ಗಾಂಧೀ ಮಾದರಿಯ ಸಾಮಾಜಿಕ ವಿಮರ್ಶೆ

ಕೆಲವು ಸಾಮಾಜಿಕ ಆಚಾರಗಳನ್ನು, ಅದರಲ್ಲೂ ವಿಶೇಷವಾಗಿ ಹಿಂದೂ ಆಚಾರಗಳನ್ನು, ಗಾಂಧಿ ಟೀಕಿಸಿದ್ದಿದೆ. ಉದಾಹರಣೆಗೆ, ಅಸ್ಪೃಶ್ಯತೆ, ಪ್ರಾಣಿಹಿಂಸೆ. ಆದರೆ, ವಿಚಿತ್ರವೆಂದರೆ, ಇನ್ನು ಕೆಲವು ಸಾಮಾಜಿಕ ಆಚಾರಗಳನ್ನು, ಅದರಲ್ಲೂ ನಮಗೆ ಇವತ್ತು ವಿಕೃತವೆಂದು ಕಾಣುವಂಥವನ್ನು ಸಮರ್ಥಿಸಿದ್ದೂ ಇದೆ. ಉದಾಹರಣೆಗೆ, ವರ್ಣಾಶ್ರಮಧರ್ಮ ಮತ್ತು ಬ್ರಹ್ಮಚರ್ಯ. ಬಿಹಾರದ ಭೂಕಂಪಕ್ಕೆ ಅಸ್ಪೃಶ್ಯತೆಯ ಆಚರಣೆಯ ಪಾಪವೇ ಕಾರಣ ಎಂದೂ ಹೇಳಿದ್ದಿದೆ. ಗಾಂಧಿಯನ್ನು ಮೆಚ್ಚುವವರು ಇಂತಹ ಆಭಾಸಗಳನ್ನು ದೊಡ್ಡವರ ಸಣ್ಣ ತಪ್ಪುಗಳು ಎನ್ನುವಂತೆ ಸಂಕೋಚದಿಂದ ತೇಲಿಸುತ್ತಾರೆ. ಗಾಂಧಿಯನ್ನು ವಿಮರ್ಶಿಸುವವರು ಇದನ್ನೇ ಮುಂದುಮಾಡಿಕೊಂಡು ಗಾಂಧಿ ಆಳದಲ್ಲಿ ಎಂತಹ ಪಿತೃಪ್ರಧಾನವಾದ, ಮೇಲ್ಜಾತಿಯವರ ಪ್ರಕಾರ ಆದರ್ಶವೆಂದು ಕಾಣುವ ಒಂದು ಊಳಿಗಮಾನ್ಯ ರೀತಿಯ ಸಮಾಜದ ಪ್ರತಿಪಾದಕ ಎಂದೂ ವಾದಿಸುತ್ತಾರೆ. ಗಾಂಧಿಯ ಬಗೆಗಿನ ಗೌರವದಿಂದಲೋ ಏನೋ ಈ ಎರಡೂ ಕಡೆಯವರು ಇಷ್ಟು ಸ್ಫುಟವಾಗಿ, ಒರಟಾಗಿ ತಮ್ಮ ವಿಚಾರಗಳನ್ನು ಹೇಳದೇ ಇರಬಹುದು. ಆದರೆ ಎರಡೂ ಪಕ್ಷಗಳ ಪ್ರತಿಪಾದನೆಯ ಸಾರವಂತೂ ಸುಮಾರು ಹೀಗೆಯೇ ಇರುತ್ತದೆ. 

ಈ ಎರಡೂ ಪಕ್ಷಗಳು ಗಾಂಧಿಯ ವಿಚಾರದ ಆಳವನ್ನು ತಿಳಿದುಕೊಳ್ಳುವಲ್ಲಿ ಸೋತಿವೆ ಎಂದು ನನ್ನ ಅಭಿಪ್ರಾಯ. ಅಷ್ಟೇ ಅಲ್ಲ, ತಮ್ಮ ನಡುವೆ ಕೈಬದಲಾಯಿಸಿಕೊಂಡು, ಇಬ್ಬರೂ ಗಾಂಧಿಯ ವಿಚಾರಗಳನ್ನು ವಿಕೃತವಾಗಿ ವ್ಯಾಖ್ಯಾನ ಮಾಡಿದ್ದಾರೆ ಎಂದೂ ನನ್ನ ಅನಿಸಿಕೆ. ಇದನ್ನು ತೋರಿಸುವುದು ಪ್ರಸ್ತುತ ಲೇಖನದ ಉದ್ದೇಶ. ಅದಕ್ಕೆ ಪೂರಕವಾಗಿ ಗಾಂಧಿಯ ಬಿಡಿಬಿಡಿ ಮಾತುಗಳನ್ನು ವ್ಯಾಖ್ಯಾನ ಮಾಡುವ ಬದಲು, ಗಾಂಧಿ ಚಿಂತನೆಯನ್ನು ಅರಿಯಲು ಬೇಕಾದ ಒಂದು ಚೌಕಟ್ಟನ್ನು ಬೆಳೆಸಲು ಪ್ರಯತ್ನಿಸುತ್ತೇನೆ. ಆ ಚೌಕಟ್ಟು ವಿಶದವಾದರೆ, ಬಹುಶಃ ಗಾಂಧಿ ಚಿಂತನೆಯ ಒಟ್ಟಂದ ತಂತಾನೆ ಕಾಣತೊಡಗುತ್ತದೆ. 

