ಪರಂಪರೆ



ಪರಂಪರೆಯ ಅರ್ಥವನ್ನು ತಿಳಿದುಕೊಳ್ಳಲು ಸಾಮಾನ್ಯವಾಗಿ ಅದಕ್ಕೆ ಹೋಲಿಸುವ ಕೆಲವು ಪದಗಳನ್ನು ತಾಳೆಮಾಡಿ ನೋಡಬಹುದು. ಒಂದು, ‘ಇತಿಹಾಸ’ (ಅಂದರೆ, ಯಾವುದು ಇತಿಹಾಸವಲ್ಲವೋ ಆದರೆ ಯಾವುದು ನಮ್ಮ ಗತಕಾಲದ ಭಾಗವೋ ಅದು ಪರಂಪರೆ), ಎರಡು, ‘ಆಧುನಿಕತೆ’ (ಯಾವುದು ಆಧುನಿಕವಲ್ಲವೋ ಆದರೂ ನಮ್ಮ ಸಮಕಾಲೀನ ಪ್ರಪಂಚದ ಭಾಗವೋ ಅದು ಪರಂಪರೆ) ಹಾಗೂ ಮೂರು ಶಾಸ್ತ್ರ’ (ಯಾವುದು ಶಾಸ್ತ್ರಜ್ಞಾನದ ತಾರ್ಕಿಕ ಬೆಳವಣಿಗೆಯ ಭಾಗವಾಗಿಲ್ಲವೋ ಆದರೂ ನಮ್ಮ ಅನುಭವ ಜ್ಞಾನದ ಭಾಗವಾಗಿದೆಯೋ ಅದು ಪರಂಪರೆ).

ಮನುಷ್ಯರ ವರ್ತನೆ, ಆಚಾರಗಳು ಮತ್ತು ಚಿಂತನೆಯ ರೀತಿಯನ್ನು ರೂಪಿಸುವ ಹಲವು ಪ್ರಭಾವಗಳಲ್ಲಿ ಪರಂಪರೆಯೂ ಒಂದು. (ಇದರ ಜೊತೆಗೆ ಪರಿಸರ, ಸಂಪನ್ಮೂಲಗಳ ಲಭ್ಯತೆ ಮತ್ತು ಶಾರೀರಕ ರಚನೆ ಮುಂತಾದುವನ್ನೂ ಸೇರಿಸಬಹುದು). ಪರಂಪರೆಯನ್ನು ಎರಡು ರೀತಿಗಳಲ್ಲಿ ನೋಡಬಹುದು: ಒಂದು, ಮನುಷ್ಯರ ವರ್ತನೆಯ ಹಿಂದಿರುವ ಸೂತ್ರದಂತೆ ಮತ್ತು ಎರಡು, ಒಬ್ಬ ವ್ಯಕ್ತಿ ತನ್ನ ಬೆಳವಣಿಗೆಯ ಭಾಗವಾಗಿ ಕಲಿಯುವ ಜ್ಞಾನದಂತೆ. ಅಂದರೆ, ಇಲ್ಲಿ ಪರಂಪರೆಯನ್ನು ವಿವರಿಸಬೇಕಾದ ವಸ್ತು ಎಂದು, ಅಥವಾ, ಕಲಿತುಕೊಳ್ಳಬೇಕಾದ ಜ್ಞಾನ ಎಂದು ಈ ಎರಡೂ ರೀತಿಗಳಲ್ಲಿ ನೋಡಬಹುದು. ಆಧುನಿಕ ಚಿಂತನೆಯಲ್ಲಿ ಪರಂಪರೆಯನ್ನು ಹೆಚ್ಚಾಗಿ ಮೊದಲನೇ ಅರ್ಥದಲ್ಲಿ ನೋಡಲಾಗಿದೆ. ಅಂದರೆ, ಅದನ್ನು ವಿವರಿಸಬೇಕಾದ ವಸ್ತುವಿನಂತೆ ನೋಡಲಾಗಿದೆ. ಆದರೆ, ಹಲವಾರು ತತ್ವಶಾಸ್ತ್ರಜ್ಞರ ಪ್ರಕಾರ ಇದು ಪರಂಪರೆಯನ್ನು ಜಡವಾಗಿ ನೋಡುವ ಕ್ರಮ. ಅನುಭವ ಸಾಧ್ಯವಾಗುವುದೇ ಪ್ರಪಂಚವನ್ನು ನೋಡುವ ಯಾವುದೋ ಒಂದು ಕ್ರಮದಿಂದ. ನಮ್ಮ ನಡವಳಿಕೆಗಳು, ಚಾರಿತ್ರ್ಯ ರೂಪುಗೊಳ್ಳುವುದೇ ಯಾವುದೋ ಒಂದು (ಅಥವಾ ಹಲವು) ಆಚಾರಗಳಿಂದ. ಹೀಗಿರುವಾಗ, ಪರಂಪರೆಯನ್ನು ಇಡಿಯಾಗಿ, ಹೊರಗಿನಿಂದ ನೋಡುವುದು ಅಸಾಧ್ಯವೆಂದೇ ಇಲ್ಲಿನ ವಾದ. ಪರಂಪರೆಯೊಂದಿಗೆ ಇರಬಹುದಾದ ಸರಿಯಾದ ಸಂಬಂಧವೆಂದರೆ, ಅದನ್ನು ಕಲಿಯಬೇಕಾದ ಆಚಾರಗಳು, ಕೈಕರಣಗಳು ಎಂಬಂತೆ ನೋಡುವುದು. ಈ ರೀತಿಯ ಚಿಂತಕರ ಪ್ರಕಾರ ಏನನ್ನಾದರೂ ಕಲಿಯಬೇಕಾದ್ದು ಎನ್ನುವ ದೃಷ್ಟಿಯಿಂದ ನೋಡುವುದರಲ್ಲೇ ಅದನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವುದೂ ಅಡಕವಾಗಿರುತ್ತದೆ. ಎಲ್ಲ ಪರಂಪರೆಗಳ ಹೊರಗಿರುವುದು ಎಂದರೆ, ಚಿಂತನೆಯಿಂದಲೇ ಹೊರಗಿರುವುದು ಎಂಬುದು ಇವರ ವಾದ.

