ಗಾಂಧೀ ಸ್ಮರಣೆಯೆಂಬ ನೋಂಪಿಯ ಕತೆ


ಮಹಾತ್ಮ ಗಾಂಧಿಯ ಬದುಕಿನ ಕುರಿತು ರಾಜಕೀಯದ ನೆಲೆಯಿಂದ, ಸಾಮಾಜಿಕ ಮತ್ತು ಐತಿಹಾಸಿಕ ನೆಲೆಗಳಿಂದ ಹಲವಾರು ಜೀವನ ಚರಿತ್ರೆಗಳು ಬಂದಿವೆ. ಉದಾಹರಣೆಗೆ, ಇತ್ತೀಚೆಗೆ ರಾಮಚಂದ್ರ ಗುಹಾರವರು ಬರೆದ ಗಾಂಧಿ ಬಿಫೋರ್ ಇಂಡಿಯಾ ಕೂಡ ಅಂಥದ್ದೇ ಒಂದು ಅತ್ಯುತ್ತಮ ಪುಸ್ತಕ. ಆದರೆ, ಇಂತಹ ಪುಸ್ತಕಗಳು ರಾಜಕೀಯ ಪಟುವಾದ, ಸಮಾಜ ಸುಧಾರಕನಾದ, ಸ್ವಾತಂತ್ರ್ಯ ಹೋರಾಟಗಾರನಾದ ಮತ್ತು ಗೃಹಸ್ಥನಾದ ಗಾಂಧಿಯ ಗುಣಾವಗುಣಗಳ ಬಗ್ಗೆ ಹೇಳುವುದೇ ಹೆಚ್ಚು. ಅದರಾಚೆಗೆ ಇರುವ ಪುರಾಣಪುರುಷನಾದ,  ಪರಮಭಾಗವತನಾದ, ಅವಧೂತನಾದ, ಯೋಗಾಚಾರ್ಯನಾದ ಗಾಂಧಿಯ ಬಗ್ಗೆ ಇವು ಹೇಳುವುದು ಅಲ್ಪವೇ. ಅಂತಹ ಕತೆಗಳನ್ನು ಹೇಳುವುದಕ್ಕೆ ಬೇಕಾದ ಭಾಷೆಯನ್ನೂ, ಪರಿಕರಗಳನ್ನೂ ನಾವು ಕಳೆದುಕೊಂಡಿದ್ದೇವೆ ಎನ್ನುವುದೂ ಮತ್ತೊಂದು ಸಮಸ್ಯೆ. ಅಪರೂಪಕ್ಕೆ ಗಾಂಧಿಯ ತತ್ವದ ಬಗ್ಗೆ ಕೆಲವು ಹೊಸ ಚಿಂತನೆಗಳು ನಡೆಯುತ್ತಿರುವುದೂ ಅಲ್ಲಲ್ಲಿ ಕಾಣಿಸುತ್ತಿದೆ. ಬಹಳ ಹಿಂದೆ ಸಿದ್ಧವನಹಳ್ಳಿ ಕೃಷ್ಣಶರ್ಮರು ಗಾಂಧಿಯ ಇಂತಹ ಸಾಧನೆಗಳ ಬಗ್ಗೆ "ಪರ್ಣಕುಟಿ" ಎಂಬ ಪುಸ್ತಕವನ್ನು ಬರೆದಿದ್ದರು. ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರೊ. ಅಕೀಲ್ ಬಿಲ್‍ಗ್ರಾಮಿ, ಬೆಂಗಳೂರಿನ ಡಾ. ವಿವೇಕ್ ಧಾರೇಶ್ವರ ಮುಂತಾದವರು ಇತ್ತೀಚೆಗೆ ಗಾಂಧಿಯ ಅನುಭವಜ್ಞಾನದ ಕುರಿತ ಮೀಮಾಂಸೆಯನ್ನು ಬೆಳೆಸಿರುವುದನ್ನು ಗಮನಿಸಬೇಕು. (ಈ ಎರಡೂ ಲೇಖನಗಳು ತುಮಕೂರು ವಿಶ್ವವಿದ್ಯಾನಿಲಯವು ಪ್ರಕಟಿಸುವ "ಲೋಕಜ್ಞಾನ" ಸಂಶೋಧನಾ ಪತ್ರಿಕೆಯಲ್ಲಿ ಅನುವಾದವಾಗಿವೆ. ವಿವಿಯ ಅಂತರ್ಜಾಲ ಪುಟದಲ್ಲೂ ಲಭ್ಯವಿದೆ).

ಗಾಂಧಿಯ ಈ ಮುಖದ ಬಗ್ಗೆ ಹೇಳುವುದು ಅಂದರೆ ಗಾಂಧಿ ಜೀವನ ಚರಿತ್ರೆಯ ವಿವರಗಳನ್ನು ಕಲೆಹಾಕುವುದು ಎಂದಲ್ಲ. ಬದಲಾಗಿ, ಅವರ ಬೇರೆಬೇರೆ ಮಾತುಗಳ, ವಿಚಾರಗಳ ನಡುವೆ ಇರುವ ಸಂಬಂಧವನ್ನು, ಪೂರ್ಣತೆಯನ್ನು ಪುನಃ ಒಂದು ಸಮಗ್ರ ಚಿತ್ರಣವಾಗಿ ರೂಪಿಸುವುದು ಎಂದರ್ಥ. ನಮಗೆ ಇಂದು ತಿಳಿದಿರುವ ವಿಮರ್ಶೆಯ ಮಾದರಿ ಎಂದರೆ, ಒಬ್ಬ ಚಿಂತಕನಲ್ಲಿ ನಾವು ಇವತ್ತು ಒಪ್ಪಿಕೊಳ್ಳುವ ಮಾತುಗಳೆಷ್ಟು ಮತ್ತು ಒಪ್ಪಿಕೊಳ್ಳಲು ಆಗದ ಮಾತುಗಳೆಷ್ಟು ಎಂದು ಲೆಕ್ಕಚಾರ ಮಾಡುವುದು ಎಂದಾಗಿಬಿಟ್ಟಿದೆ. ಹಾಗಾಗಿ ಎಲ್ಲರೂ ಗಾಂಧಿ ಎಂದಾಕ್ಷಣ ತಮಗೆ ಸರಿಕಾಣುವ ಅಹಿಂಸೆ, ಹಿಂದೂ-ಮುಸ್ಲಿಮ್ ಬಾಂಧವ್ಯ ಮುಂತಾದ ಒಂದೆರಡು ಅಂಶಗಳಿಗೆ ಗಾಂಧಿಯನ್ನು ಹೊಗಳಿ, ತಮಗೆ ಸರಿಕಾಣದ ಬ್ರಹ್ಮಚರ್ಯ, ಸಂಪ್ರದಾಯನಿಷ್ಟೆ, ವರ್ಣಾಶ್ರವi ವಿವೇಕ, ಮುಂತಾದ ಇನ್ನೊಂದಷ್ಟು ಅಂಶಗಳಿಗೆ ಗಾಂಧಿಯನ್ನು ತೆಗಳಿದರೆ ಗಾಂಧಿಯನ್ನು ಅರಿತುಕೊಂಡಂತಾಯಿತು ಎಂದುಕೊಳ್ಳುತ್ತಾರೆ.

