ಸಂಸ್ಥೆಗಳು ರೂಪಿಸುವ ಸಂಸ್ಕಾರಗಳು


ನಾವೊಂದು ಮೂವತ್ತು ಅಧ್ಯಾಪಕರು ಇತ್ತೀಚೆಗೆ ಒಂದು ತರಬೇತಿ ಕಾರ್ಯಕ್ರಮದ ಅಂಗವಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ -ಇಸ್ರೊಗೆ ಒಂದು ದಿನದ ಭೇಟಿ ನೀಡಿದ್ದೆವು. ಇಸ್ರೊದ ರಾಕೆಟ್ ವಿಜ್ಞಾನದ ವಿವರಗಳನ್ನು ಬದಿಗಿಟ್ಟು, ಒಂದು ಉತ್ತಮ ಸಂಸ್ಥೆ ಹೇಗೆ ಕೆಲಸ ಮಾಡುತ್ತದೆ, ಮತ್ತು ಅವುಗಳಿಂದ ನಾವು ಒಟ್ಟಾರೆಯಾಗಿ ಸಂಸ್ಥೆಗಳ ಬಗ್ಗೆ, ಅವುಗಳ ಆರೋಗ್ಯದ ಬಗ್ಗೆ, ಯಶಸ್ಸಿನ ಬಗ್ಗೆ ಕಲಿಯಬಹುದಾದ್ದು ಏನು ಎನ್ನುವುದು ನನ್ನ ಪ್ರಶ್ನೆ. ವೈಜ್ಞಾನಿಕ ಚಿಂತನೆಯೂ ಒಂದು ರೀತಿಯ ಸಂಸ್ಕಾರದಿಂದ, ಶಿಸ್ತಿನಿಂದ ರೂಪಿತವಾಗುವಂಥದ್ದು. ಅಂದಮೇಲೆ, ಯಶಸ್ವಿ ವೈಜ್ಞಾನಿಕ ಸಂಸ್ಥೆಗಳು ಇಂತಹ ಸಂಸ್ಕಾರಗಳನ್ನು ರೂಪಿಸಿಕೊಂಡಿರಬೇಕಷ್ಟೆ? ಆ ಸಂಸ್ಕಾರಗಳು ಯಾವುವು? ಮತ್ತು ಆ ಸಂಸ್ಥೆಯಲ್ಲಿ ಕೆಲಸ ಮಾಡುವ ವ್ಯಕ್ತಿಗಳಲ್ಲಿ ಇಂತಹ ಸಂಸ್ಕಾರಗಳು ಹೇಗೆ ಬೆಳೆಯುತ್ತವೆ?

ಸಾಮಾನ್ಯವಾಗಿ, ಒಂದು ಪಕ್ವ ಸಮಾಜದಲ್ಲಿ ಸಂಸ್ಥೆಗಳು ವ್ಯಕ್ತಿಗಳ ಸಂಸ್ಕಾರಗಳನ್ನು ರೂಪಿಸುತ್ತವೆ. ಯೂರೋಪಿನ, ಅಮೆರಿಕಾದ ದೊಡ್ಡ ವಿಶ್ವವಿದ್ಯಾಲಯಗಳು ತಮ್ಮ ವಿದ್ಯಾರ್ಥಿಗಳು ಯಾವುದೇ ಸಾಮಾಜಿಕ ಸಾಂಸ್ಕøತಿಕ ಹಿನ್ನೆಲೆಯಿಂದ ಬಂದವರಾಗಿರಲಿ, ಅವರೆಲ್ಲರಲ್ಲಿ ಒಂದಷ್ಟು ಸಮಾನವಾದ ಬೌದ್ಧಿಕ ಸಂಸ್ಕಾರಗಳನ್ನು ರೂಪಿಸುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ಸಾಂಸ್ಥಿಕವಾಗಿ ಇನ್ನೂ ಪಕ್ವವಾಗದ ಸಮಾಜಗಳಲ್ಲಿ, ವ್ಯಕ್ತಿಗಳು ಅಥವಾ ಗುಂಪುಗಳೇ ಸಂಸ್ಥೆಗಳ ಸಂಸ್ಕಾರಗಳನ್ನು ರೂಪಿಸುತ್ತವೆ. ಭಾರತದಂತಹ ದೇಶಗಳಲ್ಲಿ ಸಾಮಾನ್ಯವಾಗಿ ಯಾವ ಸಾಮಾಜಿಕ ವರ್ಗಗಳು, ಜಾತಿಗಳು ಅಥವಾ ರಾಜಕೀಯ ಒಲವುಗಳ ಇರುವಿಕೆ ಹೆಚ್ಚಾಗಿದೆ ಎನ್ನುವುದರ ಮೇಲೆ ಒಂದು ವಿಶ್ವವಿದ್ಯಾಲಯದ ಗುಣಲಕ್ಷಣಗಳು ನಿರ್ಧರಿತವಾಗುತ್ತವೆಯೇ ಹೊರತು ಒಂದು ವಿಶ್ವವಿದ್ಯಾಲಯ ತನ್ನದೆಂದು ಹೇಳಿಕೊಳ್ಳಬಹುದಾದ ಬೌದ್ಧಿಕ ಸಂಸ್ಕಾರಗಳನ್ನು ಎಲ್ಲಾ ವಿದ್ಯಾರ್ಥಿಗಳಲ್ಲೂ ಸಮಾನವಾಗಿ ಬೆಳೆಸುವಲ್ಲಿ ಸಫಲವಾಗುವುದು ಅಪರೂಪವೇ. ಹೀಗೆ ನೋಡಿದಾಗ ಇಸ್ರೊ ಒಂದು ಅಪವಾದವೇ ಅಲ್ಲವೇ ಎನ್ನುವುದು ನನಗಿದ್ದ ಪ್ರಶ್ನೆ. ಭಾರತದ ಜ್ಞಾನಕೇಂದ್ರಿತ ಸಂಸ್ಥೆಗಳ ಸಾಲಿನಲ್ಲಿ ಇಸ್ರೊಗೆ ಒಂದು ಹೆಮ್ಮೆಯ ಸ್ಥಾನವಿದೆ. ಇಸ್ರೊದ ಬಗೆಗಿನ ವರದಿಗಳು ಈ ಸಂಸ್ಥೆ ತನ್ನ ಕ್ಷೇತ್ರದಲ್ಲಿ ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳಿಗಿಂತಲೂ ಉನ್ನತ ಮಟ್ಟದ ಸಾಧನೆಗಳನ್ನು ಮಾಡಿದೆ ಎಂದೇ ಬಿಂಬಿಸುತ್ತವೆ. ಈ ಮಾತುಗಳಲ್ಲಿ ಸ್ವಲ್ವವಾದರೂ ಸತ್ಯವಿದ್ದರೆ, ಇಸ್ರೊ ತನ್ನ ಸದಸ್ಯರಲ್ಲಿ ಕೆಲವು ಉತ್ತಮ ಬೌದ್ಧಿಕ ಸಂಸ್ಕಾರಗಳನ್ನು ರೂಪಿಸಿದೆ ಎಂದಾಯಿತು. ಹಾಗಾದರೆ ಅದು ಯಾವುವು?

