ಉನ್ನತ ಶಿಕ್ಷಣ: ಉದ್ದೇಶ ಉಪಯೋಗಗಳ ನಡುವಿನ ಗೊಂದಲ


ದಿನಕ್ಕೊಂದರಂತೆ ಹುಟ್ಟಿಕೊಳ್ಳುತ್ತಿರುವ ವೃತ್ತಿಪರ ಕಾಲೇಜುಗಳು, ಉದ್ಯೋಗ ಮಾರುಕಟ್ಟೆಗೆಂದೇ ಮೀಸಲಾದ ಕೋರ್ಸುಗಳು, ಅಭಿವೃದ್ಧಿಯ ಬೆನ್ನಲ್ಲೇ ಬರುವ ಸಾಧ್ಯತೆಗಳ ರುಚಿ ಹಿಡಿದ ಹತ್ತಾರು ವಿದೇಶಿ ಯಾ ಖಾಸಗಿ ವಿಶ್ವವಿದ್ಯಾಲಯಗಳು, ಜಾಗತಿಕ ಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ಸಮಗಟ್ಟಲು ಹರಸಾಹಸ ಪಡುತ್ತಿರುವ ಕೇಂದ್ರ ಸರಕಾರದ ಶಿಕ್ಷಣ ನೀತಿಗಳು, ಈ ಸವಾಲುಗಳ ಪರಿವೆಯೇ ಇಲ್ಲದ ಅಥವ ಇದಕ್ಕೆ ಸರಿದೊರೆಯಾಗಿ ನಿಲ್ಲಲು ತ್ರಾಣವಿಲ್ಲದ ಸರಕಾರಿ ವಿಶ್ವವಿದ್ಯಾಲಯಗಳು, ಇಲ್ಲೆಲ್ಲಾ ಬರಬಹುದಾದ ಗುಣಮಟ್ಟದ ಪ್ರಶ್ನೆಗಳು, ಆಡಳಿತ ಮತ್ತು ನಿಯಂತ್ರಣದ ಸಮಸ್ಯೆಗಳು, ಅಧ್ಯಾಪಕರು, ವಿದ್ಯಾರ್ಥಿಗಳ ಹಕ್ಕುಗಳು ಮತ್ತು ಸೇವಾ ನಿಯಮಗಳ ಪ್ರಶ್ನೆಗಳು, ಇವೆಲ್ಲವನ್ನೂ ನಿಭಾಯಿಸಲು ಅಗತ್ಯವಿರುವ ಒಂದು ಕೇಂದ್ರೀಕೃತ ಸಂಸ್ಥೆ ಅಥವ ಸರಕಾರಿ ನೀತಿಯ ಗೈರುಹಾಜರಿ – ಇವು ಉನ್ನತ ಶಿಕ್ಷಣದಲ್ಲಿ ಮಾರುಕಟ್ಟೆಯ ಒತ್ತಡಗಳೇನು ಎಂದು ತಿಳಿಯಲು ಸುಲಭದ ಒಂದು ಕೊಲಾಜ್. ಆದರೆ, ನಾವು ಈಗ ಹೇಳಹೊರಟಿರುವುದು ಈ ಯಾವ ವಿಚಾರಗಳನ್ನೂ ನೇರವಾಗಿ ಕುರಿತಾದದ್ದಲ್ಲ. ಆರ್ಥಿಕ ಬೆಳವಣಿಗೆಯ ಹಾದಿಯಲ್ಲಿ, ಇಂತಹ ಸಮಸ್ಯೆಗಳು, ಸಾಧ್ಯತೆಗಳು ಸಹಜವೇ. ಅಭಿವೃದ್ಧಿಯ ಅಗತ್ಯಕ್ಕೆ ತಕ್ಕಂತೆ ಹೊಸ ಇಂಜಿನಿಯರಿಂಗ್ ಕಾಲೇಜುಗಳು, ವೈದ್ಯಕೀಯ ಕಾಲೇಜುಗಳು, ಕಾಲ್ ಸೆಂಟರುಗಳಿಗೆ ಉದ್ಯೋಗಿಗಳನ್ನು ಪೂರೈಸುವ ತರಬೇತಿ ಕೇಂದ್ರಗಳು ಇವೆಲ್ಲಾ ಅಗತ್ಯವಿದ್ದದ್ದೇ. ಇದೆಲ್ಲವನ್ನೂ ಬೇಡ ಎನ್ನಲು ಬರುವುದಿಲ್ಲ ಅಥವಾ ಹೀಗೆ ಇರುವುದೇ ತಪ್ಪು ಎಂದು ವಾದಿಸಲೂ ಆಗುವುದಿಲ್ಲ. 

ಹಾಗೆಯೇ, ಇದ್ಯಾವುದನ್ನೂ ಒಟ್ಟಾಗಿ ಉನ್ನತ ಶಿಕ್ಷಣದ ಸಮಸ್ಯೆಗಳೆಂದು ಕ್ರೋಢೀಕರಿಸಲೂ ಬರುವುದಿಲ್ಲ. ಇದರಲ್ಲಿ ಹಲವು ಮ್ಯಾನೆಜೇರಿಯಲ್ ಸಮಸ್ಯೆಗಳಾದರೆ, ಇನ್ನು ಕೆಲವು ಮಾನವ ಸಂಪನ್ಮೂಲಗಳಿಗೆ ಸಂಬಂಧಿಸಿದ್ದು. ಕೆಲವು ಗುಣಮಟ್ಟ ಸುಧಾರಣೆಯ ಸಮಸ್ಯೆಗಳಾದರೆ, ಇನ್ನು ಕೆಲವು, scalabilityಗೆ ಸಂಬಂಧಿಸಿದ್ದು. ಇನ್ನು ಕೆಲವಂತೂ ನೇರವಾಗಿ ಜ್ಞಾನ ಮತ್ತು ಕೌಶಲ್ಯದ ಸಮರ್ಥ ಮಾಪನ ಮತ್ತು ಪ್ರಸರಣಕ್ಕೆ ಸಂಬಂಧಿಸಿದ್ದು. ಮಾಹಿತಿ, ಮನುಷ್ಯರು ಮತ್ತು ಬಂಡವಾಳ ಇವನ್ನು ಒಳಗೊಂಡ ಯಾವ ಸಂಸ್ಥೆಗಾದರೂ ಇಂತಹ ಸಮಸ್ಯೆಗಳು ಒದಗುತ್ತವೆ. ಬ್ಯಾಂಕುಗಳು, ಕಾರ್ಖಾನೆಗಳು, ಆಡಳಿತಶಾಹಿ ಅಷ್ಟೇ ಏಕೆ, ಸಹಕಾರ ಮತ್ತು ಗ್ರಾಮೀಣಾಭಿವ್ರುದ್ಧಿ ಕ್ಷೇತ್ರಗಳಲ್ಲೂ ಇಂತಹ ಸಮಸ್ಯೆಗಳು ಬಂದೊದಗುತ್ತವೆ. ಇತ್ತೀಚೆಗೆ ಚಲಾವಣೆಗೆ ಬರುತ್ತಿರುವ knowledge society, knowledge management ಮುಂತಾದ ಪರಿಕಲ್ಪನೆಗಳ ಮೂಲಕ ಕೆಲವರು ಗುರುತಿಸುತ್ತಿರುವುದು ಇಂತಹ ಸಮಸ್ಯೆಗಳು ಮತ್ತು ಅದಕ್ಕೆ ಬೇಕಾದ ಪರಿಹಾರೋಪಾಯಗಳನ್ನು. 