ಸಾಮಾಜಿಕ ವಿಮರ್ಶೆಯ ಎರಡು ಮಾದರಿಗಳು: ತಾತ್ವಿಕ ವಿಮರ್ಶೆ ಮತ್ತು ಸಾಧಾರಣ ವಿಮರ್ಶೆ
ಒಂದು ಸಾಮಾಜಿಕ ಆಚಾರ, ಉದಾಹರಣೆಗೆ ಬಾಲ್ಯವಿವಾಹ, ನಮ್ಮ ಪ್ರಕಾರ ಅನುಚಿತವಾದ ಆಚಾರ. ಆದರೆ ಇದು ಏತಕ್ಕೆ ಅನುಚಿತ ಎಂದು ಕೇಳಿದರೆ ಅದಕ್ಕೆ ಉತ್ತರ ಏನು? ಅದರಿಂದ ಉಂಟಾಗುವ ಪರಿಣಾಮಗಳು ಅನುಚಿತವಾದ್ದರಿಂದ ಆ ಆಚಾರವೂ ಅನುಚಿತ ಎಂದು ಹೇಳಬಹುದು. ಅಂದರೆ, ತಾಯಿ ಮಕ್ಕಳ ಆರೋಗ್ಯ, ಚಿಕ್ಕ ವಯಸ್ಸಿನಲ್ಲೇ ಗರ್ಭ ಧರಿಸುವುದರಿಂದ ಆಗುವ ದೈಹಿಕ ಮತ್ತು ಮಾನಸಿಕ ಪರಿಣಾಮಗಳು ಇವುಗಳ ದೃಷ್ಟಿಯಿಂದ ಇದು ಅನುಚಿತ ಎಂದು ಹೇಳಬಹುದು. ಈಗ, ವಾದಕ್ಕೆ, ಇಂತಹ ಅನುಚಿತ ಪರಿಣಾಮಗಳು ಉಂಟಾಗದಂತೆ ನೋಡಿಕೊಂಡರೆ ಬಾಲ್ಯವಿವಾಹ ಒಪ್ಪಿತವೇ ಎಂದು ಕೇಳೋಣ. ಆಗಲೂ ನಾವು ಆಧುನಿಕರಿಗೆ ಬಾಲ್ಯವಿವಾಹ ಅನುಚಿತವೆಂದೇ ಕಾಣುತ್ತಿರುತ್ತದೆ. ಅಂದಮೇಲೆ, ಪರಿಣಾಮಗಳ ದೃಷ್ಟಿಯಿಂದ ಬಾಲ್ಯವಿವಾಹದ ಔಚಿತ್ಯ ಅನೌಚಿತ್ಯಗಳನ್ನು ನಿರ್ಧರಿಸುವುದು ಸಾಲುವುದಿಲ್ಲ. ಹಾಗಾದರೆ ಬಾಲ್ಯವಿವಾಹ ನಿಜಕ್ಕೂ ಏಕೆ ಅನುಚಿತ? 

ತಾತ್ವಿಕ ವಿಮರ್ಶೆ
ನಿಮ್ಮ ಸಂಸ್ಕೃತಿಯಲ್ಲಿ ಮನುಷ್ಯರ ಕುರಿತ ಒಂದು ತಾತ್ವಿಕ ಚಿತ್ರಣ ಇದೆ ಎಂದು ಊಹಿಸಿಕೊಳ್ಳಿ. ಆ ಚಿತ್ರಣದ ಪ್ರಕಾರ ಮನುಷ್ಯರ ಲಕ್ಷಣವೇ ಅವರ ಸ್ವಾತಂತ್ರ್ಯ. ಅದರಲ್ಲಿ ಅತೀ ಮುಖ್ಯವಾದ ಸ್ವಾತಂತ್ರ್ಯವೆಂದರೆ ನಮ್ಮ ಸಾಮಾಜಿಕ ಆಯ್ಕೆಗಳನ್ನು ನಾವೇ ಮಾಡಿಕೊಳ್ಳುವ ಸ್ವಾತಂತ್ರ್ಯ. ಮದುವೆಯೂ ಅಂತಹ ಆಯ್ಕೆಗಳಲ್ಲಿ ಒಂದು ಎಂದೂ ಇಟ್ಟುಕೊಳ್ಳಿ. ಬಾಲ್ಯವಿವಾಹ ಎನ್ನುವ ವ್ಯವಸ್ಥೆ ಮನುಷ್ಯನ ಇಂತಹ ಮೂಲಭೂತ ಲಕ್ಷಣವನ್ನೇ ನಿರಾಕರಿಸುವಂಥದ್ದು. ಅಂದರೆ, ಅದು ಮನುಷ್ಯರ ಬಗೆಗಿನ ನಮ್ಮ ತಾತ್ವಿಕ ಚಿತ್ರಣವನ್ನೇ ಅಲ್ಲಗಳೆಯುವಂಥದ್ದು. ಹಾಗಾಗಿ ಬಾಲ್ಯವಿವಾಹದ ಕುರಿತ ನಮ್ಮ ವಿಮರ್ಶೆ ನಿಜಕ್ಕೂ ಒಂದು ತಾತ್ವಿಕವಾದ ವಿಮರ್ಶೆ. ಕೇವಲ ಅದರ ಪರಿಣಾಮಗಳ ಕುರಿತ ವಿಮರ್ಶೆಯಲ್ಲ. ಹಾಗೆಂದು ಪರಿಣಾಮ ಕೇಂದ್ರಿತವಾದ ವಿಮರ್ಶೆ ಸರಿಯಲ್ಲ ಎಂದಲ್ಲ. ಆದರೆ ಅಂತಹ ವಿಮರ್ಶೆಯ ಹರವು ಬಹಳ ಸೀಮಿತವಾದದ್ದು. ಅದರಿಂದ ಬಾಲ್ಯವಿವಾಹದ ವ್ಯವಸ್ಥೆಯನ್ನು ಬದಲಿಸಬಹುದೇ ವಿನಾ ಅದರ ತಾತ್ವಿಕ ನಿರಾಕರಣೆ ಸಾಧ್ಯವಿಲ್ಲ. ಅಂದರೆ, ಪರಿಣಾಮ ಕೇಂದ್ರಿತ ವಿಮರ್ಶೆ ಮಾಡುವವರು, ಯಾವ ಸಂದರ್ಭವೇ ಆದರೂ ಸರಿ ಬಾಲ್ಯವಿವಾಹ ಇರಲೇಬಾರದು ಎನ್ನುವ ರೀತಿಯ ವಾದವನ್ನು ಮಾಡಲಾಗುವುದಿಲ್ಲ. ಆದರೆ, ತಾತ್ವಿಕ ವಿಮರ್ಶೆ ಮಾತ್ರ ಬಾಲ್ಯವಿವಾಹದ ಆಮೂಲಾಗ್ರ ವಿನಾಶಕ್ಕೆ ಒತ್ತಾಯಿಸಲು ಸಾಧ್ಯ. 

