ನಿತ್ಯಜೀವನದ ಜ್ಞಾನ ಮತ್ತು ವೈಜ್ಞಾನಿಕ ಜ್ಞಾನ


ಒಂದು ವಿಶಾಲವಾದ ದೃಷ್ಟಿಯಿಂದ ನೋಡಿದರೆ, ನಮ್ಮ ನಿತ್ಯ ಜೀವನದಲ್ಲಿ ನಾವು ಯೋಚನೆ ಮಾಡುವುದಕ್ಕೂ ಮತ್ತು ವೈಜ್ಞಾನಿಕ ಶಿಸ್ತುಗಳಲ್ಲಿ ಯೋಚನೆ ಮಾಡುವುದಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. ಎರಡೂ ಸಂದರ್ಭಗಳಲ್ಲಿ ನಮ್ಮ ಎದುರಿಗಿರುವ ಸಮಸ್ಯೆಗೆ ಪರಿಹಾರ ಹುಡುಕಲು ಪ್ರಯತ್ನಿಸುತ್ತಿರುತ್ತೇವೆ. ಆದರೆ, ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ, ಈ ಎರಡು ರೀತಿಯ ಚಿಂತನೆಯಲ್ಲಿ ಇರುವ ಕೆಲವು ವ್ಯತ್ಯಾಸಗಳೂ ಕಾಣಿಸತೊಡಗುತ್ತದೆ.

ವಸ್ತುಗಳು ಮತ್ತು ಹತಾರಗಳು
ಅದರಲ್ಲಿ ಅತೀ ಮುಖ್ಯ ವ್ಯತ್ಯಾಸವೆಂದರೆ ವಸ್ತುಗಳು ಮತ್ತು ಹತಾರಗಳ ನಡುವೆ ಇರುವ ಸಂಬಂಧದಲ್ಲಿ ಇರುವ ವ್ಯತ್ಯಾಸ. ಒಂದು ಉದಾಹರಣೆಯನ್ನು ಗಮನಿಸಿ. ನಿಮ್ಮ ಮನೆಯ ನಲ್ಲಿ ಸೋರುತ್ತಿದ್ದರೆ ಅದನ್ನು ರಿಪೇರಿ ಮಾಡುವುದಕ್ಕೆ ಸ್ಪಾನರ್ ಅಥವಾ ರಿಂಚ್ ಬೇಕು. ನಲ್ಲಿ ಎನ್ನುವುದು ವಸ್ತು. ರಿಂಚ್ ಎನ್ನುವುದು ಹತಾರ. ಇವುಗಳನ್ನು ಬಿಡಿಬಿಡಿಯಾಗಿ ನೀವು ಗ್ರಹಿಸಬಹುದು.