ನಾವೆಲ್ಲರೂ ಇಸ್ರೊದ ಸೆಕ್ಯುರಿಟಿ ಗೇಟಿನ ಬಳಿ ಒಟ್ಟುಗೂಡುವುದಕ್ಕೆ ಮುಂಚೆಯೇ ನನ್ನ ಸಹೋದ್ಯೋಗಿ ಅಲ್ಲಿಗೆ ಬಂದಾಗಿತ್ತು. ಹಾಗಾಗಿ, ಅವಳು ಮಿಕ್ಕವರೆಲ್ಲರೂ ಬರುವವರೆಗೂ ಕಾಯಬೇಕಾಗಿತ್ತು. ಇಂತಹ ಪರಿಸ್ಥಿತಿಗಳಲ್ಲಿ ಸಾಮಾನ್ಯವಾಗಿ ಭಾರತದಲ್ಲಿ ಆಗುವಂತೆ, ಐದು ನಿಮಿಷದಲ್ಲಿಯೇ ಅವಳಿಗೆ ಅಲ್ಲಿನ ಸೆಕ್ಯೂರಿಟಿಯವನು ತನ್ನಂತೇ ತಮಿಳುನಾಡಿನವನು, ಅದೂ ತನ್ನ ಜಿಲ್ಲೆಯವನೇ ಎಂದು ತಿಳಿಯಿತು. ಗಿರಿಜಾಮೀಸೆಯ ಆ ಸೆಕ್ಯೂರಿಟಿಯವ ತನ್ನ ಹರಕುಮುರುಕು ಇಂಗ್ಲೀಷು, ಕೆಳವರ್ಗದವರ ತಮಿಳು ಮತ್ತು ವಲಸಿಗರ ಅರೆಬರೆ ಕನ್ನಡವನ್ನೆಲ್ಲಾ ಸೇರಿಸಿದ ಹೈಬ್ರಿಡ್ ಭಾಷೆಯಲ್ಲಿ "ಆರ್ಯಭಟ"ದ ಕುರಿತು ಭಾಷಣ ಬಿಗಿಯುತ್ತಿದ್ದ. ಭಾರತ ಉಡಾಯಿಸಿದ ಮೊದಲ ಉಪಗ್ರಹ ಆರ್ಯಭಟ. ಅವನ ವಿವರಣೆ ರಾಕೆಟ್ ಸೈನ್ಸ್ ರೀತಿ ಇತ್ತು ಎನ್ನುವದಕ್ಕಿಂತಲೂ ತೆಲುಗು ಪೌರಾಣಿಕ ಸಿನಿಮಾ ಕತೆಯ ರೀತಿ ಇತ್ತು ಎನ್ನುವುದೇ ಸರಿ. ಆದರೆ, ನನಗೆ ಮುಖ್ಯವೆನಿಸಿದ ಸಂಗತಿ, ಒಬ್ಬ ಕಾವಲುಗಾರನಿಗೆ ಕೂಡಾ ತಾನು ಕೆಲಸ ಮಾಡುವ ಸಂಸ್ಥೆ ಏನು ಮಾಡುತ್ತದೆ ಎಂದು ತಿಳಿದುಕೊಳ್ಳುವ ಆಸಕ್ತಿಯಿತ್ತು. ಅದನ್ನು ನಾಲ್ಕು ಜನರಿಗೆ ತಿಳಿಹೇಳುವ ಉಮೇದಿತ್ತು. ನಾನು ಹಾಕಿಕೊಂಡಿದ್ದ ಸಂಸ್ಕಾರಗಳ ಪಟ್ಟಿಯಲ್ಲಿ ಇದಕ್ಕೆ ಅಗ್ರಸ್ಥಾನ. ಪರಿಪಕ್ವವಾದ ಸಂಸ್ಥೆಗಳು ತಮ್ಮಲ್ಲಿ ಕೆಲಸ ಮಾಡುವ ಎಲ್ಲಾ ಶ್ರೇಣಿಯ ಜನಗಳಲ್ಲಿ ಆ ಸಂಸ್ಥೆಯ ಬಗ್ಗೆ ಹೆಮ್ಮೆಯನ್ನೂ, ಮತ್ತು ತಾವು ಆ ಸಂಸ್ಥೆಯ ಭಾಗವಾಗಿರುವುದರ ಬಗ್ಗೆ ಆತ್ಮಗೌರವವನ್ನೂ ಬೆಳೆಸುತ್ತವೆ.

