ಕನ್ನಡ ಪಠ್ಯ ರಚನೆ ಬೋಧನೆಯ ಸವಾಲುಗಳು

ದಿನಾಂಕ ೨೬.೪.೨೦೧೦ರ ’ಶಿಕ್ಷಣ’ ಪುರವಣಿಯಲ್ಲಿ ಪ್ರಕಟವಾದ ಡಾ. ಬೋರೇಗೌಡ ಚಿಕ್ಕಮರಳಿಯವರ ’ಪದವಿ: ಕನ್ನಡ ಪಠ್ಯ ರಚನೆ ಬೋಧನೆಯ ಸವಾಲುಗಳು’ ಲೇಖನ ಬಹಳ ಮುಖ್ಯವಾದ ವಿಚಾರವೊಂದನ್ನು ಚರ್ಚೆಗೆ ತಂದಿದೆ. ಈ ಲೇಖನದ ಪ್ರಾಮುಖ್ಯತೆಯನ್ನು ಮೆಚ್ಚುತ್ತಲೇ ಅದರ ಕೆಲವು ಮಿತಿಗಳನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ. ಕನ್ನಡ ಭಾಷೆ ಮತ್ತು ಕನ್ನಡ ಭಾಷಾ ಶಿಕ್ಷಣದ ಸಮಸ್ಯೆಗಳನ್ನು ಕೇವಲ ಭಾಷೆಯೊಂದರ ಏಳುಬೀಳಿನ ಸಮಸ್ಯೆಯೆಂದು ಕಾಣಲಾಗದು ಅಥವಾ ಕೆಲವು ನೂರು ಅಥವಾ ಸಾವಿರ ಕನ್ನಡ ಶಿಕ್ಷಕರ ಜೀವನೋಪಾಯದ ವಿಚಾರ ಎಂದೂ ಹೇಳಲಾಗದು. ಅದು ಕೇವಲ  ಭಾಷೆಯ ಸಮಸ್ಯೆ ಎಂದುಕೊಂಡರೆ, ನಮ್ಮ ಕಾಲದಲ್ಲಿ ಜಾಗತಿಕವಾಗಿ ಈ ಸಮಸ್ಯೆಯ ಹರವನ್ನು ನೋಡಿದಾಗ, ಕನ್ನಡದಂತಹ ’ಮೈನರ್’ ಭಾಷೆಗೆ ಈ ಸಮಸ್ಯೆಯನ್ನು ನಿಭಾಯಿಸೋದು ಅಸಾಧ್ಯ ಎಂದೇ ಹೇಳಬೇಕಾಗುತ್ತದೆ. ಹಾಗೆಯೇ ಅದು ಶಿಕ್ಷಕರ ಜೀವನೋಪಾಯದ ದಾರಿ ಎಂದರೆ, ಅದು ಸಮಸ್ಯೆಯನ್ನು ಸರಳೀಕರಿಸಿದಂತಾಗುತ್ತದೆ. ಲಕ್ಷಾಂತರ ಜನರ ಜೀವನೋಪಾಯಕ್ಕೆ ಜಾಗತೀಕರಣದ ಪರಿಣಾಮವಾಗಿ ಇದಕ್ಕಿಂತಲೂ ಗಂಭೀರವಾದ ಸಂಚಕಾರ ಒದಗಿರುವಾಗ, ಕೆಲವು ಸಾವಿರ ಸಂಖ್ಯೆಯ ಕನ್ನಡ ಶಿಕ್ಷಕರ ಬಗ್ಗೆ ಇಷ್ಟು ಕನಿಕರ ಪಡುವುದು ಯಾವ ನ್ಯಾಯ, ಎಂದೇ ಕೇಳಬೇಕಾಗುತ್ತದೆ. ಅಥವಾ ಅದೇ ಜಾಗತೀಕರಣದ ಪರಿಣಾಮವಾಗಿ ಸಹಸ್ರಾರು ಉದ್ಯೋಗಗಳು ಹುಟ್ಟಿಕೊಳ್ಳುತ್ತಿರುವಾಗ, ಮಧ್ಯಮ ವರ್ಗದ ಈ ಶಿಕ್ಷಕರಿಗೂ ಒಂದಲ್ಲಾ ಒಂದು ಕಡೆ ಅನ್ನದ ಋಣ ಇರುತ್ತದೆ ಎಂದೇ ಸಮಾಧಾನ ಪಟ್ಟುಕೊಳ್ಳಬಹುದಲ್ಲ?

