ಕಲಿಯುವುದನ್ನು ಅರಿತು ಕಲಿಯಿರಿ
ಕಲಿಸುವವರಿಗೆ ತಾವು ಕಲಿಸುವುದರ ಬಗ್ಗೆ, ಅಂದರೆ ಜ್ಞಾನದ ಬಗ್ಗೆ ಮತ್ತು ಕಲಿಕೆಯ ಬಗ್ಗೆ, ಎಷ್ಟೇ ಸ್ಥೂಲವಾಗಿಯಾದರೂ ಸರಿ, ತಮ್ಮದೇ ಆದ ಒಂದು ಫಿಲಾಸಫಿ ಇರುತ್ತದೆ. ಇದೇನೂ ವ್ಯಕ್ತವಾಗಿ, ಪ್ರಜ್ಞಾಪೂರ್ವಕವಾಗಿ ಅಥವಾ ಸರಿಯಾಗಿ ಇರಬೇಕೆಂದೇನೂ ಇಲ್ಲ. ಕಲಿಸುವ ಕೆಲಸಕ್ಕೆ, ಕಲಿಸುವ ಹೊತ್ತಿಗೆ ಉಪಯೋಗಕ್ಕೆ ಬರುವಂತಿದ್ದರೆ ಸಾಕು. ನಾನು ಹೋಗುವ ಹೇರ್‍ಕಟಿಂಗ್ ಅಂಗಡಿಯ ಕ್ಷೌರಿಕನಿಗೂ ತನ್ನ ಕಸುಬಿನ ಬಗ್ಗೆ ಹೀಗೇ ಒಂದು ನಿಖರವಾದ ಫಿಲಾಸಫಿ ಇದೆ. ಅವನ ಅಂಗಡಿಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ್ದ ಒಬ್ಬ ಹುಡುಗ ಒಮ್ಮೆ ನನ್ನ ಬಲ ಹಣೆಯ ಸುತ್ತ ಸ್ವಲ್ಪ ಜಾಸ್ತಿಯೇ ಕೂದಲು ಕತ್ತರಿಸಿದ. ಅದರ ಪರಿಣಾಮವಾಗಿ ನನ್ನ ಇಡೀ ಮುಖವೇ ಸ್ವಲ್ಪ ಎಡಕ್ಕೆ ವಾಲಿದಂತೆ ಕಾಣಿಸುತ್ತಿತ್ತು. ಅದಕ್ಕೆ ನಮ್ಮ ಕ್ಷೌರಿಕ ಆ ಹುಡುಗನಿಗೆ, "ಕಟಿಂಗು ಅಂದರೇ ಬ್ಯಾಲೆನ್ಸ್. ಬ್ಯಾಲೆನ್ಸ್ ಅಂದರೇ ಕಟಿಂಗು ಕಣಲೇ ಬದ್ಮಾಶ್" ಎಂದು ಗದರಿಸಿದ.
ಒಂದು ಉತ್ತಮ ಫಿಲಾಸಫಿಗೆ ಇರಬೇಕಾದ ಎರಡು ಲಕ್ಷಣಗಳು ಈ ಸೂತ್ರಕ್ಕಿದೆ. ಮೊದಲನೆಯದು, ಒಂದು ಇಡೀ ಜ್ಞಾನಕ್ಷೇತ್ರವನ್ನು ಒಟ್ಟಾಗಿ ಹಿಡಿದಿಡುವ ಕೇಂದ್ರ ಪರಿಕಲ್ಪನೆಗಳು ಯಾವುದು ಎಂದು ಗುರುತಿಸುವುದು (ಉದಾಹರಣೆಗೆ, ಇಡೀ ಕಂಪ್ಯೂಟರ್ ವಿಜ್ಞಾನ ನಿಂತಿರುವುದೇ ಬೈನರಿ ಆಪರೇಶನ್‍ಗಳ ಮೇಲೆ. ಮತ್ತು ತಲೆಕ್ಷೌರ ನಿಂತಿರುವುದೇ ಬ್ಯಾಲೆನ್ಸ್ ಮೇಲೆ). ಎರಡನೆಯದು, ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ನಾವು ಗುರುತಿಸುವ ವಸ್ತುಗಳಿಗೂ ಮತ್ತು ಬಳಸುವ ಕ್ರಮಗಳಿಗೂ ಇರುವ ಸಂಬಂಧವನ್ನು ತೋರಿಸುವುದು (ಉದಾಹರಣೆಗೆ, ಚಿತ್ರಕಲೆಯಲ್ಲಿ ನೆರಳು-ಬೆಳಕಿನ ವ್ಯತ್ಯಾಸಗಳನ್ನು ತೋರಿಸುವುದು ಎಂದರೆ ಬಣ್ಣಗಳ "ಟೆಂಪರೇಚರ್" ಅಥವಾ ಗಾಢತೆಯನ್ನು ಬದಲು ಮಾಡುವುದು ಎಂದರ್ಥ. ಮತ್ತು ತಲೆಕ್ಷೌರ ಮಾಡುವುದು ಎಂದರೆ, ತಲೆಯ ಬೇರೆಬೇರೆ ಭಾಗದ ಕೂದಲಿನ ಉದ್ದ ಮತ್ತು ಸಾಂದ್ರತೆಯನ್ನು ಒಂದು ಸಾಪೇಕ್ಷವಾದ ಸಮತೋಲನಕ್ಕೆ ತರುವುದು ಎಂದರ್ಥ). ಇದರಲ್ಲಿ ವಿನ್ಯಾಸಕ್ಕೆ ಸಂಬಂಧಿಸಿದ ಮೂರನೆಯ ಲಕ್ಷಣವೂ ಇದೆ. ಈ ವಾಕ್ಯ ಯಾವುದನ್ನು ಕುರಿತು ಹೇಳುತ್ತಿದೆಯೋ ಅದನ್ನು ಪ್ರತ್ಯಕ್ಷವಾಗಿ ಮಾಡಿ ತೋರಿಸುತ್ತಿದೆ (ಈ ವಾಕ್ಯ ಇರುವುದು ಬ್ಯಾಲೆನ್ಸ್ ಬಗ್ಗೆ. ಆದರೆ ಅದಷ್ಟೇ ಅಲ್ಲದೇ, ಈ ವಾಕ್ಯದ ಎರಡು ಭಾಗಗಳ ನಡುವೆಯೇ ಒಂದು ಸಮತೋಲನದ ಬ್ಯಾಲೆನ್ಸ್ ಇದೆ).
ಒಬ್ಬ ಶಿಕ್ಷಕನಾಗಿ ನನಗೂ ನನ್ನ ಕಸುಬಿನ ಬಗ್ಗೆ ಈ ರೀತಿಯೇ ಒಂದು ಇಷ್ಟದ ಫಿಲಾಸಫಿ ಇದೆ. ಅದಕ್ಕೆ ನಮ್ಮೂರಿನ ಕ್ಷೌರಿಕನ ಸೂತ್ರದಷ್ಟು ನಿಖರವಾಗಿ, ಹಿರಿದಾದ ವಿಚಾರವನ್ನು ಕಿರಿದಾಗಿ, ಅಡಕವಾಗಿ ಹೇಳುವ ಶಕ್ತಿ ಇಲ್ಲದಿದ್ದರೂ, ಒಂದು ಮಟ್ಟಿಗೆ ನನಗೆ ಸಹಾಯಕ್ಕೆ ಬಂದಿದೆ. ಆ ಸೂತ್ರ ಕನ್ಸರ್ವೇಟಿವ್ ಇಂಗ್ಲಿಷ್ ತತ್ವಶಾಸ್ತ್ರಜ್ಞನಾದ ಮೈಕಲ್ ಓಕ್‍ಶಾಟ್‍ನದ್ದು. "Education does not begin in ignorance; but in error" ಎಂದು ಅವನ ಮಾತು. "ಶಿಕ್ಷಣ ಪ್ರಾರಂಭವಾಗುವುದು ಅಜ್ಞಾನದಲ್ಲಲ್ಲ; ಬದಲಾಗಿ ದೋಷದಲ್ಲ್ಲಿ". ಈ ವಾಕ್ಯ ಮೇಲುನೋಟಕ್ಕೆ ಸರಳವಾಗಿದ್ದರೂ ಇದರ ಪರಿಣಾಮಗಳನ್ನು ನಿಧಾನವಾಗಿ ಗುರುತಿಸಬೇಕು.