ಈಗ ಇದೇ ವಿಚಾರದ ಇನ್ನೊಂದು ಆಯಾಮವನ್ನು ಗಮನಿಸಿ. ನಮಗೆ ಚಿಕ್ಕ ಮಕ್ಕಳನ್ನು ದುಡಿಮೆಗೆ ಹಚ್ಚಿರುವುದನ್ನು ಕಂಡಾಗ ನೋವಾಗಬಹುದು. ಹೆಂಗಸರು ಜೀವನವೆಲ್ಲಾ ಮನೆಗೆಲಸದಲ್ಲೇ ಸವೆಯುವಂತಾದಾಗ ದುಃಖವಾಗಬಹುದು. ಇವೆಲ್ಲಾ ಒಂದು ರೀತಿಯಲ್ಲಿ ಸರಿ ತಪ್ಪುಗಳ ಒಂದು ಸಾಧಾರಣ ತಕ್ಕಡಿಯ ಪ್ರಕಾರ ನಮಗೆ ಅನ್ನಿಸುವ ವಿಚಾರಗಳು. ಈ ಸಮಸ್ಯೆಯನ್ನು ನಿವಾರಿಸಲು ಏನು ಮಾಡಬೇಕು? ಬಹುಶಃ ಮಕ್ಕಳನ್ನು ದುಡಿಮೆಗೆ ಹಚ್ಚದಂತೆ ಕಾನೂನು ಮಾಡಬೇಕು. ಮಹಿಳೆಯರಿಗೂ ಸಾರ್ವಜನಿಕ ಜೀವನದಲ್ಲಿ ಮೀಸಲಾತಿ ಕಲ್ಪಿಸಬೇಕು. ಹೀಗೆ ಹತ್ತು ಹಲವು ರೀತಿಗಳಲ್ಲಿ ಇಂತಹ ಸಮಸ್ಯೆಗಳನ್ನು ಪರಿಹರಿಸಬೇಕು. ಆದರೆ, ಇಂತಹ ಅನುಚಿತ ಆಚಾರಗಳಿಗೆ ಕಾರಣವೇನು? ಮಹಿಳೆಯರನ್ನೇ ಏಕೆ ಮನೆಗೆಲಸಕ್ಕೆ ಮೀಸಲಿಡಲಾಗಿದೆ? ಮಕ್ಕಳನ್ನು ಏಕೆ ದುಡಿಮೆಗೆ ಹಚ್ಚಲಾಗಿದೆ? ಎನ್ನುವ ಪ್ರಶ್ನೆಗೆ ನಮ್ಮ ನಿತ್ಯಜೀವನದ ಸರಿತಪ್ಪುಗಳ ತಕ್ಕಡಿಯಲ್ಲಿ ಉತ್ತರವಿಲ್ಲ. ಮನೆಗೆಲಸಕ್ಕೆ ಮಹಿಳೆಯರೇ ಏಕೆ ಎಂದರೆ ಅವರಿಗೆ ದೇಖರೇಖಿಯ ಜವಾಬುದಾರಿಗಳು ಚೆನ್ನಾಗಿ ಬರುತ್ತವೆ ಎಂದೋ ಅಥವಾ ದುಡಿಮೆಗೆ ಮಕ್ಕಳೇ ಏಕೆ ಎಂದರೆ ಅವರಿಂದ ಸಣ್ಣಪುಟ್ಟ ಕೆಲಸಗಳನ್ನು ಸುಲಭದಲ್ಲಿ ತೆಗೆಯಬಹುದು ಎಂದೋ ಬಹಳ ತೆಳುವಾದ ಉತ್ತರಗಳನ್ನು ಕೊಡಬಹುದೇ ಹೊರತೂ, ಒಂದು ತರ್ಕಬದ್ಧವಾದ ಘನವಾದ ಉತ್ತರವನ್ನು ಕೊಡಲು ಬರುವುದಿಲ್ಲ. ಅಷ್ಟೇ ಅಲ್ಲ, ನಮ್ಮ ನಿತ್ಯಜೀವನದ ನೈತಿಕ ಮಸೂರದಿಂದ ನೋಡಿದರೆ ಇಂತಹ ಪ್ರಶ್ನೆಯೇ ಅಧಿಕಪ್ರಸಂಗದ್ದು ಎಂದು ಅನ್ನಿಸಿದರೂ ಆಶ್ಚರ್ಯವಿಲ್ಲ. ಅಂದರೆ ಒಟ್ಟಾರೆಯಾಗಿ, ನಮ್ಮ ದಿನನಿತ್ಯದ ನೈತಿಕ ಅನುಭವಗಳ ಆಧಾರದ ಮೇಲೆ ಸಾಮಾಜಿಕ ಆಚಾರಗಳಲ್ಲಿರುವ ಅನೌಚಿತ್ಯಗಳನ್ನು ತಾತ್ವಿಕವಾಗಿ ವಿಮರ್ಶೆ ಮಾಡಲು ಬರುವುದಿಲ್ಲ. 

ಈಗ ಮನುಷ್ಯರ ಕುರಿತ ನಮ್ಮ ತಾತ್ವಿಕ ಚಿತ್ರಣಕ್ಕೆ ಪುನಃ ಹಿಂದಿರುಗೋಣ. ತಾತ್ವಿಕ ವಿಮರ್ಶೆಗೆ ಮಾತ್ರ ಸಾಮಾಜಿಕ ಆಚಾರಗಳಲ್ಲಿರುವ ಅನೌಚಿತ್ಯವನ್ನು ಆಮೂಲಾಗ್ರವಾಗಿ ವಿಮರ್ಶೆ ಮಾಡಲು ಸಾಧ್ಯ ಎಂದು ಹೇಳಿದೆವಲ್ಲ. ಅದು ಹೇಗೆ ಸಾಧ್ಯ? ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಸ್ತ್ರೀಶೋಷಣೆ, ಇವನ್ನೆಲ್ಲಾ ಆಮೂಲಾಗ್ರವಾಗಿ ವಿಮರ್ಶಿಸುವುದು ಹೇಗೆ? ಮೊದಲನೆಯದಾಗಿ, ನಾವು ಇಲ್ಲಿ ಮಾಡುತ್ತಿರುವ ಬದಲಾವಣೆಯನ್ನು ಗಮನಿಸಿ. ನಿತ್ಯದಲ್ಲಿ ಹೇಳುವ ಹಾಗೆ ಬಾಲ್ಯವಿವಾಹ ಒಳ್ಳೆಯದಲ್ಲ ಎಂದಷ್ಟೇ ನಾವು ಹೇಳುತ್ತಿಲ್ಲ. ಅದನ್ನೂ ಮೀರಿ, ಬಾಲ್ಯವಿವಾಹ ಒಂದು ಅತಾರ್ಕಿಕವಾದ ಆಚರಣೆ ಎಂದು ಅದನ್ನು ಪುನಾರಚಿಸುತ್ತಿದ್ದೇವೆ. ಯಾಕೆ ಅತಾರ್ಕಿಕವೆಂದರೆ ಅದು ಮನುಷ್ಯರ ಕುರಿತ ನಮ್ಮ ತಾತ್ವಿಕ ಚಿತ್ರಣಕ್ಕೇ ವ್ಯತಿರಿಕ್ತವಾದದ್ದು, ಅದಕ್ಕೆ. ಅದು ಅತಾರ್ಕಿಕ ಎಂದಮೇಲೆ, ಅದನ್ನು ಮುಂದುವರೆಸಿಕೊಂಡು ಬಂದಿರುವುದರ ಹಿಂದೆ ಮತ್ತಿನ್ನಾವುದೋ ತರ್ಕ ಇರಲೇಬೇಕು ತಾನೆ? ಆ ತರ್ಕ, ಅಥವಾ ಕುತರ್ಕ, ಯಾವ ರೀತಿಯದ್ದೆಂದರೆ, ಒಂದೋ, ಅದಕ್ಕೆ ನಮ್ಮ ಸರಿಯಾದ ತರ್ಕದ ಪರಿಚಯವಿಲ್ಲ. (ಅಂದರೆ ಬಾಲ್ಯವಿವಾಹವನ್ನು ಆಚರಿಸುವ ಸಂಸ್ಕೃತಿಗಳು ವಿಚಾರಹೀನ ಆಚಾರಗಳನ್ನು ಪಾಲಿಸಿಕೊಂಡು ಬಂದಿರುವ ಸಂಸ್ಕೃತಿಗಳು ಅಥವಾ ಬರ್ಬರ ಸಂಸ್ಕೃತಿಗಳು). ಹಾಗಲ್ಲದಿದ್ದ ಪಕ್ಷದಲ್ಲಿ, ಇಂತಹ ಆಚಾರಗಳನ್ನು ಪಾಲಿಸುವುದಕ್ಕೆ ಆ ಸಂಸ್ಕೃತಿಗಳಲ್ಲಿ ಯಾವುದೋ ಪಟ್ಟಭದ್ರ ಹಿತಾಸಕ್ತಿಗಳ ಕುಮ್ಮಕ್ಕು ಇರಲೇಬೇಕು. ಅಂದಮೇಲೆ, ಇಂತಹ ಸಂಸ್ಕೃತಿಗಳು ಭ್ರಷ್ಟ ಸಂಸ್ಕೃತಿಗಳು. 

