ಸಬ್ಜೆಕ್ಟ್ / ಸಬ್ಜೆಕ್ಟಿವಿಟಿ


ಪಾಶ್ಚಿಮಾತ್ಯ ಚಿಂತನೆಯಲ್ಲಿ, ಅದರಲ್ಲೂ ಮುಖ್ಯವಾಗಿ ಸೆಕ್ಯುಲರ್ ಚಿಂತನೆಯಲ್ಲಿ, ವ್ಯಕ್ತಿ (individual) ಎನ್ನುವುದು ಒಂದು ಮುಖ್ಯವಾದ ಅಂಶ. ೧೭-೧೮ನೇ ಶತಮಾನದ ಎನ್‌‍ಲೈಟನ್‍ಮೆಂಟ್ ಯುಗದ ನಂತರ, ಭೌತಿಕ ವಿಜ್ಞಾನಗಳು ಮುನ್ನೆಲೆಗೆ ಬಂದವು. ಇದರ ಪರಿಣಾಮವಾಗಿ ಸಾಮುದಾಯಿಕ ಬದುಕಿನ ರೂಢಿಗಳು, ಕಟ್ಟಳೆಗಳು, ರಿಲಿಜಿಯಸ್ ವ್ಯವಸ್ಥೆಗಳು ಮತ್ತು ಮೌಲ್ಯಗಳು, ಪರಂಪರಾಗತವಾದ ಸಾಮಾಜಿಕ ಸಂಬಂಧಗಳು ಇವೆಲ್ಲ ಬಹಳ ಆಳವಾದ ವಿಮರ್ಶೆಗೆ ಪ್ರಶ್ನೆಗೆ ಒಳಪಟ್ಟವು. ಮನುಷ್ಯನಿಗೂ ಮಿಕ್ಕ ಜೀವಿಗಳಿಗೂ ಇರುವ ಅಂತರ, ಮನುಷ್ಯನ ಬುದ್ಧಿಶಕ್ತಿಯ ಕಾರಣದಿಂದ ಅವನಿಗೂ ಸುತ್ತಣ ಪ್ರಪಂಚಕ್ಕೂ ಇರುವ ಸಂಬಂಧ, ಪ್ರತಿಯೊಬ್ಬನು ತನ್ನ ಬದುಕನ್ನು ರೂಪಿಸಿಕೊಳ್ಳಬೇಕಾದ ಅಗತ್ಯ, ಮತ್ತು ಇವೆಲ್ಲಕ್ಕೂ ಕೇಂದ್ರವಾಗಿ ಮನುಷ್ಯನ ಜ್ಞಾನದ ಸತ್ಯಾಸತ್ಯತೆಯನ್ನು ಸ್ಥಾಪಿಸುವ ಬಗೆ, ಇಂತಹ ಹಲವಾರು ಪ್ರಶ್ನೆಗಳು ಪ್ರಮುಖವಾಗಿ ಬೆಳೆದವು. ಇದರಲ್ಲೆಲ್ಲಾ ಇದ್ದ ಮುಖ್ಯ ವಿಚಾರವೆಂದರೆ “ಮನುಷ್ಯನಾಗಿರುವುದು ಎಂದರೇನು?” ಎನ್ನುವ ಪ್ರಶ್ನೆ.
ಮನುಷ್ಯನಾಗಿರುವುದು ಎಂದರೆ ಒಬ್ಬ ಸಬ್ಜೆಕ್ಟ್ ಆಗಿರುವುದು ಎನ್ನುವುದು ಪಾಶ್ಚಿಮಾತ್ಯ ಚಿಂತನೆ ಕಂಡುಕೊಂಡ ಉತ್ತರ. ಹಾಗೆಂದರೇನು?
ಕಾರಣ ಮತ್ತು ವ್ಯಾಖ್ಯಾನಗಳ ವ್ಯತ್ಯಾಸ
ಘಟನೆಗಳನ್ನು ಕುರಿತು ಮಾತನಾಡುವಾಗ ಸಾಮಾನ್ಯವಾಗಿ ನಾವು ಕಾರಣಗಳನ್ನು ನೀಡುತ್ತೇವೆ. ಅಂದರೆ causeಗಳನ್ನು ಕೊಡುತ್ತೇವೆ. ಮಳೆ ಯಾಕೆ ಬರುತ್ತದೆ? ನೀರು ಆವಿಯಾಗಿ ಘನೀಕೃತವಾಗುವುದರಿಂದ ಮಳೆ ಬರುತ್ತದೆ. ಜ್ವರ ಏಕೆ ಬರುತ್ತದೆ? ದೇಹದಲ್ಲಿ ವೈರಾಣುಗಳ ಚಟುವಟಿಕೆ ಹೆಚ್ಚಾಗುವುದರಿಂದ ಜ್ವರ ಬರುತ್ತದೆ, ಇತ್ಯಾದಿ. ಆದರೆ, ಮನುಷ್ಯರ ಭಾವನಾತ್ಮಕ, ನೈತಿಕ ಮತ್ತು ಬೌದ್ಧಿಕ ವಿಚಾರಗಳಿಗೆ ಸಂಬಂಧಿಸಿದ ಹಾಗೆ ಇಂತಹ ಕಾರಣಗಳನ್ನು ಅಂದರೆ causal explanationಗಳನ್ನು ಕೊಟ್ಟರೆ ಒಂದು ರೀತಿಯಲ್ಲಿ ಮನುಷ್ಯರ ಬದುಕನ್ನು ವಿಕೃತಗೊಳಿಸಿದಂತಾಗುತ್ತದೆ. ಉದಾಹರಣೆಗೆ, ಒಂದು ಸುಂದರ ಕಲಾಕೃತಿಯನ್ನು ಕಂಡಾಗ ಏಕೆ ಸಂತೋಷವಾಗುತ್ತದೆ? ಒಂದು ಹೃದಯವಿದ್ರಾವಕ ಘಟನೆ ನೋಡಿದಾಗ ಏಕೆ ದುಃಖವಾಗುತ್ತದೆ? ಒಂದು ಹೊಸ ವೈಜ್ಞಾನಿಕ ಸಿದ್ದಾಂತ ಸಮರ್ಪಕವಾಗಿ ಕೆಲಸ ಮಾಡಿದಾಗ ಏಕೆ ಸಂತೋಷವಾಗುತ್ತದೆ? ಇಂತಹ ಪ್ರಶ್ನೆಗಳಿಗೆ causal ಉತ್ತರಗಳನ್ನು ಹೇಳಿದರೆ ಹಾಸ್ಯಾಸ್ಪದವಾಗುತ್ತದೆ. ಸುಂದರ ಕಲಾಕೃತಿಗಳು ನಮ್ಮ ಮಿದುಳಿನ ಕಾರ್ಟೆಕ್ಸ್‍ಅನ್ನು ಉದ್ದೀಪಿಸುತ್ತದೆ. ಅವು ನಮ್ಮ ಅಂಗಾಂಗಗಳಿಗೆ ಕೆಲವು ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ಆಗ ನಮ್ಮ ಅಂಗಾಂಗಗಳ ಮಾಂಸಖಂಡಗಳ ಬಿಗಿತ ಸಡಿಲವಾಗಿ ಸಂತೋಷ ಎಂದು ಕರೆಯಬಹುದಾದ ಸ್ಥಿತಿಯು ಉಂಟಾಗುತ್ತದೆ. ಇಂತಹ ಉತ್ತರ ಎಷ್ಟೇ ಸರಿ ಎನಿಸಿದರೂ ಕಲಾಕೃತಿಗಳಿಂದ ಸಂತೋಷವಾಗುವ, ಸಂಕಟಗಳಿಂದ ದುಃಖವಾಗುವ ನಮ್ಮ ಮನೋವ್ಯಾಪಾರಗಳನ್ನು ಸರಿಯಾಗಿ ತಿಳಿದುಕೊಂಡಂತೆ ಆಗುವುದಿಲ್ಲ.