ನಮಗೆ ತಿಳಿಯದ ವಿಚಾರವನ್ನು ತಿಳಿಸುವುದು ಶಿಕ್ಷಣದ ಉದ್ದೇಶವಲ್ಲ. ಅಂಥದ್ದನ್ನು ಮಾಡುವುದಕ್ಕೆ ಟೆಲಿಫೋನ್ ಡೈರೆಕ್ಟರಿಯೇ ಮೊದಲಾಗಿ ಹಲವಾರು ಮೂಲಗಳಿವೆ. ಅಜ್ಞಾನ ಎನ್ನುವುದು ಸಾಮಾನ್ಯವಾಗಿ ವಸ್ತುವಿಷಯಗಳಿಗೆ ಸಂಬಂಧಿಸಿದ್ದು. ಪನಾಮಾ ಕಾಲುವೆಯ ಉದ್ದ ಎಷ್ಟು? ಆಫ್ರಿಕಾದ ಆನೆಗಳು ಯಾವ ಪ್ರಭೇದಕ್ಕೆ ಸೇರಿದವು? ಅಮೆರಿಕಾದ ಸ್ವಾತಂತ್ರ್ಯ ಸಂಗ್ರಾಮ ನಡೆದಿದ್ದು ಯಾವ ವರ್ಷ? ಇತ್ಯಾದಿ. ಇವುಗಳ ಬಗ್ಗೆ ನಮಗೆ ಅಜ್ಞಾನ ಇರುವುದಕ್ಕೆ ಸಾಧ್ಯ. ಆದರೆ ಇಂಥ ಅಜ್ಞಾನವನ್ನು ದೂರ ಮಾಡುವುದು ಶಿಕ್ಷಣದ ಕೆಲಸವಲ್ಲ. ಅಂಥ ಕೆಲಸಕ್ಕೆ ಸ್ಕೂಲು-ಕಾಲೇಜುಗಳೂ ಬೇಡ. ಗೂಗಲ್ ಒಂದಿದ್ದರೆ ಸಾಕು. ಬದಲಾಗಿ, ನಾವು ಮಾಡುತ್ತಿರುವ ಕೆಲಸ, ನೋಡುತ್ತಿರುವ ಕ್ರಮ ಇವುಗಳಲ್ಲಿ ನುಸುಳುವ ದೋಷಗಳನ್ನು ಗುರುತಿಸುವುದು, ತಿದ್ದುವುದು ಶಿಕ್ಷಣದ ಕೆಲಸ. ದೋಷ ಆಗುವುದು ನಮ್ಮ ಕ್ರಿಯೆಗಳಲ್ಲಿ. ಅಂದರೆ, ಯಾವುದೋ ಒಂದು ಸಂದರ್ಭವನ್ನು ನಿಭಾಯಿಸುವ ರೀತಿಯಲ್ಲಿ ತಪ್ಪಾಗುವುದು ಸಾಧ್ಯ. ಒಂದು ಕೆಲಸದಲ್ಲಿ ಅಥವಾ ಒಂದು ಕ್ರಮದಲ್ಲಿ ದೋಷ ನುಸುಳುವುದು ಯಾಕೆ ಮತ್ತು ಯಾವಾಗ? ನಾವು ಅದನ್ನು ಮಾಡತೊಡಗಿದಾಗಷ್ಟೆ?
