಾರದ ಮೇಲೆ ನಡೆದ ಒಂದು ‍‌ದಂಗೆ, ಅಥವಾ ಕ್ರಾಂತಿ. ಹಾಗೆಯೇ, ೧೯೧೭ರ ರಷ್ಯನ್ ಕ್ರಾಂತಿ. ಅದಂತೂ ಕೇವಲ ರಷ್ಯಾದ ಝಾರ್ ರಾಜಸತ್ತೆಯನ್ನು ಉರುಳಿಸುವುದಷ್ಟೇ ಅಲ್ಲದೇ ಒಂದು ನಿರ್ದಿಷ್ಟ ರೀತಿಯ ಪ್ರಭುತ್ವವನ್ನು ಹುಟ್ಟುಹಾಕಲು ಹವಣಿಸಿದ ಕ್ರಾಂತಿ. ಒಂದು ದೇಶದ ಸಂಪತ್ತು ಮತ್ತು ಉತ್ಪಾದನಾ ಸಾಮರ್ಥ್ಯವನ್ನೂ ಜೊತೆಗೇ ಬೌದ್ಧಿಕ ಮತ್ತು ಧಾರ್ಮಿಕ ಚಿಂತನೆಯನ್ನೂ ಸರಕಾರವೇ ನಿರ್ದೇಶಿಸುವ ಮಹತ್ವಾಕಾಂಕ್ಷೆಯ ಉದ್ಯಮ ಅದು. ಚೈನಾದ ೧೯೪೯ರ ಕ್ರಾಂತಿಯೂ ಅಷ್ಟೇ. ಮಾವೋನ ಚೈನಾ ಪ್ರಜಾ ಗಣರಾಜ್ಯ ಜನ್ಮ ತಾಳಿದ್ದು ರಾಷ್ಟ್ರೀಯವಾದಿ ಸರಕಾರದ ವಿರುದ್ಧದ ಐಡಿಯಲಾಜಿಕಲ್ ಸಂಘರ್ಷಗಳ ಹಿನ್ನೆಲೆಯಲ್ಲೇ. ಅದಕ್ಕೂ ಮೊದಲೇ, ಅಂದರೆ, ೧೯೧೧ರಲ್ಲೆ ನಡೆದ ಚೈನಾ ರಾಷ್ಟ್ರೀಯವಾದಿ ಚಳವಳಿಯೂ ಕೂಡಾ ಐಡಿಯಲಾಜಿಕಲ್ ನೆಲೆಯಲ್ಲೇ ಆ ಹಿಂದಿನ ಖೀಂಗ್ ಸಾಮ್ರಾಜ್ಯವನ್ನು ಇನ್ನೊಂದು ಐಡಿಯಲಾಜಿಕಲ್ ವಿರೋಧದ ಆಧಾರದ ಮೇಲೆ ಉರುಳಿಸಿತ್ತು. ಇನ್ನು ಎರಡನೇ ಮಹಾಯುದ್ಧದ ನಂತರ ಸುಮಾರು ೧೯೯೦ರವರೆಗೂ ನಡೆದ ಶೀತಲ ಸಮರವಂತೂ ಐಡಿಯಲಾಜಿಕಲ್ ಸಂಘರ್ಷಗಳಿಗೆ ತಿಲಕಪ್ರಾಯವಾದ ಸಂಘರ್ಷ. ಅಮೆರಿಕಾದ ಮುಂದಾಳತ್ವದಲ್ಲಿ ಮುಕ್ತಮಾರುಕಟ್ಟೆ ಅಥವಾ ಬಂಡವಾಳಶಾಹಿ ವ್ಯವಸ್ಥೆಯ ಪರವಾಗಿದ್ದ ರಾಷ್ಟ್ರಗಳೂ ಮತ್ತು ಅವುಗಳ ವಿರುದ್ಧ ಸೋವಿಯತ್ ರಷ್ಯಾದ ಮುಂದಾಳತ್ವದಲ್ಲಿ ಸಂಸ್ಥೆಗಳು ಮತ್ತು ಮಾರುಕಟ್ಟೆಯ ಸರಕಾರೀ ಒಡೆತನದ ಕಮ್ಯುನಿಸ್ಟ್ ವ್ಯವಸ್ಥೆಯ ಪರವಾಗಿದ್ದ ರಾಷ್ಟ್ರಗಳೂ ಹೆಜ್ಜೆಹೆಜ್ಜೆಗೂ ನಡೆಸಿದ ಮೇಲುಗೈಯಾಟದ ಇತಿಹಾಸ ತಿಳಿದಿರುವಂಥದ್ದೆ. ಇನ್ನು ಎರಡನೇ ಮಹಾಯುದ್ಧದ ಸುಮಾರಿಗೆ ೧೯೩೦-೪೦ರ ದಶಕದಲ್ಲಿ ರಾಷ್ಟ್ರೀಯ ಸಮಾಜವಾದದ ಸಿದ್ಧಾಂತದ ಅಡಿಯಲ್ಲಿ ಹಿಟ್ಲರನ ನಾಝಿ ಪಕ್ಷದವರು ಜರ್ಮನಿಯಲ್ಲಿ ಮತ್ತು ಯುರೋಪಿನಲ್ಲಿ ನಡೆಸಿದ ೬೦ ಲಕ್ಷ ಯಹೂದಿಗಳ ಮಾರಣಹೋಮವೂ ಸೆಮಿಟಿಸಂ-ವಿರೋಧಿ ಐಡಿಯಾಲಜಿಯ ಕಾರಣದಿಂದಾಗಿಯೇ ನಡೆದಿದ್ದು. ಇರಾನ್‌ನ ರಾಜಶಾಹಿಯನ್ನು ಉರುಳಿಸಿ ಹೊಸ ಗಣರಾಜ್ಯವನ್ನು ಸ್ಥಾಪಿಸಿದ ಖೊಮೇನಿ ನೇತೃತ್ವದ ೧೯೭೯ರ ಸಾಂಸ್ಕೃತಿಕ ಕ್ರಾಂತಿ, ಇತ್ತೀಚಿಗೆ ಅಫ್ಘಾನಿಸ್ತಾನದಲ್ಲಿ ೧೯೯೦ರ ದಶಕದ ತಾಲಿಬಾನಿಗಳ ಕ್ರಾಂತಿ ಎಲ್ಲವೂ ಐಡಿಯಲಾಜಿಕಲ್ ಸಂಘರ್ಷಗಳ ಹಸಿಹಸಿ ಉದಾಹರಣೆಗಳೆ. ಆಧುನಿಕ ಭಾರತದ ಇತಿಹಾಸವನ್ನೇ ತೆಗೆದುಕೊಂಡರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ೧೯೨೯ರ ಸಂಪೂರ್ಣ ಸ್ವರಾಜ್ಯದ ಘೋಷಣೆ, ಫುಲೆ, ಅಂಬೇಡ್ಕರರ ಸಾಮಾಜಿಕ ಕ್ರಾಂತಿಯ ಚಳವಳಿಗಳು, ದ್ರಾವಿಡ ಪಕ್ಷಗಳ ಅದರಲ್ಲೂ ವಿಶೇಷವಾಗಿ ಪೆರಿಯಾರರ ವೈಚಾರಿಕ ಕ್ರಾಂತಿ, ೧೯೬೦ರ ನಂತರದ ಸ್ವತಂತ್ರ ಭಾರತದ ನಕ್ಸಲಬಾರಿ ಚಳುವಳಿ, ೧೯೮೦ರ ಖಲಿಸ್ತಾನ ಚಳುವಳಿ, ಇವೆಲ್ಲವೂ ಐಡಿಯಲಾಜಿಕಲ್ ಸಂಘರ್ಷದ ದೇಶೀಯ ಉದಾಹರಣೆಗಳು.