ನಮ್ಮ ತಂಡದ ಉಸ್ತುವಾರಿಗಳು ನಮಗೆಲ್ಲಾ ಪರವಾನಗಿ ಪತ್ರಗಳನ್ನು ಹೊಂದಿಸಲು ತೊಡಗಿದ್ದಾಗ ಕೆಲವರು ಅಲ್ಲೇ ಅಡ್ಡಾಡಲು ತೊಡಗಿದೆವು. ಅಷ್ಟರಲ್ಲಿ ಚಹಾ ಮತ್ತು ಬಿಸ್ಕತ್ತಿನ ಟ್ರಾಲಿಯನ್ನು ಒಬ್ಬ ತಂದ. ಅವನು ಬಂದಿದ್ದೇ, ಅಷ್ಟು ಹೊತ್ತೂ ಎಲ್ಲಿದ್ದರೋ, ಹಲವಾರು ತಂತ್ರಜ್ಞರು, ವಿದ್ಯಾರ್ಥಿ ಸಂಶೋಧಕರು, ಗಾರ್ಡುಗಳು ಬಂದು ಚಹಾ ಬಿಸ್ಕತ್ತು ತೆಗೆದುಕೊಂಡು, ಆರಾಮಾಗಿ ಪಟ್ಟಾಂಗ ಹೊಡೆಯುತ್ತಾ, ಚಹಾ ಕುಡಿದು, ಬಂದ ಮಾಯದಲ್ಲೇ ವಾಪಸ್ಸು ತಂತಮ್ಮ ಕೆಲಸಗಳಿಗೆ ಹೋದರು. ಅವರನ್ನು ನೋಡಿದರೆ, ಚಹಾದ ಸಮಯ ಯಾವುದು ಮತ್ತು ಎಷ್ಟು ಹೊತ್ತು ಎಂದು ಅವರೆಲ್ಲರಿಗೂ ನಿಖರವಾಗಿ ಗೊತ್ತಿದ್ದಂತೆ ಕಾಣಿಸಿತು. ಅದೇನೂ ಅವರಿಗೆ ಒಂದು ವಿಶೇಷ ಸಂಗತಿ ಎಂದು ಅನ್ನಿಸಿದಂತೆ ತೋರಲಿಲ್ಲ. ನನ್ನ ಪಟ್ಟಿಯಲ್ಲಿ ಇದು ಎರಡನೇ ಮುಖ್ಯ ಅಂಶ. ಪರಿಪಕ್ವ ಸಂಸ್ಥೆಗಳು ದಿನನಿತ್ಯದ ಸಣ್ಣಪುಟ್ಟ ರೀತಿರಿವಾಜುಗಳನ್ನು ಬಹಳ ನಿಖರವಾಗಿ, ದಕ್ಷತೆಯಿಂದ ನಿಭಾಯಿಸುತ್ತವೆ.  