ಅದರ ಬದಲು ನಾವು ಸಾಮಾನ್ಯವಾಗಿ ಇದಕ್ಕೆ ಹೇಗೆ ಉತ್ತರಿಸುತ್ತೇವೆಂದರೆ ‘ನಾವು ನೋಡಿದ ಕಲಾಕೃತಿಯಲ್ಲಿ ಪ್ರಕೃತಿಯ ವರ್ಣನೆ ತುಂಬಾ ನಾಜೂಕಾಗಿತ್ತು’ ಎಂದೋ ಅಥವಾ ‘ಇಂತಹ ಒಳ್ಳೆಯ ಮನುಷ್ಯನಿಗೆ ಕಡೆಗಾಲದಲ್ಲಿ ಇಂತಹ ಪಾಡು ಬರಬಾರದಿತ್ತು’ ಎಂದೋ ಹೇಳುತ್ತೇವೆ. ಅಂದರೆ ಈ ಸ್ಥಿತಿಗಳಿಗೆ ಸಂಬಂಧಿಸಿದಂತೆ causal ಕಾರಣಗಳನ್ನು ಕೊಡುವ ಬದಲು ವ್ಯಾಖ್ಯಾನಗಳನ್ನು (ಅಂದರೆ reasonಗಳನ್ನು) ಕೊಡುತ್ತೇವೆ. ಈ ವ್ಯಾಖ್ಯಾನಗಳು ಮನುಷ್ಯರ ಸಂಸ್ಕಾರಗಳಲ್ಲಿ ರೂಪಿತವಾಗಿರುವ, ಈ ಸಂಸ್ಕಾರಗಳ ಮೂಲಕ ಕಲಿತಿರುವ ಕ್ರಮಗಳು. ಅಂದರೆ, ಕಲಾಕೃತಿಯಿಂದ ಸಂತೋಷವಾಗುವುದು, ಮನುಷ್ಯರ ಸಂಕಟಗಳನ್ನು ನಿರ್ದಿಷ್ಟ ರೀತಿಯಲ್ಲಿ ಅರ್ಥೈಸಿಕೊಳ್ಳುವುದು ಇವೆಲ್ಲ ಮನುಷ್ಯರು ಒಂದು ಸಮಾಜದಲ್ಲಿ ಬೆಳೆದ ಹಾಗೆ ಕಲಿತುಕೊಳ್ಳುವ ಸಂಸ್ಕಾರಗಳು.
ಸಬ್ಜೆಕ್ಟ್ ಆಗುವುದು ಎಂದರೆ ಇಂತಹ ವ್ಯಾಖ್ಯಾನಗಳ ಜಗತ್ತಿನ ಭಾಗವಾಗಿರುವುದು ಎಂದು; ಇಂತಹ space of reasonsನಲ್ಲಿ ಬದುಕುವುದು ಎಂದು.
ಹೀಗೆ ಕಾರಣಗಳ ಜಗತ್ತಿನಿಂದ ಮತ್ತು causeಗಳ ಅಂಕುಶದಿಂದ ಮುಕ್ತವಾಗಿ reasonಗಳ ಜಗತ್ತಿನಲ್ಲಿ ಬದುಕುವುದೇ ಮನುಷ್ಯನ ನಿಜವಾದ ಸ್ವಾತಂತ್ರ್ಯ ಎನ್ನುವ ವಿಚಾರ ಎನ್‍ಲೈಟೆನ್‍ಮೆಂಟ್ ಯುಗಕ್ಕೆ ಪ್ರತಿಕ್ರಿಯೆಯಾಗಿ ಬೆಳೆಯಿತು. ಆಧುನಿಕ ತತ್ವಶಾಸ್ತ್ರದ ದೈತ್ಯ ಪ್ರತಿಭೆಯಾದ ಇಮ್ಮಾನ್ಯುಯೆಲ್ ಕಾಂಟ್ (1724-1804) ಈ ವಿಚಾರವನ್ನು ತನ್ನ Groundwork for the Metaphysics of Morals (1785) ಎನ್ನುವ ಪುಸ್ತಕದಲ್ಲಿ ಅದರ ತಾರ್ಕಿಕ ಅಂತಕ್ಕೆ ಬೆಳೆಸಿದವನು. ಕಾಂಟ್‍ನ ಪ್ರಕಾರ ಮನುಷ್ಯರ ಹಲವಾರು ಕ್ರಿಯೆಗಳು ನಿಜಕ್ಕೂ ಸ್ವತಂತ್ರವಲ್ಲ. ಹೇಗೆ ಪ್ರಾಣಿಗಳ ಕ್ರಿಯೆಗಳೆಲ್ಲಾ ಅವುಗಳ ಪ್ರಾಕೃತಿಕ ಸ್ವಭಾವದಿಂದ ಹುಟ್ಟಿದುವೋ ಹಾಗೇ ಮನುಷ್ಯನ ಹಲವಾರು ಕ್ರಿಯೆಗಳು ಕೂಡ. ಹಸಿವಾದಾಗ ತಿನ್ನುವುದು, ಸಿಟ್ಟಾದಾಗ ರೇಗುವುದು, ಬಹುಶಃ ಖುಷಿಯಾದಾಗ ಹಾಡುವುದು ಇವೆಲ್ಲ ನಿಜಕ್ಕೂ ಸ್ವತಂತ್ರ ಕ್ರಿಯೆಗಳಲ್ಲ. ಅವೆಲ್ಲ ನಮ್ಮ ನಮ್ಮ ಪ್ರಾಕೃತಿಕ ಸ್ವಭಾವಕ್ಕೆ ನಾವು ಅಡಿಯಾಳಾಗಿರುವುದರಿಂದ ಹುಟ್ಟಿದ ಕ್ರಿಯೆಗಳು. ಯಾರೋ ಅಪಘಾತದಲ್ಲಿ ಸಿಕ್ಕಿಕೊಂಡಾಗ ತಕ್ಷಣ ಹೋಗಿ ಸಹಾಯ ಮಾಡುವುದು ಒಂದು ಸ್ವತಂತ್ರ ಕ್ರಿಯೆಯೇ? ಅದೂ ಅಲ್ಲ. ಯಾಕೆಂದರೆ, ಆಗ ನಾವು ಸಹಾನುಭೂತಿ ಅಥವಾ ಸಂವೇದನೆ ಎನ್ನುವ ಪ್ರಾಕೃತಿಕವಾಗಿ ನಮಗೆ ಬಂದಿರುವ ಭಾವನೆಯಿಂದ ಕೆಲಸಮಾಡುತ್ತಿರುತ್ತೇವೆ. ಇಲ್ಲೆಲ್ಲಾ ಮನುಷ್ಯ ಇನ್ನೂ ವಸ್ತುಸಂಗತಿಗಳ ಕಾರ್ಯಕಾರಣಗಳ ಪ್ರಕ್ರಿಯೆಯಲ್ಲಿ ಸಿಲುಕಿಕೊಂಡಿರುತ್ತಾನೆ.