ಆದರೆ, ಇದಕ್ಕೆ ಪ್ರತಿಯಾಗಿ, ಆಧುನಿಕತೆಯನ್ನು ಅಭ್ಯಸಿಸುವ ಚಿಂತಕರ ಪ್ರಕಾರ, ಸಮಕಾಲೀನ ಪ್ರಪಂಚದಲ್ಲಿ ಪರಂಪರೆಗಳ ಪ್ರಭಾವ ಗೌಣವೇ. ವಿಶೇಷವಾಗಿ, ಯುರೋಪಿನ ಎನ್‍ಲೈಟನ್‍ಮೆಂಟ್ ಯುಗದ ನಂತರ, ಪ್ರಾಕೃತಿಕ ವಿಜ್ಞಾನ ಮತ್ತು ಸೆಕ್ಯುಲರಿಸಂನ ಪ್ರಭಾವದಿಂದಾಗಿ, ಮನುಷ್ಯರ ವರ್ತನೆಗಳನ್ನು ಪರಂಪರೆಯ ಮೂಲಕ ಅರಿಯುವ ಅಥವಾ ಆ ವರ್ತನೆಗಳಿಗೆ ಪರಂಪರೆಯ ಮೂಲಕ ಸಮರ್ಥನೆ ಕೊಡುವ ಪರಿಪಾಠ ಟೀಕೆಗೆ ಒಳಗಾಯಿತು. ಇನ್ನು ಮೇಲೆ ಮನುಷ್ಯರ ಕ್ರಿಯೆಗಳಿಗೆ ವೈಜ್ಞಾನಿಕವಾದ, ಅಂದರೆ, ಯಾವುದೋ ಒಂದು ನಿರ್ದಿಷ್ಟವಾದ ಚಿಂತನೆಯಲ್ಲಿ ಒಪ್ಪಿತವಾದ ಮೂಲಧಾತುಗಳಿಂದ (ಫೌಂಡೇಶನಲ್ ಎನ್ನಬಹುದಾದ ಅಂಶಗಳಿಂದ) ಹೊರಡುವ ತರ್ಕದಿಂದ ಮಾತ್ರವೇ ವಿವರಣೆ ನೀಡಲು ಸಾಧ್ಯ ಎಂದು ತಿಳಿಯಲಾಯಿತು. ಇಂತಹ ವಿವರಣೆಗೆ ವ್ಯತಿರಿಕ್ತವಾದ ನಡವಳಿಕೆಗಳು ಒಂದೋ ಅಜ್ಞಾನದ, ಕಂದಾಚಾರದ ಪ್ರತೀಕ, ಇಲ್ಲವೇ, ಹಿಪಾಕ್ರಸಿಯ ಪ್ರತೀಕ ಎಂದೇ ತಿಳಿಯಲಾಯಿತು.

ಇಲ್ಲಿ ಒಂದು ವಿಚಾರವನ್ನು ಗಮನಿಸಬೇಕು: ಯುರೋಪಿನಲ್ಲಿ ಪರಂಪರೆಯ ನೇರ ಮತ್ತು ಮುಖ್ಯ ಪ್ರತಿನಿಧಿ ಎಂದರೆ ಕ್ರಿಶ್ಚಿಯಾನಿಟಿಯೇ. ಹೇಗೆ ಪ್ರಾಚೀನ ರೋಮನ್ ಕ್ರಿಶ್ಚಿಯಾನಿಟಿ ಇತರ ಪರಂಪರೆಗಳನ್ನು ತನ್ನ ಚಿಂತನೆಯ ಫೌಂಡೇಶನಲ್ ಅಂಶಗಳಿಂದ ಹೊರಟ ತರ್ಕದ ಪ್ರಕಾರ ದೋಷಪೂರ್ಣ ಎಂದು ವಾದಿಸಿತೋ, ಅಂತೆಯೇ ಪ್ರೊಟೆಸ್ಟಂಟ್ ವಾದ ಕೂಡ ರೋಮನ್ ಕ್ರಿಶ್ಚಿಯಾನಿಟಿಯನ್ನು ದೋಷಪೂರ್ಣ ಎಂದು ವಾದಿಸಿತು. ಇದೇ ಕ್ರಮದಲ್ಲಿ, ಮುಂದೆ ಬಂದ ಸೆಕ್ಯುಲರ್ ಚಿಂತನೆಗಳು ಇಡಿಯಾಗಿ ರಿಲಿಜನ್‍ಗಳನ್ನೂ (ಅದರ ಜೊತೆಗೆ ಸಾರಾಸಗಟಾಗಿ ಪರಂಪರೆಗಳನ್ನೂ) ದೋಷಪೂರ್ಣ ಎಂದು ವಾದಿಸಿತು. ಅಂದಮೇಲೆ, ಪರಂಪರೆಗಳನ್ನು ವಿವರಿಸಬೇಕಾದ ವಸ್ತು ಎಂದು ತಿಳಿಯುವ ಆಧುನಿಕತೆಯ ಕ್ರಮಕ್ಕೂ, ಅನ್ಯ ಪರಂಪರೆಗಳು ದೋಷಪೂರ್ಣ ಎಂದು ವಾದಿಸುವ ಕ್ರಿಶ್ಚಿಯಾನಿಟಿಯ ಕ್ರಮಕ್ಕೂ ಒಂದು ನಂಟಿರುವಂತೆ ತೋರುತ್ತದೆ. ಇಲ್ಲೆಲ್ಲಾ ಇರುವ ಸಮಾನ ಅಂಶವೆಂದರೆ, ಪರಂಪರೆಗಳು ನಿರ್ದಿಷ್ಟ ನಂಬಿಕೆಗಳ ವಾಹಕಗಳು ಎನ್ನುವ ತಿಳುವಳಿಕೆ. ಆದರೆ, ಪರಂಪರೆಗಳು ಪ್ರಪಂಚದ ಬಗ್ಗೆ ಯಾವುದೇ ನಿರ್ದಿಷ್ಟ ನಂಬಿಕೆಯನ್ನು ಬೆಳೆಸುವ ಬದಲು ಹೆಚ್ಚಾಗಿ ಲೋಕವ್ಯವಹಾರಕ್ಕೆ ಬೇಕಾದ ಆಚಾರಗಳನ್ನೋ ಶಾಸ್ತ್ರಜ್ಞಾನಕ್ಕೆ ಬೇಕಾದ ಸಂಸ್ಕಾರಗಳನ್ನೋ ದಾಟಿಸುವ ಸಾಧನವಾಗಿರುತ್ತವೆ.