ಒಟ್ಟಾರೆಯಾಗಿ ಹೇಳಬೇಕೆಂದರೆ, ಅನುಚಿತವಾದ ಸಾಮಾಜಿಕ ಆಚಾರಗಳಿಗೆ ಕಾರಣಗಳನ್ನು ಹುಡುಕಬೇಕು. ಮತ್ತು ಅಂತಹ ಕಾರಣಗಳು ನಮಗೆ ಆಳದಲ್ಲಿ ಒಂದು ಬರ್ಬರ ಅಥವಾ ಭ್ರಷ್ಠ ಸಂಸ್ಕೃತಿಯ ಇರುವಿಕೆಯನ್ನು ತೋರಿಸುತ್ತವೆ. ಸಾಮಾಜಿಕ ಜೀವನದ ಕುರಿತ ಜ್ಞಾನವನ್ನು ಬೆಳೆಸುವುದು ಎಂದರೆ ಸಮಾಜಗಳ ಆಚಾರಗಳನ್ನು ನಮ್ಮ ತಾತ್ವಿಕ ಚಿತ್ರಣದ ಆಧಾರದ ಮೇಲೆ ವಿಮರ್ಶಿಸುವುದು ಮತ್ತು ನಮ್ಮ ತಾತ್ವಿಕ ಚಿತ್ರಣಕ್ಕೆ ಅನುರೂಪವಾಗಿ ಹೊಸ ಸಾಮಾಜಿಕ ಆಚಾರಗಳು ಮತ್ತು ವ್ಯವಸ್ಥೆಗಳನ್ನು ಕಟ್ಟುವುದು. ಇದು ಸಾಮಾಜಿಕ ವಿಮರ್ಶೆಯ ಒಂದು ಬಹಳ ಶಕ್ತಿಯುತವಾದ ಮತ್ತು ಆಧುನಿಕ ಯುಗದಲ್ಲಿ ಬಹಳ ಸರ್ವೇಸಾಮಾನ್ಯವಾದ ಮಾದರಿ. ಈ ವಿಮರ್ಶೆಯ ಒಂದು ವಿಚಿತ್ರ ಪರಿಣಾಮದ ಕುರಿತು ನಂತರ ಗಮನ ಹರಿಸೋಣ. ಸದ್ಯಕ್ಕೆ ತಾತ್ವಿಕವಲ್ಲದ ಇನ್ನೊಂದು ವಿಮರ್ಶೆ, ಸಾಧಾರಣ ವಿಮರ್ಶೆ ಎಂದು ಕರೆಯಬಹುದಾದರೆ, ಅಂತಹ ಮಾದರಿಯ ವಿಮರ್ಶೆಯ ಕುರಿತು ಒಂದೆರಡು ಮಾತುಗಳು.    

ಸಾಧಾರಣ ವಿಮರ್ಶೆ
ನಾವು ಯಾವುದೇ ಆಚಾರವನ್ನು ವಿಮರ್ಶಿಸುವುದಕ್ಕೆ ಆಧಾರ ನಮ್ಮ ದಿನನಿತ್ಯದ ಇಷ್ಟಾನಿಷ್ಟಗಳು. ಕಳ್ಳತನ, ಕೊಲೆ, ಸುಳ್ಳು, ಇವುಗಳೆಲ್ಲಾ ನಮಗೆ ಅನಿಷ್ಟವೆಂದು ತೋರುತ್ತದೆ. ಹಾಗೆಯೇ ಮುಂದುವರೆದು, ಮಕ್ಕಳನ್ನು ಜೀತಕ್ಕೆ ದೂಡುವುದೂ ಅನಿಷ್ಟವೆಂದು ತೋರುತ್ತದೆ. ಇಲ್ಲೆಲ್ಲಾ ಅನಿಷ್ಟದ ಅನುಭವ ಮೂಲಭೂತವಾದದ್ದು. ಅಂದರೆ, ಕೊಲೆಯನ್ನು ಇಷ್ಟವೆಂದು ಪರಿಗಣಿಸಲು ಸಾಧ್ಯವಿಲ್ಲ. ಯಾರಾದರೂ ಹಿಂಸೆಯನ್ನು ಅನುಭವಿಸುತ್ತಿದ್ದರೆ ಅದನ್ನು ಇಷ್ಟವೆಂದು ಪರಿಗಣಿಸಲು ಸಾಧ್ಯವಿಲ್ಲ. ಹಾಗೆ ಹಿಂಸೆಯನ್ನು, ಕೊಲೆಯನ್ನು ಇಷ್ಟವೆಂದು ಪರಿಗಣಿಸುವವರು ವಿಕ್ಷಿಪ್ತ ಮನಸ್ಸಿನ ಜನ. ಆದರೆ, ಕಳ್ಳತನವನ್ನು ಅನಿಷ್ಟವೆಂದು ಏಕೆ ಪರಿಗಣಿಸಬೇಕು ಎನ್ನುವ ಪ್ರಶ್ನೆ ಅರ್ಥವಿಲ್ಲದ್ದು. ಅದು ಅನಿಷ್ಟವೆಂದು ತೋರುವುದೇ ಒಂದು ಮೂಲಭೂತ ಅನುಭವ. ಅಂದರೆ ನಮ್ಮ ನೈತಿಕ ಇಷ್ಟಾನಿಷ್ಟಗಳು ಮೂಲಭೂತ ಸತ್ಯಗಳು. ಅವು ರೂಪಿತವಾಗಿರುವುದು ಕಾಲಾಂತರದ ಕಲಿಕೆಯ ಮೂಲಕ. ಹಾಗಾಗಿ, ಅವುಗಳ ಮೂಲ ಅದೃಷ್ಟವಾದದ್ದು. ಅಂದರೆ, ಅವುಗಳ ಕುರಿತು ಕಾರ್ಯಕಾರಣ ಸಂಬಂಧಗಳನ್ನು ಹುಡುಕುವುದರಿಂದ ಅವುಗಳ ಬಗೆಗಿನ ಜ್ಞಾನವೇನೂ ಹೆಚ್ಚಾಗುವುದಿಲ್ಲ. ಯಾಕೆ ಚದುರಂಗದಲ್ಲಿ ಕುದುರೆಯ ಕಾಯಿ ಮೂರು ಮನೆಗಳಷ್ಟೇ ನೆಗೆಯಬೇಕು ಎಂದು ಕೇಳಿದಂತೆ. ಹಾಗೆ ಕುದುರೆಯ ಕಾಯಿಯನ್ನು ನಡೆಸಲು ಕಲಿಯುವುದು ಅಗತ್ಯವೇ ಹೊರತೂ, ಯಾಕೆ ಅದು ಹಾಗೆ ನಡೆಯಬೇಕು ಎಂದು ಕೇಳುವುದರಿಂದ ಚದುರಂಗದ ಕುರಿತ ಜ್ಞಾನ ಹೆಚ್ಚಾಗುವುದಿಲ್ಲ. ಅಂತಹ ಪ್ರಶ್ನೆಗೆ ಉತ್ತರ ದೊರಕಿದರೂ ಅದಕ್ಕೂ ಚದುರಂಗದ ಆಟಕ್ಕೂ ಯಾವ ಸಂಬಂಧವೂ ಇಲ್ಲ. 