ಇಪ್ಪತ್ತನೇ ಶತಮಾನದ ಮಟ್ಟಿಗೆ ಮಾತ್ರ ಸೀಮಿತವಾಗಿ ಹೇಳುವುದಾದರೆ, ಐಡಿಯಲಾಜಿಕಲ್ ಸಂಘರ್ಷಗಳು ಹೃದಯಾಘಾತ ಮತ್ತು ಕ್ಯಾನ್ಸರ್ ಹೊರತುಪಡಿಸಿ ಅತೀ ಹೆಚ್ಚು ಸಾವಿಗೆ ಕಾರಣವಾಗಿರುವ ಸಂಗತಿಗಳು. ಇದರರ್ಥ ಐಡಿಯಲಾಜಿಕಲ್ ಸಂಘರ್ಷಗಳೆಲ್ಲಾ ಅನಪೇಕ್ಷಣೀಯವೆಂದು ಅರ್ಥವಲ್ಲ. ಇಂತಹ ಹಲವಾರು ಸಂಘರ್ಷಗಳು ಪ್ರಗತಿ ಮತ್ತು ಸಾಮಾಜಿಕ ಬದಲಾವಣೆಗೂ ಕಾರಣವಾಗಿದೆ. ಆದರೆ, ಇಂತಹ ಸಂಘರ್ಷಗಳು ಆಧುನಿಕ ಪ್ರಪಂಚದಲ್ಲಿ ಎಷ್ಟು ವಿಸ್ತೃತವಾದ ಪ್ರಭಾವವನ್ನು ಬೀರಿದೆ ಎನ್ನುವುದಕ್ಕೆ ಪುರಾವೆಯಾಗಿ ಈ ಮುಂದಿನ ಸಂಖ್ಯೆಗಳನ್ನು ಓದಬಹುದು. ಒಂದು ಅಂದಾಜಿನ ಪ್ರಕಾರ, ಸುಮಾರು ೨೭ ಕೋಟಿ ಜನ ಕೇವಲ ಒಂದು ಶತಮಾನದಲ್ಲಿ ಐಡಿಯಲಾಜಿಕಲ್ ಕಾರಣಗಳಿಗೆ ಸತ್ತಿದ್ದಾರೆ. ಅಂದರೆ ಇಡೀ ಕರ್ನಾಟಕದ ಒಟ್ಟು ಜನಸಂಖ್ಯೆಯ ಸುಮಾರು ಐದು ಪಟ್ಟು ಜನ. ಹಸಿವಲ್ಲ. ಕಾಯಿಲೆಯಲ್ಲ. ವಯೋಸಹಜ ಸಾವಲ್ಲ. ಸೀದಾಸಾದ ಕೊಲೆ ಸುಲಿಗೆಯಲ್ಲ. ಆತ್ಮಹತ್ಯೆಯಲ್ಲ. ಅಥವಾ ದೇಶದೇಶಗಳ ನಡುವೆ ನಡೆಯುವ ಯುದ್ಧಗಳೂ ಅಲ್ಲ. ಇಷ್ಟೆಲ್ಲಾ ಜನರು ಸತ್ತಿರುವುದು ವಿಚಾರಗಳ, ಐಡಿಯಾಗಳ ಕಾರಣದಿಂದ. ಅಂದರೆ, ಒಂದು ವಿಚಾರದ ಮಸೂರದಿಂದ ನೋಡಿದರೆ ಇನ್ನೊಂದು ವಿಚಾರ ತಪ್ಪೆಂದು ಕಾಣುತ್ತದೆ ಎನ್ನುವ ಕಾರಣದಿಂದ. ಇದನ್ನು ನೋಡಿ ವಿಚಾರವಾದಿಗಳು, ವಿಚಾರಶ್ರೀಯನ್ನು ಪೂಜಿಸುವವರು, ಇವರೆಲ್ಲಾ ತಮಗೆ ಗೊತ್ತಿಲ್ಲದೆಯೇ ಜೀವನಾಶಕವಾದ ರಕ್ತಪಿಪಾಸುವೊಂದನ್ನು ಪೋಷಿಸುತ್ತಿದ್ದಾರೋ ಎನ್ನುವ ದಿಗಿಲಾದರೆ ಅಚ್ಚರಿಯೇನಿಲ್ಲ.

ಈ ಪಟ್ಟಿಯನ್ನು ಓದಿದರೆ ಇದರಲ್ಲೇನು ವಿಶೇಷ, ಇದು ಎಲ್ಲರಿಗೂ ತಿಳಿದಿರುವ ಇತಿಹಾಸವೇ ಅಲ್ಲವೇ ಎಂದು ಅನ್ನಿಸುತ್ತದೆ. ಆದರೆ ಅದರಲ್ಲೇ ನಿಜವಾದ ವಿಶೇಷವಿರುವುದು. ಸುಮಾರು ೧೬ನೆಯ ಶತಮಾನದ ಮೊದಲು, ಮತ್ತು ಯೂರೋಪಿನ ಸಂದರ್ಭದ ಆಚೆ ಇಂತಹ ಐಡಿಯಲಾಜಿಕಲ್ ಸಂಘರ್ಷಗಳು ಕಾಣಸಿಗುವುದು ಅಪರೂಪ, ಅಥವಾ, ಅಸಾಧ್ಯವೆಂದರೂ ಸರಿಯೇ. ಪಲ್ಲವರು ಮತ್ತು ಚೋಳರ ನಡುವಿನ ಹೋರಾಟವನ್ನು ಒಂದು ಐಡಿಯಲಾಜಿಕಲ್ ಸಂಘರ್ಷ ಎಂದು ಕರೆಯುವುದು ಕಾಲಾಭಾಸವಾಗುತ್ತದೆ. ಹಾಗೆಯೇ ಇಂಗ್ಲಿಷರು ಮತ್ತು ಫ್ರೆಂಚರು ಏಶಿಯಾದ ವಸಾಹತುಗಳಲ್ಲಿ ಸಾಮ್ರಾಜ್ಯ ವಿಸ್ತರಣೆಗಾಗಿ ನಡೆಸಿದ ಹೋರಾಟಗಳನ್ನು ಐಡಿಯಲಾಜಿಕಲ್ ಸಂಘರ್ಷ ಎಂದು ಕರೆಯುವುದು ಅತೀ-ವಿವರಣೆಯ ದೋಷವಾಗುತ್ತದೆ. ೧೬ನೆಯ ಶತಮಾನದ ವಿಜಯನಗರ ಸಾಮ್ರಾಜ್ಯದ ದಳವಾಯಿಯಾಗಿದ್ದ ಅಳಿಯ ರಾಮರಾಯ ದಖನ್ ಸುಲ್ತಾನರೊಂದಿಗೆ ನಡೆಸಿದ ಕಲಹಗಳಾಗಲಿ, ೧೮ನೆಯ ಶತಮಾನದ ಮೊದಲರ್ಧದಲ್ಲಿ ಕಿತ್ತೂರಿನ ಚೆನ್ನಮ್ಮಾಜಿ ಇಂಗ್ಲಿಶ್ ಈಸ್ಟ್ ಇಂಡಿಯಾ ಕಂಪೆನಿ ಬಹಾದೂರ್ ವಿರುದ್ಧ ನಡೆಸಿದ ಹೋರಾಟವನ್ನಾಗಲಿ, ಅಥವಾ ೧೮ನೆಯ ಶತಮಾನದ ಕೊನೆಯಲ್ಲಿ ಟೀಪೂ ಸುಲ್ತಾನ ಮರಾಠರ, ಬ್ರಿಟಿಶರ ವಿರುದ್ಧ ಸೆಣಸಿದ ಯುದ್ಧಗಳನ್ನಾಗಲಿ, ಐಡಿಯಲಾಜಿಕಲ್ ಸಂಘರ್ಷಗಳೆಂದು ಕರೆಯಲಾಗದು. ಹಾಗೆ ಕರೆಯುವುದರಿಂದ ಉಂಟಾಗುವ ಆಭಾಸಗಳನ್ನು ಕುರಿತು ಇತಿಹಾಸಜ್ಞರಲ್ಲಿ ಒಂದು ಮಟ್ಟಿಗಿನ ಸಹಮತವೂ ಈಗ ಬೆಳೆದಿದೆ. ಭಾರತದಲ್ಲಿ ವ್ಯಾಪಕವಾಗಿ ಬೆಳೆದಿದ್ದ ವಾದಪರಂಪರೆಯೂ ಅಷ್ಟೇ. ಅದು ಐಡಿಯಲಾಜಿಕಲ್ ಜಗಳವಲ್ಲ. ಹೆಚ್ಚೆಂದರೆ ಅದು ವಿಜ್ಞಾನದಲ್ಲಿ ವಿಭಿನ್ನ ಸಿದ್ಧಾಂತಗಳ ನಡುವೆ ನಡೆಯುವ ವಾದಗಳ ರೀತಿಯ, ಇಂಟರ್-ಥಿಯರಿಟಿಕಲ್ ಎನ್ನಬಹುದಾದ ವಾದ. ಮೀಮಾಂಸಕರ ಮತ್ತು ವೇದಾಂತಿಗಳ ನಡುವೆ, ಬೌದ್ಧರು, ಜೈನರು ಮತ್ತು ಆಸ್ತಿಕರ ನಡುವೆ, ಇಂತಹ ಯಾವುದೇ ವಿಚಾರ ವಿನಿಮಯವನ್ನು ತೆಗೆದುಕೊಂಡರೂ ಅದು ಐಡಿಯಲಾಜಿಕಲ್ ಜಗಳವಲ್ಲ ಎನ್ನುವುದು ಇತ್ತೀಚಿನ ಸಂಶೋಧನೆಗಳಲ್ಲಿ ಮತ್ತೆಮತ್ತೆ ದೃಢವಾಗುತ್ತಿರುವ ವಿಚಾರ.  