ಹಾಗಾದರೆ ನಿಜಕ್ಕೂ ಸ್ವತಂತ್ರವಾದ ಕ್ರಿಯೆ ಎಂದರೆ ಯಾವುದು? ಕಾಂಟನ ಪ್ರಕಾರ ನಾವೇ ನಮಗೆ ಕೊಟ್ಟುಕೊಳ್ಳುವ ನಿಯಮಗಳನ್ನು, ಅದು ಎಷ್ಟೇ ಕಷ್ಟವಾದರೂ, ಪಾಲಿಸಿದರೆ ಅದು ನಿಜವಾಗಿಯೂ ಸ್ವತಂತ್ರವಾದ ಕ್ರಿಯೆ. ತಾನೇ ಹಾಕಿಕೊಂಡ ನಿಯಮಗಳನ್ನು ಪಾಲಿಸುವ ಮನುಷ್ಯ ಮಾತ್ರ ನಿಜವಾಗಿಯೂ ಸ್ವತಂತ್ರ. ಯಾಕೆಂದರೆ, ಆಗ ಮಾತ್ರ ಅವನು ಕಾರ್ಯಕಾರಣಗಳ ಪ್ರಕ್ರಿಯೆಯಿಂದ ಬಿಡುಗಡೆ ಹೊಂದಿ ತನ್ನ ಇಚ್ಚೆಯ ಪ್ರಕಾರವೇ ನಡೆಯುತ್ತಿರುತ್ತಾನೆ. ಆದರೆ ನಾವು ಹಾಕಿಕೊಳ್ಳುವ ನಿಯಮ ಹೇಗಿರಬೇಕು? ಉದಾಹರಣೆಗೆ, ‘ನಾನು ಇನ್ನು ಮುಂದೆ ಸುಳ್ಳನ್ನೇ ಹೇಳುತ್ತೇನೆ’ ಎನ್ನುವ ನಿಯಮವನ್ನು ಹಾಕಿಕೊಂಡು ಎಷ್ಟೇ ಕಷ್ಟ ಬಂದರೂ ಅದನ್ನು ಪಾಲಿಸಿದರೆ, ನಾನು ಸ್ವತಂತ್ರನಾಗುತ್ತೇನೆಯೇ ಎಂದು ಕೇಳಿದರೆ ಕಾಂಟ್‍ನ ಪ್ರಕಾರ ಹಾಗೆ ಸಾಧ್ಯವಿಲ್ಲ. ಏಕೆಂದರೆ, ಇಂತಹ ನಿಯಮ ಒಂದು ಸ್ವಯಂವೈರುಧ್ಯದಿಂದ ಕೂಡಿದೆ. ಹೇಗೆಂದರೆ, ನಾವು ಸುಳ್ಳನ್ನೇ ಹೇಳಬೇಕೆಂದರೆ, ಬೇರೆಲ್ಲರೂ ಸತ್ಯವನ್ನೇ ಹೇಳಬೇಕಾಗುತ್ತದೆ. ಏಕೆಂದರೆ, ಸಾಮಾನ್ಯವಾಗಿ ಸತ್ಯ ಹೇಳುವ ಪ್ರಪಂಚದಲ್ಲಿ ಮಾತ್ರ ಸುಳ್ಳಿಗೆ ಬೆಲೆಯಿರಲು ಸಾಧ್ಯ. ನಾವು ಹಾಕಿಕೊಂಡ ಸುಳ್ಳು ಹೇಳುವ ನಿಯಮವನ್ನು ಎಲ್ಲರೂ ಸಾರ್ವತ್ರಿಕವಾಗಿ ಪಾಲಿಸಿದರೆ, ನಮ್ಮ ನಿಯಮವೇ ಮುರಿದು ಬೀಳುತ್ತದೆ. ಹೀಗೆ ಸಾರ್ವತ್ರಿಕವಲ್ಲದ ನಿಯಮಗಳು ಸ್ವಯಂವೈರುಧ್ಯದಿಂದ ತಾವೇ ನಾಶವಾಗಿಬಿಡುತ್ತವೆ. ಆದ್ದರಿಂದ ಇಂತಹ ನಿಯಮಗಳ ಪಾಲನೆಯಿಂದ ನಿಜವಾದ ಸ್ವಾತಂತ್ರ್ಯ ಸಾಧ್ಯವಿಲ್ಲ. ನಾವು ಹಾಕಿಕೊಳ್ಳುವ ನಿಯಮ ಹೇಗಿರಬೇಕೆಂದರೆ, ಪ್ರಪಂಚದಲ್ಲಿ ಎಲ್ಲರೂ, ಎಲ್ಲ ಕಾಲದೇಶಗಳಲ್ಲೂ ಇದನ್ನು ಪಾಲಿಸುವಂತಿರಬೇಕು. ಎಲ್ಲರಿಗೂ ಇದೇ ಸರಿಯಾದ ನಿಯಮ ಎಂದು ತಾರ್ಕಿಕವಾಗಿ ಸಾಧಿಸಿ ತೋರಿಸುವಂತಿರಬೇಕು. ಇಂತಹ ನಿಯಮವನ್ನು ಕಾಂಟ್ categorical imperative ಎಂದು ಕರೆಯುತ್ತಾನೆ. ಮನುಷ್ಯರಿಗೆ ಇಂತಹ ನಡವಳಿಕೆ ಸಾಧ್ಯವಿರುವುದರಿಂದಲೇ ಮನುಷ್ಯರು ನಿಜವಾಗಿಯೂ ಸ್ವತಂತ್ರರು. ಕೇವಲ ತಮಗೆ ಇಷ್ಟವಾದದ್ದನ್ನು ಮಾಡುವ ಶಕ್ತಿ ಇರುವುದರಿಂದಲ್ಲ ಎಂದು ಕಾಂಟ್‍ನ ವಾದ. ಇಲ್ಲೊಂದು ಮುಖ್ಯವಾದ ಅಂಶ. ಮನುಷ್ಯನ ಸ್ವಾತಂತ್ರ್ಯವಿರುವುದೇ ಇಂತಹ ನಿಯಮದಲ್ಲಿ. ಅಂದರೆ lawನಲ್ಲಿ. ಇದನ್ನೇ ಮುಂದುವರೆಸಿದರೆ, ನಿಜವಾಗಿಯೂ ಸಾರ್ವತ್ರಿಕವಾದ ನಿಯಮವನ್ನು ಮಾಡಲು ಯಾರು ಸಮರ್ಥರು ಎಂದು ಕೇಳಬಹುದು. ಬಹುಶಃ ಸ್ಟೇಟ್ ಎಂದು ಕರೆಯುವ ಪ್ರಭುತ್ವವೇ ನಿಜವಾದ ಸಾರ್ವತ್ರಿಕವಾದ universal lawಗಳನ್ನು ಮಾಡಲು ಸಾಧ್ಯ. ಅಂದಮೇಲೆ, ಮನುಷ್ಯನ ನಿಜವಾದ ಸ್ವಾತಂತ್ರ್ಯವಿರುವುದೇ ಸ್ಟೇಟ್‍ನಲ್ಲಿ. ಮನುಷ್ಯ ಸಂಪೂರ್ಣವಾದ ಮನುಷ್ಯನಾಗುವುದು, ಅಂದರೆ ಸಬ್ಜೆಕ್ಟ್ ಆಗುವುದೇ ಸ್ಟೇಟ್‍ನ ಕಾರಣದಿಂದ ಮತ್ತು ಅದರ ಸಹಯೋಗದಿಂದ. ಇದು ಪಾಶ್ಚಿಮಾತ್ಯ ಚಿಂತನೆಯ ಎರಡು ದೊಡ್ಡ ಶಾಖೆಗಳಾದ liberal ಮತ್ತು conservative ರಾಜಕೀಯ ಚಿಂತನೆಯ ಮೂಲ ಸೆಲೆ. ತಮ್ಮತಮ್ಮಲ್ಲೇ ಎಷ್ಟೇ ವಿರೋಧವಿದ್ದರೂ, ಈ ಎರಡೂ ವಿಚಾರಧಾರೆಗಳು ಸಾಮಾನ್ಯವಾಗಿ ಸ್ವಾತಂತ್ರ್ಯ, ಸಬ್ಜೆಕ್ಟ್ ಮತ್ತು ಸ್ಟೇಟ್‍ನ ಸಂಬಂಧವನ್ನು ಸಾಮಾನ್ಯವಾಗಿ ಒಪ್ಪುತ್ತವೆ.