ಉದಾಹರಣೆಗೆ, ಕೆಸುವಿನ ಸೊಪ್ಪನ್ನು ಹುಣಿಸೆ ರಸದಲ್ಲಿ ನೆನೆಸದೇ ನೇರವಾಗಿ ಅದರಲ್ಲಿ ಪತ್ರೊಡೆ ಮಾಡಿದರೆ, ಅದು ನಾಲಗೆಗೆ ತುರಿಕೆ ಉಂಟುಮಾಡುತ್ತದೆ. ಗುಣಾಕಾರವನ್ನು ಸರಿಯಾಗಿ ಕಲಿಯದೇ ಭಾಗಾಕಾರವನ್ನು ಮಾಡಲು ಹೋದರೆ ಲೆಕ್ಕ ತಪ್ಪುತ್ತದೆ. ಅಂದಮೇಲೆ, ಶಿಕ್ಷಣದ ಸಂದರ್ಭದಲ್ಲಿ, ಒಂದು ವಿಷಯದಲ್ಲಿ ತಿಳಿಯಬೇಕಾದದ್ದು ಏನು ಎಂದು ಕೇಳುವುದು ಸರಿಯಾದ ಪ್ರಶ್ನೆಯಲ್ಲ. ಬದಲಾಗಿ, ಆ ವಿಷಯದಲ್ಲಿ ಮಾಡಲು ಕಲಿಯಬೇಕಾದದ್ದು ಏನು ಎಂದು ಕೇಳುವುದೇ ಸರಿಯಾದ ಪ್ರಶ್ನೆ. ಇದನ್ನೇ ಇತ್ತೀಚೆಗೆ "ಕಾಂಪಿಟೆನ್ಸಿ" ಎಂದೂ ಕರೆಯುತ್ತಾರೆ. ಮಾಡಲು ಕಲಿಯಬೇಕಾದದ್ದು ಏನು ಮತ್ತು ಹೇಗೆ ಎನ್ನುವ ಪ್ರಶ್ನೆಯ ಸಂದರ್ಭದಲ್ಲಿ ಅದಕ್ಕೆ ತಕ್ಕಂತೆ ತಿಳಿಯಬೇಕಾದದ್ದು ಏನು ಎನ್ನುವ ಪ್ರಶ್ನೆ ಬರುತ್ತದೆಯೇ ವಿನಃ, ಸ್ವತಂತ್ರವಾಗಿ ಆ ಪ್ರಶ್ನೆಗೆ ಯಾವುದೇ ಉತ್ತರವಿಲ್ಲ. ನಾವು ಏನೇನನ್ನು ತಿಳಿಯಬೇಕು ಎಂದು ಪ್ರಶ್ನೆ ಕೇಳಿಕೊಳ್ಳಿ. ಅದರ ಅಸಂಬದ್ಧತೆ ತಕ್ಷಣ ನಿಮಗೇ ತಿಳಿಯುತ್ತದೆ.
ಓಕ್‍ಶಾಟ್‍ನ ಪ್ರಕಾರ, ಒಂದು ವಿಷಯದಲ್ಲಿ ಮಾಡಲು ಕಲಿಯಬೇಕಾದದ್ದು ಏನು ಎನ್ನುವ ಪ್ರಶ್ನೆಗೆ ಉತ್ತರವಿಲ್ಲದ ಅಧ್ಯಾಪಕ ಒಬ್ಬ ಕೆಟ್ಟ ಅಧ್ಯಾಪಕ. ಈ ಪ್ರಶ್ನೆಗೆ ಉತ್ತರವಿರುವ ಅಧ್ಯಾಪಕ, ಆತನ ಉತ್ತರದಲ್ಲಿ ದೋಷವಿದ್ದರೂ, ಒಬ್ಬ ಒಳ್ಳೆಯ ಅಧ್ಯಾಪಕ. ಆದರೆ, ಸಾಮಾನ್ಯವಾಗಿ ಒಂದು ವಿಷಯದಲ್ಲಿ ತಿಳಿಯಬೇಕಾದದ್ದು ಏನು ಎಂದು ಕೇಳಿದರೆ, ಅಧ್ಯಾಪಕರು ಸುದೀರ್ಘವಾದ ಉತ್ತರ ಕೊಡುತ್ತಾರೆ. ಉದಾಹರಣೆಗೆ, ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಗಳು ತಿಳಿಯಬೇಕಾದದ್ದು ಏನು ಎಂದು ಒಬ್ಬ ಇಂಗ್ಲಿಷ್ ಮೇಷ್ಟ್ರನ್ನು ಕೇಳಿ ನೋಡಿ. ಚಾಸರ್, ಶೇಕ್ಸ್‍ಪಿಯರ್, ಮಿಲ್ಟನ್, ರೊಮ್ಯಾಂಟಿಕ್ಸ್, ನಿಯೋ-ಕ್ಲಾಸಿಕಲ್ಸ್, ಮಾಡರ್ನಿಸ್ಟ್, ಪೋಸ್ಟ್-ಮಾಡರ್ನಿಸ್ಟ್ ಎಂದು ಉದ್ದುದ್ದ ಪಟ್ಟಿ ಕೊಡುತ್ತಾರೆ. ಅವೆಲ್ಲಾ ಸರಿ. ಈಗ ಇದರಲ್ಲಿ ಒಬ್ಬ ವಿದ್ಯಾರ್ಥಿ ಮಾಡಲು ಕಲಿಯಬೇಕಾದದ್ದು ಏನು ಎಂದು ಕೇಳಿ. ಆಗ, ಅವರ ಉತ್ತರದಲ್ಲಿ ಆತ್ಮವಿಶ್ವಾಸದ ಕೊರತೆ ನಿಮಗೆ ಎದ್ದು ಕಾಣುತ್ತದೆ. ಓದುವುದು, ಬರೆಯುವುದು, ವಿಮರ್ಶೆ ಮಾಡುವುದು ಎಂದು ಏನೋ ಜಾಳುಜಾಳಾಗಿ ಹೇಳಿ ತಪ್ಪಿಸಿಕೊಳ್ಳುತ್ತಾರೆ.