ಗಾಂಧಿ ಜಯಂತಿಯ ದಿನಕ್ಕೆ ಗಾಂಧಿಯ ಚಿಂತನೆಯ ಹಿಂದಿರುವ ಸಮಗ್ರ ವಿವೇಕವನ್ನು ಕುರಿತು ಚಿಂತಿಸುವುದೇ ಒಂದು ಪುಣ್ಯದ ಕೆಲಸ. ಅದಕ್ಕೆ ಮನುಷ್ಯ ಜೀವಿತದ ಬಗ್ಗೆ, ನಮ್ಮ ಅನುಭವಗಳ ಬಗ್ಗೆ, ನಮ್ಮ ಅನುಭವಗಳ ಬಗ್ಗೆಯೇ ನಮಗಿರುವ ತಿಳಿವಳಿಕೆಯ ಬಗ್ಗೆ ಒಂದಷ್ಟು ಚಿಂತನೆ ನಡೆಸುವುದು ಅಗತ್ಯ. ಇದರಲ್ಲಿ ಒಂದು ಮುಖ್ಯ ಎಳೆ ಇತರರ ಜೊತೆಗೆ ನಮಗಿರುವ ಸಂಬಂಧ. ಇತರ ಮನುಷ್ಯರನ್ನು ನಾವು ಹೇಗೆ ನೋಡುತ್ತೇವೆ? ಇದು ಗಾಂಧಿ ಚಿಂತನೆಯಲ್ಲಿ ಇದ್ದ ಒಂದು ಮುಖ್ಯ ಕಾಳಜಿ.

ಸಾಮಾನ್ಯವಾಗಿ, ಆಧುನಿಕರಾದ ನಮಗೆ ಇತರರನ್ನು ಸಮಾನವಾಗಿ ಕಾಣಬೇಕು ಎನ್ನುವ ಮಾತು ಸರಿ ಎನ್ನಿಸುತ್ತದೆ. ಆದರೆ, ನಿತ್ಯಜೀವನದಲ್ಲಿ ಈ ಮಾತಿನ ಅರ್ಥ ಏನೆಂದು ತಿಳಿಯುವುದು ಕಷ್ಟವೇ. ಇತರರಿಗೂ ನಮ್ಮಂತೆಯೇ ಹಲವಾರು ಅಗತ್ಯಗಳು, ಆಸೆಗಳು ಇರುತ್ತವೆ. ಆದ್ದರಿಂದ, ಅವರು ತಮ್ಮ ಅಗತ್ಯಗಳು ಮತ್ತು ಆಸೆಗಳನ್ನು ಪೂರೈಸಿಕೊಳ್ಳುವುದಕ್ಕೆ ನಾವು ಅಡ್ಡಿಪಡಿಸಬಾರದು. ಇದನ್ನೇ ಕಾನೂನಿನ ಭಾಷೆಯಲ್ಲಿ ಹೇಳಿದರೆ, ಇತರರಿಗೂ ನಮ್ಮಂತೆಯೇ ಒಂದಷ್ಟು ಹಕ್ಕುಗಳಿವೆ ಎಂದಾಗುತ್ತದೆ. ಅಂದರೆ, ಖಾಸಗೀ ವ್ಯಕ್ತಿಗಳಾಗಿ ನಮಗೆ ನಮ್ಮ ಆಸೆಗಳನ್ನು ಪೂರೈಸಿಕೊಳ್ಳುವ ಜರೂರು. ಅದಕ್ಕೆ ಇತರರು ನಮಗೆ ಸಾಧನಗಳು. ಉದಾಹರಣೆಗೆ ಮಾರುಕಟ್ಟೆಯಲ್ಲಿ ಕೊಳ್ಳುವ ಒಬ್ಬನಿದ್ದಾನೆ. ಮಾರುವ ಒಬ್ಬನಿದ್ದಾನೆ. ಇವರಿಬ್ಬರ ನಡುವಿನ ವ್ಯವಹಾರ ಇಬ್ಬರಿಗೂ ಅನ್ಯಾಯವಾಗದ ರೀತಿಯಲ್ಲಿ ನಡೆಯಬೇಕು. ಅಂದಮೇಲೆ ಇಬ್ಬರ ಹಕ್ಕುಗಳೂ ಮತ್ತು ಬಾಧ್ಯತೆಗಳೂ ಸರಿಯಾಗಿ ಈಡೇರಬೇಕು. ಹಾಗೆಯೇ, ನನಗೆ ಆರೋಗ್ಯ ಬೇಕೆಂದರೆ ಒಬ್ಬ ವೈದ್ಯ ಅದಕ್ಕೆ ಸಾಧನ. ನನಗೆ ಸಂಗೀತದ ಸುಖ ಬೇಕೆಂದರೆ ಒಬ್ಬ ಸಂಗೀತಗಾರ ನನ್ನ ಈ ಸುಖಕ್ಕೆ ಸಾಧನ. ಹಾಗೆಯೇ ದೈಹಿಕ ಸುಖಕ್ಕೆ ಒಬ್ಬರು ಸಾಧನವಾದರೆ, ಮಾನಸಿಕ ಸುಖಕ್ಕೆ ಇನ್ನೊಬ್ಬರು ಸಾಧನ. ಹೀಗೆ ವ್ಯಕ್ತಿಗಳನ್ನು ನಾವು "ಬಳಸಿಕೊಳ್ಳುವಾಗ", ಅವರ ಹಕ್ಕುಗಳಿಗೆ ಅಡ್ಡಿಪಡಿಸದಿದ್ದರಾಯಿತು ಅಷ್ಟೆ. ಇದು ಆಧುನಿಕ ರಾಜಕೀಯ ಚಿಂತನೆಯ ಒಂದು ಮೂಲಸ್ತಂಭದಂತಹ ವಿಚಾರ.   