ಇದರರ್ಥ, ನಾವು ಸಾಮಾಜಿಕ ಆಚಾರವನ್ನು ವಿಮರ್ಶಿಸುವುದರ ಹಿಂದೆ ಒಂದು ಮಟ್ಟಿಗಿನ ಸಮಾನ ಸಂಸ್ಕಾರ ಕೆಲಸಮಾಡಿದೆ ಎಂದು. ಒಂದು ಸಂಗೀತ ಕಚೇರಿಯಲ್ಲಿ ಜನ ಯಾವುದೋ ರಾಗಾಲಪನೆಯನ್ನು ಕೇಳಿ ಅದು ಚೆನ್ನಾಗಿತ್ತು ಅಥವಾ ಚೆನ್ನಾಗಿರಲಿಲ್ಲ ಎಂದು ಹೇಳುವಾಗ ಒಂದು ಸಮಾನ ಸಂಸ್ಕಾರ ಕೆಲಸಮಾಡಿರುತ್ತದೆ. ಈ ಸಂಸ್ಕಾರದ ಹೊರತಾಗಿ ಸಂಗೀತದ ಕುರಿತ ನಿರ್ಣಯಗಳಿಗೆ ಯಾವುದೇ ಅರ್ಥವಿಲ್ಲ. ಉದಾಹರಣೆಗೆ, ಸಂಗೀತದ ಜ್ಞಾನವೇ ಇರದವನು ಧ್ವನಿಮುದ್ರಿಕೆಗಳ ಮಾರಾಟದ ಮಾಹಿತಿಯನ್ನು ಗಮನಿಸಿ ಇವರ ಸಂಗೀತ ಚೆನ್ನಾಗಿದೆ ಎಂದು ನಿರ್ಣಯಿಸಿದರೆ ಅದಕ್ಕೆ ಯಾವ ಬೆಲೆಯೂ ಇಲ್ಲ. ಧ್ವನಿಮುದ್ರಿಕೆಗಳ ಮಾರಾಟದ ಮಾಹಿತಿಯ ಮೇಲೆ ಇವರ ಸಂಗೀತ ಚೆನ್ನಾಗಿಲ್ಲದಿರಬಹುದು ಎಂದು ಊಹಿಸಬಹುದು. ಆದರೆ, ವಿಮರ್ಶೆ, ಸೌಂದರ್ಯಾಸ್ವಾದನೆ, ಒಂದು ಕಲಾಕೃತಿಯ ಬೆಲೆಕಟ್ಟುವುದು ಇವೆಲ್ಲಾ ಊಹೆಯ ಮೂಲಕ ಮಾಡಬಹುದಾದ ಥಿಯರೆಟಿಕಲ್ ಕೆಲಸವಲ್ಲ. ಅದು ಸಂಸ್ಕಾರದ ಮೂಲಕ ಮಾಡಬೇಕಾದ ಪ್ರಾಕ್ಟಿಕಲ್ ಕೆಲಸ. ಹಾಗೆಯೇ ಸಾಮಾಜಿಕ ವಿಮರ್ಶೆಯೂ ಒಂದು ಪ್ರಾಕ್ಟಿಕಲ್ ಕೆಲಸ. ಅಂದರೆ, ಒಂದು ಸಮಾಜದ ಸಂಸ್ಕಾರಗಳನ್ನು ರೂಢಿಸಿಕೊಂಡಿರುವವನಿಗೆ ಸ್ವಾಭಾವಿಕವಾಗಿ ತೋರುವ ಸರಿತಪ್ಪುಗಳ, ಇಷ್ಟಾನಿಷ್ಟಗಳ ವಿವೇಕವೇ ಸಾಮಾಜಿಕ ವಿಮರ್ಶೆಯ ಮೂಲ.