ಅಂದಮೇಲೆ, ನಮ್ಮ ತಿಳುವಳಿಕೆ ಎನ್ನುವುದು ಖಾಲೀ ಸ್ಲೇಟಿನ ಮೇಲೆ ಮೂಡಿಸುವ ಅಕ್ಷರದಂತಲ್ಲ. ನಮ್ಮ ತಿಳುವಳಿಕೆ ಎನ್ನುವುದು ಒಂದು ರೂಬಿಕ್ಸ್ ಕ್ಯೂಬ್ ಅನ್ನು ತಿರುಗಿಸಿ ಸರಿಯಾಗಿ ಜೋಡಿಸುವುದನ್ನು ಕಲಿತುಕೊಂಡಂತೆ. ಅದರಲ್ಲಿ ಆಗಲೇ ಬೇರೆಬೇರೆ ಬಣ್ಣದ ಪಟ್ಟಿಕೆಗಳಿವೆ. ಅವು ಹೇಗೆಹೇಗೋ ಒಂದಕ್ಕೊಂದು ಜೋಡಿಸಿಕೊಂಡಿವೆ. ಒಂದನ್ನು ಸರಿಮಾಡಲು ತಿರುಗಿಸಿದರೆ, ಇನ್ನೊಂದು ಕಡೆ ಅದು ಕೈಕೊಡುತ್ತದೆ. ರೂಬಿಕ್ಸ್ ಕ್ಯೂಬಿನ ಒಂದು ಮುಖವನ್ನು ಸರಿ ಮಾಡಬೇಕಾದರೆ ಮತ್ತೊಂದು ಮುಖದ ಬಗ್ಗೆಯೂ ತಲೆ ಕೆಡಿಸಿಕೊಳ್ಳಬೇಕು. ಹಾಗೆಯೇ, ನಮ್ಮ ಬದುಕಿನಲ್ಲಿ ಯಾವಯಾವುದೋ ಅನುಭವಗಳು ಯಾವಯಾವ ರೀತಿಯಲ್ಲೋ ಬಂದು ಒಟ್ಟಾಗಿರುತ್ತವೆ. ಪ್ರತಿ ಹೊಸ ಅನುಭವ ಬಂದು ಸೇರಿದಾಗಲೂ ನಮ್ಮ ಅನುಭವಗಳ ಒಟ್ಟು ಮೊತ್ತ ಇಡಿಯಾಗಿ ಬದಲಾಗುತ್ತಾ ಹೋಗುತ್ತದೆ. ಈ ಉದಾಹರಣೆ ಗಮನಿಸಿ. ಚಿಕ್ಕ ಮಗು ಮೊದಲ ಬಾರಿ ಉರಿಯುವ ಮೇಣದ ಬತ್ತಿಯಲ್ಲಿ ಕೈಯಿಟ್ಟಾಗ ಕೈ ಸುಡುತ್ತದೆ. ಇದರಿಂದ ಬೆಂಕಿ ಸುಡುತ್ತದೆ ಎನ್ನುವ ಸತ್ಯ ತಿಳಿಯುತ್ತದೆ. ಮುಂದೊಂದು ದಿನ ಈ ಮಗು ಸರ್ಕಸ್ ನೋಡಲು ಹೋದಾಗ ಅಲ್ಲಿ ಒಬ್ಬ ಬಾಯಿಂದಲೇ ಬೆಂಕಿ ಉಗುಳುತ್ತಿದ್ದಾನೆ. ಆ ಆಶ್ಚರ್ಯ ಮಗುವಿನ ಅನುಭವ ಪ್ರಪಂಚವನ್ನು ಇಡಿಯಾಗಿ ಬದಲಾಯಿಸುತ್ತದೆ. ಮುಂದೊಂದು ದಿನ, ಸುಡುವುದು ಬೆಂಕಿಯಲ್ಲ. ಬೆಂಕಿಯೊಳಗಿನ ಶಾಖ. ಮತ್ತು ಬೆಂಕಿ ಇದ್ದರೂ ಶಾಖ ಇರದಂತೆ ಮಾಡಲು ಸಾಧ್ಯ ಎಂದು ತಿಳಿಯುತ್ತದೆ. ಹೀಗೆ, ಅನುಭವದಿಂದ ತಿಳಿಯುವ ಒಂದು ಸತ್ಯ ಮತ್ತೊಂದು ಅನುಭವದಿಂದ ಬದಲಾಗಿ, ಮಗದೊಂದು ಅನುಭವದಿಂದ ಪುನಃ ಒಟ್ಟಾಗಿ ಹೀಗೆ ಬೆಳೆಯುತ್ತಾ ಹೋಗುತ್ತದೆ.