ಆದರೆ, ಸ್ವಲ್ಪ ಔಪಚಾರಿಕವಾದ ವೈಜ್ಞಾನಿಕ ಶಿಸ್ತುಗಳಲ್ಲಿ ಹೀಗೆ ವಸ್ತು ಮತ್ತು ಹತಾರವನ್ನು ಬಿಡಿಬಿಡಿಯಾಗಿ ಗ್ರಹಿಸುವುದು ಕಷ್ಟ. ಆ ಶಿಸ್ತು ಹೆಚ್ಚು ಹೆಚ್ಚು ಸಂಕೀರ್ಣವಾಗಿ ಬೆಳೆಯುತ್ತಾ ಹೋದಂತೆಲ್ಲಾ ಅದರಲ್ಲಿ ವಸ್ತು ಮತ್ತು ಹತಾರಗಳನ್ನು ಬೇರ್ಪಡಿಸುವುದು ಮತ್ತೂ ಕಷ್ಟ. ವೈರಸ್ ಒಂದು ವಸ್ತು. (ಅಧ್ಯಯನದ ವಸ್ತು). ಅದನ್ನು ಅರ್ಥಮಾಡಿಕೊಳ್ಳುವುದಕ್ಕೆ ವೈರಸ್‍ಗಳ ಬಗ್ಗೆ ಕೆಲವು ಸಿದ್ದಾಂತಗಳು ಮತ್ತು ಹತಾರಗಳು ಬೇಕಾಗುತ್ತವೆ. ಆದರೆ, ಈ ಸಿದ್ಧಾಂತಗಳು ಮತ್ತು ಹತಾರಗಳ ಹೊರಗೆ, ಸ್ವತಂತ್ರವಾಗಿ ವೈರಸ್‍ಗಳನ್ನು ಅರ್ಥಮಾಡಿಕೊಳ್ಳಲು ಅಥವಾ ಗುರುತಿಸಲು ಬರುವುದಿಲ್ಲ. ಹಾಗೆಯೇ, ಹಣದುಬ್ಬರ ಎನ್ನುವುದು ಒಂದು ವಿದ್ಯಮಾನ. ಆರ್ಥಿಕ ಸಿದ್ಧಾಂತಗಳಲ್ಲಿ ಕಂಡುಬರುವ ಪರಿಕಲ್ಪನೆಗಳ ಸಹಾಯವೇ ಇಲ್ಲದೇ, ಈ ಹಣದುಬ್ಬರ ಎನ್ನುವ ವಿದ್ಯಮಾನವನ್ನು ಅರ್ಥಮಾಡಿಕೊಳ್ಳಲು ಬರುವುದಿಲ್ಲ. ಅರ್ಥಮಾಡಿಕೊಳ್ಳುವುದು ಇರಲಿ. ಅದನ್ನು ಗಮನಿಸಲೂ ಸಾಧ್ಯವಿಲ್ಲ. ಹಣದುಬ್ಬರ ಕಣ್ಣಿಗೆ ಕಾಣುವ ವಿದ್ಯಮಾನವಲ್ಲ. ಅದು ಆರ್ಥಿಕ ಚಟುವಟಿಕೆಗಳನ್ನು ವಿವರಿಸುವ ಒಂದು ನಿರ್ದಿಷ್ಟ ಔಪಚಾರಿಕ ಕ್ರಮದೊಳಗೆ ತೋರಿಸಬಹುದಾದ ಒಂದು ವಿದ್ಯಮಾನ. ಅಂದರೆ, ಇದರ ಒಟ್ಟು ಅರ್ಥ ಇಷ್ಟು. ಒಂದು ಜ್ಞಾನಶಾಖೆ ಬೆಳೆಯುತ್ತಾ ಹೋದಂತೆಲ್ಲಾ ಅದರ ಹತಾರಗಳ ಸಹಾಯವಿಲ್ಲದೇ ಅದು ನಿಭಾಯಿಸುವ ವಸ್ತುಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ನಮ್ಮ ನಿತ್ಯ ಜೀವನದ ಭಾಷೆಯಲ್ಲಿ ಇದನ್ನು ಹೇಳಬೇಕೆಂದರೆ, ಆಗ ಸುಮಾರು ಹೀಗಿರುತ್ತದೆ. ನಿಮಗೆ ಟೈಲರಿಂಗ್ ಯಂತ್ರವನ್ನು ಬಳಸುವ ಕ್ರಮಗಳು ಗೊತ್ತಿಲ್ಲದಿದ್ದರೆ, ನೀವು ಉಟ್ಟಿರುವ ಬಟ್ಟೆಯಲ್ಲಿ ಇರಬಹುದಾದ ಹೊಲಿಗೆಯ ರೀತಿಗಳೂ ನಿಮಗೆ ಗೊತ್ತಾಗುವುದಿಲ್ಲ. ಇದರ ಸಾರಾಂಶ ಇಷ್ಟು. ಹತಾರಗಳ ಅರಿವಿಲ್ಲದೇ ವಸ್ತುಗಳ ಅರಿವಾಗುವುದಿಲ್ಲ.