ಆದರೆ, ಮೇಲಿನ ಈ ಚಿತ್ರಣವನ್ನು ಓದಿದ ತಕ್ಷಣ ನಿಮಗೆ ಸ್ವಲ್ಪ ಕಸಿವಿಸಿಯಾಗಿರಲಿಕ್ಕೂ ಸಾಕು. ಇದರಲ್ಲಿ ಏನೋ ಸರಿಯಿಲ್ಲ. ಇದು ಸ್ವಲ್ಪ ವಿಕೃತವಾಗಿದೆ, ನಮ್ಮ ಅನುಭವ ಹೀಗಲ್ಲ ಎಂದು ನಿಮಗೆ ಅನ್ನಿಸಿರಬಹುದು. ನೀವು ಸಂಗೀತ ಕೇಳಿ ಸಂತೋಷಪಟ್ಟಾಗ ಸಂಗೀತಗಾರರನ್ನು "ಬಳಸಿಕೊಳ್ಳಲಿಲ್ಲ" ಅಲ್ಲವೇ. ಹಾಗೆಯೇ, ನಿಮ್ಮ ಹೆಂಡತಿಯನ್ನೋ, ಗಂಡನನ್ನೋ "ಬಳಸಿಕೊಂಡು" ಸುಖಪಡಲಿಲ್ಲವಷ್ಟೆ. ಅಂದಮೇಲೆ, ಮನುಷ್ಯರು ಇತರರನ್ನು ತಮ್ಮ ಸುಖಕ್ಕೆ ಕೇವಲ ಸಾಧನವಾಗಿ ನೋಡುತ್ತಾರೆ ಎನ್ನುವುದು ಸರಿಕಾಣುವುದಿಲ್ಲ. ಮಾರುಕಟ್ಟೆಯಲ್ಲಿ ಮನುಷ್ಯರ ನಡುವಿನ ವ್ಯವಹಾರ ಹೇಗಿರಬೇಕು ಎನ್ನುವ ಚಿತ್ರಣವನ್ನೇ ಮಿಕ್ಕ ಎಲ್ಲಾ ಮನುಷ್ಯ ವ್ಯವಹಾರಗಳಿಗೂ ಅನ್ವಯಿಸುವುದರಿಂದ ಉಂಟಾಗುವ ದೋಷವೇ ಈ ಚಿತ್ರಣದಲ್ಲಿರುವ ವಿಕೃತಿಗೆ ಕಾರಣ.

ಹಾಗಾದರೆ, ನಾವು ನಿಜಕ್ಕೂ ಇತರರನ್ನು ಹೇಗೆ ಕಾಣುತ್ತೇವೆ? ಸಾಮಾನ್ಯವಾಗಿ, ಸಂಗೀತದಲ್ಲಿ ಕೇಳುಗನ ಸುಖಕ್ಕೆ ಹಾಡುಗ ಸಾಧನವಲ್ಲ. ಹಾಗೆಯೇ ಹಾಡುಗನ ಸುಖಕ್ಕೆ ಕೇಳುಗನೂ ಸಾಧನವಲ್ಲ. ಇಬ್ಬರೂ ಜೊತೆಯಾಗಿ ಸುಖವನ್ನು ರೂಪಿಸುತ್ತಿದ್ದೇವೆ ಎಂದು ಹೇಳುವುದೇ ಹೆಚ್ಚು ಸಮಂಜಸ ಎನ್ನಿಸುತ್ತದೆ. ಇದನ್ನೇ ಸ್ವಲ್ಪ ವಿಸ್ತರಿಸಿ ಹೇಳಬೇಕೆಂದರೆ, ಹಾಡುವವ ಹೇಗೆ ಹಾಡಬೇಕೆಂದರೆ, ಕೇಳುವವನಿಗೆ ಸಂತೋಷವಾಗುವಂತೆ ಹಾಡಬೇಕು. ಕೇಳುವವ ಹೇಗೆ ಕೇಳಬೇಕೆಂದರೆ ಹಾಡುವವನಿಗೆ ಮತ್ತೂ ಚೆನ್ನಾಗಿ ಹಾಡಲು ಸಾಧ್ಯವಾಗುವಂತೆ ಕೇಳಬೇಕು. ಅಂದರೆ, ಕೇಳುವವನು ತನ್ನ ಸುಖಕ್ಕಾಗಿ ಹಾಡುವವನನ್ನು ಸಾಧನವಾಗಿ ಬಳಸಿಕೊಳ್ಳುತ್ತಿಲ್ಲ. ಬದಲಾಗಿ, ಹಾಡುವವನೇ ಕೇಳುವವನ ಸುಖಕ್ಕಾಗಿ ಸೇವೆ ಮಾಡುತ್ತಿದ್ದಾನೆ. ಮತ್ತು ಕೇಳುವವನು ಹಾಡುವವನ ಸುಖಕ್ಕಾಗಿ ಸೇವೆ ಮಾಡುತ್ತಿದ್ದಾನೆ. ಇದು ರೋಗಿ-ವೈದ್ಯ, ತಾಯಿ-ಮಗು, ರಾಜ-ಪ್ರಜೆ, ಸರಕಾರ-ನಾಗರಿಕ, ಗಂಡ-ಹೆಂಡತಿ ಇಂತಹ ಯಾವ ಕ್ಷೇತ್ರದಲ್ಲಾದರೂ ಅನ್ವಯಿಸಿ ಹೇಳಬಹುದಾದ ಮಾತು. ಒಳಿತನ್ನು ಕಟ್ಟುವುದು, ಸುಖವನ್ನು ಹೆಚ್ಚಿಸುವುದು ಎಂದರೆ ಇತರರನ್ನು ನಮ್ಮ ಸುಖಕ್ಕೆ ಸಾಧನ ಎಂದು ಕಾಣುವುದಲ್ಲ. ಬದಲಾಗಿ ಇತರರ ಸುಖಕ್ಕೆ ನಾವು ಸೇವ್ಯರು ಎಂದು ಕಾಣುವುದು ಎಂದಾಗುತ್ತದೆ. ಒಂದು ಕರ್ಮವನ್ನು ಸರಿಯಾಗಿ ಮಾಡುವುದು ಎಂದರೆ, ಅದು ಯಾವ ಕ್ಷೇತ್ರದಲ್ಲಿ ಯಾವ ಕರ್ಮವೇ ಆಗಿರಲಿ, ಹೀಗೆ ಸೇವೆ-ಸೇವಕ ಮನೋಭಾವವೇ ಪ್ರಸ್ತುತವಾದದ್ದೇ ಹೊರತೂ, ಸುಖ ಮತ್ತು ಅದರ ಸಾಧನ ಎನ್ನುವಂಥಾ ಮನೋಭಾವವಲ್ಲ ಎಂದು ತೋರುತ್ತದೆ. ಗಾಂಧಿ ಭಗವದ್ಗೀತೆಯನ್ನು ಓದಿ ಅದರಲ್ಲಿದ್ದ ಭಕ್ತಿ ಎನ್ನುವ ಪರಿಕಲ್ಪನೆಯನ್ನು ಅರ್ಥೈಸಿಕೊಂಡಿದ್ದು ಈ ರೀತಿ.