ಆದರೆ ನಾವು ಇಲ್ಲಿ ಚರ್ಚಿಸುತ್ತಿರುವುದು ಇಂತಹ ಸಮಸ್ಯೆಗಳ ಬಗೆಗಲ್ಲ. ನಮ್ಮ ಮೊದಲ ವಾದವೆಂದರೆ, ಉನ್ನತ ಶಿಕ್ಷಣ ಎಂದಾಗ, ನಾವು ಹೇಳಹೊರಟಿರುವುದು, ಶಾಲೆಯ ನಂತರ ಪಡೆವ ಯಾವುದೇ ಶಿಕ್ಷಣ ಅಥವ ತರಬೇತಿಯ ಬಗ್ಗೆಯೂ ಅಲ್ಲ. ಉನ್ನತ ಶಿಕ್ಷಣ ಎನ್ನುವಾಗ, ಅದರಲ್ಲಿರುವ ’ಉನ್ನತ’ ಎಂದರೇನು ಎಂದು ಮೊದಲು ತಿಳಿಯಬೇಕು: ಚಾರಿತ್ರಿಕವಾಗಿ ಉನ್ನತ ಶಿಕ್ಷಣದ ಬಗೆಗಿನ ಚರ್ಚೆಗಳಲ್ಲಿ ಕಂಡುಬರುವಂತೆ ಉನ್ನತ ಎಂದರೆ, ಮೊದಲನೆಯದಾಗಿ, ನಿತ್ಯ ಜೀವನಕ್ಕೆ ಬೇಕಾದ ಕಸುಬು, ಕೌಶಲ್ಯಗಳಿಗೆ ಹೊರತಾದದ್ದು ಅಥವ ಮಿಗಿಲಾದದ್ದು. ಬದಲಾಗಿ, ಸತ್ಯದ ಸಂಶೋಧನೆಯಲ್ಲಿ ತೊಡಗಿರುವುದು. ಎರಡನೆಯದಾಗಿ, ನಮ್ಮಲ್ಲಿ ಸತ್ಯದ ಔನ್ನತ್ಯದ ಬಗ್ಗೆ ಕಾಳಜಿಯನ್ನು ಅಂಕುರಿಸುವುದು. ನಮ್ಮ ನಿತ್ಯದ ಬದುಕಿನಲ್ಲಿ ಯಾವ ವಿಚಾರವೂ ನಮ್ಮನ್ನು ಇದಕ್ಕೆ ಅಣಿಗೊಳಿಸುವುದಿಲ್ಲ. ಅಥವ, ಸತ್ಯದ ಶೋಧಕ್ಕೆ ನಮ್ಮ ನಿತ್ಯದ ಪ್ರಪಂಚದಲ್ಲಿ ಯಾವ ಪ್ರಸ್ತುತತೆ ಅಥವ ಅಗತ್ಯವೂ ಇದ್ದಂತೆ ಕಾಣುವುದಿಲ್ಲ. ಇದರರ್ಥ ನಮಗೆ ಬದುಕಲು ಯಾವ ಜ್ಞಾನವೂ ಬೇಕಿಲ್ಲ ಎಂದಲ್ಲ. ಆದರೆ, ಈ ಯಾವ ಜ್ಞಾನಕ್ಕೂ, ಕೌಶಲಕ್ಕೂ ಸತ್ಯದ ಶೋಧ ಎನ್ನುವ ನಿಯತಿಯ ಅಗತ್ಯವಿಲ್ಲ. ಹಾಗಾದರೆ, ಸತ್ಯ ಶೋಧನೆಯನ್ನು ನಮ್ಮಲ್ಲಿ ಅಂಕುರಿಸುವ ಬಗೆ ಹೇಗೆ? ಅದಕ್ಕೆ ಸಾಂಸ್ಥಿಕವಾದ, ಪಾರಂಪರಿಕವಾದ ಒಂದು ವ್ಯವಸ್ಥೆಯ ಅಗತ್ಯವಿದೆ. ಯುರೋಪಿನ ಸಂಸ್ಕ್ರುತಿಯಲ್ಲಿ, ಮತ್ತು ಆ ಮೂಲಕ ನಮಗೆ ಬಂದ ಬಳುವಳಿಯಲ್ಲಿ, ಸತ್ಯಶೋಧಕ್ಕಿರುವ ಈ ಸಾಂಸ್ಥಿಕ ವ್ಯವಸ್ಥೆಯೇ university ಅಥವಾ ವಿಶ್ವವಿದ್ಯಾಲಯ. ಈ ಅರ್ಥದಲ್ಲಿ, ಉನ್ನತ ಶಿಕ್ಷಣ ಎಂದರೆ ಸತ್ಯ ಶೋಧನೆ ಅಥವಾ ವಿಜ್ಞಾನಕ್ಕೆ (wissenschaft) ಸಂಬಂಧಿಸಿದ್ದು (ಕೇವಲ ಭೌತ ಅಥವ ಜೀವ ವಿಜ್ಞಾನವಷ್ಟೇ ಅಲ್ಲ, ಮಾನವಿಕ ಮತ್ತು ಸಾಂಸ್ಕೃತಿಕ ವಿಜ್ಞಾನಗಳಿಗೂ ಇದು ಅನ್ವಯಿಸುತ್ತದೆ), ಜೊತೆಗೆ, ಸತ್ಯಶೋಧನೆಗೆ ಅನುವು ಮಾಡಿಕೊಡಲು ಆಧುನಿಕ ಸಮಾಜದಲ್ಲಿರುವ ಏಕೈಕ ಸಾಂಸ್ಥಿಕ ವ್ಯವಸ್ಥೆಯಾದ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ್ದು. ಸಾಧಾರಣವಾಗಿ Humboldtian University ಎಂದು ಹೇಳುವಾಗ ಗುರುತಿಸುವುದು ಇಂತಹ ಸಂಸ್ಥೆಯನ್ನು.  

ಅಂದಮೇಲೆ, ನಮ್ಮ ಮುಂದಿರುವ ಪ್ರಶ್ನೆ ವಿಶ್ವವಿದ್ಯಾಲಯದ ಧ್ಯೇಯ ಅಥವ ಉದ್ದೇಶವನ್ನು ಕುರಿತಾದದ್ದು. ನಮ್ಮ ಸಮಕಾಲೀನ ಒತ್ತಡಗಳು ಈ ಉದ್ದೇಶವನ್ನು ಯಾವ ರೀತಿಯ ಬಿಕ್ಕಟ್ಟಿಗೆ ಸಿಕ್ಕಿಸಿವೆ ಎನ್ನುವುದನ್ನು ನಾವು ಕಾಣಬೇಕು. ಇಲ್ಲಿ ಮಾರುಕಟ್ಟೆಯ ಒತ್ತಡಗಳು ಒಂದು ಕಡೆಯಾದರೆ, ಅದನ್ನು ವಿರೋಧಿಸುವ ನೆಲೆಯಲ್ಲಿ ರೂಪುಗೊಂಡಿರುವ ನಮ್ಮ ಸಾಮಾಜಿಕ-ರಾಜಕೀಯ ಕಾಳಜಿಗಳು ಮತ್ತೊಂದು ಕಡೆ. ಈ ಎರಡೂ ವಿರುದ್ಧ ಧ್ರುವಗಳಿಂದ, ವಿರುದ್ಧ ಉದ್ದೇಶಗಳಿಂದ, ಉನ್ನತ ಶಿಕ್ಷಣದ ಮೇಲೆ ಏಕರೀತಿಯ ಸವಾಲುಗಳು ಒದಗುತ್ತಿವೆ. ಅಂದರೆ, ಒಂದು ದಿಕ್ಕಿನಿಂದ, ವಿಶ್ವವಿದ್ಯಾಲಯವನ್ನು ಪ್ರಸ್ತುತಗೊಳಿಸುವ, ಉಪಯುಕ್ತಗೊಳಿಸುವ, ಲಾಭಗಳಿಕೆಯ ಉದ್ದೇಶಗಳಿಗೆ ಪೂರಕವಾಗುವಂತೆ ಮಾಡುವ ಒತ್ತಾಯವಿದ್ದರೆ, ಮತ್ತೊಂದು ಕಡೆಯಿಂದ, ವಿಶ್ವವಿದ್ಯಾಲಯವನ್ನು ಸಮಾನತೆಗಾಗಿ, ದೇಶದ ಪ್ರಗತಿಗಾಗಿ, ಜನರ ಜೀವನಮಟ್ಟ ಸುಧಾರಣೆಗಾಗಿ ಇರುವ ಸಂಸ್ಥೆಯೆಂಬಂತೆ ನೋಡಲಾಗುತ್ತಿದೆ. ಇದರಲ್ಲಿ ಕೆಲವು ಉದ್ದೇಶಗಳು ಒಳ್ಳೆಯ ಉದ್ದೇಶಗಳಾಗಿರಬಹುದು (ಸಮಾನತೆ, ಪ್ರಗತಿ ಮುಂತಾದ ಉದಾಹರಣೆಗಳಲ್ಲಿರುವಂತೆ), ಇಲ್ಲಾ ಕೆಟ್ಟ ಉದ್ದೇಶಗಳಲ್ಲದೇ ಇರಬಹುದು (ಲಾಭ ಗಳಿಕೆಯನ್ನು ಎಷ್ಟಾದರೂ ಕೆಟ್ಟ ಉದ್ದೇಶವೆನ್ನಲು ಬರುವುದಿಲ್ಲವಷ್ಟೆ?). ಆದರೆ, ಈ ಯಾವತ್ತೂ ಉಪಯೋಗಗಳನ್ನು ವಿಶ್ವವಿದ್ಯಾಲಯ ಎನ್ನುವ ಸ್ವಾಯತ್ತ ಸಂಸ್ಥೆಯ ಉದ್ದೇಶ ಅಥವ ಧ್ಯೇಯವನ್ನಾಗಿಸಲು ಹೊರಟರೆ, ಅದು ಅಸಾಧುವೂ ಅಸಿಂಧುವೂ ಆಗುತ್ತದೆ ಎನ್ನುವುದು ನಮ್ಮ ವಾದ. ಒಂದು ಸಣ್ಣ ಉದಾಹರಣೆ: ಒಂದು ದೇಶದ ಗಡಿ ರಕ್ಷಣೆ ಮಾಡುವುದು ಸೈನ್ಯದ ಉದ್ದೇಶ. ಅದ್ದಕ್ಕಾಗಿಯೇ ಸೈನಿಕರನ್ನು ತರಬೇತುಗೊಳಿಸುವುದು. ಆದರೆ ತುರ್ತಿನ ಸಮಯದಲ್ಲಿ, ನಾವು ಸೈನ್ಯವನ್ನು ಪ್ರಕ್ರುತಿ ವಿಕೋಪದ ಪರಿಹಾರಕ್ಕೋ, ಆಂತರಿಕ ಶಾಂತಿಯ ಕಾರಣಕ್ಕೋ ಬಳಸುತ್ತೇವೆ. ಹಾಗೆಂದ ಮಾತ್ರಕ್ಕೇ, ಸೈನ್ಯ ಇರುವುದೇ ಇಂತಹ ಕೆಲಸಗಳಿಗೆಂದು ಹೇಳಲಾಗದು. ಅಥವಾ, ಸೈನಿಕರ ತರಬೇತಿಯನ್ನು ಕೇವಲ ಇಂತಹ ಸಂದರ್ಭದ ಅಗತ್ಯಕ್ಕೆ ತಕ್ಕಂತೆ ರೂಪಿಸಲಾಗದು. ಹಾಗೆ ಮಾಡಿದರೆ, ಸೈನ್ಯದ ಮೂಲ ಉದ್ದೇಶವನ್ನೇ ಮರೆತಂತೆ. (ಯುದ್ಧ, ಸೈನ್ಯ ಇವುಗಳ ಬಗ್ಗೆ ನಮ್ಮ ಅಭಿಪ್ರಾಯಗಳೇನೇ ಇರಲಿ, ಈ ಉದಾಹರಣೆಯನ್ನು ಕೊಟ್ಟಿದ್ದು, ಉದ್ದೇಶಗಳಿಗೂ, ಉಪಯೋಗಗಳಿಗೂ ಇರುವ ವ್ಯತ್ಯಾಸವನ್ನು ಗುರುತಿಸಲು. ಸೈನ್ಯ ಹಲವು ತುರ್ತುಗಳಿಗೆ ಉಪಯೋಗಕ್ಕೆ ಬರಬಹುದು. ಆದರೆ, ಅದರ ಉದ್ದೇಶ ಮಾತ್ರ ಗಡಿ ರಕ್ಷಣೆಯೇ)