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಒಂದು ದೊಡ್ಡ ಮಟ್ಟದ ಐಡಿಯಲಾಜಿಕಲ್ ಸಂಘರ್ಷ ಇದೆಯೆಂದು ಹೇಳಲಾಗುತ್ತದೆ. ರಾಜಕೀಯ ಪಕ್ಷಗಳ ಮಟ್ಟದಲ್ಲಿ ಇದು ಬಲಪಂಥೀಯ ಮತ್ತು ಎಡಪಂಥೀಯ ಪಕ್ಷಗಳ ನಡುವೆ ಇರುವಂಥದ್ದು ಎನ್ನಲಾಗುತ್ತದೆ. ಮೇಲ್ಜಾತಿಗಳು ಮತ್ತು ಕೆಳಜಾತಿಗಳ ನಡುವೆ ಒಂದು ಐಡಿಯಲಾಜಿಕಲ್ ಸಮರವಿದೆ, ಬಂಡವಾಳಶಾಹಿಗಳು ಮತ್ತು ಕಾರ್ಮಿಕವರ್ಗಗಳ ನಡುವೆ, ಸ್ತ್ರೀಯರು ಮತ್ತು ಪುರುಷಪ್ರಧಾನ ವ್ಯವಸ್ಥೆಯ ವಿರುದ್ಧ, ಹೆಟೆರೋಸೆಕ್ಶುವಲ್ ಜನರು ಮತ್ತು ಪರ್ಯಾಯ ಸೆಕ್ಶುವಾಲಿಟಿಯ ಜನರ ನಡುವೆ, ಹೀಗೆ ಎಲ್ಲೆಲ್ಲೇ ನೋಡಿದರೂ, ಐಡಿಯಲಾಜಿಕಲ್ ಸಮರವಿದೆ ಎಂದು ಕಾಣುತ್ತದೆ. ಆದರೆ, ಇಂಥ ಒಂದು ಪರಿಕಲ್ಪನೆ ಒಂದು ನಿರ್ದಿಷ್ಟ ಸಾಂಸ್ಕೃತಿಕ ಪರಿಸರದಲ್ಲಿ (ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ), ಒಂದು ನಿರ್ದಿಷ್ಟ ಐತಿಹಾಸಿಕ ಘಟ್ಟದಲ್ಲಿ (ಅಂದರೆ, ಪ್ರೊಟೆಸ್ಟೆಂಟ್-ಚಳವಳಿಯ ನಂತರದ ಯುಗದಲ್ಲಿ) ಮೊದಲು ಬೆಳೆದಿದ್ದು ಎನ್ನುವ ಚಿತ್ರಣವನ್ನು ಗಮನಿಸಿದರೆ, ನಮ್ಮ ಚಿತ್ರಣಗಳೇ ದೋಷಯುಕ್ತವಾಗಿರಲಿಕ್ಕೂ ಸಾಧ್ಯ ಎನ್ನುವುದನ್ನು ಸೂಚಿಸುತ್ತದೆ. ಇದರರ್ಥ ಒಂದು ಸಮಾಜದಲ್ಲಿ ಒಂದು ವರ್ಗದ ಜನ ಇನ್ನೊಂದು ವರ್ಗದ ಜನರ ಜೊತೆ ಸೆಣಸಿಗೆ ಬೀಳುವುದಿಲ್ಲ ಎಂದಲ್ಲ. ಆದರೆ, ಇಂಥ ತಿಕ್ಕಾಟಗಳು ಐಡಿಯಲಾಜಿಕಲ್ ಸಂಘರ್ಷಗಳೋ ಅಲ್ಲವೋ ಎನ್ನುವುದು ಮೇಲ್ನೋಟದಿಂದಷ್ಟೇ ಸಾಬೀತಾಗುವ ಸಂಗತಿಗಳಲ್ಲ.  

ಐಡಿಯಲಾಜಿಕಲ್ ಸಂಘರ್ಷವೆಂದು ಕರೆಯಲಾಗುವ ಸಂಘರ್ಷದ ಸ್ಥೂಲ ವಿನ್ಯಾಸ ಹೀಗಿರುತ್ತದೆ. ಒಂದು ಸಮಾಜವನ್ನೋ, ಅಥವಾ ರಾಜ್ಯವನ್ನೋ ನಡೆಸುವ ಕೆಲವು ನಿರ್ದಿಷ್ಟ ವರ್ಗಗಳಿರುತ್ತವೆ. ಆ ವರ್ಗದ ವರ್ತನೆಗಳು ಇತರ ವರ್ಗಗಳಿಗೆ ತ್ರಾಸದಾಯಕವಾಗಿಯೋ, ಶೋಷಕವಾಗಿಯೋ, ಅಥವಾ ಕನಿಷ್ಟಪಕ್ಷ ಅಪಥ್ಯವಾಗಿಯೋ ಇರುವುದೂ ಅಪರೂಪವೇನಲ್ಲ. ಅಂತಹ ವರ್ಗಗಳ ನಡವಳಿಕೆಗಳಿಗೆ, ವರ್ತನೆಗಳಿಗೆ ಆಧಾರವಾಗಿರುವುದು ಅವುಗಳು ಪ್ರಪಂಚದ ಬಗ್ಗೆ ತಾವು ಸತ್ಯವೆಂದು ನಂಬಿಕೊಂಡು ಬಂದ ವಿಚಾರಗಳು. ಆದರೆ, ಈ ವಿಚಾರಗಳು ಒಂದು ವರ್ಗದ ಅನುಭವ ಮಾತ್ರವೇ ಆಗಿರುವುದರಿಂದ, ಅವು ಸಾರ್ವತ್ರಿಕ ಸತ್ಯಗಳಲ್ಲ. ಹಾಗಾಗಿ, ಒಂದು ವರ್ಗವನ್ನು ವಿರೋಧಿಸುವುದು ಎಂದರೆ ನಿಜವಾಗಿ ಆ ವರ್ಗಗಳು ಸತ್ಯವೆಂದು ನಂಬಿಕೊಂಡು ಬಂದ ವಿಚಾರಗಳನ್ನು ವಿರೋಧಿಸುವುದು ಎಂದಾಗುತ್ತದೆ. ಆದರೆ ಇಲ್ಲಿಯೇ ಇನ್ನೊಂದು ಪ್ರಶ್ನೆಯೂ ಏಳುತ್ತದೆ. ನಮ್ಮ ವಿರೋಧಿ ವರ್ಗಗಳ ವರ್ತನೆಯೇನೋ ಒಂದು ರೀತಿಯ ನಂಬಿಕೆಗಳಿಂದ ಉಂಟಾಗಿರುವಂಥದ್ದು. ಮತ್ತು ಆ ನಂಬಿಕೆಗಳು ಸಾರ್ವತ್ರಿಕವಲ್ಲದ, ಹಾಗಾಗಿ ದೋಷಯುಕ್ತವಾದ ನಂಬಿಕೆಗಳು. ಆದರೆ, ನಮ್ಮ ನಂಬಿಕೆಗಳೂ ಹಾಗೆಯೇ ದೋಷಯುಕ್ತವಲ್ಲ ಎನ್ನುವುದಕ್ಕೆ ಏನು ಖಾತರಿ?