ನಾವು ಇಸ್ರೊದ ವಸ್ತುಪ್ರದರ್ಶನÀ ಭಾಗದ ಹತ್ತಿರ ಬರುತ್ತಿದ್ದಂತೆಯೇ ನಯವಾದ ಹುಲ್ಲುಹಾಸು. ಒಬ್ಬ ಮೇಟಿ ಹುಲ್ಲುಹಾಸನ್ನು ಕತ್ತರಿಸಿ ಸಮ ಮಾಡುತ್ತಿದ್ದರೆ, ಮತ್ತೊಬ್ಬ ಅದನ್ನು ಗುಡಿಸುತ್ತಿದ್ದ. ಸಹೋದ್ಯೋಗಿಯೊಬ್ಬ ಅಲ್ಲಿದ್ದ ತಾಳೆ ಮರಗಳನ್ನು ಸಮವಾಗಿ ಒಂದೇ ಕೋನದಲ್ಲಿ ಬಾಗುವÀಂತೆ ಸಾಲಾಗಿ ನೆಟ್ಟಿರುವುದನ್ನು ತೋರಿಸಿದ. ಒಂದು ಸರಕಾರಿ ವಿಶ್ವವಿದ್ಯಾಲಯಕ್ಕೆ ಹೋದರೆ ವ್ಯತ್ಯಾಸ ಎದ್ದು ಕಾಣುತ್ತದೆ. ಅಡ್ಡಾದಿಡ್ಡಿಯಾಗಿ ಬೆಳೆದ ಪೊದೆಗಳು, ಗಾಳಿ ಪರಚಿದಂತೆ ಇರುವ ಮರಗಳು ಮತ್ತು ಓಡಾಡಲು ಸುರಕ್ಷಿತವಲ್ಲದ ಕುರುಚಲು ಕಾಡಿನಂಥ ಕಾಲುದಾರಿಗಳು. ಒಟ್ಟು ಮುತುವರ್ಜಿಯ ಕೊರತೆ ಎದ್ದು ಕಾಣುತ್ತದೆ. ಉದಾಹರಣೆಗೆ ಪುಣೆ ವಿಶ್ವವಿದ್ಯಾಲಯದ ಕ್ಯಾಂಪಸ್. ಕಾಡಿನಂತೆ ಬೆಳೆದ ಪೊದೆಗಳು, ಆರೈಕೆಯಿಲ್ಲದೇ ಸೊರಗಿದ ಉದ್ಯಾನಗಳು. ವಿಚಿತ್ರವೆಂದರೆ, ಇದೇ ಕ್ಯಾಂಪಸ್‍ನ ಒಳಗೆಯೇ ಇರುವುದು ಪ್ರತಿಷ್ಠಿತವಾದ ಐಯುಕಾ ಸಂಸ್ಥೆ, ಇಂಟರ್-ಯೂನಿವರ್ಸಿಟಿ ಕೌನ್ಸಿಲ್ ಫಾರ್ ಅಸ್ಟ್ರಾನಮಿ ಆಂಡ್ ಆಸ್ಟ್ರೊಫಿಸಿಕ್ಸ್. ಅಚ್ಚುಕಟ್ಟಾದ ಹುಲ್ಲುಹಾಸು. ಶಿಸ್ತಾಗಿ, ಸೌಜನ್ಯದಿಂದಿರುವ ಭದ್ರತಾ ಸಿಬ್ಬಂದಿ, ಸ್ಪಟಿಕಶುಭ್ರವಾದ ಅತಿಥಿಗೃಹ, ಅರ್ಥಪೂರ್ಣವಾಗಿ, ಮುಂದಾಲೋಚನೆಯಿಂದ ವಿನ್ಯಾಸ ಮಾಡಿದ ಕಟ್ಟಡಗಳು. ನನ್ನ ಪಟ್ಟಿಯಲ್ಲಿ ಇದು ಮೂರನೆಯ ಮುಖ್ಯ ಅಂಶ. ಒಳ್ಳೆಯ ಸಂಸ್ಥೆಗಳು ದೊಡ್ಡ ವಿಷಯಗಳನ್ನೆಲ್ಲಾ ಚೆನ್ನಾಗಿ ನಿಭಾಯಿಸುತ್ತವೇನೋ ಸರಿ. ಆದರೆ ಅದಕ್ಕೂ ಮುಖ್ಯವಾಗಿ ಅವು ಚಿಕ್ಕಪುಟ್ಟ ವಿಷಯಗಳನ್ನೂ ಅಷ್ಟೇ ಮುತುವರ್ಜಿಯಿಂದ ನಿಭಾಯಿಸುತ್ತವೆ.