ಈ ವಿಚಾರವೇನೋ ಕೇಳಲು ಬಹಳ ಚೆನ್ನಾಗಿದೆ. ಆದರೆ, ನಮ್ಮ ನಿತ್ಯ ಜೀವನದಲ್ಲಿ ಹೀಗೆ ನಡೆಯುತ್ತದೆಯೇ? ನಾವು ಕಾಣುವುದೆಲ್ಲಾ ಇತರರನ್ನು ತಮ್ಮ ಸುಖಕ್ಕೆ ಸಾಧನವಾಗಿ ನೋಡುವ ಉದಾಹರಣೆಗಳನ್ನಷ್ಟೇ ಅಲ್ಲವೇ? ಒಬ್ಬ ರಾಜಕಾರಣಿ ತನ್ನ ಮತದಾರರನ್ನು ತನ್ನ ಅಧಿಕಾರಕ್ಕೆ ಸಾಧನ ಎನ್ನುವಂತೆ ನೋಡುವುದು, ಒಬ್ಬ ವಿದ್ಯಾರ್ಥಿ ತನ್ನ ಮೇಷ್ಟ್ರನ್ನು ಪರೀಕ್ಷೆ ಪಾಸುಮಾಡಲು ಇರುವ ಸಾಧನ ಎನ್ನುವಂತೆ ನೋಡುವುದು ಮತ್ತು ಗಿರಾಕಿಯನ್ನು ಒಬ್ಬ ವ್ಯಾಪಾರಿ ತನ್ನ ಲಾಭ ಹೆಚ್ಚಿಸಿಕೊಳ್ಳಲು ಇರುವ ಸಾಧನ ಎನ್ನುವಂತೆ ನೋಡುವುದು ಇವೆಲ್ಲ ಸರ್ವೇಸಾಮಾನ್ಯ ತಾನೆ? ಅಂದಮೇಲೆ, ಗಾಂಧಿಯಂಥವರ ಮಾತುಗಳಿಗೆ ಯಾವ ಬೆಲೆ? ಏನು ಪ್ರಯೋಜನ?

ಇಲ್ಲಿ ಒಂದು ಸಣ್ಣ ತರ್ಕಪ್ರಯೋಗದ ಅಗತ್ಯವಿದೆ. ಅದನ್ನು ಸುಳ್ಳುಗಾರನ ದ್ವಂದ್ವ ಅಥವಾ ಲಯರ್ಸ್ ಪ್ಯಾರಾಡಾಕ್ಸ್ ಎಂದು ಕರೆಯುತ್ತಾರೆ. ಯಾರಾದರೂ ಒಬ್ಬ ಸುಳ್ಳು ಹೇಳಿ ಗೆಲ್ಲಬೇಕೆಂದರೆ, ಮಿಕ್ಕವರು ಆ ಸುಳ್ಳುಗಾರನ ಮಾತುಗಳನ್ನು ಸತ್ಯವೆಂದು ನಂಬಬೇಕು. ಇಲ್ಲದಿದ್ದರೆ, ಸುಳ್ಳುಗಾರನ ಆಟ ನಡೆಯುವುದಿಲ್ಲ. ಎಲ್ಲರೂ ಸುಳ್ಳುಗಾರರೇ ಆದರೆ, ಆಗ ಯಾರ ಮಾತನ್ನೂ ಯಾರೂ ನಂಬುವುದಿಲ್ಲ. ಆಗ ಸುಳ್ಳುಗಾರನಿಗೆ ಸುಳ್ಳು ಹೇಳಿ ಗೆಲ್ಲುವ ಸಾಧ್ಯತೆಯೂ ಇರುವುದಿಲ್ಲ. ಅಂದಮೇಲೆ, ಕೆಲವರು ಸುಳ್ಳು ಹೇಳಬೇಕೆಂದರೆ, ಹಲವರು ಸತ್ಯವನ್ನು ಗೌರವಿಸುವ ಸಮಾಜದಲ್ಲಿ ಮಾತ್ರ ಸಾಧ್ಯ. ಇದನ್ನೇ ಸುಳ್ಳಿನ ಪರೋಪಜೀವಿತ ಎಂದೂ ಕರೆಯುವುದು. ಅಂದರೆ, ಸುಳ್ಳು ಎನ್ನುವುದು ಸತ್ಯದ ಮೇಲೆ ಪ್ಯಾರಾಸೈಟ್ ಆಗಿದೆ ಎಂದರ್ಥ.

