ಆಹಾರದ ಎರಡು ಅವತಾರ: ಸಂಪ್ರದಾಯ ಮತ್ತು ಅಸ್ಮಿತೆ
1
ಇತ್ತೀಚಿನ ದಿನಗಳಲ್ಲಿ ಆಹಾರದ ಕುರಿತಾಗಿ ಹಲವಾರು ವಿವಾದಗಳು ಹುಟ್ಟಿಕೊಂಡಿವೆ. ಈ ಎಲ್ಲಾ ವಿವಾದಗಳ ಕೇಂದ್ರದಲ್ಲಿರುವುದು ಗೋಹತ್ಯೆ ನಿಷೇಧದ ಕುರಿತು ಎದ್ದಿರುವ ವಿವಾದ. ಈ ವಿವಾದಗಳನ್ನೆಲ್ಲಾ ಒಟ್ಟಾಗಿ ಗಮನಿಸಿದಾಗ ಒಂದು ವೈಚಿತ್ರ್ಯ ಗೋಚರಿಸುತ್ತದೆ. ಅದೇನೆಂದರೆ, ಸಾಂಪ್ರದಾಯಿಕವಾಗಿ ಪಾಲಿಸಿಕೊಂಡು ಬಂದಿರುವ ಆಹಾರ ಪದ್ಧತಿಗಳು, ಅವು ಸಸ್ಯಾಹಾರದ ಪದ್ಧತಿಗಳಾಗಿರಲಿ, ಮಾಂಸಾಹಾರವಾಗಿರಲೀ, ಮಾಂಸಾಹಾರದಲ್ಲಿ ಗೋಮಾಂಸ ಸೇವನೆಯಿರಲೀ ಇಲ್ಲದಿರಲೀ, ಈ ಎಲ್ಲಾ ಪದ್ಧತಿಗಳನ್ನೂ, "ಪಾಲಿಸುವ ಆಚಾರಗಳು" ಎಂದು ನೋಡದೇ "ವಿವರಿಸಬೇಕಾದ ವರ್ತನೆಗಳು" ಎಂದು ನೋಡುತ್ತಿರುವ ಕ್ರಮ. ಅಂದರೆ, ಒಂದು ನಿರ್ದಿಷ್ಟ ಆಹಾರ ಪದ್ಧತಿಯನ್ನು ಪಾಲಿಸುವವರಿಗೆ ತಾವೇಕೆ ಆ ಪದ್ಧತಿಯನ್ನೇ ಪಾಲಿಸುತ್ತಿದ್ದೇವೆ ಅಥವಾ ಪಾಲಿಸಬೇಕು ಎನ್ನುವ ಪ್ರಶ್ನೆ ಮುಖ್ಯವಲ್ಲ. ಹೆಚ್ಚೆಂದರೆ, ತಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಗಳಾದಾಗ ಇಂತಹ ಪ್ರಶ್ನೆಗಳು ಏಳಬಹುದಷ್ಟೇ. ಇದು ಬಿಟ್ಟರೆ, ಈ ಪ್ರಶ್ನೆ ಏಳುವುದು ಆಧುನಿಕ ಚಿಂತನೆಗೆ ಮತ್ತು ಅದರಿಂದ ಉಂಟಾಗುವ ವಾದವಿವಾದಗಳಿಗೆ ಜನ ಎದುರಾದಾಗ ಮಾತ್ರ. ಆದರೆ ಸಮಕಾಲೀನ ಚರ್ಚೆಯಲ್ಲಿ ಮಾತ್ರ ಇದೇ ವಿಚಾರವೇ ಮುನ್ನೆಲೆಗೆ ಬಂದಿರುವುದು. ಏಕೆ ಒಂದು ಜನಸಮೂಹ ಒಂದು ನಿರ್ದಿಷ್ಟ ಆಹಾರ ಪದ್ಧತಿಯನ್ನು ರೂಢಿಸಿಕೊಂಡಿದೆ; ಯಾವ ಚಾರಿತ್ರಿಕ ಕಾರಣಗಳು ಈ ಆಯ್ಕೆಯನ್ನು ರೂಪಿಸಿವೆ ಎನ್ನುವ ಪ್ರಶ್ನೆಗೆ ಉತ್ತರ ಹೇಳುವುದರಿಂದ ನಿರ್ದಿಷ್ಟ ಸಾಮಾಜಿಕ ಗುಂಪುಗಳ ಆಹಾರ ಪದ್ಧತಿಗಳನ್ನು ವಿಮರ್ಶಿಸಲು ಇಲ್ಲವೇ ಸಮರ್ಥಿಸಲು ಸಾಧ್ಯ ಎನ್ನುವ ರೂಢಿ ಬೆಳೆದಿದೆ.
ಈ ಲೇಖನದಲ್ಲಿ ನನ್ನ ಆಸಕ್ತಿಯಿರುವುದು ಇಂತಹ ವಾದಕ್ರಮದ ತರ್ಕವನ್ನು ಪರೀಕ್ಷಿಸುವುದರ ಬಗ್ಗೆ. ಯಾವ ಸಮುದಾಯಗಳು ಯಾವ ಆಹಾರವನ್ನು ಬಳಸುತ್ತವೆ ಮತ್ತು ಯಾವುದನ್ನು ಆಹಾರವಾಗಿ, ಯಾವುದನ್ನು ವರ್ಜ್ಯವಾಗಿ ಕಾಣುತ್ತವೆ ಎನ್ನುವ ಕುರಿತಾದ ಐತಿಹಾಸಿಕವಾದ ಸಾಮಾಜಿಕವಾದ ವಿವರಣೆ ನೀಡುವುದರ ಬಗ್ಗೆ ಅಲ್ಲ.
2
ಮೊದಲಿಗೇ ಒಂದು ಆಹಾರ ಕ್ರಮಕ್ಕೂ ಅದನ್ನು ಪಾಲಿಸುವ ಜನವರ್ಗಕ್ಕೂ ಇರುವ ಸಂಬಂಧವೇನು ಎಂದು ಗ್ರಹಿಸುವುದು ಮುಖ್ಯ. ಸಮಕಾಲೀನ ಚಿಂತನೆಯಲ್ಲೂ ಈ ಪ್ರಶ್ನೆಯೇ ಮುಖ್ಯವಾಗಿರುವುದರಿಂದ, ಮತ್ತು ಆ ಚಿಂತನೆ ಈ ಪ್ರಶ್ನೆಯನ್ನು ಬಹಳ ಬೇರೆ ರೀತಿಯಲ್ಲಿ ನಿಭಾಯಿಸುವುದರಿಂದ, ನಮ್ಮ ವಾದಕ್ಕೂ ಈ ಪ್ರಶ್ನೆಯನ್ನೇ ಕೇಂದ್ರವಾಗಿಟ್ಟುಕೊಳ್ಳಬಹುದು.
ಸಮಕಾಲೀನ ಚಿಂತನೆಯ ಪ್ರಕಾರ ಒಂದು ಜನಸಮೂಹದ ಅಸ್ಮಿತೆ ಅಥವಾ ಗುರುತು, ಅವರ ಆಹಾರವೂ ಸೇರಿದಂತೆ, ಹಲವಾರು ಕ್ರಮಗಳಲ್ಲಿ ವ್ಯಕ್ತವಾಗುತ್ತದೆ. ಅಂದರೆ, ಒಂದು ಜನಸಮೂಹ ತಾನು ಸೇವಿಸುವ ಆಹಾರದ ಮೂಲಕವೂ ತನ್ನತನವನ್ನು ಕಂಡುಕೊಳ್ಳುತ್ತಿರುತ್ತದೆ. ಇದು ಒಂದು ಕಡೆಗಾದರೆ, ಸಾಮಾನ್ಯರ ದೃಷ್ಟಿಕೋನದಿಂದ ನೋಡಿದಾಗ ವಿಚಾರ ಬಹಳ ಬೇರೆ ರೀತಿ ಕಾಣಿಸುತ್ತದೆ. ತಮ್ಮ ತಮ್ಮ ಆಹಾರದ ಬಗ್ಗೆ ಸಾಮಾನ್ಯರು ಹೇಳುವುದಿಷ್ಟೆ: "ಇದು ನಮ್ಮ ಕ್ರಮ. ಇದು ಬಿಟ್ಟು ಬೇರೆ ಕ್ರಮಗಳೆಲ್ಲಾ ನಮಗೆ ವಜ್ರ್ಯ. ಹಾಗೆಯೇ ಇನ್ನೊಬ್ಬರಿಗೆ ನಮ್ಮದು ವಜ್ರ್ಯ. ಏಕೆಂದರೆ ಅದು ಅವರ ಕ್ರಮ". ಈ ಮಾತುಗಳಲ್ಲಿ ತಮ್ಮ ಆಹಾರಕ್ಕೂ ತಮ್ಮ ಸಮುದಾಯದ ಅಸ್ಮಿತೆಗೂ ಯಾವುದೇ ಸಂಬಂಧವಿರುವಂತೆ ಮೇಲುನೋಟಕ್ಕಂತೂ ಕಾಣುವುದಿಲ್ಲ. ಹಾಗಾದರೆ, ಆಧುನಿಕ ಚಿಂತನೆ ಸಂಪ್ರದಾಯಗಳಿಗೂ ಅಸ್ಮಿತೆಗೂ ಸಂಬಂಧವನ್ನು ತೋರಿಸುತ್ತಿರುವುದರ ಹಿಂದೆ ಇನ್ನೂ ಆಳದ ಸತ್ಯವೇನಾದರೂ ಇದೆಯೇ? ತಮಗೇ ಗೊತ್ತಿಲ್ಲದೇ ಜನರು ಆಡುತ್ತಿರುವ ಮಾತಿನಲ್ಲಿ ಸಂಪ್ರದಾಯ ಮತ್ತು ಅಸ್ಮಿತೆಯ ನಡುವೆ ಅಂಥ ಸಂಬಂಧ ಏರ್ಪಟ್ಟಿದೆಯೇ ಎನ್ನುವುದು ಚಿಂತಿಸಬೇಕಾದ ವಿಚಾರ.