 ಸಬ್ಜೆಕ್ಟ್‌‌‌‌‌‌‌‌ನ ಛಿದ್ರತೆ: ಮಾರ್ಕ್ಸ್ ಮತ್ತು ಫ್ರಾಯ್ಡ್
ಹತ್ತೊಂಬತ್ತನೇ ಶತಮಾನದ ಕೊನೆಯ ಹೊತ್ತಿಗಾಗಲೇ ಇಂತಹ ಸ್ವಯಂಸಂಪೂರ್ಣವಾದ ‍ಸಬ್ಜೆಕ್ಟ್‍‌ನ ಸಾಧ್ಯತೆಯ ಬಗ್ಗೆಯೇ ಸಂದೇಹಗಳು ಎದ್ದಿದ್ದವು. ಅದರಲ್ಲಿ ಎರಡು ಪ್ರಮುಖ ಎಳೆಗಳು ಎಂದರೆ ಮಾರ್ಕ್ಸ್ ಮತ್ತು ಫ್ರಾಯ್ಡ್‌ನ ವಿಚಾರಧಾರೆಗಳು. ಮಾರ್ಕ್ಸ್ ಪ್ರಕಾರ‌ ಇಂತಹ ಸಬ್ಜೆಕ್ಟ್‍‍‍ಗಳು ರೂಪುಗೊಳ್ಳುವುದು ತಮ್ಮೊಳಗಿನ ಆಂತರಿಕ ಸ್ವಯಂಪ್ರಜ್ಞೆಯ ಕಾರಣದಿಂದಲ್ಲ. ಬದಲಾಗಿ, ಮನುಷ್ಯರ ಸ್ವಯಂಪ್ರಜ್ಞೆ ರೂಪುಗೊಳ್ಳುವುದು ವಾಸ್ತವಿಕವಾದ ಸಾಮಾಜಿಕ ಸ್ಥಿತಿಗತಿಗಳಿಂದ. ಸಾಮಾಜಿಕ ಸ್ಥಿತಿಗತಿಗಳು ಎಂದರೆ ಮಾರ್ಕ್ಸ್‍‍ನ ದೃಷ್ಟಿಯಲ್ಲಿ ಉತ್ಪಾದನೆಯ ಸಲಕರಣೆಗಳು ಎಂದು. ಇವು ಸಾಮಾನ್ಯವಾಗಿ ಜಮೀನು, ಬಂಡವಾಳ, ತಂತ್ರಜ್ಞಾನ ಇವುಗಳ ರೂಪದಲ್ಲಿರುತ್ತದೆ. ಇದು ಯಾವುದೂ ಇಲ್ಲದ ಕಾರ್ಮಿಕರಲ್ಲಿ ಶ್ರಮದ ರೂಪದಲ್ಲಿರುತ್ತವೆ. ಈ ಸಲಕರಣೆಗಳ ಆಂತರಿಕ ಸಂಬಂಧಗಳು ಮತ್ತು ಅವುಗಳಲ್ಲಿ ಆಗುವ ಬದಲಾವಣೆಗಳೇ ಸಾಮಾಜಿಕ ಬದಲಾವಣೆಗೆ ಮೂಲ ಕಾರಣ. ರಾಜ್ಯ, ಕಾನೂನು, ಕಲೆ, ಚಿಂತನೆ, ತತ್ವಶಾಸ್ತ್ರ, ವಿಜ್ಞಾನ ಎಲ್ಲವೂ ನಿಂತಿರುವುದು ಈ ಉತ್ಪಾದನೆಯ ವ್ಯವಸ್ಥೆಗಳ ಸಂಬಂಧದ ಮೇಲೆಯೇ. ಅಂದಮೇಲೆ ಮನುಷ್ಯರು ಸಬ್ಜೆಕ್ಟ್‍ಗಳಾಗುವುದು ನಿರ್ದಿಷ್ಟ ಸಾಮಾಜಿಕ ಸಂದರ್ಭಗಳಲ್ಲೇ ವಿನಾ ಅವರೊಳಗಿನ ‘ಮನುಷ್ಯತ್ವ’ ಅಥವಾ ‘ಸ್ವಾತಂತ್ರ್ಯ’ ಅಥವಾ ಇನ್ನ್ಯಾವುದೇ ಇಂತಹ ಆಂತರಿಕ ಕಾರಣಗಳಿಂದಲ್ಲ.
ಈ ರೀತಿಯ ಚಿಂತನೆ ಇಪ್ಪತ್ತನೆ ಶತಮಾನದ ಅತ್ಯಂತ ಮುಖ್ಯ ಸಾಮಾಜಿಕ ಸಿದ್ಧಾಂತಗಳನ್ನೆಲ್ಲಾ ಪ್ರಭಾವಿಸಿವೆ. ಇವತ್ತಿನ ಉದಾರವಾದಿ ಚಿಂತಕರು ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಮಾತನಾಡುವಾಗ ಅವರು ಎದುರಿಸುವ ಮುಖ್ಯ ಟೀಕೆ ಬರುವುದು ಇಲ್ಲಿಂದಲೇ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸ್ವಯಂಸಂಪೂರ್ಣವಾದ ವ್ಯಕ್ತಿಗಳು ಎನ್ನುವ ಪರಿಕಲ್ಪನೆ ಹುಟ್ಟಿರುವುದೇ ನಿರ್ದಿಷ್ಟ ಸಾಮಾಜಿಕ ಸಂದರ್ಭದಲ್ಲಿ, ಅಂದರೆ ಬೂರ್ಜ್ವಾ/ಬಂಡವಾಳಶಾಹಿ ಸಾಮಾಜಿಕ ಸಂದರ್ಭದಲ್ಲಿ. ಹಾಗಾಗಿ ಅದನ್ನೇ ಒಂದು ಸಾರ್ವತ್ರಿಕ ಮೌಲ್ಯ ಎನ್ನುವಂತೆ ಕಾಣುವುದು ದೋಷಪೂರ್ಣವಾಗುತ್ತದೆ ಎನ್ನುವುದು ಮಾರ್ಕ್ಸ್‍ವಾದೀ ಚಿಂತಕರ ವಾದ.