ಈಗ ತಾತ್ವಿಕ ವಿಮರ್ಶೆಗೂ ಸಾಧಾರಣ ವಿಮರ್ಶೆಗೂ ಇರುವ ಕೆಲವು ವ್ಯತ್ಯಾಸಗಳನ್ನು ಗಮನಿಸಿ. ತಾತ್ವಿಕ ವಿಮರ್ಶೆ ಸಮಾಜ ಎನ್ನುವ ಒಂದು ಅಮೂರ್ತ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಬೇಕು. ಅಂದರೆ, ತಾತ್ವಿಕ ವಿಮರ್ಶೆ ವಿಮರ್ಶಿಸುತ್ತಿರುವುದು ಕೇವಲ ಯಾವುದೋ ಒಂದು ಆಚಾರವನ್ನೋ ಅಥವಾ ವಿಚಾರವನ್ನೋ ಅಲ್ಲ. ಅದು ವಿಮರ್ಶಿಸುತ್ತಿರುವುದು ಈ ನಿರ್ದಿಷ್ಟ ಆಚಾರವನ್ನು ಆಗುಮಾಡಿದ, ಅಥವಾ ಆ ನಿರ್ದಿಷ್ಟ ವಿಚಾರವನ್ನು ಹುಟ್ಟುಹಾಕಿದ ಒಂದು ವ್ಯವಸ್ಥೆಯನ್ನು, ಅಂದರೆ, ಒಟ್ಟು ಒಂದು ಸಮಾಜವನ್ನು. ಹೀಗೆ ನೋಡಿದರೆ ಸಮಾಜ ಎಂದರೆ ನಿಜಕ್ಕೂ ಆಧುನಿಕ ಚಿಂತನೆಯಲ್ಲಿ ಏನು ಎಂದು ತಿಳಿಯುತ್ತದೆ. ಸಮಾಜ ಎಂದರೆ ಕಣ್ಣಿಗೆ ಕಾಣುವ ಊರು, ಕೇರಿ, ರಸ್ತೆ, ದೇಶ ಇಂತಹದ್ದೇ ಇನ್ನೊಂದು ಜಾಗವಲ್ಲ ತಾನೆ? ಅದು ಮನುಷ್ಯರ ವ್ಯವಹಾರಗಳನ್ನು ವಿವರಿಸಲು ಇರುವ ಒಂದು ಪರಿಕಲ್ಪನೆ. ಯಾವ ರೀತಿಯ ಪರಿಕಲ್ಪನೆ? ಮನುಷ್ಯ ವ್ಯವಹಾರಗಳನ್ನು ನಾವು ಈಗ ಹೇಳಿದಂತಹ ತಾತ್ವಿಕ ವಿಮರ್ಶೆಗೆ ಒಡ್ಡುವುದಕ್ಕೆ ಬೇಕಾದ ಒಂದು ಪರಿಕಲ್ಪನೆ. ಅಂದಮೇಲೆ ಸಮಾಜ ಎನ್ನುವುದು ಒಂದು ವಸುನಿಷ್ಟವಾದ, ಅಂದರೆ ಎಂಪಿರಿಕಲ್ ಆದ, ವೈಜ್ಞಾನಿಕ ಪರಿಕಲ್ಪನೆಯೇ ಅಲ್ಲ. ಅದು ಮೌಲ್ಯಮಾಪಕವಾದ, ಅಂದರೆ ಇವ್ಯಾಲ್ಯುಯೇಟಿವ್ ಆದ ಪರಿಕಲ್ಪನೆ. 

ಸಾಧಾರಣ ವಿಮರ್ಶೆಗೆ ಸಮಾಜ ಎನ್ನುವ ರೀತಿಯ ಪರಿಕಲ್ಪನೆ ಬೇಕಿಲ್ಲ. ನಾವು ದಿನನಿತ್ಯದಲ್ಲಿ ಅನಿಷ್ಟಗಳ ಕುರಿತು ವಿಮರ್ಶಿಸುವಾಗ, ನಮ್ಮ ಗುರಿ ಸಮಾಜವಲ್ಲ. ಬದಲಾಗಿ, ನಮ್ಮ ಗುರಿ ಯಾವುದೋ ಒಂದು ನಿರ್ದಿಷ್ಟ ಕ್ರಿಯೆ ಅಥವಾ ಆಚಾರ. ಅದೂ, ನಮ್ಮ ಸಂಸ್ಕಾರಗಳಿಗೆ ವ್ಯತಿರಿಕ್ತವಾದದ್ದು ಎನ್ನುವ ಕಾರಣಕ್ಕೆ ನಾವು ವಿಮರ್ಶಿಸುವ ಆಚಾರ. ಇಂತಹ ವಿಮರ್ಶೆ ನಮ್ಮ ಕಣ್ಣೆದುರಿಗಿರುವ ಅನಿಷ್ಟವನ್ನು ಒಂದು ಪರಿಹರಿಸಬೇಕಾದ ಸಮಸ್ಯೆಯನ್ನಾಗಿ ನೋಡುತ್ತದೆ, ಅಥವಾ ಅನುಭವಿಸಬೇಕಾದ ಗ್ರಹಚಾರದಂತೆ ನೋಡುತ್ತದೆ. ಉದಾಹರಣೆಗೆ, ಹೆಂಗಸರ ವಿರುದ್ಧ ಅತ್ಯಾಚಾರಗಳು ಹೆಚ್ಚಾದಾಗ ಜನ ಪರಿಪರಿಯಾದ ಪರಿಹಾರಗಳನ್ನು ಸೂಚಿಸುವುದನ್ನು ನೋಡಿರುತ್ತೀರಿ. ಅದರಲ್ಲಿ ಹೆಚ್ಚಿನ ಪರಿಹಾರಗಳು ಕೆಲಸಕ್ಕೆ ಬಾರದ ಪರಿಹಾರಗಳಾಗಿರಬಹುದು. ಆದರೆ ಅದು ಮುಖ್ಯವಲ್ಲ. ಮುಖ್ಯವೇನೆಂದರೆ, ಸಾಧಾರಣ ವಿಮರ್ಶೆ ಮಾಡುವ ಜನ ಆ ಸಮಸ್ಯೆಯನ್ನು ಪರಿಹಾರ-ಕೇಂದ್ರಿತವಾಗಿ ನೋಡುತ್ತಿರುತ್ತಾರೆ ಎನ್ನುವುದು. ಆದರೆ, ಅದೇ ತಾತ್ವಿಕ ವಿಮರ್ಶೆ ಒಂದು ಸಾಮಾಜಿಕ ಅನಿಷ್ಟವನ್ನು ಪರಿಹರಿಸಬೇಕಾದ ಸಮಸ್ಯೆ ಎನ್ನುವ ದೃಷ್ಟಿಯಿಂದ ನೋಡುವುದಿಲ್ಲ. ಬದಲಾಗಿ ಸಮಾಜದಲ್ಲಿರುವ ಯಾವುದೋ ಒಂದು ದೋಷದ ಕಾರಣದಿಂದ ಉಂಟಾದ ಒಂದು ವ್ಯವಸ್ಥಿತ ಪರಿಣಾಮ ಎನ್ನುವಂತೆ ನೋಡುತ್ತದೆ. ಉದಾಹರಣೆಗೆ, ಮಹಿಳೆಯರ ಮೇಲಿನ ಅತ್ಯಾಚಾರ ಹೆಚ್ಚಾದರೆ, ಅದು ವರ್ಗಗಳ ನಡುವಿನ ಬದಲೀ ಸಮರ ಎನ್ನುವಂತೆ, ಅಥವಾ, ಪಿತೃಪ್ರಧಾನ ವ್ಯವಸ್ಥೆಗಳು ಅನುಭವಿಸುತ್ತಿರುವ ಮುಖಭಂಗಕ್ಕೆ ಪ್ರತಿಕ್ರಿಯೆ ಎನ್ನುವಂತೆ ನೋಡುತ್ತವೆ. ದೇಹದಲ್ಲಿ ಉಂಟಾಗುವ ಯಾವುದೋ ದೋಷದ ಕಾರಣದಿಂದ ಕಾಯಿಲೆಯಂತಹ ವ್ಯವಸ್ಥಿತ ಪರಿಣಾಮಗಳು ಉಂಟಾಗುತ್ತವಲ್ಲ ಹಾಗೆ. ಇಂಥದೇ ನಿರ್ದಿಷ್ಟ ಕಾರಣಗಳನ್ನು ತಾತ್ವಿಕ ವಿಮರ್ಶೆ ಸೂಚಿಸುತ್ತದೆ ಎಂದು ನನ್ನ ವಾದವಲ್ಲ. ಆದರೆ, ಅದು ಸೂಚಿಸುವ ಕಾರಣಗಳು ಸುಮಾರು ಈ ರೀತಿ ಇರುತ್ತದೆ ಎನ್ನುವುದಷ್ಟೇ ಇದರ ಅರ್ಥ. ಇಲ್ಲೂ ಪರಿಹಾರವಿದೆ. ಆದರೆ ಇದು ಯಾವುದನ್ನು ಗುರಿಯಾಗಿಸಿಕೊಂಡ ಪರಿಹಾರ ಎಂದು ಕೇಳಿದರೆ, ಒಂದು ಮೂರ್ತವಾದ ನಿಖರವಾದ ಉತ್ತರ ಸಾಧ್ಯವೇ ಇಲ್ಲ. 