ಅಷ್ಟಕ್ಕೂ ಐಡಿಯಲಾಜಿಕಲ್ ಸಂಘರ್ಷಗಳು ಕೇವಲ ನನ್ನದು-ತನ್ನದು ಎನ್ನುವ ಆಧಾರದ ಮೇಲೆ ನಡೆಯುವ ಸಂಘರ್ಷವಲ್ಲ. ತಾಲಿಬಾನಿಗಳು ತಮ್ಮ ವಿಚಾರವನ್ನು ನಿಜಕ್ಕೂ ಸತ್ಯವೆಂದು ನಂಬಿರುವುದರಿಂದಲೇ ನಂಬದ ಇತರರನ್ನು ಶಿಕ್ಷಿಸುವುದಕ್ಕೆ ಅವರಿಗೆ ನೈತಿಕ ಅಧಿಕಾರ ದೊರೆಯುವಂಥದ್ದು. ಅಮೇರಿಕ ದೇಶಕ್ಕೆ ಸ್ವಾತಂತ್ರ್ಯ, ಪ್ರಜಾತಾಂತ್ರಿಕ ಹಕ್ಕುಗಳು, ಮತ್ತು ಮುಕ್ತ ಮಾರುಕಟ್ಟೆಯ ಕುರಿತ ತನ್ನ ನಂಬಿಕೆ ಸತ್ಯಸ್ಯಸತ್ಯ ಎಂದು ಕಾಣುವುದರಿಂದಲೇ ಅದಕ್ಕೆ ರಷ್ಯಾದಂಥ, ಉತ್ತರ ಕೊರಿಯಾದಂಥ, ಇರಾನದಂಥ ದೇಶಗಳ ಸರಕಾರಗಳ ವಿರುದ್ಧ ಯುದ್ಧ ಸಾರಲು ನೈತಿಕ ಸಮರ್ಥನೆ ದೊರೆಯುವಂಥದ್ದು.

ಇತರರ ವಿಚಾರಗಳು ದೋಷಯುಕ್ತವಾಗಿರಬಹುದು ಎನ್ನುವ ಕಲ್ಪನೆಗೆ ಸರಿಸಮವಾಗಿ ತನ್ನ ವಿಚಾರಗಳೂ ದೋಷಯುಕ್ತವಲ್ಲ ಎನ್ನುವುದಕ್ಕೆ ಏನು ಖಾತರಿ? ತಾನು ನಂಬಿದ ವಿಚಾರಗಳು ಸತ್ಯ ಎನ್ನುವ ಖಾತರಿ ಇಲ್ಲದಿದ್ದರೆ, ಐಡಿಯಲಾಜಿಕಲ್ ಸಂಘರ್ಷಗಳೆಂದು ನಾವು ಪಟ್ಟಿ ಮಾಡಿದ ಹೆಚ್ಚಿನ ಸಂಘರ್ಷಗಳನ್ನು ಮುಂದುವರೆಸಿಕೊಂಡು ಹೋಗಲು ಜನರಿಗೆ, ಶಾಸನಗಳಿಗೆ ಸಾಧ್ಯವೇ ಆಗುತ್ತಿರಲಿಲ್ಲ. ಆದರೆ ಅವ್ಯಾಹತವಾಗಿ ಇಂತಹ ಸಂಘರ್ಷಗಳು ನಡೆದುಕೊಂಡ ಬಂದಿವೆ ಎಂದಮೇಲೆ ನಮ್ಮ ವಿಚಾರಗಳ ಸತ್ಯತೆಯನ್ನು ಕಾಪಾಡುವ ಒಂದು ವ್ಯವಸ್ಥಿತವಾದ ವಿನ್ಯಾಸ ಕೆಲಸ ಮಾಡುತ್ತಿದೆಯೋ ಎಂದು ಪರೀಕ್ಷಿಸಬೇಕು. ಹಾಗೆಂದು ಇದನ್ನು ಮನಶ್ಶಾಸ್ತ್ರಜ್ಞರು ಹೇಳುವ ಸ್ವಯಂಪಕ್ಷಪಾತದ ಉದಾಹರಣೆ ಎಂದು ಕೈತೊಳೆದುಕೊಳ್ಳಲು ಬರುವುದಿಲ್ಲ. ಸ್ವಯಂಪಕ್ಷಪಾತ ಎನ್ನುವುದು ಒಂದು ರೀತಿಯ ಬೌದ್ಧಿಕ ಕೊರತೆಯಿಂದ ಉಂಟಾಗುವಂಥದ್ದು. ತನ್ನ ನಂಬಿಕೆಗಳನ್ನು ಹೊರಗಿನ ವಸ್ತುಸ್ಥಿತಿಯ ಸತ್ಯಗಳಿಂದ ದೂರವಿಡುವುದರಿಂದ ಆಗುವಂಥದ್ದು. ಆದರೆ, ಎಂದಾದರೂ ಹೊರಗಿನ ವಾಸ್ತವ ಮತ್ತು ಸತ್ಯಗಳು ನಮಗೆ ಗೋಚರಿಸಿದಾಗ, ಇಂತಹ ಸ್ವಯಂಪಕ್ಷಪಾತಕ್ಕೆ ಹೊಡೆತ ಬೀಳುತ್ತದೆ. ಸ್ವಾಭಾವಿಕವಾಗಿಯೇ ಆಗ ನಾವು ಸ್ವಯಂಪಕ್ಷಪಾತದಿಂದ ಹೊರಬರುತ್ತೇವೆ. ಆದರೆ, ಐಡಿಯಲಾಜಿಕಲ್ ಸಂಘರ್ಷ ಹೀಗೆ ವೈಯಕ್ತಿಕ ಮಟ್ಟದಲ್ಲಿ ವಸ್ತುಸ್ಥಿತಿಗಳ ಕುರಿತ ಕುರುಡಿನಿಂದ ಬರುವಂಥದಲ್ಲ. ಅದು ಒಂದು ಸಾರ್ವತ್ರಿಕ ಮಟ್ಟದ ಒಪ್ಪಿಗೆ ಮತ್ತು ಪ್ರತಿಷ್ಟಾಪನೆಯಿಂದ ಬರುವಂಥದ್ದು. ಇದು ಒಂದು ಇಡೀ ಜನಾಂಗಕ್ಕೆ, ಒಂದು ಇಡೀ ತಲೆಮಾರಿಗೇ, ಅಥವಾ ಒಂದು ಇಡೀ ಸಮಾಜಕ್ಕೆ ಬಡಿದ ಸ್ವಯಂಪಕ್ಷಪಾತದ ಕಾಯಿಲೆ ಎಂದು ಹೇಳಿಬಿಡಬಹುದು. ಆದರೆ ಹಾಗೆ ಹೇಳುವುದರಿಂದ ಏನೂ ಹೇಳಿದಂತೆ ಆಗುವುದಿಲ್ಲ. ನಾವು ನಂಬಿರುವ ವಿಚಾರ ಯಾಕೆ ಐಡಿಯಲಾಜಿಕಲ್ ಎಂದು ತಿಳಿಯಲೂ ಸಾಧ್ಯವಾಗುವುದಿಲ್ಲ.