ಫ್ರಾಯ್ಡ್‍‍‌ನ ಸೈಕೋಅನಲಿಟಿಕ್ ಸಿದ್ದಾಂತ
ಸಬ್ಜೆಕ್ಟ್‍ನ ಸರಳ ಪರಿಕಲ್ಪನೆಗೆ ಮತ್ತೊಂದು ಪೆಟ್ಟು ಬಿದ್ದಿರುವುದು ಫ್ರಾಯ್ಡ್‍‍ನ ಸೈಕೋಅನಲಿಟಿಕ್ ಚಿಂತನೆಯಿಂದ. ಫ್ರಾಯ್ಡ್‍ನ ಪ್ರಕಾರ ಮನುಷ್ಯರ ಪ್ರಜ್ಞೆ ಎನ್ನುವುದು ನಮ್ಮ ಆಂತರಿಕ ಮಾನಸಿಕ ಪ್ರಪಂಚದ ಒಂದು ಸಣ್ಣ ಭಾಗ. ರಾಶನಾಲಿಟಿ ಎಂದು ನಾವು ಏನನ್ನು ಕರೆಯುತ್ತೇವೆಯೋ ಅದು ಈ ಪ್ರಜ್ಞೆಯ ಮತ್ತೂ ಸಣ್ಣ ಭಾಗ ಮಾತ್ರ. ಇದಲ್ಲದೇ ಮನುಷ್ಯರ ಮಾನಸಿಕ ಪ್ರಪಂಚ ವಿಶಾಲವಾದ ಸಮುದ್ರದ ಆಳದಂತೆ ಸುಪ್ತಪ್ರಜ್ಞೆಯ ರೀತಿಯಲ್ಲಿದೆ. ಸುಪ್ತಪ್ರಜ್ಞೆ ಎನ್ನುವುದು ಪ್ರಜ್ಞೆಯ ಒಂದು ಭಾಗವೋ ಅಥವಾ ಮನುಷ್ಯರ ಮಾನಸಿಕ ವ್ಯವಹಾರಗಳನ್ನು ವಿವರಿಸಲು ಬೇಕಾದ ಒಂದು ಸೈದ್ದಾಂತಿಕ ಸಲಕರಣೆಯೋ ಎಂಬ ಬಗ್ಗೆ ಇಂದಿಗೂ ಫ್ರಾಯ್ಡ್‍‍‌ನ ವಿದ್ವಾಂಸರಲ್ಲಿ ಚರ್ಚೆಗಳಿವೆ. ಅದೇನೇ ಆದರೂ, ನಮಗೆ ಮುಖ್ಯವಾದ ವಿಚಾರವೆಂದರೆ ಸಬ್ಜೆಕ್ಟ್‍‌ಗಳ ಸಬ್ಜೆಕ್ಟಿವಿಟಿ ಅಥವಾ ವ್ಯಕ್ತಿಗಳ ವ್ಯಕ್ತಿತ್ವ ಎನ್ನುವುದು ಆ ವ್ಯಕ್ತಿಗಳಿಗೇ ಸಂಪೂರ್ಣವಾಗಿ ದಕ್ಕುವುದಿಲ್ಲ. ನಮ್ಮ ವ್ಯಕ್ತಿತ್ವದ ಎಷ್ಟೋ ಮಜಲುಗಳು, ಆಳಗಳು ಮತ್ತು ಆಕಾಂಕ್ಷೆಗಳು ನಮ್ಮಿಂದಲೇ ಸುಪ್ತವಾಗಿರುತ್ತವೆ. ಅದು ಕೆಲವೊಮ್ಮೆ parapraxesಗಳ ರೂಪದಲ್ಲಿ (ಅಂದರೆ, ನಾಲಗೆ ತಪ್ಪಿ ಹೇಳುವ ಮಾತುಗಳು, ಕನಸುಗಳು, ಅಂಗಾಂಗಗಳ ವಿಚಿತ್ರ ಚಟಗಳು ಇಂತಹ ಅಪ್ರಜ್ಞಾಪೂರ್ವಕ ಸ್ವಭಾವಗಳು) ವ್ಯಕ್ತವಾಗುತ್ತವೆ.
ಮನುಷ್ಯ ಹುಟ್ಟುತ್ತಲೇ ಅವನ ನಿರಾಕಾರವಾದ ಪ್ರಜ್ಞೆಗೆ ಒಂದು ರೂಪ, ಒಂದು ಆಕಾರ ಎಂದು ಬರುವುದೇ ಪ್ರಜ್ಞೆಯ ಮೂಲರೂಪವಾದ ಡಿಸೈರ್ (ಆಸೆ, ಕಾಮ) ಅನ್ನು ತಡೆಹಿಡಿಯುವುದರಿಂದ. ಚಿಕ್ಕ ಮಕ್ಕಳಲ್ಲೇ ಇದು ವ್ಯಕ್ತವಾಗುತ್ತದೆ. ಮಲಮೂತ್ರ ವಿಸರ್ಜನೆಯನ್ನು ತಡೆಹಿಡಿಯುವ ಹಂತದಿಂದ ಶುರುವಾಗುವ ಈ ಸೆಣಸಾಟ ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ. ಫ್ರಾಯ್ಡ್‍ನ ಅತಿ ಮುಖ್ಯ ಕಾಣ್ಕೆ ಎಂದರೆ ಒಬ್ಬ ಸಬ್ಜೆಕ್ಟ್ ಆಗುವುದೆಂದರೆ ಬಾಹ್ಯ ಪ್ರಭಾವಗಳಿಂದ ನಮ್ಮ ನಿರಾಕಾರವಾದ ಪ್ರಜ್ಞೆಗೆ ರೂಪವನ್ನು ಕೊಡುವುದು ಎಂದು ತೋರಿಸಿದ್ದು. ಪ್ರಜ್ಞೆ ಹೀಗೆ ದಮನಕ್ಕೆ ಒಳಗಾಗುವುದರಿಂದಲೇ ಮನುಷ್ಯ ಒಬ್ಬ ವ್ಯಕ್ತಿಯಾಗುವುದು. ಇಂತಹ ದಮನವಿಲ್ಲದಿದ್ದರೆ ಮನುಷ್ಯ ಯಾವುದೇ ದಮನವಿಲ್ಲದ, ಆದ್ದರಿಂದ ನ್ಯುರೋಸಿಸ್ ಇಲ್ಲದ, ಹಾಗಾಗಿ ತನ್ನ ಪ್ರಜ್ಞೆಗೆ ಯಾವುದೇ ಆಕಾರವೂ ಇಲ್ಲದ ಪ್ರಾಣಿಯೋ ಅಥವಾ ಶಿಶುವೋ ಆಗಿರುತ್ತಿದ್ದ.