ಈ ಪ್ರಶ್ನೆಗೆ ಉತ್ತರಿಸಲು ನಾವು ಬಳಸುವ ಪರಿಕಲ್ಪನೆಗಳನ್ನು ಒರೆಗೆ ಹಚ್ಚಿ ನೋಡುವ ಅಗತ್ಯವಿದೆ. ಮೊದಲಿಗೆ ಅಸ್ಮಿತೆಯನ್ನೇ ಗಮನಿಸಿ. ಅಸ್ಮಿತೆ (ಇಂಗ್ಲಿಷಿನಲ್ಲಿ ಐಡೆಂಟಿಟಿ ಎಂದು ಕರೆಯಬಹುದಾದ ಪದ) ನಮ್ಮ ನಿತ್ಯದ ಅನುಭವದಲ್ಲಿ ಹೇಗೆ ಕಾಣಿಸಿಕೊಳ್ಳುತ್ತದೆ? ವಿಚಿತ್ರವೆಂದರೆ, ಭಾರತೀಯ ಭಾಷೆಗಳಲ್ಲಿ ಈ ಅರ್ಥದ ವಾಕ್ಯಗಳನ್ನು ರಚಿಸುವುದೂ ಸ್ವಲ್ಪ ಕಷ್ಟವೇ ಸರಿ. ಉದಾಹರಣೆಗೆ, "ಕನ್ನಡ ನನ್ನ ಅಸ್ಮಿತೆಯ ಅಥವಾ ಗುರುತಿನ ಭಾಗವಾಗಿದೆ" ಎನ್ನುವ ಅರ್ಥದ ಮಾತುಗಳು ಸಾರ್ವಜನಿಕ ಭಾಷಣಗಳಲ್ಲಿ, ಸಿನಿಮಾ ನಾಯಕರ ಡೈಲಾಗುಗಳಲ್ಲಿ ಆಗಾಗ ಕೇಳಿಬರುತ್ತಾದರೂ ನಿತ್ಯಜೀವನದಲ್ಲಂತೂ ಯಾವ ಸಭ್ಯಸ್ಥರೂ ಹೀಗೆ ಹೇಳುವ ಪ್ರಮೇಯ ಬರುವುದಿಲ್ಲ. ಹಾಗೆಯೇ ವಿಚಾರಶೀಲ ಬರವಣಿಗೆಯಲ್ಲಿ ಇಂತಹ ಪ್ರಯೋಗಗಳು ಕಂಡರೂ ಅದರ ಅರ್ಥ ಏನು ಎಂದು ಗುರುತಿಸುವುದು ಕಷ್ಟವೇ ಸರಿ. ಹಾಗಾದರೆ, ಯಾವ ಸಂದರ್ಭದಲ್ಲಿ ಐಡೆಂಟಿಟಿ ಅಥವಾ ಅಸ್ಮಿತೆಯ ಮಾತು ಅರ್ಥಪೂರ್ಣವಾಗಬಹುದು? ಇದರ ಬಗ್ಗೆ ಇನ್ನೂ ಸ್ವಲ್ಪ ವಿಶದವಾಗಿ ಚರ್ಚಿಸಿದರಷ್ಟೇ ನಮ್ಮ ಪ್ರಶ್ನೆಗೆ ಉತ್ತರವನ್ನು ರೂಪಿಸಿಕೊಳ್ಳಲು ಬೇಕಾದ ಪರಿಕರಗಳು ಸಿಗುವುದು.
ಮೊದಲನೆಯದಾಗಿ, ಭಾಷೆಯ ಅಸ್ಮಿತೆ ಎನ್ನುವ ವಿಚಾರವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. "ನಾನೊಬ್ಬ ಕನ್ನಡಿಗ" ಎನ್ನುವುದು ನನ್ನ ಅಸ್ಮಿತೆಯ ಭಾಗ ಎಂದು ವಾದಿಸಿದರೆ, ಅದೇ ಕ್ರಮದಲ್ಲಿ ಇನ್ನೂ ಹಲವಾರು ವಿಚಾರಗಳೂ ನನ್ನ ಅಸ್ಮಿತೆಯ ಭಾಗವಾಗಬಹುದು. "ನಾನೊಬ್ಬ ಉಪನ್ಯಾಸಕ", "ನಾನು ಹಳೇಮೈಸೂರಿನವನು", "ನಾನೊಬ್ಬ ಕ್ರಿಕೆಟಿಗ" ಹೀಗೆ ಇನ್ನೂ ಹತ್ತು ಹಲವಾರು ರೀತಿಯಲ್ಲಿ ನನ್ನ ಬಗ್ಗೆ, ನನ್ನ ಜೀವನದ ಹಲವಾರು ಮುಖಗಳ ಬಗ್ಗೆ ನಾನು ಇಂತಹ ವಾಕ್ಯಗಳನ್ನು ಹೇಳಬಹುದು. ಹಾಗಾದರೆ, ಈ ಎಲ್ಲವೂ ನನ್ನ ಅಸ್ಮಿತೆಯ ಭಾಗಗಳು ಎಂದಾದರೆ, ಅಸ್ಮಿತೆ ಎನ್ನುವ ಪರಿಕಲ್ಪನೆಗೆ ಅತಿವಿಸ್ತಾರದ ದೋಷದಿಂದಾಗಿ ಯಾವುದೇ ನಿರ್ದಿಷ್ಟ ಅರ್ಥವಿಲ್ಲ ಎಂದು ಪರೋಕ್ಷವಾಗಿ ಒಪ್ಪಿಕೊಂಡಂತಾಗುತ್ತದೆ. ಏಕೆಂದರೆ ನನ್ನ ಬಗ್ಗೆ ಇರಬಹುದಾದ ಸಂಗತಿಗಳೆಲ್ಲಾ ನನ್ನ ಅಸ್ಮಿತೆ ಆಗಬಹುದಲ್ಲ? ಇದನ್ನೇ ರಿಡಕ್ಶಿಯೋ ಆಡ್ ಅಬ್ಸರ್ಡಂ ಎನ್ನುವ ರೀತಿಯಲ್ಲಿ ಅಂದರೆ, ಅಸಂಗತ ಪರಿಣಾಮ ಕಾಣುವವರೆಗೂ ಬೆಳೆಸಿದರೆ, "ನಾನು ಗುಂಗುರು ಕೂದಲಿನವನು", "ನಾನು ನೀಳಕಾಲಿನವ" ಎಂದೆಲ್ಲಾ ಹೇಳುತ್ತಾ ಇವೆಲ್ಲಾ ನಮ್ಮ ಅಸ್ಮಿತೆಯ ಭಾಗವೇ ಹೌದು ಎಂದು ವಾದಮಾಡಬಹುದು. ಇದು ಹಾಸ್ಯಾಸ್ಪದ ಎನ್ನಿಸುತ್ತದೆ. ಆದರೆ ಯಾಕೆ ಹಾಸ್ಯಾಸ್ಪದ ಎಂದು ನಿರ್ದಿಷ್ಟವಾಗಿ ಹೇಳಲು ಬರುವುದಿಲ್ಲ. ಅದೇ ಅಸ್ಮಿತೆಯ ಪರಿಕಲ್ಪನೆಯಲ್ಲಿರುವ ತೊಡಕಿಗೆ ಒಂದು ಸಾಕ್ಷಿ.