ಹಾಗೆಯೇ, ವಿಶ್ವವಿದ್ಯಾಲಯ (ಅಥವ ಉನ್ನತ ಶಿಕ್ಷಣ) ಎನ್ನುವ ಸಂಸ್ಥೆಯಿಂದಲೂ ಹಲವು ಉಪಯೋಗಗಳಿರಬಹುದು, ಆದರೆ ಅವೆಲ್ಲವೂ ಅದರ ಉದ್ದೇಶ ಅಥವ ಧ್ಯೇಯವಾಗಲು ಸಾಧ್ಯವಿಲ್ಲ. ಉನ್ನತ ಶಿಕ್ಷಣದ ಸಾರ್ವತ್ರೀಕರಣದಿಂದ ಸಮಾನತೆ ಸಾಧಿಸಿದಂತಾಗಬಹುದು. ಆದರೆ, ಅದು ಉನ್ನತ ಶಿಕ್ಷಣದ ಉದ್ದೇಶವಲ್ಲ. ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಗೆ, ಉನ್ನತ ಶಿಕ್ಷಣದಿಂದ ನುರಿತ ಪ್ರತಿಭೆಗಳನ್ನು ಸರಬರಾಜು ಮಾಡಬಹುದು. ಆದರೆ, ಅದೂ ಅದರ ಉದ್ದೇಶವಲ್ಲ. ಉನ್ನತ ಶಿಕ್ಷಣದಿಂದ ಇವೆಲ್ಲವೂ ದೊರೆಯುವುದಾದರೆ, ಒಳ್ಳೆಯದೇ. ಆದರೆ, ಈ ಉಪಯೋಗಗಳನ್ನೇ ನಾವು ವಿಶ್ವವಿದ್ಯಾಲಯದ ಧ್ಯೇಯೋದ್ದೇಶಗಳೆಂದು ತಿಳಿದುಕೊಂಡುಬಿಟ್ಟರೆ, ಅದು ಹಲವಾರು ಜಂಜಡಗಳಿಗೆ ಎಡೆಮಾಡಿಕೊಡುತ್ತದೆ. ನಮ್ಮ ಸಮಕಾಲೀನ ಸಂದರ್ಭದಲ್ಲಿ ಆಗಿರುವುದೂ ಇದೇ ಪ್ರಮಾದ. 

ಈ ಚರ್ಚೆ ಕೇವಲ ಸೈದ್ಧಾಂತಿಕ ಸ್ಪಷ್ಟತೆಗೆ ಅಥವ ಬೌದ್ಧಿಕ ವಿಚಾರಗಳಲ್ಲಿ ಗೆರೆ ಕುಯ್ಯುವ ಸೂಕ್ಷ್ಮತೆಗೆ ಮಾತ್ರ ಉಪಯೋಗವಾಗುವಂಥದ್ದು ಎಂದು ತಿಳಿಯಬಾರದು. ಇದರಿಂದ ಉನ್ನತ ಶಿಕ್ಷಣದ ಬೆಳವಣಿಗೆ, ನೀತಿ-ನಿಯಮಾವಳಿಗಳು, ಆರ್ಥಿಕ ಸಾಧಕ-ಬಾಧಕಗಳು ಇವೆಲ್ಲದರ ಮೇಲೂ ಪರಿಣಾಮ ಉಂಟಾಗುತ್ತದೆ. ಮೊದಲನೆಯದಾಗಿ, ಉದ್ದೇಶ-ಉಪಯೋಗಗಳ ನಡುವೆ ಉಂಟಾಗಿರುವ ಈ ಗೊಂದಲದ ಕಾರಣದಿಂದಾಗಿಯೇ, ನಾವು ಔದ್ಯಮಿಕ ಅಥವ ವ್ರುತ್ತಿಪರ ಶಿಕ್ಷಣದ ಉದ್ದೇಶಗಳನ್ನು ಯಾವುದೇ ಮುಂದಾಲೋಚನೆಯಿಲ್ಲದೇ ವಿಶ್ವವಿದ್ಯಾಲಯ ಎನ್ನುವ “ಉನ್ನತ ಶಿಕ್ಷಣ” ಸಂಸ್ಥೆಯ ಮೇಲೆ ಆರೋಪಿಸುತ್ತಿರುವುದು. ಇದರಿಂದಾಗಿ, ವಿಕ್ರುತವಾದ ಹೊಸ ಪ್ರಕಾರವೊಂದನ್ನು ಹುಟ್ಟುಹಾಕಿದ್ದೇವೆ. ಇದು ವಿಫಲವಾಗುವ ಎಲ್ಲ ಲಕ್ಷಣಗಳೂ ಈಗಾಗಲೇ ನಮ್ಮ ಮುಂದಿದೆ. ಸ್ವತಂತ್ರ ಸಂಶೋಧನೆ ಮತ್ತು ವೈಜ್ಞಾನಿಕ ಜ್ಞಾನ ನಿರ್ಮಾಣದಲ್ಲಿ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು ಯಾವುದೇ ಜಾಗತಿಕ ಮಾಪಕದ ದ್ರುಷ್ಟಿಯಿಂದ ನೋಡಿದರೂ ತೀರಾ ಕೀಳು ಮಟ್ಟದಲ್ಲಿರುವುದಕ್ಕೆ ಇದೂ ಒಂದು ಕಾರಣ. ನಮ್ಮ ವಿಶ್ವವಿದ್ಯಾಲಯಗಳು ಉತ್ಪಾದಿಸುತ್ತಿರುವುದು ಉದ್ಯೋಗ ಮಾರುಕಟ್ಟೆಗೂ ಯೋಗ್ಯರಲ್ಲದ ಯುವಕರ ಹಿಂಡುಗಳನ್ನು. 