ಈ ತರ್ಕವನ್ನೇ ನಮ್ಮ ವಿಚಾರಕ್ಕೂ ಅನ್ವಯಿಸಬಹುದು. ವೈದ್ಯನ ಸೇವೆಯ ಕಾರಣದಿಂದ ರೋಗಿ ಸುಖ ಪಡೆಯುವ ಸಾಧÀ್ಯತೆ ಇರುವುದರಿಂದಷ್ಟೇ ಅಲ್ಲವೇ ಒಬ್ಬ ಕೆಟ್ಟ ವೈದ್ಯ ತಾನು ಹಣ ಮಾಡಲು ತನ್ನ ರೋಗಿಯನ್ನು ಒಂದು ಸಾಧನ ಎನ್ನುವಂತೆ ನೋಡಲು ಸಾಧ್ಯ? ಅಂದಮೇಲೆ, ಇಲ್ಲಿ ಎರಡು ವಿರುದ್ಧ ಶಕ್ತಿಗಳು ಏಕಕಾಲಕ್ಕೆ ಕೆಲಸಮಾಡುತ್ತಿವೆ ಎಂದಾಯಿತು. ನಿಜಕ್ಕೂ ನಾವು ಇತರರನ್ನು ಅವರ ಸುಖಕ್ಕೆ ಸೇವ್ಯರನ್ನಾಗಿ ನೋಡಬೇಕು. ಅದರ ಬದಲು, ನಮ್ಮ ಸುಖಕ್ಕೆ ಇತರರನ್ನು ಸಾಧನವಾಗಿ ನೋಡುತ್ತಿರುತ್ತೇವೆ. ಜೊತೆಗೇ, ಇದರಲ್ಲಿ ಎರಡನೇ ಸಾಧ್ಯತೆ (ಅಂದರೆ, ಇತರರನ್ನು ನಮ್ಮ ಸುಖಕ್ಕೆ ಸಾಧನವಾಗಿ ನೋಡುವ ಸಾಧ್ಯತೆ) ಮೊದಲ ಸಾಧ್ಯತೆಯ ಮೇಲೆ (ಅಂದರೆ, ಇತರರನ್ನು ಅವರ ಸುಖಕ್ಕೆ ಸೇವ್ಯರನ್ನಾಗಿ ನೋಡುವ ಸಾಧ್ಯತೆ) ಪರಾವಲಂಬಿಯಾಗಿದೆ. ಸಾಮಾನ್ಯವಾಗಿ, ಇಂತಹ ಪರಾವಲಂಬಿ ಸಂಬಂಧ ತಾನೇ ಸ್ವತಂತ್ರವಾಗಿ ಬದುಕುವುದಿಲ್ಲ. ಅಂದಮೇಲೆ, ಮನುಷ್ಯರನ್ನು ನಿಜಕ್ಕೂ ಸುಖಿಗಳನ್ನಾಗಿ ಮಾಡಬೇಕು ಎಂದಾದಲ್ಲಿ ಇಂತಹ ಪರಾವಲಂಬನೆಯ ಸಂಬಂಧವನ್ನು ಅಳಿಸಿಹಾಕಬೇಕು. ಅಥವಾ, ಅದನ್ನೇ ಗಾಂಧಿಯ ಮಾತುಗಳಲ್ಲಿ ಹೇಳುವುದಾದರೆ, ಸುಖಕ್ಕೆ ಸಾಧನ ಎನ್ನುವ ಬದಲು ಸೇವೆಗೆ ಬೇಕಾದ ಭಕ್ತಿ ಎನ್ನುವಂತೆ ಸಾಮಾಜಿಕ ಸಂಬಂಧಗಳನ್ನು ಕಾಣಬೇಕು.
ಇದನ್ನು ವಾದಕ್ಕೆ ಸರಿ ಎಂದೇ ಒಪ್ಪಿಕೊಳ್ಳೋಣ. ಆದರೆ, ಇದನ್ನು ಆಗಮಾಡುವುದು ಹೇಗೆ? ಈ ಲೇಖನದಲ್ಲಿರುವಂಥ ತಾರ್ಕಿಕ ವಾದವಿವಾದಗಳ ಕಸರತ್ತುಗಳಿಂದಷ್ಟೇ ಇದು ಸಾಧ್ಯವಿಲ್ಲವಲ್ಲ? ಇಲ್ಲಿಯೇ ಗಾಂಧಿ ಚಿಂತನೆಯ ನಿಜವಾದ ಕಾಣ್ಕೆ ಇರುವುದು. ಅದು ಸಾಧ್ಯವಾಗುವುದು ನಮ್ಮ ನಮ್ಮ ಕ್ಷೇತ್ರದ ಕ್ರಿಯಾಕರ್ಮಗಳನ್ನು ಚಿಂತನಶೀಲವಾಗಿ ನಿರ್ವಹಿಸುವುದರಿಂದ. ಅಂದರೆ, ನಮ್ಮ ಕರ್ಮಗಳ (ವೈದ್ಯನ ಕರ್ಮ, ಶಿಕ್ಷಕನ ಕರ್ಮ, ರಾಜಕಾರಣಿಯ ಕರ್ಮ, ವಿಜ್ಞಾನಿಯ ಕರ್ಮ, ಗೃಹಿಣಿ-ಗೃಹಸ್ಥನ ಕರ್ಮ) ಜೊತೆಗೆ ಒಂದು ರೆಫ್ಲೆಕ್ಟೀವ್ ಎನ್ನಬಹುದಾದ, ಅಥವಾ ಶ್ರದ್ಧೆ ಎಂದು ಅನುವಾದ ಮಾಡಿಕೊಂಡರೆ, ಶ್ರದ್ಧಾವಂತಿಕೆಯ ಸಂಬಂಧ ಬೆಳೆಯಲು ಸಾಧ್ಯವಾದರೆ, ಇದು ಸಾಧ್ಯವಾಗುತ್ತದೆ.