3
ಹಾಗಾದರೆ, ಅಸ್ಮಿತೆಯ ಕುರಿತಾದ ನಮ್ಮ ಚಿಂತನೆ ಎಡವುತ್ತಿರುವುದು ಎಲ್ಲಿ? ಬಹುಶಃ ಈ ಪರಿಕಲ್ಪನೆಯ ಚಾರಿತ್ರಿಕ ಹಿನ್ನೆಲೆಯನ್ನು ಗಮನಿಸದೇ ನಾವು ಅದನ್ನು ಸಾರಾಸಗಟಾಗಿ ಒಪ್ಪಿಕೊಂಡುಬಿಟ್ಟಿರುವುದರಿಂದ ಈ ಸಮಸ್ಯೆ ತಲೆದೋರುತ್ತಿರಬಹುದು.
ಪಾಶ್ಚಿಮಾತ್ಯ ಸಂಸ್ಕೃತಿಯ ಬಗ್ಗೆ ಒಂದು ಸ್ಥೂಲವಾದ ಕಥೆಯನ್ನು ಹೇಳಿದರೆ ಅಸ್ಮಿತೆಯ ಕುರಿತಾದ ವಿಚಾರ ನಮ್ಮ ಕೈಗೆಟುಕಬಹುದು. ಪಾಶ್ಚಿಮಾತ್ಯ ಚರ್ಚ್ ನಂಬಿಕಸ್ಥರೆಲ್ಲರನ್ನೂ ಒಳಗೊಂಡಂತೆ ಇರುವ ಒಂದು ಏಕೀಕೃತ ಶರೀರ ಎನ್ನುವುದು ಒಂದು ಪ್ರಬಲವಾದ ಕ್ರಿಶ್ಚಿಯನ್ ಪರಿಕಲ್ಪನೆ. ಈ ಶರೀರಕ್ಕೆ ನಂಬಿಕಸ್ಥರೆಲ್ಲರೂ ಭಿನ್ನಭಿನ್ನ ಅವಯವಗಳಂತೆ. ಒಂದು ಏಕೀಕೃತ ಶರೀರ ಎನ್ನುವುದನ್ನೇ ಬಾಡಿ ಕಾರ್ಪೊರೇಟ್ ಎನ್ನುವ ಪರಿಕಲ್ಪನೆಯಿಂದ ಕರೆಯುವುದು. ಒಂದು ಶರೀರ ಎಂದಮೇಲೆ ಒಂದು ಇಚ್ಛೆ ಅಥವಾ ವಿಲ್ ಅಥವಾ ಗುರಿ ಇರಲೇಬೇಕು. ನನ್ನ ಎಡಗೈ ಒಂದು ಇಚ್ಛೆಯ ಪ್ರಕಾರ ಮತ್ತು ಬಲಗೈ ಇನ್ನೊಂದು ಇಚ್ಛೆಯ ಪ್ರಕಾರ ನಡೆಯಲು ಸಾಧ್ಯವಿಲ್ಲ. ಹಾಗೇನಾದರೂ ಆದರೆ, ನಮ್ಮ ಮೇಲೆ ನಮಗೆ ಸ್ವಾಧೀನ ತಪ್ಪಿದೆ ಎಂದೇ ಅರ್ಥ. ಈಗ ಇದೇ ವಿಚಾರವನ್ನು ಒಂದು ಏಕೀಕೃತ ಶರೀರ ಎನ್ನಲಾದ ಕ್ರಿಶ್ಚಿಯನ್ ಚರ್ಚಿಗೂ ಅಳವಡಿಸಿದರೆ, ನಾವೆಲ್ಲರೂ ವ್ಯಕ್ತಿಗಳಾಗಿ ಭಿನ್ನಭಿನ್ನರಾದರೂ, ಕ್ರಿಶ್ಚಿಯನ್ನರಾಗಿ, ಅಂದರೆ ಈ ಚರ್ಚ್‍ನ ಕಾರ್ಪೊರೇಟ್ ಬಾಡಿಯ ಅವಯವಗಳಾಗಿ ನಮಗಿರುವುದು ಒಂದೇ ಏಕೀಕೃತವಾದ ವಿಲ್ ಅಥವಾ ಇಚ್ಛೆ. ಹಾಗಾದರೆ, ಒಂದು ಬಾಡಿ ಕಾರ್ಪೊರೇಟ್ ಆಗಿರುವುದು ಎಂದರೇ ಒಂದು ವಿಲ್‍ಗೆ, ಒಂದು ಇಚ್ಛೆಗೆ ಒಳಗಾಗಿರುವುದು ಎಂದರ್ಥ.
ಹೀಗಿರುವಾಗ ಪ್ರತಿಯೊಬ್ಬ ನಂಬಿಕಸ್ಥ ಕ್ರಿಶ್ಚಿಯನ್‍ಗೂ ಇರುವ ನಿಜವಾದ ಪರೀಕ್ಷೆ ಎಂದರೆ ಅವನು ಎಷ್ಟರ ಮಟ್ಟಿಗೆ ನಿಜವಾಗಿಯೂ ಕ್ರಿಶ್ಚಿಯನ್ ಆಗಿದ್ದಾನೆ ಎನ್ನುವುದು. ಅಥವಾ ಅದನ್ನೇ ಇನ್ನೊಂದು ದೃಷ್ಟಿಯಿಂದ ಹೇಳಬೇಕೆಂದರೆ, ನಿಜವಾದ ಕ್ರಿಶ್ಚಿಯನ್ ಆಗಿರುವುದು ಎಂದರೇನು? ನಾನು ಮಾಡುತ್ತಿರುವ ಈ ಕೆಲಸ, ಪಾಲಿಸುತ್ತಿರುವ ಈ ಆಚಾರ ಇವು ನಿಜವಾಗಿಯೂ ಕ್ರಿಶ್ಚಿಯನ್ ಇಚ್ಛೆಗೆ ಪೂರಕವಾದದ್ದೇ ಅಲ್ಲವೇ ಎನ್ನುವ ಪ್ರಶ್ನೆ ಪ್ರತಿಯೊಬ್ಬ ಕ್ರಿಶ್ಚಿಯನ್ ವ್ಯಕ್ತಿಗೂ ಬರಬೇಕಾದ ಪ್ರಶ್ನೆ. ಯಾಕೆಂದರೆ, ಒಂದು ಕ್ರಿಶ್ಚಿಯನ್ ಕಾರ್ಪೊರೇಟ್ ಬಾಡಿಯ ಅಂಗವಾಗಿರುವುದು ಎಂದರೆ ಅರ್ಥ ನಮ್ಮೆಲ್ಲಾ ಆಚಾರಗಳು, ವಿಚಾರಗಳು, ಚಿಂತನೆ, ನಡೆನುಡಿ ಎಲ್ಲವನ್ನೂ ಈ ಇಚ್ಛೆಗೆ ಅಧೀನ ಮಾಡುವ ಒಂದು ಉಪಕ್ರಮ. ಹಾಗಾಗಿ, ಕ್ರಿಶ್ಚಿಯಾನಿಟಿ ನಮ್ಮ ಜೀವನದ ಯಾವಯಾವ ಅಂಶಗಳನ್ನು ರಿಲಿಜಿಯಸ್ ಅಂಶಗಳೆಂದು ಪರಿಗಣಿಸುತ್ತದೋ ಅವೆಲ್ಲವೂ ನನ್ನ ಜೀವನದಲ್ಲಿ ಕ್ರಿಶ್ಚಿಯನ್ ಇಚ್ಛೆಯನ್ನು ವ್ಯಕ್ತಪಡಿಸುವ ರೂಪಗಳು. ಅಂದಮೇಲೆ, ಕ್ರಿಶ್ಚಿಯನ್ ಆಗಿರುವುದು ಎಂದರೇ, ಈ ಬಾಡಿ ಕಾರ್ಪೊರೇಟ್‍ನ ಇಚ್ಛೆಗೆ ನನ್ನ ಖಾಸಗೀ ಇಚ್ಛೆಯನ್ನು ಹೊಂದಿಸುವುದು. ಎರಡೂ ಇಚ್ಛೆಗಳ ನಡುವೆ ವ್ಯತ್ಯಾಸವಿಲ್ಲದಂತೆ ಮಾಡುವುದು. ಅಸ್ಮಿತೆ ಎಂದರೆ ಇದು. ನನ್ನ ಗುರಿಗಳು ಮತ್ತು ನಾನು ಭಾಗವಾಗಿರುವ ಬಾಡಿ ಕಾರ್ಪೊರೇಟ್‍ನ ಗುರಿಗಳು ಇವೆರಡಕ್ಕೂ ಸಾಮ್ಯವನ್ನು ಸಾಧಿಸುವ, ತೋರಿಸುವ ಕೆಲಸ. ಅಂದರೆ ಐಡೆಂಟಿಟಿ ಎನ್ನುವುದು ನನ್ನ ಗುರಿಗಳಿಗೂ ಮತ್ತು ನಾನು ಭಾಗವಾಗಿರುವ ನಿರ್ದಿಷ್ಟ ಬಾಡಿ ಕಾರ್ಪೊರೇಟ್‍ನ ಗುರಿಗಳಿಗೂ ಐಡೆಂಟಿಟಿಯನ್ನು ಅಂದರೆ ಸಾಮ್ಯವನ್ನು ತೋರಿಸುವ ಕ್ರಮ.