ಗಾಂಧೀ ಮಾದರಿಯ ಸಾಮಾಜಿಕ ವಿಮರ್ಶೆ 
ಈಗ ನಮ್ಮ ಮೂಲಭೂತ ಪ್ರಶ್ನೆಗೆ ಮತ್ತೆ ಹಿಂದಿರುಗೋಣ. ಗಾಂಧಿ ನಡೆಸುತ್ತಿದ್ದ ಸಾಮಾಜಿಕ ವಿಮರ್ಶೆ ಹಿಂದೂ ಸಂಪ್ರದಾಯಗಳ ಸಾಧಾರಣ ವಿಮರ್ಶೆಯೇ ಹೊರತೂ ತಾತ್ವಿಕ ವಿಮರ್ಶೆಯಲ್ಲ. ತಾತ್ವಿಕ ವಿಮರ್ಶೆಗೂ ಹಿಂಸೆಗೂ ಒಂದು ಅವಿನಾಭಾವ ಸಂಬಂಧವಿದೆ. ಈ ಸಂಬಂಧ ಗಾಂಧಿಯನ್ನು ಹೊರತುಪಡಿಸಿ ಇನ್ನು ಹೆಚ್ಚಿನ ಚಿಂತಕರಿಗೆ ಅರ್ಥವೇ ಆಗಿಲ್ಲ ಎಂದರೂ ನಡೆಯುತ್ತದೆ. ತಾತ್ವಿಕ ವಿಮರ್ಶೆ ವ್ಯಕ್ತಿಯ ದೋಷವನ್ನು ಒಂದು ರೋಗದ ರೀತಿಯಲ್ಲಿ ನೋಡುತ್ತದೆ. ಅಂದರೆ ಅಷ್ಟರ ಮಟ್ಟಿಗೆ, ಯಾವ ವ್ಯಕ್ತಿಗಳು ಮತ್ತು ಸಮುದಾಯಗಳನ್ನು ಉದ್ದೇಶಿಸಿ ಈ ವಿಮರ್ಶೆ ಇದೆಯೋ ಅದು ಆ ವ್ಯಕ್ತಿಗಳ ಅನುಭವದ ಭಾಷೆಯಲ್ಲಿಲ್ಲ. ಬದಲಾಗಿ, ಮನುಷ್ಯತ್ವದ ಕುರಿತ, ಆಧುನಿಕ ನಾಗರಿಕ ಸಮಾಜದ ಕುರಿತ ಯಾವುದೋ ಒಂದು ತತ್ವದ ಭಾಷೆಯಲ್ಲಿದೆ. ಕೇವಲ ಬೇರೆ ರೀತಿಯ ಔಪಚಾರಿಕ ಭಾಷೆಯಲ್ಲಿದೆ ಎನ್ನುವುದಷ್ಟೇ ಆಗಿದ್ದರೆ ಅಂತಹ ಕಷ್ಟವಾಗುತ್ತಿರಲಿಲ್ಲ. ಅದಕ್ಕೂ ಮಿಗಿಲಾಗಿ, ಆ ಭಾಷೆ ಅನುಭವವನ್ನೇ ನಿರಾಕರಿಸುವಂತಿದೆ. ಒಬ್ಬ ಹೆಣ್ಣುಮಗಳ ಮೇಲೆ ಅತ್ಯಾಚಾರಕ್ಕೆ ಕಾರಣ ಪುರುಷಪ್ರಧಾನ ವ್ಯವಸ್ಥೆ ಎಂದು ಹೇಳಿದರೆ, ಆ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನನ್ನ ಅನುಭವದಲ್ಲಿ ಯಾವ ಸಂಪನ್ಮೂಲಗಳೂ ಇಲ್ಲ. ಅಷ್ಟೇ ಅಲ್ಲ, ಈ ಇಡೀ ವಿಮರ್ಶೆ ನಿಂತಿರುವುದೇ ನನ್ನ ಅನುಭವಕ್ಕೆ ಅತೀತವಾದ ವಿವರಣಾ ಚೌಕಟ್ಟುಗಳ ಮೇಲೆ. ಸಂಗೀತದ ಬಗ್ಗೆ ಮೊದಲೇ ಕೊಟ್ಟ ಉದಾಹರಣೆಯನ್ನು ಇಟ್ಟುಕೊಂಡು ಹೇಳುವುದಾದರೆ, ಅದು ಧ್ವನಿಮುದ್ರಿಕೆಗಳ ಮಾರಾಟದ ಮಾಹಿತಿಯನ್ನು ಮಾತ್ರ ಆಧರಿಸಿ, ಸಂಗೀತಗಾರರ ಯೋಗ್ಯತೆಯನ್ನು ಅಳೆದಂತೆ. ನನ್ನ ಅನುಭವವನ್ನೇ ನಿರಾಕರಿಸುವುದರಿಂದ, ನಿಮ್ಮ ತಾತ್ವಿಕ ವಿಮರ್ಶಾ ಮಾದರಿಯಲ್ಲಿ ಯಾವನೋ ಒಬ್ಬ ಅತ್ಯಾಚಾರಿಗೂ ಮತ್ತು ಅದೇ ಪುರುಷಪ್ರಧಾನ ವ್ಯವಸ್ಥೆಯ ಪ್ರತಿನಿಧಿಯಾದ ನನಗೂ ವ್ಯತ್ಯಾಸವೇ ಇಲ್ಲ. 