ಉಪಯೋಗ-ಉದ್ದೇಶದ ಪರಿಕಲ್ಪನೆಯ ಭೇದ ತಿಳಿದರೆ, ಇದೇನೂ ಅಚ್ಚರಿಯ ವಿಷಯವೆಂದು ಅನ್ನಿಸುವುದಿಲ್ಲ. ವಿಶ್ವವಿದ್ಯಾಲಯದ ಉದ್ದೇಶ ಉದ್ಯೋಗ ಪಡೆಯನ್ನು ತಯಾರುಮಾಡುವುದಲ್ಲ. ಹಾಗೆಂದು ವಿಶ್ವವಿದ್ಯಾಲಯದಿಂದ ಪಾಸಾದವರಿಗೆ ಉದ್ಯೋಗ ದೊರಕುವುದಿಲ್ಲ ಎಂದಲ್ಲ. ದೊರಕುತ್ತದೆ. ಆದರೆ, ದೇಶದ ಉದ್ಯೋಗ ಕ್ಷಮತೆಯನ್ನು ಹೆಚ್ಚಿಸುವುದಕ್ಕೆ ವಿಶ್ವವಿದ್ಯಾಲಯದಂತಹ ಸಂಸ್ಥೆಯಿಂದ ಸಾಧ್ಯವಿಲ್ಲ. ಹಾಗೆ ಅಪೇಕ್ಷಿಸುವುದು ಸಾಧುವೂ ಅಲ್ಲ. ಆದರೆ, ನಮ್ಮ ಸುತ್ತ ಒಮ್ಮೆ ಕಣ್ಣುಹಾಯಿಸಿ. ಎಲ್ಲಾ ಸರಕಾರಗಳೂ ಎಗ್ಗಿಲ್ಲದೇ ಹೊಸ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುತ್ತಿವೆ. ಅದಕ್ಕೆ ಖರ್ಚಾಗುತ್ತಿರುವ ತೆರಿಗೆಯ ಹಣ ಅಷ್ಟಿಷ್ಟಲ್ಲ. ಒಂದು ವಿಶ್ವವಿದ್ಯಾಲಯವೆಂದರೆ, ಅದು ಸಾಮಾನ್ಯದ ಬಾಬತ್ತಲ್ಲವಲ್ಲ? ಅಂದಮೇಲೆ, ಉನ್ನತ ಶಿಕ್ಷಣಕ್ಕೆ ಸೇರುತ್ತಿರುವವರ ಸಂಖ್ಯೆಯನ್ನು ಈಗಿರುವ ಶೇಕಡ ೧೦ ರಿಂದ ಶೇಕಡ ೧೫ಕ್ಕೆ ಏರಿಸಬೇಕು ಎಂದುಕೊಂಡಿರುವ ಸರಕಾರ, ಇದಕ್ಕಾಗಿ ನೂರಾರು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಹೊರಟಿರುವುದನ್ನು ನಾವು ಪುನಹ ಪರಿಶೀಲಿಸಬೇಕಾಗುತ್ತದೆ. ಆರ್ಥಿಕ ಅಭಿವ್ರುದ್ಧಿಯ ಅಗತ್ಯಗಳ ದ್ರುಷ್ಟಿಯಿಂದ ನೋಡಿದರೂ, ನಮಗೆ ಬೇಕಿರುವುದು ಸಾಕ್ಷರತೆ ಮತ್ತು ಔದ್ಯೋಗಿಕ, ತಾಂತ್ರಿಕ ಶಕ್ತಿಯೇ ವಿನಹ, ಸಾವಿರಾರು ಸಂಖ್ಯೆಯ ಯೂನಿವರ್ಸಿಟಿ-ಡಬಲ್-ಗ್ರ್ಯಾಜ್ಯುಯೇಟುಗಳಲ್ಲ. ಕೋರ್ಟು ಕಚೇರಿಗಳಿಗೆ ಬೇಕಾದ ಅಧಿಕಾರಿ, ಗುಮಾಸ್ತ, ಕಾರಖೂನರನ್ನು ತಯಾರು ಮಾಡುವುದಕ್ಕೆ ವಿಶ್ವವಿದ್ಯಾಲಯಗಳ ಅಗತ್ಯವಿಲ್ಲ. ಮಾರುಕಟ್ಟೆಯ ಬೇಡಿಕೆಗೆ ನಿಜಕ್ಕೂ ಪ್ರತಿಕ್ರಯಿಸಬೇಕೆಂದರೆ, ನಾವು ಹುಟ್ಟು ಹಾಕಬೇಕಿರುವುದು ಉದ್ಯೋಗ ಕ್ಷಮತೆಯನ್ನು ಹೆಚ್ಚಿಸುವ ಸಂಸ್ಥೆಗಳನ್ನು. ಸ್ವಲ್ಪ ಉತ್ಪ್ರೇಕ್ಷೆಯಾಗಿ ಹೇಳಬೇಕೆಂದರೆ, ಈ ಕಳೆದ ಇಪ್ಪತ್ತು ವರ್ಷದಲ್ಲಿ, ಗ್ರಾಮೀಣ ಭಾರತದ ಯುವಕರಿಗೆ ಹೊಸ ಸಾಧ್ಯತೆಗಳನ್ನು ಪರಿಚಯಿಸಿ ಅವರನ್ನು ಸಬಲರನ್ನಾಗಿ ಮಾಡಿದ್ದು ವಿಶ್ವವಿದ್ಯಾಲಯಗಳಲ್ಲ. ಎನ್.ಐ.ಐ.ಟಿ.,ಯಂಥ ಸಾವಿರಾರು ಅರೆವೃತ್ತಿಪರ ಸಂಸ್ಥೆಗಳು. ವಿಶ್ವವಿದ್ಯಾಲಯಗಳನ್ನು ನಿಜಕ್ಕೂ ಅಭಿಜಾತ ವೈಜ್ಞಾನಿಕ ಸಂಶೋಧನೆಗೆ ಮೀಸಲಾದ ಸಂಸ್ಥೆಗಳಾಗಿ ತಯಾರು ಮಾಡುವ ಬದಲು, ಅವುಗಳ ಉದ್ದೇಶವನ್ನೇ ವಿಕೃತಗೊಳಿಸಿ, ಅವುಗಳಿಗೆ ಪ್ರಸ್ತುತವಲ್ಲದ ಉದ್ದೇಶಗಳನ್ನು ಆರೋಪಿಸಿ ಇರುವ ಬಿಕ್ಕಟ್ಟನ್ನು ಇನ್ನಷ್ಟು ತೀವ್ರಗೊಳಿಸುತ್ತಿದ್ದೇವೆ. 