ಇದು ನಮ್ಮ ಸಾಮಾನ್ಯಜ್ಞಾನಕ್ಕೆ ವ್ಯತಿರಿಕ್ತವೆಂದು ತೋರುವ ಅಂಶ. ನಾವು ಸಾಮಾನ್ಯವಾಗಿ ಹೇಳುವುದೇನೆಂದರೆ, ವಸ್ತುಗಳಿವೆ. ಹತಾರಗಳಿವೆ. ಯಾವ ವಸ್ತುವನ್ನು ನಿಭಾಯಿಸಲು ಯಾವ ಹತಾರ ಬೇಕೋ ಅದನ್ನು ಬಳಸಬೇಕು ಅಷ್ಟೆ. ಹೀಗೆ ಹೇಳುವವರಿಗೆ ಒಂದು ಸರಳ ಪ್ರಶ್ನೆ ಕೇಳಿ. “ಕಂಪ್ಯೂಟರ್‍ಗಳಲ್ಲಿ ಫೈಲುಗಳು ಇರುತ್ತವಲ್ಲ. ಅವನ್ನು ಡಿಲೀಟ್ ಮಾಡಿದ ಮೇಲೆ ಅವು ಎಲ್ಲಿಗೆ ಹೋಗುತ್ತವೆ?” ಎಂದು. ಅವರಿಗೆ ಬಿಟ್, ಬೈಟ್, ಕೋಡಿಂಗ್, ಡಾಟಾ, ಇಂತಹ ಕಂಪ್ಯೂಟರ್ ವಿಜ್ಞಾನದ ಹತಾರಗಳ ಅರಿವಿಲ್ಲದಿದ್ದರೆ, ಅವರು ಒಂದು ವಸ್ತುವನ್ನು ಹರಿದು ಎಸೆಯುವ ರೀತಿಯಲ್ಲೇ ಕಂಪ್ಯೂಟರ್ ಕೂಡಾ ವಸ್ತುವನ್ನು ಎಲ್ಲೋ ಎಸೆದು ಮಾಯ ಮಾಡುತ್ತದೆ ಎಂದುಕೊಂಡಿರುವ ಸಾಧ್ಯತೆಯೇ ಹೆಚ್ಚು. ಡಿಲೀಟ್ ಮಾಡುವುದು ಎಂದರೆ ಕೆಲವು ಬೈಟ್‍ಗಳಷ್ಟು ಜಾಗದ ಎನ್ಕೋಡಿಂಗ್ ಬದಲಾಯಿಸುವುದು ಎಂದೆಲ್ಲಾ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಯಾಕೆಂದರೆ, ನಾವು ಫೈಲ್ ಎಂದರೆ ತಾಲೂಕು ಕಚೇರಿಯಲ್ಲಿರುವ ಕಡತದ ರೀತಿಯ ವಸ್ತು ಎಂದುಕೊಂಡಿರುವ ಸಂಭವವೇ ಹೆಚ್ಚು. ಕಚೇರಿಯ ಕಡತ ಮಾಡುವ ಕೆಲಸವನ್ನೇ ಕಂಪ್ಯೂಟರಿನ ಫೈಲ್ ಕೂಡಾ ಮಾಡುತ್ತಿರುತ್ತದೆ ನಿಜ. ಆದರೆ, ಈ ಫೈಲ್ ಯಾಕೆ ಬೇರೆ ರೀತಿಯ ವಸ್ತು ಎಂದು ತಿಳಿಯಬೇಕಾದರೆ ಕಂಪ್ಯೂಟರ್ ವಿಜ್ಞಾನದ ಕೆಲವು ಹತಾರಗಳ, ಅಂದರೆ ಪರಿಕಲ್ಪನೆಗಳ ಪರಿಚಯ ಬೇಕಾಗುತ್ತದೆ. ದಿನನಿತ್ಯದ ಕಂಪ್ಯೂಟರ್ ಬಳಕೆಗೆ ಇವೆಲ್ಲಾ ಗೂಢವಿದ್ಯೆಗಳೇನೂ ಬೇಕಿಲ್ಲ ಬಿಡಿ. ಆದರೆ, ವಸ್ತುಗಳು ಮತ್ತು ಹತಾರಗಳ ಸಂಬಂಧವನ್ನು ಸರಿಯಾಗಿ ಗ್ರಹಿಸಬೇಕಾದ ಅಗತ್ಯ ಹೆಚ್ಚಾಗುತ್ತಾ ಹೋದಂತೆ, ಇದು ಬೇಕಾಗುತ್ತದೆ. ಈ ಅಗತ್ಯ ಹೆಚ್ಚಾಗುವುದು ನೀವು ವೈಜ್ಞಾನಿಕ ಚಿಂತನೆಯ ತರಬೇತಿಯನ್ನು ಪಡೆಯಲು ಶುರು ಮಾಡಿದ ಮೇಲಷ್ಟೆ.