ಸ್ವಲ್ಪ ವಿಷಯಾಂತರವಾದರೂ, ಒಂದು ತಮಾಶೆಯ ಕತೆ ಹೇಳುತ್ತೇನೆ. ನನ್ನ ದೂರದ ಅತ್ತೆಯೊಬ್ಬರು ವಯಸ್ಸಾದ ಮೇಲೆ ದೂರಶಿಕ್ಷಣದಲ್ಲಿ ಕನ್ನಡ ಎಂ.ಎ., ಪರೀಕ್ಷೆ ಕಟ್ಟಿದ್ದರು. ಚೋಮನ ದುಡಿ ಕಾದಂಬರಿಯ ಬಗ್ಗೆ ಇದ್ದ ಪರೀಕ್ಷೆಯ ನೋಟ್ಸು ಓದುತ್ತಾ ಒಂದು ದಿನ “ಈ ಪುರೋಹಿತಶಾಹಿಗಳು ಎಷ್ಟು ಕೆಟ್ಟವರು ಅಲ್ವಾ? ಬಡವರನ್ನು ಎಷ್ಟು ಹಿಂಸಿಸಿದ್ದಾರೆ ಪಾಪಿಗಳು” ಎಂದು ಹೇಳಿದರು. ನಾನು, “ಅಲ್ಲಾ ಅತ್ತೆ, ಈ ಪುರೋಹಿತಶಾಹಿಗಳು ಅಂದರೆ ಯಾರು ಅಂದುಕೊಂಡಿರಿ? ನೀವೇ.” ಎಂದು ಹೇಳಿದೆ. ಅವರಿಗೆ ಆದ ದಿಗ್ಭ್ರಮೆ ಅಷ್ಟಿಷ್ಟಲ್ಲ. ನನ್ನ ಮಾತು ಅವರಿಗೆ ಅರ್ಥವಾದರೂ ಅದು ಸತ್ಯ ಎಂದು ಅವರಿಗೆ ಅನ್ನಿಸಲೇ ಇಲ್ಲ. ತಾತ್ವಿಕ ವಿಮರ್ಶೆ ನಮ್ಮ ನೈತಿಕ ತಿಳುವಳಿಕೆಯನ್ನು ವಿಕೃತಗೊಳಿಸುವುದು ಹೀಗೆ.

ದಲಿತರಿಗೆ ನಮ್ಮ ಹೋಟೇಲಿನಲ್ಲಿ ಪ್ರವೇಶವಿಲ್ಲ ಎನ್ನುವುದು ಆಧುನಿಕ ಪ್ರಪಂಚದಲ್ಲಿ ಬಹಳ ಖೇದದ ಸಂಗತಿ. ಬಡ ಕೂಲಿಕಾರರಾದ ದಲಿತರನ್ನು ದೊಡ್ಡ ಜಮೀನ್ದಾರರು ಅಮಾನುಷವಾಗಿ ನಡೆಸಿಕೊಳ್ಳುತ್ತಾರೆ ಎನ್ನುವುದು ನೀಚತನದ ಪರಮಾವಧಿ. ಆದರೆ, ಅದಕ್ಕೆ ಕ್ರಮವಾಗಿ ಪುರೋಹಿತಶಾಹಿ ಮತ್ತು ಊಳಿಗಮಾನ್ಯ ಪದ್ಧತಿ ಕಾರಣ ಎನ್ನುವದು ನಮ್ಮ ಅನುಭವವನ್ನೇ ನಾಶ ಮಾಡುವ ಉಪಕ್ರಮ. ದಲಿತರನ್ನು ದ್ವೇಷಿಸುವುದು, ಕಷ್ಟಕ್ಕೆ ಬಿದ್ದ ಅವರ ವಿರುದ್ಧವೇ ಮೇಲಾಟ ಮಾಡುವುದು ಇಂತಹ ಹಿಂಸೆಯೇ ತಾತ್ವಿಕ ವಿಮರ್ಶೆಗೆ ಪ್ರತ್ಯುತ್ತರವಾಗುತ್ತದೆ. ಭಾರತದಲ್ಲಿರುವ ಅನಿಷ್ಟಗಳಲ್ಲಿ ಅಸ್ಪøಶ್ಯತೆಯೂ ಒಂದು ಎಂದು ಹೇಳುವುದು ಸಾಧಾರಣ ವಿಮರ್ಶೆಯ ಮಾದರಿ. ಆದರೆ, ಅದಕ್ಕೆ ಕಾರಣ ವರ್ಣಾಶ್ರಮ ಧರ್ಮ ಎನ್ನುವದು ತಾತ್ವಿಕ ವಿಮರ್ಶೆಯ ಮಾದರಿ. ಮೊದಲನೆಯದು ನಮ್ಮ ನೈತಿಕ ಬುದ್ಧಿಯನ್ನು ಪ್ರಚೋದಿಸುತ್ತದೆ. ಎರಡನೆಯದ್ದು ಹಿಂಸೆಯನ್ನು ಪ್ರಚೋದಿಸುತ್ತದೆ. 

ಗಾಂಧಿ ಒಂದನ್ನು ಹೇಳಿ ಮತ್ತೊಂದನ್ನು ಬಿಟ್ಟದ್ದಲ್ಲ. ನಮ್ಮ ನೈತಿಕ ಬುದ್ಧಿಯನ್ನು ಪ್ರಚೋದಿಸಿ, ಹಿಂಸೆಯನ್ನು ವರ್ಜಿಸಿದ್ದು. ಸಾಧಾರಣ ವಿಮರ್ಶೆಯ ಧರ್ಮವನ್ನು ಪಾಲಿಸಿ, ತಾತ್ವಿಕ ವಿಮರ್ಶೆಯ ಕ್ರಮವನ್ನು ತಿರಸ್ಕರಿಸಿದ್ದು.


ಜನಪದ ವಿಚಾರ ಪತ್ರಿಕೆಯ ಅಕ್ಟೋಬರ್ ೨೦೧೭ರ ಸಂಚಿಕೆಯಲ್ಲಿ ಪ್ರಕಟವಾದದ್ದು. 

Comments

Popular posts from this blog

ಸ್ಟ್ರಕ್ಚರಲಿಸಂ (ರಚನಾವಾದ/ರಾಚನಿಕವಾದ)

ಮಾರ್ಕ್ಸ್‌‌‌ ವಾದ

ಸಮಾನತೆಯ ಕುರಿತು ಐದು ತಕರಾರುಗಳು