ವಿದ್ಯೆ ಕಲಿಸುವವರಿಗೆ ಇದು ಯಾಕೆ ಮುಖ್ಯ ಎಂದೂ ತಿಳಿಯಬೇಕು. ಹೆಚ್ಚಿನ ಜನ ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳನ್ನು ಟೀಕಿಸುತ್ತಾ, ಆ ವಿದ್ಯಾರ್ಥಿಗಳಿಗೆ ವಿಷಯದ ಬೇಸಿಕ್ ಅಂಶಗಳೇ ಗೊತ್ತಿಲ್ಲ; ಇನ್ನು ಇಂಥವರಿಗೆ ಪಾಠ ಹೇಳುವುದು ಹೇಗೆ ಎಂದು ಮರುಗುತ್ತಿರುತ್ತಾರೆ. ಸಮಾಜಶಾಸ್ತ್ರದ ಅಥವಾ ರಸಾಯನಶಾಸ್ತ್ರದ ಬೇಸಿಕ್ ಅಥವಾ ಮೂಲಭೂತÀ ಅಂಶಗಳು ಯಾವುವು ಎಂದು ಹೇಳುವುದು ಹೇಗೆ? ನಿಮ್ಮ ಪ್ರಕಾರ ಸಮಾಜಶಾಸ್ತ್ರದ ಮೂಲಭೂತ ಅಂಶಗಳು ಎಂದರೆ ಕುಟುಂಬ, ರಾಜ್ಯ ವ್ಯವಸ್ಥೆ, ಜಾತಿ, ಸಮುದಾಯ ಇಂಥ ಪರಿಕಲ್ಪನೆಗಳನ್ನು ತಿಳಿದುಕೊಂಡಿರುವುದು. ಮತ್ತೊಬ್ಬನ ಪ್ರಕಾರ ಮೂಲಭೂತ ಅಂಶಗಳು ಎಂದರೆ ವೆಬರ್, ಡರ್ಕೀಮ್ ಮತ್ತು ಲೆವಿಸ್ಟ್ರಾಸ್ ಇಂಥÀವರನ್ನು ಓದಿಕೊಂಡಿರುವುದು. ಮಗದೊಬ್ಬರ ಪ್ರಕಾರ ಮೂಲಭೂತ ಅಂಶ ಎಂದರೆ ಒಂದು ಸಮಾಜದಲ್ಲಿ ಹದಿನೈದು ಇಪ್ಪತ್ತು ವರ್ಷ ಬದುಕಿರುವ ಅನುಭವ ಇರುವುದು. ಇಲ್ಲೆಲ್ಲಾ ಸಮಸ್ಯೆ ಏನೆಂದರೆ, ಸಮಾಜಶಾಸÀ್ತ್ರ ಎನ್ನುವುದನ್ನು ಒಂದಷ್ಟು ಸತ್ಯವಾಕ್ಯಗಳ ಮೊತ್ತ ಎನ್ನುವಂತೆ ನೋಡುತ್ತಿರುವುದು. ಈ ಸತ್ಯಗಳು ತಿಳಿಯಬೇಕಿದ್ದರೆ, ಇದರ ಮೊದಲು ಇನ್ನಷ್ಟು ಸತ್ಯಗಳು ತಿಳಿದಿರಬೇಕು ಎನ್ನುವುದು ಇಲ್ಲಿರುವ ಧೋರಣೆ.