ನಮಗೆ ವಸ್ತುಪ್ರದರ್ಶನದ ಪರಿಚಯ ಮಾಡಿಸುವ ಜವಾಬ್ದಾರಿ ಇದ್ದದ್ದು ಶ್ರೀನಿವಾಸನ್ ಮೇಲೆ. ಆತ ಸಂಸ್ಥೆಯ ಪರವಾಗಿ ಮತ್ತು ಸಂಸ್ಥೆಯ ಪ್ರತಿನಿಧಿಯಾಗಿ ಮಾತನಾಡುತ್ತಿದ್ದ. ನನಗೆ ಇದು ಬಹಳ ದೊಡ್ಡ ಅಂಶ. ಪರಿಪಕ್ವ ಸಂಸ್ಥೆಗಳಲ್ಲಿ ಬಹಳ ಸಂಕೀರ್ಣವಾದ ಮೇಲು-ಕೆಳಗಿನ ಶ್ರೇಣಿಗಳು ಮತ್ತು ಬಹಳ ಕಟ್ಟುನಿಟ್ಟಾದ ಅಧಿಕಾರಶಾಹಿ ಚೌಕಟ್ಟುಗಳು ಇರುತ್ತವೆ ಎನ್ನುವುದೇನೋ ನಿಜ. ಆದರೆ, ಈ ಎಲ್ಲಾ ಶ್ರೇಣೀಕರಣಗಳ ಜೊತೆಗೇ ಈ ಸಂಸ್ಥೆಗಳು ತಮ್ಮಲ್ಲಿ ಕೆಲಸ ಮಾಡುವ ಎಲ್ಲರನ್ನೂ ಒಂದು ಸಮಾನ ಉದ್ದೇಶದ ಆದರ್ಶಕ್ಕೆ ಹೊಂದುವಂತೆ ರೂಪಿಸುತ್ತವೆ. ಹಾಗಾಗಿ ತಾನು ಮಾಡುತ್ತಿರುವ ಕೆಲಸ ತನ್ನೊಬ್ಬನ ವೈಯಕ್ತಿಕ ಉದ್ದೇಶದ ಈಡೇರಿಕೆಗೆ ಮಾತ್ರ ಅಲ್ಲ. ಬದಲಾಗಿ, ಆ ಸಂಸ್ಥೆಯ ಒಟ್ಟು ಧ್ಯೇಯೋದ್ದೇಶಗಳಿಗೆ ಪೂರಕವಾಗಿರುವಂಥದ್ದು ಎನ್ನುವ ಅರಿವು ಪ್ರತಿಯೊಬ್ಬನಲ್ಲೂ ಇರುತ್ತದೆ. ಇಸ್ರೊದ ವಸ್ತುಪ್ರದರ್ಶನ ರಾಕೆಟ್ಟುಗಳ ಬಗ್ಗೆ, ಕೃತಕ ಉಪಗ್ರಹಗಳ ಬಗ್ಗೆ ಒಂದಷ್ಟು ಉಪಯುಕ್ತ ಮಾಹಿತಿಗಳಿರುವ, ಅಷ್ಟಿಷ್ಟು ಸಾಮಾನುಸರಂಜಾಮುಗಳನ್ನು ಸೇರಿಸಿ ಜೋಡಿಸಿರುವ ಸುಮಾರಾದ ಪ್ರದರ್ಶನ. ಆದರೆ, ನಮ್ಮ ಗೈಡ್ ಶ್ರೀನಿವಾಸನ್ ಮಾತ್ರ ಆಕಾಶವಿಜ್ಞಾನದ ಇದ್ದಬದ್ದ ವಿಚಾರವನ್ನೆಲ್ಲಾ ಬಹಳ ಅಕ್ಕರಾಸ್ತೆಯಿಂದ ನಮಗೆ ವಿವರಿಸಿ ಹೇಳುತ್ತಿದ್ದ. ಬಹುಶಃ ಆತ ಇದೇ ವಿವರಣೆಯನ್ನು ಸಾವಿರಾರು ಜನರಿಗೆ ಕೊಟ್ಟಿರಲಿಕ್ಕೂ ಸಾಕು (ಅದನ್ನು ಲಕ್ಷಾಂತರ ಜನ ಎಂದು ಸ್ವಲ್ಪ ಉಬ್ಬಿಸಿಯೇ ಹೇಳಿದ. ಇರಲಿ). ಆದರೆ ಅವನ ಮಾತು ಹೇಳಿದ್ದನ್ನೇ ಹೇಳಿ ಸವಕಲಾದ ಟೂರಿಸ್ಟ್ ಗೈಡುಗಳ ಏಕತಾರಿಯ ರೀತಿ ಇರಲಿಲ್ಲ. ಶ್ರೀನಿವಾಸನ್ ತನಗೆ ಬರುತ್ತಿದ್ದ ಪೋಲೀಕಿಟ್ಟಿ ಇಂಗ್ಲೀಷಿನಲ್ಲೇ ಆಸಕ್ತಿಯಿಂದ ವಿವರಿಸುತ್ತಿದ್ದ. ನನ್ನ ಪಟ್ಟಿಗೆ ಸೇರಿಸಲು ಮತ್ತೊಂದು ಅಂಶ: ಪರಿಪಕ್ವ ಸಂಸ್ಥೆಗಳಲ್ಲಿ ಆ ಸಂಸ್ಥೆಯ ಉದ್ದೇಶಕ್ಕೆ ಅನುಗುಣವಾಗಿ ವ್ಯಕ್ತಿಗಳು ಸದಾಕಾಲ ಬೆಳೆಯುತ್ತಿರುತ್ತಾರೆ. ಅವರ ಕೆಲಸದಲ್ಲೇ ಕಲಿಕೆಯೂ ಇರುತ್ತದೆ. ಈತ ಹೆಚ್ಚೆಂದರೆ ಇಸ್ರೊದ ಒಬ್ಬ ಕೆಳಹಂತದ ತಾಂತ್ರಿಕ ಕಾರ್ಮಿಕನಾಗಿರಬಹುದು. ಆದರೂ ಆತ ತನ್ನ ಸಂಸ್ಥೆಯ ಒಟ್ಟು ಉದ್ದೇಶದಿಂದ ದೂರವಾಗುವುದಿಲ್ಲ.