ಮಾರ್ಕ್ಸ್ ಮತ್ತು ಫ್ರಾಯ್ಡ್ ಇಬ್ಬರ ಸಿದ್ಧಾಂತಗಳೂ ಪ್ರಜ್ಞೆ ಎನ್ನುವುದು ಸಾಮಾಜಿಕವಾಗಿ ನಿರ್ಮಾಣವಾಗುವಂಥದ್ದು; ಪ್ರಾಕೃತಿಕವಾಗಿ, ಸಹಜವಾಗಿ ಲಭ್ಯವಿರುವಂಥದ್ದಲ್ಲ ಎಂದು ವಾದಿಸಿತು. ಮಾರ್ಕ್ಸ್ ಮತ್ತು ಫ್ರಾಯ್ಡ್‍ರ ಈ ಚಿಂತನೆಗಳು ಇಂದು ತೀವ್ರವಾದ ವಿಮರ್ಶೆಗೆ ಒಳಗಾಗಿವೆ. ಬಹಳ ಜನ ವಿದ್ವಾಂಸರು ಮಾರ್ಕ್ಸ್ ಮತ್ತು ಫ್ರಾಯ್ಡ್‍ರ ಸಿದ್ಧಾಂತದ ಸತ್ಯಾಸತ್ಯತೆಗಳು ಏನೇ ಇರಲಿ, ಇದರಿಂದ ಮನುಷ್ಯನ ಬಗೆಗಿನ ವೈಜ್ಞಾನಿಕ ಚಿಂತನೆಗೆ ಆಗುವ ಉಪಯೋಗ ಅಷ್ಟಕ್ಕಷ್ಟೇ ಎಂದು ವಾದಿಸುತ್ತಾರೆ. ಆದರೆ ಇಂತಹ ವಿಮರ್ಶಕರೂ ಕೂಡ ಒಪ್ಪುವಂಥ ಒಂದು ಪ್ರಮುಖ ಅಂಶವೆಂದರೆ ಮೇಲೆ ಹೇಳಿದ ಸಾಮಾಜಿಕ ನಿರ್ಮಾಣದ ವಿಚಾರ. ಪ್ರಜ್ಞೆ ಎನ್ನುವುದು ಮಾರ್ಕ್ಸ್ ಅಥವಾ ಫ್ರಾಯ್ಡ್ ಹೇಳಿದ ರೀತಿಯಲ್ಲಿಯೇ ನಿರ್ಮಾಣವಾಗಿದೆಯೋ ಇಲ್ಲವೋ ಅಂತೂ ಮನುಷ್ಯನ ಪ್ರಜ್ಞೆಗೂ ಅವನ ಸಾಮಾಜಿಕ ಪರಿಸರಕ್ಕೂ, ವಿಶೇಷವಾಗಿ ಮನುಷ್ಯರು ಬೆಳೆಯುವ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳಿಗೂ ಒಂದು ಆಳವಾದ ನಂಟಿದೆ ಎನ್ನುವುದು ಸಾಮಾನ್ಯವಾಗಿ ಒಪ್ಪಿಕೊಳ್ಳುವ ವಿಚಾರ.
ಥಾಮಸ್ ನೇಗೆಲ್ ಎನ್ನುವ ಅನಲಿಟಿಕಲ್ ತತ್ವಶಾಸ್ತ್ರಜ್ಞನ ಪ್ರಸಿದ್ಧ ಲೇಖನವೊಂದು ಸಬ್ಜೆಕ್ಟಿವಿಟಿಯ ಪ್ರಶ್ನೆಯನ್ನು ಒಂದು ಊಹಾತ್ಮಕವಾದ ಪ್ರಯೋಗದ ಮೂಲಕ ವ್ಯಾಖ್ಯಾನಿಸಿದೆ. ಅ ಲೇಖನದ ಶೀರ್ಷಿಕೆ “What is it like to be a Bat?” (1974) (ಬಾವಲಿಯಾಗಿರುವುದು ಎಂದರೇನು?) ಎಂದು. ಅವನ ಪ್ರಶ್ನೆ ಬಾವಲಿಗಳ ಮಾನಸಿಕ ಪ್ರಪಂಚ ಹೇಗಿರುತ್ತದೆ ಎಂದು ವಿವರಿಸುವಂಥದ್ದಲ್ಲ. ಬದಲಾಗಿ, ಬಾವಲಿಯಾಗಿರುವುದು ಎಂದರೇನು? ಬಾವಲಿಯಾಗಿರುವಿಕೆ ಎಂದರೇನು? ಬಾವಲಿಗಳ ದೃಷ್ಟಿಯಲ್ಲಿ ಬಾವಲಿಯಾಗಿರುವುದು ಎಂದರೇನು? ಎಂದು. ನಾವು ಕೇಳುತ್ತಿರುವ ‘ಮನುಷ್ಯನಾಗಿರುವುದು ಎಂದರೇನು?’ ಎನ್ನುವುದು ಇಂಥದ್ದೇ ಪ್ರಶ್ನೆ. ಅಂದರೆ, ಪ್ರಜ್ಞೆಯುಳ್ಳ ಒಬ್ಬ ವ್ಯಕ್ತಿಗೆ ತನ್ನ ಬಗ್ಗೆ ಒಂದು ಸ್ವಯಂಪ್ರಜ್ಞೆಯೂ ಇರುತ್ತದೆ. ಈ ಸ್ವಯಂಪ್ರಜ್ಞೆಯನ್ನು ಒಂದು ವಸ್ತುವಿನ ರೀತಿಯಲ್ಲಿ ನೋಡಲು ಬರುವುದಿಲ್ಲ. ಇದು ಆಯಾ ವ್ಯಕ್ತಿಗಳಿಗೆ ಮಾತ್ರ ದಕ್ಕುವಂಥದ್ದು ಎನ್ನುವುದು ನೇಗೆಲ್‍ನ ವಾದ. ಆಧುನಿಕ ತತ್ವಶಾಸ್ತ್ರದಲ್ಲಿ ಪ್ರಜ್ಞೆಯನ್ನು ಒಂದು ವಸ್ತುವಿನಂತೆ ಪರೀಕ್ಷಿಸಲಾಗಿದೆಯೇ ಹೊರತು ಅಂತಹ ಪ್ರಜ್ಞೆಯಿರುವ ಜೀವಿಗೆ ಇರುವ ಒಂದು ವಿಶೇಷವಾದ ಖಾಸಗಿ ಅನುಭವ ಎನ್ನುವುದನ್ನು ಕಡೆಗಣಿಸಲಾಗಿದೆ ಎಂದು ನೇಗೆಲ್‍ನ ವಾದ.