ಆದರೆ, ನಿಜಕ್ಕೂ ಸಮಾಜಶಾಸ್ತ್ರವನ್ನು ಕಲಿಯುವುದು ಎಂದರೆ ಮಾನವರ ವ್ಯವಹಾರಗಳನ್ನು ನಮ್ಮ ದಿನನಿತ್ಯದ ಸರಿ-ತಪ್ಪು ಮತ್ತು ಧರ್ಮ-ಅಧರ್ಮದ ಭಾಷೆಯಲ್ಲಿ ನೋಡುವ ಕ್ರಮವನ್ನು ಬಿಟ್ಟು ಆ ವ್ಯವಹಾರಗಳು ನಡೆಯುತ್ತಿರುವುದರ ಹಿಂದಿರುವ ನಿಯಮಗಳನ್ನು ಹುಡುಕುವುದು ಎಂದರ್ಥ. ಹಾಗಾಗಿ, ನಮ್ಮ ದಿನನಿತ್ಯದ ಅನುಭವವನ್ನು ಪ್ರಶ್ನಿಸುವುದು ಯಾಕೆ ಮತ್ತು ಹೇಗೆ ಎನ್ನುವ ಕ್ರಮವನ್ನು ಕಲಿಯುವುದು ಮುಖ್ಯವೇ ವಿನಾ ವೆಬರ್‍ನನ್ನು ಓದುವುದು ಅಥವಾ ಕುಟುಂಬ ಮತ್ತು ಸಮುದಾಯದ ಡೆಫಿನಿಶನ್‍ಗಳನ್ನು ತಿಳಿದುಕೊಂಡಿರುವುದು ಮುಖ್ಯವಲ್ಲ. ಇಂತಹ ಕಲಿಕೆಗೆ ವೆಬರ್‍ನ ಓದಿನಿಂದ ಮತ್ತು ಸಮಾಜ ಎನ್ನುವ ಪರಿಕಲ್ಪನೆಯ ವಿವರಣೆಯಿಂದ ಪ್ರಯೋಜನವಾಗುತ್ತದೆ ಎನ್ನುವುದು ಸತ್ಯ. ಆದರೆ, ಆ ವಿವರಣೆಗಳೇ ಕಲಿಕೆಯ ಕೇಂದ್ರವಲ್ಲ. ಅವೆಲ್ಲಾ ಆ ಕಲಿಕೆಯ ಸಾಧನಗಳಷ್ಟೇ.
ಸಾಮಾನ್ಯವಾಗಿ ನಮ್ಮ ದೇಶದ ಹಬ್ಬಗಳಲ್ಲಿ ನಮ್ಮ ಜೀವನಕ್ಕೆ ಮುಖ್ಯವಾದ ವಸ್ತುಗಳನ್ನು ಓರಣವಾಗಿ ಜೋಡಿಸಿ ಪೂಜೆ ಮಾಡುವುದು ಸಂಪ್ರದಾಯ. ಆಯುಧ ಪೂಜೆಯಲ್ಲಿ ನಾವು ದಿನನಿತ್ಯ ಬಳಸುವ ಕತ್ತಿ, ಮಚ್ಚು, ಕಾರು, ಬಸ್ಸುಗಳನ್ನು ಪೂಜೆ ಮಾಡಿ ಅವುಗಳ ಬಗ್ಗೆ, ಮತ್ತು ಅವುಗಳನ್ನು ಒಳಗೊಂಡ ನಮ್ಮ ಕ್ರಿಯಾಕರ್ಮಗಳ ಬಗ್ಗೆ ಒಂದು ಅರಿವನ್ನು, ಒಂದು ಶ್ರದ್ಧೆಯನ್ನು ತಂದುಕೊಳ್ಳುತ್ತೇವಲ್ಲ? ಹಾಗೆಯೇ, ಶಿಕ್ಷಕರ ದಿನದಂದೂ ಶಿಕ್ಷಣದ ನಮ್ಮ ಕಸುಬಿನ ಬಗ್ಗೆ, ಅದರಲ್ಲಿ ಬಳಸುವ ಹತಾರಗಳ ಬಗ್ಗೆ ಒಂದು ಅರಿವನ್ನು, ಶ್ರದ್ಧೆಯನ್ನು ತಂದರೇ ಶ್ರೇಯಸ್ಸು.
***
ಪ್ರಜಾವಾಣಿ ೦೫.೯.೨೦೧೬

Comments
Post a Comment