"ನಾವೆಲ್ಲಾ ಇಲ್ಲಿ ಸೈಂಟಿಸ್ಟುಗಳು" ಎಂದು ಹೆಚ್ಚುವರಿ ವಿವರಣೆಯನ್ನೂ ನೀಡಿದ. ಸೈಂಟಿಸ್ಟ್-ಸಿ ಇಂದ ಶುರುವಾಗಿ ಸೈಂಟಿಸ್ಟ್-ಕೆ ವರೆಗೆ ಅಲ್ಲಿ ಹಲವು ಶ್ರೇಣಿಯ ಹುದ್ದೆಗಳಿವೆಯಂತೆ. "ನಾನು ಸೈಂಟಿಸ್ಟ್-ಡಿ" ಎಂದು ಹೆಮ್ಮೆಯಿಂದ ಹೇಳಿಕೊಂಡ. "ಕೊನೆಗೆ ಬರುವುದು ಸೈಂಟಿಸ್ಟ್-ಒ, ಅಂದರೆ, ಔಟ್‍ಸ್ಟ್ಯಾಂಡಿಂಗ್". ನಮ್ಮ ಗುಂಪಿನಲ್ಲಿ ಯಾರೋ, "ಒಂದು ದಿನ ಇವನೂ ಆ ಲೆವೆಲ್‍ಗೆ ಹೋಗುತ್ತಾನೆ ನೋಡುತ್ತಿರಿ" ಎಂದರು. ನನ್ನ ಇನ್ನೊಬ್ಬ ಸಹೋದ್ಯೋಗಿ "ಇಲ್ಲಿ ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ ಒಂದು ಅಂಗಡಿ ಇತ್ತಲ್ಲ, ಅದು ಏನಾಯಿತು?" ಎಂದು ಕೇಳಿದ. ಶ್ರೀನಿವಾಸನ್‍ಗೆ ಸ್ವಲ್ಪ ಕಸಿವಿಸಿಯಾದರೂ, ಕಣ್ಣುಮಿಟುಕಿಸಿ "ದಟ್ ಈಸ್ ಡಿಫರೆಂಟ್" ಎಂದು ಮಾತು ತೇಲಿಸಿದ. ಅಲ್ಲಿಗೆ, ತನ್ನ ಸಂಸ್ಥೆಯ ಬಗ್ಗೆ ಅಹಿತಕರವಾದ ಯಾವುದೇ ವಿಷಯವನ್ನು ಈತ ಸಾರ್ವಜನಿಕವಾಗಿ ಮಾತನಾಡುವುದಿಲ್ಲ ಎಂದಾಯಿತು. ಹೊರಗಿನವರು ಮತ್ತು ಒಳಗಿನವರು ಎನ್ನುವುದು ಎರಡು ಬೇರೆಬೇರೆಯೇ ಜಾತಿ. ಹೊರಗಿನವರೊಂದಿಗೆ ಅತ್ಯಂತ ಸೌಜನ್ಯದಿಂದಿರಬೇಕು. ಆದರೆ, ಒಳಗಿನವರಿಗೆ ಮಾತ್ರ ಸತ್ಯ ಹೇಳುವುದು. ಇದು ನನ್ನ ಪಟ್ಟಿಯ ಅತಿ ದೊಡ್ಡ ಅಂಶ.

ಅಷ್ಟರಲ್ಲಿ ಇಡೀ ಕಟ್ಟಡದಲ್ಲೆಲ್ಲಾ ಕಟುವಾದ ಫೀನಾಯಲ್‍ನ ವಾಸನೆಯೂ ಅಡರಿತು. ಒಂದು ಒಳ್ಳೆಯ ಸಂಸ್ಥೆ ಎಂದೂ ಕಡೆಗಣಿಸದ ಚಿಕ್ಕ ಅಂಶಗಳಲ್ಲೆಲ್ಲಾ ಅತೀ ದೊಡ್ಡ ಅಂಶವೆಂದರೆ ಸ್ವಚ್ಛತೆ. ಶೌಚಾಲಯದಲ್ಲಿ ಶುಭ್ರತೆ, ಹಳೆಯದಾದರೂ ಬಳಕೆಗೆ ಹಿತವಾದ ಪೀಠೋಪಕರಣಗಳು, ಕರೆಕಟ್ಟದೇ ಇರುವ ಲೋಟಗಳು, ಮೆಟ್ಟಿಲ ತುದಿಗಳಲ್ಲಿ ಜಾರಿಕೆಯನ್ನು ತಪ್ಪಿಸಲು ಅಳವಡಿಸಿದ್ದ ಪಟ್ಟಿಗಳು ಇವೆಲ್ಲಾ ಅಚ್ಚುಕಟ್ಟುತನಕ್ಕೆ ಸಾಕ್ಷಿ. ಇದರರ್ಥ ಕಟ್ಟಡಗಳು ಸ್ವಚ್ಛವಾಗಿದ್ದರೆ, ವಿಜ್ಞಾನ ಚೆನ್ನಾಗಿ ಬೆಳೆಯುತ್ತದೆ ಎಂದಲ್ಲ. ಬದಲಾಗಿ, ವಿಜ್ಞಾನವನ್ನು ಚೆನ್ನಾಗಿ ಮಾಡುವ ಸಂಸ್ಥೆಗಳು ತಮ್ಮ ಕಟ್ಟಡಗಳನ್ನೂ ಸ್ವಚ್ಛವಾಗಿಟ್ಟುಕೊಳ್ಳುತ್ತವೆ ಎಂದು.