ಐಡಿಯಾಲಜಿಯ ಸಂದರ್ಭಾತೀತ ಲಕ್ಷಣ

ಐಡಿಯಾಲಜಿ ಎನ್ನುವುದು ಯಾವುದೇ ನಿರ್ದಿಷ್ಟ ಸಂಗತಿಗಳ ಅಥವಾ ಅನುಭವಗಳ ಕುರಿತ ವ್ಯವಸ್ಥಿತವಾದ ವಿವರಣೆಯಲ್ಲ. ವಿಜ್ಞಾನದ ಸಿದ್ಧಾಂತಗಳು ಈ ರೀತಿಯವು. ಅಂದರೆ, ಅವು ಪ್ರಪಂಚದ ಯಾವುದೋ ನಿರ್ದಿಷ್ಟ ಅನುಭವಗಳು ಮತ್ತು ಸಂಗತಿಗಳ ಕುರಿತ ವಿವರಣೆಗಳೇ ವಿನಾ ಇಡೀ ಪ್ರಪಂಚದ ಕುರಿತ ವಿವರಣೆಗಳಲ್ಲ. ಯಾವುದೇ ಆಚಾರವಾಗಲಿ, ಕ್ರಿಯಾಕರ್ಮವಾಗಲಿ, ಅದನ್ನು ಅರ್ಥೈಸಲು ಒಂದೇ ನಿರ್ದಿಷ್ಟ ಸಾರ್ವತ್ರಿಕ ಸಂದರ್ಭ ಎನ್ನುವಂಥದ್ದು ಇಲ್ಲ. ಉದಾಹರಣೆಗೆ, ನಮ್ಮ ಪಥ್ಯ. ನಾವು ಯಾವಾಗ ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಎಂದು ನಿರ್ಧರಿಸುವುದಕ್ಕೆ ಒಂದು ಸಾರ್ವತ್ರಿಕ ಮಾನದಂಡ ಎನ್ನುವುದು ಇಲ್ಲ. ಕೆಲವು ಪ್ರಕೃತಿಯ ಜನರು ಕೆಲವು ಆಹಾರಗಳನ್ನು ಸೇವಿಸಬೇಕು. ಹಾಗೆಯೇ, ಕೆಲವು ಪ್ರದೇಶಗಳಲ್ಲಿ ವಾಸಿಸುವಾಗ ಕೆಲವು ರೀತಿಯ ಆಹಾರ ಸೇವಿಸಬೇಕು. ಆಹಾರ ಸೇವನೆಯನ್ನು ನಿರ್ಧರಿಸಲು ಇರುವ ಮಾನದಂಡಗಳು ಯಾವುದು ಎಂದು ಕೇಳಿದರೆ, ಅದೂ ಆಯಾ ಸಂದರ್ಭಕ್ಕೆ ನಿಷ್ಠವಾದದ್ದೆ ಹೊರತೂ ಸಾರ್ವತ್ರಿಕವಲ್ಲ. ಇನ್ನೊಂದು ಉದಾಹರಣೆ, ವೈಜ್ಞಾನಿಕ ಸಂಶೋಧನೆಗಳಿಗೆ ಸಂಬಂಧಪಟ್ಟಿದ್ದು. ಒಂದು ಸಿದ್ಧಾಂತ ವೈಜ್ಞಾನಿಕವಾಗಲು ಯಾವ ರೀತಿಯ ವಿಧಾನಗಳನ್ನು ನಾವು ಅನುಸರಿಸಬೇಕು ಎನ್ನುವ ಪ್ರಶ್ನೆಗೆ ಸಾರ್ವತ್ರಿಕ ಉತ್ತರಗಳಿಲ್ಲ. ಅದೂ ಒಂದು ಸಂದರ್ಭನಿಷ್ಠ ಪ್ರಶ್ನೆಯೇ. ಕೆಲವೊಮ್ಮೆ ಹೊಸ ಸಂಗತಿಗಳನ್ನು ಗಮನಿಸಬೇಕು, ಹಳೆಯ ವಿವರಣೆಗಳನ್ನು ಕೈಬಿಡಬೇಕು. ಇನ್ನು ಕೆಲವೊಮ್ಮೆ, ಹಳೆಯ ವಿವರಣೆಗಳನ್ನು ಕಾಪಾಡಬೇಕು, ಹೊಸದೆಂದು ತೋರುವ ಸಂಗತಿಗಳನ್ನು ಅಪವಾದಗಳು ಎಂದು ಕಡೆಗಣಿಸಬೇಕು. ಕೆಲವೊಮ್ಮೆ ವಸ್ತುನಿಷ್ಟವಾಗಿರಬೇಕು. ಇನ್ನು ಕೆಲವೊಮ್ಮೆ, ವಸ್ತುನಿಷ್ಟತೆಯನ್ನು ಮೀರಿ ವಿವರಣೆಗಳ ಆಂತರಿಕ ತರ್ಕವನ್ನು ಕಾಪಾಡುವತ್ತ ಗಮನ ಹರಿಸಬೇಕು. ಆದರೆ, ಇಲ್ಲೆಲ್ಲಾ ಸಾರ್ವತ್ರಿಕವಾಗಿ, ಸಂದರ್ಭಾತೀತವಾಗಿ ಇಂಥದೇ ವಿಧಾನವೊಂದಿದೆ ಎಂದು ಹೇಳಲಾಗದು.  

ಮನುಷ್ಯ ಸಂದರ್ಭದ ಯಾವ ಚಟುವಟಿಕೆಯೇ ಆಗಲೀ ಅದನ್ನು ಅರ್ಥೈಸಿಕೊಳ್ಳಲು ಆಯಾ ಸಂದರ್ಭಗಳ ಮತ್ತು ಆಯಾ ಚಟುವಟಿಕೆಗಳ ಆಂತರಿಕ ತರ್ಕದ ಮೊರೆಹೋಗಬೇಕಾಗುವುದು ಅನಿವಾರ್ಯ. ನಾವು ಎಷ್ಟೇ ಸಾರ್ವತ್ರಿಕವಾದ, ಸಾಮಾನ್ಯವಾದ ನಿಯಮಗಳು, ವಿವರಣೆಗಳನ್ನು ರೂಪಿಸಬಹುದಾದರೂ, ಅವೆಲ್ಲವೂ ಈ ರೀತಿಯ ಅನುಗಮನದ ಅಥವಾ ಇನ್ಡಕ್ಟಿವ್ ಎಂದು ಕರೆಯಬಹುದಾದ ನೆಲೆಯಿಂದ ಮಾತ್ರವೇ ಸಾಧ್ಯವಾಗುವಂಥದ್ದು. ಅಂದರೆ, ನಮ್ಮ ನಿರ್ದಿಷ್ಟ ಸಂದರ್ಭಗಳ ಕುರಿತ ಅನುಮಾನ-ಪ್ರಮಾಣಗಳಿಂದ ಹೊರಟು ಹಲವು ಸಂದರ್ಭಗಳಿಗೆ ಪ್ರಸ್ತುತವಾಗುವ ವಿವರಣೆಗಳು ಮತ್ತು ನಿಯಮಗಳನ್ನು ರೂಪಿಸಬಹುದು.

ಆದರೆ, ಐಡಿಯಾಲಜಿಯ ಒಂದು ಮುಖ್ಯ ಲಕ್ಷಣವೆಂದರೆ ಅದು ಚಟುವಟಿಕೆಗಳ ಕುರಿತ ಇಂತಹ ನಿರ್ದಿಷ್ಟ ಸಂದರ್ಭಗಳ ಆಚೆಗೆ, ಈ ಸಂದರ್ಭಗಳಿಗಿಂತಲೂ ಮೊದಲಿಗೇ, ಪ್ರಪಂಚದಲ್ಲಿರುವ ಸಂಗತಿಗಳ ಕುರಿತು ಒಂದು ಸ್ಥೂಲ ಚಿತ್ರಣವನ್ನು ಮೊದಲೇ ಕಟ್ಟಿಕೊಡುತ್ತದೆ. ಉದಾಹರಣೆಗೆ, ಮಾರ್ಕ್ಸಿಸ್ಟ್ ಇತಿಹಾಸಕಾರರು ಹೇಳುವ ಇತಿಹಾಸದ ಎಲ್ಲಾ ಸಾಮಾಜಿಕ ಘಟನೆಗಳೂ ವರ್ಗ ಸಂಘರ್ಷದ ರೂಪಗಳು ಎನ್ನುವ ಚಿತ್ರಣವನ್ನು ತೆಗೆದುಕೊಳ್ಳಿ. ಇದು ಯಾವುದೇ ನಿರ್ದಿಷ್ಟ ಐತಿಹಾಸಿಕ ಘಟನೆಯ ಕುರಿತೂ ವಿವರಣೆಯಲ್ಲ. ಬದಲಾಗಿ, ಎಲ್ಲಾ ಘಟನೆಗಳಿಗೂ ಆ ಘಟನೆಗಳ ಪೂರ್ವದಲ್ಲೇ ಸಿದ್ಧವಾದ ಒಂದು ಸಾರ್ವತ್ರಿಕ ವಿವರಣೆ. ಹಾಗೆಯೇ ಈ ವಿವರಣೆ ನಮ್ಮ ಅನುಭವದಲ್ಲಿ ಏಳುವ ಪ್ರಶ್ನೆಗಳು ಮತ್ತು ಸಮಸ್ಯೆಗಳಿಗೆ ಪರಿಹಾರವಲ್ಲ. ಅನುಭವವನ್ನೇ ಒಂದು ನಿರ್ದಿಷ್ಟ ರೀತಿಯಲ್ಲಿ ವ್ಯಾಖ್ಯಾನಿಸುವ ಪ್ರಯತ್ನ.

ಐಡಿಯಾಲಜಿಯಲ್ಲಿ ಸತ್ಯ ಮತ್ತು ಆಚಾರಗಳ ಸಂಬಂಧ

ಇನ್ನೊಂದು ಮುಖ್ಯ ವಿಚಾರ ನಮ್ಮ ಕ್ರಿಯಾಕರ್ಮಗಳಿಗೂ ಸತ್ಯಕ್ಕೂ ಇರುವ ನಂಟಿಗೆ ಸಂಬಂಧಪಟ್ಟಿದ್ದು. ಪ್ರಪಂಚದ ವಸ್ತುವಿವರಗಳ ಕುರಿತು ಬೇಕಾದರೆ, ಯಾಕೆ ಒಂದು ನಿರ್ದಿಷ್ಟ ಸಂಗತಿ ಹೀಗೆಯೇ ಇದೆ. ಯಾಕೆ ಇನ್ನು ಹೇಗೋ ಇಲ್ಲ ಎನ್ನುವ ರೀತಿಯ ಪ್ರಶ್ನೆಯನ್ನು ಕೇಳಬಹುದು. ಯಾಕೆ ನಿರ್ದಿಷ್ಟ ಪರಮಾಣುಗಳು ನಿರ್ದಿಷ್ಟ ರೀತಿಯಲ್ಲೇ ಗಿರಕಿ ಹೊಡೆಯುತ್ತವೆ. ಯಾಕೆ ವಿಶ್ವವು ಇಂತಿಷ್ಟು ವರ್ಷಗಳ ನಂತರ ಒಂದು ಕಪ್ಪು ರಂಧ್ರದಲ್ಲಿ ಕೊನೆಗೊಳ್ಳಲಿದೆ ಇತ್ಯಾದಿ. ಆದರೆ, ಮನುಷ್ಯರ ಚಟುವಟಿಕೆಗಳ ಕುರಿತು ಈ ರೀತಿಯ ಪ್ರಶ್ನೆಗಳು ಸಮಂಜಸವಲ್ಲ. ಯಾಕೆ ಒಂದು ನಿರ್ದಿಷ್ಟ ಚಟುವಟಿಕೆ ಹೀಗೆಯೇ ಇರಬೇಕು ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಒಂದು ಚಟುವಟಿಕೆ ಒಂದು ನಿರ್ದಿಷ್ಟ ರೀತಿಯಲ್ಲಿರುವುದು ಆ ಚಟುವಟಿಕೆಯ ಆಂತರಿಕ ಲಕ್ಷಣವೇ ಹೊರತೂ, ಆ ಚಟುವಟಿಕೆಯನ್ನು ವಿವರಿಸಲು ಬಳಸುವ ಒಂದು ತರ್ಕವಾಗಲು ಸಾಧ್ಯವಿಲ್ಲ. ಇದು ಯಾಕೆ ಹಬ್ಬಹರಿದಿನಗಳಲ್ಲಿ ಉಪವಾಸದಿಂದಿರಬೇಕು ಎನ್ನುವ ಪ್ರಶ್ನೆಗೂ ಪ್ರಸ್ತುತ. ಆಧುನಿಕ ಭೌತಶಾಸ್ತ್ರದಲ್ಲಿ ಯಾಕೆ ವಿವರಣೆಗಳು ಗಣಿತದ ಭಾಷೆಯಲ್ಲಿಯೇ ಇರಬೇಕು ಎನ್ನುವ ಪ್ರಶ್ನೆಗೂ ಪ್ರಸ್ತುತ. ಇವೆಲ್ಲವೂ ಆಯಾ ಚಟುವಟಿಕೆಗಳ ಆಂತರಿಕ ವಿನ್ಯಾಸಕ್ಕೆ ಸಂಬಂಧಪಟ್ಟಿದ್ದು. ಇವನ್ನು ಕಲಿಯಬಹುದು, ಮತ್ತು ಕಾಲಾಂತರದಲ್ಲಿ ಇವನ್ನು ಪರಿಷ್ಕರಿಸಬಹುದು. ಆದರೆ, ಇವುಗಳ ಕುರಿತ ಕಾರ್ಯ-ಕಾರಣ ವಿವರಣೆ ಸಾಧ್ಯವಿಲ್ಲ. ನಮ್ಮ ಚಟುವಟಿಕೆಗಳು ಕಾರ್ಯ-ಕಾರಣ ವಿವರಣೆಯ ಜಾಲಕ್ಕೆ ದೊರಕುವಂಥವಲ್ಲ. ಇನ್ನೂ ಮುಂದುವರೆದು ಹೇಳಬೇಕೆಂದರೆ, ನಾವು ನಮ್ಮ ಬೌದ್ಧಿಕ ಚಟುವಟಿಕೆಗಳ ಮೂಲಕ ರೂಪಿಸಬಹುದಾದ ವಿವರಣೆಗಳನ್ನು ಸತ್ಯ ಅಥವಾ ಸುಳ್ಳು ಎಂದು ತೋರಿಸಬಹುದೇ ವಿನಾ, ನಮ್ಮ ಚಟುವಟಿಕೆಗಳನ್ನೇ ಸತ್ಯ ಅಥವಾ ಸುಳ್ಳು ಎಂದು ತೋರಿಸುವುದು ಅಸಾಧ್ಯ. ಅಂದರೆ, ಮನುಷ್ಯರ ಚಟುವಟಿಕೆಗಳು ಸತ್ಯಕ್ಕೆ ಸ್ಪಂದಿಸುವುದಿಲ್ಲ. ಅವು ಪ್ರಸ್ತುತತೆ, ಸಾಂಗತ್ಯ, ತಜ್ಞತೆ, ದಕ್ಷತೆ, ಇಂತಹ ಮೌಲ್ಯಗಳಿಗೆ ಮಾತ್ರ ಸ್ಪಂದಿಸುತ್ತವೆ. ಭೌತಶಾಸ್ತ್ರದ ಒಂದು ಸಿದ್ಧಾಂತ ಸತ್ಯವೋ ಸುಳ್ಳೋ ಆಗಿರಬಹುದು. ಆದರೆ, ಭೌತಶಾಸ್ತ್ರದ ಯಾವುದಾದರೂ ವಿಧಾನ ಅಥವಾ ಚಟುವಟಿಕೆ ಮಾತ್ರ ಪ್ರಸ್ತುತವೋ, ಅಪ್ರಸ್ತುತವೋ, ಸಂಗತವೋ, ಅಸಂಗತವೋ, ದಕ್ಷವೋ, ಅದಕ್ಷವೋ ಆಗಿರುತ್ತದೆಯೇ ಹೊರತೂ ಸತ್ಯವೋ ಸುಳ್ಳೋ ಆಗಿರಲು ಸಾಧ್ಯವಿಲ್ಲ. ಸತ್ಯವೋ ಸುಳ್ಳೋ ಆಗಿರಲು ಸಾಧ್ಯವಿಲ್ಲ ಎಂದಮೇಲೆ, ಚಟುವಟಿಕೆಗಳ ಹಿಂದೆ ಯಾವುದೊ ಒಂದು ನಿರ್ದಿಷ್ಟ ಸತ್ಯದ ಕುರಿತು ನಂಬಿಕೆ ಇರಲು ಸಾಧ್ಯವಿಲ್ಲ. ಚಟುವಟಿಕೆಗಳ ಹಿಂದೆ ಇರುವುದು ಅವನ್ನು ಮಾಡಲು ಬೇಕಾದ ನೈಪುಣ್ಯ ಮತ್ತು ಅದನ್ನು ಅಪೇಕ್ಷಿಸಲು ಬೇಕಾದ ಸಂಸ್ಕಾರ.

ಐಡಿಯಲಾಜಿಕಲ್ ಚಿಂತನೆ ಮನುಷ್ಯ ಚಟುವಟಿಕೆಗಳನ್ನು, ಸಂಪ್ರದಾಯಗಳನ್ನು ಸತ್ಯದ ನೆಲೆಯಿಂದ ನೋಡುತ್ತದೆ. ಅಂದರೆ, ಒಂದು ನಿರ್ದಿಷ್ಟ ಚಟುವಟಿಕೆ ಯಾವ ರೀತಿಯ ನಂಬಿಕೆಗಳ ಮೇಲೆ ನಿಂತಿದೆ ಎನ್ನುವುದು ಸೈದ್ಧಾಂತಿಕ ಚಿಂತನೆಯ ಮುಖ್ಯ ಪ್ರಶ್ನೆ. ಆ ನಂಬಿಕೆಗಳು ದೋಷಯುಕ್ತ ಎಂದು ತೋರಿಸಬಹುದಾದರೆ, ಆ ಚಟುವಟಿಕೆಗಳನ್ನು ದೋಷಯುಕ್ತ ಎಂದು ತೋರಿಸಬಹುದು. ಉದಾಹರಣೆಗೆ, ಪರ್ಜನ್ಯಸತ್ರದ ಹಿಂದೆ ಇರುವ ನಂಬಿಕೆ ಮಳೆ ಬರಿಸುವುದು ಎಂದಾದರೆ, ಮತ್ತು ಪರ್ಜನ್ಯಸತ್ರದಿಂದ ಮಳೆ ಬರುವುದಿಲ್ಲ ಎಂದು ತೋರಿಸಬಹುದಾದರೆ, ಆಗ ಪರ್ಜನ್ಯಸತ್ರವನ್ನು ಮಾಡುವುದೇ ದೋಷಯುಕ್ತ ಎಂದು ತೋರಿಸಬಹುದು ಎನ್ನುವುದು ಇಲ್ಲಿನ ವಾದ. ಇನ್ನೊಂದು ಉದಾಹರಣೆಗೆ, ಶಬರಿಮಲೆಯ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ ಎನ್ನುವ ಆಚಾರದ ಹಿಂದೆ ಮಹಿಳೆಯರು ಅಪವಿತ್ರರು ಎನ್ನುವ ನಂಬಿಕೆ ಕೆಲಸಮಾಡಿದೆ ಎಂದು ತೋರಿಸಬಹುದಾದರೆ, ಮತ್ತು ಆ ನಂಬಿಕೆ ದೋಷಯುಕ್ತ ಎಂದೂ ತೋರಿಸಬಹುದಾದರೆ, ಆಗ, ಶಬರಿಮಲೆಯಲ್ಲಿ ಮಹಿಳೆಯರನ್ನು ನಿರ್ಬಂಧಿಸುವ ಆಚಾರವನ್ನೂ ದೋಷಯುಕ್ತ ಎಂದು ವಾದಿಸಬಹುದು ಎನ್ನುವುದು ಇಲ್ಲಿನ ತರ್ಕ. ನಾವು ವೈಚಾರಿಕ ಚಿಂತನೆ ಎಂದು ಏನನ್ನು ಕರೆಯುತ್ತೇವೆಯೋ ಅಂಥ ಚಿಂತನೆ ನಿಂತಿರುವುದೇ ಹೀಗೆ ಮನುಷ್ಯ ಚಟುವಟಿಕೆಗಳನ್ನು ಸತ್ಯ ಮತ್ತು ನಂಬಿಕೆಯ ಜೊತೆಗೆ ಬೆಸೆದು ನೋಡುವ ಕ್ರಮದ ಮೇಲೆ.