ಉದ್ದೇಶಗಳಿಗೆ ಪೂರಕವಾಗಿಯೇ ಸಂಸ್ಥೆಗಳ ವಿನ್ಯಾಸ, ಹಣಕಾಸಿನ ಆಯೋಜನೆ ಎಲ್ಲವೂ ಇರುತ್ತದೆ. ಮಾರುಕಟ್ಟೆಯ ಅಗತ್ಯಗಳು ಮತ್ತು ಉದ್ಯೋಗ ಕ್ಷಮತೆಯನ್ನು ಹೆಚ್ಚಿಸುವಲ್ಲಿ ಖಾಸಗೀ ಬಂಡವಾಳವನ್ನು ಹೂಡುವುದು ಹೆಚ್ಚು ಪ್ರಸ್ತುತವಾಗಬಹುದೇನೋ. ಆದರೆ, ವೈಜ್ಞಾನಿಕ ಸಂಶೋಧನೆ, ಸತ್ಯಾನ್ವೇಷಣೆಗೆ ಸಾರ್ವತ್ರಿಕತೆಯ ಗುಣವಿದೆ. ಸಂಶೋಧನೆಯ ಸತ್ಯಾಸತ್ಯತೆ, ಪ್ರಾಮುಖ್ಯತೆಯನ್ನು ನಿರ್ವಚಿಸುವಲ್ಲಿ ಮುಕ್ತವಾದ, ಯೂನಿವರ್ಸಲ್ ಆದ ಚರ್ಚೆಗಳು, ವಿನಿಮಯಗಳು ನಡೆಯಬೇಕಾದ್ದು ಅತ್ಯಗತ್ಯ. ಆ ಕಾರಣದಿಂದಲೇ, ವಿಶ್ವವಿದ್ಯಾಲಯಗಳಂತಹ ಸಂಸ್ಥೆಗಳನ್ನು ಸರಕಾರಗಳೋ, ಅಥವ ಸಾರ್ವಜನಿಕ ಬಂಡವಾಳದ ಮೂಲಕವೋ ನಡೆಸುವುದು ಹೆಚ್ಚು ಪ್ರಸ್ತುತ. ಈಗ ಮತ್ತೊಮ್ಮೆ, ಸುತ್ತ ಕಣ್ಣು ಹಾಯಿಸಿ. ಸರಕಾರಗಳು ಐ.ಐ.ಟಿಗಳನ್ನೂ, ಐ.ಐ.ಐ.ಟಿಗಳನ್ನೂ, ಅರೆವೈದ್ಯಕೀಯ ಕಾಲೇಜುಗಳನ್ನೂ ನಡೆಸುವುದರ ಹಿಂದೆ ನಾವು ಹೇಳಿದ ಉದ್ದೇಶ-ಉಪಯೋಗದ ನಡುವಿನ ಗೊಂದಲವೇ ಕಾರಣವೆಂದು ತೋರುತ್ತದೆ. ಖಾಸಗೀ ಸಂಸ್ಥೆಗಳ ಗುಣಮಟ್ಟ ನಿರ್ವಹಣೆಗೆ, ಆಡಳಿತಾತ್ಮಕ ನೀತಿ ನಿಯಮಾವಳಿಗಳ ರಚನೆ ಮತ್ತು ಜಾರಿಗೆ ಹರಿಸಬೇಕಾಗಿದ್ದ ಗಮನವನ್ನು ಸರಕಾರಗಳು ತಮ್ಮ ಕಾಲೇಜುಗಳನ್ನು ನಿರ್ವಹಿಸುವ ಶ್ಯಾನುಭೋಗಿಕೆಯ ವ್ಯವಹಾರಕ್ಕೆ ಮೀಸಲಿಡುತ್ತಿದೆ. 

ವಿಶ್ವವಿದ್ಯಾಲಯಗಳು ಎಂದೂ ಆರ್ಥಿಕತೆಯ ಉತ್ಪಾದನಾ ಶಕ್ತಿಯನ್ನು ಹೆಚ್ಚಿಸಿದ್ದಿಲ್ಲ. ಅದು ಅವುಗಳ ಉದ್ದೇಶವೂ ಅಲ್ಲ. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳ ಪೇಟೆಂಟುಗಳು ಭಾರೀ ಬಂಡವಾಳ ಹೂಡಿಕೆಗೆ ಆಸ್ಪದ ಮಾಡಿಕೊಟ್ಟಿರುವ ಉದಾಹರಣೆಗಳಿವೆ. ಆದರೆ, ಅದನ್ನೇ ಮುಂದಿಟ್ಟುಕೊಂಡು, ಹೀಗೆ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಡದ ಸಂಶೋಧನೆಯನ್ನು ನಿಲ್ಲಿಸಿಬಿಡುವ ಎಂದು ಯಾರಾದರೂ ಹೇಳಿದರೆ, ಅದರಿಂದಾಗುವ ಅಪದ್ಧ ಎಷ್ಟು ಎಂದು ಒಮ್ಮೆ ಊಹಿಸಿ. ಖಾಸಗೀ ವಿಶ್ವವಿದ್ಯಾಲಯಗಳೇ ಹೆಚ್ಚಿರುವ ಅಮೆರಿಕೆಯಲ್ಲಿ, ಆರ್ಥಿಕ ಹಿಂಜರಿತದ ಈ ದಿನಗಳಲ್ಲೂ, ಯಾರೂ ಇಂತಹ ವಿತಂಡ ವಾದ ಮಾಡಿದ ಉದಾಹರಣೆಯಿಲ್ಲ. ಈ ಎಲ್ಲಾ ಸಂಸ್ಥೆಗಳೂ ಕಳೆದ ಐದಾರು ವರ್ಷಗಳಲ್ಲಿ ನೂರಾರು ಕೋರ್ಸುಗಳನ್ನು ಮುಚ್ಚಿವೆ. ಹತ್ತಾರು ಮಂದಿಯನ್ನು ಕೆಲಸದಿಂದ ತೆಗೆದುಹಾಕಿವೆ. ಆದರೆ, ನಾವು ಸಾಮಾನ್ಯವಾಗಿ ಪ್ರಮುಖವೆಂದು ಪರಿಗಣಿಸುವ ಜ್ಞಾನಶಿಸ್ತುಗಳನ್ನಾಗಲೀ, ಅಥವ ಅರ್ಥಪೂರ್ಣ ಎಂದು ಪರಿಗಣಿಸುವ ಸಂಶೋಧನೆಯನ್ನಾಗಲೀ ಕಡೆಗಣಿಸಿದ ಅಥವ ತೆಗೆದುಹಾಕಿದ ಉದಾಹರಣೆ ಅಪರೂಪ. ಅಲ್ಲಿ ಇಲ್ಲಿ ಒಂದೆರಡು ಅಪವಾದಗಳಿರಬಹುದು ಅಷ್ಟೆ. 

ಇಷ್ಟು ಹೇಳಿದ ನಂತರ, ಈ ಸಮಸ್ಯೆಯ ಮತ್ತೊಂದು ಸೂಕ್ಷ್ಮ ಆಯಾಮವನ್ನು ಗಮನಿಸಬೇಕು. ವಿಶ್ವವಿದ್ಯಾಲಯದ ಉದ್ದೇಶ ಮತ್ತು ಧ್ಯೇಯದ ಬಗ್ಗೆ ಹೇಳಿದೆವಷ್ಟೆ. ಪಾಶ್ಚಿಮಾತ್ಯರಲ್ಲಿ, ವಿಶ್ವವಿದ್ಯಾಲಯ ಎನ್ನುವ ಸಾಂಸ್ಕ್ರುತಿಕ ಸಂಸ್ಥೆಯ ಬಗೆಗಿನ ಜಿಜ್ಞಾಸೆಯೇ ತತ್ವಶಾಸ್ತ್ರದ ಒಂದು ಶಾಖೆಯಂತೆ ಬೆಳೆದಿದೆ. ಘಟಾನುಘಟೀ ದಾರ್ಶನಿಕರಾದ ವಿಲ್ಹೆಲ್ಮ್ ವೋನ್ ಹುಂಬೋಲ್ಟ್, ಇಮ್ಮಾನ್ಯುಯೆಲ್ ಕಾಂಟ್, ಜಾನ್ ಹೆನ್ರಿ ನ್ಯೂಮನ್, ಜಿ.ಡಬ್ಲ್ಯು.ಎಫ಼. ಹೆಗೆಲ್, ಮಾರ್ಟಿನ್ ಹೈಡೆಗರ್ ರಂತಹವರಲ್ಲದೇ, ನಮ್ಮ ಸಮಕಾಲೀನ ಚಿಂತಕರಾದ ಹಾನ್ಸ್ ಜಾರ್ಜ್ ಗಾಡಮರ್, ಯಾರೊಸ್ಲಾವ್ ಪೆಲಿಕನ್, ಆಲನ್ ಬ್ಲೂಮ್, ಜಾನ್ ಮ್ಯಾಕ್ಡೊವಲ್, ಬಿಲ್ ರೀಡಿಂಗ್ಸ್, ಜಾಕ್ ಬಾರ್ಜನ್, ಆರ್.ಡಬ್ಲ್ಯು. ಸದರ್ನ್ ಮುಂತಾದವರೂ ವಿಶ್ವವಿದ್ಯಾಲಯದ ಬಗ್ಗೆ ಬರೆದಿದ್ದಾರೆ. (ಇಲ್ಲಿ ನಾವು ಪಟ್ಟಿ ಮಾಡುತ್ತಿರುವುದು ವಿಶ್ವವಿದ್ಯಾಲಯ ಎನ್ನುವ ವ್ಯವಸ್ಥೆಯ ಸಾಮಾಜಿಕ ಆರ್ಥಿಕ ವಿಶ್ಲೇಷಣೆ ಮಾಡುವಂತಹ ಬರಹಗಾರರನ್ನಲ್ಲ. ಬದಲಾಗಿ ಅದರ ಸಾಂಸ್ಕ್ರುತಿಕ, ಬೌಧ್ಧಿಕ ಮತ್ತು ತಾತ್ವಿಕ ಆಯಾಮಗಳ ಬಗ್ಗೆ ಆಳವಾದ, ಒಂದು ರೀತಿಯಲ್ಲಿ ಆಧ್ಯಾತ್ಮಿಕ ಎನ್ನಬಹುದಾದ ಚಿಂತನೆಯನ್ನು ಮಾಡಿರುವವರ ಬಗ್ಗೆ) ಇವರುಗಳಲ್ಲಿ ಇರುವ ಒಂದು ಸಮಾನ ಕಾಳಜಿಯೆಂದರೆ, ವಿಶ್ವವಿದ್ಯಾಲಯದ ಧ್ಯೇಯೋದ್ಧೇಶಗಳನ್ನು ಅನ್ವೇಷಿಸುವ ಮತ್ತು ಸಾಕ್ಷಾತ್ಕರಿಸಿಕೊಳ್ಳುವ ಬಗೆ ಹೇಗೆ ಎಂಬುದು. ಮತ್ತೊಂದು ಕಾಳಜಿಯೆಂದರೆ, ವಿಶ್ವವಿದ್ಯಾಲಯದ ಈ ಧ್ಯೇಯಗಳು ಆಧುನಿಕ ಜಗತ್ತಿನಲ್ಲಿ ಯಾವ ರೀತಿಯ ಬಿಕ್ಕಟ್ಟಿಗೆ ಸಿಕ್ಕಿವೆ ಎಂದು ಹುಡುಕುವುದು. 