ನಂತರದ ಕಾರ್ಯಕ್ರಮ ಸ್ಯಾಟಲೈಟುಗಳನ್ನು ಜೋಡಿಸುವ "ಕ್ಲೀನ್ ರೂಮ್". ಒಂದು ಉಪಗ್ರಹದಲ್ಲಿರುವ ಮಿಲಿಯಾಂತರ ವಿದ್ಯುತ್ ಸಂಪರ್ಕ ಕೊಂಡಿಗಳಲ್ಲಿ ಒಂದೇ ಒಂದು ಸಣ್ಣ ಕೊಂಡಿ ಹಾಳಾದರೂ, ಕೋಟ್ಯಾಂತರ ರೂಪಾಯಿಗಳ ಇಡೀ ಉಪಗ್ರಹವೇ ಅನುಪಯುಕ್ತವಾಗುತ್ತದೆ. ಹಾಗಾಗಿ ನಮ್ಮ ದೇಹದಿಂದ, ಕೂದಲಿನಿಂದ, ಬೆರಳ ತುದಿಯಲ್ಲಿ, ಸರ, ಬಳೆ, ಪೆನ್ನು, ವಾಚುಗಳಂತಹ ಲೋಹದಿಂದ ಸ್ಟಾಟಿಕ್ ವಿದ್ಯುತ್ ಕಣಗಳು ಹರಿಯದಂತೆ ಸಂಪೂರ್ಣ ಸ್ವಚ್ಛ ಪರಿಸರ ಕಡ್ಡಾಯ. ಮೊದಲ ಮಹಡಿಯ ಗಾಜಿನ ಗೋಡೆಯ ಆಚಿನಿಂದ ನಮಗೆ ಕ್ಲೀನ್ ರೂಮಿನ ದರ್ಶನ. ಅಲ್ಲಿ ಒಂದಷ್ಟು ಯುವ ವಿಜ್ಞಾನಿಗಳು ವಿಶಾಲವಾದ ಮೇಜಿನ ಸುತ್ತ ನಿಂತುಕೊಂಡು ಸಣ್ಣಸಣ್ಣ ಉಪಕರಣಗಳನ್ನು ಜೋಡಿಸುತ್ತಿದ್ದರು. ಕ್ಯಾಸಿನೋಗಳಲ್ಲಿ ಜೂಜಾಡಲು ಜನ ಗುಂಪು ಕಟ್ಟಿರುತ್ತಾರಲ್ಲ ಹಾಗೆ. ಶಬ್ದನಿರೋಧಕವಾದ ಗಾಜಿನ ಈಚೆಯಿಂದ ಅವರ ಓಡಾಟ ಗಮನಿಸುತ್ತಿದ್ದರೆ ಯಾವುದೇ ಆತುರವಿಲ್ಲದೇ ಜೋಪಾನವಾಗಿ ಹೆಜ್ಜೆಹಾಕುತ್ತಿದಂತೆ ಕಾಣುತ್ತಿತ್ತು, ಅಂಟಾರ್ಟಿಕಾದ ಮಂಜಿನ ಗೆಡ್ಡೆಗಳ ಮೇಲೆ ನಡೆಯುವ ಪೆಂಗ್ವಿನ್‍ಗಳಂತೆ. ಅವರೆಲ್ಲಾ ಹಾಗೆ ನಡೆಯುತ್ತಿದ್ದುದಕ್ಕೆ ಕಾರಣ ಅವರು ಧರಿಸಿದ್ದ ಅಗಲವಾದ "ಸ್ಟ್ಯಾಟಿಕ್-ವಿದ್ಯುತ್-ನಿರೋಧಕ" ಚಪ್ಪಲಿಗಳು. ನಮಗೆ ಇದೊಳ್ಳೆ ಮೋಜಿನ ವಿಚಾರ. ಆದರೆ, ಶ್ರೀನಿವಾಸನ್‍ಗಲ್ಲ. ಯಾಕೆಂದರೆ, ಸ್ಟ್ಯಾಟಿಕ್-ನಿರೋಧಕ ಚಪ್ಪಲಿ ಅಂದರೆ ತಮಾಷೆ ಅಲ್ಲ. ಅದು ಸಿಕ್ಕಾಪಟ್ಟೆ ಸೀರಿಯಸ್ ವಿಚಾರ. ಕೋಟ್ಯಂತರ ರೂಪಾಯಿನ ಸ್ಯಾಟಲೈಟ್‍ಗಳ ಸಾವು ಬದುಕಿನ ವಿಚಾರ. ಜೊತೆಗೇ, ನನ್ನ ಪಟ್ಟಿಗೆ ಸೇರಿಸಿಕೊಳ್ಳಲು ಮತ್ತೊಂದು ಅಂಶ. ಮಿಥ್ ಅಥವಾ ಪುರಾಣನಿರ್ಮಾಣ. ಸಾಮಾನ್ಯವಾಗಿ ವಿಚಾರವಂತರು ಮಿಥ್‍ಗಳನ್ನು ಎಷ್ಟೇ ಟೀಕಿಸಿದರೂ, ಒಂದು ಪರಿಪಕ್ವ ಸಂಸ್ಥೆಯ ಹೆಗ್ಗುರುತೇ ಇಂತಹ ಮಿಥ್‍ಗಳು ಅಥವಾ ಪುರಾಣನಿರ್ಮಾಣ. ಒಂದು ಸಂಸ್ಥೆ ಮಾಡುವ ಕೆಲಸಗಳ ಪ್ರಾಮುಖ್ಯತೆ, ಅದರ ರಹಸ್ಯ, ಪ್ರಭಾವ, ಶಕ್ತಿ ಇವುಗಳ ಬಗ್ಗೆ ಇರುವ ಮಿಥ್‍ಗಳು ಆ ಸಂಸ್ಥೆಯ ಜನ ತಮ್ಮ ಕೆಲಸವನ್ನು ಮತ್ತು ತಮ್ಮ ಸಂಸ್ಥೆಯನ್ನು ಹೇಗೆ ಗ್ರಹಿಸುತ್ತಾರೆ ಎನ್ನುವುದರ ದ್ಯೋತಕ. ತಾವು ಮಾಡುತ್ತಿರುವುದು ಮುಖ್ಯವಾದದ್ದು ಎನ್ನುವುದಕ್ಕೆ ಇದು ಒಂದು ಬಲವಾದ ಸೂಚನೆ. ಸುಖಾಸುಮ್ಮನೆ ಯಾರೂ ಇಂತಹ ಮಿಥ್‍ಗಳನ್ನು ತುಂಬಾ ದಿನ ನಂಬಲು ಸಾಧ್ಯವಿಲ್ಲ. ಅದನ್ನು ಜನ ನಂಬುತ್ತಿದ್ದಾರೆಂದರೆ ಅರ್ಥ ಮಿಥ್‍ಗಳು ತಮ್ಮ ಕೆಲಸದ ಮಹತ್ವವನ್ನು ವ್ಯಾಖ್ಯಾನಿಸಿಕೊಳ್ಳಲು ಸಹಾಯ ಮಾಡುತ್ತಿದೆ ಎಂದು. ನನಗೆ ನಾನು ಕೆಲಸ ಮಾಡುವ ಸಂಸ್ಥೆ ನೆನಪಾಯಿತು. ಅಲ್ಲಿ ನಾವೆಲ್ಲರೂ ಸ್ವಯಂಘೋಷಿತ ಮೂರ್ತಿಭಂಜಕರೇ. ಯಾಕೆಂದರೆ ಅಲ್ಲಿ ಯಾವುದೂ ಮಹತ್ವವಾದದ್ದಲ್ಲ. ಯಾವುದೂ ಮಿಥಿಕಲ್ ಅಲ್ಲ. ಎಲ್ಲವನ್ನೂ ಚಾಲಾಕಿ ರಾಜಕೀಯ ಲೆಕ್ಕಾಚಾರಗಳಿಗೆ ಇಳಿಸಿಬಿಡಬಹುದು.