ಸಬ್ಜೆಕ್ಟ್‍ನ ಬಗೆಗಿನ ಈ ಚಿಂತನೆ ಮತ್ತು ಮನುಷ್ಯನಾಗಿರುವುದು ಎಂದರೇನು ಎನ್ನುವ ಪ್ರಶ್ನೆ ಇವೆರಡನ್ನೂ ವಿಮರ್ಶಾತ್ಮಕವಾಗಿ ನೋಡಬೇಕಾದ ಅಗತ್ಯವಿದೆ. ಇದು ೨೦ನೇ ಶತಮಾನದ ಪಾಶ್ಚಿಮಾತ್ಯ ಚಿಂತಕರನ್ನೂ ಕಾಡಿದೆ. ‘ಮನುಷ್ಯನಾಗಿರುವುದು ಎಂದರೇನು?’ ಎನ್ನುವ ಪ್ರಶ್ನೆಗೆ ಯಾವ ರೀತಿಯ ಉತ್ತರ ಕೊಡಬೇಕು? ಅದಕ್ಕೂ ಮುನ್ನ ಈ ಪ್ರಶ್ನೆಯ ಅರ್ಥವೇನು? ನಾವು ಅಡುಗೆ ಮಾಡುವುದು ಹೇಗೆ ಎಂದು ಕೇಳುತ್ತೇವೆಯೇ ವಿನಾ ಅಡುಗೆ ಎಂದರೇನು ಎಂದು ಕೇಳುವುದಿಲ್ಲ. ಹಾಗೆಯೇ ಮನುಷ್ಯನಾಗಿ ಒಳ್ಳೆಯ ಬದುಕನ್ನು ಬದುಕುವುದು ಹೇಗೆ ಎಂದು ಕೇಳುತ್ತೇವೆಯೇ ವಿನಾ ಮನುಷ್ಯನಾಗಿರುವುದು ಎಂದರೆ ಏನು ಎಂದು ಕೇಳುವುದಿಲ್ಲ. ಆದ್ದರಿಂದ ಮನುಷ್ಯನಾಗಿರುವುದು ಎಂದರೇನು ಎನ್ನುವ ಪ್ರಶ್ನೆ ಸ್ವಾಭಾವಿಕವಾದದ್ದಲ್ಲ. ಅಂತಹ ಪ್ರಶ್ನೆ ಏಳುವುದಕ್ಕೆ ಅದೂ ಯಾವುದೋ ಒಂದು ಸಂಸ್ಕೃತಿಯಲ್ಲಿ ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ಆ ಪ್ರಶ್ನೆ ಏಳುವುದಕ್ಕೆ ಬೇರೆಯೇ ಕಾರಣವಿರಬೇಕು ಎನ್ನುವ ರೀತಿಯ ಜಿಜ್ಞಾಸೆಯೂ ನಡೆದಿದೆ.
ಈ ಇಡೀ ಚರ್ಚೆಯನ್ನು ಗಮನಿಸಿದರೆ ಮನುಷ್ಯ ಎರಡು ರೀತಿಗಳಲ್ಲಿ ಇರುವಂತೆ ಕಾಣುತ್ತದೆ. ಒಂದು, ಜೀವಿಯಾಗಿ (ಅಂದರೆ causal ಪ್ರಪಂಚದ ಭಾಗವಾಗಿ) ಮತ್ತು ಒಬ್ಬ ವ್ಯಕ್ತಿಯಾಗಿ (ಅಂದರೆ reason ಪ್ರಪಂಚದ ಭಾಗವಾಗಿ). ಅಂದರೆ ಮನುಷ್ಯ ಇಡಿಯಾಗಿಲ್ಲ. ಎರಡು ಜೋಡಿಸಲಾಗದ ಹೋಳುಗಳ ರೀತಿಯಲ್ಲಿದ್ದಾನೆ. ಒಂದು ಭಾಗ (ಜೀವಿಯ ಭಾಗ) ಮತ್ತೊಂದು ಭಾಗದಿಂದ (ವ್ಯಕ್ತಿಯ ಭಾಗ) ಹೊರತಾಗಿದೆ; ಅಂದರೆ alienate ಆಗಿದೆ. ಯಾವ ಸಂದರ್ಭದಲ್ಲಿ ಇದು ಒಂದು ಸಮಸ್ಯೆಯಾಗಿ ಕಾಣಬಹುದು? ಬಹುಶಃ alienate ಆಗಿಲ್ಲದ ಯಾವನಾದರೊಬ್ಬ ವ್ಯಕ್ತಿಯಿದ್ದರೆ. ಮತ್ತು ಆ ವ್ಯಕ್ತಿಯ ಕ್ರಿಯೆಗಳ ಹಿಂದೆ ಇರುವ causeಗಳು ಮತ್ತು ಆ ವ್ಯಕ್ತಿಯ reasonಗಳು ಇವೆರಡೂ ಒಂದೇ ಆಗಿದ್ದರೆ, ಆಗ ಅಂತಹ ವ್ಯಕ್ತಿಯನ್ನು ತಾಳೆ ಮಾಡಿ ನೋಡಿದಾಗ, ಮನುಷ್ಯನ alienation  ಒಂದು ಸಮಸ್ಯೆಯಾಗಿ ಕಾಡಬಹುದು. ಕ್ರಿಶ್ಚಿಯನ್ ಥಿಯಾಲಜಿ ಹೇಳುವ ‘ಗಾಡ್’ ಎಂಬ ಶಕ್ತಿಗೆ ಮಾತ್ರವೇ ಇಂತಹ ಲಕ್ಷಣ ಇರುವುದು. ಅಂದಮೇಲೆ ಸಬ್ಜೆಕ್ಟ್ ಬಗೆಗಿನ ಈ ಇಡೀ ಚರ್ಚೆ ಥಿಯಾಲಜಿಯ ಪ್ರಮೇಯಗಳ ಮೇಲೆ ನಿಂತಿದೆ. ಇದರ ಹೊರಗೆ ಇಂತಹ ಪ್ರಶ್ನೆಯನ್ನು ಎತ್ತಲಿಕ್ಕೆ ಸಾಧ್ಯವಿಲ್ಲ. ಹಾಗಾಗಿಯೇ, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಹೊರತುಪಡಿಸಿ ಬೇರಾವ ಸಂಸ್ಕೃತಿಯಲ್ಲೂ ಇಂತಹ ಪ್ರಶ್ನೆ ಮೂಡಲಿಲ್ಲ ಎಂದು ಕೆಲವು ವಿದ್ವಾಂಸರು ವಾದಿಸಿದ್ದಾರೆ.