ಒಬ್ಬ ವೈದ್ಯನಾಗುವುದು ಎಂದರೆ ಕೇವಲ ವೈದ್ಯವಿಜ್ಞಾನದ ಕೆಲವು ಕೈಚಳಕಗಳನ್ನು ಕಲಿತುಬಿಡುವುದು ಎಂದಲ್ಲ. ಅದರ ಜೊತೆಗೆ ಈ ಇಡೀ ಕ್ಷೇತ್ರಕ್ಕೂ ಮನುಷ್ಯರ ಮಿಕ್ಕೆಲ್ಲ ವ್ಯವಹಾರಗಳಿಗೂ ಇರುವ ಅಂತಃಸ್ಸಂಬಂಧವನ್ನು ಅರಿಯುವುದು. ಎಲ್ಲಾ ಬಿಡಿಬಿಡಿ ವಿಜ್ಞಾನಗಳೂ ಹೀಗೆ ಒಂದು ಇಡಿಯಾದ ಅನುಭವ ವಿಶ್ಲೇಷಣೆಗೆ ಇರುವ ಬೇರೆಬೇರೆ ದಾರಿಗಳು. ಅನುಭವಮಂಟಪದ ಶಿವಶರಣರಾದ ನೇಕಾರರು, ಕುಂಬಾರರು, ಕಮ್ಮಾರರು ಇಂತಹವರೆಲ್ಲ ತಮ್ಮ ತಮ್ಮ ಕರ್ಮಕ್ಷೇತ್ರದ ಹಾದಿಯ ಮೂಲಕವೇ ಅನುಭವಜಿಜ್ಞಾಸೆಯನ್ನು ಮಾಡಿದ ಹಾಗೆ. ಆದರೆ, ಆಧುನಿಕ ವಿಚಾರವಂತರಿಗೆ ಸಾಮಾನ್ಯವಾಗಿ ವಚನಕಾರರು ಎಲ್ಲಾ ಕುಲಕಸುಬುಗಳನ್ನೂ ಸಮಾನವಾಗಿ ನೋಡಿದರು ಎನ್ನುವಂಥ ತೀರಾ ಸವಕಳಿಯಾದ ವಿಚಾರ ಮುಖ್ಯವೆನಿಸುತ್ತದೆಯೇ ಹೊರತೂ, ಆ ಕಸುಬುಗಳಿಗೂ ಅನುಭವಜಿಜ್ಞಾಸೆಗೂ ಇರುವ ನಿಜವಾದ ಅಂತಃಸ್ಸಂಬಂಧ ಏನು ಎನ್ನುವ ಆಳದ ಪ್ರಶ್ನೆ ಮೂಡುವುದು ಅಪರೂಪವೇ. ಗಾಂಧಿಯ ಚರಕವೂ ಹೀಗೆ ದಾಸಿಮಯ್ಯನ ಮಗ್ಗದಂತೆ ಇತರರನ್ನು ಸೇವ್ಯರನ್ನಾಗಿ ಕಾಣುವ, ಆ ಮೂಲಕ ಕರ್ಮಯೋಗದ ನಿಜವಾದ ಅನುಭವ ಪಡೆಯುವದಕ್ಕಿರುವ ಮಾರ್ಗ. ಹಾಗೆಂದ ಮಾತ್ರಕ್ಕೇ ಚರಕವನ್ನು ನಮ್ಮ ಇದ್ದಬದ್ದ ಆರ್ಥಿಕ ಸಮಸ್ಯೆಗಳು-ಸಿದ್ಧಾಂತಗಳಿಗೆ ಒಂದು ಪರಿಹಾರದ ಹತಾರ ಎನ್ನುವಂತೆ ಬಳಸಲು ಬರುವುದಿಲ್ಲ. ಅನುಭವಜಿಜ್ಞಾಸೆಯ ಕುರಿತಾದ, ಕರ್ಮದ ಕುರಿತಾದ ಹಿನ್ನೆಲೆ ಇಲ್ಲದೇ ಸುಮ್ಮನೇ ಚರಕವನ್ನೇ ಎತ್ತಿ ಹಿಡಿಯುವುದರಿಂದ ಚರಕವೂ ನಮ್ಮ ಸುಖಕ್ಕೆ ಮತ್ತೊಂದು ಸಾಧನವೇ ಆಗುತ್ತದೆಯೇ ಹೊರತು ಇತರರನ್ನು ಸೇವ್ಯರನ್ನಾಗಿ ನೋಡುವ ಪರಿಪೂರ್ಣ ಜ್ಞಾನವೇನೂ ಬೆಳೆಯುವುದಿಲ್ಲ.

ಗಾಂಧಿ ಆಶ್ರಮಧರ್ಮದ ಬಗ್ಗೆ, ವಿಶೇಷವಾಗಿ ಸ್ತ್ರೀ-ಪುರುಷ ಸಂಬಂಧದ ಬಗ್ಗೆ ಹೇಳುವ ಎಷ್ಟೋ ಮಾತುಗಳು ನಮಗೆ ಇವತ್ತು ತೀರಾ ವಿಚಿತ್ರವಾಗಿ ಕಾಣುತ್ತದೆ. ಬ್ರಹ್ಮಚರ್ಯದ ಬಗ್ಗೆಯಂತೂ ಅವರ ಮಾತುಗಳು ಪ್ರಪಂಚಜ್ಞಾನ ಇಲ್ಲದ ಸಾಧುಸನ್ಯಾಸಿಗಳ ವ್ಯರ್ಥಾಲಾಪದ ರೀತಿ ಕಾಣುವ ಸಾಧ್ಯತೆಯೇ ಹೆಚ್ಚು. ಆಧುನಿಕ ಸಮಾಜವೈಜ್ಞಾನಿಕ ದೃಷ್ಟಿಕೋನದಲ್ಲಿ ಮದುವೆ ಎನ್ನುವ ಸಂಸ್ಥೆಯೇ ಶೋಷಣೆಯ ಮೇಲೆ ನಿಂತಿದೆ. ಗಂಡ-ಹೆಂಡತಿಯ ಮಧ್ಯೆ ಅನ್ಯೋನ್ಯ ಸಂಬಂಧ ಇದ್ದರೂ ಸಹ ಈ ವ್ಯವಸ್ಥಿತ ಶೋಷಣೆಯೇನೂ ನಿಲ್ಲುವುದಿಲ್ಲ. ಯಾಕೆಂದರೆ, ಮದುವೆ ಎಂದರೇ ಸರ್‍ಪ್ಲಸ್ ಮೌಲ್ಯ ಅಥವಾ ಹೆಚ್ಚುವರಿ ಮೌಲ್ಯವನ್ನು ಉತ್ಪಾದಿಸುವ ಸಂಸ್ಥೆ. ಹೆಂಗಸರ ಕೆಲಸ ಬಂಡವಾಳದ ಪುನರುತ್ಪಾದನೆಗೆ ಬೇಕಾದ ಹೊಸ ಶ್ರಮಿಕ ವರ್ಗವನ್ನೂ, ಮತ್ತು ಇರುವ ಶ್ರಮಿಕ ವರ್ಗಕ್ಕೆ ಹಲವಾರು ಶುಶ್ರೂಷೆಯ ಅಗತ್ಯಗಳನ್ನೂ ಪೂರೈಸುತ್ತಿರುತ್ತದೆ. ಮತ್ತು ಆ ಶ್ರಮಕ್ಕೆ ಯಾವ ಆರ್ಥಿಕ ಮೌಲ್ಯವೂ ಇಲ್ಲದ ಕಾರಣ ಅದು ಶ್ರಮಿಕರಿಗೆ ದೊರೆಯದ ಆದರೆ ಮಾಲಿಕರಿಗೆ ಸೇರುವ ಅಧಿಕ ಲಾಭಾಂಶವೇ ಆಗುತ್ತದೆ. ಆಧುನಿಕ ಸಮಾಜವಿಜ್ಞಾನಿಗಳ ಪ್ರಕಾರ ಕುಟುಂಬಗಳಲ್ಲಿ ನಡೆಯಬಹುದಾದ ದಿನನಿತ್ಯದ ಹಿಂಸೆ ಮತ್ತು ಕ್ರೌರ್ಯಗಳಿಗೆ ಕಾರಣ ಕುಟುಂಬ ವ್ಯವಸ್ಥೆಯಲ್ಲೇ ಇರುವ ಇಂತಹ ಹೆಚ್ಚುವರಿ ಲಾಭಾಂಶವನ್ನು ಹಿಂಡುವ ಶೋಷಕವಾದ ಉತ್ಪಾದಕ ಸಂಬಂಧ.