ಸತ್ಯಗಳು ಮತ್ತು ವಿಧಾನಗಳು
ವಸ್ತು ಮತ್ತು ಹತಾರದ ನಡುವೆ ಇರುವ ಅವಿನಾಭಾವ ಸಂಬಂಧ ವೈಜ್ಞಾನಿಕ ಚಿಂತನೆಯ ಒಂದು ಮುಖ್ಯ ಲಕ್ಷಣವಾದರೆ, ಇನ್ನೊಂದು ಮುಖ್ಯ ಲಕ್ಷಣ ಸತ್ಯ ಮತ್ತು ವಿಧಾನದ ಬಗ್ಗೆ ಇರುವಂಥದ್ದು. ಸಾಮಾನ್ಯವಾಗಿ, ದಿನನಿತ್ಯದ ಜೀವನದಲ್ಲಿ, ನಮಗೆ ಸತ್ಯವಷ್ಟೇ ಮುಖ್ಯ. ಆ ಸತ್ಯವನ್ನು ನಾವು ಯಾವ ವಿಧಾನಗಳ ಮೂಲಕ ಕಂಡುಕೊಂಡಿದ್ದೇವೆ ಎನ್ನುವುದು ಅಷ್ಟು ಮುಖ್ಯವಲ್ಲ. ಬಸ್ಸು ಹತ್ತು ಗಂಟೆಗೆ ಬರುತ್ತದೆ ಎನ್ನುವುದಷ್ಟೇ ಮುಖ್ಯ. ನಾವು ಅದನ್ನು ತಿಳಿದುಕೊಂಡ ಬಗೆ ಏನು ಎನ್ನುವುದು ಗೌಣ. ಹಾಗೆಯೇ, ಪಾರಾಸಿಟಮಾಲ್ ಮಾತ್ರೆ ಜ್ವರವನ್ನು ಶಮನ ಮಾಡುತ್ತದೆ ಎನ್ನುವ ಸತ್ಯವಷ್ಟೇ ಮುಖ್ಯ. ಯಾವ ವಿಧಾನದಿಂದ ಈ ಸತ್ಯ ನಮಗೆ ಗೊತ್ತಾಗಿದೆ ಎನ್ನುವುದು ಗೌಣ. ಆದರೆ, ವಿಜ್ಞಾನದಲ್ಲಿ ಇದು ಸ್ವಲ್ಪ ಭಿನ್ನ. ಅಲ್ಲಿ ಸತ್ಯಕ್ಕೆ ಬೆಲೆ ಬರುವುದು ಅದನ್ನು ಕಂಡುಕೊಳ್ಳುವಲ್ಲಿ ನಾವು ಅನುಸರಿಸಿದ ವಿಧಾನ ಎಷ್ಟು ಪ್ರಶಸ್ತವಾಗಿದೆ ಎನ್ನುವುದರ ಮೇಲೆ. ಸೊಳ್ಳೆಯಿಂದ ಚಿಕುನ್ ಗುನ್ಯಾ ಕಾಯಿಲೆ ಬರುತ್ತದೆ ಎನ್ನುವ ಸತ್ಯಕ್ಕೆ ವಿಜ್ಞಾನದಲ್ಲಿ ಯಾವ ಬೆಲೆಯೂ ಇಲ್ಲ. ನೀವು ನಿರ್ದಿಷ್ಟ ವಿಧಾನಗಳ ಮೂಲಕ ಪ್ರಯೋಗ ನಡೆಸಿ, ಆ ಪ್ರಯೋಗಗಳನ್ನು ಇನ್ನೊಂದು ಮೇಲ್ಮಟ್ಟದ ಸಾಂಖ್ಯಿಕ ಪ್ರಯೋಗಕ್ಕೆ ಒಳಪಡಿಸಿ, ಅದರಲ್ಲೆಲ್ಲಾ ನೀವು ಪರೀಕ್ಷಿಸಿದ ಸೋಂಕಿಗೂ ಮತ್ತು ಸೊಳ್ಳೆಗಳಿಗೂ ಸಂಬಂಧ ಇದೆ ಎಂದು ಸಾಬೀತಾದರೆ ಮಾತ್ರ ಅದಕ್ಕೆ ಬೆಲೆ. ಅಂದರೆ, ನಾವು ಸುಲಭವಾಗಿ ಗೊತ್ತುಮಾಡಿಕೊಳ್ಳುವುದನ್ನು ವಿಜ್ಞಾನಿಗಳು ಬಹಳ ಕಷ್ಟಪಟ್ಟು ಗೊತ್ತುಮಾಡಿಕೊಳ್ಳುತ್ತಾರೆ ಎಂದಲ್ಲ. ಆದರೆ ಏನನ್ನಾದರೂ ಗೊತ್ತುಮಾಡಿಕೊಳ್ಳುವುದಕ್ಕೆ ನಾವು ಅನುಸರಿಸಿದ ವಿಧಾನಗಳ ಅರಿವು ಮತ್ತು ಕ್ರಮ ಸರಿಯಿಲ್ಲದಿದ್ದರೆ, ನಾವು ಗೊತ್ತುಮಾಡಿಕೊಂಡ ಸತ್ಯಕ್ಕೆ ಏನೂ ಬೆಲೆಯಿಲ್ಲ ಎಂದಷ್ಟೆ. ಅದನ್ನೇ ಹೀಗೂ ಹೇಳಬಹುದು. ವಿಧಾನಗಳ ಅರಿವಿಲ್ಲದೇ ಸತ್ಯಗಳ ಅರಿವಾಗುವುದಿಲ್ಲ.