ಈ ದೃಷ್ಟಿಯಿಂದ ನೋಡಿದರೆ, ನಾವು ಏನನ್ನು ಮಾರುಕಟ್ಟೆಯ ಒತ್ತಡಗಳು ಎಂದು ಒಟ್ಟಾಗಿ ಕರೆಯುತ್ತೇವೆಯೋ, ಅದರಲ್ಲೂ ಕೆಲವು ಭಿನ್ನತೆಗಳು ಕಾಣತೊಡಗುತ್ತವೆ. ಬಿಲ್ ರೀಡಿಂಗ್ಸ್ ಎನ್ನುವ ಚಿಂತಕನ ಪ್ರಕಾರ, ಪಾಶ್ಚಿಮಾತ್ಯ ದೇಶಗಳಲ್ಲಿ ಇತ್ತೀಚೆಗೆ ಹುಟ್ಟಿಕೊಂಡಿರುವ university of excellence ಎನ್ನುವ ಪರಿಕಲ್ಪನೆಯೇನಿದೆ ಇದು ಮಾರುಕಟ್ಟೆಯ ಒತ್ತಡಕ್ಕೆ ವಿಶ್ವವಿದ್ಯಾಲಯಗಳು ಒಗ್ಗಿಕೊಳ್ಳಲು ನಡೆಸುತ್ತಿರುವ ಒಂದು ಹತಾಶ ಪ್ರಯತ್ನ. ಇದಕ್ಕೆ ವಿರುದ್ಧವಾಗಿ, ರೀಡಿಂಗ್ಸ್, ಯುರೋಪಿನ ವಿಶ್ವವಿದ್ಯಾಲಯದ ಉದ್ದೇಶ ಮತ್ತು ಅದರ ಮೂಲಸ್ರೋತವನ್ನು uಟಿiveಡಿsiಣಥಿ oಜಿ ಛಿuಟಣuಡಿe ಎನ್ನುವ ಕಲ್ಪನೆಯ ಮೂಲಕ ವಿವರಿಸುತ್ತಾನೆ. university of culture ಎನ್ನುವುದು ಸಮುದಾಯಗಳು (ಸೆಕ್ಯುಲರ್ ಯುರೋಪಿನ ಮಟ್ಟಿಗೆ ಹೇಳುವುದಾದರೆ, ಸಮುದಾಯದ ಅತ್ಯಂತ ಸಾಮಾನ್ಯ ರೂಪವಾದ ರಾಷ್ಟ್ರೀಯ ಸಮುದಾಯಗಳು - national communities) ಮತ್ತು ಸಂಸ್ಕ್ರುತಿಗಳು ತಂತಮ್ಮ ಅನುಭವದ ಮೂಸೆಯಲ್ಲಿ ರೂಪಿಸಿಕೊಳ್ಳುವ ಬೌದ್ಧಿಕ ಸಂಪ್ರದಾಯಗಳ ಸಾಂಸ್ಥಿಕ ರೂಪ. ಪಾಶಿಮಾತ್ಯ ವಿಜ್ಞಾನ, ಮೀಮಾಂಸೆ ಎಲ್ಲವೂ ಇಂತಹ ಸಂಪ್ರದಾಯದ ಕುಡಿಗಳು. ಆದ್ದರಿಂದ, university of culture ಎನ್ನುವ ಕಲ್ಪನೆಗೆ ಒಂದು ಹೂರಣ, ತಿರುಳು ಅಥವ ಸತ್ವ ಎಂಬುದಿದೆ. ಆದರೆ, ಮಾರುಕಟ್ಟೆಯ ಒತ್ತಡದಿಂದ ಹುಟ್ಟಿದ university of excellence ಎನ್ನುವ ಈ ಕಲ್ಪನೆಗೆ ಅಂಥಾ ಯಾವುದೇ ಮೂಲಸತ್ವವೂ ಇಲ್ಲ. ಅದು ಕೇವಲ ದಕ್ಷತೆ, ಕಾರ್ಯಕ್ಷಮತೆ ಅಥವಾ ತಾನು ಒದಗಿಸುವ ಸೇವೆಗಳ ನಿಖರ ಮಾಪನ ಮಾಡುವುದಕ್ಕೆ ಪ್ರಯೋಜನಕ್ಕೆ ಬರಬಹುದಷ್ಟೆ. university of excellence ಎಂಬುದಕ್ಕೆ ಏನಾದರೂ ಅರ್ಥವಿದ್ದರೆ, ಅದು university of culture ಎನ್ನುವ ಸಂಸ್ಥೆಯ ಕಾರಣದಿಂದ ಬಂದಿದ್ದು. ಆದರೆ, ರಾಷ್ಟ್ರ-ಪ್ರಭುತ್ವಗಳ ಪ್ರಾಮುಖ್ಯತೆ, ಸಾಂಸ್ಕ್ರುತಿಕ ಅಸ್ಮಿತೆಗಳೇ ಕುಗ್ಗುತ್ತಿರುವ ಇಂದಿನ ದಿನಗಳಲ್ಲಿ, ಈ university of cultureಅನ್ನು ನೆಲೆಗೊಳಿಸುವ ಬಗೆ ಹೇಗೆ, ಎಂದು ರೀಡಿಂಗ್ಸ್ ಚಿಂತಿಸುತ್ತಾನೆ. 