ಇಂತಹ ಆಧುನಿಕ ವಿಚಾರಗಳನ್ನು ವಿರೋಧಿಸುವವರು ಬಹಳ ಭಾವನಾತ್ಮಕವಾಗಿ ಮದುವೆ ಎನ್ನುವುದು ಪವಿತ್ರ ಸಂಬಂಧ, ಅದು ಒಂದು ವ್ಯಾಪಾರದ ಕರಾರು ಒಪ್ಪಂದ ಅಲ್ಲ, ಅದರಲ್ಲೂ ಭಾರತೀಯ ಸಂಸ್ಕøತಿಯಲ್ಲಂತೂ ಮದುವೆ ಎನ್ನುವುದಕ್ಕೆ ಇಂತಹ ಪ್ರಾಶಸ್ತ್ಯವಿದೆ, ಅಂತಹ ಪ್ರಾಶಸ್ತ್ಯವಿದೆ ಎಂದು ಅಲವತ್ತುಕೊಳ್ಳುತ್ತಾರೆ. ಆದರೆ, ಇಂತಹ ಭಾವನಾತ್ಮಕ ವಿಚಾರಗಳಿಂದ ಕುಟುಂಬಗಳಲ್ಲಿ ನಡೆಯುವ ಹಿಂಸೆ ಮತ್ತು ಕ್ರೌರ್ಯ ತಪ್ಪುವುದಿಲ್ಲ ಎಂದು ಆಧುನಿಕ ಚಿಂತಕರು ಪ್ರತಿವಾದ ಮಾಡುತ್ತಾರೆ. ಒಟ್ಟಿನಲ್ಲಿ ಈ ಎರಡೂ ಗುಂಪುಗಳು ಸ್ತ್ರೀ-ಪುರುಷ ಸಂಬಂಧವನ್ನು ಕುಟುಂಬ ಎನ್ನುವ ಮಸೂರದಿಂದ ನೋಡುತ್ತಿದ್ದಾರೆ ಎಂದಾಯಿತು. ಆದರೆ, ಗಾಂಧಿ ಚಿಂತನೆಯ ಜಾಡು ಹಿಡಿದು ಹೊರಟರೆ ಇದಕ್ಕೆ ಪರ್ಯಾಯವಾದ ಒಂದು ಸರಳ ವ್ಯಾಖ್ಯಾನವನ್ನು ನಾವು ರೂಪಿಸಬಹುದು. ಇದರರ್ಥ ಗಾಂಧಿಗೆ ಈ ವಿಚಾರಗಳನ್ನೆಲ್ಲಾ ಇಷ್ಟು ಸಾವಧಾನವಾಗಿ ಚಿಂತಿಸುವ ಖಯಾಲಿ ಇತ್ತು ಎಂದೇನೂ ಅಲ್ಲ. ಆದರೆ, ಈ ವಿಚಾರಗಳನ್ನು ಅವರ ಮಿಕ್ಕ ವಿಚಾರಗಳಿಗೆ ವಿರೋಧವಾಗದ ರೀತಿಯಲ್ಲಿ ಹೊಂದಿಸಬಹುದು ಎಂದಷ್ಟೆ.

ಕುಟುಂಬ ಎನ್ನುವುದು ಮನುಷ್ಯರ ನಡುವಿನ ಹಲವು ರೀತಿಯ ಸಂಬಂಧಗಳು, ವ್ಯವಹಾರಗಳಲ್ಲಿ ಒಂದು ನಿರ್ದಿಷ್ಟ ಸಂಬಂಧವಷ್ಟೆ. ಇಲ್ಲಿಯೂ ಬೇರೆಲ್ಲಾ ಸಂಬಂಧಗಳಲ್ಲಿ ಆದಂತೆ, ಅಂದರೆ, ವೈದ್ಯ-ರೋಗಿ, ರಾಜಕಾರಣಿ-ಮತದಾರ ಅಥವಾ ವ್ಯಾಪಾರಿ-ಗಿರಾಕಿಗಳ ನಡುವೆ ಆದಂತೆ ಇನ್ನೊಬ್ಬರು ತನ್ನ ಸುಖಕ್ಕೆ ಸಾಧನ ಎನ್ನುವ ಪರಾವಲಂಬನೆಯ ಸಂಬಂಧ ಬೆಳೆಯಬಹುದು. ಜೊತೆಗೇ, ಇಂತಹ ಸಂಬಂಧ ಯಾವಾಗಲೂ ಮತ್ತೊಬ್ಬರನ್ನು ಬಳಸಿಕೊಳ್ಳುವುದರಿಂದ ಅವರನ್ನು ನೇರವಾಗಿಯೋ ಪರೋಕ್ಷವಾಗಿಯೋ ಹಿಂಸಿಸುತ್ತಲೂ ಇರುತ್ತದೆ. ಅಂದಮೇಲೆ, ಕುಟುಂಬದಲ್ಲಿನ ಹಿಂಸೆ ಇತರ ಮನುಷ್ಯ ವ್ಯವಹಾರಗಳಲ್ಲಿರುವ ಹಿಂಸೆಗಿಂತ ಬೇರೆ ಜಾತಿಯ ಹಿಂಸೆಯಲ್ಲ. ಅದು ಮಿಕ್ಕ ವ್ಯವಹಾರಗಳಲ್ಲಿರುವ ಹಿಂಸೆಗಳಂತೆಯೇ ಒಂದು. ಆದರೆ, ಹಲವಾರು ಸಾಂದರ್ಭಿಕ ಕಾರಣಗಳಿಂದ ಕುಟುಂಬದ ಹಿಂಸೆ ಹೆಚ್ಚು ಸೂಕ್ಷ್ಮವಾಗಿಯೂ, ಹೆಚ್ಚು ಶೋಷಕವಾಗಿಯೂ ಇರಬಹುದಾದ ಸಾಧ್ಯತೆ ಇದೆ. ಹಾಗಾಗಿ ಗಾಂಧಿಗೆ ಕುಟುಂಬವನ್ನೂ ಕೂಡಾ ಸುಖಕ್ಕೆ ಸಾಧನ ಎನ್ನುವ ರೀತಿಯಲ್ಲಿ ನೋಡುವ ಬದಲು ಪರಸ್ಪರ ಸೇವ್ಯ-ಸೇವಕ ಸಂಬಂಧದ ರೂಪವಾಗಿ ನೋಡಬೇಕು ಎನ್ನಿಸಿದ್ದು. ಬ್ರಹ್ಮಚರ್ಯದ ಬಗ್ಗೆ ಗಾಂಧಿಗೆ ಒಲವು ಇದ್ದದ್ದು ಈ ಕಾರಣಕ್ಕೇ ಹೊರತೂ ಲೈಂಗಿಕತೆಯ ಬಗೆಗಿನ ಮಡಿವಂತಿಕೆಯ ಕಾರಣದಿಂದಲ್ಲ. ಅಷ್ಟಕ್ಕೂ ಇಂದಿನ ಲೈಂಗಿಕ ಸ್ವಾತಂತ್ರ್ಯದ ದಿನಗಳಲ್ಲಿ ಯಾರೂ ಹೇಳಿಕೊಳ್ಳಲು ಧೈರ್ಯ ತೋರಿಸದ ಎಷ್ಟೋ ಖಾಸಗೀ ವಿವರಗಳನ್ನು, ಇಂದಿನ ಓದುಗರೇ ಮುಜುಗರ ಪಟ್ಟುಕೊಳ್ಳುವ ರೀತಿಯಲ್ಲಿ ಗಾಂಧಿ ಬರೆದಿದ್ದಾರೆ. ಕುಟುಂಬವೂ ಹೀಗೆ ಮನುಷ್ಯ ವ್ಯವಹಾರದ ಮಿಕ್ಕ ಎಲ್ಲಾ ಕ್ಷೇತ್ರಗಳಂತೆಯೇ ಅನುಭವಜ್ಞಾನದ ಜಿಜ್ಞಾಸೆಯಲ್ಲಿ ಗಾಂಧಿಗೆ ಒಂದು ಪ್ರಯೋಗಶಾಲೆಯೇ.  