ಈ ಎರಡು ಲಕ್ಷಣಗಳೇ ನಮ್ಮ ದಿನನಿತ್ಯದ ಚಿಂತನೆಯನ್ನು ವೈಜ್ಞಾನಿಕ ಚಿಂತನೆಯಿಂದ ಬೇರ್ಪಡಿಸುವುದು. ಮೊದಲನೆಯದು, ಹತಾರಗಳ ಅರಿವಿಲ್ಲದೇ ವಸ್ತುಗಳ ಅರಿವಾಗುವುದಿಲ್ಲ ಎನ್ನುವ ನಿಯಮ. ಮತ್ತು ಎರಡನೆಯದು, ವಿಧಾನಗಳ ಅರಿವಿಲ್ಲದೇ ಸತ್ಯಗಳ ಅರಿವಾಗುವುದಿಲ್ಲ ಎನ್ನುವ ನಿಯಮ.

ಯಾಕೆ ಈ ಎರಡು ನಿಯಮಗಳು? ಇದಕ್ಕೆ ಒಂದು ಸರಳವಾದ ಉತ್ತರವೂ ಇದೆ. ಸ್ವಲ್ಪ ಸಂಕೀರ್ಣವಾದ ಉತ್ತರವೂ ಇದೆ. ಸರಳವಾದ ಉತ್ತರವೇನೆಂದರೆ, ಜ್ಞಾನಕ್ಕೆ ಸಾರ್ವತ್ರಿಕತೆ ಬರುವುದೇ ಅದನ್ನು ಒಬ್ಬರು ಇನ್ನೊಬ್ಬರಿಗೆ ಕಲಿಸಲು ಸಾಧ್ಯವಾದಾಗ. ಮತ್ತು ಒಂದು ಸಂದರ್ಭದಿಂದ ಇನ್ನೊಂದು ಸಂದರ್ಭಕ್ಕೆ ಅದನ್ನು ಅನ್ವಯಿಸಲು ಸಾಧ್ಯವಾದಾಗ. ಹಾಗೆಯೇ, ನಿರ್ದಿಷ್ಟ ಸಂದರ್ಭಗಳಿಂದ ಬೇರ್ಪಡಿಸಿ ಒಂದು ಸಾರ್ವತ್ರಿಕವಾದ ನಿಯಮದ ರೀತಿಯಲ್ಲಿ ಅದನ್ನು ಹೇಳಲು ಸಾಧ್ಯವಾದಾಗ. ಇದು ಸಾಧ್ಯವಾಗಬೇಕೆಂದರೆ, ವಸ್ತುಗಳು ಮತ್ತು ಸತ್ಯಗಳನ್ನು ಗುರುತಿಸುವ ಕ್ರಮವನ್ನು ಹೊರತಂದು ತೋರಿಸಬೇಕು. ಇಲ್ಲದಿದ್ದರೆ, ಅದು ಕುರುಡು ಪಾಠವಾಗುತ್ತದೆಯೇ ಹೊರತೂ, ವಿದ್ಯೆಯನ್ನು ಕಲಿಸಿದಂತಾಗುವುದಿಲ್ಲ.