ಸಾಮಾನ್ಯವಾಗಿ ಪರಂಪರೆಯನ್ನು ಪರೀಕ್ಷಿಸುವಾಗ ನಾವು ಕೇಳುವ ಪ್ರಶ್ನೆಯೆಂದರೆ, ಅದನ್ನು ಆಚರಿಸುತ್ತಿರುವವರು ಯಾವ ನಂಬಿಕೆಗಳ ಕಾರಣದಿಂದ ಹಾಗೆ ಆಚರಿಸುತ್ತಿದ್ದಾರೆಂದು. ಉದಾಹರಣೆಗೆ ಯಾವುದೋ ಹೋಮವನ್ನೋ ಯಜ್ಞವನ್ನೋ ಮಾಡುತ್ತಿದ್ದರೆ, ಅಥವಾ ಯಾವುದಾದರು ಪ್ರಾಣಿಯನ್ನು ಬಲಿ ಕೊಡುತ್ತಿದ್ದರೆ, ಅದರ ಹಿಂದಿರುವ ನಂಬಿಕೆಗಳೇನು ಎನ್ನುವುದು ಸಾಮಾನ್ಯವಾಗಿ ನಾವು ಕೇಳುವ ಪ್ರಶ್ನೆ. ಫ್ರಿಟ್ಸ್ ಸ್ಟಾಲ್ ತನ್ನ “The Meaninglessness of Ritual” (1979) ಲೇಖನದಲ್ಲಿ ತೋರಿಸಿದಂತೆ, ಇದು ಆಚರಣೆಗಳ ಬಗ್ಗೆ ಸರಿಯಾದ ಪ್ರಶ್ನೆಯೇ ಅಲ್ಲ. ಯಾಕೆಂದರೆ, ಆಚರಣೆಗಳು ನಿಯಮಗಳಿಂದ ಕೂಡಿದ ಕ್ರಿಯೆಗಳೇ ವಿನಾ ಅರ್ಥದಿಂದ ಕೂಡಿದ ವಿಚಾರಗಳಲ್ಲ. ಅಂದಮೇಲೆ, ಪರಂಪರೆಗಳನ್ನು ಅಭ್ಯಸಿಸುವುದೆಂದರೆ ಅದರಲ್ಲಿರುವ ನಂಬಿಕೆಗಳನ್ನು ತಿಳಿದುಕೊಂಡಂತಲ್ಲ.

ಆಧುನಿಕತೆಯ ಚಿಂತಕರ ಪ್ರಕಾರ ನಿರ್ದಿಷ್ಟ ಸಾಮಾಜಿಕ ಸ್ಥಿತಿಗತಿಗಳಿಂದ ಪರಂಪರೆಗಳು ಹುಟ್ಟುತ್ತವೆ ಮತ್ತು ಅವು ಆ ಸ್ಥಿತಿಯಲ್ಲಿ ಯಾವುದೋ ಒಂದು ವರ್ಗ ಅಥವಾ ಗುಂಪಿನ ವಿಚಾರಗಳನ್ನು ಪ್ರತಿಷ್ಠಾಪಿಸುವ ಕೆಲಸಕ್ಕಾಗಿ ಬಳಕೆಗೆ ಬರುತ್ತವೆ. ಪರಂಪರೆಯ ಬಗ್ಗೆ ಆಧುನಿಕ ಚಿಂತಕರ ಒಂದು ಮುಖ್ಯ ವಾದವನ್ನು ಗಮನಿಸಬೇಕು: ಹೆಚ್ಚಾಗಿ ನಾವು ಪ್ರಾಚೀನ ಪರಂಪರೆ ಎಂದು ಕರೆಯುವ ಆಚಾರಗಳು ನಾವು ತಿಳಿದುಕೊಂಡಷ್ಟೇನೂ ಪ್ರಾಚೀನವಾಗಿರುವುದಿಲ್ಲ. ಉದಾಹರಣೆಗೆ, ಭಾರತೀಯ ಶಾಸ್ತ್ರೀಯ ಸಂಗೀತ ಎಂದು ನಾವು ಏನನ್ನು ಗುರುತಿಸುತ್ತೇವೆಯೋ ಆ ಪರಂಪರೆಯನ್ನು ಕುರಿತು ಹೇಳುವಾಗ ಅದು ಸಾಮವೇದದ ಕಾಲದಿಂದ ಬಂದಿರುವ ಅವಿಚ್ಛಿನ್ನವಾದ ಪರಂಪರೆಯೆಂದು ಹೇಳುವುದನ್ನು ಕಾಣುತ್ತೇವೆ. ಹಾಗೆಯೇ, ಸಾವಿರಾರು ವರ್ಷ ಹಳೆಯ ಸಂಗೀತ ಸಂಬಂಧೀ ಶಾಸ್ತ್ರಗ್ರಂಥಗಳಲ್ಲಿ ಹೇಳಿರುವ ವಿಚಾರಗಳನ್ನು ಇವತ್ತಿನ ಶಾಸ್ತ್ರೀಯ ಸಂಗೀತದ ಕ್ರಮಗಳೊಂದಿಗೆ ಸಮೀಕರಿಸುವ ಪರಿಪಾಠವನ್ನೂ ನೋಡುತ್ತೇವೆ. ಆದರೆ, ಭಾರತೀಯ ಸಂಗೀತದ ಸಾಮಾಜಿಕ ಇತಿಹಾಸದ ಬಗ್ಗೆ ಅಧ್ಯಯನ ನಡೆಸಿರುವ ಹಲವಾರು ಸಂಶೋಧಕರ ಪ್ರಕಾರ, ಈ ಪರಂಪರೆ ಇತ್ತೀಚಿನದ್ದು. ಬಹಳವೆಂದರೆ, ಇನ್ನೂರು ಅಥವಾ ಮುನ್ನೂರು ವರ್ಷಗಳ ಇತಿಹಾಸವಿರುವಂಥದ್ದು. ಭಾರತದಲ್ಲಿ ಈ ಮೊದಲು ಸಂಗೀತವೇ ಇರಲಿಲ್ಲವೆಂದಲ್ಲ. ಆದರೆ, ನಾವು ಶಾಸ್ತ್ರೀಯವೆಂದು ಗುರುತಿಸುವ ರೀತಿಯ ಸಂಗೀತವಿರಲಿಲ್ಲ. ಹೊಸದಾಗಿ ಹುಟ್ಟುತ್ತಿದ್ದ ಮಧ್ಯಮ ವರ್ಗ ಮತ್ತು ನಗರಕೇಂದ್ರಿತ ಸಮುದಾಯಗಳಿಗೆ ಬೇಕಾದ ಒಂದು ಸಾಂಸ್ಕೃತಿಕ ಬಂಡವಾಳದ ರೀತಿಯಲ್ಲಿ ಶಾಸ್ತ್ರೀಯ ಸಂಗೀತ ಉಪಯೋಗಕ್ಕೆ ಬಂತು. ಇದು ಶಾಸ್ತ್ರೀಯ ಎನ್ನುವಂತಹ ಲಕ್ಷಣಗಳನ್ನು ಪಡೆದುಕೊಂಡದ್ದಂತೂ ಹತ್ತೊಂಬತ್ತನೇ ಶತಮಾನದ ನಂತರವಷ್ಟೇ. ಇಂತಹ ಸಾಮಾಜಿಕ ಸಂಗತಿಗಳನ್ನು ಜಾಗತಿಕ ನೆಲೆಯಲ್ಲಿ ಮುಖ್ಯವಾಗಿ ಗುರುತಿಸಿದ್ದು ಟೆರೆನ್ಸ್ ರೇಂಜರ್ ಮತ್ತು ಎರಿಕ್ ಹಾಬ್ಸ್‌ಬಾಮ್‍ರವರ ಕೃತಿ The Invention of Tradition (1983). ವಿಶೇಷವಾಗಿ ರಾಷ್ಟ್ರ ಮತ್ತು ರಾಷ್ಟ್ರೀಯತೆಗೆ ಸಂಬಂಧಪಟ್ಟಂತೆ, ಈ ಕೃತಿ ಒಂದು ಮುಖ್ಯ ವಿಚಾರವನ್ನು ತೋರಿಸಿತು. ರಾಷ್ಟ್ರೀಯತೆಯನ್ನು ಸಮರ್ಥಿಸುವವರು ಸಾಮಾನ್ಯವಾಗಿ ಒಂದು ದೇಶವೆನ್ನುವುದು ಸ್ವಾಭಾವಿಕವಾದ ಜನಸಮುದಾಯ ಎಂದೂ ಅದು ಅನಾದಿ ಕಾಲದಿಂದಲೂ ಹೀಗೆ ಒಂದೇ ಜನಪದವಾಗಿ ಬೆಳೆದುಬಂದಿದೆ ಎಂದೂ ಹೇಳುತ್ತಾರೆ. ಆದರೆ, ರಾಷ್ಟ್ರ ಎನ್ನುವುದು ನಿಜಕ್ಕೂ ತೀರಾ ಇತ್ತೀಚಿನ, ಅಂದರೆ ೧೭-೧೮ನೇ ಶತಮಾನದ ಸುಮಾರಿನ ಬೆಳವಣಿಗೆ ಎಂದೂ, ಪ್ರಾಚೀನ ಎಂದುಕೊಳ್ಳುವ ರಾಷ್ಟ್ರೀಯ ಸಂಸ್ಕೃತಿ, ರೀತಿ ರಿವಾಜುಗಳೆಲ್ಲ  ಹೊಸದಾಗಿ ಹುಟ್ಟಿದ್ದೆಂದೂ ತೋರಿಸಿತು. ಈ ಕೃತಿಯ  ಪ್ರಭಾವದಿಂದಾಗಿ ಸಮಾಜಶಾಸ್ತ್ರೀಯ ಸಂಶೋಧನೆಯಲ್ಲಿ ಪರಂಪರೆಗಳ ಕಪೋಲಕಲ್ಪಿತ ಪ್ರಾಚೀನತೆಯನ್ನು ಬಯಲಿಗೆಳೆಯುವ ಅನೇಕ ಪ್ರಯತ್ನಗಳು ನಡೆದವು. ಇಲ್ಲೆಲ್ಲಾ ಮುಖ್ಯವಾಗಿದ್ದ ಕಾರ್ಯಸೂಚಿಯೆಂದರೆ ಪರಂಪರೆಗಳು ಎನ್ನುವುದು ನಿಜಕ್ಕೂ ಕೆಲವು ವರ್ಗಗಳ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ರೂಪಿಸಿದ ವಿಸ್ತೃತವಾದ ವ್ಯವಸ್ಥೆಗಳು ಎಂದು ತೋರಿಸುವುದು.