ಈಗ ಯೂರೋಪಿನ ಸಾಮಾಜಿಕ ಜೀವನದ ಬಗ್ಗೆ ಒಂದು ಸ್ಥೂಲವಾದ ವಿಚಾರ. ಈ ಕ್ರಿಶ್ಚಿಯನ್ ವ್ಯವಸ್ಥೆ ಸೆಕ್ಯುಲರೀಕರಣಕ್ಕೆ ಪಕ್ಕಾದಂತೆಲ್ಲಾ ಎಲ್ಲ ಸಾಮಾಜಿಕ ವ್ಯವಸ್ಥೆಗಳೂ ಇಂತಹ ಬಾಡಿ ಕಾರ್ಪೊರೇಟ್‍ಗಳು ಮತ್ತು ಎಲ್ಲ ವ್ಯಕ್ತಿಗಳೂ ಅದರ ಸದಸ್ಯರು ಅಥವಾ ಮೆಂಬರ್‍ಗಳು (ಮೆಂಬರ್ ಎಂದರೆ ಇಂಗ್ಲಿಷಿನಲ್ಲಿ ಅವಯವ ಎಂದೂ ಅರ್ಥ) ಎನ್ನುವ ಚಿತ್ರಣವೇ ಬೆಳೆಯಿತು. ರಾಜ್ಯ, ಪ್ರಭುತ್ವ, ರಾಷ್ಟ್ರ, ಸರಕಾರ ಇವೆಲ್ಲಾ ಇಂತಹ ಏಕತ್ರಗುರಿ, ಏಕತ್ರ ಇಚ್ಛೆಯಿಂದ ರೂಪಿತವಾದ ಬಾಡಿ ಕಾರ್ಪೊರೇಟ್‍ಗಳು ಎನ್ನುವ ಚಿತ್ರಣ ಬೆಳೆಯಿತು. ಮನುಷ್ಯರ ವರ್ತನೆಯನ್ನು ಅರ್ಥೈಸಿಕೊಳ್ಳುವುದು ಎಂದರೆ, ಅವರು ಈ ಕಾರ್ಪೊರೇಟ್ ಗುರಿಗೆ ಎಷ್ಟು ಹತ್ತಿರವಿದ್ದಾರೆ ಅಥವಾ ದೂರವಿದ್ದಾರೆ ಎಂದು ತಿಳಿಯುವುದು ಎಂದಾಯಿತು.
ಇಂತಹ ಚಿತ್ರಣ ಆಧುನಿಕ ಚಿಂತನೆಯ ಒಂದು ಮೂಲಭೂತ ಸಾಮಾನ್ಯ ಜ್ಞಾನವಾಗಿ ಬೆಳೆದಿದೆ. ಅಂದರೆ, ಇಡೀ ಸಮಾಜವನ್ನೂ, ಅದರ ಜೊತೆಗೆ ಇರುವ ಎಲ್ಲಾ ಸಣ್ಣಸಣ್ಣ ಸಾಮಾಜಿಕ ವ್ಯವಸ್ಥೆಗಳನ್ನೂ ಒಂದು ಬಾಡಿ ಕಾರ್ಪೊರೇಟ್ ಎನ್ನುವ ರೀತಿಯಲ್ಲಿ ಕಾಣುವುದು ಇಂದಿನ ಚಿಂತನೆಯ ಲಕ್ಷಣವೆ ಹೌದು. ಹಾಗಾದಾಗ, ಮನುಷ್ಯರು ತಮ್ಮ ಬಗ್ಗೆ, ತಮ್ಮ ಜೀವಿತದ ಬಗ್ಗೆ, ತಮ್ಮ ಉದ್ದೇಶಗಳು ಯೋಜನೆಗಳ ಬಗ್ಗೆ ಮಾತನಾಡಲು ಇರುವ ಏಕೈಕ ಸಾಧನವೆಂದರೆ ಅಸ್ಮಿತೆಯ ಭಾಷೆ ಕೊಡಮಾಡುವ ಸಾಧನವೊಂದೇ. ಒಂದೊಂದು ಸಾಂಸ್ಕೃತಿಕ ಪರಿಸರದಲ್ಲಿ ಮನುಷ್ಯರಿಗೆ ತಮ್ಮ ಬಗ್ಗೆ ಮಾತನಾಡಲು, ಅಂದರೆ ತಮ್ಮ ಕ್ರಿಯಾಕರ್ಮಗಳನ್ನು ವ್ಯಾಖ್ಯಾನಿಸಲು ನಿರ್ದಿಷ್ಟ ಸಾಧನಗಳಿರುತ್ತವೆ. ಉದಾಹರಣೆಗೆ, ಭಕ್ತಿಪಂಥದ ಅನೇಕ ಕೀರ್ತನಕಾರರಿಗೆ ತಮ್ಮ ಬಗ್ಗೆ ಮಾತನಾಡುವುದಕ್ಕೆ ಇದ್ದ ಸಾಧನವೆಂದರೆ, ತಮ್ಮ ಇಷ್ಟದೈವದ ಭಕ್ತನಾಗಿರುವ ಬಗ್ಗೆ ಮಾತನಾಡುವುದು ಮತ್ತು ತನ್ನೆಲ್ಲ ನಡೆನುಡಿಯನ್ನು ತನ್ನ ಇಷ್ಟದೈವಕ್ಕೆ ನೈವೇದ್ಯ ಮಾಡುವ ಕ್ರಮದಲ್ಲಿ ತಿಳಿದುಕೊಳ್ಳುವುದು. ಹಾಗೆಯೇ ಒಬ್ಬ ಕ್ಯಾಥೋಲಿಕನಿಗೆ ತನ್ನ ಬಗ್ಗೆ ಮಾತನಾಡುವುದು ಎಂದರೆ ತನ್ನ ಫೇತ್ ಅಥವಾ ನಂಬಿಕೆಯ ಗಟ್ಟಿತನ ಮತ್ತು ಸಾಚಾತನದ ಬಗ್ಗೆ ಮಾತನಾಡುವುದು ಎನ್ನುವುದೂ ಕಾಣಬರುತ್ತದೆ. ಒಬ್ಬ ವಿಚಾರವಾದಿಗೆ ತನ್ನ ಬಗ್ಗೆ ಮಾತನಾಡುವುದು ಎಂದರೆ, ತನ್ನ ಜೀವನವನ್ನು ತನ್ನ ಬೌದ್ಧಿಕ ನಿರ್ಧಾರಗಳಿಂದ ರೂಪಿಸಿಕೊಂಡ ಆಯ್ಕೆಗಳು ಎನ್ನುವ ರೀತಿಯಲ್ಲಿ ಮಾತನಾಡುವುದು ಎಂದಾಗುತ್ತದೆ. ಅದೇ ರೀತಿ ಆಧುನಿಕರಾದ ನಮಗೆ ನಮ್ಮ ಬದುಕನ್ನು ಅರ್ಥಮಾಡಿಕೊಳ್ಳಲು, ಅದರ ಬಗ್ಗೆ ಮಾತನಾಡಲು ಇರುವ ಸಾಧನ ಅಸ್ಮಿತೆಯದ್ದು ಎಂದಾಗಿದೆ. ಹಾಗಾಗಿಯೇ ನಮ್ಮ ಭಾಷೆ, ಜಾತಿ, ಪ್ರದೇಶ, ಲೈಂಗಿಕ ಇಷ್ಟಾನಿಷ್ಟ, ಕಸುಬು, ರಾಜಕೀಯ ಒಲವು ಈ ಎಲ್ಲದರ ಬಗ್ಗೆಯೂ ನಾವು ಅಸ್ಮಿತೆಯ ಭಾಷೆಯಲ್ಲೇ ಮಾತನಾಡುತ್ತೇವೆ.
