Posts

ಮಾರ್ಕ್ಸ್‌‌‌ ವಾದ

ಮಾರ್ಕ್ಸ್‌ವಾದ ಹತ್ತೊಂಬತ್ತನೇ ಶತಮಾನದ ಯುರೋಪಿನಲ್ಲಿ ಬೆಳೆದ ಹಲವಾರು ಸಾಮಾಜಿಕ ತತ್ವಗಳಲ್ಲೊಂದು . ಇದರ ರೂವಾರಿಗಳು ಜರ್ಮನ್ ಚಿಂತಕರಾದ ಕಾರ್ಲ್ ಮಾರ್ಕ್ಸ್ (1818-1883) ಮತ್ತು ಫ್ರೀಡ್ರಿಚ್ ಎಂಗೆಲ್ಸ್ (1820-1895). ಇಪ್ಪತ್ತನೆ ಶತಮಾನದ ಮೊದಲಿಗೇ ಈ ಹಲವಾರು ತತ್ವಗಳು ನೆಲಕಚ್ಚಿದರೂ , ಮಾರ್ಕ್ಸ್‌ವಾದ ಮಾತ್ರ ಸರಿಸುಮಾರು ಇಪ್ಪತೊಂದನೇ ಶತಮಾನದ ಹೊಸ್ತಿಲವರೆಗೂ ಅತ್ಯಂತ ಪ್ರಭಾವಶಾಲಿ ಬೌದ್ಧಿಕ ಸಿದ್ದಾಂತವಾಗಿ ಬೆಳೆಯಿತು . ಹಾಗಾಗಿ ಇಂದು ಮಾರ್ಕ್ಸ್‌ವಾದವನ್ನು ಕುರಿತು ಚಿಂತಿಸುವಾಗ ಎರಡು ಬೇರೆ ಬೇರೆ ಎಳೆಗಳನ್ನು ಕಾಣಬಹುದು . ಸ್ವಯಂ ಮಾರ್ಕ್ಸ್‌ವಾದಿ ಚಿಂತಕರ ದೃಷ್ಟಿಯಲ್ಲಿ ಮಾರ್ಕ್ಸ್ ‌ ವಾದ ಇಂದಿಗೂ ಪ್ರಸ್ತುತವಾದ ರಾಜಕೀಯ - ಆರ್ಥಿಕ ವಿಶ್ಲೇಷಣೆ ಮತ್ತು ಸಾಮಾಜಿಕ ಇತಿಹಾಸದ ಅಧ್ಯಯನಕ್ಕೆ ಇರುವ ಅತ್ಯಂತ ಪ್ರಬಲವಾದ ಸಿದ್ಧಾಂತ ಸಮೂಹ . ಆದರೆ ಮಾರ್ಕ್ಸ್‌ವಾದಿ ಚಿಂತಕರಲ್ಲದ ಅನೇಕರು ಇದನ್ನು ಹತ್ತೊಂಬತ್ತು ಇಪ್ಪತ್ತನೆ ಶತಮಾನದ ರಾಜಕೀಯ ಚಿಂತನೆಗೆ ಹಿಡಿದ ಕನ್ನಡಿ ಎಂದು ವಾದಿಸುತ್ತಾರೆ . ಹಾಗಾಗಿ ಮಾರ್ಕ್ಸ್‌ವಾದವನ್ನು ಒಂದು ಸಮಕಾಲೀನ ಸಿದ್ಧಾಂತವನ್ನಾಗಿ ನೋಡಬೇಕೋ ಅಥವಾ ಐರೋಪ್ಯ ಚಿಂತನೆಯ ಇತಿಹಾಸದ ಭಾಗವಾಗಿ (history of ideas) ನೋಡಬೇಕೋ ಎನ್ನುವುದೂ ಒಂದು ಚರ್ಚಾಸ್ಪದ ವಿಚಾರ . ಈ ಲೇಖನದಲ್ಲಿ ಈ ಎರಡೂ ಕ್ರಮಗಳಿಂದ , ಅಂದರೆ , ಮಾರ್ಕ್ಸ್‌ವಾದವನ್ನು ಒಂದು ರಾಜಕೀಯಾರ್ಥಿಕ ಸಿದ್ಧಾಂತವಾಗಿಯೂ , ಹಾಗೆಯೇ , ಐರೋಪ್ಯ ಚಿಂತನೆ...