ಸಮಕಾಲೀನ ಭಾರತೀಯ ಸಂದರ್ಭದಿಂದ ನೋಡಿದರೆ ರೀಡಿಂಗ್ಸನ ಪ್ರಶ್ನೆ ಇನ್ನೂ ಆಳವಾದ ಸಮಸ್ಯೆಗಳತ್ತ ಬೆಟ್ಟು ಮಾಡುತ್ತಿರುವಂತೆ ತೋರುತ್ತದೆ. ಭಾರತದಲ್ಲಿ ಬ್ರಿಟಿಶರಿಂದ ಆಧುನಿಕ ವಿಶ್ವವಿದ್ಯಾಲಯಗಳ ಸ್ಥಾಪನೆಯಾದಾಗಿನಿಂದ ಹಿಡಿದು ಇಂದಿನವರೆಗಿನ ಚರ್ಚೆಯನ್ನು ಗಮನಿಸಿದಲ್ಲಿ, ವಿಶ್ವವಿದ್ಯಾಲಯ ಎನ್ನುವ ಸಂಸ್ಥೆಯ ಧ್ಯೇಯೋದ್ದೇಶಗಳು ಈ ನೂರೈವತ್ತು ವರ್ಷಗಳಲ್ಲಿ ನಮ್ಮ ಸಂಸ್ಕ್ರುತಿಯಲ್ಲಿ ನಿಜಕ್ಕೂ ಆಳವಾಗಿ ಬೇರೂರಿವೆಯೇ? ಈ ಉದ್ದೇಶಗಳು ಮತ್ತು ಧ್ಯೇಯಗಳ ಜೀವಂತಿಕೆಯನ್ನು ಖಾತರಿಗೊಳಿಸುವುದಕ್ಕೆ ಪೂರಕವಾದ conceptual matrixಅನ್ನು ನಾವು ನಮ್ಮ ಸಂಸ್ಕೃತಿ ಮತ್ತು ಕಾಲ-ದೇಶದ ಅಗತ್ಯಕ್ಕೆ ತಕ್ಕಂತೆ ರೂಪಿಸಿಕೊಳ್ಳುವ ಬಗೆ ಹೇಗೆ? ಎಂಬುದು. ವಿಶ್ವವಿದ್ಯಾಲಯ ಎನ್ನುವ ಸಂಸ್ಥೆಯ ಧ್ಯೇಯೋದ್ದೇಶಗಳು ನಮ್ಮ ಸಂಸ್ಕೃತಿಯಲ್ಲಿ ಬೇರೂರದೇ ಹೋಗಿರಬಹುದು ಎಂದಾದ ಪಕ್ಷದಲ್ಲಿ, ಸಂಸ್ಕೃತಿಗಳು ತಮ್ಮ ಅನುಭವಗಳ ಬಗ್ಗೆ ಚಿಂತಿಸುವುದಕ್ಕೆ ಹಲವು ಬೇರೆ ರೀತಿಯ ಮಾರ್ಗಗಳನ್ನೂ ಬಳಸುತ್ತಿದ್ದಿರಬಹುದು ಎಂದು ಊಹಿಸಬಹುದಷ್ಟೆ? ಹಾಗಾದರೆ ಅದರ ಬಗ್ಗೆ ಚಿಂತನೆ ನಡೆಸಲು ನಾವು ಯಾವ ರೀತಿಯ ಹೊಸ ಮೀಮಾಂಸೆಗಳನ್ನು, ಸಂಶೋಧನಾ ಮಾದರಿಗಳನ್ನು ಹುಡುಕಬೇಕು ಎನ್ನುವುದು ನಮ್ಮ ಮುಂದಿರುವ ಜರೂರು.

ಬಹುಶಃ, ಇದೇ ಕಾರಣಕ್ಕೇ, ನಮ್ಮಲ್ಲಿ ವಿಶ್ವವಿದ್ಯಾಲಯಗಳು ಮತ್ತು ಮಾರುಕಟ್ಟೆಯ ನಡುವೆ ಅಂತಹ ಹೇಳಿಕೊಳ್ಳುವಂತಹ ಸಂಬಂಧ ಇಲ್ಲದಿರುವುದು. ಪಾಶ್ಚಿಮಾತ್ಯ ದೇಶಗಳಲ್ಲಿ, ಮಾರುಕಟ್ಟೆ ಮತ್ತು ವಿಶ್ವವಿದ್ಯಾಲಯಗಳ ನಡುವಿನ ಪರಸ್ಪರ ಒತ್ತಡ, ಒತ್ತಾಯಗಳು ಜ್ಞಾನಾರ್ಜನೆ ಮತ್ತು ಜ್ಞಾನಪ್ರಸರಣಕ್ಕೆ ಅನುಕೂಲವಾಗಿರಲಿ ಅಥವ ಪ್ರತಿಕೂಲವಾಗಿರಲಿ, ಅವುಗಳು ಉದ್ದೇಶ–ಉಪಯೋಗದ ದೃಷ್ಟಿಯಿಂದ ಪರಸ್ಪರರ ಭಿನ್ನ ನೆಲೆಗಳನ್ನು ಗುರುತಿಸುತ್ತವೆ ಎಂಬುದಂತೂ ಸ್ಪಷ್ಟ. ಹಾಗೆ ಗುರುತಿಸುವುದರಿಂದಲೇ, ಎರಡರ ನಡುವೆ ತೀವ್ರವಾದ ಬಿಕ್ಕಟ್ಟು ಏರ್ಪಟ್ಟಿರುವುದು. ನಮ್ಮಲ್ಲಿ, ವಿಶ್ವವಿದ್ಯಾಲಯ ಎನ್ನುವ ಒಂದು ಸಾಂಸ್ಕೃತಿಕ ವ್ಯವಸ್ಥೆಯೇ ಬೇರೂರಿರದ ಕಾರಣ ಮಾರುಕಟ್ಟೆಯ ಶಕ್ತಿಗಳು ಈ ಸಂಸ್ಥೆಯನ್ನು ಗುರುತಿಸುವ ಮತ್ತು ಅದರ ಜೊತೆ ತಿಕ್ಕಾಟಕ್ಕಿಳಿಯುವ ಪ್ರಮೇಯವೇ ಹುಟ್ಟಿಲ್ಲ. ಅಷ್ಟರ ಮಟ್ಟಿಗೆ ವಿಶ್ವವಿದ್ಯಾಲಯ ಮತ್ತು ಮಾರುಕಟ್ಟೆಯೇ ಮೊದಲಾಗಿ ಸಮಾಜದ ಹಲವು ನೆಲೆಗಳ ನಡುವೆ ಅಂತಹ ಅನುಕಲನವೇ ಇಲ್ಲದಂತಿರುವುದು. ಆದ್ದರಿಂದಲೇ, ಎಂದೂ ನಮ್ಮ ವಿಶ್ವವಿದ್ಯಾಲಯಗಳಿಗೆ ಹೇಳಿಕೊಳ್ಳುವಂತಹ ಸಾಮಾಜಿಕ ವಿಶ್ವಾಸಾರ್ಹತೆ ಇಲ್ಲದಿರುವುದು. ಇಲ್ಲಿ ಮತ್ತೊಂದು ವಿಷಯ ಪ್ರಸ್ತಾಪಿಸಬೇಕು. ನಾವೆಲ್ಲರೂ ಭಾರತದ ವಿಶ್ವವಿದ್ಯಾಲಯಗಳ ಬಗ್ಗೆ ಮಾತಾಡುವಾಗ ಅವುಗಳು ಕೀಳು ರಾಜಕೀಯ ಮತ್ತು ರಾಜಕಾರಣಿಗಳ ಆಡುಂಬೊಲವಾಗಿರುವುದನ್ನು ಹಳಿಯುತ್ತಲೇ ಇರುತ್ತೇವೆ. ನಮ್ಮ ವಿಶ್ವವಿದ್ಯಾಲಯಗಳು ಮಾರುಕಟ್ಟೆಯ ಅಗತ್ಯಗಳಿಂದ ಸಂಪೂರ್ಣ ವಿಮುಖವಾಗಿರುವುದು, ಒಂದು ರೀತಿಯಿಂದ ನೋಡಿದರೆ, ಅವುಗಳ ಸಾಮಾಜಿಕ ವಿಶ್ವಾಸಾರ್ಹತೆಯಲ್ಲಿರುವ ಕೊರತೆಯ ದ್ಯೋತಕ. ಈ ಕೊರತೆಯ ಕಾರಣದಿಂದಾಗಿಯೇ ಅವು ಸಾಮಾಜಿಕವಾಗಿ-ಸಾಂಸ್ಥಿಕವಾಗಿ ಪಳೆಯುಳಿಕೆಗಳಂತೆ ಇರುವುದು. ಎಲ್ಲಾ ಸಂಸ್ಥೆಗಳಲ್ಲೂ ರಾಜಕೀಯ ಇರುವುದೇ. ಆದರೆ, ಸಾಂಸ್ಥಿಕವಾಗಿ-ಸಾಮಾಜಿಕವಾಗಿ ಪಳೆಯುಳಿಕೆಯಾದ ವ್ಯವಸ್ಥೆಗಳಲ್ಲಿ ಕಾಣುವದಕ್ಕೆ ಬೇರೇನೂ ಇಲ್ಲದ ಕಾರಣ ಕೀಳು ರಾಜಕೀಯ ಮಾತ್ರ ಢಾಳಾಗಿ ಕಾಣಿಸುತ್ತದೆ. ನಮ್ಮ ವಿಶ್ವವಿದ್ಯಾಲಯಗಳ ಸಮಸ್ಯೆ ರಾಜಕಾರಣ ಅಥವ ರಾಜಕಾರಣಿಗಳಲ್ಲ. ನಮ್ಮ ವಿಶ್ವವಿದ್ಯಾಲಯಗಳಲ್ಲಿರುವ ಸಮಸ್ಯೆಯಿಂದಾಗಿ ಅವು ರಾಜಕಾರಣ ಮತ್ತು ರಾಜಕಾರಣಿಗಳ ಕೈಗೊಂಬೆಯಾಗಿರುವುದು. 