ಇನ್ನು ಸ್ವಲ್ಪ ಸಂಕೀರ್ಣವಾದ ಉತ್ತರ. ಯಾವುದಾದರೂ ಒಂದು ಸಂಜ್ಞೆಯ ವ್ಯವಸ್ಥೆಯೇ ಇಲ್ಲದೇ ಸ್ವತಂತ್ರವಾಗಿ ವಸ್ತುಗಳು ನಮಗೆ ದಕ್ಕುವುದಿಲ್ಲ. ಉದಾಹರಣೆಗೆ, ಭಾಷೆಯೇ ಇಲ್ಲದೇ ನಾವು ವಸ್ತುಗಳನ್ನು ಗುರುತಿಸಲು ಸಾಧ್ಯವಿಲ್ಲವಷ್ಟೆ. ಸಂಖ್ಯೆಗಳೇ ಇಲ್ಲದೇ ಮೌಲ್ಯ ಮತ್ತು ಪ್ರಮಾಣವನ್ನೂ ಗುರುತಿಸುವುದು ಸಾಧ್ಯವಿಲ್ಲವಷ್ಟೆ. ಹಾಗೆಯೇ, ಸ್ವರ ವ್ಯವಸ್ಥೆಯೇ ಇಲ್ಲದೇ, ಸಂಗೀತ ಸಾಧ್ಯವಿಲ್ಲ. ವಿನಿಮಯ ವ್ಯವಸ್ಥೆ ಇಲ್ಲದೇ ಆರ್ಥಿಕ ವ್ಯವಹಾರ ಸಾಧ್ಯವಿಲ್ಲ. ಇಲ್ಲಿ ಭಾಷೆ, ಸಂಖ್ಯೆ, ಸ್ವರವ್ಯವಸ್ಥೆ ಮತ್ತು ವಿನಿಮಯ ವ್ಯವಸ್ಥೆ ಇವೆಲ್ಲಾ ಸಂಜ್ಞೆಯ ವ್ಯವಸ್ಥೆಗಳು. ಇವುಗಳೇ ನಮಗೆ ವಸ್ತುಗಳನ್ನು ನಿರ್ದಿಷ್ಟ ವಸ್ತುಗಳನ್ನಾಗಿ ತೋರಿಸುವುದು. ಒಂದು ನಾಯಿಮರಿಗೆ ಎದುರಿಗಿರುವ ವಸ್ತು ರಿಮೋಟ್ ಕಂಟ್ರೋಲ್ ಸಾಧನವೋ ಅಥವಾ ಮೊಬೈಲ್ ಫೋನ್ ಸಾಧನವೋ ಎಂದೇನೂ ತಿಳಿಯುವುದಿಲ್ಲ. ಯಾಕೆಂದರೆ ಅಂತಹ ಭೇದವನ್ನು ಮಾಡಲು ಬೇಕಾದ ಸಂಜ್ಞಾ ವ್ಯವಸ್ಥೆ ಅದಕ್ಕೆ ತಿಳಿದಿಲ್ಲ. ಅದಕ್ಕಿರುವ ಸಂಜ್ಞಾ ವ್ಯವಸ್ಥೆ ಬಹಳ ಆದಿಮವಾದದ್ದು. ರುಚಿಗೆ ಸಂಬಂಧಪಟ್ಟಿದ್ದು. ಆ ವ್ಯವಸ್ಥೆಯ ಅಡಿಯಲ್ಲಿ ಅದಕ್ಕೆ ಗುರುತಿಸಲು ಸಾಧ್ಯವಾಗುವುದು ಕೇವಲ ಎರಡೇ ರೀತಿಯ ವಸ್ತುಗಳನ್ನು. ಒಂದು, ತಿನ್ನಬಹುದಾದ ವಸ್ತುಗಳು. ಇನ್ನೊಂದು ತಿನ್ನಲು ಸಾಧ್ಯವಿಲ್ಲದ ವಸ್ತುಗಳು. ಅಥವಾ ಇಂಥದ್ದೇ ಇನ್ನೊಂದೆರಡು ಸರಳ ವಸ್ತುಭೇದಗಳನ್ನು ಅದು ಗ್ರಹಿಸಬಹುದಷ್ಟೆ. ಆದರೆ ನಮ್ಮ ಸಂಜ್ಞಾ ವ್ಯವಸ್ಥೆ ಬಹಳ ಬೆಳೆದಿರುವುದರಿಂದ, ಬಹಳ ಸಂಕೀರ್ಣವಾಗಿರುವುದರಿಂದ ನಾವು ಹಲವಾರು ವಸ್ತುಗಳನ್ನು, ಭೇದಗಳನ್ನು ಗ್ರಹಿಸಲು ಸಾಧ್ಯ.

ಇದು ನಿಜವೆಂದಾದರೆ, ಜ್ಞಾನವನ್ನು ಪಡೆಯುವುದು ಎಂದರೆ ಕೇವಲ ಹೊರಗಿರುವ ವಸ್ತುಗಳ ವೈವಿಧ್ಯತೆಯನ್ನು ತಿಳಿದುಕೊಳ್ಳುವುದು ಎಂದಷ್ಟೇ ಅಲ್ಲ. ಬದಲಾಗಿ, ನಾವು ಬಳಸುತ್ತಿರುವ ಸಂಜ್ಞಾ ವ್ಯವಸ್ಥೆಯನ್ನು ಹೆಚ್ಚು ಹೆಚ್ಚು ವ್ಯವಸ್ಥಿತಗೊಳಿಸುವುದು, ಅದರಲ್ಲಿರುವ ಗೋಜಲುಗಳನ್ನು ನಿವಾರಿಸುವುದು, ಅದನ್ನು ಸಂದರ್ಭದ ಅಗತ್ಯಗಳಿಗೆ ತಕ್ಕಂತೆ ಹೆಚ್ಚು ಸರಳಗೊಳಿಸಿ ಅಥವಾ ಹೆಚ್ಚು ಸಂಕೀರ್ಣಗೊಳಿಸಿಕೊಳ್ಳುವುದು ಎಂದೂ ಅರ್ಥ. ಅದಕ್ಕೇ ತಾನೇ, ವಿಜ್ಞಾನ ಬೆಳೆದಂತೆಲ್ಲಾ ಹೊಸಹೊಸ ಪರಿಕಲ್ಪನೆಗಳು, ಹೊಸಹೊಸ ವಿಭೇದಗಳು ಶುರುವಾಗುವುದು.