ಇದಕ್ಕೆ ವ್ಯತಿರಿಕ್ತವಾಗಿ, ಪರಂಪರೆಯನ್ನು ಕಲಿಕೆಯನ್ನಾಗಿ, ಜ್ಞಾನದ ರೂಪವನ್ನಾಗಿ ನೋಡುವ ಚಿಂತಕರ ಪ್ರಕಾರ ಪರಂಪರೆ ಹುಟ್ಟುವುದು ಹಲವಾರು ವ್ಯಕ್ತಿಗಳ ಮತ್ತು ತಲೆಮಾರುಗಳ ಆಚಾರ-ವಿಚಾರದ ಪರೋಕ್ಷವಾದ, ಅಪ್ರಜ್ಞಾಪೂರ್ವಕವಾದ ಬಳಕೆಯ ಫಲವಾಗಿ. ಹಾಗಾಗಿ ಪರಂಪರೆಗಳ ಹುಟ್ಟು ಅದೃಷ್ಟವಾದದ್ದು (ಅಂದರೆ, ದೃಷ್ಟ -ಕಣ್ಣಿಗೆ ಕಾಣುವ- ಕಾರಣಗಳಿಗೆ ಮಿಗಿಲಾದದ್ದು). ಆದರೆ, ಒಮ್ಮೆ ಹುಟ್ಟಿದ ಮೇಲೆ ಅದನ್ನು ಮುಂದುವರೆಸಿಕೊಂಡು ಹೋಗುವ ಜವಾಬುದಾರಿಯನ್ನು ಸಮುದಾಯಗಳು ರೂಪಿಸಿಕೊಳ್ಳುತ್ತವೆ. ಹಾಗಾಗಿ, ಮೇಲೆ ನೋಡಿದಂತೆ, ಪರಂಪರೆಯನ್ನು ವಿವರಿಸಬೇಕಾದ ಒಂದು ವಸ್ತುವಿನಂತೆ ನೋಡುವುದು ಸಮಂಜಸವಲ್ಲ. ಈ ನಿರ್ದಿಷ್ಟ ಪರಂಪರೆ ಯಾಕೆ ಹುಟ್ಟಿತು? ಇದರ ಹುಟ್ಟಿನ ಹಿಂದಿರುವ ರಾಜಕೀಯ ಏನು? ಯಾವ ಜನವರ್ಗಗಳ ಯಾವ ಹಿತಾಸಕ್ತಿಗಳು ಈ ಪರಂಪರೆಯಿಂದ ಈಡೇರುತ್ತಿವೆ? ಈ ಪರಂಪರೆಗಳು ವ್ಯವಸ್ಥಿತವಾಗಿ ಮುಚ್ಚಿಡುತ್ತಿರುವ ಸತ್ಯ ಏನು? ಇಂತಹ ಪ್ರಶ್ನೆಗಳು ನಿರ್ದಿಷ್ಟ ಸಂದರ್ಭಗಳಲ್ಲಿ ಎಷ್ಟೇ ಸಮಂಜಸವಾಗಿದ್ದರೂ, ಪರಂಪರೆಯನ್ನು ಅರಿತುಕೊಳ್ಳುವ ದೃಷ್ಟಿಯಿಂದ ಇದು ಸರಿಯಾದ ಪ್ರಶ್ನೆಗಳಲ್ಲ. ಪರಂಪರೆಯನ್ನು ಜ್ಞಾನದ ರೂಪ ಎಂದು ತಿಳಿದುಕೊಂಡರೆ, ಇದರ ಪರಿಣಾಮವಾಗಿ ಒಂದು ಭೇದವನ್ನು ನಾವು ಮಾಡಲೇಬೇಕಾಗುತ್ತದೆ. ಅದೇನೆಂದರೆ, ಜ್ಞಾನ ಮತ್ತು ಘಟನೆಗಳ ನಡುವೆ ಇರುವ ಭೇದ. ಯಾವುದನ್ನಾದರೂ ಜ್ಞಾನ ಎಂದು ನೋಡಿದಾಗ, ನಾವು ಅದನ್ನು ‘ಹೇಗೆ?’ ಎನ್ನುವ ದೃಷ್ಟಿಯಿಂದ ನೋಡುತ್ತೇವೆಯೇ ವಿನಾ ‘ಯಾಕೆ’ ಎನ್ನುವ ದೃಷ್ಟಿಯಿಂದ ನೋಡುವುದಿಲ್ಲ. ಉದಾಹರಣೆಗೆ, ಯಾರಾದರೂ ಮಡಿ ಮತ್ತು ಮೈಲಿಗೆಯ ಭೇದವನ್ನು ಮಾಡಿದರೆ, ಅದನ್ನು ಒಂದು ಘಟನೆಯನ್ನಾಗಿ ನೋಡಬಹುದು ಅಥವಾ ಜ್ಞಾನವನ್ನಾಗಿ ನೋಡಬಹುದು. ಘಟನೆಯನ್ನಾಗಿ ನೋಡಿದರೆ, ಆಗ ನಾವು ಕೇಳುವ ಪ್ರಶ್ನೆ ಹೀಗಿರುತ್ತದೆ: “ಅವರು ಯಾಕೆ ಈ ಆಚಾರವನ್ನು ಮಾಡುತ್ತಿದ್ದಾರೆ?”, “ಯಾಕೆ ಶುಚಿತ್ವವನ್ನು ಕಾಪಾಡಲು ಮಡಿ ಮೈಲಿಗೆಯನ್ನೇ ಆಚರಿಸಬೇಕು?”, ಇತ್ಯಾದಿ. ಅದೇ ಮಡಿ-ಮೈಲಿಗೆಯನ್ನು ಜ್ಞಾನವನ್ನಾಗಿ ನೋಡಿದರೆ, ನಮ್ಮ ಪ್ರಶ್ನೆ ಹೀಗಿರುತ್ತದೆ: ಅನಾರೋಗ್ಯದ ಸಂದರ್ಭದಲ್ಲಿ ಮಡಿಯನ್ನು ಆಚರಿಸುವುದು ಹೇಗೆ? ಚಿಕ್ಕ ಮಕ್ಕಳಿಗೆ ಮಡಿ-ಮೈಲಿಗೆಯ ವ್ಯತ್ಯಾಸವನ್ನು ಹೇಳಿಕೊಡುವುದು ಹೇಗೆ? ಇತ್ಯಾದಿ. ಇಲ್ಲಿ ನಮ್ಮ ಪ್ರಶ್ನೆ ಮಡಿ-ಮೈಲಿಗೆಯ ಆಚಾರ ಒಳ್ಳೆಯದ್ದೋ ಅಥವಾ ಕೆಟ್ಟದ್ದೋ ಎಂಬುದಲ್ಲ. ಅಥವಾ ನಮಗೆ ಅದು ಬೇಕೋ ಬೇಡವೋ ಎಂಬುದೂ ಅಲ್ಲ. ಇಲ್ಲಿರುವ ಪ್ರಶ್ನೆ ಈ ಆಚಾರವನ್ನು ಜ್ಞಾನವನ್ನಾಗಿ ಅಥವಾ ಘಟನೆಯನ್ನಾಗಿ ನೋಡುವುದಕ್ಕೆ ಸಂಬಂಧಿಸಿದ್ದು. ಇದು ಒಂದು ತಾರ್ಕಿಕ ಭೇದ. ಅಂದರೆ, ಯಾವ ಸಂಗತಿಗಾದರೂ ಇದು ಅನ್ವಯಿಸುತ್ತದೆ. ಗುರುತ್ವಾಕರ್ಷಣ ಸಿದ್ದಾಂತವನ್ನು ಘಟನೆಯನ್ನಾಗಿ ನೋಡಿದರೆ, ನಾವು ಕೇಳುವ ಪ್ರಶ್ನೆ “ಯಾಕೆ ನ್ಯೂಟನ್‍ನ ಹಿಂದಿನ ಕಾಲದ ವಿಜ್ಞಾನಕ್ಕೆ ವಸ್ತುಗಳ ಸ್ವಭಾವವನ್ನೂ ಮತ್ತು ಆಕಾಶಕಾಯಗಳ ಸ್ವಭಾವವನ್ನೂ ವಿವರಿಸಲು ಒಂದೇ ಸಿದ್ದಾಂತ ಲಭ್ಯವಿರಲಿಲ್ಲ?” ಎಂಬುದು. ಅದೇ ಅದನ್ನು ಜ್ಞಾನವನ್ನಾಗಿ ನೋಡಿದರೆ, ನಾವು ಕೇಳುವ ಪ್ರಶ್ನೆ ಹೀಗಿರುತ್ತದೆ: “ಒಂದು ವಸ್ತುವಿನ ಭಾರಕ್ಕೂ ಮತ್ತು ಅದರ ಆವೇಗಕ್ಕೂ ಇರುವ ಸಂಬಂಧವನ್ನು ತಿಳಿಯುವುದು ಹೇಗೆ?” ಇತ್ಯಾದಿ.