ನಮ್ಮಲ್ಲಿ ಈಗ ಪ್ರಚಲಿತದಲ್ಲಿರುವ ಹಲವಾರು ನುಡಿಗಟ್ಟುಗಳು, ಫೆಮಿನಿಸ್ಟ್ ಐಡೆಂಟಿಟಿ, ದಲಿತ ಐಡೆಂಟಿಟಿ, ಕ್ವೀರ್ ಐಡೆಂಟಿಟಿ, ಭಾಷಿಕ ಐಡೆಂಟಿಟಿ, ಧಾರ್ಮಿಕ ಐಡೆಂಟಿಟಿ ಇಂತಹ ಹಲವಾರು ನುಡಿಗಟ್ಟುಗಳ ಆಳದಲ್ಲಿ ನಾನು ಸೂಚಿಸಿದ ಕಾರ್ಪೊರೇಟ್ ಬಾಡಿಯ ಚಿತ್ರಣವೇ ಅಡಗಿದೆ. ಅಂದಮೇಲೆ ಇಲ್ಲೊಂದು ಸಮಸ್ಯೆ ಏಳುತ್ತದೆ. "ನಾನೊಬ್ಬ ಮಹಿಳೆ. ಹಾಗಾಗಿ ಸ್ತ್ರೀತ್ವವೇ ನನ್ನ ಅಸ್ಮಿತೆ" ಎಂದು ಹೇಳುವುದು ಅಸಂಗತವಾಗುತ್ತದೆ. "ಸ್ತ್ರೀತ್ವವೇ ನನ್ನ ಅಸ್ಮಿತೆ" ಎನ್ನುವುದು "ನಾನೊಬ್ಬ ಮಹಿಳೆ" ಎಂದು ಹೇಳುವುದಕ್ಕಿಂತ ಇನ್ನೂ ಹೆಚ್ಚಿನದೇನನ್ನೋ ಹೇಳುತ್ತಿದೆ ಎಂದು ಅನ್ನಿಸಿದರೂ, ನಿರ್ದಿಷ್ಟವಾಗಿ ಆ ಹೆಚ್ಚಿನದು ಏನು ಎಂದು ಪರೀಕ್ಷಿಸಿದರೆ ಅದರ ಅರ್ಥ ತಿಳಿಯುವುದು ಕಷ್ಟವೇ ಸರಿ. ಈ ಮಾತು ಅರ್ಥವಾಗಬೇಕಾದರೆ ಸ್ತ್ರೀಸಮೂಹ ಎನ್ನುವ ಒಂದು ಕಾರ್ಪೊರೇಟ್ ಬಾಡಿ ಇದೆ. ಆ ವ್ಯವಸ್ಥೆಗೆ ತನ್ನದೇ ಆದ ಗುರಿಗಳು, ಅಂದರೆ ಒಂದು ಏಕೀಕೃತವಾದ ಇಚ್ಛೆ ಇದೆ ಎಂಬುದಿದೆ. ನನ್ನ ಖಾಸಗೀ ಇಚ್ಛೆಗೂ ಇಂತಹ ಕಾರ್ಪೊರೇಟ್ ಇಚ್ಛೆಗೂ ಆಳದ ಹೊಂದಾಣಿಕೆ ಇದೆ ಎನ್ನುವ ಅಷ್ಟೂ ವಿಚಾರವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಹಾಗಲ್ಲದೇ, ನಮ್ಮ ಸಾಮಾಜಿಕ ಜೀವನದ ಅಂಶಗಳನ್ನೆಲ್ಲಾ ನಮ್ಮ ಅಸ್ಮಿತೆಯ ಭಾಗವೆಂದು ವಾದಿಸಲು ಬರುವುದಿಲ್ಲ. ವಿಪರ್ಯಾಸವೆಂದರೆ, ಅಸ್ಮಿತೆಯ ಪರಿಕಲ್ಪನೆಯ ಹೊರತಾಗಿಯೂ ಅರ್ಥಪೂರ್ಣವಾಗಿ ಸ್ತ್ರೀಪರವಾದ ಚಿಂತನೆ ಮತ್ತು ರಾಜಕಾರಣವನ್ನು ಮಾಡುವ ಸಾಧ್ಯತೆಯನ್ನೇ ಈ ಜಾಯಮಾನ ನಿರಾಕರಿಸಿಬಿಡುತ್ತದೆ.
4
ಈಗ ಅಸ್ಮಿತೆಯ ಕುರಿತ ಈ ಹಿನ್ನೆಲೆಯಿಂದ ಆಹಾರ ಸಂಸ್ಕøತಿಯ ವಿಚಾರವನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸೋಣ. ಅಸ್ಮಿತೆಯ ರಾಜಕಾರಣದ ಒಂದು ಮುಖ್ಯ ಪರಿಣಾಮ ಎಂದರೆ ನಮ್ಮ ಜೀವನದ ಎಲ್ಲಾ ಸಂಗತಿಗಳೂ ನಮ್ಮ ಅಸ್ಮಿತೆಯ ಪ್ರತಿಫಲ ಅಥವಾ ಪರಿಣಾಮ ಎಂದು ತಿಳಿಯುವುದು. ಮತ್ತು ನಮ್ಮ ಎಲ್ಲ ನಡೆನುಡಿಗಳು, ಆಯ್ಕೆಗಳು, ಆಚಾರಗಳನ್ನು ಅರ್ಥೈಸಿಕೊಳ್ಳುವುದು ಎಂದರೆ ಯಾವ ನಿರ್ದಿಷ್ಟ ಅಸ್ಮಿತೆಯ ಕಾರಣದಿಂದ ಇವು ಮೂಡುತ್ತವೆ ಎಂದು ವಿವರಿಸುವುದು. ಒಂದು ಉದಾಹರಣೆಯನ್ನು ಗಮನಿಸಿ. ಒಂದು ಸಮುದಾಯದ ಜನ ಗೋಮಾಂಸ ಸೇವಿಸುವುದಿಲ್ಲ ಎಂದಿಟ್ಟುಕೊಳ್ಳೋಣ. ಇದನ್ನು ಎರಡು ರೀತಿಯಲ್ಲಿ ವಿವರಿಸಬಹುದು. ಮೊದಲನೆಯ ರೀತಿಯಲ್ಲಿ, ಈ ಜನ ಗೋಮಾಂಸವನ್ನು ಸೇವಿಸದಿರುವ ಆಯ್ಕೆಯನ್ನು ಮಾಡಿದ್ದಾರೆ. (ಅಥವಾ ಇವರ ಪರವಾಗಿ ಹಿಂದಿನವರು ಯಾರೋ ಈ ಆಯ್ಕೆಯನ್ನು ಮಾಡಿ, ಈಗ ಇವರುಗಳು ಆ ಆಯ್ಕೆಯ ಕಟ್ಟುಪಾಡಿಗೆ ಬಿದ್ದಿದ್ದಾರೆ). ಈ ಆಯ್ಕೆಗೆ ಕಾರಣಗಳೇನು? ನಿರ್ದಿಷ್ಟ ಕಾರಣಗಳೇನೇ ಇದ್ದರೂ ಆ ಕಾರಣಗಳೆಲ್ಲಾ ಅವರು ಆ ನಿರ್ದಿಷ್ಟ ಸಮುದಾಯಕ್ಕೆ ಸೇರಿರುವುದರಿಂದ ಬಂದಿರುವ ಕಾರಣಗಳು. ಅಂದರೆ, ಒಂದು ಸಮುದಾಯದ ಇಚ್ಛೆಗಳಿಗೆ ಅನುಗುಣವಾಗಿ ಈ ಕಾರಣಗಳಿದ್ದು ಅವು ಕೆಲವು ಆಚಾರಗಳನ್ನು ವಿಧಿಸುತ್ತಲೂ ಇನ್ನು ಕೆಲವನ್ನು ನಿಷೇಧಿಸುತ್ತಲೂ ಇರುತ್ತವೆ. ಹಾಗಾಗಿ ಈ ಸಮುದಾಯದ ಅಸ್ಮಿತೆಯಿಂದ ರೂಪಿತವಾಗಿರುವುದರಿಂದ ಜನರಿಗೆ ತಮ್ಮ ನಿರ್ದಿಷ್ಟ ಆಚಾರ ಅರ್ಥಪೂರ್ಣವಾಗಿ ಕಾಣುತ್ತದೆ. ಇದು ಮೊದಲ ಕ್ರಮ.