ನಿಜವಾದ ಶಿಕ್ಷಣ ಎಂದರೆ ಅದು ಹೀಗೆ ವಸ್ತುಗಳನ್ನು ಗ್ರಹಿಸಲು ಹತಾರಗಳನ್ನು ರೂಪಿಸುವ, ಸತ್ಯಗಳನ್ನು ಗ್ರಹಿಸಲು ವಿಧಾನಗಳನ್ನು ರೂಪಿಸುವ, ಮತ್ತು ಸದಾಕಾಲ ಹತಾರಗಳು ಮತ್ತು ವಿಧಾನಗಳ ಬಗ್ಗೆ ಜಾಗರೂಕವಾಗಿರುವ ಒಂದು ಪ್ರಯತ್ನ. ಇಲ್ಲೇ ಒಂದು ಸಣ್ಣ ವಿಚಾರವನ್ನೂ ಸೇರಿಸಬೇಕು. ವಿಶ್ವವಿದ್ಯಾಲಯಗಳು ಅಭಿವ್ಯಕ್ತಿ ಸ್ವಾತಂತ್ರದ ಕೇಂದ್ರಗಳು, ಅವು ಸಮಾಜದ ಆಶಯಗಳನ್ನು ಅರಿತುಕೊಂಡು ನಡೆಯಬೇಕು, ಸಮಾಜದ ಅಭಿವೃದ್ಧಿಯೇ ಅವುಗಳ ಗುರಿ ಎಂದು ಮುಂತಾಗಿ ಫರ್ಮಾನು ಹೊರಡಿಸುವ ಜಾಣರಿಗೆ ವಿದ್ಯೆ, ವಿಜ್ಞಾನ, ವಿಶ್ವವಿದ್ಯಾಲಯ ಮತ್ತು ಶಿಕ್ಷಣವ್ಯವಸ್ಥೆ ಇಂತಹವುಗಳ ಬಗ್ಗೆ ಅನುಭವ ಸಾಲದು ಎಂದೇ ಹೇಳಬೇಕು. ಜ್ಞಾನದ ಲಕ್ಷಣ ಏನು ಎನ್ನುವುದೇ ಗೊತ್ತಿಲ್ಲದೇ ಜ್ಞಾನವನ್ನು ಪ್ರಸಾರ ಮಾಡುವ ಸಂಸ್ಥೆಗಳ ರೂಪುರೇಷೆಗಳನ್ನು ನಿರ್ಧರಿಸುವ ಧೀರರ ಧೈರ್ಯಕ್ಕೆ ಅಂಜಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ. 

Comments

Popular posts from this blog

ಸ್ಟ್ರಕ್ಚರಲಿಸಂ (ರಚನಾವಾದ/ರಾಚನಿಕವಾದ)

ಮಾರ್ಕ್ಸ್‌‌‌ ವಾದ

ಸುಖ-ಸಂತೋಷಕ್ಕೆ ಬೇಕಾಗುವುದೇನು? ಸಾಕಾಗುವುದೆಷ್ಟು?