ನಮ್ಮ ಭೇಟಿ ಮುಗಿಸಿ ಹೊರಡುವ ಹೊತ್ತಿಗೆ ಯಾರೋ ನಮ್ಮ ಪರವಾನಗಿ ಪತ್ರಗಳನ್ನು ವಾಪಸ್ಸು ತೆಗೆದುಕೊಂಡರು. ನಾವು ಗೇಟನ್ನು ಬಿಡುವ ಮುನ್ನ, ಇಸ್ರೊ ಕ್ಯಾಂಟೀನ್‍ನಲ್ಲಿ ಊಟ ಮಾಡಿದೆವೇ ಎಂದು ಸೆಕ್ಯೂರಿಟಿಯವನು ವಿಚಾರಿಸಿದ. ಅಲ್ಲಿ ಊಟ ತುಂಬಾ ಚೆನ್ನಾಗಿರುತ್ತದೆ ಎಂದು ಅವನ ಅನುಭವ. ನಮ್ಮ ಭೇಟಿಯ ಉದ್ದಕ್ಕೂ ಯಾರಾದರೂ ಒಬ್ಬರು ನಮ್ಮ ಜೊತೆಗಿದ್ದು, ನಮ್ಮನ್ನು ಗಮನಿಸಿ, ನಮಗೆ ಸಲಹೆಸೂಚನೆ ಕೊಡುತ್ತಿದ್ದರು. ಈ ಸಂಸ್ಥೆ ಹೊರಗಿನವರಾದ ನಮ್ಮ ಬಗ್ಗೆ ಇಷ್ಟು ಗಮನ ಹರಿಸಿತ್ತು. ಯಾಕೆಂದರೆ, ಅದಕ್ಕೆ ತನ್ನ ಕೆಲಸದ ಬಗ್ಗೆ ಅಷ್ಟು ಕಾಳಜಿ ಇತ್ತು.   

Comments

Popular posts from this blog

ಸ್ಟ್ರಕ್ಚರಲಿಸಂ (ರಚನಾವಾದ/ರಾಚನಿಕವಾದ)

ಮಾರ್ಕ್ಸ್‌‌‌ ವಾದ

ಸುಖ-ಸಂತೋಷಕ್ಕೆ ಬೇಕಾಗುವುದೇನು? ಸಾಕಾಗುವುದೆಷ್ಟು?