ಹೀಗೆ ನೋಡಿದಾಗ ಪರಂಪರೆಯ ಒಂದು ಮುಖ್ಯ ಆಯಾಮ ಮುನ್ನೆಲೆಗೆ ಬರುತ್ತದೆ. ಅದೇನೆಂದರೆ, ಪರಂಪರೆಗೂ ವಿಜ್ಞಾನಕ್ಕೂ ಇರುವ ಸಂಬಂಧ. ಸಾಮಾನ್ಯವಾಗಿ ವಿಜ್ಞಾನವನ್ನು ಪರಂಪರೆಯ ವಿರೋಧಿ ಎಂದು ತಿಳಿದುಕೊಳ್ಳುವ ಪರಿಪಾಠವಿದೆ. ‘ಯಾವುದೇ ಸಂಗತಿಯೂ ಸತ್ಯವೆಂದು ಸಾಬೀತಾಗುವವರೆಗೆ ಅದು ಸುಳ್ಳು’ ಎನ್ನುವುದು ವಿಜ್ಞಾನದ ನಂಬಿಕೆ ಎನ್ನುವ ಭಾವನೆಯಿದೆ. ಆದರೆ ಹಲವಾರು ಸಮಕಾಲೀನ ತತ್ವಶಾಸ್ತ್ರಜ್ಞರ ಪ್ರಕಾರ, ವಿಜ್ಞಾನದ ಇಂತಹ ಚಿತ್ರಣ ದೋಷಪೂರಿತವಾದದ್ದು. ವಿಜ್ಞಾನ ಎನ್ನುವುದು ಕೇವಲ ಲಭ್ಯ ವಸ್ತುಗಳನ್ನು ಪರೀಕ್ಷಿಸುವ ಉದ್ಯೋಗವಲ್ಲ. ಅದು ಒಂದು ಪರಂಪರೆ ವಸ್ತುಗಳನ್ನು ನಿರ್ದಿಷ್ಟ ರೀತಿಯಲ್ಲಿ ಕಟ್ಟಿಕೊಳ್ಳುವ ವಿಧಾನವೂ ಹೌದು. ಉದಾಹರಣೆಗೆ, ಹೊಗೆಸೊಪ್ಪಿನಿಂದ ಕ್ಯಾನ್ಸರ್ ಯಾಕೆ ಬರುತ್ತದೆ ಎಂದು ತಿಳಿದುಕೊಳ್ಳಬೇಕೆಂದರೆ, ಅದರ ಹಿಂದೆ ಕೆಲಸ ಮಾಡಿರುವ ವೈಜ್ಞಾನಿಕ ಪರಂಪರೆಯ ಸಂಗತಿಗಳನ್ನು ಗಮನಿಸಬಹುದು. ಮೊದಲು, ಕ್ಯಾನ್ಸರ್‍ನ ಬಗ್ಗೆ ಅದು ರಕ್ತದ ಕೀವಿನಿಂದಾಗುವ ಕಾಯಿಲೆಯಲ್ಲ. ಬದಲಾಗಿ ಜೀವಕೋಶಗಳ ಅಕ್ರಮವಾದ ಬೆಳವಣಿಗೆಯಿಂದ ಆಗುವ ಕಾಯಿಲೆ ಎನ್ನುವ ಚಿತ್ರಣ ಬೆಳೆದಿರಬೇಕು. (ಇದು ಬೆಳೆದಿದ್ದು ೧೯ನೆ ಶತಮಾನದ ಕೊನೆಗೆ). ಜೊತೆಗೆ, ಜೀವಕೋಶಗಳ ಬೆಳವಣಿಗೆ ಮತ್ತು ಪುನರುತ್ಪಾದನೆ ಎನ್ನುವುದು ವಂಶವಾಹಿಗಳು ರವಾನಿಸುವ ಮಾಹಿತಿಯ ಮಟ್ಟದಲ್ಲಿ ಆಗುವ ಕ್ರಿಯೆ ಎನ್ನುವಂಥ genetic ಚಿತ್ರಣ ಬೆಳೆದಿರಬೇಕು. (ಇದು ಆಗಿದ್ದು ಸುಮಾರು ೨೦ನೇ ಶತಮಾನದ ಮಧ್ಯ ಭಾಗದಲ್ಲಿ). ನಂತರ, ವಂಶವಾಹಿಗಳ ಪ್ರೋಟಿನ್ ಸರಪಳಿಗಳು ಹೇಗೆ ಜೋಡಿಸಿಕೊಳ್ಳುತ್ತವೆ ಮತ್ತು ಬಿಡಿಸಿಕೊಳ್ಳುತ್ತವೆ ಎನ್ನುವ ಚಿತ್ರಣ ಬೆಳೆದಿರಬೇಕು ಮತ್ತು ಈ ವಂಶವಾಹಿಗಳು ಸುತ್ತಣ ಪರಿಸರಕ್ಕೆ ಹೇಗೆ ಪ್ರತಿಕ್ರಯಿಸುತ್ತವೆ ಎಂದು ತಿಳಿದಿರಬೇಕು. (ಇದು ಆಗಿದ್ದು ೭೦ರ ದಶಕದ ಸುಮಾರಿಗೆ). ಇಷ್ಟೆಲ್ಲಾ ಆದಾಗ ಮಾತ್ರ ಹೊಗೆಸೊಪ್ಪಿನಿಂದ ಕ್ಯಾನ್ಸರ್ ಯಾಕೆ ಬರುತ್ತದೆ ಎನ್ನುವ ಪ್ರಶ್ನೆ ಮೂಡಲು ಸಾಧ್ಯ. ಈ ಹಿನ್ನೆಲೆ ಇಲ್ಲದಿದ್ದರೆ, ಹೊಗೆಸೊಪ್ಪಿಗೂ ಕ್ಯಾನ್ಸರ್ ರೀತಿಯ ಕಾಯಿಲೆಗೂ ಏನಾದರೂ ಸಂಬಂಧವಿರಬಹುದೆಂದು ಊಹಿಸುವುದೂ ಅಸಾಧ್ಯವೇ ಆಗುತ್ತಿತ್ತು. ಹಾಗಾಗಿ, ವೈಜ್ಞಾನಿಕ ಪ್ರಶ್ನೆಗಳು ರೂಪುಗೊಳ್ಳುವುದರ ಹಿಂದೆ ಒಂದು ನಿರ್ದಿಷ್ಟ ಬೌದ್ಧಿಕ ಪರಂಪರೆ ಕಟ್ಟಿಕೊಂಡ ಒಂದು ಚಿತ್ರಣವಿರುತ್ತದೆ. ಅಂದಮೇಲೆ, ವಿಜ್ಞಾನ ಎನ್ನುವುದು ಪಾರಂಪರಿಕವಾಗಿ ಬಂದ ಜ್ಞಾನವೇ ವಿನಾ ಒಬ್ಬ ಬುದ್ಧಿವಂತ ವ್ಯಕ್ತಿ ತನ್ನ ವಿಚಾರಶೀಲತೆಯಿಂದ ಮತ್ತು ವೈಜ್ಞಾನಿಕ ಮನೋಭಾವದಿಂದ ಪಡೆದುಕೊಳ್ಳಬಹುದಾದ ಮತ್ತು ನೇರವಾದ ಪರೀಕ್ಷೆಗಳಿಂದ ಸಾಧಿಸಿ ತೋರಿಸಬಹುದಾದ ಜ್ಞಾನವಲ್ಲ. ಎಲ್ಲಕ್ಕಿಂತಲೂ ಮುಖ್ಯವಾಗಿ, ವಿಜ್ಞಾನ ವೈಯಕ್ತಿಕ ಸಾಧನೆಯಲ್ಲ. ಅದು ಪಾರಂಪರಿಕ ಬಳುವಳಿ. ಇದನ್ನೇ ಮತ್ತೊಂದು ಅತಿಯಿಂದ ವಿಲಿಯಂ ಬಟ್ಲರ್ ಯೇಟ್ಸ್ ಕವಿ ಹೇಳಿದ್ದು: “ಯಾವುದೇ ಸಂಗತಿಯೂ ಸುಳ್ಳೆಂದು ಸಾಬೀತಾಗುವವರೆಗೆ ಅದು ಸತ್ಯ” ಎಂದು.