ಈಗ ಇದೇ ಸಂಗತಿಯನ್ನು ಇನ್ನೊಂದು ರೀತಿಯಲ್ಲಿ ವಿವರಿಸಬಹುದು. ಒಂದು ಸಮುದಾಯದ ಭಾಗವಾಗಿ ಬೆಳೆಯುವುದು ಎಂದರೆ ಆಯಾ ಸಮುದಾಯದ ರೀತಿ ರಿವಾಜುಗಳನ್ನು ಕಲಿತುಕೊಳ್ಳುವುದು. ಮತ್ತು ನಮ್ಮ ಪ್ರಪಂಚವನ್ನು ನಾವು ಕಲಿತ ಭೇದಾಭೇದಗಳ ಮೂಲಕ ವಿಂಗಡಿಸಿಕೊಳ್ಳುವುದು ಮತ್ತು ಆ ವಿಂಗಡಣೆಗಳ ಮೂಲಕ ನಮ್ಮ ವೃತ್ತಿ ವ್ಯವಹಾರಗಳನ್ನು ನಡೆಸುವುದು. ಉದಾಹರಣೆಗೆ ಒಂದು ಜೈನ ಸಮುದಾಯದ ಭಾಗವಾಗಿ ಒಬ್ಬ ವ್ಯಕ್ತಿ ಬೆಳೆಯುತ್ತಿದ್ದಾನೆಂದರೆ, ಅವನು ಜೀವದಯೆ ಮತ್ತು ಜೀವಹಿಂಸೆಯ ನಡುವಿನ ವ್ಯತ್ಯಾಸಗಳನ್ನು ನಮಗಿಂತಲೂ ಇನ್ನೂ ಬೇರೆಯಾಗಿ, ಬಹುಶಃ ಇನ್ನೂ ಸಂಕೀರ್ಣವಾಗಿ ಕಲಿಯುತ್ತಿದ್ದಾನೆಂದು ಅರ್ಥ. ಇದು ಎರಡನೆಯ ಕ್ರಮ. ಇವುಗಳ ನಡುವಿನ ತಾತ್ವಿಕ ವ್ಯತ್ಯಾಸ ನಮಗಿಲ್ಲಿ ಮುಖ್ಯ.
ಮೊದಲನೆಯ ಕ್ರಮದಲ್ಲಿ, ಒಂದು ಪ್ರಪಂಚವಿದೆ. ಅದರಲ್ಲಿರುವ ಮನುಷ್ಯರ ವರ್ತನೆಗಳಿಗೆ ಅಸ್ಮಿತೆಗಳ ಭಿನ್ನತೆಯ ಅನುಸಾರವಾಗಿ ಒಂದು ವಿವರಣೆಯಿದೆ. ಒಟ್ಟಾರೆಯಾಗಿ ಮನುಷ್ಯ ವ್ಯವಹಾರಗಳು ವಿವರಣೆಗೆ ಕಾದಿರುವ ಮತ್ತು ವಿವರಣೆಯಿಂದಷ್ಟೇ ಅರ್ಥಪೂರ್ಣವಾಗಿ ಕಾಣುವ ಸಂಗತಿಗಳು. ಅದೇ ಎರಡನೆಯ ಕ್ರಮದಲ್ಲಿ, ಮನುಷ್ಯರು ಒಂದು ಸಮುದಾಯದ ಭಾಗವಾಗಿ ಹಲವು ನಿರ್ದಿಷ್ಟ ಭೇದಾಭೇದಗಳನ್ನು ಕಲಿಯುತ್ತಾರೆ. ಈ ಕಲಿಕೆಯ ಸಂಯೋಜನೆಯಿಂದ ಒಂದು ಪ್ರಪಂಚ ಸಿದ್ಧವಾಗುತ್ತದೆ. ಹಾಗಾಗಿ ಎಷ್ಟೆಷ್ಟು ಕಲಿಕೆಯ ಕ್ರಮಗಳಿವೆಯೋ ಅಷ್ಟಷ್ಟು ಪ್ರಪಂಚಗಳಿವೆ. ಮನೆಯ ಪ್ರಪಂಚ, ವಿಜ್ಞಾನದ ಪ್ರಪಂಚ, ಕ್ರೀಡೆಯ ಪ್ರಪಂಚ, ಅನ್ಯ ಸಂಸ್ಕøತಿಯ ಪ್ರಪಂಚ ಹೀಗೆ. ನಾವು ಈ ಜಗತ್ತಿನಲ್ಲಿ ವ್ಯವಹರಿಸುವುದು ಎಂದರೆ ಅರ್ಥ ಈ ಭಿನ್ನಭಿನ್ನ ಪ್ರಪಂಚಗಳನ್ನು ಅಥವಾ ಪ್ರಪಂಚ ಚಿತ್ರಣಗಳನ್ನು ಆಯಾಯಾ ಸಂದರ್ಭಕ್ಕೆ ಸರಿಯಾಗುವಂತೆ ಸಂಯೋಜಿಸಿಕೊಳ್ಳುವುದು ಮತ್ತು ಬೇರ್ಪಡಿಸಿಕೊಳ್ಳುವುದು. ಈ ಕಲಿಕೆ ಯಾವುದೇ ಒಂದು ನಿರ್ದಿಷ್ಟ ಮಟ್ಟದಲ್ಲಿ ನಿಂತುಬಿಟ್ಟರೆ, ಅದು ಪೂರ್ವಾಗ್ರಹಗಳಿಗೆ ಎಡೆಮಾಡಿಕೊಡುತ್ತದೆ. ಹೆಚ್ಚುಹೆಚ್ಚು ಸಂಕೀರ್ಣವಾದಂತೆ ಹೊಸಹೊಸ ಕ್ರಮಗಳು ಮತ್ತು ಜ್ಞಾನ ಹುಟ್ಟಿಕೊಳ್ಳುತ್ತದೆ. ಹಾಗೆಯೇ ಈ ಕಲಿಕೆಯನ್ನು ಮತ್ತೊಬ್ಬರಿಗೆ ದಾಟಿಸಬೇಕೆಂದರೆ ವಿವರಣಾರೂಪಿಯಾದ, ಸಿದ್ಧಾಂತರೂಪಿಯಾದ ಜ್ಞಾನ ಹುಟ್ಟಿಕೊಳ್ಳುತ್ತದೆ.
ಇನ್ನೂ ಮುಂದೆ ಹೋಗಿ ಈ ಎರಡೂ ಕ್ರಮಗಳ ಪರಿಣಾಮಗಳಲ್ಲಿರುವ ವ್ಯತ್ಯಾಸವನ್ನೂ ತಿಳಿಯಬೇಕು. ಮೊದಲ ರೀತಿಯ ಚಿತ್ರಣದಲ್ಲಿ ಸಂಘರ್ಷಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಗುರುತಿಸುವ ಮತ್ತು ಪರಿಹರಿಸುವ ರೀತಿಗೂ ಎರಡನೇ ಚಿತ್ರದಲ್ಲಿ ಅವನ್ನು ಗುರುತಿಸುವ ಮತ್ತು ಪರಿಹರಿಸುವ ರೀತಿಗೂ ಸ್ಪಷ್ಟವಾದ ವ್ಯತ್ಯಾಸಗಳಿವೆ. ಮೊದಲ ಕ್ರಮದಿಂದ, ಅಂದರೆ ಅಸ್ಮಿತೆಯ ದೃಷ್ಟಿಕೋನದಿಂದ ನೋಡಿದರೆ, ಸಂಘರ್ಷಗಳು ಮತ್ತು ಭಿನ್ನಾಭಿಪ್ರಾಯಗಳು ಏರ್ಪಡುವುದು ಒಂದೇ ಪ್ರಪಂಚದ ಬಗ್ಗೆ ಎರಡು ಪರಸ್ಪರವಾದ ವಿರುದ್ಧ ವಿವರಣೆಗಳಿರುವುದರಿಂದ. ಇದು ಅನಿವಾರ್ಯವಾಗಿ ತಿಕ್ಕಾಟಕ್ಕೆ ಎಡೆಮಾಡಿಕೊಡುತ್ತದೆ. ಏಕೆಂದರೆ ಒಂದು ವಿವರಣೆ ಮತ್ತೊಂದು ವಿವರಣೆಯನ್ನು ನಿರಾಕರಿಸುತ್ತಿರುತ್ತದೆ. ಮತ್ತು ನಮ್ಮ ಆಚಾರಗಳೆಲ್ಲಾ ಆಯಾ ವಿವರಣೆಗಳ ಮೇಲೆ ನಿಂತಿರುವುದರಿಂದ ಒಂದು ಆಚಾರ ಮತ್ತೊಂದು ಆಚಾರವನ್ನು ನಿರಾಕರಿಸುತ್ತದೆ. ಸಸ್ಯಾಹಾರಿಯಾದವನ ಆಚಾರ ಮಾಂಸಾಹಾರಿಯಾದವನ ಆಚಾರವನ್ನು ನಿರಾಕರಿಸುತ್ತಿರುತ್ತದೆ. ಹಾಗೆಯೇ ಮಾಂಸಾಹಾರಿಯಾದವನ ಆಚಾರ ಸಸ್ಯಾಹಾರಿಯಾದವನ ಆಚಾರವನ್ನು ನಿರಾಕರಿಸುತ್ತಿರುತ್ತದೆ. ಅಸ್ಮಿತೆಯ ರಾಜಕಾರಣ ಆಳದಲ್ಲಿ ಹಿಂಸಾತ್ಮಕವಾಗಿರುವುದಕ್ಕೆ, ನೇತ್ಯಾತ್ಮಕವಾಗಿರುವುದಕ್ಕೆ ಇದೇ ಕಾರಣ.