ಆದ್ದರಿಂದ ಈ ಸಮಸ್ಯೆಯ ಬಗ್ಗೆ ಮಾತನಾಡುವಾಗ ಅದನ್ನು ಸ್ವಲ್ಪ ವಿಸ್ತಾರವಾದ ಹರಹಿನಲ್ಲಿ ನೋಡಬೇಕಿದೆ. ಇದಕ್ಕೆ ಒಂದು ಮುಖ್ಯವಾದ ಸಾಂದರ್ಭಿಕ ಹಿನ್ನೆಲೆಯೆಂದರೆ, ಮಾನವಿಕ ಮತ್ತು ಸಮಾಜ ಶಾಸ್ತ್ರಗಳ ಅಧ್ಯಯನದ ಪ್ರಸ್ತುತತೆಯೇ ಬಿಕ್ಕಟ್ಟಿಗೆ ಸಿಕ್ಕಿರುವ ಪರಿಸ್ಥಿತಿ. ಕೇವಲ ಕನ್ನಡಕ್ಕಷ್ಟೇ ಅಲ್ಲದೆ, ಇಂಗ್ಲೀಶೂ ಸೇರಿದಂತೆ, ಎಲ್ಲ ಮಾನವಿಕ ಅಧ್ಯಯನದ ಶಿಸ್ತುಗಳಿಗೂ ಈ ಸಮಸ್ಯೆ ಬಾಧಿಸಿದೆ. ಇಂಗ್ಲೀಶ್ ಸಾಹಿತ್ಯ ಅಧ್ಯಯನದಲ್ಲಿ ಇದರ ಬಗ್ಗೆ ಕಳೆದೆರಡು ದಶಕಗಳಲ್ಲಿ ಹೇರಳವಾಗಿ ಚರ್ಚೆಯಾಗಿದ್ದರೂ, ಆ ಪರಿಹಾರಗಳನ್ನೂ ಕೂಡ ಇಂದು ವಿಮರ್ಶಿಸಬೇಕಾದ ತುರ್ತಿದೆ. ಈ ಬಿಕ್ಕಟ್ಟಿನ ಬಗ್ಗೆ ಲೇಖಕರಿಗೆ ಅರಿವಿದ್ದರೂ, ಭಾಷಾ ಶಿಕ್ಷಣಕ್ಕೆ ಪರಿಹಾರಗಳನ್ನು ಸೂಚಿಸುವಾಗ, ಈ ಪ್ರಸ್ತುತತೆಯೇ ಬಿಕ್ಕಟ್ಟಿಗೆ ಸಿಕ್ಕಿರುವುದನ್ನು ಮರೆತು ಅದನ್ನು ಒಂದು ಸಮಸ್ಯೆಯೇ ಇಲ್ಲದ ಗ್ರಹೀತವೆಂಬಂತೆ ಒಪ್ಪಿಕೊಂಡು ಮುಂದೆ ಸಾಗಿಬಿಡುತ್ತಾರೆ. “ಭಾಷಾ ಶಿಕ್ಷಣವೆಂದರೆ ಬದುಕಿನ ಸಮರ್ಥ ನಿರ್ವಹಣೆಗಾಗಿ, ಒಂದು ಸಭ್ಯ ಸಮಾಜದ ರೂಪಣೆಗಾಗಿ ವಿದ್ಯಾರ್ಥಿಗಳನ್ನು ರೂಪಿಸುವುದು” ಎನ್ನುವ ಲೇಖಕರು, ಈ ಗ್ರಹೀತವೇ ಮಾನವಿಕ ಅಧ್ಯಯನದಲ್ಲಿ ಬಿಕ್ಕಟ್ಟಿಗೆ ಸಿಕ್ಕರುವುದು ಎಂಬುದನ್ನು ಮರೆತಂತಿದೆ. ಆದ್ದರಿಂದಲೇ ಹಳೆಗನ್ನಡ ಸಾಹಿತ್ಯವನ್ನು ಹೇಳಿಕೊಡಿ, ಕನ್ನಡದ ಕವಿಗಳನ್ನು ಪಾಠಮಾಡಿ, ನಾಡು ನುಡಿಯ ಎಳ್ಗೆಗೆ ಇದು ಮುಖ್ಯ ಎಂದೆಲ್ಲಾ ಸ್ಟೇಟಸ್-ಕೊ ರೀತಿಯಲ್ಲಿ ಮಾತನಾಡುತ್ತಾರೆ. ಯಾಕೆ ಇವನ್ನೆಲ್ಲಾ ಹೇಳಿಕೊಡಬೇಕು ಎಂದು ಪ್ರಶ್ನೆ ಕೇಳುತ್ತಿರುವ ಸಮಕಾಲೀನ ಜಗತ್ತಿನ ಎದುರು ನಿಂತು, ಇದರಿಂದ ನಮ್ಮ ನಾಡು-ನುಡಿ ಉಳಿಯುತ್ತದೆ ಎಂದು ವಾದಿಸಿದರೆ, ಯಾರು ತಾನೆ ನಂಬೋಣ? 