ಈ ಕ್ರಮದ ಮೂಲ ಇರುವುದು ಕ್ಯಾಥೊಲಿಕ್ ಧರ್ಮದ ಕುರಿತ ೧೬ನೆಯ ಶತಮಾನದ ಪ್ರೊಟೆಸ್ಟೆಂಟ್ ವಿಮರ್ಶೆಗಳಲ್ಲಿ. ಪ್ರೊಟೆಸ್ಟೆಂಟ್ ಚಳವಳಿಯು ಕ್ಯಾಥೊಲಿಕ್ ಧರ್ಮವನ್ನು ಸುಳ್ಳು ನಂಬಿಕೆಗಳ ಆಗರ, ಭ್ರಷ್ಟ ಆಚಾರಗಳ ಮೊತ್ತ ಎನ್ನುವಂತೆ ಚಿತ್ರಿಸಿತು. ಅದರ ಭ್ರಷ್ಟತೆಗೆ ಕಾರಣ ಅದರ ನಂಬಿಕೆಗಳಲ್ಲಿರುವ ದೋಷ ಎಂದೂ ಹೇಳಿತು. ಕ್ಯಾಥೊಲಿಕ್ ಚರ್ಚು ತನ್ನ ಖಾಸಗಿ ಹಿತವನ್ನು ಕಾಪಾಡುವ ಭರದಲ್ಲಿ, ದೇವರ ಸತ್ಯವನ್ನು ಕೈಬಿಟ್ಟು ಸೈತಾನನ ಕೃತ್ರಿಮವನ್ನು ಅಪ್ಪಿಕೊಂಡಿದೆ ಎನ್ನುವುದು ಪ್ರೊಟೆಸ್ಟೆಂಟರ ವಾದ. ಇದು ಆಧುನಿಕ ವಿಚಾರವಾದದಲ್ಲಿ ಸಾಂಸ್ಥಿಕ ವಿಮರ್ಶೆಗೂ ಒಂದು ಅಡಿಪಾಯವನ್ನು ಹಾಕಿಕೊಟ್ಟಿತು. ಇಂದಿಗೂ ನಾವು ಸಾಂಸ್ಥಿಕ ವ್ಯವಸ್ಥೆಗಳನ್ನು ಟೀಕಿಸುವಾಗ, ಅವುಗಳನ್ನು ಸಾಮಾನ್ಯ ಹಿತಾಸಕ್ತಿಗಳನ್ನು ಕಾಪಾಡುವ ಬದಲು ತಮ್ಮ ಖಾಸಗಿ ಹಿತಾಸಕ್ತಿಗಳನ್ನು ಕಾಪಾಡುತ್ತಿವೆ ಎಂದೇ ಟೀಕಿಸುವುದು. ಮತ್ತು ಅಂಥಾ ಸ್ಥಿತಿಗೆ ಕಾರಣ, ಈ ಸಂಸ್ಥೆಗಳನ್ನು ನಡೆಸುತ್ತಿರುವವರ ಐಡಿಯಾಲಜಿ ದೋಷಯುಕ್ತವಾಗಿರುವುದು ಎಂದು ಹೇಳುವುದು. ಇದು ನೇರವಾಗಿ ಒಂದು ಪ್ರೊಟೆಸ್ಟೆಂಟ್ ಬಳುವಳಿಯೇ ಸರಿ.

ಮನುಷ್ಯ ಚಟುವಟಿಕೆಯ ಕುರಿತ ನಮ್ಮ ಎಲ್ಲಾ ಮಾತಿಗೂ ಅರ್ಥ ಬರುವುದು ಆಯಾ ಚಟುವಟಿಕೆಗಳ ಮಿತಿಗಳ ಒಳಗಿನಿಂದಲೇ. ಉದಾಹರಣೆಗೆ, ನಾವು ಕ್ರಿಕೆಟ್ ಆಟದಲ್ಲಿ ಒಂದು ನಿರ್ದಿಷ್ಟ ರೀತಿಯ ಚೆಂಡೆಸತವನ್ನು ಸ್ವಿಂಗ್ ಎಂದೂ ಇನ್ನೊಂದನ್ನು ಸ್ಪಿನ್ ಎಂದೂ ಗುರುತಿಸುವುದರ ಹಿಂದೆ ಕ್ರಿಕೆಟ್ ಆಟದ ಪರಿಚಯ ಮತ್ತು ಅದರ ರೀತಿನೀತಿಗಳ ಒಂದಿಡೀ ಪ್ರಪಂಚವೇ ಇದೆ. ಇದರ ಹೊರಗಿನ ಯಾವ ಸತ್ಯದ ಮೂಲಕವೂ ಇದನ್ನು ಗ್ರಹಿಸಲೂ, ರೂಪಿಸಲೂ ಆಗುವುದಿಲ್ಲ. ಐಡಿಯಾಲಜಿಕಲ್ ಚಿಂತನೆ ಪ್ರತೀ ಬಾರಿಯೂ ಕೇಳುವುದು ಈ ಮನುಷ್ಯ ಚಟುವಟಿಕೆ ಸಿಂಧುವೇ ಅಸಿಂಧುವೆ? ಎನ್ನುವ ರೀತಿಯ ಪ್ರಶ್ನೆಯನ್ನು. ಉದಾಹರಣೆಗೆ, ಜೀತ ಪದ್ಧತಿ ಸಿಂಧುವೆ? ಅಸಿಂಧುವೆ? ಲಿಂಗ ತಾರತಮ್ಯ ಸಿಂಧುವೆ? ಅಸಿಂಧುವೆ? ಒಂದು ಸಮಾಜದಲ್ಲಿ ಇರಬಹುದಾದ ಸಂಪನ್ಮೂಲಗಳ ಅಸಮಾನ ಹಂಚಿಕೆ ಸಿಂಧುವೆ ಅಸಿಂಧುವೆ? ಧಾರ್ಮಿಕ ಚಟುವಟಿಕೆಗಳು ಸಿಂಧುವೆ ಅಸಿಂಧುವೆ? ಅಷ್ಟೇ ಏಕೆ, ನಮ್ಮ ಧರ್ಮವೇ ಏಕಮೇವ ಸತ್ಯವೆಂದು ಇರುವಾಗ, ಇತರ ಧರ್ಮಗಳ ಪಾಲನೆ ಸಿಂಧುವೆ? ಅಸಿಂಧುವೆ? ಆದರೆ, ಇಂತಹ ಪ್ರಶ್ನೆಗಳೆಲ್ಲಾ ನಿಂತಿರುವುದು ನಮ್ಮ ಚಟುವಟಿಕೆಗಳು ನಿರ್ದಿಷ್ಟ ನಂಬಿಕೆಗಳ ಪ್ರತಿನಿಧಿಗಳು ಎನ್ನುವ ದೋಷಯುಕ್ತ ವಿಚಾರದ ಮೇಲೆ. ಇದರ ಬದಲು ಒಂದು ವೈಜ್ಞಾನಿಕವಾದ ಮತ್ತು ಸುಸಂಬದ್ಧವಾದ ಚಿಂತನೆ, ಒಂದು ಚಟುವಟಿಕೆಯಿಂದಾಗಿ ಏನೋ ಹಾನಿ ಉಂಟಾಗುತ್ತಿದೆ ಎಂದಾದಾಗ, ಆ ಚಟುವಟಿಕೆಯನ್ನು ಬದಲಿಸಿಯೂ ನಮ್ಮ ಸಂಪ್ರದಾಯಗಳನ್ನು ಪಾಲಿಸಲು ಸಾಧ್ಯವೇ ಎನ್ನುವ ಪ್ರಾಯೋಗಿಕ ಮನಸ್ಥಿತಿಯಿಂದ ಹೊರಡುತ್ತದೆ. ಅಥವಾ ಆ ಚಟುವಟಿಕೆಯನ್ನು ನಿಲ್ಲಿಸಿಯೂ ನಮ್ಮ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ಸಾಧ್ಯವೇ ಎಂದು ಪರೀಕ್ಷಿಸುತ್ತದೆ.