ಇತ್ತೀಚಿನ ರಾಜಕೀಯ ಚಿಂತನೆಯಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಬಗ್ಗೆ ಮಾತನಾಡುವಾಗ ಸಬ್ಜೆಕ್ಟ್‍‌ನ ಪರಿಕಲ್ಪನೆ ಅಗತ್ಯವೆಂದು ತೋರಿದೆ. ಉದಾಹರಣೆಗೆ ತೃತೀಯ ಲಿಂಗಿಗಳು, ಅಲ್ಪಸಂಖ್ಯಾತರು, ಆಫ್ರೋ-ಅಮೆರಿಕನ್ ಜನಾಂಗದವರು, ದಲಿತರು ಮುಂತಾದ ಜನಗಳ ಅನುಭವ ಬೇರೆಬೇರೆಯಾಗಿರುತ್ತದೆ. ಅವರು ವ್ಯಕ್ತಿಗಳಾಗಿ, ಸಬ್ಜೆಕ್ಟ್‍ಗಳಾಗಿ ರೂಪುಗೊಂಡ ಬಗೆ ಬೇರೆಯಾಗಿರುತ್ತದೆ. ಈ ಭಿನ್ನತೆಯನ್ನು ಗಮನಿಸದೇ, ಕೇವಲ ಒಂದು ವರ್ಗಕ್ಕೆ ಸರಿಕಾಣಬಹುದಾದ ನೀತಿಗಳನ್ನು ಎಲ್ಲರ ಮೇಲೂ ಸಾರ್ವತ್ರಿಕವಾಗಿ ಹೇರಲು ಸಾಧ್ಯವಿಲ್ಲ ಎಂದು ವಾದಿಸಲು ಹಲವು ರೀತಿಯ ಸಬ್ಜೆಕ್ಟ್‍ಗಳು ಮತ್ತು ಸಬ್ಜೆಕ್ಟಿವಿಟಿ‍ಗಳಿವೆ ಎನ್ನುವುದನ್ನು ಹೇಳಲಾಗುತ್ತದೆ. ಆದರೆ ಇಂತಹ ವಾದಗಳು ಮನುಷ್ಯರ ನಡುವೆ ಅತೀವ ವ್ಯತ್ಯಾಸಗಳಿವೆ ಎನ್ನುವ ಮಟ್ಟಕ್ಕೂ ಹೋಗುವ ಸಾಧ್ಯತೆಯಿದೆ. Radical difference ಮತ್ತು moral relativism ಎನ್ನುವ ಎರಡು ಸಮಸ್ಯೆಗಳು ಇಲ್ಲಿ ಏಳಬಹುದಾದ ಸಾಧ್ಯತೆಯಿದೆ. ಅಂದರೆ ಇಬ್ಬರು ವ್ಯಕ್ತಿಗಳ ಸಬ್ಜೆಕ್ಟಿವಿಟಿಯಲ್ಲಿ ಅಷ್ಟು ಢಾಳಾದ ಭೇದವಿದ್ದರೆ ಒಬ್ಬರ ಚಿಂತನೆಗಳು ಮತ್ತೊಬ್ಬರಿಗೆ, ಒಬ್ಬರ ಮೌಲ್ಯಗಳು ಇನ್ನೊಬ್ಬರಿಗೆ ಅನ್ವಯವಾಗುವುದಿಲ್ಲ. ಹಾಗಾದಾಗ ಸಾಮಾಜಿಕ ಬದುಕಿನ ಮತ್ತು ಸಾಮಾನ್ಯ ಒಳಿತಿನ ರಾಜಕಾರಣವೇ ಅಸಾಧ್ಯವಾಗಿಬಿಡುತ್ತದೆ ಎನ್ನುವುದು ಹಲವು ಚಿಂತಕರ ಅಭಿಮತ. ಸಬ್ಜೆಕ್ಟಿವಿಟಿ ಮತ್ತು ಅದರ ಜೊತೆಗೆ ತಳುಕು ಹಾಕಿಕೊಂಡಿರುವ ಐಡೆಂಟಿಟಿ, ಈ ಎರಡು ಪರಿಕಲ್ಪನೆಗಳನ್ನು ಬಳಸದೆಯೇ ನಮ್ಮ ನಮ್ಮ ಹಕ್ಕುಗಳನ್ನು ಪಡೆಯುವುದು ಸಾಧ್ಯ ಮತ್ತು ನಮ್ಮ ನಡುವಿನ ಸಾಂಸ್ಕೃತಿಕ ಭಿನ್ನತೆಗಳನ್ನು ಕಾಪಾಡಿಕೊಳ್ಳುವುದು ಸಾಧ್ಯ. ಮನುಷ್ಯರೆಲ್ಲರೂ ಸಾಮಾನ್ಯವಾಗಿ ಒಪ್ಪಬಹುದಾದ ಸಾರ್ವತ್ರಿಕ ಒಳಿತಿನ ಯಾವುದಾದರೂ ಒಂದು ಪ್ರಮಾಣವನ್ನಿಟ್ಟುಕೊಂಡು ಇದನ್ನು ಮಾಡಬಹುದು ಎನ್ನುವುದು ಅನೇಕ ರಾಜಕೀಯ ಚಿಂತಕರ ವಾದ. ಜಾನ್ ರಾಲ್ಸ್‍‌‌‌ನ A Theory of Justice (1971) ಇಂತಹುದೇ ಒಂದು ಪ್ರಯತ್ನದ ಮಹತ್ವದ ಕೃತಿ. ಅದರಲ್ಲಿ ರಾಲ್ಸ್ ನಿರ್ದಿಷ್ಟ ಐಡೆಂಟಿಟಿಗಳು ಮತ್ತು ಸಬ್ಜೆಕ್ಟಿವಿಟಿಗಳನ್ನೂ ಮೀರಿ, ಕೇವಲ ಒಂದು ಸರಳ ರಾಶನಾಲಿಟಿಯ ಬುನಾದಿಯ ಮೇಲೆ ನ್ಯಾಯಯುತವಾದ ಸಮಾಜ ಇರಲು ಸಾಧ್ಯ ಎಂದು ವಾದಿಸುತ್ತಾನೆ (justice as fairness). ಅಂದರೆ, ನಾವು ಮೊದಲೇ ಚರ್ಚಿಸಿದ ಕಾಂಟ್‍ನ ಮಾದರಿಯ ಸಾರ್ವತ್ರಿಕವಾದ ನೈತಿಕ ನಿಯಮ (moral law) ಸಾಧ್ಯ. ಆದರೆ ಅದನ್ನು ಸಾಧ್ಯವಾಗಿಸಲು ಕಾಂಟ್‍ಗೆ ಅಗತ್ಯವಿದ್ದ ಮನುಷ್ಯನ ಬಗೆಗಿನ ಯಾವ ರೀತಿಯ ಸಬ್ಜೆಕ್ಟ್‍‌‌ನ ಸಿದ್ಧಾಂತವೂ ಅಗತ್ಯವಿಲ್ಲ ಎಂದು ರಾಲ್ಸ್‌‌ನ ನಂಬಿಕೆ.
ಹೀಗೆ, ಸಬ್ಜೆಕ್ಟ್ ಎನ್ನುವುದು ಮನುಷ್ಯ, ಪ್ರಜ್ಞೆ, ಐಡೆಂಟಿಟಿ, ಹಕ್ಕುಗಳು, ಮತ್ತು ಸಾಂಸ್ಕೃತಿಕ, ಸಾಮಾಜಿಕ ಭಿನ್ನತೆ ಇವುಗಳನ್ನು ಕುರಿತು ಚರ್ಚಿಸಲು ಪಾಶ್ಚಿಮಾತ್ಯ ಚಿಂತನೆಗೆ ಅತ್ಯಂತ ಅಗತ್ಯವೆಂದು ಕಾಣುವ ಒಂದು ಪರಿಕಲ್ಪನೆ.

Comments

Popular posts from this blog

ಸ್ಟ್ರಕ್ಚರಲಿಸಂ (ರಚನಾವಾದ/ರಾಚನಿಕವಾದ)

ಮಾರ್ಕ್ಸ್‌‌‌ ವಾದ

ತಾಯ್ನುಡಿಯ ತತ್ವಜ್ಞಾನ