ಗಾಂಧಿ ತನ್ನ ಪರಿವಾರದ ಹೆಣ್ಣುಮಕ್ಕಳನ್ನೇ ತನ್ನ ಬ್ರಹ್ಮಚರ್ಯದ ಸಾಧನೆಯ ಪರೀಕ್ಷೆಗೆ ಬಳಸಿಕೊಂಡಿದ್ದು, ಅಸ್ಪøಷ್ಯತೆ, ಪ್ರಾಣಿಹಿಂಸೆಗಳನ್ನು ವಿರೋಧಿಸಿದರೂ ಕುಲಾಚಾರಗಳು, ಸಂಪ್ರದಾಯಗಳನ್ನು ಮಾನ್ಯಮಾಡಿದ್ದು ಇವೆಲ್ಲವನ್ನೂ ಬಿಡಿಬಿಡಿಯಾಗಿ ನೋಡಿದರೆ ಗಾಂಧಿ ವಿರೋಧಾಭಾಸಗಳಲ್ಲೇ ಮುಳುಗಿದ್ದ ಚಿಂತಕ ಎಂದು ಕಾಣಿಸುತ್ತದೆ. ಹೆಚ್ಚಿನ ಸಮಕಾಲೀನ ಚಿಂತಕರಿಗೆ ಗಾಂಧಿ ಹಾಗೆ ಕಾಣಿಸಿರುವುದೂ ಹೌದು. ಆದರೆ, ಈ ಎಲ್ಲಾ ಸಂಪ್ರದಾಯಗಳೂ, ಕುಲಾಚಾರಗಳೂ ಇಲ್ಲಿ ಚಿತ್ರಿಸಿರುವ ಸೇವೆಯ ಮಾದರಿಯ ಸಾಮಾಜಿಕ ಒಳಿತನ್ನು ರೂಪಿಸಿದ ಸಾಧನಗಳು ಎನ್ನುವ ಕಾರಣಕ್ಕೆ, ಮತ್ತು ಲಿಬರಲ್ ರಾಜಕೀಯ ಚಿಂತನೆಯಲ್ಲಿ "ಇತರರು ನಮ್ಮ ಸುಖಕ್ಕೆ ಇರುವ ಸಾಧನಗಳು" ಎನ್ನುವ ವಿಕೃತವಾದ ಚಿಂತನೆಗೆ ಪರ್ಯಾಯವನ್ನು ರೂಪಿಸುವುದಕ್ಕೆ ಗಾಂಧಿಗೆ ಇದ್ದ ಸಾಂಸ್ಕøತಿಕ ಸಂಪನ್ಮೂಲಗಳು ಎನ್ನುವುದನ್ನು ಗಮನಿಸಿದರೆ ಗಾಂಧಿ ಚಿಂತನೆಯ ಆಳ ಮತ್ತು ಹರವು ಗೋಚರಿಸುತ್ತದೆ.

ಗಾಂಧೀ ಸ್ಮರಣೆ ಎಂದರೆ ಹೀಗೆ ನಿಧಾನವಾಗಿ, ಹದವಾಗಿ, ತುಂಡಾಗದಂತೆ ಹತ್ತಿಯ ನೂಲು ತೆಗೆದಂತೆ. ಪಾನಕಪನಿವಾರ ಕೋಸಂಬರಿಗಳ ಆಚೆಗೆ, ವೇದೋಪನಿಷದಗಳ ಭೂತಗನ್ನಡಿಯೊಳಗೆ ಪಡಿಮೂಡುವ ಆಕೃತಿಯನ್ನು ಏಕಚಿತ್ತದಿಂದ ಧ್ಯಾನಿಸಿದಂತೆ. ಹಿಂದಣದ ಹಿರಿಯರ ನಿಗೂಢವನ್ನೂ ಜೊತೆಗೇ ಇಂದಿನ ಸಾಧ್ಯತೆಗಳು, ಸಂದೇಹಗಳನ್ನೂ ಹೊತ್ತುಕೊಂಡು ಆಸಿಧಾರಾವ್ರತಕ್ಕೆ ನಿಂತಂತೆ.

Comments

Popular posts from this blog

ಸ್ಟ್ರಕ್ಚರಲಿಸಂ (ರಚನಾವಾದ/ರಾಚನಿಕವಾದ)

ಮಾರ್ಕ್ಸ್‌‌‌ ವಾದ

ಸುಖ-ಸಂತೋಷಕ್ಕೆ ಬೇಕಾಗುವುದೇನು? ಸಾಕಾಗುವುದೆಷ್ಟು?