ಈಗ ಪರಿಹಾರದ ಬೇರೆ ಮಾರ್ಗಗಳು ಇವೆಯೇ ಎಂದು ಹುಡುಕೋಣ.  ಮೊದಲನೆಯದಾಗಿ, ಮಾನವಿಕ ಅಧ್ಯಯನ ಶಿಸ್ತುಗಳ ಮೂಲ ಆಶಯವೆಂದರೆ, ಸಂಸ್ಕೃತಿಯ ಮಟ್ಟದಲ್ಲಿ, ಪ್ರಜ್ಞೆಯ ಮಟ್ಟದಲ್ಲಿ ಕಾಣಿಸಿಕೊಳ್ಳುವ ಸಮಕಾಲೀನ ತವಕ, ತಲ್ಲಣ, ಪಲ್ಲಟಗಳನ್ನು ಅರ್ಥೈಸಿ, ಅವುಗಳ ಪರಿಹಾರಕ್ಕೆ ಚಾರಿತ್ರಿಕವಾದ, ಬೌದ್ಧಿಕ ಸಂಪನ್ಮೂಲಗಳನ್ನೊದಗಿಸುವುದು. ಆದ್ದರಿಂದ, ಹೀಗೆ ನೋಡಿದರೆ, ಕನ್ನಡದ ಉಳಿವಿಗಾಗಿ ಹೋರಾಡುವುದು ಒಂದು ರೀತಿ ವಿಪರ್ಯಾಸವೇ ಸರಿ. ಯಾಕೆಂದರೆ, ಕನ್ನಡಕ್ಕಾಗಿ ಜನ ಬಾಳುವುದಿಲ್ಲ. ಜನದ ಬಾಳ್ಮೆಯಲ್ಲಿ ಹುಟ್ಟಿ ಬೆಳೆದ ತಿಳುವಳಿಕೆಗಳು ತಾವಾಡುವ ಭಾಷೆಗಳಲ್ಲಿ ಅಡಕವಾಗಿರುತ್ತವೆ. ಇದು ತೀರಾ ಆದರ್ಶವಾದಿ ಕನಸುಗಾರರೆಂಬ ಗೇಲಿಗೆ ಒಳಗಾಗಿರುವ ಜರ್ಮನ್ ರೊಮ್ಯಾಂಟಿಕ್ ಚಿಂತಕರಿಂದ ಹಿಡಿದು, ನಮ್ಮ ಕಾಲದ ಪ್ರಮುಖ ಚಿಂತಕರವರೆಗೆ ಎಲ್ಲರೂ ಒಪ್ಪುವ ವಿಚಾರ. ಆದರೆ, ಮಾನವಿಕ ಅಧ್ಯಯನ ಈ ನಿಟ್ಟಿನಲ್ಲಿ ಸಫಲವಾಗಿದೆಯೇ ಎಂದು ಕೇಳಿದರೆ, ಭಾರತದ ಮಟ್ಟಿಗಂತೂ ’ಇಲ್ಲ’ ಎಂದೇ ಹೇಳಬೇಕಾಗುತ್ತದೆ. ಇದಕ್ಕೆ ಬೇಕಾದ ಸಮಸ್ಯಾ-ಕೇಂದ್ರಿತವಾದ ಸಂಶೋಧನಾ ಮಾದರಿಗಳು ನಮ್ಮ ಮಾನವಿಕ ಶಿಸ್ತುಗಳಲ್ಲಿ ಇಲ್ಲದಿರುವುದೇ ಮುಖ್ಯ ಕಾರಣ. ಸಂಸ್ಕೃತಿಯ ಅಂತಹ ಸಮಸ್ಯೆಗಳನ್ನು ಬಗೆಯದೇ, ಆ ಸಮಸ್ಯೆಗಳ ಪರಿಹಾರಾರ್ಥವಾಗಿ ಸಾಹಿತ್ಯ, ಕಲೆ ಮುಂತಾದ ಆಕರಗಳನ್ನು ಅಧ್ಯಯನ ಮಾಡದೇ, ಬರಿದೇ, ಸಾಹಿತ್ಯದ ಪ್ರೀತಿಯಿಂದ ಪಂಪ-ರನ್ನರನ್ನು ಓದುತ್ತೇವೆ ಎಂದರೆ, “ಅಷ್ಟು ಪ್ರೀತಿಯಿದ್ದವರು ಓದಿಕೊಳ್ಳಿ” ಎಂದು ಜಾರಿಕೊಳ್ಳಬೇಕಾಗುತ್ತದೆ. ಯಾಕೆಂದರೆ, ನಮ್ಮ ಸಮಸ್ಯೆಗಳ ಕಾಲಕ್ಕೊದಗದ ಪಂಪ-ರನ್ನರನ್ನು ಸಾಂಸ್ಥಿಕವಾಗಿ ಅಭ್ಯಾಸ ಮಾಡುವುದನ್ನು ಸಮರ್ಥಿಸಿಕೊಳ್ಳುವುದು ಬಹಳ ತ್ರಾಸದ ಕೆಲಸ. ಈ ನಿಟ್ಟಿನಲ್ಲಿ, ಕನ್ನಡದ ಪಠ್ಯಗಳಷ್ಟೇ ಅಲ್ಲದೆ, ಕನ್ನಡ ಅಧ್ಯಯನದ ಮಾದರಿಗಳೂ ಬದಲಾಗಬೇಕಿದೆ. ಇಂತಹ ಬದಲಾವಣೆಗೆ “ಕೋಲಾರ ಜಿಲ್ಲೆಯ ಅಡುಗೆಗಳು” ಎನ್ನುವಂತಹ ನವೀನ ಮಾದರಿಯ ಪಿಎಚ್.ಡಿ ಸಂಶೋಧನೆಗಳು ಎಷ್ಟು ಮಾರಕವೋ, “ಕುವೆಂಪು-ಕಾರಂತರ ಕಾದಂಬರಿಗಳಲ್ಲಿ ಸ್ತ್ರೀ ಪಾತ್ರಗಳು” ಎನ್ನುವಂತಹ ಸಿದ್ಧ ಮಾದರಿಯ ಸಂಶೋಧನೆಗಳೂ ಅಷ್ಟೇ ಮಾರಕ.


(Published in Prajavani 03.05.2010) 

Comments

Popular posts from this blog

ಮಾರ್ಕ್ಸ್‌‌‌ ವಾದ

ಸ್ಟ್ರಕ್ಚರಲಿಸಂ (ರಚನಾವಾದ/ರಾಚನಿಕವಾದ)

ಸಮಾನತೆಯ ಕುರಿತು ಐದು ತಕರಾರುಗಳು