ಯಾವ ವ್ಯವಸ್ಥೆ ಅಥವ ಸಂಸ್ಥೆಯಾಗಲೀ, ಅವುಗಳ ಉದ್ದೇಶ ಉಪಯೋಗಗಳು ನೇರವಾಗಿ ತಿಳಿಯದಿದ್ದ ಪಕ್ಷದಲ್ಲೂ, ಅವುಗಳನ್ನು ರಕ್ಷಿಸುವುದರ ಬಗ್ಗೆ ಸಾಮಾನ್ಯವಾಗಿ ಪರೋಕ್ಷವಾದ ಸಾರ್ವಜನಿಕ ಒಮ್ಮತವಿರುತ್ತದೆ. ಅದು ಕೇವಲ ಆರ್ಥಿಕ ಅಭಿವೃದ್ಧಿ ಅಥವ ಮಾರುಕಟ್ಟೆಯ ಒತ್ತಡದ ಮೇಲೆಯೇ ನಿರ್ಧರಿತವಾಗುವುದಿಲ್ಲ. ನಾಟಕ, ಕಲೆ ಸಂಗೀತ, ದೇವಸ್ಥಾನ, ಮಠಗಳು ಇವು ಯಾವುದಕ್ಕೂ ಇರುವ ಉದ್ದೇಶವೇನೆಂದು ಕೇಳಿದರೆ ಸ್ಪಷ್ಟವಾದ ಉತ್ತರ ಸಿಗುತ್ತದೆ ಎನ್ನುವ ಖಾತರಿಯಿಲ್ಲ. ಆದರೆ ಅದನ್ನೇ ಕಾರಣ ಮಾಡಿಕೊಂಡು ಇವುಗಳನ್ನೆಲ್ಲಾ ಮುಚ್ಚಿಬಿಡಿ ಎಂದೋ ಅಥವಾ ಇವುಗಳನ್ನು ಆರ್ಥಿಕ ಉತ್ಪಾದಕತೆಗೆ ಅನುಗುಣವಾಗಿ ಬದಲಾಯಿಸಿಬಿಡಿ ಎಂದೋ ಯಾರೂ ಹೇಳುವುದಿಲ್ಲ. ಮನಶ್ಶಾಂತಿ ಅಥವಾ ಆಧ್ಯಾತ್ಮ ಸಾಧನೆಗಾಗಿ ಇವೆಲ್ಲ ಸಂಸ್ಥೆಗಳು, ಸಂಪ್ರದಾಯಗಳು ಎಂದು ಕೆಲವರು ಹೇಳಬಹುದು. ಆದರೆ ಆ ಲೆಕ್ಕಕ್ಕೆ ನೋಡಿದರೆ, ವಿಶ್ವವಿದ್ಯಾಲಯ ಇರುವುದು ಸತ್ಯಾನ್ವೇಷಣೆಗೆ ಎನ್ನುವುದೂ ಕೂಡ ಅಷ್ಟೆ ಸರಳ ಸ್ವಯಂವೇದ್ಯ ಸತ್ಯವಾಗಿರಬೇಕಿತ್ತು. ಆಗ ವಿಶ್ವವಿದ್ಯಾಲಯಗಳಿಗೂ ಮಾರುಕಟ್ಟೆಯ ಒತ್ತಡಗಳಿಂದ ವಿನಾಯತಿ ಸಿಕ್ಕಿರುತ್ತಿತ್ತು. ಹಾಗಾಗಿಲ್ಲ ಎಂದ ಮೇಲೇ, ಕನಿಷ್ಠ ಒಂದು ವಿಚಾರವಂತೂ ತಿಳಿಯುತ್ತದೆ: ನಮ್ಮಲ್ಲಿ ವಿಶ್ವವಿದ್ಯಾಲಯದ ಉದ್ದೇಶಗಳ ಬಗ್ಗೆ ಇಂತಹ ಒಂದು ಪರೋಕ್ಷವಾದ ಸಾರ್ವಜನಿಕ ಒಮ್ಮತವೂ ಇಲ್ಲ ಎಂಬುದು. 

ಸಾಂಸ್ಥಿಕ, ಸಾಂಸ್ಕೃತಿಕ ಉದ್ದೇಶಗಳನ್ನು ಹುಡುಕುವ ಕೆಲಸ ನಾವು ಮಾಡುವ ಕ್ರಿಯೆಗಳಿಗೆ ಸಮಜಾಯಿಷಿ ಅಥವ ಕಾರಣಗಳನ್ನು ಕೊಟ್ಟಂತಲ್ಲ. ಅಥವಾ ಪೂರ್ವನಿರ್ಧಾರಿತ ಯೋಜನೆಯೊಂದನ್ನು ಕೃತಿಗಿಳಿಸಿದಂತಲ್ಲ. ಅಥವಾ, ಎಲ್ಲೋ ಆಳದಲ್ಲಿ ಹುದುಗಿರುವ ಲೋಹದ ಗಟ್ಟಿಯನ್ನು ಸಾರಾಸಗಟು ಹುಡುಕಿ ತೆಗೆದಂತಲ್ಲ. ಅದು ಚಾರಿತ್ರಿಕವಾದ, ಸಾಂಸ್ಕ್ರುತಿಕವಾದ ಜಿಜ್ಞಾಸೆಯ ಮೂಲಕವೇ ಬೆಳಕಿಗೆ ಬರಬೇಕಾದ್ದು. ಪಾಶ್ಚಿಮಾತ್ಯ ಪರಂಪರೆಯಲ್ಲಿ dialectical ಎನ್ನುತ್ತಾರಲ್ಲ, ಅಂತಹ ಚಿಂತನೆಯಿಂದ ಗೋಚರವಾಗುವಂಥದ್ದು. ಸ್ವಲ್ಪ ಸರಳ ರೀತಿಯಲ್ಲಿ ಹೇಳುವದಾದರೆ, ಮೊಸರಿನಲ್ಲಿಯೇ ಅಡಕವಾಗಿದ್ದ ಬೆಣ್ಣೆಯನ್ನು, ಬೇರೇ ಯಾವ ಹೊರಗಿನ ಪದಾರ್ಥವನ್ನೂ ಸೇರಿಸದೇ, ಮೊಸರನ್ನೇ ಕಡೆದು ತೆಗೆಯುತ್ತೇವಲ್ಲ, ಹಾಗೆ. ಇದೇ ಮಾರುಕಟ್ಟೆಯ ಒತ್ತಡದ ಎದುರಿಗೆ ನಾವು ಮುಖ್ಯವಾಗಿ ಮಾಡಬಹುದಾದ ಕೆಲಸ. ಮಾರುಕಟ್ಟೆಯನ್ನು ವಿರೋಧಿಸುವ ನೇತ್ಯಾತ್ಮಕವಾದ ಕೆಲಸದ ಮೊದಲಿಗೆ, ಸಾಂಸ್ಕೃತಿಕ ಜಿಜ್ಞಾಸೆಯ ಮೂಲಕ ಸಾಮಾಜಿಕ ಮತ್ತು ಸಾಂಸ್ಥಿಕ ವ್ಯವಸ್ಥೆಗಳ ಮೂಲಸ್ರೋತಗಳು ಎಲ್ಲಿವೆ ಎಂದು ತಿಳಿವ ಇತ್ಯಾತ್ಮಕವಾದ ಕೆಲಸ; ಅದರಲ್ಲೂ, ಅವನ್ನು ಸಂರಕ್ಷಿಸುವ ಮೊದಲಿಗೆ, ಅವನ್ನು ಸಂಶೋಧಿಸುವ ಕೆಲಸ.

ಶಶಿಕಲಾ ಶ್ರೀನಿವಾಸನ್ 
ಮತ್ತು 
ಅಶ್ವಿನ್ ಕುಮಾರ್.ಎ.ಪಿ.
(ಸಂಸ್ಕೃತಿ – ಸಮಾಜ ಅಧ್ಯಯನ ಕೇಂದ್ರ, ಬೆಂಗಳೂರು)

ಪ್ರಕಟಣೆ: ದೇಶಕಾಲ, ಎಪ್ರಿಲ್ ೨೦೧೧ (೧೧೨-೧೭)


Comments

Popular posts from this blog

ಮಾರ್ಕ್ಸ್‌‌‌ ವಾದ

ಸ್ಟ್ರಕ್ಚರಲಿಸಂ (ರಚನಾವಾದ/ರಾಚನಿಕವಾದ)

ಸಮಾನತೆಯ ಕುರಿತು ಐದು ತಕರಾರುಗಳು