ಐಡಿಯಾಲಜಿ ಮತ್ತು ಸಂಘರ್ಷ

ಐಡಿಯಾಲಜಿಯ ಹೆಸರಿನಲ್ಲಿ ಆದ ಹಿಂಸೆಯ ಅಂದಾಜನ್ನು ಮಾಡಿದೆವು. ಐಡಿಯಲಾಜಿಕಲ್ ಅಲ್ಲದ ಸಂಪ್ರದಾಯಗಳು ಒಂದಕ್ಕೊಂದು ಎದುರಾದಾಗ, ಅವು ಮಿಕ್ಕವುಗಳ ಬಗ್ಗೆ ಅಸಡ್ಡೆ, ಅನಾದರ, ಅನಾಸಕ್ತಿಯನ್ನು ತೋರಿಸುವುದು ಸಾಧಾರಣ ಪ್ರತಿಕ್ರಿಯೆ. ಭಾರತದಲ್ಲಿ ವೀರಶೈವರ ಬಗ್ಗೆ ಜೈನರು, ಜೈನರ ಬಗ್ಗೆ ಬ್ರಾಹ್ಮಣರು, ಇವರೆಲ್ಲರ ಬಗ್ಗೆ ವೈಶ್ಯರು, ಹೀಗೆ ಎಷ್ಟು ಬೇಕಾದರೂ ಇದಕ್ಕೆ ಉದಾಹರಣೆ ಕೊಡಬಹುದು. ಆದರೆ, ಐಡಿಯಲಾಜಿಕಲ್ ಸಂಪ್ರದಾಯಗಳು ಒಂದಕ್ಕೊಂದು ಎದುರಾದಾಗ, ಅಥವಾ ಐಡಿಯಲಾಜಿಕಲ್ ಸಂಪ್ರದಾಯವೊಂದು ಐಡಿಯಲಾಜಿಕಲ್ ಅಲ್ಲದ ಸಂಪ್ರದಾಯಕ್ಕೆ ಎದುರಾದಾಗ, ಐಡಿಯಲಾಜಿಕಲ್ ಸಂಪ್ರದಾಯಗಳು ಮಿಕ್ಕವುಗಳ ಕುರಿತು ಟೀಕೆ, ಪ್ರತಿರೋಧ, ಹಿಂಸಾತ್ಮಕ ಪ್ರತಿಕ್ರಿಯೆಗಳನ್ನು ತೋರಿಸುವುದು ಸಾಧಾರಣ ಪ್ರಕ್ರಿಯೆ. ಭಾರತದಲ್ಲೇ ನೋಡುವುದಾದರೆ, ಮಾವೋವಾದಿ-ಲೆನಿನ್‌ವಾದಿ ಚಳುವಳಿ ಭಾರತದ ಪ್ರಭುತ್ವಕ್ಕೆ ತೋರಿಸಿದ ಪ್ರತಿಕ್ರಿಯೆ, ವಿಚಾರವಾದಿ ಚಳುವಳಿ ಸಂಪ್ರದಾಯಗಳಿಗೆ ತೋರಿಸುವ ಪ್ರತಿಕ್ರಿಯೆ, ಹಿಂದುತ್ವ ಚಳುವಳಿ ಹಿಂದೂಯೇತರರ ಕುರಿತು ತೋರುವ ಪ್ರತಿಕ್ರಿಯೆ, ಕ್ರಿಶ್ಚಿಯನ್ ಇವಾನ್ಜೆಲಿಕಲ್ ಚರ್ಚುಗಳು ಭಾರತದ ಸಂಪ್ರದಾಯಗಳಿಗೆ ತೋರಿಸುವ ಪ್ರತಿಕ್ರಿಯೆ, ಇಸ್ಲಾಮಿಕ್-ಮೂಲಭೂತವಾದಿಗಳು ಇನ್ನಿತರ ಸಂಪ್ರದಾಯಗಳಿಗೆ ತೋರಿಸುವ ಪ್ರತಿಕ್ರಿಯೆ, ಇವೆಲ್ಲವೂ ಹಿಂಸಾತ್ಮಕವಾಗಿರುವುದಕ್ಕೆ ಕಾರಣ ಇವರೆಲ್ಲಾ ಅಪ್ರತಿಮ ಕೇಡಿಗರು ಎನ್ನುವುದಕ್ಕಲ್ಲ. ಬದಲಾಗಿ, ಐಡಿಯಲಾಜಿಕಲ್ ಸಂಘರ್ಷದ ಒಂದು ಆಂತರಿಕ ಗುಣವೇ ಇಂಥ ಪ್ರತಿಕ್ರಿಯೆಗಳನ್ನು ಉಂಟಮಾಡುವಂಥದ್ದು.  

ಸತ್ಯದ ಪಣದ ಮೇಲೆ ನಡೆವ ಎಲ್ಲಾ ವಾದವಿವಾದಗಳೂ ಒಂದೋ ತಾನು ನಂಬಿದ್ದು ಸುಳ್ಳೆಂದು ಸಾಬೀತಾಗುವ ಸಾಧ್ಯತೆಯನ್ನು ಒಪ್ಪಿಕೊಳ್ಳುವ ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು. ಆಧುನಿಕ ವಿಜ್ಞಾನ ಮತ್ತು ಸಂಸದೀಯ ಪ್ರಜಾತಂತ್ರ ಇಂತಹ ಸಾಂಸ್ಥಿಕ ವ್ಯವಸ್ಥೆಗೆ ಅತ್ಯುತ್ತಮ ಉದಾಹರಣೆಗಳು. ತಾನು ನಂಬಿದ್ದು ಸುಳ್ಳಾಗಬಹುದು ಎನ್ನುವ ಸಾಧ್ಯತೆಯನ್ನು ನಿರಾಕರಿಸಿದರೆ, ತಾರ್ಕಿಕವಾಗಿ ಇರುವ ಇನ್ನೊಂದೇ ವಿಕಲ್ಪವೆಂದರೆ, ತನ್ನ ಸತ್ಯವನ್ನು ವಿರೋಧಿಸುವ ಇನ್ನೊಂದು ಸತ್ಯದ ಸಾಧ್ಯತೆಯನ್ನೇ ನಿರಾಕರಿಸುವುದು. ಇನ್ನೊಂದರ ಅಸ್ತಿತ್ವದ ಸಾಧ್ಯತೆಯನ್ನು ನಿರಾಕರಿಸುವುದು ಎನ್ನುವುದಕ್ಕೆ ಒಂದು ಪದವಿದೆ. ಅದೇ ಹಿಂಸೆ.


ಪ್ರಜಾವಾಣಿ ದೀಪಾವಳಿ ವಿಶೇಷ ಸಂಚಿಕೆ ಅಕ್ಟೋಬರ್0-೨೦೨೨ರಲ್ಲಿ ಪ್ರಕಟಿತ

Comments

Popular posts from this blog

ಸ್ಟ್ರಕ್ಚರಲಿಸಂ (ರಚನಾವಾದ/ರಾಚನಿಕವಾದ)

ಮಾರ್ಕ್ಸ್‌‌‌ ವಾದ

ಸುಖ-ಸಂತೋಷಕ್ಕೆ ಬೇಕಾಗುವುದೇನು? ಸಾಕಾಗುವುದೆಷ್ಟು?