ಪಾಶ್ಚಿಮಾತ್ಯ ರಾಜಕೀಯ ಚಿಂತನೆಯಲ್ಲಿ ಪರಂಪರೆಯ ಬಗ್ಗೆ ಆಳವಾಗಿ ವಿಚಾರ ಮಾಡಿರುವವರು ಕನ್ಸರ್ವೇಟಿವ್ ಚಿಂತಕರು. ೧೮ನೇ ಶತಮಾನದ ಬಹಳ ದೊಡ್ಡ ಇಂಗ್ಲಿಷ್ ರಾಜಕೀಯ ಚಿಂತಕನಾದ ಎಡ್ಮಂಡ್ ಬರ್ಕ್ (೧೭೨೯-೧೭೯೭) ಪಾರಂಪರಿಕ ಒಳಿತು, ಶೀಲ, ನಯನಾಜೂಕುಗಳನ್ನೆಲ್ಲವನ್ನು ಗಾಳಿಗೆ ತೂರಿದ ಫ್ರೆಂಚ್ ಕ್ರಾಂತಿಯನ್ನು ಕಟುವಾಗಿ ಟೀಕಿಸಿದ್ದ. ಅವನ ಮುಖ್ಯ ವಾದವೇನೆಂದರೆ, ಸಮಾಜ ಎನ್ನುವುದು ಹಲವು ಪರಂಪರೆಗಳಿಂದ ಕೂಡಿದ, ಬಹಳ ಸಂಕೀರ್ಣವಾದ ವ್ಯವಸ್ಥೆ. ಇದನ್ನು ಒಳಗಿನಿಂದ ನಮ್ಮ ನಮ್ಮ ಸಂದರ್ಭಗಳಿಗೆ ತಕ್ಕಂತೆ ಅರಿಯಬಹುದೇ ವಿನಾ ಹೊರಗಿನಿಂದ ಸಮಗ್ರವಾಗಿ ಅರಿಯಲು ಬರುವುದಿಲ್ಲ. ಅಂದಮೇಲೆ, ಸಮಾಜದ ಒಂದು ಸಮಗ್ರವಾದ ಸಿದ್ಧಾಂತ, ಒಂದು ಸಮಗ್ರವಾದ ಟೀಕೆ ಇವು ಸಾಧ್ಯವಿಲ್ಲ. ಹಾಗೆಯೇ, ಇಂತಹ ಸಮಗ್ರ ಸಿದ್ಧಾಂತಗಳು, ಟೀಕೆಗಳ ಮೇಲೆ ನಿಂತಿರುವ ಸಮಾಜ ಸುಧಾರಣೆಯ ಪ್ರಯತ್ನಗಳೂ ಸಾಧುವಲ್ಲ. ನಮ್ಮ ಯಾವ ಸುಧಾರಣೆಯೇ ಆಗಲಿ, ಅವು ಪಾರಂಪರಿಕವಾಗಿ ಬಂದಿರುವ ಸಾಂಸ್ಥಿಕ ವ್ಯವಸ್ಥೆಗಳು ಮತ್ತು ಸಾಂಸ್ಥಿಕ ಶ್ರೇಯಸ್ಸನ್ನು ಹಾಳುಗೆಡವಬಾರದು ಎಂಬುದು ಕನ್ಸರ್ವೇಟಿವ್ ಚಿಂತಕರ ಬಹುಮುಖ್ಯ ಕಾಳಜಿ. ಪರಂಪರೆಗಳು ಆಂತರಿಕವಾಗಿ ಸುಧಾರಣೆಯಾದರಷ್ಟೇ ಅದು ಬಹುಕಾಲ ಬಾಳುವ ವ್ಯವಸ್ಥೆಗಳನ್ನು ಹುಟ್ಟುಹಾಕುತ್ತದೆ. ಆದ್ದರಿಂದ ಕ್ರಾಂತಿಕಾರಕವಾದ ಬದಲಾವಣೆಗಳು ಸಾಧುವೂ ಅಲ್ಲ ಸಾಧ್ಯವೂ ಇಲ್ಲ ಎನ್ನುವುದು ಇವರ ಅಭಿಮತ. 

Comments

Popular posts from this blog

ಸ್ಟ್ರಕ್ಚರಲಿಸಂ (ರಚನಾವಾದ/ರಾಚನಿಕವಾದ)

ಮಾರ್ಕ್ಸ್‌‌‌ ವಾದ

ಸುಖ-ಸಂತೋಷಕ್ಕೆ ಬೇಕಾಗುವುದೇನು? ಸಾಕಾಗುವುದೆಷ್ಟು?