ಆದರೆ ಇದೇ ಸಂಗತಿಯನ್ನು ಎರಡನೆಯ ಕ್ರಮದಿಂದ ಅಂದರೆ ಕಲಿಕೆಯ ಕ್ರಮದಿಂದ ನೋಡಿದಾಗ ಕಾಣಿಸುವುದೇನೆಂದರೆ ನಮ್ಮ ವಾಸ್ತವದ ಲಕ್ಷಣವೇ ಹಲವು ಪರಸ್ಪರ ಭಿನ್ನವಾದ ಪ್ರಪಂಚಗಳು. ಕಲಿಕೆಯ ಅಗತ್ಯ ಮತ್ತು ಕಲಿಕೆಯ ಸಾಧ್ಯತೆ ಇರುವುದೇ ಇಂತಹ ಭಿನ್ನಭಿನ್ನ ಪ್ರಪಂಚಗಳು ಅಸ್ತಿತ್ವದಲ್ಲಿರುವುದರಿಂದ. ಮನುಷ್ಯರಾಗಿ ವ್ಯವಹಾರಜ್ಞಾನ ಸಂಪಾದಿಸುವುದೆಂದರೆ ಹಲವು ಪ್ರಪಂಚಗಳ ನಡುವೆ ಸಂಯೋಜನೆ ಮತ್ತು ಸಮನ್ವಯ ಸಾಧಿಸುವುದು. ಹಾಗಾಗಿ ಭಿನ್ನತೆ ಎನ್ನುವುದು ಎದುರಿಸಬೇಕಾದ ಅಥವಾ ನಿವಾರಿಸಬೇಕಾದ ಸ್ಥಿತಿಯಲ್ಲ. ಬದಲಾಗಿ ಜ್ಞಾನ ಹಾಗೂ ವ್ಯವಹಾರದ ಮೂಲ ಲಕ್ಷಣವೇ ಅದು. ಹಾಗಾಗಿಯೇ ನಾವು ಇಷ್ಟು ಭಿನ್ನಭಿನ್ನ ಪ್ರಪಂಚಗಳಲ್ಲಿ ಒಡನಾಡುತ್ತಿದ್ದರೂ ಅದು ನಮಗೆ ದಿಗ್ಭ್ರಾಂತಿ ಅಥವಾ ವೇದನೆಯನ್ನೇನೂ ಉಂಟುಮಾಡುವುದಿಲ್ಲ. ಕಲಿಕೆಗೆ ಒಂದಷ್ಟು ಕಷ್ಟಗಳು ಅಡೆತಡೆಗಳನ್ನು ಒಡ್ಡಬಹುದಷ್ಟೆ. ಆದರೆ, ಈ ಅಡೆತಡೆಗಳೂ ಸಹ ಕಲಿಕೆಯ ಕ್ರಿಯೆಯ ಭಾಗವೇ ಸರಿ. ರಸ್ತೆಯ ತಿರುವು ಕಾರು ಚಾಲಕನ ವೈರಿಯಲ್ಲ. ಬದಲಾಗಿ, ಚಾಲಕ ನಿಭಾಯಿಸಲು ಕಲಿಯಬೇಕಾದ ಒಂದು ಸಂದರ್ಭವಷ್ಟೆ.
ನಾವು ಬೇರೆಬೇರೆ ಸಂಪ್ರದಾಯಗಳು ಎಂದು ಏನನ್ನು ಗುರುತಿಸುತ್ತೇವೆಯೋ ಅವೆಲ್ಲವೂ ಹೀಗೆ ಕಲಿಕೆಯನ್ನು ಸಾಧ್ಯವಾಗಿಸಲು ಇರುವ ಯೋಜಿತ ರೂಪಗಳು. ಹಾಗಾಗಿಯೇ ಸಂಪ್ರದಾಯಗಳು, ಆಹಾರ ಸಂಪ್ರದಾಯಗಳೂ ಸೇರಿ, ಒಂದಕ್ಕೊಂದು ವಿರೋಧಿಯಾಗುವ ಸಾಧ್ಯತೆಯೇ ಇಲ್ಲ. ಹಲವಾರು ವಿದ್ವಾಂಸರು ಭಾರತೀಯ ಸಂಪ್ರದಾಯಗಳ ಈ ಲಕ್ಷಣವನ್ನು ಗುರುತಿಸಿದ್ದಾರೆ. ಆದರೆ ಈ ಸಂಪ್ರದಾಯಗಳ ನಡುವೆ ತಿಕ್ಕಾಟ ಏರ್ಪಡುವುದು ಇವುಗಳನ್ನು ಅಸ್ಮಿತೆಗಳ ಕನ್ನಡಿಯಿಂದ ನೋಡಿದಾಗಷ್ಟೆ. ಹಾಗಾಗಿಯೇ, ಗೋಮಾಂಸ ವಜ್ರ್ಯ ಎನ್ನುವುದನ್ನು ಒಂದು ಅಸ್ಮಿತೆಯ ಗುರುತಾಗಿಯೂ ಗೋಮಾಂಸ ಸೇವ್ಯ ಎನ್ನುವುದನ್ನು ಮತ್ತೊಂದು ಅಸ್ಮಿತೆಯ ಗುರುತಾಗಿಯೂ ಕಾಣತೊಡಗಿದಾಗ ಅದು ಹಿಂಸೆಗೆ ಎಡೆಮಾಡಿಕೊಡುತ್ತದೆ. ಗೋಹತ್ಯಾ ನಿಷೇಧವನ್ನು ಒಪ್ಪುವವರು ಮತ್ತು ಒಪ್ಪದವರು ಇಬ್ಬರೂ ಹೀಗೆ ಅಸ್ಮಿತೆಯ ಭಾಷೆಯನ್ನೇ ಹಿಡಿದಿರುವುದರಿಂದ ಮತ್ತು ತಂತಮ್ಮ ಸಾಂಪ್ರದಾಯಿಕ ಆಚಾರಗಳನ್ನು ಆಯಾ ಸಂಪ್ರದಾಯಗಳ ರೀತಿಯಲ್ಲಿ ನೋಡದೆ, ಅಸ್ಮಿತೆಯ ರೀತಿಯಲ್ಲಿ ನೋಡುತ್ತಿರುವುದರಿಂದ ಉಂಟಾಗಿರುವ ದುರಂತ ಇದು. ಅಸ್ಮಿತೆಯ ಭಾಷೆ ಹೀಗೆ ಸಂಪ್ರದಾಯದ ಭಾಷೆಯನ್ನು ವಿಕೃತಗೊಳಿಸುತ್ತದೆ.
5
ನಮ್ಮ ಸದ್ಯದ ಚಿಂತನೆಗೆ ಪ್ರಸ್ತುತವಲ್ಲದಿದ್ದರೂ ಈ ಇಡೀ ವಿಚಾರದ ಬಗ್ಗೆ ಭಾರತೀಯ ಸಂಪ್ರದಾಯಗಳ ಚಿಂತನೆಯ ಜಾಡು ಹೆಚ್ಚು ಉಪಯುಕ್ತವೆಂದೇ ತೋರುತ್ತದೆ. ಅದೇನೆಂದರೆ, ನಮ್ಮ ಅನುಭವವನ್ನು ರೂಪಿಸುವ ನಿರ್ದಿಷ್ಟ ಸಂದರ್ಭಗಳನ್ನು (ಆಧುನಿಕ ಚಿಂತನೆ ಯಾವುದನ್ನು ಅಸ್ಮಿತೆಯ ಬುನಾದಿಯನ್ನಾಗಿ ನೋಡುತ್ತದೋ ಅವುಗಳನ್ನು) ಅಂದರೆ, ನಾವು ಪುರುಷರಾಗಿರುವುದು ಅಥವಾ ಮಹಿಳೆಯರಾಗಿರುವುದು, ದಲಿತರಾಗಿರುವುದು ಅಥವಾ ಸವರ್ಣೀಯರಾಗಿರುವುದು, ಕನ್ನಡಿಗರಾಗಿರುವುದು ಅಥವಾ ತಮಿಳರಾಗಿರುವುದು, ಕ್ವೀರ್ ಲೈಂಗಿಕತೆ ಹೊಂದಿದವರು ಅಥವಾ ನೇರಲೈಂಗಿಕತೆಯವರಾಗಿರುವುದು ಇವನ್ನೆಲ್ಲಾ ಉಪಾಧಿಗಳು ಎಂದು ತಿಳಿಯಬೇಕು. ಅಂದರೆ, ಈ ಸಂದರ್ಭಗಳು ಅನುಭವ ಹುಟ್ಟುವುದಕ್ಕೆ ಅಗತ್ಯವೇ. ಮತ್ತು ಅನುಭವದ ನಿರ್ದಿಷ್ಟ ಛಾಯೆಗಳು ರೂಪಿತವಾಗುವುದೇ ಇಂತಹ ಸಂದರ್ಭಗಳ ಮೂಲಕ. ಆದರೆ ಇಂತಹ ಉಪಾಧಿಗಳನ್ನು ಅನುಭವದ ಭಾಗವಾಗಿ ನೋಡಬಾರದು. ಅನುಭವ ಎನ್ನುವುದು ಪ್ರಪಂಚದಲ್ಲಿನ ಭೇದಗಳನ್ನು ಗುರುತಿಸುವಂಥದ್ದೇ ಹೊರತೂ, ಪ್ರಪಂಚದ ಭೇದಗಳು ಅನುಭವದ ಲಕ್ಷಣವಾಗುವುದಿಲ್ಲ. ವಸ್ತುವಿನಲ್ಲಿ ಕಪ್ಪು, ಬಿಳಿ, ಸ್ಥೂಲ, ಸೂಕ್ಷ್ಮ ಎಂದು ಭೇದ ಮಾಡುತ್ತೇವಾದರೂ ಹಾಗೆ ಭೇದ ಮಾಡುವ ಜ್ಞಾನವೇ ಕಪ್ಪು, ಬಿಳಿ, ಸ್ಥೂಲ, ಸೂಕ್ಷ್ಮ ಇವೇನೂ ಆಗುವುದಿಲ್ಲ. ಒಂದು ರೀತಿಯಲ್ಲಿ ಅನುಭವ ಎನ್ನುವುದು ಹೀಗೆ "ಪ್ಯೂರ್ ನೆಗೆಟಿವ್" ಆದದ್ದು. ಅಂದರೆ, ಅದು ಎಲ್ಲ ವಸ್ತುಸ್ವರೂಪವನ್ನು ಗ್ರಹಿಸುತ್ತದೆಯಾದರೂ ಅದಕ್ಕೇ ಒಂದು ವಸ್ತುಸ್ವರೂಪವನ್ನು ಆರೋಪಿಸಲು ಬರುವುದಿಲ್ಲ.
ಈ ರೀತಿಯಿಂದ ನೋಡಿದಾಗ ಅಸ್ಮಿತೆಯ ಬಗ್ಗೆ ಇರುವ ಇಡೀ ಚರ್ಚೆ ಎಡವುತ್ತಿರುವುದು ಎಲ್ಲಿ ಎಂದು ಊಹಿಸಲು ಸಾಧ್ಯ. ನಮ್ಮ ಸಮಕಾಲೀನ ಜಗತ್ತಿನಲ್ಲಿ ಬದುಕಿನ ಜ್ಞಾನಗಳು ಅಂದರೆ ಸಮುದಾಯಗಳು ತಂತಮ್ಮ ಜೀವನಾನುಭವದಲ್ಲಿ ರೂಪಿಸಿಕೊಂಡ ಜ್ಞಾನಗಳನ್ನು ನಿರಾಕರಿಸುವ, ಹೀಗಳೆಯುವ ಒಂದು ಬೌದ್ಧಿಕ ಕ್ರಮ ಬೆಳೆದಿದೆ. ನಾವು ವಿಚಾರವಾದ, ರಾಶನಾಲಿಟಿ, ವೈಜ್ಞಾನಿಕತೆ ಎಂದು ಕರೆಯುವ ಈ ಕ್ರಮ ನಮ್ಮ ಪಾರಂಪರಿಕ ಜ್ಞಾನಗಳ ಮೇಲೆ ಮಾರಣಾಂತಿಕವಾದ ದಾಳಿ ಮಾಡಿದೆ. ಈ ದಾಳಿ ಇಂತಹ ಸಾಮುದಾಯಿಕ ಜ್ಞಾನಗಳನ್ನು ಮತ್ತು ಅದರೊಟ್ಟಿಗೆ ಅದನ್ನು ಪಾಲಿಸಿಕೊಂಡು ಬಂದಿರುವ ಜನಗಳನ್ನೂ ವಿಶೇಷವಾಗಿ ಸಮಾಜದ ದೀನದಲಿತ ವರ್ಗಗಳು, ಪಾರಂಪರಿಕ ಕಸುಬುದಾರರು, ಮಹಿಳೆಯರು, ಆಧುನಿಕ ಕಾಸ್ಮೊಪಾಲಿಟನ್ ಪ್ರಪಂಚಕ್ಕೆ ಬಾಹಿರರಾದವರು ಇಂಥವರನ್ನೆಲ್ಲಾ ನಿರಾಕರಿಸಿದೆ. ಇದಕ್ಕೆ ವಿರುದ್ಧವಾಗಿ ಟೊಂಕಕಟ್ಟಿ ನಿಲ್ಲಬೇಕೆಂದರೆ, ಈ ರಾಶನಾಲಿಟಿಯ ಹಿಡಿತಕ್ಕೆ ಸಿಲುಕದ ಒಂದು ಉಪಾಯವನ್ನು ಹೂಡಬೇಕು. ಆ ಉಪಾಯವೇ ಅಸ್ಮಿತೆಯ ಭಾಷೆ. ನಿಮ್ಮ ಚಿಂತನೆಯಲ್ಲಿರುವ ದೋಷವನ್ನು ತೋರಿಸಲು ಸಾಧ್ಯವಾಗದಿದ್ದರೆ, ನಿಮ್ಮ ಅನುಭವದ ಹಿಂದಿರುವ ಅಸ್ಮಿತೆಯೇ ನಿಮ್ಮನ್ನು ಈ ರೀತಿ ಚಿಂತಿಸುವಂತೆ ಮಾಡುತ್ತಿದೆ ಎಂದು ಹೇಳಿಬಿಡುವುದು ಸುಲಭದ ಪಟ್ಟು ತಾನೆ? ಹಾಗೆಯೇ ನನ್ನ ಅನುಭವದ ನಿಜವಾದ ಬೆಲೆಯನ್ನು ತಿಳಿಸಲು ನನಗೆ ಸಾಧ್ಯವಾಗದಿದ್ದರೆ, ನನ್ನ ಚಿಂತನೆ ನನ್ನ ಅಸ್ಮಿತೆಯಿಂದಲೇ ಶತಸ್ಸಿದ್ಧವಾಗುತ್ತದೆ ಎಂದು ವಾದಿಸುವುದೂ ಅಷ್ಟೇ ಸುಲಭದ ಪಟ್ಟು ತಾನೆ?
ಆದರೆ, ಆಧುನಿಕ ರಾಶನಾಲಿಟಿ ನಮ್ಮ ಸಾಮುದಾಯಿಕ ಅನುಭವಗಳನ್ನು ವಿಕೃತಿಗೆ ಮತ್ತು ವಿಸ್ಮೃತಿಗೆ ಈಡುಮಾಡುವುದನ್ನು ಇಂತಹ ಸುಲಭದ ಕರಾಮತ್ತುಗಳಿಂದ ತಪ್ಪಿಸಲು ಸಾಧ್ಯವಾಗುವುದಿಲ್ಲ. ಅದಕ್ಕೆ ಅನುಭವದ ಕುರಿತಾದ ಹೊಸ ಚಿಂತನೆಯನ್ನು ನಾವು ರೂಪಿಸಿಕೊಳ್ಳಬೇಕು. ಆಹಾರ ಸಂಸ್ಕೃತಿಯ ಕುರಿತ ಚಿಂತನೆ ಇದಕ್ಕೊಂದು ಒಳ್ಳೆಯ ನಿಮಿತ್ತ.
Comments
Post a Comment